Wednesday, April 24, 2013

ಎಸ್‌ಡಿಪಿಐ ಎಂದರೆ ಬಿಜೆಪಿಗೆ ಪ್ರೀತಿ, ಕಾಂಗ್ರೆಸ್‌ಗೆ ಭಯ.

ಮಂಗಳೂರು: `ಹಿಂದೂ ಕೋಮುವಾದದ ಬಗ್ಗೆ ಇಷ್ಟೆಲ್ಲ ಕೂಗಾಡುವ ನಿಮ್ಮ ಕಣ್ಣಿಗೆ ಮುಸ್ಲಿಂ ಕೋಮುವಾದ ಕಾಣುವುದೇ ಇಲ್ವಾ' ಎಂದು ಹಿಂದೂ ಸಂಘಟನೆಯ ನಾಯಕರು ಜಾತ್ಯತೀತರೆಂದು ಹೇಳಿಕೊಳ್ಳುವವರ
ನ್ನು ಆಗಾಗ ಕೆಣಕುವುದುಂಟು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಪ್ರಶ್ನೆ ಉಳಿದೆಲ್ಲ ಕಡೆಗಿಂತಲೂ ಹೆಚ್ಚು ಕೇಳಿಸುತ್ತದೆ. ಇದು ತಳ್ಳಿಹಾಕುವಂತಹ ಪ್ರಶ್ನೆಯೂ ಅಲ್ಲ.
ಹಿಂದೂಗಳಂತೆ ಮುಸ್ಲಿಮರಲ್ಲಿ ಕೋಮುವಾದಿಗಳಿದ್ದರೂ ಇತ್ತೀಚಿನವರೆಗೆ ಅವರಿಗೆ ಸಂಘಟನೆಯ ಬೆಂಬಲ ಇರಲಿಲ್ಲ. ಬದಲಾಗಿರುವ ಪರಿಸ್ಥಿತಿಯಲ್ಲಿ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' ಎಂಬ ಸಂಘಟನೆ ಆ ಕೊರತೆಯನ್ನು ತುಂಬುವಂತೆ ಬೆಳೆಯುತ್ತಿದೆ. ಸಂಘ ಪರಿವಾರದ ನಾಯಕರು `ಮುಸ್ಲಿಂ ಗುಮ್ಮ'ನನ್ನು ತೋರಿಸಿ ಸಂಘಟನೆಯನ್ನು ಬೆಳೆಸುತ್ತಿದ್ದರೆ, ಪಾಪ್ಯುಲರ್ ಫ್ರಂಟ್ `ಹಿಂದೂ ಗುಮ್ಮ'ನನ್ನು ತಮ್ಮ ಸಂಘಟನೆ ಬಲಪಡಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ.
ಇದರಿಂದಾಗಿ ಹಿಂದೂ ಕೋಮುವಾದ ಬೆಳೆಯುತ್ತಾ ಹೋದಂತೆ ಸಮಾನಾಂತರವಾಗಿ ಮುಸ್ಲಿಂ ಕೋಮುವಾದವೂ ಜಿಲ್ಲೆಯಲ್ಲಿ ಬೆಳೆಯುತ್ತಿದೆ. ವಿಚಿತ್ರವೆಂದರೆ ಈ ಬೆಳವಣಿಗೆಯಿಂದ ಮುಸ್ಲಿಂ ವಿರೋಧಿ ಎಂಬ ಆರೋಪಕ್ಕೊಳಗಾಗಿರುವ ಬಿಜೆಪಿ ನಿಶ್ಚಿಂತೆಯಿಂದಿದ್ದರೆ, ಮುಸ್ಲಿಂ ಪರ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ತಳಮಳಕ್ಕೀಡಾಗಿದೆ. ಈ ವಿಲಕ್ಷಣ ವಿದ್ಯಮಾನವೇ ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣೆಯನ್ನು ಕುತೂಹಲಕಾರಿಯಾಗಿ ಮಾಡಿದೆ.
`ಪಾಪ್ಯುಲರ್ ಫ್ರಂಟ್'ನ ಸಂಘಟನೆಯ ರೂಪ, ಉದ್ದೇಶ ಮತ್ತು ಚಟುವಟಿಕೆಗಳನ್ನು ಗಮನಿಸಿದವರು ಇದು `ಮುಸ್ಲಿಮರ ಆರ್‌ಎಸ್‌ಎಸ್' ಎಂದು ಆರೋಪಿಸುವುದುಂಟು. ಆರ್‌ಎಸ್‌ಎಸ್ ರೀತಿಯಲ್ಲಿಯೇ ಇದಕ್ಕೆ ಹಲವಾರು ಅಂಗ ಸಂಸ್ಥೆಗಳಿವೆ.
ವಿಶ್ವಹಿಂದೂ ಪರಿಷತ್ ಮಾದರಿಯಲ್ಲಿ ಧಾರ್ಮಿಕ ಗುರುಗಳಿಗಾಗಿ `ಆಲ್ ಇಂಡಿಯಾ ಇಮಾಮಿ ಕೌನ್ಸಿಲ್', ಎಬಿವಿಪಿ ಮಾದರಿಯಲ್ಲಿ ವಿದ್ಯಾರ್ಥಿಗಳಿಗಾಗಿ `ಸ್ಟೂಡೆಂಟ್ ಕ್ಯಾಂಪಸ್ ಫ್ರಂಟ್', ದುರ್ಗಾವಾಹಿನಿಯನ್ನು ಹೋಲುವಂತೆ ಮಹಿಳೆಯರಿಗಾಗಿ `ನ್ಯಾಷನಲ್ ವುಮೆನ್ ಫ್ರಂಟ್' ಮತ್ತು ಬಿಜೆಪಿ ಮಾದರಿಯಲ್ಲಿ ರಾಜಕೀಯ ಮುಖವಾಗಿ `ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ' (ಎಸ್‌ಡಿಪಿಐ) ಇವೆ. ಆರ್‌ಎಸ್‌ಎಸ್ ಖಾಕಿ ಚಡ್ಡಿ ಧರಿಸಿದರೆ ಪಾಪ್ಯುಲರ್ ಫ್ರಂಟ್‌ನ ಕಾರ್ಯಕರ್ತರು ಸೈನಿಕರ ಸಮವಸ್ತ್ರ ಧರಿಸಿ ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಾರೆ.
ಸಂಘ ಪರಿವಾರದ ನಾಯಕರಂತೆ ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಈ ಸಂಘಟನೆಯ ನಾಯಕರ ಮಾತು-ಕೃತಿಗಳಲ್ಲಿ ಧಾರ್ಮಿಕ ಮೂಲಭೂತವಾದದ ವಾಸನೆ ಬಡಿಯುತ್ತಿದೆ. ಮುಸ್ಲಿಂ ಹುಡುಗನ ಜತೆ ಹಿಂದೂ ಹುಡುಗಿ ಕಾಣಿಸಿಕೊಂಡರೆ ಸಂಘ ಪರಿವಾರದ ಸದಸ್ಯರು ದಾಳಿ ಮಾಡಿದರೆ, ಹಿಂದೂ ಹುಡುಗನ ಜತೆ ಮುಸ್ಲಿಂ ಹುಡುಗಿ ಕಾಣಿಸಿಕೊಂಡರೆ ಪಾಪ್ಯುಲರ್ ಫ್ರಂಟ್‌ನ ಕಾರ್ಯಕರ್ತರು ಅದನ್ನೇ ಮಾಡುತ್ತಾರೆ. ಇವರ ದಾಳಿಗಳ ಸಂಖ್ಯೆ ಕಡಿಮೆ ಇರಬಹುದು, ಉದ್ದೇಶದಲ್ಲಿ ವ್ಯತ್ಯಾಸ ಇಲ್ಲ. ಇತ್ತೀಚೆಗೆ ಜಿಲ್ಲೆಯ ಬಜಪೆಯಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿ.
ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಮುಸ್ಲಿಮರನ್ನು ವಿರೋಧಿಸುವ ಯಾವ ಅವಕಾಶವನ್ನೂ ಬಿಟ್ಟುಕೊಡದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಮೂಲಭೂತವಾದಿ ಮುಸ್ಲಿಮರ ಸಂಘಟನೆ ಎಂಬ ಆರೋಪಕ್ಕೊಳಗಾಗಿರುವ `ಪಾಪ್ಯುಲರ್ ಫ್ರಂಟ್' ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡಿದ್ದು ಕಡಿಮೆ. `ಪಾಪ್ಯುಲರ್ ಫ್ರಂಟ್' ಇಷ್ಟೊಂದು ಪ್ರಮಾಣದಲ್ಲಿ ಬೆಳೆದಿರುವುದೇ ಕಳೆದ ಐದು ವರ್ಷಗಳ ಬಿಜೆಪಿ ಆಡಳಿತ ಕಾಲದಲ್ಲಿ ಎನ್ನುವುದು ಗಮನಾರ್ಹ. ಪೊಲೀಸ್ ಇಲಾಖೆಯನ್ನು ಅಂಗೈಯಲ್ಲಿಟ್ಟುಕೊಂಡಿರುವ ಸಂಘ ಪರಿವಾರದ ನಾಯಕರು ಪಾಪ್ಯುಲರ್ ಫ್ರಂಟ್‌ನ ಬೆಳವಣಿಗೆಯನ್ನು ತಡೆಯುವ ಪ್ರಯತ್ನವನ್ನೇ ಮಾಡಿಲ್ಲ.
ಸರ್ಕಾರದಿಂದ ಯಾವುದೇ ಬಗೆಯ ಕಿರುಕುಳ ಅನುಭವಿಸಿದ ಬಗ್ಗೆ ಪಾಪ್ಯುಲರ್ ಫ್ರಂಟ್ ನಾಯಕರೂ ದೂರಿಲ್ಲ. ಇವರು ಬಿಜೆಪಿಗಿಂತಲೂ ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನೇ ದಾಳಿಗೆ ಗುರಿ ಮಾಡುತ್ತಿರುವುದು ಕೂಡಾ ನಿಜ. ಇವೆಲ್ಲವನ್ನೂ ನೋಡಿದವರು ಎಲ್ಲೋ ಒಂದು ಕಡೆ ಎರಡೂ ಸಂಘಟನೆಗಳ ನಡುವೆ ಹೊಂದಾಣಿಕೆ ಇದೆಯೇನೋ ಎಂಬ ಸಂಶಯ ವ್ಯಕ್ತ ಪಡಿಸುತ್ತಿರುವುದು ಸಹಜವೇ ಆಗಿದೆ.
ಆರ್‌ಎಸ್‌ಎಸ್ ಮಾಜಿ ನಾಯಕರೊಬ್ಬರ ಜತೆ ಮಾತನಾಡುತ್ತಿದ್ದಾಗ ಅವರೊಂದು ಘಟನೆಯನ್ನು ಹೇಳಿದರು. ನಾಲ್ಕೈದು ತಿಂಗಳ ಹಿಂದೆ ಪಾಪ್ಯುಲರ್ ಫ್ರಂಟ್ ಇಲ್ಲಿನ ನೆಹರೂ ಮೈದಾನದಲ್ಲಿ ಮುಸ್ಲಿಮರ ಬೃಹತ್ ಸಮಾವೇಶವೊಂದನ್ನು ಏರ್ಪಡಿಸಿತ್ತು. ಇದನ್ನು ನೋಡಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಜಿಲ್ಲೆಯ ಸಂಘ ಪರಿವಾರದ ಪ್ರಮುಖ ನಾಯಕರೊಬ್ಬರ ಬಳಿ ಹೋಗಿ ಮುಸ್ಲಿಮರಿಗಿಂತ ದೊಡ್ಡದಾದ ಹಿಂದೂ ಸಮಾಜೋತ್ಸವ ಮಾಡಬೇಕೆಂದು ಒತ್ತಾಯಿಸಿದರಂತೆ.
ಅವರ ಮಾತು ಕೇಳಿ ನಕ್ಕ ಆ ನಾಯಕರು `ಮೂರ್ಖ ನಿನಗೆ ಬುದ್ಧಿ ಇಲ್ಲ, ನಾವೇನೂ ಮಾಡುವುದು ಬೇಡ, ಅವರಿಗೆ ಇನ್ನಷ್ಟು ಸಮ್ಮೇಳನಗಳನ್ನು ಮಾಡಲು ದುಡ್ಡು ಕೊಟ್ಟು ಬಿಡುವ' ಎಂದರಂತೆ. ಮುಸ್ಲಿಮರು ಬಹಿರಂಗವಾಗಿ ಸೇರಿ ಶಕ್ತಿ ಪ್ರದರ್ಶನ ಮಾಡಿದರೆ ಅದರಿಂದ ಅಸುರಕ್ಷತೆಗೀಡಾಗುವ ಹಿಂದೂಗಳು ಇನ್ನಷ್ಟು ಸಂಖ್ಯೆಯಲ್ಲಿ ತಮ್ಮ ಕಡೆ ಬರುತ್ತಾರೆ ಎನ್ನುವುದು ಆ ನಾಯಕರ ತಂತ್ರ. ಪಾಪ್ಯುಲರ್ ಫ್ರಂಟ್‌ನ ನಾಯಕರಲ್ಲಿಯೂ ಈ ಉದ್ದೇಶ ಇದ್ದ ಹಾಗಿದೆ.
ಇದೇ ಪಾಪ್ಯುಲರ್ ಫ್ರಂಟ್‌ನ ರಾಜಕೀಯ ಮುಖ ಎಸ್‌ಡಿಪಿಐ. 2009ರಲ್ಲಿ ಎಸ್‌ಡಿಪಿಐ ಸ್ಥಾಪಿಸಿದಾಗ ಬಹಳ ಮಂದಿ ಇದನ್ನು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಅಲ್ಲಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಭಾಗವಹಿಸಿದ್ದ ಎಸ್‌ಡಿಪಿಐ ಇತ್ತೀಚೆಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 206 ಕಡೆ ಸ್ಪರ್ಧಿಸಿ ಹದಿನೇಳು ಸ್ಥಾನಗಳನ್ನು ಗೆದ್ದಿರುವುದು ಮಾತ್ರವಲ್ಲ, ಹದಿನೆಂಟು ಕಡೆ ಎರಡನೆ ಸ್ಥಾನ ಪಡೆದ ನಂತರ ರಾಜಕೀಯ ಪಕ್ಷಗಳು ಜಾಗೃತವಾಗಿವೆ.
ಈಗ ರಾಜ್ಯದ 25 ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಸ್ಪರ್ಧೆಗಿಳಿದಿದ್ದರೂ ಅದು ಗಮನ ಕೇಂದ್ರೀಕರಿಸಿರುವುದು ದಕ್ಷಿಣ ಕನ್ನಡದ ಮೇಲೆ. ಇಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಎಸ್‌ಡಿಪಿಐ, ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಿದೆ.
ಬಹಿರಂಗವಾಗಿ `ಬಿಜೆಪಿ ಮತ್ತು ಕಾಂಗ್ರೆಸ್ ನಮಗೆ ಸಮಾನ ಶತ್ರುಗಳು' ಎಂದು ಹೇಳುವ ಎಸ್‌ಡಿಪಿಐ ನಾಯಕರು ಖಾಸಗಿಯಾಗಿ `ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸುತ್ತೇವೆ' ಎನ್ನುತ್ತಾರೆ. ಇದು ಎಷ್ಟು ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಕಾರ್ಯತಂತ್ರ ಸ್ಪಷ್ಟ. ಮುಸ್ಲಿಮರ ಮತಗಳನ್ನು ನೆಚ್ಚಿಕೊಳ್ಳದೆ ಇರುವ ಬಿಜೆಪಿಗೆ ಆ ಮತಗಳು ಬರದೆಹೋದರೂ ನಷ್ಟ ಇಲ್ಲ. ಇದೇ ಮಾತನ್ನು ಕಾಂಗ್ರೆಸ್ ಪಕ್ಷದ ಬಗ್ಗೆ ಹೇಳಲಾಗದು. ಕೆಲವು ಸಾವಿರದಷ್ಟು ಮುಸ್ಲಿಂ ಮತಗಳನ್ನು ಎಸ್‌ಡಿಪಿಐ ಕಿತ್ತುಕೊಂಡರೂ ಒಂದೆರಡು ಕ್ಷೇತ್ರಗಳಲ್ಲಿ ಗೆಲುವಿನ ಸಾಧ್ಯತೆ ಬುಡಮೇಲಾಗಬಹುದು.
ಉದಾಹರಣೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಎಂಟು ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಮುಸ್ಲಿಂ ಮತಗಳು ಗಣನೀಯ ಸಂಖ್ಯೆಯಲ್ಲಿರುವ ಬಂಟ್ವಾಳದಲ್ಲಿ ಕಾಂಗ್ರೆಸ್ ಪಕ್ಷದ ರಮಾನಾಥ ರೈ ಗೆದ್ದಿರುವುದು ಕೇವಲ 1251 ಮತಗಳಿಂದ. ಈ ಬಾರಿಯೂ ಅಲ್ಲಿ ತುರುಸಿನ ಸ್ಪರ್ಧೆ ಇದೆ. ಈ ಸ್ಥಿತಿಯಲ್ಲಿ ಅಲ್ಲಿ ಕಣದಲ್ಲಿರುವ ಎಸ್‌ಡಿಪಿಐ ಅಭ್ಯರ್ಥಿ ಪಡೆಯುವ ಒಂದೆರಡು ಸಾವಿರ ಮತಗಳು ಕೂಡಾ ಕಾಂಗ್ರೆಸ್ ಪಾಲಿಗೆ ದುಬಾರಿಯಾಗಬಹುದು. ಇದೇ ರೀತಿ ಮುಸ್ಲಿಂ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿರುವ ಮಂಗಳೂರು ಕ್ಷೇತ್ರದಲ್ಲಿ ಯು.ಟಿ.ಖಾದರ್ ಗೆದ್ದಿರುವುದು 7149 ಮತಗಳಿಂದ. ಅಲ್ಲಿನ ಎಸ್‌ಡಿಪಿಐ ಅಭ್ಯರ್ಥಿ ಏಳೆಂಟು ಸಾವಿರ ಮತಗಳನ್ನು ಪಡೆದರೆ ಕಾಂಗ್ರೆಸ್ ದೋಣಿ ಮುಳುಗಬಹುದು.
`ತಾತ್ವಿಕವಾಗಿ ನೀವೇ ವಿರೋಧಿಸುತ್ತಿರುವ ಬಿಜೆಪಿಯನ್ನು ನಿಮ್ಮ ಸ್ಪರ್ಧೆಯಿಂದಾಗಿ ಗೆಲ್ಲಿಸಿದ ಹಾಗಾಗುವುದಿಲ್ಲವೇ? ಬಿಜೆಪಿ ಜತೆ ಇಂತಹದ್ದೊಂದು ಗುಪ್ತ ಹೊಂದಾಣಿಕೆಯನ್ನೂ ನೀವು ಮಾಡಿಕೊಂಡಿದ್ದೀರಿ ಎಂಬ ಆರೋಪವೂ ಇದೆ ಅಲ್ಲವೇ?' ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಅವರನ್ನು ಕೇಳಿದರೆ `ಅಂತಹ ಆರೋಪಗಳಿಗೆ ಯಾವ ಆಧಾರವೂ ಇಲ್ಲ. ಈ ಚುನಾವಣೆಯಲ್ಲಿ ಹಾಗೆ ಅನಿಸಲೂಬಹುದು. ಆದರೆ ಇದರಿಂದಾಗಿ ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳಿಗೆ ಪರ್ಯಾಯವಾಗಿ ನಾವು ಬೆಳೆಯಲು ಸಾಧ್ಯವಾಗುತ್ತದೆ' ಎಂದರು.
`ಅವರ ಉದ್ದೇಶ ಸ್ಪಷ್ಟ. ಅದು ಮೂಲಭೂತವಾದಿಗಳ ಜತೆಯಲ್ಲಿ ಕೈಜೋಡಿಸಿ ಜಾತ್ಯತೀತ ಶಕ್ತಿಗಳನ್ನು ಸೋಲಿಸುವುದು. ಇಂತಹ ಕುತಂತ್ರಗಳಿಗೆ ಮುಸ್ಲಿಮರು ಬಲಿಯಾಗಲಾರರು' ಎಂಬ ವಿಶ್ವಾಸ ವ್ಯಕ್ತಪಡಿಸಿದವರು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶದ ನಂತರ ಗೆಲುವಿನ ಸಂಭ್ರಮದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಒಂದೆಡೆ ಟಿಕೆಟ್ ವಂಚಿತರ ಬಂಡಾಯ ಬೆದರಿಸುತ್ತಿದ್ದರೆ ಇನ್ನೊಂದೆಡೆ ಎಸ್‌ಡಿಪಿಐ ಭೂತ ಕಾಡುತ್ತಿದೆ.

Tuesday, April 23, 2013

ಬಿಜೆಪಿ ವಿರುದ್ಧ ಸಿಡಿದೆದ್ದಿರುವ ಕರಾವಳಿ ಮಹಿಳೆಯರು

ಮಂಗಳೂರು: `ಯಾನ್ ಕಾಲೇಜ್‌ಗ್ ಪೋನಗನೆ ಮಿಡಿ-ಮಿನಿ ಪಾಡೊಂದಿತ್ತೆ. ವುಂದು ದಾನೆ ಪೊಸತ್ತಾ ಎಂಕಲೆಗ್? ಇತ್ತೆ ಎನ್ನ ಮಗಲ್ ಆ ಡ್ರೆಸ್ ಪಾಡುನಿ ಬೊಡ್ಚಿಂದ್ ಎಂಚ ಪನ್ಪಿನಿ?' (
ನಾನು ಕಾಲೇಜಿಗೆ ಹೋಗುವಾಗಲೇ ಮಿನಿ-ಮಿಡಿ ಧರಿಸುತ್ತಿದ್ದೆ. ಇದೇನು ನಮಗೆ ಹೊಸದಾ? ಈಗ ನನ್ನ ಮಗಳು ಧರಿಸುವಾಗ ಬೇಡ ಎಂದು ಹೇಗೆ ಹೇಳಲಿ) ಎಂದು ಕೇಳುತ್ತಾರೆ ಸುಮಾರು ಐವತ್ತರ ಆಜುಬಾಜಿನಲ್ಲಿರುವ ಸುರತ್ಕಲ್‌ನ ಶಶಿಕಲಾ ಶೆಟ್ಟಿ.
`ಎಂಕುಲ್‌ದಾನೆ ಹಾಳಾದ್ ಪೋತನಾ, ಗೌರವೊಡು ಸಂಸಾರ ಮಲ್ತೊಂದ್ ಇಜ್ಜನಾ' (ನಾವೇನು ಹಾಳಾಗಿ ಹೋಗಿದ್ದೇವೆಯೇ? ಗೌರವದಿಂದ ಸಂಸಾರ ಮಾಡಿಕೊಂಡು ಇಲ್ಲವೇ?) ಎನ್ನುವ ಇನ್ನೆರಡು ಪ್ರಶ್ನೆಗಳನ್ನೂ ಕೇಳಿ ಯಾರದೋ ಮೇಲಿನ ಸಿಟ್ಟನ್ನು ಅವರು ತೀರಿಸಿಕೊಂಡರು.
ಇದು ಇಲ್ಲಿನ ಒಬ್ಬಿಬ್ಬರು ಹೆಣ್ಣುಮಕ್ಕಳ ವೈಯಕ್ತಿಕ ಅಭಿಪ್ರಾಯ ಅಲ್ಲ, ಅತಿರೇಕಕ್ಕೆ ಹೋಗುತ್ತಿರುವ `ನೈತಿಕ ಪೊಲೀಸ್‌ಗಿರಿ'ಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಹುಸಂಖ್ಯಾತ ಮಹಿಳೆಯರು ರೋಸಿಹೋಗಿದ್ದಾರೆ.
`ವುಂದ್ ಮುಲ್ತ ಕಲ್ಚರ್‌ಗ್ ಇನ್‌ಸಲ್ಟ್‌ಯೇ ಅಣ್ಣಾ' (ಇದು (ನೈತಿಕ ಪೊಲೀಸ್‌ಗಿರಿ) ಇಲ್ಲಿನ ಸಂಸ್ಕೃತಿಗೆ ಅವಮಾನ) ಎಂದವಳು ಮಂಗಳೂರಿನ ಕಾಲೇಜು ವಿದ್ಯಾರ್ಥಿನಿ ರಾಜಶ್ರೀ ಬಂಗೇರ. `ಅಣ್ಣಾ, ಅಕ್ಕಾ ಸಂಬೋಧನೆ, ಇಂಗ್ಲಿಷ್‌ಮಿಶ್ರಿತ ತುಳು' ಕೂಡಾ ಇಲ್ಲಿನ ಸಂಸ್ಕೃತಿಯ ಭಾಗ. ಚುನಾವಣೆಯಲ್ಲಿ ರಾಜಕೀಯವೇ ಚರ್ಚೆಯ ಪ್ರಮುಖ ವಿಷಯವಾದರೂ ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಸಂಸ್ಕೃತಿ ಕೂಡಾ ಚರ್ಚೆಗೊಳಗಾಗುತ್ತಿದೆ.
ಕರಾವಳಿಯ ಹೆಣ್ಣುಮಕ್ಕಳು ಮನೆಯಿಂದ ಹೊರಗೆ ಕಾಲಿಟ್ಟು ದಶಕಗಳೇ ಕಳೆದಿವೆ. ಇಲ್ಲಿನ ಮೀನುಗಾರ ಮಹಿಳೆಯರು ಊರೂರಿಗೆ ಬುಟ್ಟಿಯಲ್ಲಿ  ಹೊತ್ತುಕೊಂಡು ಹೋಗಿ ಇಲ್ಲವೆ ಸಂತೆಯಲ್ಲಿ ಕೂತು ಮೀನು ಮಾರಿಯೇ ಕುಟುಂಬವನ್ನು ಸಲಹುತ್ತಾ ಬಂದವರು. ಇವರ ಜತೆಗೆ ಬೀಡಿಕಟ್ಟುವ ಮಹಿಳೆಯರು, ತರಕಾರಿ ಬೆಳೆದು ಮಾರುವ ಕ್ರಿಶ್ಚಿಯನ್ ಮಹಿಳೆಯರು...ಹೀಗೆ ಕರಾವಳಿಯ ಉದ್ಯೋಗಸ್ಥ ಮಹಿಳಾವರ್ಗ ವಿಶಾಲವಾದುದು.
ಇವರೆಲ್ಲ ಉದ್ಯೋಗಕ್ಕಾಗಿ ಮನೆಬಿಟ್ಟು ಹೊರಗೆ ಅಡ್ಡಾಡುವವರು. ಬೆಂಗಳೂರು ನಗರವನ್ನು ಹೊರತುಪಡಿಸಿದರೆ ಇಡೀ ರಾಜ್ಯದಲ್ಲಿ ಉದ್ಯೋಗಸ್ಥ ಮಹಿಳೆಯರು ಅತಿಹೆಚ್ಚಿನ ಸಂಖ್ಯೆಯಲ್ಲಿರುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎಂದು ಹೇಳಲು ಸಮೀಕ್ಷೆಯ ಅಗತ್ಯ ಇಲ್ಲ. ಹೊರಜಗತ್ತಿನ ಪರಿಚಯ ಇರುವುದರಿಂದ ಆಧುನಿಕತೆಯ ಗಾಳಿಗೆ ಇವರೆಲ್ಲ ಎಂದೋ ಮೈಯೊಡ್ಡಿಯಾಗಿದೆ.
ಜಗತ್ತಿನ ಯಾವುದೋ ಮೂಲೆಯಲ್ಲಿ ಹೊಸ ಫ್ಯಾಷನ್ ಬಂದರೂ ಅದು ಮುಂಬೈ-ದುಬೈ ಮೂಲಕ ರಾಜ್ಯದಲ್ಲಿ ಮೊದಲು ಬರುತ್ತಿದ್ದದ್ದು ಮಂಗಳೂರಿಗೆ. ಬಾರ್ ಎಂಡ್ ರೆಸ್ಟೋರೆಂಟ್‌ಗಳಲ್ಲಿ ಗಂಡ ಬಿಯರ್ ಕುಡಿಯುತ್ತಿರುವಾಗ ಎದುರಿಗೆ ಹೆಂಡತಿ ಕೂತು ಊಟ ಮಾಡುವುದು ಇಲ್ಲಿ ಸಾಮಾನ್ಯ ದೃಶ್ಯ. ಮಂಗಳೂರಿನ ಹೆಣ್ಣುಮಕ್ಕಳು ಸ್ಪಲ್ಪ `ಫಾಸ್ಟ್' ಎನ್ನುವ ಅಭಿಪ್ರಾಯ ಹಿಂದಿನಿಂದಲೂ ಇದೆ. ಆದರೆ ತಮ್ಮ ಭವಿಷ್ಯದ ವಿಷಯದಲ್ಲಿ ತೀರಾ ಲೆಕ್ಕಾಚಾರದ ಈ ಹೆಣ್ಣುಮಕ್ಕಳು ಅತಿರೇಕಕ್ಕೆ ಹೋಗಿ ವೈಯಕ್ತಿಕ ಜೀವನವನ್ನು ಹಾಳುಮಾಡಿಕೊಂಡದ್ದು ಕಡಿಮೆ.
ಇಂತಹ ನಾಡಿನಲ್ಲಿ  ಹಿಂದೂ ಸಂಸ್ಕೃತಿಯ ರಕ್ಷಣೆಯ ಹೆಸರಲ್ಲಿ ನಡೆಸಲಾಗುತ್ತಿರುವ ನೈತಿಕ ಪೊಲೀಸ್‌ಗಿರಿ  ಪ್ರಜ್ಞಾವಂತ ಸಮುದಾಯವನ್ನು ಕೆರಳಿಸಿದೆ. ಹೆಚ್ಚುಕಡಿಮೆ ಪ್ರತಿದಿನ ಒಂದಲ್ಲ ಒಂದು ಸ್ಥಳದಲ್ಲಿ ಪರಸ್ಪರ ಮಾತನಾಡುತ್ತಿರುವ ಇಲ್ಲವೆ ಜತೆಯಲ್ಲಿ ಹೋಗುವ ಮುಸ್ಲಿಂ ಹುಡುಗ ಮತ್ತು ಹಿಂದೂ ಹುಡುಗಿಯ ಮೇಲೆ ಹಲ್ಲೆ ನಡೆಯುತ್ತಿರುತ್ತದೆ. ಕಾನೂನು ಪ್ರಕಾರ ಇದನ್ನು ಅಪರಾಧ ಎಂದು ಪರಿಗಣಿಸಲು ಅಸಾಧ್ಯವಾಗಿರುವ ಕಾರಣ ಅಧಿಕೃತವಾಗಿ ದೂರು ದಾಖಲಾಗುವುದು ಕಡಿಮೆ.
ದೈಹಿಕವಾಗಿ ಹಲ್ಲೆ ನಡೆಸುವ ಮತ್ತು ಪೊಲೀಸರ ಮೂಲಕ ಹೆದರಿಸುವ ಕೃತ್ಯಗಳು ನಡೆಯುತ್ತಲೇ ಇವೆ. ಸಂಘ ಪರಿವಾರದ ಕುಮ್ಮಕ್ಕಿನಿಂದಲೇ ಇದು ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದರ ವಿರುದ್ಧ ಬಿಜೆಪಿಯ ಸಾಂಪ್ರದಾಯಿಕ ಬೆಂಬಲಿಗ ಕುಟುಂಬಗಳ ಮಹಿಳೆಯರೇ ತಿರುಗಿಬಿದ್ದಿದ್ದಾರೆ. ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಸೋಲು ಇದಕ್ಕೆ ಸಾಕ್ಷಿ.
ಸಂಘ ಪರಿವಾರದ ಚುನಾವಣಾ ಕಾರ್ಯತಂತ್ರದ ದೋಣಿ ಪ್ರತಿಕೂಲ ಗಾಳಿಗೆ ಸಿಕ್ಕಿ ಅಡಿಮೇಲಾಗುತ್ತಿರುವುದು ಈ ಬೆಳವಣಿಗೆಗಳಿಂದಾಗಿ. ಕಾಂಗ್ರೆಸ್ ಪಕ್ಷದ ನಾಯಕರು ಗೆದ್ದೇಬಿಟ್ಟೆವು ಎಂದು ಮೈಮರೆಯಲು ಕೂಡಾ ಇದು ಕಾರಣ. ಇದಕ್ಕೆ ಸರಿಯಾಗಿ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿಯವರು ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಸಿದ ವಿಧವೆಯರಿಗೆ ಮಂಗಳದ್ರವ್ಯ ನೀಡುವ ಮತ್ತು ದಲಿತ ಮಹಿಳೆಯರ ಪಾದತೊಳೆದ ಕೆಲಸಗಳು ಸಂಘ ಪರಿವಾರ ಮಹಿಳೆಯರ ಮೇಲೆ ನಡೆಸುತ್ತಿರುವ `ಸಾಂಸ್ಕೃತಿಕ ದಾಳಿ'ಗೆ ಪ್ರತಿದಾಳಿ ಎಂಬಂತೆ ಜನಪ್ರಿಯವಾಗಿವೆ.
ಪೂಜಾರಿಯವರೂ ಕಡು ಜಾತ್ಯತೀತರೇನಲ್ಲ, ಮಂಗಳೂರಿನಲ್ಲಿ ಬಿಜೆಪಿಯನ್ನು `ಮೆದು ಹಿಂದುತ್ವ'ದ ಮೂಲಕವೇ ಎದುರಿಸಲು ಹೊರಟವರು ಅವರು. ಸಂಘ ಪರಿವಾರವನ್ನು ಮೀರಿಸುವಂತೆ ಪ್ರತಿವರ್ಷ ದಸರಾ ಉತ್ಸವ ಆಚರಿಸುವ ಮೂಲಕ ಮನೆಯಲ್ಲಿದ್ದ ಧರ್ಮವನ್ನು ಬೀದಿಗೆ ತಂದು ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಿದ್ದಾರೆ ಎಂಬ ಆರೋಪ ಕೂಡಾ ಅವರ ಮೇಲಿದೆ. ಧಾರ್ಮಿಕವಾಗಿ ಪುರುಷರಿಗೆ ಸಮನಾದ ಸ್ಥಾನಮಾನವನ್ನು ಮಹಿಳೆಯರಿಗೆ ನೀಡಿ ಗೌರವಿಸುವುದನ್ನು ಒಂದು ಸೈದ್ಧಾಂತಿಕ ವಿರೋಧದ ಕಾರ್ಯಕ್ರಮ ಎಂದು ಅವರು ರೂಪಿಸದೆ ಇದ್ದರೂ ವರ್ತಮಾನದ ಪರಿಸ್ಥಿತಿಯಿಂದಾಗಿ ಅದು ಆ ರೂಪ ಪಡೆದಿದೆ.
ಇತ್ತೀಚಿನ ವರ್ಷಗಳಲ್ಲಿ ಸಂಖ್ಯೆ ಮತ್ತು ಸಂಪನ್ಮೂಲಗಳೆರಡರ ದೃಷ್ಟಿಯಿಂದಲೂ ಬಿಜೆಪಿಗೆ ಪ್ರಮುಖ ಆಧಾರಸ್ತಂಭವಾಗಿದ್ದ ಬಂಟ ಸಮಾಜದ ಮಹಿಳೆಯರೇ, ಹೆಣ್ಣುಮಕ್ಕಳನ್ನು ಗುರಿಯಾಗಿಟ್ಟುಕೊಂಡ ನಡೆದಿರುವ `ನೈತಿಕ ಪೊಲೀಸ್‌ಗಿರಿ'ಯಿಂದ ಹೆಚ್ಚು ಅಸಮಾಧಾನಕ್ಕೀಡಾಗಿರುವುದು ಗಮನಾರ್ಹ. ಭೂಸುಧಾರಣೆ ಜಾರಿಗೆ ಬರುವ ಮೊದಲು ಭೂಮಾಲೀಕರಾಗಿದ್ದ ಬಂಟರು ಹಿಂದೂ ಸಮುದಾಯದಲ್ಲಿ ಉಳಿದವರಿಗಿಂತ ಮೊದಲು ಆಧುನಿಕತೆಗೆ ತೆರೆದುಕೊಂಡವರು.
ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ ಮೊದಲಾದ ಚಿತ್ರತಾರೆಯರೆಲ್ಲ `ಬೋಲ್ಡ್ ಎಂಡ್ ಬ್ಯೂಟಿಫುಲ್' ಎಂದೇ ಕರೆಯಲಾಗುವ ಬಂಟ ಮಹಿಳಾ ಸಮುದಾಯಕ್ಕೆ ಸೇರಿದವರು. ಉದ್ಯಮಶೀಲತೆಯ ಗುಣವನ್ನು ಹುಟ್ಟಿನಿಂದಲೇ ಪಡೆದಿರುವ ಈ ಸಮುದಾಯ ಹೋಟೆಲ್, ವೈದ್ಯಕೀಯ, ಎಂಜಿನಿಯರಿಂಗ್ ಮೊದಲಾದ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯಿಂದಾಗಿ ಸಹಜವಾಗಿ ಶ್ರಿಮಂತಿಕೆಯ ಜೀವನಶೈಲಿಗೆ ಒಗ್ಗಿಹೋಗಿರುವವರು. ಇವರ ಮೇಲೆ ಬಲವಂತದಿಂದ ಹೇರಲಾಗುತ್ತಿರುವ ನಿರ್ಬಂಧಿತ ಸಾಮಾಜಿಕ ಜೀವನ ಸಹಜವಾಗಿಯೇ ಕಿರಿಕಿರಿ ಉಂಟುಮಾಡುತ್ತಿದೆ.
ಪಾಶ್ಚಾತ್ಯ ಸಂಸ್ಕೃತಿ ಕೂಡಾ ಇಲ್ಲಿಗೆ ಇತ್ತೀಚಿನ ಆಮದು ಅಲ್ಲ. ಇಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಕ್ರೈಸ್ತ ಸಮುದಾಯದ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಮೊದಲಿನಿಂದಲೂ ಇದೆ. 60 ವರ್ಷದ ಮಹಿಳೆ ಕೂಡಾ ಸ್ಕರ್ಟ್ ಧರಿಸುವುದು, ಮನೆಯಲ್ಲಿ ಕುಟುಂಬದ ಜತೆ ಮಹಿಳೆಯರೂ ಮದ್ಯ ಸೇವಿಸುವುದು ಇಲ್ಲಿನ ಕ್ರಿಶ್ಚಿಯನ್ ಸಮಾಜದಲ್ಲಿ ಸಾಮಾನ್ಯ ನಡವಳಿಕೆ.
ಇದರ ಪ್ರಭಾವ ಇತರ ಸಮುದಾಯದ ಮೇಲೆ ಕೂಡಾ ಆಗಿದೆ. `ಈ ರೀತಿಯ ನಡವಳಿಕೆಗಳಲ್ಲಿ ಸರಿ-ತಪ್ಪುಗಳ ಮಧ್ಯೆ ಸೂಕ್ಷ್ಮ ಗೆರೆ ಇರುತ್ತದೆ. ಮನೆಯ ಮಕ್ಕಳು ಎಚ್ಚರತಪ್ಪಿ ತಪ್ಪಿನ ಕಡೆ ಸರಿದಾಗ ಬುದ್ಧಿಹೇಳುವ, ಶಿಕ್ಷಿಸುವ ಕೆಲಸವನ್ನು ಲೋಕದ ಎಲ್ಲ ಪಾಲಕರಂತೆ ಇಲ್ಲಿನ ತಂದೆತಾಯಿಗಳು ಮಾಡುತ್ತಾ ಬಂದಿದ್ದಾರೆ. ಆದರೆ ನಮ್ಮ ಮನೆಮಕ್ಕಳ ಮೇಲೆ ಯಾರೋ ಅಪರಿಚಿತರು ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ದಾಳಿ ನಡೆಸುವುದನ್ನು ಸಹಿಸಲಿಕ್ಕಾಗದು' ಎನ್ನುತ್ತಾರೆ ಮಂಗಳೂರಿನ ಶಿಕ್ಷಕ ರಮಾನಂದ.
ಈ ರೀತಿ ದಂಡಪ್ರಯೋಗದ ಮೂಲಕ `ಬುದ್ಧಿಕಲಿಸಲು' ಹೊರಟವರಲ್ಲಿ ಯಾರೂ ಕಾವಿತೊಟ್ಟ ವಿರಾಗಿಗಳಿಲ್ಲ, ಇವರಲ್ಲಿ ಹೆಚ್ಚಿನವರು ಪೊಲೀಸ್ ದಾಖಲೆಯಲ್ಲಿರುವ ಪುಂಡು ಪೋಕರಿಗಳು ಮತ್ತು ಸಂಘ ಪರಿವಾರದ ಸದಸ್ಯರು ಎನ್ನುವುದು ಇವರನ್ನು ಇನ್ನಷ್ಟು ಕೆರಳಿಸಿದೆ.
ಶೂದ್ರ ಸಂಸ್ಕೃತಿಯ ತುಳುನಾಡಿನಲ್ಲಿ  ವೈದಿಕ ಸಂಸ್ಕೃತಿಯ ವಿರುದ್ಧದ ಪ್ರತಿಭಟನೆ ನಿರಂತರವಾಗಿ ನಡೆಯುತ್ತಾ ಬಂದಿರುವುದನ್ನು ತುಳುನಾಡಿನ ಇತಿಹಾಸದಲ್ಲಿ ಕಾಣಬಹುದು. ಒಂದು ಕಾಲದಲ್ಲಿ `ಸೋಷಿಯಲ್ ಆ್ಯಕ್ಟಿವಿಸ್ಟ್'ಗಳಾಗಿದ್ದ ಭೂತ-ದೈವಗಳ ಕತೆಯೇ ಇದಕ್ಕೆ ಸಾಕ್ಷಿ. ಇಲ್ಲಿನ ಬಹುಸಂಖ್ಯಾತ ಹಿಂದೂ ಸಮುದಾಯ ಆರಾಧಿಸುತ್ತಾ ಬಂದಿರುವ ಈ ಭೂತ-ದೈವಗಳೆಲ್ಲ ತಮ್ಮ ಭಕ್ತರಂತೆಯೇ ಮಾಂಸ-ಮೀನು ತಿನ್ನುವ, ಶೇಂದಿ-ಮದ್ಯ (ಇತ್ತೀಚೆಗೆ ಬೀರು-ವಿಸ್ಕಿ) ಕುಡಿಯುವ ವರ್ಗಕ್ಕೆ ಸೇರಿರುವುದರಿಂದ ಅವುಗಳ ಆರಾಧನೆಯ ಸಮಯದಲ್ಲಿ ಅದನ್ನೇ ಹರಕೆ ಮೂಲಕ ಅರ್ಪಿಸಲಾಗುತ್ತದೆ.
ಈ ಎರಡು ಜಿಲ್ಲೆಗಳಲ್ಲಿ ರಾಮ, ಕೃಷ್ಣ, ಶಿವನಿಗಿಂತ ಜುಮಾದಿ, ಕೋರ‌್ದಬ್ಬು-ತನ್ನಿಮಾನಿಗಾ, ಪಂಜುರ್ಲಿಗಳೇ ಹೆಚ್ಚು ಜನಪ್ರಿಯ. ಪುರುಷಪ್ರಧಾನ ಸಮಾಜದಲ್ಲಿನ ಲಿಂಗ ಅಸಮಾನತೆ ಬಗ್ಗೆ ಸಿಡಿದೆದ್ದ ಸಿರಿ, ತನ್ನಿಮಾನಿಗಾ ಮೊದಲಾದ ವೀರಮಹಿಳೆಯರ ಕತೆಗಳು ಇಲ್ಲಿನ ಜಾನಪದ ಸಾಹಿತ್ಯವಾದ ಪಾಡ್ದನಗಳಲ್ಲಿ ಸಿಗುತ್ತವೆ. ಇವರನ್ನು `ಶುದ್ಧ ಹಿಂದೂ'ಗಳಾಗಿ ಮತಾಂತರ ಮಾಡುವ ಪ್ರಯತ್ನದ ಅಂಗವಾಗಿಯೇ ಇಲ್ಲಿನ ಭೂತಕೋಲ, ನಾಗಮಂಡಲ ನಡೆಯುವ ಸ್ಥಳದಲ್ಲಿ ಭಗವಾಧ್ವಜಗಳು ಹಾರಾಡುತ್ತಿರುತ್ತವೆ. `ಮುಸ್ಲಿಂ ಭೂತ'ವನ್ನು ತೋರಿಸಿ ಅವರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ.
ಆದರೆ  ಸಾಂಸ್ಕೃತಿಕ ವಿಸ್ಮೃತಿಗೆ ಒಳಗಾಗಿದ್ದ ಇಲ್ಲಿನ ಶೂದ್ರ ಸಮುದಾಯ ಕರಾವಳಿಯ ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದಾಗಿ ಎಚ್ಚೆತ್ತುಕೊಳ್ಳುತ್ತಿರುವಂತೆ ಕಾಣುತ್ತಿದೆ. ಪರಾಕಾಷ್ಠೆ ತಲುಪಿರುವ `ನೈತಿಕ ಪೊಲೀಸ್‌ಗಿರಿ'ಯ ಜತೆಯಲ್ಲಿಯೇ ಬಿಜೆಪಿ ಶಾಸಕರೊಬ್ಬರ ಮೇಲೆ ಬ್ಲೂಫಿಲ್ಮ್ ವೀಕ್ಷಣೆಯ ಆರೋಪ, ಇನ್ನೊಬ್ಬ ಶಾಸಕರ ಪತ್ನಿಯ ನಿಗೂಢ ಸಾವು ಮತ್ತು ಬೇರೆ ಹೆಣ್ಣಿನ ಜತೆಗಿದ್ದ ವಿಡಿಯೊ, ರೇವ್‌ಪಾರ್ಟಿಯ ಕಿರಿಕಿರಿ ಮೊದಲಾದ ಘಟನೆಗಳಿಂದಾಗಿ ಬಿಜೆಪಿ ವಿಶ್ವಾಸದ್ರೋಹ ಮಾಡಿದೆ ಎಂಬ ಭಾವನೆ ಮುಖ್ಯವಾಗಿ ಕರಾವಳಿಯ ಮಹಿಳೆಯರಲ್ಲಿ ಮೂಡಲು ಕಾರಣವಾಗಿದೆ. ಈ ಅಸಮಾಧಾನ ರಾಜಕೀಯ ನಿರ್ಧಾರವಾಗಿ ಪರಿವರ್ತನೆಗೊಂಡರೆ ಕರಾವಳಿಯ `ಹಿಂದುತ್ವದ ಪ್ರಯೋಗ ಶಾಲೆ'ಯನ್ನು ಮುಚ್ಚಬೇಕಾಗಬಹುದು.

Monday, April 22, 2013

ರೇವಣ್ಣರನ್ನು ಕಾಡುತ್ತಿರುವ ಪುಟ್ಟಸ್ವಾಮಿಗೌಡ `ಭೂತ'

ಹೊಳೆನರಸಿಪುರ (ಹಾಸನ ಜಿಲ್ಲೆ): ಸ್ಥಳೀಯ ಶಾಸಕರು ಯಾರೆಂದು ಗೊತ್ತಿಲ್ಲದೆ ಹೊಳೆನರ
ಸಿಪುರ ಕ್ಷೇತ್ರದ ಉದ್ದಗಲಕ್ಕೆ ಅಡ್ಡಾಡಿದ ಅಪರಿಚಿತರು ಅಲ್ಲಿನ ಶಾಸಕರನ್ನು ಮರು ಆಯ್ಕೆ ಮಾಡುವಂತೆ ಮತದಾರರಿಗೆ ಶಿಫಾರಸು ಮಾಡಲೂ ಬಹುದು. ಪಟ್ಟಣದಲ್ಲಿ ಮಾತ್ರವಲ್ಲ ಹಳ್ಳಿಹಳ್ಳಿಗಳಲ್ಲಿಯೂ ಕಾಂಕ್ರೀಟು ರಸ್ತೆಗಳು, ವಿದ್ಯುತ್ ಸಬ್‌ಸ್ಟೇಷನ್‌ಗಳು, ಸುಸಜ್ಜಿತ ಆಸ್ಪತ್ರೆ, ನರ್ಸಿಂಗ್‌ನಿಂದ ಪಾಲಿಟೆಕ್ನಿಕ್ ವರೆಗೆ,ಕಾನೂನಿನಿಂದ ಗೃಹವಿಜ್ಞಾನದ ವರೆಗೆ ಶಿಕ್ಷಣ ಸಂಸ್ಥೆಗಳು, ಕ್ಷೇತ್ರದ ಬಹಳಷ್ಟು ವಿದ್ಯಾವಂತ ಯುವಕ-ಯುವತಿಯರಿಗೆ ಸರ್ಕಾರಿ ಉದ್ಯೋಗ... ಇನ್ನೇನು ಬೇಕು?
ಒಂದು ವಿಧಾನಸಭಾ ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡಬಹುದೆಂಬುದಕ್ಕೆ ಹೊಳೆನರಸಿಪುರ ಮಾದರಿಯಂತಿದೆ. ಇಷ್ಟೆಲ್ಲ ಅಭಿವೃದ್ಧಿಯ ಚಿತ್ರವನ್ನು ನೋಡಿ ಸಂಭ್ರಮ ಪಟ್ಟವರ ಅಭಿಪ್ರಾಯ ಇಲ್ಲಿನ ಶಾಸಕರ ಹೆಸರು ಹರದನಹಳ್ಳಿ ದೇವೇಗೌಡ ರೇವಣ್ಣ ಎಂದು ಗೊತ್ತಾದ ಕೂಡಲೇ ಬದಲಾಗಲೂಬಹುದು.
ತಪ್ಪು ರೇವಣ್ಣ ಅವರದ್ದಲ್ಲ, ದೊಡ್ಡ ರಾಜಕೀಯ ಕುಟುಂಬದಿಂದ ಬಂದ ವ್ಯಕ್ತಿಯ ಹೆಗಲಮೇಲೆ ಆ ಪರಂಪರೆಯ ಹೊರೆ ಇದ್ದೇ ಇರುತ್ತದೆ. ರೇವಣ್ಣ  ಅವರು ಹೊಳೆನರಸಿಪುರದ ಶಾಸಕ ಎನ್ನುವುದಕ್ಕಿಂತಲೂ ಮುಖ್ಯವಾಗಿರುವುದು ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಗ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ತಮ್ಮ ಎನ್ನುವುದು.
ಆದುದರಿಂದ ಎಲ್ಲರೂ ಅದೇ ವಂಶಪರಂಪರೆಯ ಕನ್ನಡಕದಲ್ಲಿಯೇ ಅವರನ್ನು ನೋಡುತ್ತಾರೆ. ಮತಹಾಕುವವರ ತಲೆಯಲ್ಲಿ ರೇವಣ್ಣ ಮಾತ್ರ ಇಲ್ಲ ಇಡೀ ದೇವೇಗೌಡರ ಕುಟುಂಬ ಇರುತ್ತದೆ. ಹೊಳೆನರಸಿಪುರ ಎಂಬ ವಿಧಾನಸಭಾ ಕ್ಷೇತ್ರ ಎನ್ನುವುದು ಒಂದು ರೀತಿ ಇಂದಿರಾಗಾಂಧಿ ಕುಟುಂಬಕ್ಕೆ ರಾಯಬರೇಲಿ ಎಂಬ ಲೋಕಸಭಾ ಕ್ಷೇತ್ರ ಇದ್ದ ಹಾಗೆ.
ಸ್ವಾತಂತ್ರ್ಯಾನಂತರ ಈ ಕ್ಷೇತ್ರದಲ್ಲಿ ನಡೆದ ಹದಿಮೂರು ಚುನಾವಣೆಗಳಲ್ಲಿ ನಾಲ್ಕು ಬಾರಿ ಬಿಟ್ಟರೆ ಉಳಿದೆಲ್ಲ ಸಲ ಗೆದ್ದದ್ದು ದೇವೇಗೌಡರ ಕುಟುಂಬ. ದೇವೇಗೌಡರು ಆರುಬಾರಿ ಮತ್ತು ರೇವಣ್ಣ ಮೂರು ಬಾರಿ ಗೆದ್ದಿದ್ದಾರೆ. ರಾಜಕೀಯ ಪ್ರವೇಶದ ಪ್ರಾರಂಭದಲ್ಲಿ ದೇವೇಗೌಡರು ಪಕ್ಷೇತರರಾಗಿ ಇಲ್ಲಿ ಎರಡು ಬಾರಿ ಗೆದ್ದಿದ್ದರು.
ಇಷ್ಟು ಸುರಕ್ಷಿತವಾಗಿದ್ದ ಕ್ಷೇತ್ರವನ್ನು ರೇವಣ್ಣ ಅವರು ಬೆಂಗಳೂರಿನಲ್ಲಿಯೇ ಕೂತು ಗೆಲ್ಲಬೇಕಾಗಿತ್ತು. ಆದರೆ ಅವರು ಪತ್ನಿ ಮತ್ತು ಮಗನ ಜತೆ ಬಂದು ಇಲ್ಲಿ ರಾತ್ರಿಹಗಲು ಬೆವರು ಸುರಿಸುತ್ತಿದ್ದಾರೆ. `ಚುನಾವಣೆಯ ಕಾಲದಲ್ಲಿ ಮಾತ್ರವಲ್ಲ ಬಾಕಿ ದಿನಗಳಲ್ಲಿಯೂ ವಾರಕ್ಕೆರಡು ದಿನ ತಪ್ಪದೆ ಇಲ್ಲಿಗೆ ಬರುತ್ತೇನೆ' ಎಂದರು ಹೊಳೆನರಸಿಪುರದ ತಮ್ಮ ಮನೆಯಲ್ಲಿ ಕೂತಿದ್ದ ರೇವಣ್ಣ. ಪತ್ನಿ ಭವಾನಿ ಪಕ್ಷದ ಕಾರ್ಯಕರ್ತರನ್ನು ಉಪಚರಿಸುತ್ತಾ ಮನೆ ತುಂಬಾ ಓಡಾಡುತ್ತಿದ್ದರು.
ಇವರನ್ನು ಕಾಡುತ್ತಿರುವ ಅಸುರಕ್ಷತೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಈ ಕ್ಷೇತ್ರದ ರಾಜಕೀಯ ಇತಿಹಾಸವನ್ನು ತಿಳಿದುಕೊಳ್ಳಬೇಕು. ಅಭಿವೃದ್ಧಿಯ ವಿಷಯ ಈಗಲೂ ಇಲ್ಲಿ ಚುನಾವಣಾ ಚರ್ಚಾ ವಸ್ತು ಅಲ್ಲ.  ಇನ್ನಷ್ಟು ಸೂಕ್ಷ್ಮವಾಗಿ ನೋಡಿದರೆ ಇಲ್ಲಿ ಅಭ್ಯರ್ಥಿಗಳಾಗಿರುವ ರೇವಣ್ಣ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಸ್.ಜಿ. ಅನುಪಮ ಕೂಡಾ ಪ್ರಧಾನ ಪಾತ್ರಧಾರಿಗಳಲ್ಲ. ಇವರಿಬ್ಬರ ಹಿನ್ನೆಲೆಯಲ್ಲಿ ಕ್ರಮವಾಗಿ ಅವರಿಬ್ಬರ ಅಪ್ಪ ಮತ್ತು ಮಾವನ ರಾಜಕೀಯದ ನೆರಳಿದೆ.
ಪುಟ್ಟಸ್ವಾಮಿಗೌಡರು ಜೀವಂತ ಇರುವ ವರೆಗೆ ಹೊಳೆನರಸಿಪುರ ಕ್ಷೇತ್ರದಲ್ಲಿ ದೇವೇಗೌಡರ ಏಕಚಕ್ರಾಧಿಪತ್ಯಕ್ಕೆ ಸವಾಲೊಡ್ಡುತ್ತಲೇ ಇದ್ದವರು. ಪ್ರಾರಂಭದ ದಿನದ ಸ್ನೇಹವನ್ನು ಕಡಿದುಕೊಂಡು ದೇವೇಗೌಡರಿಂದ ಅವರು ದೂರವಾದ ನಂತರ ಈ ಕ್ಷೇತ್ರದ ಚುನಾವಣೆ ಎಂದರೆ  ಇಬ್ಬರು ಗೌಡರ ನಡುವಿನ ಕಾಳಗ ಎಂದೇ ಪರಿಗಣಿಸಲಾಗುತ್ತಿತ್ತು. ಈಗ ಅಪ್ಪನ ಪರವಾಗಿ ಮಗ, ಮಾವನ ಪರವಾಗಿ ಸೊಸೆ ಕದನ ಕಣದಲ್ಲಿದ್ದಾರೆ. ಕಾಂಗ್ರೆಸ್ ಪರ ಪ್ರಚಾರ ಮಾಡುವವರು ಅನುಪಮಾ ಅವರಿಗಿಂತ ಹೆಚ್ಚಾಗಿ ಪುಟ್ಟಸ್ವಾಮಿಗೌಡರ ಹೆಸರು ಕೂಗಿ ಜೈಕಾರ ಹಾಕುತ್ತಿರುವುದು ಮತ್ತು ರೇವಣ್ಣ ಮಾತೆತ್ತಿದರೆ `ದೊಡ್ಡಗೌಡರ' ನಾಮಸ್ಮರಣೆ ಮಾಡುವುದು ಇದೇ ಕಾರಣಕ್ಕಾಗಿ.
ಪುಟ್ಟಸ್ವಾಮಿಗೌಡರ ಸಾವಿನ ನಂತರ ಗೌಡರ ಕಾಳಗದಲ್ಲಿ ದೇವೇಗೌಡ ಕುಟುಂಬ ಕೈ ಮೇಲಾಗಿರುವುದು ಸ್ಪಷ್ಟ. ಮಾವನನ್ನು ಮಾತ್ರವಲ್ಲ ಗಂಡನನ್ನೂ ಕಳೆದುಕೊಂಡ ಅನುಪಮಾ ಅವರ ಪರವಾಗಿ ಅನುಕಂಪದ ಅಲೆಯ ಜತೆಗೆ ಪುಟ್ಟಸ್ವಾಮಿಗೌಡರ ಕಟ್ಟಾ ಬೆಂಬಲಿಗರ ಪಡೆ ಇರುವುದು ನಿಜ. ಆದರೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಕಾಣಿಸುತ್ತಿಲ್ಲ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಗಂಡಸಿ ಶಿವರಾಂ ಅವರು ಅನುಪಮಾ ರಾಜಕೀಯ ಪ್ರವೇಶವನ್ನು ಸ್ವಾಗತಿಸಿದವರಲ್ಲ. ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಅವರಿಗೆ ಆಗಿರುವ ನಿರಾಶೆ ಅವರ ಗೈರುಹಾಜರಿಯಲ್ಲಿ ಕಾಣುತ್ತಿದೆ. ಇಷ್ಟೆಲ್ಲ ಪ್ರತಿಕೂಲ ಅಂಶಗಳ ನಡುವೆಯೂ ಅನುಪಮಾ ಮಾವನ ಸಾವಿನ ನಂತರದ ದಿನಗಳಲ್ಲಿ ಗೌಡರ ಕುಟುಂಬದ ವಿರುದ್ಧದ ಹೋರಾಟವನ್ನು ಮುಂದುವರಿಸಿದ್ದಾರೆ.
`ರೇವಣ್ಣ ಬೆಂಬಲಿಗರು ಕಟ್ಟಾ ನಿಷ್ಠಾವಂತರು ಎನ್ನುವ ಹಾಗಿಲ್ಲ, ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ರೇವಣ್ಣ ಅವರ ಮಾತು ಸರ್ಕಾರದಲ್ಲಿ ಬೆಲೆ ಇರುವುದು ಗೊತ್ತಾಗಿರುವ ಕಾರಣಕ್ಕೆ ಈ ಬೆಂಬಲಿಗರು ಸುತ್ತುವರಿದಿರಬಹುದು. ಆದರೆ ಅನುಪಮಾ ಬೆಂಬಲಿಗರು ರೇವಣ್ಣ ಒಡ್ಡುತ್ತಲೇ ಇರುವ ಎಲ್ಲ ಬಗೆಯ ಆಸೆ-ಆಮಿಷಗಳನ್ನು ಮೆಟ್ಟಿನಿಂತು ಜತೆಯಲ್ಲಿರುವವರು' ಎಂದು ಹೇಳುತ್ತಾರೆ ತನ್ನನ್ನು ಪಕ್ಷಾತೀತ ಎಂದು ಹೇಳಿಕೊಂಡ ಅಗ್ರಹಾರ-ಚೋಳೇನಹಳ್ಳಿಯ ಶಿವರಾಮೇಗೌಡರು.
ರೇವಣ್ಣ ಅವರಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಇರುವ ಯಾವ ಚಿಂತೆಯೂ ಇಲ್ಲ. `ತಂದೆ-ಮಕ್ಕಳ ಪಕ್ಷ' ಎಂದೇ ವಿರೋಧಿಗಳು ಗೇಲಿ ಮಾಡುವ ಜೆಡಿ (ಎಸ್)ನಲ್ಲಿ ಕನಿಷ್ಠ ಕ್ಷೇತ್ರದ ಮಟ್ಟಿಗೆ ಅವರದ್ದೇ ಕೊನೆಮಾತು.
ದೇವೇಗೌಡರು ಹಾಸನ ಲೋಕಸಭಾ ಸದಸ್ಯರೂ ಆಗಿರುವುದರಿಂದ ಅವರ ಪರವಾಗಿರುವ ಮತಗಳೂ ಕೂಡಾ ರೇವಣ್ಣ ಬುಟ್ಟಿಗೆ ಬಂದು ಬೀಳಬಹುದು. ಆದರೆ ಅಣ್ಣ ಕುಮಾರಸ್ವಾಮಿ ಅವರಂತೆ ರೇವಣ್ಣ ಅವರದ್ದು ಜನಪ್ರಿಯ ರಾಜಕಾರಣದ ಕಾರ್ಯಶೈಲಿ ಅಲ್ಲ. ಪಕ್ಷದ ಕಾರ್ಯಕರ್ತರು, ನಾಯಕರು ಯಾರೇ ಇರಲಿ ಯಾರೂ ರೇವಣ್ಣ ಮುಂದೆ ಕೂರುವ ಹಾಗಿಲ್ಲ, ಕೈಕಟ್ಟಿಕೊಂಡು ನಿಲ್ಲಲೇ ಬೇಕು. ಇದು ಕುಮಾರಸ್ವಾಮಿಯವ `ಬ್ರದರ್' ರಾಜಕೀಯದಿಂದ ಭಿನ್ನ.
ಮುಖಚಹರೆ, ದೇಹದ ಅಂಗಾಂಗಗಳ ಮೇಲೆ ಕೈಬೆರಳುಗಳ ಚಲನೆ, ಧ್ವನಿಯ ಏರಿಳಿತದಲ್ಲಿ ಮಾತ್ರವಲ್ಲ ಕಾರ್ಯಶೈಲಿಯಲ್ಲಿಯೂ ರೇವಣ್ಣ ಅವರಿಗೆ ಅಪ್ಪನ ಹೋಲಿಕೆ ಇದೆ. ಸರ್ಕಾರಿ ಕಡತಗಳನ್ನು ಓದಿ ಗ್ರಹಿಸುವ ದೇವೇಗೌಡರ ಸೂಕ್ಷ್ಮಬುದ್ದಿ ಓದಿದ್ದು ಕಡಿಮೆಯಾದರೂ ರೇವಣ್ಣ ಅವರಲ್ಲಿಯೂ ಇದೆ. ಇದರಿಂದಾಗಿಯೇ ಸಚಿವರಾಗಿದ್ದಾಗಲೂ ಅಧಿಕಾರಿಗಳ ಮೇಲೆ ಅವರಿಗೆ ನಿಯಂತ್ರಣ ಇತ್ತು. ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ದದ ಆರೋಪಗಳ ಅನೇಕ ಕಡತಗಳು ಪ್ರಧಾನ ವಿರೋಧಪಕ್ಷದ ನಾಯಕರಿಗೆ ಸಿಗದೆ ರೇವಣ್ಣ ಕೈಸೇರುತ್ತಿದ್ದದ್ದಕ್ಕೆ ಕೂಡಾ ಇದು ಕಾರಣ. ಇದನ್ನೇ ಕೈಯಲ್ಲಿಟ್ಟುಕೊಂಡು ರೇವಣ್ಣ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎಂಬ ಆರೋಪವೂ ಇದೆ.
`ಅಜೀರ್ಣವಾಗುವಷ್ಟು ಅಭಿವೃದ್ಧಿ ಮಾಡಿದ್ದಾರೆ. ಇದನ್ನು ಕ್ಷೇತ್ರದ ಮತದಾರರ ಹಿತದೃಷ್ಟಿಗಿಂತಲೂ ಹೆಚ್ಚಾಗಿ ಬೆಂಬಲಿಗ ಗುತ್ತಿಗೆದಾರರಿಗೆ ನೆರವಾಗಲು ಮಾಡಿದ್ದಾರೆ' ಎನ್ನುವುದೇ ರೇವಣ್ಣ ಅವರ ಮೇಲಿನ ಪ್ರಮುಖ ಆರೋಪ.  ಸರಿಯಾಗಿರುವ ರಸ್ತೆಗಳೂ ದುರಸ್ತಿಯಾಗುತ್ತಿರುವುದು ಅಲ್ಲಲ್ಲಿ ಕಣ್ಣಿಗೆ ಬೀಳುತ್ತದೆ.
`ಅಭಿವೃದ್ಧಿಯ ಅಜೀರ್ಣತೆ' ಬಗ್ಗೆ ಆರೋಪಿಸುವವರು ಪಟ್ಟಣದ ಮಧ್ಯ ಹಾದುಹೋಗುವ ಹೇಮಾವತಿ ನದಿಗೆ 36 ಕೋಟಿ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿರುವುದನ್ನು ತೋರಿಸುತ್ತಾರೆ. `ಕಳೆದ 2-3 ದಶಕಗಳಲ್ಲಿ ಹೇಮಾವತಿ ನದಿಯಲ್ಲಿ ನೆರೆ ಬಂದಿಲ್ಲ. ಹೀಗಿದ್ದಾಗ ತಡೆಗೋಡೆ ಯಾಕೆ? ಆ ದುಡ್ಡನ್ನು ಹಳ್ಳಿಗಳಲ್ಲಿ ಬಡವರಿಗೆ ಮನೆ ಕಟ್ಟಿಸಿಕೊಡಬಹುದಿತ್ತಲ್ಲವೇ? ಎಂದು ಪ್ರಶ್ನಿಸುತ್ತಾರೆ ರೇವಣ್ಣ ಅವರ ಪ್ರತಿಸ್ಪರ್ಧಿ ಎಸ್.ಜಿ. ಅನುಪಮಾ. ಅಭಿವೃದ್ಧಿ ಕಾಮಗಾರಿಗಳಲ್ಲಿ ಕೂಡಾ ಪಕ್ಷ ರಾಜಕೀಯ ನಡೆದಿದೆ ಎಂದು ಅವರು ಆರೋಪಿಸುತ್ತಾರೆ. ವಿಚಿತ್ರವೆಂದರೆ ಅಭಿವೃದ್ಧಿ ಇಲ್ಲಿನ ಚುನಾವಣೆಯಲ್ಲಿ ಚರ್ಚೆಯಾಗುತ್ತಿರುವುದು ಅಭಿವೃದ್ಧಿ ಆಗಿಲ್ಲ ಎಂದಲ್ಲ, ಅಜೀರ್ಣವಾಗುವಷ್ಟು ಆಗಿದೆ ಎಂದು.
`ಸೋಲು-ಗೆಲುವಿನ ಬಗ್ಗೆ ಅಣ್ಣಾವ್ರ ತಲೆಕೆಡಿಸಿಕೊಂಡಿಲ್ಲ, `ಹೂ ಬಿದ್ದಾಗಿದೆ' ಅವರೇ ಗೆಲ್ಲುತ್ತಾರೆ' ಎನ್ನುತ್ತಾರೆ ಹೆಸರು ಬರೆಯಬೇಡಿ ಎಂದು ಕೇಳಿಕೊಂಡ ರೇವಣ್ಣ ಬೆಂಬಲಿಗರೊಬ್ಬರು. ದೇವೇಗೌಡರಂತೆ ರೇವಣ್ಣ ಅವರಿಗೂ ದೇವರು, ಜ್ಯೋಷಿಗಳ ಮೇಲೆ ಅಪಾರ ನಂಬಿಕೆ. ಗಳಿಗೆ-ಮುಹೂರ್ತ ನೋಡದೆ ಮನೆಯಿಂದ ಹೊರಗೆ ಕಾಲಿಡುವವರಲ್ಲ. ಅವರ ಎಲ್ಲ ಲೆಕ್ಕಾಚಾರಗಳೂ ಜ್ಯೋತಿಷಿಗಳ ಸಲಹೆ ಮೇಲೆ ನಡೆಯುವುದು. ರೇವಣ್ಣನವರು ಬೆವರು ಸುರಿಸುತ್ತಿರುವುದು ಜ್ಯೋತಿಷಿ ನುಡಿದಿರುವ ಭವಿಷ್ಯ ನಿಜಮಾಡುವುದಕ್ಕೋ, ಸುಳ್ಳುಮಾಡುವುದಕ್ಕೋ ಎಂಬುದನ್ನು ಅವರೇ ಹೇಳಬೇಕು, ಹೇಳುವುದಿಲ್ಲ.

Saturday, April 20, 2013

ಬೆಳಗಾವಿ ಜಿಲ್ಲೆಯ `ಸಿಂಡಿಕೇಟ್ ಪ್ರಜಾಪ್ರಭುತ್ವ'

ಗೋಕಾಕ (ಬೆಳಗಾವಿ ಜಿಲ್ಲೆ) : ಪಾಳೆಪಟ್ಟುಗಳು ಅಳಿದುಹೋಗಿ ಜನರ ಕೈಗೆ ಅಧಿಕಾರ ಬಂದಿದೆ ಎಂದು ಹೇಳುವವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ,ಗೋಕಾಕ, ಅರಬಾವಿ, ಯಮಕನಮರಡಿ ಕಡೆ ಹೋಗಿ ಇಣುಕಿ ಬರಬೇಕು. `ಪ್ರಜೆಗಳು,
ಪ್ರಜೆಗಳಿಗಾಗಿ, ಪ್ರಜೆಗಳಿಂದ... ಎನ್ನುವ ಪ್ರಜಾಪ್ರಭುತ್ವ ತತ್ವಾಧಾರಿತ ವ್ಯಾಖ್ಯಾನಕ್ಕೆ ಇಲ್ಲಿನ ರಾಜಕೀಯದಲ್ಲಿ ಕವಡೆಕಾಸಿನ ಕಿಮ್ಮತ್ತಿಲ್ಲ. ಇಲ್ಲಿರುವ `ಪ್ರಜಾಪ್ರಭುತ್ವದ ಪಾಳೆಯಗಾರರು' ನಡೆಸುತ್ತಾ ಬಂದಿರುವ ರಾಜಕಾರಣವನ್ನು ಸಾಂಪ್ರದಾಯಿಕ ರೀತಿಯಲ್ಲಿ ವ್ಯಾಖ್ಯಾನಿಸುವುದು ಕಷ್ಟ. ಇಲ್ಲಿರುವುದು `ಸಂಸದೀಯ ಪ್ರಜಾಪ್ರಭುತ್ವ' ಅಲ್ಲವೇ ಅಲ್ಲ, ಇದೊಂದು ರೀತಿಯ `ಸಿಂಡಿಕೇಟ್ ಪ್ರಜಾಪ್ರಭುತ್ವ'.
ಗೋಕಾಕದ ಜಾರಕಿಹೊಳಿ ಸೋದರರು ಮತ್ತು ಹುಕ್ಕೇರಿಯ ಕತ್ತಿ ಸೋದರರು ಕಳೆದ ಕೆಲವು ವರ್ಷಗಳಿಂದ ಸುಭದ್ರವಾದ ಪ್ರತ್ಯೇಕ ರಾಜಕೀಯ ಸಾಮ್ರಾಜ್ಯಗಳನ್ನು ಕಟ್ಟಿಕೊಂಡು ನೆಮ್ಮದಿಯಾಗಿದ್ದಾರೆ. ಇವರ ಸಾಲಿನಲ್ಲಿಯೇ ಇರುವ ಪ್ರಭಾಕರ ಕೋರೆ, ಪ್ರಕಾಶ್ ಹುಕ್ಕೇರಿ ಮೊದಲಾದವರ ರಾಜಕೀಯ ಜೀವನ ಕೂಡಾ ಅಷ್ಟೇ ಸುರಕ್ಷಿತವಾಗಿದೆ . ಒಂದು ಕಾಲದಲ್ಲಿ `ಬೆಳಗಾವಿ ಹುಲಿ' ಎಂಬ ಖ್ಯಾತಿ ಪಡೆದಿದ್ದ ವಿ.ಎಲ್.ಪಾಟೀಲ್ ಅವರೂ ನಡೆಸಿದ್ದು ಇದೇ ಮಾದರಿ ರಾಜಕೀಯ. ತಮ್ಮ ಉದ್ಯಮ ಮತ್ತು ರಾಜಕೀಯ ಸಾಮ್ರಾಜ್ಯದ ರಕ್ಷಣೆಗಾಗಿ ಕಟ್ಟಿಕೊಂಡಿರುವ `ರಾಜಕೀಯ ಸಿಂಡಿಕೇಟ್' ಇವರೆಲ್ಲರ ಯಶಸ್ಸಿನ ಗುಟ್ಟು `ಜಾತ್ಯತೀತ ಮತ್ತು ಪಕ್ಷಾತೀತವಾದ ಈ `ಸಿಂಡಿಕೇಟ್' ಯಾವ  ದಾಖಲೆಯಲ್ಲಿಯೂ ಇಲ್ಲ, ಕಣ್ಣಿಗೂ ಕಾಣುವುದಿಲ್ಲ. ಆದರೆ  ಗ್ರಾಮಪಂಚಾಯತ್‌ನಿಂದ ಲೋಕಸಭೆಯ ವರೆಗೆ, ಸಹಕಾರಿ ಬ್ಯಾಂಕ್‌ನಿಂದ ಹಾಲಿನ ಸೊಸೈಟಿ ವರೆಗೆ ನಡೆಯುವ ಎಲ್ಲ ಚುನಾವಣೆಗಳ ಫಲಿತಾಂಶದಲ್ಲಿ ಈ `ಸಿಂಡಿಕೇಟ್'ನ ನೆರಳನ್ನು ಕಾಣಬಹುದು.
ಈಗಿನ ವಿಧಾನಸಭೆಯಲ್ಲಿ ಜಾರಕಿಹೊಳಿ ಕುಟುಂಬದ ಮೂವರು ಸೋದರರು ಸದಸ್ಯರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಯಮಕನಮರಡಿಯಿಂದ ಮತ್ತು ರಮೇಶ್ ಜಾರಕಿಹೊಳಿ ಗೋಕಾಕ ಕ್ಷೇತ್ರಗಳಿಂದ ಕಾಂಗ್ರೆಸ್ ಹುರಿಯಾಳುಗಳಾಗಿ ಆರಿಸಿ ಬಂದಿದ್ದರು. ಬಾಲಚಂದ್ರ ಜಾರಕಿಹೊಳಿ ಜಾತ್ಯತೀತ ಜನತಾದಳದಿಂದ ಅರಬಾವಿಯಿಂದ ಗೆದ್ದು ನಂತರ ಆಪರೇಷನ್‌ಕಮಲದಲ್ಲಿ ಬಿಜೆಪಿ ಸೇರಿದ್ದಾರೆ. ಈ ಕ್ಷೇತ್ರದ ಪಕ್ಕದಲ್ಲಿಯೇ ಇರುವ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಸದಸ್ಯ ಉಮೇಶ್ ಕತ್ತಿ, ಅವರ ಸೋದರ ರಮೇಶ್ ಕತ್ತಿ ಲೋಕಸಭಾ ಸದಸ್ಯ. ಈ ರೀತಿ ಒಂದೇ ಜಿಲ್ಲೆಯ ಅಕ್ಕಪಕ್ಕದ ಮೂರು ಕ್ಷೇತ್ರಗಳಲ್ಲಿ ಮೂವರು ಸೋದರರು ಶಾಸಕರಾಗಿರುವ ಹಾಗೂ ಪಕ್ಕದ ಕ್ಷೇತ್ರಗಳಲ್ಲಿ ಅಣ್ಣತಮ್ಮಂದಿರು ಶಾಸಕ ಮತ್ತು ಸಂಸದರಾಗಿರುವ ಉದಾಹರಣೆ ದೇಶದಲ್ಲೆಲ್ಲೂ ಇಲ್ಲ.
ಇವರಲ್ಲಿ ಯಾರಿಗೂ ಈಗಿನ ಚುನಾವಣೆಯಲ್ಲಿ ಗೆಲುವಿನ ಬಗ್ಗೆಯೂ ಹೆಚ್ಚಿನ ಚಿಂತೆ ಇಲ್ಲ. ಮತದಾರರ ಅಂತರಂಗದಲ್ಲಿ ಏನೇ ಅಭಿಪ್ರಾಯ ಇದ್ದರೂ ಮತಯಂತ್ರದ ಮೇಲೆ ಕೈಯಾಡಿಸಿದಾಗ ಬೆರಳುಗಳು ತಮ್ಮನ್ನೇ ಆಯ್ಕೆ ಮಾಡುತ್ತವೆ ಎಂಬ ನಂಬಿಕೆ ಇವರಲ್ಲಿದೆ. ಹಿಂದಿನ ಚುನಾವಣೆಗಳ ಫಲಿತಾಂಶದ ಮೇಲೆ ಕಣ್ಣಾಡಿಸಿದರೆ ಈ ನಾಯಕರ ನಂಬಿಕೆ ಹುಸಿಯಾಗಬಹುದು ಎಂದು ಅನಿಸುವುದಿಲ್ಲ. ಉಮೇಶ್ ಕತ್ತಿ ಕಳೆದ ಐದು ಚುನಾವಣೆಗಳನ್ನು ಐದು ಪಕ್ಷಗಳಿಂದ ಗೆದ್ದಿದ್ದಾರೆ. ಆಪರೇಷನ್ ಕಮಲದಲ್ಲಿ ಭಾಗಿಯಾಗಿ ಶಾಸಕಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಾಲಚಂದ್ರ ಜಾರಕಿಹೊಳಿ ಉಪಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಮರುಆಯ್ಕೆಯಾಗಿದ್ದಾರೆ. ವಿಧಾನಪರಿಷತ್ ಸದಸ್ಯರಾಗಿದ್ದ ಸತೀಶ್ ಜಾರಕಿಹೊಳಿ ಕ್ಷೇತ್ರವಿಂಗಡಣೆಯ ನಂತರ ಯಮಕನಮರಡಿ ಎಂಬ ಹೊಸ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ.
ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕೂಡಾ ಬೆಳಗಾವಿ ಜಿಲ್ಲೆಯ `ಸಿಂಡಿಕೇಟ್' ರಾಜಕೀಯದ ಒಳನೋಟವನ್ನು ನೀಡುತ್ತದೆ. ಈ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 361 ಕ್ಷೇತ್ರಗಳ ಪೈಕಿ 196 ಪಕ್ಷೇತರರ ಪಾಲಾಗಿವೆ. ಗೋಕಾಕ ನಗರಸಭೆಯ 31ಕ್ಕೆ 31 ಸ್ಥಾನಗಳಲ್ಲಿ, ಚಿಕ್ಕೋಡಿ ಪುರಸಭೆಯ 23ಕ್ಕೆ 23ರಲ್ಲಿ, ಖಾನಾಪುರ ಪಟ್ಟಣ ಪಂಚಾಯತ್‌ನ 16ಕ್ಕೆ 16ರಲ್ಲಿ, ಚಿಕ್ಕೊಡಿ ಸದಲಗಾ ಪಟ್ಟಣ ಪಂಚಾಯತ್‌ನ 20ಕ್ಕೆ 20ರಲ್ಲಿ, ಗೋಕಾಕದ ಕೊಣ್ಣೂರು ಪಟ್ಟಣಪಂಚಾಯತ್‌ನ 17ಕ್ಕೆ 15ರಲ್ಲಿ ಪಕ್ಷೇತರರು ಆರಿಸಿ ಬಂದಿದ್ದಾರೆ. ಅಲ್ಲೆಲ್ಲ ಬೇರೆಬೇರೆ ಪಕ್ಷಗಳಿಗೆ ಸೇರಿರುವ ಶಾಸಕರಿದ್ದಾರೆ. ಆದರೆ ಅವರ ಪಕ್ಷದ ಸದಸ್ಯರೇ ಅಲ್ಲ, ಹೇಗೆ? ಮನಸ್ಸು ಮಾಡಿದರೆ ಈ ಶಾಸಕರು ತಮ್ಮ ಪಕ್ಷದ ಸದಸ್ಯರನ್ನೂ ಗೆಲ್ಲಿಸಬಲ್ಲರು ಎನ್ನುವುದಕ್ಕೆ ಹುಕ್ಕೇರಿ ಸಾಕ್ಷಿ.
ಇಲ್ಲಿನ ಶಾಸಕರಾದ ಉಮೇಶ್ ಕತ್ತಿಯವರು ಬಿಜೆಪಿಯೋ, ಕೆಜೆಪಿಯೋ ಎನ್ನುವ ಗೊಂದಲದಲ್ಲಿರುವಾಗಲೇ ಇಲ್ಲಿನ ಪಟ್ಟಣ ಪಂಚಾಯತ್‌ನ 19ರಲ್ಲಿ 18 ಸ್ಥಾನಗಳಲ್ಲಿ ಮತ್ತು ಇದೇ ಕ್ಷೇತ್ರಕ್ಕೆ ಸೇರಿದ ಸಂಕೇಶ್ವರ ಪುರಸಭೆಯ 23ಕ್ಕೆ 22ರಲ್ಲಿ ಬಿಜೆಪಿ ಗೆದ್ದಿದೆ. ತಮ್ಮ ಪಕ್ಷದ ಶಾಸಕರು ಇರುವ ಕಡೆಗಳಲ್ಲಿ ಪಕ್ಷದ ಸದಸ್ಯರು ಯಾಕೆ ಆರಿಸಿ ಬಂದಿಲ್ಲ ಎಂದು ಆ ಪಕ್ಷಗಳು ಕೇಳಬೇಕಲ್ಲವೇ? ಉದಾಹರಣೆಗೆ ಗೋಕಾಕ ನಗರಸಭೆ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿಯವರ ವ್ಯಾಪ್ತಿಯಲ್ಲಿ ಬರುತ್ತದೆ. ಅವರನ್ನು ಯಾರು ಕೇಳಿದ್ದಾರೆ? ಆರಿಸಿಬಂದಿರುವ ಪಕ್ಷೇತರರಲ್ಲಿ ಬಹುಸಂಖ್ಯಾತರು ಸ್ಥಳೀಯ ಶಾಸಕರ ಅನುಯಾಯಿಗಳು. ಉಳಿದವರನ್ನು ಶಾಸಕರು `ಮ್ಯಾನೇಜ್' ಮಾಡ್ತಾರೆ. ಆಡಳಿತದ ಸೂತ್ರ ಮಾತ್ರ ಶಾಸಕರ ಕೈಯಲ್ಲಿರುತ್ತದೆ. ಇದು ಒಟ್ಟು ಕಾರ್ಯತಂತ್ರ.
ಇಷ್ಟೊಂದು ಲೀಲಾಜಾಲವಾಗಿ ಚುನಾವಣೆಯಲ್ಲಿ ಗೆಲ್ಲಲು `ಸಿಂಡಿಕೇಟ್ ರಾಜಕಾರಣ' ಒಂದೇ ಅಲ್ಲದೆ ಬೇರೆ ಕಾರಣಗಳೂ ಇವೆ. ಜಾರಕಿಹೊಳಿ, ಕತ್ತಿ,ಕೋರೆ ಮೊದಲಾದವರ ಮೊದಲ ಆಸಕ್ತಿ ರಾಜಕೀಯ ಅಲ್ಲ ಉದ್ಯಮ. ಉಮೇಶ್ ಕತ್ತಿಯವರು ಖಾಸಗಿ ಸಕ್ಕರೆ ಕಾರ್ಖಾನೆಯ ಮಾಲೀಕರು ಮಾತ್ರವಲ್ಲ, ಸಹಕಾರಿ ಸಕ್ಕರೆ ಕಾರ್ಖಾನೆಯೊಂದು ಕೂಡಾ ಅವರ ನಿಯಂತ್ರಣದಲ್ಲಿದೆ. ರಾಜ್ಯದಲ್ಲಿ ಇಲ್ಲಿ ಮಾತ್ರ ಇರುವ ಸಹಕಾರಿ ವಿದ್ಯುತ್ ವಿತರಣಾ ಸಂಘದ ಜತೆ ಹುಕ್ಕೇರಿ ಕ್ಷೇತ್ರದಲ್ಲಿರುವ ಸಹಕಾರಿ ರಂಗದ ಎಲ್ಲ ಸಂಸ್ಥೆಗಳು ಪ್ರತ್ಯಕ್ಷವಾಗಿ ಇಲ್ಲವೆ ಪರೋಕ್ಷವಾಗಿ ಕತ್ತಿ ಅವರ ಹಿಡಿತದಲ್ಲಿವೆ. ಇದರ ಜತೆಗೆ ಶಿಕ್ಷಣ ಸಂಸ್ಥೆಗಳಿವೆ. ಜಾರಕಿಹೊಳಿ ಕುಟುಂಬ ಒಂದು ಕಾಲದಲ್ಲಿ ಅಬಕಾರಿ ಉದ್ಯಮದಲ್ಲಿದ್ದವರು. ಸಾರಾಯಿ ನಿಷೇಧದ ನಂತರ ಸ್ವಲ್ಪ ಹಿನ್ನಡೆಯಾದರೂ ಸಂಪೂರ್ಣವಾಗಿ ಮದ್ಯದ ಉದ್ಯಮವನ್ನು ಬಿಟ್ಟಿಲ್ಲ. ಸತೀಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಕ್ಕರೆ ಕಾರ್ಖಾನೆಗಳಿವೆ. ಇದರ ಜತೆಗೆ ಬೆಂಗಳೂರಿನಿಂದ ಬೆಳಗಾವಿ ವರೆಗೆ ಬೇರೆಬೇರೆ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿದ್ದಾರೆ. ರಾಜಕೀಯಕ್ಕೆ ಬೇಕಾದ ದುಡ್ಡಿನ ಅವಶ್ಯಕತೆ ಪೂರೈಸಲು ಗುತ್ತಿಗೆದಾರರು ಇದ್ದೇ ಇರುತ್ತಾರೆ.
ಹಾಗಿದ್ದರೆ ದುಡ್ಡೊಂದೇ ಇವರ ರಾಜಕೀಯ ಯಶಸ್ಸಿಗೆ ಕಾರಣವೇ? ಇವರಿಗಿಂತ ನೂರಾರು ಪಟ್ಟು ಶ್ರಿಮಂತರು ರಾಜ್ಯದಲ್ಲಿದ್ದಾರೆ, ವಿಧಾನಸಭೆಯ ಒಂದು ಟಿಕೆಟ್‌ಗಾಗಿ ಕೋಟಿ-ಕೋಟಿ ರೂಪಾಯಿ ಚೆಲ್ಲುವವರಿದ್ದಾರೆ.  ಅವರಿಗೆ ಯಾಕೆ ರಾಜಕೀಯ ಯಶಸ್ಸು ಸಿಗಲಿಲ್ಲ ಎನ್ನುವ ಪ್ರಶ್ನೆಯೂ ಇದೆ. ಕಾರಣಗಳು ಬೇರೆ ಇವೆ. ಮಹಾರಾಷ್ಟ್ರದ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳ ಲಾಬಿಯ ಸೋಂಕು ಆ ರಾಜ್ಯದ ಗಡಿಭಾಗದಲ್ಲಿರುವ ಬೆಳಗಾವಿಗೂ ತಗಲಿದೆ. ದೇಶದಲ್ಲಿ ಈ ರೀತಿಯ `ಸಿಂಡಿಕೇಟ್ ರಾಜಕಾರಣ'ಕ್ಕೆ ಖ್ಯಾತಿಯೋ, ಕುಖ್ಯಾತಿಯೋ ಪಡೆದವರು ಶರದ್ ಪವಾರ್. ಇಲ್ಲಿನ ರಾಜಕೀಯ ಬಹುಪಾಲು ಅವರ ತಂತ್ರವನ್ನು ಹೋಲುತ್ತದೆ.
ಇವರಲ್ಲಿ ಯಾರಿಗೂ ತಾವಿದ್ದ ಪಕ್ಷದ ಮೇಲೆ ಕಟ್ಟಾ ನಿಷ್ಠೆ ಇಲ್ಲ. ಇವರ ರಾಜಕೀಯ ಜೀವನದ ಪಕ್ಷಾಂತರಗಳ ಇತಿಹಾಸವೇ ಇದಕ್ಕೆ ಸಾಕ್ಷಿ.   ರಾಜಕೀಯ ಎದುರಾಳಿಗಳು ತಲೆಎತ್ತದಂತೆ ನಿರ್ನಾಮ ಮಾಡಿಬಿಡುವುದು, ಜನತೆಯ ಪಾಲುದಾರಿಕೆ ಇರುವ ಎಲ್ಲ ಸಂಸ್ಥೆಗಳ ಮೇಲೆ ನಿಯಂತ್ರಣ, ಪಕ್ಷಾತೀತವಾಗಿ ರಾಜಕೀಯ ನಾಯಕರ ಜತೆ ಸೌಹಾರ್ದಯುತ ಹೊಂದಾಣಿಕೆ ಮತ್ತು ಮತದಾರರ ತಲೆ ಮೇಲೆ ವೈಯಕ್ತಿಕ ಋಣಭಾರದ ಹೇರಿಕೆ- ಇದು ಇವರ ರಾಜಕೀಯ ಕಾರ್ಯಚರಣೆಯ ಮೋಡಸ್ ಅಪರೆಂಡಿ. ಚುನಾವಣೆಯಲ್ಲಿ ಎದುರಾಳಿ ಅಭ್ಯರ್ಥಿ ದುರ್ಬಲ ವಾಗಿರುವಂತೆ ತಮ್ಮೆಲ್ಲ ಸಂಪರ್ಕ -ಸಾಮರ್ಥ್ಯವನ್ನು ಬಳಸಿಕೊಂಡು ಇವರು ಪರಸ್ಪರ ನೆರವಾಗುತ್ತಾರೆ. ಉದಾಹರಣೆಗೆ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಉಮೇಶ್ ಕತ್ತಿ ಜನತಾದಳ ಇಲ್ಲವೆ ಬಿಜೆಪಿಯಿಂದ ಸ್ಪರ್ಧಿಸಿದಾಗ `ಸಿಂಡಿಕೇಟ್'ನಲ್ಲಿರುವ ಕಾಂಗ್ರೆಸ್ ಸದಸ್ಯರು ಅವರ ಎದುರು ದುರ್ಬಲ ಅಭ್ಯರ್ಥಿ ಕಣಕ್ಕಿಳಿಸುವಂತೆ ನೋಡಿಕೊಳ್ಳುತ್ತಾರೆ.
ಅರಬಾವಿಯಿಂದ ಬಾಲಚಂದ್ರ ಜಾರಕಿಹೊಳಿ ಜೆಡಿ(ಎಸ್)ನಿಂದ ಸ್ಪರ್ಧಿಸಿದಾಗ ಅವರ ಎದುರಾಳಿಯಾಗಿದ್ದದ್ದು ಕಾಂಗ್ರೆಸ್‌ನ ದುರ್ಬಲ ಅಭ್ಯರ್ಥಿ. ಪಕ್ಷ ಯಾವುದೇ ಇರಲಿ ಇಡೀ ಜಾರಕಿಹೊಳಿ ಕುಟುಂಬಕ್ಕೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರ ಮೇಲೆ ಇರುವ ನಿಷ್ಠೆಯೂ ಇದಕ್ಕೆ ನೆರವಾಗಿದೆ ಎಂಬ ಆರೋಪ ಇದೆ. ಹುಕ್ಕೇರಿ ಕ್ಷೇತ್ರದಿಂದ ಸತತವಾಗಿ ಆರಿಸಿ ಬರುತ್ತಿರುವ ಉಮೇಶ್ ಕತ್ತಿ ಎದುರು ವಿರೋಧ ಪಕ್ಷಗಳು ಬಲಿಷ್ಠ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೇ ಅಪರೂಪ. ಇದ್ದ ಒಬ್ಬ ವಿರೋಧಿ ಎ.ಬಿ.ಪಾಟೀಲ್ ಕ್ಷೇತ್ರ ವಿಂಗಡಣೆಯ ನಂತರ ಅನಾಥರಾಗಿದ್ದಾರೆ. ಅಂತರಂಗದಲ್ಲಿ ದ್ವೇಷಾಸೂಯೆಗಳಿದ್ದರೂ ಸಾಮಾನ್ಯವಾಗಿ `ಸಿಂಡಿಕೇಟ್' ಸದಸ್ಯರು ಒಬ್ಬರು ಮತ್ತೊಬ್ಬರ ಕಾರ್ಯಕ್ಷೇತ್ರಕ್ಕೆ ಅಕ್ರಮವಾಗಿ ಪ್ರವೇಶ ಮಾಡುವುದಿಲ್ಲ.
ಇವರೆಲ್ಲರೂ ತಮ್ಮ ಜನಪ್ರಿಯತೆಯಿಂದಲೇ ಆರಿಸಿಬರುತ್ತಾರೆ ಎಂದು ಹೇಳಲಿಕ್ಕೂ ಆಗದು. ಜನರನ್ನು ಮಾತಿಗೆಳೆದರೆ ಇದು ಸ್ಪಷ್ಟವಾಗುತ್ತದೆ. `ಇವರನ್ನು ಸೋಲಿಸುವ ಅಭ್ಯರ್ಥಿಗಳು ಬೇಕಲ್ಲಾ? ಅಂತಹವರು ಬಂದರೆ ಜನಾನೂ ಬದಲಾವಣೆಗೆ ಸಿದ್ಧರಾಗಬಹುದು. ಉಳಿದವರನ್ನು ಬೆಳೆಯಲಿಕ್ಕೆ ಬಿಡುವುದೇ ಇಲ್ಲವಲ್ಲಾ?' ಎಂದ ಯರಗಟ್ಟಿಯಲ್ಲಿ ಸಿಕ್ಕ ರೈತ ಶಿವನಗೌಡ ಪಾಟೀಲರ ಅಭಿಪ್ರಾಯವೇ ಈ ಕ್ಷೇತ್ರಗಳ ಬಹಳ ಮಂದಿಯಲ್ಲಿದೆ. ಇವರೆಲ್ಲರ ಮಾತು ಕೇಳಿದರೆ ಈ ಅಸಹಾಯಕ ಜನ ತಮ್ಮನ್ನು ರಾಜಕೀಯ ಗುಲಾಮಗಿರಿಯಿಂದ ಪಾರು ಮಾಡಲು `ಕುದುರೆ ಏರಿ ಬರುವ ಸರದಾರ'ನಿಗಾಗಿ ಕಾಯುತ್ತಿರುವಂತೆ ಕಾಣುತ್ತಿದೆ. ಆ `ಸರದಾರ' ಸದ್ಯಕ್ಕೆ ಬರುವ ಹಾಗೆ ಕಾಣುವುದಿಲ್ಲ.