ಪತ್ರಕರ್ತರ
ಶೈಕ್ಷಣಿಕ ಅರ್ಹತೆ ಮತ್ತು ತರಬೇತಿಗೆ ಸಂಬಂಧಿಸಿದ ಹಳೆಯ ವಿವಾದದ ಜೇನುಗೂಡಿಗೆ ಭಾರತೀಯ
ಪತ್ರಿಕಾ ಮಂಡಳಿ (ಪಿಸಿಐ)ಯ ಅಧ್ಯಕ್ಷ ನ್ಯಾಯಮೂರ್ತಿ (ನಿವೃತ್ತ) ಮಾರ್ಕಂಡೇಯ ಕಟ್ಜು
ಕೈಹಾಕಿದ್ದಾರೆ.
`ಪತ್ರಕರ್ತರಾಗಿ ಕಾರ್ಯನಿರ್ವಹಿಸಲು ಅರ್ಹತೆಯನ್ನು ಕಾನೂನುಬದ್ಧವಾಗಿ ನಿಗದಿಪಡಿಸುವ ಅಗತ್ಯ ಇದೆ' ಎಂದು ಪ್ರತಿಪಾದಿಸಿರುವ ನ್ಯಾ.ಕಟ್ಜು ಮಾಧ್ಯಮ ರಂಗ ಪ್ರವೇಶಿಸಲು ಅಗತ್ಯವಾದ ಅರ್ಹತೆಯೇನಿರಬೇಕೆಂದು ಸೂಚಿಸಲು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ.
`ತರಬೇತಿ ಇಲ್ಲದವರ ಪ್ರವೇಶ ಮಾಧ್ಯಮರಂಗದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿದೆ. ಈ ರೀತಿ ಬಂದವರು ಮಾಧ್ಯಮರಂಗದಲ್ಲಿ ಉನ್ನತ ಗುಣಮಟ್ಟವನ್ನು ಕಾಪಾಡುತ್ತಿಲ್ಲ' ಎಂದು ಯಥಾಪ್ರಕಾರ ತನ್ನದೇ `ತೀರ್ಪು' ಕೂಡಾ ಅವರು ನೀಡಿದ್ದಾರೆ. `....ಬೇರೆ ಯಾವುದೋ ವಿಷಯದ ಮೇಲೆ ಪಿಎಚ್ಡಿಯನ್ನೇ ಪಡೆದುಕೊಂಡಿದ್ದರೂ ಪತ್ರಕರ್ತರಾಗಲು ಬಯಸುವವರು ಕಡ್ಡಾಯವಾಗಿ ಪತ್ರಿಕೋದ್ಯಮದ ಶಿಕ್ಷಣವನ್ನು ಪಡೆದಿರಬೇಕು. ಇದಾದ ನಂತರ ವಕೀಲರಿಗೆ ಬಾರ್ ಕೌನ್ಸಿಲ್ ನೀಡುವಂತೆ ಪತ್ರಕರ್ತರಿಗೂ ಪರವಾನಗಿ ಪತ್ರ ನೀಡಬೇಕು. ಪತ್ರಕರ್ತರು ತಪ್ಪುಮಾಡಿದರೆ ಅವರಿಗೆ ನೀಡಲಾಗಿರುವ ಪರವಾನಗಿಯನ್ನು ವಾಪಸು ಪಡೆಯಬೇಕು....' ಎಂದು ನ್ಯಾ.ಕಟ್ಜು ಮೊದಲ ಪತ್ರಿಕಾ ಹೇಳಿಕೆಯ ನಂತರ ನೀಡಿದ ಸ್ಪಷ್ಟೀಕರಣದಲ್ಲಿ ವಿವರಿಸಿದ್ದಾರೆ.
ಪಿಸಿಐ ಅಧ್ಯಕ್ಷರಾಗಿ ನೇಮಕಗೊಂಡ ದಿನದಿಂದ ನ್ಯಾ.ಕಟ್ಜು ಚರ್ಚೆಗೆ ಒಡ್ಡಿರುವ ಹಲವು ವಿಷಯಗಳಲ್ಲಿ ಪತ್ರಕರ್ತರ ಅರ್ಹತೆ ಕೂಡಾ ಒಂದು. ವಕೀಲರು, ವೈದ್ಯರು, ಶಿಕ್ಷಕರಿಗೆಲ್ಲ ನಿರ್ದಿಷ್ಟ ವಿದ್ಯಾರ್ಹತೆ ಮತ್ತು ತರಬೇತಿ ಕಡ್ಡಾಯವಾಗಿರುವಾಗ ಪತ್ರಕರ್ತರಿಗೆ ಯಾಕೆ ಬೇಡ ಎನ್ನುವ ಪ್ರಶ್ನೆಯನ್ನು ನ್ಯಾ.ಕಟ್ಜು ಮಾತ್ರ ಅಲ್ಲ, ಸಾಮಾನ್ಯ ಜನರೂ ಕೇಳುತ್ತಿದ್ದಾರೆ. `
ಪತ್ರಕರ್ತರೆಂದರೆ ರಾಜಕಾರಣಿಗಳು ಇದ್ದ ಹಾಗೆ, ಯಾವುದೇ ಅರ್ಹತೆ ಬೇಡ, ಟಿವಿ ಚಾನೆಲ್ಗಳ ಪ್ರವೇಶದ ನಂತರ ಪತ್ರಕರ್ತರಾಗುವುದು ಇನ್ನೂ ಸುಲಭವಾಗಿದೆ. ಓದು-ಬರಹ ಕೂಡಾ ಬೇಡ, ಬಾಯ್ತುಂಬಾ ಮಾತನಾಡಲು ಬಂದರೆ ಸಾಕು ಪತ್ರಕರ್ತರಾಗಬಹುದು' ಎಂಬ ಸಾಮಾನ್ಯ ಜನರ ವ್ಯಂಗ್ಯದ ಮಾತುಗಳನ್ನು ಸಾರಾಸಗಟಾಗಿ ತಳ್ಳಿಹಾಕುವಂತಹ ಸ್ಥಿತಿಯಲ್ಲಿಯೂ ಯಾರೂ ಇಲ್ಲ.
ಆದರೆ ದೇಶದ ಮಾಧ್ಯಮರಂಗಕ್ಕೆ ಹತ್ತಿರುವ ರೋಗಕ್ಕೆ ಪತ್ರಕರ್ತರ ಶೈಕ್ಷಣಿಕ ಅರ್ಹತೆ ಮತ್ತು ತರಬೇತಿಯ ಕೊರತೆ ಕಾರಣ ಎಂಬ ಸುಲಭ ತೀರ್ಮಾನಕ್ಕೆ ಬರಬಹುದೇ? ಶೈಕ್ಷಣಿಕ ಅರ್ಹತೆಯನ್ನು ಕಡ್ಡಾಯಗೊಳಿಸುವುದರಿಂದ ರೋಗಗ್ರಸ್ತ ಮಾಧ್ಯಮರಂಗ ಕಳೆದುಕೊಂಡಿರುವ ಆರೋಗ್ಯವನ್ನು ಮರಳಿ ಪಡೆಯಬಹುದೇ?
ಸ್ಥಳೀಯವಾದ ಸಣ್ಣಪುಟ್ಟ ಹಗರಣಗಳನ್ನು ಪಕ್ಕಕ್ಕೆ ಇಟ್ಟುಬಿಡುವ, ದೇಶದ ಮಾಧ್ಯಮರಂಗದ ನೈತಿಕ ಬುನಾದಿಯನ್ನೇ ಅಲುಗಾಡಿಸಿದ `ಕಾಸಿಗಾಗಿ ಸುದ್ದಿ' ಮತ್ತು `ರಾಡಿಯಾ ಟೇಪ್'ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೊಳಗಾಗಿರುವ ಖ್ಯಾತ ಪತ್ರಕರ್ತರು, ಉದ್ಯಮಿಯೊಬ್ಬರಿಂದ ಹಣಸುಲಿಗೆ ಮಾಡಲು ಹೊರಟಿದ್ದರೆಂಬ ಆರೋಪಕ್ಕೊಳಗಾಗಿರುವ ಟಿವಿಚಾನೆಲ್ನ ಹಿರಿಯ ಪತ್ರಕರ್ತರು, 2ಜಿ ಹಗರಣದಿಂದ ಹಿಡಿದು ಅಕ್ರಮ ಗಣಿಗಾರಿಕೆ ವರೆಗಿನ ಹಲವಾರು ಹಗರಣಗಳಲ್ಲಿ ಫಲಾನುಭವಿಗಳೆಂಬ ಆರೋಪ ಹೊತ್ತಿರುವ ಪತ್ರಕರ್ತರಲ್ಲಿ ಯಾರು ಅನಕ್ಷರಸ್ಥರು? ಯಾರು ಪತ್ರಿಕೋದ್ಯಮದ ಬಗ್ಗೆ ತರಬೇತಿ ಪಡೆಯದವರು ? ವಿಚಿತ್ರವೆಂದರೆ ಪತ್ರಕರ್ತರಿಗೆ ಅರ್ಹತೆಯನ್ನು ನಿಗದಿಪಡಿಸಲು ಹೊರಟಿರುವ ನ್ಯಾ.ಕಟ್ಜು ಅವರು ಮಾಧ್ಯಮ ಸಂಸ್ಥೆಗಳನ್ನು ಸ್ಥಾಪಿಸುವವರಿಗೆ ಏನು ಅರ್ಹತೆ ಇರಬೇಕೆಂದು ಈ ವರೆಗೆ ಹೇಳಿಲ್ಲ.
`ಕಾಸಿಗಾಗಿ ಸುದ್ದಿ' ಹಗರಣದಲ್ಲಿ ಭಾಗಿಯಾದವರು ಪತ್ರಕರ್ತರಲ್ಲ, ಕೆಲವು ದೊಡ್ಡ ಮಾಧ್ಯಮಸಂಸ್ಥೆಗಳ ಮಾಲೀಕರು. ಪಿಸಿಐ ಕಪಾಟಿನಲ್ಲಿ ದೂಳು ತಿನ್ನುತ್ತಿರುವ ಅವರದ್ದೇ ಸಂಸ್ಥೆಯ ತನಿಖಾ ವರದಿಯನ್ನು ತಿರುವುಹಾಕಿದರೆ ನ್ಯಾ.ಕಟ್ಜು ಅವರಿಗೆ ಸತ್ಯ ಗೊತ್ತಾದೀತು. ಎರಡನೆಯದಾಗಿ `ರಾಡಿಯಾ ಟೇಪ್' ಹಗರಣದಲ್ಲಿ ಆರೋಪ ಕೇಳಿಬಂದ ಪ್ರಖ್ಯಾತ ಪತ್ರಕರ್ತರಾದ ವೀರ್ ಸಾಂಘ್ವಿ, ಬರ್ಖಾದತ್ ಮೊದಲಾದವರಲ್ಲಿ ಯಾವ ಶೈಕ್ಷಣಿಕ ಅರ್ಹತೆ, ತರಬೇತಿಯ ಕಮ್ಮಿ ಇತ್ತು?
ಹುಟ್ಟಿನಿಂದ ಮಾತ್ರ ಪತ್ರಕರ್ತನಾಗಲು ಸಾಧ್ಯ ಎನ್ನುವ ಅಭಿಪ್ರಾಯದಂತೆ ಶಿಕ್ಷಣ ಮತ್ತು ತರಬೇತಿಯಿಂದ ಮಾತ್ರ ಪತ್ರಕರ್ತನಾಗಲು ಸಾಧ್ಯ ಎನ್ನುವ ಅಭಿಪ್ರಾಯವೂ ಬಾಲಿಶತನದ್ದು. ಕನಿಷ್ಠ ಪದವಿಯನ್ನೂ ಪಡೆಯಲಾಗದ ವಿನೋದ್ ಮೆಹ್ತಾ, ಪತ್ರಿಕೋದ್ಯಮವನ್ನೇ ಓದದೆ ಇರುವ ಅರುಣ್ಶೌರಿ ಮೊದಲಾದವರು ಯಶಸ್ವಿ ಸಂಪಾದಕರಾಗಿರುವ ಉದಾಹರಣೆಗಳು ಕಣ್ಣಮುಂದಿವೆ.
ಈಗಿನ ಜನಾಂಗ ಗೌರವದಿಂದ ನೆನಪು ಮಾಡಿಕೊಳ್ಳುವ ಹಳೆಯ ಪೀಳಿಗೆಯ ಬಹುತೇಕ ಹಿರಿಯ ಪತ್ರಕರ್ತರು ಪತ್ರಿಕೋದ್ಯಮವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದವರಲ್ಲ. ಅವಸರದ ಸೃಷ್ಟಿ ಎಂದೇ ವ್ಯಾಖ್ಯಾನಿಸಲಾಗುವ ಪತ್ರಿಕಾ ಬರವಣಿಗೆಗಳು ಸೃಜನಶೀಲವಾದುದಲ್ಲ ಎನ್ನುವವರಿದ್ದಾರೆ. ಪತ್ರಿಕೋದ್ಯಮವನ್ನು ಪ್ರವೇಶಿಸಿರುವ ತಂತ್ರಜ್ಞಾನ ಇಂತಹ ಟೀಕೆ-ಟಿಪ್ಪಣಿಗಳಿಗೆ ಇನ್ನಷ್ಟು ಅವಕಾಶ ನೀಡಿದೆ. ಭಾಷಾಂತರದ ಸಾಫ್ಟ್ವೇರ್ ಕೂಡಾ ಲಭ್ಯ ಇರುವುದರಿಂದ ಕಂಪ್ಯೂಟರ್ ಜ್ಞಾನದ ಬಲದಿಂದಲೇ ಪತ್ರಕರ್ತನಾಗಲು ಸಾಧ್ಯ ಎನ್ನುವ ಅಭಿಪ್ರಾಯವೂ ಹೊಸಪೀಳಿಗೆಯ ಪತ್ರಕರ್ತರಲ್ಲಿದೆ. ಪತ್ರಕರ್ತನ ವೃತ್ತಿಯಲ್ಲಿ ಬರವಣಿಗೆಯ ಕಲೆಯಷ್ಟೇ ತಂತ್ರಜ್ಞಾನ ಕೂಡಾ ಮುಖ್ಯವಾಗುತ್ತಿದೆ.
ಎಲ್ಲರೂ ಮಾಧ್ಯಮ ಮತ್ತು ಸಾಹಿತ್ಯ ಕ್ಷೇತ್ರಗಳೆರಡರಲ್ಲಿಯೂ ಯಶಸ್ಸು ಕಂಡ ಅರ್ನೆಸ್ಟ್ ಹೆಮ್ಮಿಂಗ್ವೆಯಂತಹ ಪತ್ರಕರ್ತರಾಗಲು ಸಾಧ್ಯ ಇಲ್ಲ ಎನ್ನುವುದು ನಿಜವಾದರೂ ಬರವಣಿಗೆಯ ಶಕ್ತಿ ಇಲ್ಲದವರು ಯಶಸ್ವಿ ಪತ್ರಕರ್ತರಾಗಿ ಬೆಳೆಯುವುದು ಕಷ್ಟ, ಅವರು ಹೆಚ್ಚೆಂದರೆ ಕಾರಕೂನ ಪತ್ರಕರ್ತರಾಗಬಹುದು ಅಷ್ಟೇ. ಬರವಣಿಗೆ ಎನ್ನುವುದು ಸ್ವಂತ ಆಸಕ್ತಿಯಿಂದ ಸಿದ್ದಿಸಿಕೊಳ್ಳಬೇಕಾದ ಕಲೆ, ಅದನ್ನು ಶಿಕ್ಷಣ ಇಲ್ಲವೇ ತರಬೇತಿಯಿಂದ ಒಲಿಸಿಕೊಳ್ಳಲಾಗದು ಎನ್ನುವುದನ್ನು ನ್ಯಾ.ಕಟ್ಜು ಅವರಿಗೆ ತಿಳಿಸಿ ಹೇಳುವವರು ಯಾರು?
ಸಮಕಾಲೀನ ವಿದ್ಯಮಾನಗಳಿಗೆ ಆಗಾಗ ಪ್ರತಿಕ್ರಿಯಿಸುವ ಮೂಲಕ ಪುರೋಗಾಮಿ ಚಿಂತಕನೆಂಬಂತೆ ಬಿಂಬಿಸಿಕೊಳ್ಳುತ್ತಿರುವ ನ್ಯಾ.ಕಟ್ಜು ಅವರು ಸಾಂಪ್ರದಾಯಿಕವಾದ ಶಿಕ್ಷಣದ ಬಗ್ಗೆ ಇಷ್ಟೊಂದು ಭರವಸೆಯನ್ನು ಇಟ್ಟುಕೊಂಡಿರುವುದೇ ಅಚ್ಚರಿ ಹುಟ್ಟಿಸುತ್ತದೆ. ಶಿಕ್ಷಿತರು, ಬುದ್ದಿವಂತರು ಮಾಡಿದಷ್ಟು ಅನ್ಯಾಯ, ಅಕ್ರಮಗಳನ್ನು ಅನಕ್ಷರಸ್ಥರು ಮತ್ತು ದಡ್ಡರು ಮಾಡಿಲ್ಲ ಎನ್ನುವುದು ತೀರಾ ಸರಳೀಕೃತ ಹೇಳಿಕೆ ಎಂದು ಅನಿಸಿದರೂ ಸಾಬೀತುಪಡಿಸಲು ಹೊರಟರೆ ಪುರಾವೆಗಳು ಊರೆಲ್ಲ ಸಿಗುತ್ತವೆ. ವ್ಯತ್ಯಾಸವೆಂದರೆ ಅನಕ್ಷರಸ್ಥರು, ದಡ್ಡರು ತಮಗೆ ತಾವೇ ಅನ್ಯಾಯ ಮಾಡಿಕೊಂಡು ಕಷ್ಟಕಾರ್ಪಣ್ಯಗಳಲ್ಲಿ ನರಳಾಡಿದರೆ, ಶಿಕ್ಷಿತರು, ಬುದ್ದಿವಂತರು ಊರಿಗೆಲ್ಲ ಅನ್ಯಾಯ ಮಾಡಿ ತಾವು ಸುಖವಾಗಿರಲು ನೋಡುತ್ತಾರೆ.
ಸ್ವಾತಂತ್ರ್ಯ ಪಡೆದ ಪ್ರಾರಂಭದ ದಿನಗಳಲ್ಲಿ ಮಾತ್ರವಲ್ಲ ಈಗಲೂ ಶಿಕ್ಷಣವೇ `ಸರ್ವರೋಗಕ್ಕೆ ರಾಮಬಾಣ' ಎಂಬ ಅಭಿಪ್ರಾಯ ಇದೆ. ಬಡತನ, ಅನಾರೋಗ್ಯ, ಮೂಢನಂಬಿಕೆ, ಜಾತೀಯತೆ, ಕೋಮುವಾದ, ಅಪರಾಧ ಹೀಗೆ ಎಲ್ಲ ಬಗೆಯ ಸಾಮಾಜಿಕ ಅನಿಷ್ಟಗಳಿಗೆ ಶಿಕ್ಷಣವೊಂದೇ ಪರಿಹಾರ ಎಂದು ರಾಜಕೀಯ ನಾಯಕರು ಮಾತ್ರವಲ್ಲ, ಆರೋಗ್ಯಪೂರ್ಣ ಸಮಾಜಕ್ಕಾಗಿ ಹಂಬಲಿಸುವ ಪ್ರಜ್ಞಾವಂತ ಹಿರಿಯರು ಕೂಡಾ ಹೇಳುತ್ತಲೇ ಬಂದಿದ್ದಾರೆ. ಆದರೆ ದೇಶ ದಾಟಿ ಬಂದ 65 ವರ್ಷಗಳ ಹಾದಿಗೆ ಕಣ್ಣಾಡಿಸಿದರೆ ಕಾಣುವ ಚಿತ್ರವೇ ಬೇರೆ.
ಬಡತನದ ಪ್ರಮಾಣ ಅಲ್ಪಪ್ರಮಾಣದಲ್ಲಿ ಕಡಿಮೆಯಾಗಿರಬಹುದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಸ್ಪಲ್ಪಮಟ್ಟಿಗೆ ಸುಧಾರಣೆಯಾಗಿರಲೂ ಬಹುದು. ಆದರೆ ಉಳಿದ ಅನಿಷ್ಠಗಳು ಉಲ್ಭಣಗೊಳ್ಳುತ್ತಿರುವುದು ಮಾತ್ರವಲ್ಲ ಹಳೆಯದರ ಜತೆಗೆ ಹೊಸ ಪಿಡುಗುಗಳು ಹುಟ್ಟಿಕೊಂಡಿವೆ. ಕುಕ್ಕೆಸುಬ್ರಹ್ಮಣ್ಯದಲ್ಲಿ ಎಂಜಲೆಲೆಯ ಮೇಲೆ ಉರುಳಾಡುತ್ತಿರುವವರು, ಟಿವಿಚಾನೆಲ್ಗಳಲ್ಲಿ ಜ್ಯೋತಿಷಿ ಒದರುತ್ತಿರುವ ಸುಳ್ಳು ಭವಿಷ್ಯಗಳನ್ನು ಕೇಳಲು ಮತ್ತು ಅದರಂತೆ ನಡೆದುಕೊಳ್ಳಲು ಮೈಯೆಲ್ಲ ಕಣ್ಣು-ಕಿವಿಯಾಗಿ ಟಿವಿ ಮುಂದೆ ಕೂತಿರುವವರಲ್ಲಿ ಹೆಚ್ಚಿನವರು ಶಿಕ್ಷಿತರು. ಇವರಲ್ಲಿ ವೈದ್ಯರು, ಶಿಕ್ಷಕರು,ವಿಜ್ಞಾನಿಗಳು ಎಲ್ಲರೂ ಸೇರಿದ್ದಾರೆ.
ಕಳೆದೆರಡು ದಶಕಗಳಲ್ಲಿ ದೇಶದಲ್ಲಿ ನಡೆದ ಭ್ರಷ್ಟಾಚಾರದ ಹಗರಣಗಳಲ್ಲಿ ಭಾಗಿಯಾದವರ ಶೈಕ್ಷಣಿಕ ಅರ್ಹತೆಯನ್ನು ಯಾರಾದರೂ ಹುಡುಕಿ ತೆಗೆದು ಪಟ್ಟಿಮಾಡಿದರೆ ಅಪರಾಧ ನಡೆಸಲು ಬೇಕಾಗಿರುವ ಒಂದು ಅರ್ಹತೆ ಶಿಕ್ಷಣ ಇರಬಹುದೇ ಎಂಬ ಅನುಮಾನ ಹುಟ್ಟಲು ಸಾಧ್ಯ. ಪತ್ರಕರ್ತರನ್ನು ಈ ಎಲ್ಲ ಬೆಳವಣಿಗೆಗಳಿಂದ ದೂರ ಇಟ್ಟು ನೋಡಲಾಗುವುದಿಲ್ಲ.
ನ್ಯಾ.ಕಟ್ಜು ಅವರು ನಂಬಿರುವಂತೆ ಇಂದಿನ ಮಾಧ್ಯಮರಂಗವನ್ನು ಕಾಡುತ್ತಿರುವ ಬಹುಮುಖ್ಯ ಸಮಸ್ಯೆ ಕೇವಲ ಪತ್ರಕರ್ತರ ಅರ್ಹತೆ ಇಲ್ಲವೇ ತರಬೇತಿಯ ಕೊರತೆ ಖಂಡಿತ ಅಲ್ಲ. ರಾಷ್ಟ್ರಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಇಂದಿನ ಬಹುಪಾಲು ಪತ್ರಿಕೆಗಳು ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿಯೇ ಪತ್ರಕರ್ತರನ್ನು ನೇಮಿಸಿಕೊಳ್ಳುತ್ತವೆ. ವಶೀಲಿ ಮಾಡಿ ಸೇರಿಕೊಳ್ಳುವವರಿಗೂ ಕನಿಷ್ಠ ವಿದ್ಯಾರ್ಹತೆ ಇರಲೇ ಬೇಕಾಗುತ್ತದೆ.
ತೀರಾ ಸ್ಥಳೀಯವಾದ ಪತ್ರಿಕೆ-ಚಾನೆಲ್ಗಳನ್ನು ಹೊರತುಪಡಿಸಿ ಮಾಧ್ಯಮರಂಗಕ್ಕೆ ಪ್ರವೇಶಿಸುವವರೆಲ್ಲರ ಕೈಯಲ್ಲಿ ಪದವಿ ಇಲ್ಲವೆ ಸ್ನಾತಕೋತ್ತರ ಪದವಿ ಇರುತ್ತದೆ. ಸೇರ್ಪಡೆಯಾದ ನಂತರ ತರಬೇತಿಯನ್ನು ಪಡೆಯುತ್ತಾರೆ, ಇಂದಿನ ಅಗತ್ಯವಾದ ಕಂಪ್ಯೂಟರ್ ಜ್ಞಾನವೂ ಅವರಲ್ಲಿರುತ್ತದೆ. ಕಾಗುಣಿತ ತಪ್ಪಿಲ್ಲದೆ ಬರೆಯುವುದನ್ನೂ ಕಲಿತಿರುತ್ತಾರೆ. ನ್ಯಾ.ಕಟ್ಜು ಅವರು ನಿರೀಕ್ಷಿಸುತ್ತಿರುವ ಪತ್ರಿಕೋದ್ಯಮದ ಗುಣಮಟ್ಟವನ್ನು ಎತ್ತಿಹಿಡಿಯುವ ಪತ್ರಕರ್ತನಾಗಲು ಇಷ್ಟು ಅರ್ಹತೆ ಮತ್ತು ತರಬೇತಿ ಸಾಕೆ? ಒಬ್ಬ ಒಳ್ಳೆಯ ಪತ್ರಕರ್ತನನ್ನು ರೂಪಿಸುವುದು ಕೇವಲ ಶೈಕ್ಷಣಿಕ ಅರ್ಹತೆ ಮತ್ತು ತರಬೇತಿ ಅಲ್ಲ. ಇದರ ಜತೆಗೆ ಎಲ್ಲ ಕ್ಷೇತ್ರಗಳ ವೃತ್ತಿಪರರಂತೆ ಪತ್ರಕರ್ತರಲ್ಲಿ ಪ್ರಾಮಾಣಿಕತೆ, ವೃತ್ತಿನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿ ಇರಬೇಕಾಗುತ್ತದೆ. ವೈಯಕ್ತಿಕವಾಗಿ ಅಳವಡಿಸಿಕೊಳ್ಳಬೇಕಾದ ಈ ಗುಣಗಳನ್ನು ಶಿಕ್ಷಣ ಇಲ್ಲವೇ ತರಬೇತಿಯಿಂದ ನೆಟ್ಟು ಬೆಳೆಸಲು ಸಾಧ್ಯವೇ?.
ನ್ಯಾ.ಕಟ್ಜು ಪತ್ರಕರ್ತರು ಹೊಂದಿರಬೇಕಾದ ಅರ್ಹತೆ ಬಗ್ಗೆ ಪ್ರತಿಪಾದನೆ ಮಾಡುವಾಗಲೂ ತಪ್ಪು ಪ್ರಶ್ನೆಯನ್ನು ಎತ್ತಿಕೊಂಡಿದ್ದಾರೆ. ಇದು ಅರ್ಥವಾಗಬೇಕಾದರೆ ಇಂದಿನ ವಿಶ್ವವಿದ್ಯಾಲಯಗಳಿಂದ ಪತ್ರಿಕೋದ್ಯಮ ಶಿಕ್ಷಣ ಪಡೆದು ಬಂದವರನ್ನು ಕರೆದು ಅವರು ಮಾತನಾಡಿಸಬೇಕು. ಈ ಬಡಪಾಯಿ ವಿದ್ಯಾರ್ಥಿಗಳನ್ನು ದೂರಿಯೂ ಏನೂ ಪ್ರಯೋಜನ ಇಲ್ಲ. ಯಾವುದೋ ಓಬಿರಾಯನ ಕಾಲದ ಪಠ್ಯಕ್ರಮವನ್ನು ಓದಿ ಪ್ರಾಧ್ಯಾಪಕರಾಗಿ ನೇಮಕಗೊಂಡವರು ಅದೇ ಹಳೆಯ ಪಠ್ಯವನ್ನು ಹಿಡಿದುಕೊಂಡು ಮಾಡುವ ಪಾಠವನ್ನು ಕೇಳುವ ವಿದ್ಯಾರ್ಥಿಗಳಿಂದ ವೃತ್ತಿಗೆ ಅವಶ್ಯಕವಾದ ಯಾವ ಅರ್ಹತೆಯನ್ನು ನಿರೀಕ್ಷಿಸಲು ಸಾಧ್ಯ?
ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಲ್ಲಿ ಎಷ್ಟು ಮಂದಿಗೆ ಮಾಧ್ಯಮರಂಗದ ಪ್ರತ್ಯಕ್ಷ ಅನುಭವ ಇದೆ? ಅವರಲ್ಲಿ ಎಷ್ಟು ಮಂದಿ ಪತ್ರಿಕಾ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ? ಪ್ರಾಯೋಗಿಕವಾದ ಅನುಭವವೇ ಇಲ್ಲದ ಇವರು ಎಂತಹ ವೃತ್ತಿಪರ ಪತ್ರಕರ್ತರನ್ನು ಸೃಷ್ಟಿಮಾಡಬಲ್ಲರು?
ಇಂದು ಬಹಳಷ್ಟು ವಿದ್ಯಾರ್ಥಿಗಳು ಪತ್ರಕರ್ತರಾಗಬಯಸುತ್ತಿರುವುದು ಆಯ್ಕೆಯಿಂದಲ್ಲ. ಬೇರೆ ಯಾವ ವಿಷಯದಲ್ಲಿಯೂ ಸೀಟು ಸಿಗಲಿಲ್ಲವೆನ್ನುವ ಕಾರಣಕ್ಕೆ ಪತ್ರಿಕೋದ್ಯಮವನ್ನು ಆರಿಸಿಕೊಂಡವರೇ ಹೆಚ್ಚು. ಪತ್ರಿಕೋದ್ಯಮ ಶಿಕ್ಷಣ ಅವರಲ್ಲಿ ವೃತ್ತಿ ಬಗ್ಗೆ ಆಸಕ್ತಿಯನ್ನು ಹುಟ್ಟಿಸದೆ ಇರುವುದರಿಂದ ಅವರ ಪಾಲಿಗೆ ಪತ್ರಕರ್ತನ ವೃತ್ತಿ ಎಂದರೆ ಅದು ಹೊಟ್ಟೆಪಾಡಿಗಾಗಿ ಇರುವ ನೂರೆಂಟು ವೃತ್ತಿಗಳಲ್ಲೊಂದು ಅಷ್ಟೆ. ಇದರಿಂದಾಗಿ ಆ ವೃತ್ತಿಗಳಲ್ಲಿ ಕಾಣಿಸಿಕೊಂಡಿರುವ ಪಿಡುಗುಗಳೆಲ್ಲ ಮಾಧ್ಯಮರಂಗಕ್ಕೂ ತಗಲಿವೆ.
ಪತ್ರಕರ್ತರಾಗಲು ಕಲಿತ ಶಿಕ್ಷಣ ನೆರವಾಗಿದೆಯೇ ಎಂಬ ಪ್ರಶ್ನೆಯನ್ನು ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗಗಳ ಉತ್ಪನ್ನಗಳಾದ ಪತ್ರಕರ್ತರನ್ನು ಕೇಳಿದರೆ ಬಹುಪಾಲು ಮಂದಿ ಉತ್ತರಿಸದೆ ತಲೆತಗ್ಗಿಸುತ್ತಾರೆ. ಶಿಕ್ಷಣವನ್ನು ಪತ್ರಕರ್ತರ ಅರ್ಹತೆಯ ಮಾನದಂಡವನ್ನಾಗಿ ಮಾಡಲು ಹೊರಟವರು ಮೊದಲು ಪತ್ರಿಕೋದ್ಯಮ ಶಿಕ್ಷಣ ವ್ಯವಸ್ಥೆಯನ್ನು ಸುಧಾರಣೆಗೊಳಪಡಿಸಬೇಕಾಗುತ್ತದೆ. ನ್ಯಾಯಮೂರ್ತಿ ಕಟ್ಜು ಅವರು ಮಾಧ್ಯಮರಂಗಕ್ಕೆ ತಗಲಿರುವ ರೋಗದ ಕಾರಣವನ್ನೇ ಹುಡುಕಲು ವಿಫಲರಾಗಿದ್ದಾರೆ. ರೋಗನಿದಾನವೇ ತಪ್ಪಾಗಿಬಿಟ್ಟರೆ ಯಾವ ಔಷಧಿಯಿಂದಲೂ ಕಾಯಿಲೆಯನ್ನು ಗುಣಪಡಿಸಲು ಸಾಧ್ಯ ಇಲ್ಲ.