Saturday, June 23, 2012

ನರೇಂದ್ರಮೋದಿ ಅವರಿಂದ ಬಿಜೆಪಿ ಅಪಹರಣ June 11, 2012

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಬ್ಬ ಆದರ್ಶ ಸ್ವಯಂಸೇವಕನಿಂದ ಬಯಸುವ ಎಲ್ಲ ಗುಣಗಳು ಸಂಜಯ್ ಜೋಷಿ ಅವರಲ್ಲಿವೆ.  ಆರ್‌ಎಸ್‌ಎಸ್ ಸಿದ್ಧಾಂತವನ್ನು ಮೂರುಹೊತ್ತು ಉಸಿರಾಡುತ್ತಿರುವ ಜೋಷಿ ಒಬ್ಬ ಸರಳ, ಪ್ರಾಮಾಣಿಕ, ಸಮರ್ಥ, ಸಜ್ಜನ ವ್ಯಕ್ತಿ. ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ, ಪ್ರಚಾರದ ಹಪಾಹಪಿ ಇಲ್ಲದ,  ಗಂಟೆ-ದಿನಗಳನ್ನು ಲೆಕ್ಕಿಸದೆ ಕೆಲಸ ಮಾಡಬಲ್ಲ ಶ್ರಮಜೀವಿ. 

ಆರ್‌ಎಸ್‌ಎಸ್ ಸಿದ್ಧಾಂತವನ್ನು ಒಪ್ಪದವರು ಸೈದ್ಧಾಂತಿಕವಾಗಿ ಅವರೊಡನೆ ನೂರೆಂಟು ತಕರಾರುಗಳನ್ನು ತೆಗೆಯಬಹುದು. ಆದರೆ ಆರ್‌ಎಸ್‌ಎಸ್ ನುಡಿದಂತೆಯೇ ನಡೆಯುವಂತಿದ್ದರೆ ಅದಕ್ಕೆ ಜೋಷಿ ಅವರಲ್ಲಿ ಎಳ್ಳುಕಾಳಿನಷ್ಟು ದೋಷ ಕಾಣಿಸಬಾರದಿತ್ತು.

ಆಗಿರುವುದೇನು?  ಬಿಜೆಪಿ ತೀರಾ ಅವಮಾನಕಾರಿಯಾಗಿ ಜೋಷಿ ಅವರನ್ನು ಹೊರಹಾಕಿದಾಗ ಸ್ವಯಂಸೇವಕರಿಗೆ ಆದರ್ಶದ ಪಾಠ ಹೇಳುತ್ತಿರುವ ಆರ್‌ಎಸ್‌ಎಸ್ ತನ್ನೊಬ್ಬ ಆದರ್ಶಸ್ವರೂಪಿ ಪ್ರಚಾರಕನಿಗೆ ಆಗುತ್ತಿರುವ ಅನ್ಯಾಯವನ್ನು ನೋಡಿಯೂ ನೋಡದವರಂತೆ ಕಣ್ಣುಮುಚ್ಚಿಕೊಂಡು ಅವರ ವಿರೋಧಿಗಳ ಜತೆ ಶಾಮೀಲಾಗಿದೆ.

2005ರ ಡಿಸೆಂಬರ್‌ನ ಕೊನೆ ವಾರದಲ್ಲಿ  ಭಾರತೀಯ ಜನತಾ ಪಕ್ಷಕ್ಕೆ ಇಪ್ಪತ್ತೈದು ತುಂಬಿದಾಗ ಐದು ದಿನಗಳ ರಜತ ಜಯಂತಿಯನ್ನು ಮುಂಬೈನಲ್ಲಿ ಆಚರಿಸಲಾಗಿತ್ತು. ಅದನ್ನು ವರದಿಮಾಡಲೆಂದು ಹೋಗಿದ್ದ ನಾನು  ಬೆಳಿಗ್ಗೆ ಪತ್ರಕರ್ತರ ಗ್ಯಾಲರಿಯಲ್ಲಿ ಕುಳಿತಿದ್ದಾಗ ಯುವಕನೊಬ್ಬ ಬಂದು ಮಡಚಿದ್ದ ಬಿಳಿಹಾಳೆಯನ್ನು ಕೈಗಿತ್ತು ಮಾಯವಾಗಿ ಹೋದ. 

ಪಕ್ಷದ ಹೇಳಿಕೆ ಇರಬಹುದೆಂದು ಬಿಡಿಸಿ ನೋಡಿದರೆ ಅದು `ಸಂಜಯ್ ಜೋಷಿ ಅವರು ನನ್ನ ಜತೆ ಲೈಂಗಿಕ ಸಂಬಂಧ ಹೊಂದಿದ್ದರು....` ಎಂದು ಆರೋಪಿಸಿ ಮಹಿಳೆಯೊಬ್ಬರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಲ್ಲಿಸಿದ್ದ ದೂರಿನ ಪ್ರತಿ. 

ಆಶ್ಚರ್ಯದಿಂದ ಅಕ್ಕಪಕ್ಕ ನೋಡಿದರೆ ಅಂತಹ ಪ್ರತಿಗಳು ಇನ್ನೂ ಕೆಲವರ ಕೈಯಲ್ಲಿದ್ದವು. ಕೆಲವು ಪತ್ರಕರ್ತರಂತೂ ಮೊದಲೇ ಗೊತ್ತಿದ್ದವರಂತೆ `ಸಿಡಿ ಹೈ, ದೇಖ್ ನ ಹೈ ಕ್ಯಾ?` ಎಂದು ಕಣ್ಣುಮಿಟುಕಿಸತೊಡಗಿದ್ದರು. ಅದಾದ ಸ್ವಲ್ಪ ಹೊತ್ತಿನಲ್ಲಿಯೇ ಸಂಜಯ್ ಜೋಷಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುದ್ದಿ ಹೊರಬಿತ್ತು. ಪಕ್ಷದ ಬೆಳ್ಳಿಹಬ್ಬದ ಸಂಭ್ರಮ ಸಿ.ಡಿ ಹಗರಣದಲ್ಲಿ ಕರಗಿ ಹೋಗಿತ್ತು. 

ಇದು ಯಾರ ಕೈವಾಡ ಎನ್ನುವ ಚರ್ಚೆ ಅಲ್ಲಿ ನಡೆದಿದ್ದಾಗ ಕೇಳಿಬಂದ ಮೊದಲ ಹೆಸರು ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರದ್ದು. ನಂತರದ ದಿನಗಳಲ್ಲಿ ಪೊಲೀಸರು ತನಿಖೆ ನಡೆಸಿ ಅದು ನಕಲಿ ಸಿ.ಡಿ. ಎಂದು ತೀರ್ಮಾನಕ್ಕೆ ಬಂದರು. ಆ ಸಿ.ಡಿ.ಯನ್ನು ಗುಜರಾತ್ ಪೊಲೀಸರು ವಿತರಿಸಿದ್ದರು ಎನ್ನುವುದು ಕೂಡಾ ಬಯಲಾಯಿತು. 

ಆದರೆ ಅದರ ಹಿಂದಿರುವ ವ್ಯಕ್ತಿ ಯಾರು ಎನ್ನುವ ಪ್ರಶ್ನೆಗೆ ಈಗಲೂ ಉತ್ತರ ಸಿಕ್ಕಿಲ್ಲ. (ಗುಜರಾತ್‌ನಲ್ಲಿ ನಡೆದ ನರಮೇಧ ಮತ್ತು ಹರೇನ್ ಪಾಂಡ್ಯ ಹತ್ಯೆಯ ರೂವಾರಿ ಯಾರೆಂಬ ಪ್ರಶ್ನೆಯ ಹಾಗೆ). 

ಅವಮಾನದಿಂದ ಕುಗ್ಗಿಹೋಗಿ ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದ ಸಂಜಯ್ ಜೋಷಿ ತನ್ನ ಮೇಲಿನ ಆರೋಪದಿಂದ ಮುಕ್ತರಾದ ನಂತರ ಮತ್ತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು. ಆಗ ಮತ್ತೆ  ಬುಸುಗುಟ್ಟತೊಡಗಿದ್ದವರು ನರೇಂದ್ರ ಮೋದಿ. 

ಈ ಬಾರಿ ಪಕ್ಷವನ್ನೇ ತನ್ನ ಬೇಕು-ಬೇಡಗಳಿಗೆ ಒಪ್ಪುವ ಹಾಗೆ ಕುಣಿಸುವಷ್ಟು ಬೆಳೆದಿರುವ ಮೋದಿ ನೇರ ಕಾರ್ಯಾಚರಣೆಯಲ್ಲಿ ಜೋಷಿ ಅವರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಮೋದಿ ಮತ್ತು ಜೋಷಿ ಇಬ್ಬರೂ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಆರ್‌ಎಸ್‌ಎಸ್ ಪ್ರವೇಶಿಸಿದವರು. 

ಗುಜರಾತ್‌ನಲ್ಲಿ ಇಂದು ಬಿಜೆಪಿ ಭದ್ರವಾಗಿ ಬೇರೂರಿದ್ದರೆ ಅದಕ್ಕೆ ಮೋದಿ ಅವರಂತೆ ಜೋಷಿಯವರೂ ಕಾರಣ. 2001ರಲ್ಲಿ ಕೇಶುಭಾಯಿ ಪಟೇಲ್ ಪದಚ್ಯುತಿಯಾದ ನಂತರ  ಗುಜರಾತ್ ಮುಖ್ಯಮಂತ್ರಿಯಾದ ನರೇಂದ್ರ ಮೋದಿ ಮೊದಲು ಮಾಡಿದ ಕೆಲಸ ಸಂಜಯ್ ಜೋಷಿ ಅವರನ್ನು ರಾಜ್ಯದಿಂದ ಹೊರಹಾಕಿದ್ದು. ಆಗಲೂ ಮೋದಿ ಒತ್ತಡಕ್ಕೆ ಮಣಿದ ಬಿಜೆಪಿ ಜೋಷಿ ಅವರನ್ನು ಗುಜರಾತ್‌ನಿಂದ ಕರೆಸಿಕೊಂಡು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿತ್ತು.

ಬಿಜೆಪಿಯ ಈಗಿನ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಸಂಜಯ್ ಜೋಷಿ ಇಬ್ಬರದ್ದೂ ಒಂದೇ ಊರು. ನಾಗಪುರದಲ್ಲಿ ಇಬ್ಬರೂ ಜತೆಯಲ್ಲಿ ಆರ್‌ಎಸ್‌ಎಸ್ ಶಾಖೆಗೆ ಹೋಗುವ ಮೂಲಕ ಪರಿವಾರ ಸೇರಿದವರು. ಇಬ್ಬರು ಬೆಳೆಯುತ್ತಾ ಹೋದಂತೆ ಹಿಡಿದ ದಾರಿ ಮಾತ್ರ ಎಂದೂ ಪರಸ್ಪರ ಸಂಧಿಸಲು ಸಾಧ್ಯ ಇಲ್ಲದ್ದು.

ಮೊನ್ನೆಮೊನ್ನೆವರೆಗೆ ಜೋಷಿ ಅವರ ಬೆಂಬಲಕ್ಕೆ ನಿಂತಿದ್ದ ಪಕ್ಕಾ ವ್ಯಾಪಾರಿಯಂತೆ ಕಾಣುವ ಗಡ್ಕರಿ  ಇದ್ದಕ್ಕಿದ್ದಂತೆ ಬಾಲ್ಯದ ಗೆಳೆಯನ ಕೈಬಿಟ್ಟು ಮೋದಿ ಜತೆ ಸೇರಿಕೊಂಡಿದ್ದಾರೆ. ಆರ್‌ಎಸ್‌ಎಸ್‌ಭೀಷ್ಮಾಚಾರ್ಯರೆಲ್ಲ  `ಹಿಂದೂ ಹೃದಯ ಸಾಮ್ರಾಟ`ನ ಆದೇಶಕ್ಕೆ ತಲೆಯಾಡಿಸುತ್ತಾಕೂತಿದ್ದಾರೆ.

ಮುಂಬೈನಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕಾರಿಣಿ ನಂತರದ ಬೆಳವಣಿಗೆಗಳನ್ನು ನೋಡಿದರೆ ಪಕ್ಷದ ಏಕಮೇವಾದ್ವಿತಿಯ ನಾಯಕನಾಗಿ ನರೇಂದ್ರಮೋದಿ  ಉದಯಿಸಿರುವ ಹಾಗೆ ಕಾಣುತ್ತಿದೆ. `ಮೋದಿ ಅವರೇ ಮುಂದಿನ ಪ್ರಧಾನಿ` ಎಂದು ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗುವ ಮೊದಲೇ ಅವರ ಅಭಿಮಾನಿ ಬಳಗ ಜಯಘೋಷ ಮಾಡುತ್ತಿದೆ. 

ವಿಚಿತ್ರವೆಂದರೆ ಈ ಸಂಭ್ರಮ-ಸಡಗರ ಮೋದಿ ಅವರ ಪಕ್ಷದ ಇಲ್ಲವೇ, ಆರ್‌ಎಸ್‌ಎಸ್, ವಿಎಚ್‌ಪಿ, ಎಬಿವಿಪಿ, ಎಚ್‌ಎಂಎಸ್‌ನ ನಾಯಕರ ಮುಖಗಳಲ್ಲಿ ಕಾಣುತ್ತಿಲ್ಲ. ಮೋದಿ ಅವರ ಬಹುಕಾಲದ ವಿರೋಧಿಗಳಾಗಿರುವ ಕೇಶುಭಾಯಿ ಪಟೇಲ್, ಸುರೇಶ್‌ಮೆಹ್ತಾ, ರಾಣಾ ಮೊದಲಾದವರು ರಾಜ್ಯದಲ್ಲಿ ಮತ್ತೆ ಬಂಡೆದ್ದಿದ್ದಾರೆ. 

ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ, ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಮೊದಲಾದವರು ಬಹಿರಂಗವಾಗಿ ಮೋದಿ ಅವರ ನಡವಳಿಕೆಯನ್ನು ವಿರೋಧಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರು ಇತ್ತೀಚೆಗೆ ತಮ್ಮ ಬ್ಲಾಗ್‌ನಲ್ಲಿ ನಿತಿನ್ ಗಡ್ಕರಿ ಕಾರ್ಯಶೈಲಿಯನ್ನು ಟೀಕಿಸಿದ್ದರೂ ಅವರ ಬಾಣದ ಗುರಿ ನರೇಂದ್ರಮೋದಿಯವರೇ ಆಗಿದ್ದಾರೆ.

ಸಂಘ ಪರಿವಾರ ಎನ್ನುವುದು ಈಗ ಒಡೆದ ಮನೆ. ಬಿಜೆಪಿಯ ಮುಖವಾಣಿ ಪತ್ರಿಕೆಯಾದ `ಕಮಲ ಸಂದೇಶ`ದಲ್ಲಿ ಮೋದಿ ವಿರುದ್ಧ ಲೇಖನ ಪ್ರಕಟವಾಗಿದ್ದರೆ, ಆರ್‌ಎಸ್‌ಎಸ್ ಮುಖವಾಣಿ `ಆರ್ಗನೈಸರ್` ಪತ್ರಿಕೆಯಲ್ಲಿ ಮೋದಿ ಅವರನ್ನು ಅಟಲಬಿಹಾರಿ ವಾಜಪೇಯಿ ಅವರಿಗೆ ಹೋಲಿಸಿ ಹೊಗಳಿ ಬರೆಯಲಾಗಿದೆ.

ನಿಯಂತ್ರಣ ಮೀರಿ ಬೆಳೆಯುತ್ತಿರುವ ಮೋದಿ ಬಗ್ಗೆ ಆರ್‌ಎಸ್‌ಎಸ್ ನಾಯಕರಲ್ಲಿಯೂ ಅಸಮಾಧಾನ ಇದೆ. ಅನುಯಾಯಿಗಳ ಒತ್ತಡದಿಂದಾಗಿ ಅವರೂ ತುಟಿ ಬಿಚ್ಚಲಾರರು. ಬಿಜೆಪಿ ಮೂಲಕ ಅಧಿಕಾರದ ರುಚಿ ಕಂಡಿರುವ ಆರ್‌ಎಸ್‌ಎಸ್ ನಾಯಕರು ಇತ್ತೀಚಿನ ವರ್ಷಗಳಲ್ಲಿ ಬದಲಾಗಿ ಹೋಗಿದ್ದಾರೆ. 

ಆದರೆ ಸಂಘ ಸಾರುತ್ತಿದ್ದ ಹಿಂದುತ್ವದ ಮೂಲಸಿದ್ಧಾಂತಕ್ಕೆ ಈಗಲೂ ಬದ್ಧವಾಗಿರುವ ಅನುಯಾಯಿಗಳ ಒಂದು ವರ್ಗ ಮೋದಿ ಅವರಲ್ಲಿಯೇ ಭವಿಷ್ಯದ ನಾಯಕನನ್ನು ಕಾಣತೊಡಗಿದೆ. 

ಇದರಿಂದಾಗಿ ತಮ್ಮ ಮೇಲೆ ಸವಾರಿ ಮಾಡಲು ಹೊರಟಿರುವ ನರೇಂದ್ರ ಮೋದಿ ಅವರ ಬಗ್ಗೆ ಎಷ್ಟೇ ಅಸಮಾಧಾನ ಇದ್ದರೂ ಆರ್‌ಎಸ್‌ಎಸ್ ಅನಿವಾರ್ಯವಾಗಿ ಮೋದಿ ಅವರನ್ನು ಬೆಂಬಲಿಸುತ್ತಿರುವಂತೆ ಕಾಣುತ್ತಿದೆ.

ನರೇಂದ್ರ ಮೋದಿಯವರು ಹೊಸದೇನನ್ನೂ ಮಾಡಲು ಹೊರಟಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಗುಜರಾತ್‌ನಲ್ಲಿಯೇ ಮಾಡಿದ್ದನ್ನು ಈಗ ರಾಷ್ಟ್ರಮಟ್ಟದಲ್ಲಿ ಮಾಡಲು ಹೊರಟಿದ್ದಾರೆ.

ಮುಖ್ಯಮಂತ್ರಿಯಾದ ನಂತರ ನರೇಂದ್ರ ಮೋದಿ ಗುಜರಾತ್‌ನಲ್ಲಿ ಮೊದಲು ಮಾಡಿದ್ದು ವಿಶ್ವಹಿಂದೂ ಪರಿಷತ್, ಎಚ್‌ಎಂಎಸ್, ಎಬಿವಿಪಿ ಮೊದಲಾದ ಸಂಘ ಪರಿವಾರದ ಅಂಗಸಂಸ್ಥೆಗಳ ನಾಯಕರ ಬಾಯಿಮುಚ್ಚಿಸಿದ್ದು. ವಿಎಚ್‌ಪಿಯ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಈಗಲೂ ತನ್ನ ಹುಟ್ಟೂರಿನಲ್ಲಿಯೇ ತುಟಿಬಿಚ್ಚುವಂತಿಲ್ಲ.

ಎಲ್.ಕೆ.ಅಡ್ವಾಣಿ ಅವರು ಈಗ ಗುಡುಗುತ್ತಿದ್ದರೂ ಪಕ್ಷದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರು ಮೋದಿ ಹಿತರಕ್ಷಕನಾಗಿಯೇ ಕೆಲಸ ಮಾಡಿದ್ದು. `ರಾಜಧರ್ಮ` ಪಾಲಿಸುವಂತೆ ವಾಜಪೇಯಿ ಕರೆಕೊಟ್ಟ ನಂತರ ಇನ್ನೇನು ಮೋದಿ ಪದಚ್ಯುತಿಯಾಗಿಯೇ ಹೋಯಿತು ಎಂದು ಎಲ್ಲರೂ ತಿಳಿದಿದ್ದರು.

ಆಗ ಅವರನ್ನು ರಕ್ಷಿಸಿದ್ದು ಅಡ್ವಾಣಿ. ಮೋದಿ ನೆರವಿಲ್ಲದೆ ಇದ್ದರೆ ಲೋಕಸಭೆಗೆ ಆರಿಸಿಬರುವುದು ಕಷ್ಟ ಎನ್ನುವುದು ಈ ಶರಣಾಗತಿಗೆ ಒಂದು ಕಾರಣವಾದರೆ, ಪ್ರಧಾನಮಂತ್ರಿ ಸ್ಥಾನದ ಓಟಕ್ಕೆ ಇಳಿದಾಗ ಮೋದಿ ಬೆಂಬಲಿಸಬಹುದು ಎಂಬ ದೂರಾಲೋಚನೆ ಇನ್ನೊಂದು ಕಾರಣ ಇರಬಹುದು.

ಗುಜರಾತ್‌ನಲ್ಲಿ ಈಗ ಇರುವುದು ದೇಶದ ಉಳಿದೆಡೆ ಕಾಣುತ್ತಿರುವ ಬಿಜೆಪಿ ಖಂಡಿತ ಅಲ್ಲ, ಅದು ನರೇಂದ್ರ ಮೋದಿ ಬಿಜೆಪಿ. ಆ ರಾಜ್ಯದ ಬಿಜೆಪಿಯನ್ನು ಅವರು ಪ್ರತ್ಯೇಕ ಪ್ರಾದೇಶಿಕ ಪಕ್ಷದಂತೆಯೇ ನಡೆಸಿಕೊಂಡು ಬಂದಿದ್ದಾರೆ. ಪಕ್ಕಾ ಪಾಳೆಯಗಾರನಂತೆ ವಿರೋಧಿಸಿದವರ ತಲೆ ಕಡಿಯುತ್ತಾ, ಶರಣಾದವರನ್ನು ಅಡಿಯಾಳುಗಳನ್ನಾಗಿ ಮಾಡುತ್ತಾ ಬಂದಿದ್ದಾರೆ. 

ಈಗ ಇಡೀ ಪಕ್ಷವನ್ನೇ ಅಪಹರಣ ಮಾಡಲು ಹೊರಟಿದ್ದಾರೆ. ಅಪಹರಣ ಎಂದರೆ ಪ್ರತಿಭಟಿಸಿದವರ ಕೈಕಾಲು ಕಟ್ಟಿಹಾಕಿ, ಬಾಯಿಮುಚ್ಚಿಸಿ ಹೊತ್ತುಕೊಂಡು ಹೋಗುವುದು. ಮೋದಿ ಅದನ್ನೇ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಅಪಹರಣ ಎನ್ನುವುದು ಅಪರಾಧ.

ಆದರೆ `ಅಪಹರಣಕಾರನ` ಜತೆ ಶಾಮೀಲಾಗಿರುವ ಆರ್‌ಎಸ್‌ಎಸ್‌ನ ನ್ಯಾಯಶಾಸ್ತ್ರದಲ್ಲಿ ಅಪಹರಣಕ್ಕೆ ಬೇರೆ ಅರ್ಥ ಇದ್ದರೂ ಇರಬಹುದು ಇಲ್ಲವೇ ಅಪಹರಣಕಾರರ ಜತೆಯಲ್ಲಿಯೇ ಬದುಕುತ್ತಾ ಕೊನೆಗೆ ಆತನನ್ನೇ ಪ್ರೀತಿಸುವ `ಸ್ಟಾಕ್‌ಹೋಂ ಸಿಂಡ್ರೋಮ್`ಗೆ ಆರ್‌ಎಸ್‌ಎಸ್ ಒಳಗಾಗಿರಬಹುದು.

ಉಳಿದವರ ಗೊಂದಲ ಏನೇ ಇದ್ದರೂ ನರೇಂದ್ರ ಮೋದಿ ಅವರಿಗೆ ತನ್ನ ಮುಂದಿನ ದಾರಿ ಬಗ್ಗೆ ಸ್ಪಷ್ಟತೆ ಇರುವಂತೆ ಕಾಣುತ್ತಿದೆ. ಅವರ ರಾಜಕೀಯ ಜೀವನದಲ್ಲಿ ಮುಂದಿನ ಎರಡು ವರ್ಷಗಳು ನಿರ್ಣಾಯಕವಾದುದು. 

ಈ ವರ್ಷದ ಕೊನೆಯಲ್ಲಿ ಅವರು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕಾಗಿದೆ, ಆ ಚುನಾವಣೆಯ ಫಲಿತಾಂಶ, ನಂತರದ ಒಂದೂವರೆ ವರ್ಷಗಳ ಅವಧಿಯಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಅವರ ಪಾತ್ರವನ್ನು ನಿರ್ಧರಿಸಲಿದೆ. 

ಇದಕ್ಕಾಗಿಯೇ ಅವರು ತಾಲೀಮು ಪ್ರಾರಂಭಿಸಿರುವುದು. ಅಡ್ವಾಣಿಯವರನ್ನೋ, ಸುಷ್ಮಾ ಸ್ವರಾಜ್ ಅವರನ್ನೋ ಪ್ರಧಾನಿಯಾಗಿ ಮಾಡುವುದು ಅವರ ಉದ್ದೇಶ ಖಂಡಿತ ಅಲ್ಲ. ತಾನೇ ಪ್ರಧಾನಿಯಾಗಬೇಕೆಂಬ ಆಕಾಂಕ್ಷೆ ಅವರಲ್ಲಿ ಎಂದೋ ಹುಟ್ಟಿಕೊಂಡು ಬಲವಾಗಿ ಬೇರುಬಿಟ್ಟಿದೆ. 

ಈ ಮಹತ್ವಾಕಾಂಕ್ಷಿ ಮೋದಿಯವರನ್ನು ನೊಡಿದಾಗ ಯಾಕೋ ಅಧಿಕಾರವನ್ನು ಉಳಿಸಿಕೊಳ್ಳಲು ಸರ್ವಾಧಿಕಾರಿಯಾಗಿ ಬದಲಾಗಿ ಹೋದ ಇಂದಿರಾಗಾಂಧಿ ನೆನಪಾಗುತ್ತಾರೆ. ಅವರ ವಿರೋಧಿಗಳು ಕೂಡಾ ಮೋದಿ ಅವರನ್ನು ಸರ್ವಾಧಿಕಾರಿ ಎಂದು ಟೀಕಿಸಿದ್ದಾರೆ. 

ಇಂದಿರಾಗಾಂಧಿಯವರಂತೆಯೇ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಮೋದಿ ಬಯಸಿದ್ದನ್ನು ಪಡೆಯಲು ಏನು ಬೇಕಾದರು ಮಾಡಲು ಹಿಂಜರಿಯಲಾರರು. ಮಹತ್ವಾಕಾಂಕ್ಷಿಗಳ ಹಾದಿ ತಪ್ಪಿಸುವುದು ಸೋಲಿನ ಭೀತಿಯಿಂದ ಹುಟ್ಟುವ ಹತಾಶೆ.

ಹತಾಶೆಗೀಡಾದ ವ್ಯಕ್ತಿ ಪರಿಣಾಮವನ್ನು ಲೆಕ್ಕಿಸದೆ ತನಗೆ ಸರಿಕಂಡ ದಾರಿಯಲ್ಲಿ ನುಗ್ಗುತ್ತಾನೆ. ಹತ್ತುವರ್ಷಗಳ ಹಿಂದೆ ಗುಜರಾತ್‌ನಲ್ಲಿ ನಡೆದ ಕೋಮುಗಲಭೆಯನ್ನು ಕಣ್ಣಾರೆ ನೋಡಿದ ನನಗೆ  ಯಾಕೋ ದೇಶದಲ್ಲಿ ಗುಜರಾತ್ ಕಾಣತೊಡಗಿದೆ. ನನ್ನ ಭೀತಿ 

Thursday, June 7, 2012

ಸಿದ್ದರಾಮಯ್ಯನವರಿಗೆ ಬೇರೆ ದಾರಿಯೇ ಇಲ್ಲ June 04, 2012

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ವಿರೋಧಪಕ್ಷಗಳ ಅಗತ್ಯ ಇಲ್ಲವೇ ಇಲ್ಲ, ಮತದಾರರೂ ಬೇಕಾಗಿಲ್ಲ. ಕಾಂಗ್ರೆಸ್ ಪಕ್ಷವೇ ಸಾಕು. ಭ್ರಷ್ಟಾಚಾರ, ಭಿನ್ನಮತ ಮತ್ತು ಅನೈತಿಕ ಚಟುವಟಿಕೆಗಳಿಂದಾಗಿ ಅವಸಾನದ ಪ್ರಪಾತದೆಡೆಗೆ ರಭಸದಿಂದ ಸಾಗುತ್ತಿರುವ ಆಡಳಿತಾರೂಢ ಬಿಜೆಪಿ, ಚುನಾವಣೆಯನ್ನು ಎದುರಿಸುವ ಮೊದಲೇ ಸೋಲಿನ ಭೀತಿಯಲ್ಲಿದೆ. 

ಕಳೆದ ಏಳುವರ್ಷಗಳಿಂದ ವಿರೋಧ ಪಕ್ಷದ ಸ್ಥಾನದಲ್ಲಿ ಕೂತಿರುವ ಕಾಂಗ್ರೆಸ್  ರಾಜಕೀಯವಾಗಿ ಅನುಕೂಲವಾಗಿರುವ ಈ ಪರಿಸ್ಥಿತಿಯಲ್ಲಿ ನಿರಾಯಾಸವಾದ ಗೆಲುವಿನ ಕನಸನ್ನಾದರೂ ಕಾಣಲು ಸಾಧ್ಯವಾಗಬೇಕಾಗಿತ್ತು, ಆದರೆ, ಅದರ ನಾಯಕರನ್ನು ಸೋಲಿನ ದುಃಸ್ವಪ್ನ  ಬೆಚ್ಚಿಬೀಳಿಸತೊಡಗಿದೆ.

ಕರ್ನಾಟಕವೇನು ಕಾಂಗ್ರೆಸ್ ತಲೆ ಎತ್ತಲಾಗದಷ್ಟು ನೆಲಕಚ್ಚಿರುವ ಉತ್ತರಪ್ರದೇಶ, ಬಿಹಾರ ರಾಜ್ಯಗಳಂತಲ್ಲ. ಭೇದಿಸಲಾಗದ ರೀತಿಯಲ್ಲಿ ವಿರೋಧಪಕ್ಷಗಳು ಕೋಟೆ ಕಟ್ಟಿಕೊಂಡಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಗುಜರಾತ್ ರಾಜ್ಯಗಳೂ ಅಲ್ಲ. ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ಪಾರು ಮಾಡಿದ ರಾಜ್ಯ ಕರ್ನಾಟಕ, ಇಂದಿರಾಗಾಂಧಿಗೆ ರಾಜಕೀಯ ಮರುಹುಟ್ಟುನೀಡಿದ, ಸೋನಿಯಾಗಾಂಧಿಯವರನ್ನು ಗೆಲ್ಲಿಸಿ ಕಳುಹಿಸಿದ ರಾಜ್ಯ ಇದು. 

ಸ್ವತಂತ್ರ ಭಾರತದಲ್ಲಿ ನಡೆದ ಹದಿಮೂರು ಚುನಾವಣೆಗಳಲ್ಲಿ ಮೂರನ್ನು ಹೊರತುಪಡಿಸಿದರೆ ಉಳಿದೆಲ್ಲವನ್ನೂ ಕಾಂಗ್ರೆಸ್ ಇಲ್ಲಿ ಗೆದ್ದಿದೆ. ಕಳೆದ ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರ ಸಂಖ್ಯೆಯ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಸೋತಿದ್ದರೂ, ಬಿಜೆಪಿಗಿಂತ ಶೇಕಡಾ 0.74ರಷ್ಟು ಹೆಚ್ಚು ಮತಗಳನ್ನು ಪಡೆದಿತ್ತು.
 
ಹೀಗಿದ್ದರೂ ಮುಂದಿನ ಚುನಾವಣೆಯ ನಂತರ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳುವ ಕಾಂಗ್ರೆಸ್ ನಾಯಕರ ಸಂಖ್ಯೆ ಕಡಿಮೆ. ಇದಕ್ಕೆ ಮುಖ್ಯ ಕಾರಣ ದೆಹಲಿಯಲ್ಲಿ ಕೂತಿರುವ ಹೈಕಮಾಂಡ್ ನಾಯಕರು ಒಂದಾದರ ಮೇಲೊಂದರಂತೆ ಕೈಗೊಳ್ಳುತ್ತಾ ಬಂದ ಆತ್ಮಹತ್ಯಾಕಾರಿ ನಿರ್ಧಾರಗಳು.

ಇವುಗಳಲ್ಲಿ ಇತ್ತೀಚಿನದು ಸಿದ್ದರಾಮಯ್ಯನವರು ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವಾದ ಬೆಳವಣಿಗೆ. ಜನಪ್ರಿಯ ನಾಯಕನೊಬ್ಬ ಯಾವುದೇ ರಾಜಕೀಯ ಪಕ್ಷದ ಪಾಲಿಗೆ ಸಮಸ್ಯೆಯ ಪರಿಹಾರ ಮತ್ತು ಸಮಸ್ಯೆ ಎರಡೂ ಆಗಲು ಸಾಧ್ಯ. ಅವರು ಏನಾಗುತ್ತಾರೆ ಎನ್ನುವುದು ಪಕ್ಷ ಮತ್ತು ಆ ನಾಯಕನ ನಡವಳಿಕೆಯನ್ನು ಅವಲಂಬಿಸಿರುತ್ತದೆ.  ಕಾಂಗ್ರೆಸ್ ಪಕ್ಷಕ್ಕಾಗಲಿ, ಸಿದ್ದರಾಮಯ್ಯನವರಾಗಲಿ ರಾಜಕೀಯ ಶಾಲೆಯ ಈ ಸಾಮಾನ್ಯ ಪಾಠ ಗೊತ್ತಿಲ್ಲ ಎಂದು ಹೇಳಲಾಗದು. 

ಸಿದ್ದರಾಮಯ್ಯನವರ ಕಣ್ಣಿಗೆ ಎಲ್ಲವೂ ನುಣ್ಣಗೆ ಕಾಣಲು ಕಾಂಗ್ರೆಸ್ ಪಕ್ಷ ದೂರದ ಬೆಟ್ಟ ಅಲ್ಲ. ಅದರ ಜತೆಯಲ್ಲಿಯೇ ಅವರು ಗುದ್ದಾಡಿಕೊಂಡು ರಾಜಕೀಯ ಮಾಡಿಕೊಂಡು ಬಂದವರು. ಅದೇ ರೀತಿ ಸಿದ್ದರಾಮಯ್ಯ ಕೂಡಾ ಅನ್ಯಗ್ರಹದಿಂದ ಉದುರಿಬಿದ್ದ ನಾಯಕನಲ್ಲ, ಅವರನ್ನು ಕಾಂಗ್ರೆಸ್ ಪಕ್ಷದೊಳಗೆ ಎಳೆದುಕೊಂಡು ಬಂದವರಿಗೂ ಅವರ ಗುಣ-ಸ್ವಭಾವ, ನೀತಿ-ನಿಲುವುಗಳೆಲ್ಲವೂ ಗೊತ್ತಿತ್ತು. 

ಪ್ರಾದೇಶಿಕ ಪಕ್ಷದ ನಾಯಕತ್ವಕ್ಕೆ ಹೇಳಿ ಮಾಡಿಸಿದಂತಹ ರಾಜಕೀಯ ವ್ಯಕ್ತಿತ್ವದ ಸಿದ್ದರಾಮಯ್ಯ, ಹೈಕಮಾಂಡ್ ಸಂಸ್ಕೃತಿಯ ಕಾಂಗ್ರೆಸ್ ಪಕ್ಷಕ್ಕೆ ಹೊಂದಿಕೊಳ್ಳುವುದು ಕಷ್ಟ ಎನ್ನುವುದನ್ನು ಅವರ ಶತ್ರುಗಳು ಮಾತ್ರವಲ್ಲ ಮಿತ್ರರೂ  ಹೇಳುತ್ತಿದ್ದರು. ಪರಸ್ಪರ ಗುಣಾವಗುಣಗಳ ಅರಿವಿದ್ದು  ಮಾಡಿಕೊಂಡ ಸಂಬಂಧ ಈಗ ಮುರಿದುಬೀಳುವ ಸ್ಥಿತಿಯಲ್ಲಿದೆ.

ಸಿದ್ದರಾಮಯ್ಯನವರ ಆಯ್ಕೆಯ ಅಭ್ಯರ್ಥಿಗಳ ಅರ್ಹತೆ-ಅನರ್ಹತೆಗಳು ಪ್ರತ್ಯೇಕ ಚರ್ಚೆಯ ವಿಚಾರ. ಆದರೆ ರಾಷ್ಟ್ರೀಯ ಪಕ್ಷವೊಂದರಲ್ಲಿ ವಿಧಾನಪರಿಷತ್‌ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಶಾಸಕಾಂಗ ಪಕ್ಷದ ನಾಯಕನ ಜತೆ ಸಮಾಲೋಚನೆ ಮಾಡದೆ ಇರುವುದು ಮೂರ್ಖತನವಲ್ಲದೆ ಮತ್ತೇನಲ್ಲ. ಅವಮಾನಿಸಲೇಬೇಕೆಂಬ ದುರುದ್ದೇಶ ಇಲ್ಲದೆ ಹೋದರೆ ಈ ರೀತಿ ಯಾವ ಪಕ್ಷವೂ ಮಾಡಲು ಸಾಧ್ಯ ಇಲ್ಲ. 

ಸಿದ್ದರಾಮಯ್ಯನವರು ಸಿಡಿಯಲು ಈಗಿನ ಅಸಮಾಧಾನವೊಂದೇ ಖಂಡಿತ ಕಾರಣ ಅಲ್ಲ. ಪಕ್ಷದ ನಿರ್ಲಕ್ಷ್ಯ ಮತ್ತು ಅವಮಾನ ಸಿದ್ದರಾಮಯ್ಯನವರಿಗೆ ಹೊಸತಲ್ಲ, ಕಾಂಗ್ರೆಸ್ ಸೇರಿದ ನಂತರದ ಕಳೆದ ಆರು ವರ್ಷಗಳ ಅವಧಿಯಲ್ಲಿ ಅವರು ಅದನ್ನು ಎದುರಿಸುತ್ತಲೇ ಬಂದಿದ್ದಾರೆ.
 
ಸಿದ್ದರಾಮಯ್ಯನವರ ಸಹಜ ಸ್ವಭಾವದ ಪ್ರಕಾರ ಅವರೆಂದೋ ಸ್ಫೋಟಿಸಬೇಕಾಗಿತ್ತು. ಸಂಯಮವನ್ನು ಕಾಪಾಡಿಕೊಂಡು ಹೋಗಬೇಕೆಂಬ ಔದಾರ್ಯದಿಂದಲೋ, ಬೇರೆ ಮಾರ್ಗಗಳಿಲ್ಲದ ಅಸಹಾಯಕತೆಯಿಂದಲೋ ಅವರು ಬಾಯಿಮುಚ್ಚಿಕೊಂಡು ಸಹಿಸುತ್ತಾ ಬಂದಿದ್ದಾರೆ. ಎರಡನೆಯದೇ ನಿಜವಾದ ಕಾರಣ ಇರಬಹುದು.

ಕಾಂಗ್ರೆಸ್ ರಾಜಕಾರಣವನ್ನು ನೋಡುತ್ತಾ ಬಂದವರಿಗೆ ಸಿದ್ದರಾಮಯ್ಯನವರನ್ನು ಆ ಪಕ್ಷ ನಡೆಸಿಕೊಂಡು ಬಂದ ರೀತಿಯಿಂದ ಅಚ್ಚರಿಯಾಗದು. ವಿರೋಧ ಪಕ್ಷವನ್ನು ದುರ್ಬಲಗೊಳಿಸಲು ಅದರೊಳಗಿನ ಅತೃಪ್ತ ನಾಯಕರನ್ನು ಮೊದಲು ಸೆಳೆದುಕೊಳ್ಳುವುದು ನಂತರ ಅವರನ್ನು ಎಲ್ಲೋ ಮೂಲೆಗೆ ತಳ್ಳಿಬಿಡುವುದು ಅದರ ಹಳೆಯ ಕಾರ್ಯತಂತ್ರ. ಒಮ್ಮೆ ಮೂಲ ಪಕ್ಷವನ್ನು ತೊರೆದುಬಂದ ನಂತರ ಮರಳಿಹೋಗುವ ಸ್ಥಿತಿಯಲ್ಲಿ ಅವರು ಇರುವುದಿಲ್ಲ. ಅವಮಾನ-ಅನಾದರಣೆಯನ್ನು ಸಹಿಸಿಕೊಂಡು ಇಲ್ಲಿಯೇ ಇರಬೇಕಾಗುತ್ತದೆ. 

ಗುಜರಾತ್‌ನಲ್ಲಿ ಬಿಜೆಪಿ ಬಿಟ್ಟುಬಂದ ಶಂಕರ್‌ಸಿಂಗ್ ವಘೇಲಾ, ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಟ್ಟುಬಂದ ಛಗನ್ ಭುಜಬಲ್ ಮೊದಲಾದವರು ಕಾಂಗ್ರೆಸ್ ಪಕ್ಷದಲ್ಲಿ ಬೆಳೆಯಲು ಅವಕಾಶ ಸಿಗಲೇ ಇಲ್ಲ. ಸಿದ್ದರಾಮಯ್ಯನವರದ್ದೂ ಇದೇ ಸ್ಥಿತಿ.

ಸಿದ್ದರಾಮಯ್ಯನವರ ಬಗ್ಗೆ ಕಾಂಗ್ರೆಸ್ ನಡವಳಿಕೆಯೇ ಮೂರ್ಖತನದ್ದು, ಮೊದಲನೆಯದಾಗಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಅಗತ್ಯವೇ ಇರಲಿಲ್ಲ. ಪಕ್ಷದೊಳಗೆ ಆಗಲೇ ಹಿರಿಯ ನಾಯಕರು ತುಂಬಿ ತುಳುಕಾಡುತ್ತಿದ್ದರು, ಜತೆಗೆ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಪಕ್ಷಾಂತರಗೊಂಡವರ ಕಾರಣದಿಂದ `ಮೂಲನಿವಾಸಿಗಳು` ಮತ್ತು `ವಲಸೆಕೋರರ` ನಡುವಿನ ಸಂಘರ್ಷ ಪ್ರಾರಂಭವಾಗಿ ಬಿಟ್ಟಿತ್ತು. 

ಈ ಸ್ಥಿತಿಯಲ್ಲಿ ಸಿದ್ದರಾಮಯ್ಯನವರಂತಹ ಹಿರಿಯ ನಾಯಕರನ್ನು ಕರೆತಂದರೂ ಉನ್ನತ ಸ್ಥಾನಮಾನ ನೀಡುವುದು ಸುಲಭದ ಕೆಲಸ ಆಗಿರಲಿಲ್ಲ. ಎರಡನೆಯದಾಗಿ ಸೇರಿಸಿಕೊಂಡ ನಂತರ ಆಂತರಿಕ ವಿರೋಧಗಳೇನೇ ಇದ್ದರೂ ಅದನ್ನು ಲೆಕ್ಕಿಸದೆ  ಸೂಕ್ತ ಸ್ಥಾನಮಾನ ನೀಡಿ ಅವರನ್ನು ಪಕ್ಷದ ಬಲವರ್ಧನೆಗೆ ಬಳಸಿಕೊಳ್ಳಬೇಕಾಗಿತ್ತು. ಆದರೆ ಕಾಂಗ್ರೆಸ್ ಮಾಡಿದ್ದೇ ಬೇರೆ. ಸಿದ್ದರಾಮಯ್ಯನವರನ್ನು ಪಕ್ಷಕ್ಕೆ ಸೇರಿಸಿಕೊಂಡು ಕೈಬಿಟ್ಟು ಬಿಟ್ಟಿತು. 

ಅಲ್ಲಿಗೆ ಪಕ್ಷದೊಳಗಿನ ಅತೃಪ್ತನಾಯಕರ ಪಟ್ಟಿಗೆ ಇನ್ನೊಬ್ಬರು ಸೇರ್ಪಡೆಯಾದರು ಅಷ್ಟೆ.
ಪಕ್ಷಕ್ಕೆ ಸೇರಿಸಿಕೊಳ್ಳಲು ತಮ್ಮ ಮೇಲಿನ ಪ್ರೀತಿಗಿಂತಲೂ ಹೆಚ್ಚಾಗಿ ದೇವೇಗೌಡರ ಮೇಲಿನ ದ್ವೇಷ ಕಾರಣ ಎನ್ನುವುದು ಸಿದ್ದರಾಮಯ್ಯನವರಿಗೂ ಗೊತ್ತಿತ್ತು. ಪ್ರೀತಿ ಇದ್ದಿದ್ದರೆ ಅದು ತಮ್ಮ ಸಮುದಾಯದ ನಾಯಕನೆಂಬ ಅಭಿಮಾನದಿಂದಾಗಿ  ಅವರನ್ನು ಪಕ್ಷಕ್ಕೆ ಕರೆತರಲು ಬಹಿರಂಗವಾಗಿಯೇ ಪ್ರಯತ್ನದಲ್ಲಿ ತೊಡಗಿದ್ದ ಎಚ್. ವಿಶ್ವನಾಥ್ ಮತ್ತು ಎಚ್.ಎಂ.ರೇವಣ್ಣನಂತಹವರಲ್ಲಿತ್ತೋ ಏನೋ? 

ಆದರೆ, ಅವರಿಗಿಂತಲೂ ನಿರ್ಣಾಯಕ ಪಾತ್ರವನ್ನು ವಹಿಸಿದ್ದವರು ಆಗ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್. ಎಂ.ಕೃಷ್ಣ ಅವರು. ಅದಕ್ಕೆ ಕಾರಣ ಅವರಿಗೆ ದೇವೇಗೌಡರ ಮೇಲೆ ರಾಜಕೀಯವಾಗಿ ಇದ್ದ ದ್ವೇಷ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಅತೃಪ್ತ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ದೇವೇಗೌಡರ ಪಕ್ಷದ ಬಲ ಕುಂದಿಸುವುದು ಅವರ ಲೆಕ್ಕಾಚಾರವಾಗಿತ್ತು. 

ಕಾಂಗ್ರೆಸ್ ಪಕ್ಷಕ್ಕೂ ಇದು ಬೇಕಾಗಿತ್ತು. ಈ ಪ್ರೀತಿ-ದ್ವೇಷದ ಆಟದ ಬಗ್ಗೆ ಅರಿವಿದ್ದೂ ಸಿದ್ದರಾಮಯ್ಯ ದಾಳವಾದರು. ಜೆಡಿ(ಎಸ್) ಬಿಟ್ಟು ಹೊರಬಂದ ಸಿದ್ದರಾಮಯ್ಯನವರ ಬಗ್ಗೆ ಕೃಷ್ಣ ಅವರಿಗೂ ಹೆಚ್ಚಿನ ಆಸಕ್ತಿ ಇರಲಿಲ್ಲ. ಸಿದ್ದರಾಮಯ್ಯನವರ ಜತೆ ಕೂಡಿಕೊಂಡರೆ ಮೈತ್ರಿಯನ್ನು ಮುರಿಯುತ್ತೇನೆ ಎಂದು ದೇವೇಗೌಡರು ನೀಡಿದ ಎಚ್ಚರಿಕೆಯನ್ನು ಧಿಕ್ಕರಿಸಿದ ಕಾರಣಕ್ಕೆ ಜೆಡಿ(ಎಸ್) ಜತೆಗಿನ ಮೈತ್ರಿಕೂಟದ ಸರ್ಕಾರವನ್ನೇ ಕಳೆದುಕೊಂಡ ಕಾಂಗ್ರೆಸ್, ಒಂದು ಸರ್ಕಾರದ ಬೆಲೆತೆತ್ತು ಬರಮಾಡಿಕೊಂಡ ಸಿದ್ದರಾಮಯ್ಯವನರನ್ನು ಮಾತ್ರ ಸರಿಯಾಗಿ ಬಳಸಿಕೊಳ್ಳಲಿಲ್ಲ.

ಸಿದ್ದರಾಮಯ್ಯನವರನ್ನು ಬಾಜಾ-ಭಜಂತ್ರಿಯೊಂದಿಗೆ ಪಕ್ಷಕ್ಕೆ ಸೇರಿಸಿಕೊಂಡ ಕಾಂಗ್ರೆಸ್ ಮೂರು ವರ್ಷಗಳ ಕಾಲ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡದೆ ನಿರ್ಲಕ್ಷಿಸಿತ್ತು. ಖಾಲಿ ಹುದ್ದೆಗಳೇ ಇರಲಿಲ್ಲ, ಯಾರ ಹುದ್ದೆಯನ್ನೂ ಖಾಲಿ ಮಾಡಿಸುವ ಆಸಕ್ತಿಯೂ ಪಕ್ಷದ ಹೈಕಮಾಂಡ್‌ಗೆ ಇರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಎನ್. ಧರ್ಮಸಿಂಗ್ ವಿರಾಜಮಾನರಾಗಿದ್ದರು. 

ತಾಂತ್ರಿಕ ಕಾರಣದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರದೆ ಜೆಡಿ (ಎಸ್)ನಲ್ಲಿಯೇ ಉಳಿದಿದ್ದ ಅವರ ಬೆಂಬಲಿಗರು ಕೂಡಾ ಮೂಲೆಗುಂಪಾಗಿ ಹೋಗಿದ್ದರು. ಅಷ್ಟು ಮಾತ್ರವಲ್ಲ ಯಾವ ಪಕ್ಷವನ್ನು ದುರ್ಬಲಗೊಳಿಸಬೇಕೆಂದು ಸಿದ್ದರಾಮಯ್ಯನವರನ್ನು ಅಲ್ಲಿಂದ ಹೊರಗೆಳೆದು ಕರೆತರಲಾಯಿತೋ ಅದೇ ಪಕ್ಷದ ಜತೆ ವಿಧಾನಸಭೆಗೆ ನಡೆಯಲಿದ್ದ ಮಧ್ಯಂತರ ಚುನಾವಣೆಯಲ್ಲಿ ಮೈತ್ರಿಮಾಡಿಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡತೊಡಗಿದ್ದರು.

ದೆಹಲಿಯಲ್ಲಿ ಆಸ್ಕರ್ ಫರ್ನಾಂಡಿಸ್, ಕೆ.ಎಚ್.ಮುನಿಯಪ್ಪ, ಮಾರ್ಗರೇಟ್ ಆಳ್ವ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರ ಮೂಗಿಗೆ ಎಚ್.ಡಿ.ದೇವೇಗೌಡರು ತುಪ್ಪ ಹಚ್ಚಿಬಿಟ್ಟಿದ್ದರು. ಇವರಲ್ಲಿ ಕೆಲವರು ಮುಖ್ಯಮಂತ್ರಿಯಾಗುವ ಕನಸು ಕಾಣತೊಡಗಿದ್ದರು. ಈ ಮೈತ್ರಿ ಪ್ರಯತ್ನದಿಂದ ಅಸಮಾಧಾನಗೊಂಡಿದ್ದ ಸಿದ್ದರಾಮಯ್ಯನವರಿಗೆ ರಾಜೀನಾಮೆ ಸಲ್ಲಿಸಿ ಪ್ರತಿಭಟಿಸಲು ಹುದ್ದೆಗಳು ಇರಲಿಲ್ಲವಾದ ಕಾರಣ ಮಾರಿಷಸ್-ಗೋವಾಗಳಿಗೆ ಬೆಂಬಲಿಗರೊಡನೆ ಹೋಗಿ ಗುಪ್ತಸಭೆ ನಡೆಸಿದ್ದರು. 

ಬಿಜೆಪಿ ಸೇರಬಹುದೆಂಬ ಗಾಳಿಸುದ್ದಿಯೂ ಹರಡಿತ್ತು. ಆದರೆ ಸೋನಿಯಾಗಾಂಧಿ ವಿರೋಧದಿಂದಾಗಿ ಆ ಮೈತ್ರಿ ತಪ್ಪಿಹೋಯಿತು. ಸಿದ್ದರಾಮಯ್ಯನವರ ಕಷ್ಟ ಅಲ್ಲಿಗೆ ಕೊನೆಗೊಳ್ಳಲಿಲ್ಲ. ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮಹಾರಾಷ್ಟ್ರದಲ್ಲಿ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣ ಅವರು ಸಕ್ರಿಯ ರಾಜಕಾರಣಕ್ಕೆ ವಾಪಸು ಬಂದರು. ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸದಿದ್ದರೂ ಕೃಷ್ಣ ಅವರ ಪ್ರವೇಶದಿಂದ ಸಿದ್ದರಾಮಯ್ಯನವರ ಪ್ರತಿಸ್ಪರ್ಧಿಗಳ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಯಿತು.

ಮಲ್ಲಿಕಾರ್ಜುನ ಖರ್ಗೆ ಲೋಕಸಭೆಗೆ ಆಯ್ಕೆಯಾಗಿ ಹೋದ ಕಾರಣದಿಂದಾಗಿ ಖಾಲಿಯಾದ ವಿರೋಧ ಪಕ್ಷದ ನಾಯಕನ ಸ್ಥಾನವೇನೋ ಸಿದ್ದರಾಮಯ್ಯನವರಿಗೆ ಕೊನೆಗೂ ಸಿಕ್ಕಿತು. ಆದರೆ ಪಕ್ಷದ ಆಂತರಿಕ ವ್ಯವಹಾರದಲ್ಲಿ ಅವರು ಹೊರಗಿನವರಾಗಿಯೇ ಉಳಿದಿದ್ದರು. ಡಾ.ಜಿ.ಪರಮೇಶ್ವರ್ ಅವರು ಕೆಪಿಸಿಸಿ ನೂತನ ಅಧ್ಯಕ್ಷರಾದ ನಂತರ ಪಕ್ಷ ಮತ್ತು ಅವರ ನಡುವಿನ ಬಿರುಕು ಬೆಳೆಯುತ್ತಾ ಹೋಯಿತು. 

ಈ ನಿರ್ಲಕ್ಷ್ಯದ ಮುಂದುವರಿಕೆಯಂತೆ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಅವರನ್ನು ದೂರ ಇಡಲಾಯಿತು. ಮುಂದಿನ ಒಂದು ವರ್ಷದೊಳಗೆ ವಿಧಾನಸಭೆಗೆ ನಡೆಯಲಿರುವ ಚುನಾವಣೆ ತನ್ನ ರಾಜಕೀಯ ಬದುಕಿನ ನಿರ್ಣಾಯಕ ಘಟ್ಟ ಎಂಬ ಅರಿವಿನ ಕಾರಣದಿಂದಲೋ ಏನೋ ಸಿದ್ದರಾಮಯ್ಯನವರು ಬಂಡಾಯದ ಬಾವುಟ ಹಾರಿಸಿದ್ದಾರೆ. 

ಸಿದ್ದರಾಮಯ್ಯನವರ ಮುಂದೆಯೂ ಬಹಳ ಆಯ್ಕೆಗಳಿಲ್ಲ. ಸೈದ್ಧಾಂತಿಕವಾಗಿ ವಿರೋಧಿಸುತ್ತಾ ಬಂದ ಬಿಜೆಪಿಗೆ ಅವರು ಸೇರಲಾರು. ಅಪ್ಪ-ಮಕ್ಕಳ ರಾಜಕಾರಣದ ವಿರುದ್ಧವೇ ಸೆಡ್ಡುಹೊಡೆದು ಹೊರಬಂದ ನಂತರ ಹಳೆಯ ಪಕ್ಷಕ್ಕೂ ಮರಳುವ ಸ್ಥಿತಿಯಲ್ಲಿಯೂ ಅವರಿಲ್ಲ. ಉಳಿದಿರುವ ಏಕೈದ ದಾರಿ ಪ್ರಾದೇಶಿಕ ಪಕ್ಷದ ಸ್ಥಾಪನೆ. ಆರು ವರ್ಷಗಳ ಹಿಂದೆ ಕಾಂಗ್ರೆಸ್ ಸೇರುವ ಮೊದಲು ಈ ಅವಕಾಶ ಅವರ ಮನೆಬಾಗಿಲು ತಟ್ಟಿತ್ತು. 

ದೇವೇಗೌಡರಿಗೆ ಸವಾಲು ಹಾಕಿ ಪಕ್ಷ ಬಿಟ್ಟು ಹೊರಬಂದ ಸಿದ್ದರಾಮಯ್ಯವರು `ಅಹಿಂದ` ಸಮಾವೇಶಗಳನ್ನು ಮಾಡುತ್ತಾ ರಾಜ್ಯ ಸುತ್ತುತ್ತಿದ್ದಾಗ ಅವರಿಂದ ಪ್ರಾದೇಶಿಕ ಪಕ್ಷದ ಸ್ಥಾಪನೆಯನ್ನು ನಿರೀಕ್ಷಿಸಿದವರಿದ್ದರು. ಆದರೆ `ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯವೇ ಇಲ್ಲ` ಎಂದು ಘೋಷಿಸಿ ಕಾಂಗ್ರೆಸ್ ಪಕ್ಷವನ್ನು ಸೇರಿಕೊಳ್ಳುವ ಮೂಲಕ ಆ ನಿರೀಕ್ಷೆಯನ್ನು ಅವರು ಹುಸಿಗೊಳಿಸಿದ್ದರು. 

ಅದರ ನಂತರ `ಅಹಿಂದ` ಸಂಘಟನೆ ಹಲವಾರು ಗುಂಪುಗಳಾಗಿ ಒಡೆದುಹೋಗಿವೆ. ಈ ಪರಿಸ್ಥಿತಿಯಲ್ಲಿ ಒಂದೊಮ್ಮೆ ಮತ್ತೆ `ಅಹಿಂದ` ಸಂಘಟನೆಗಿಳಿದರೂ ಹಿಂದಿನ ಬೆಂಬಲ ಸಿಗುವ ಸಾಧ್ಯತೆ ಕಡಿಮೆ. ಈ ಅಸಹಾಯಕತೆಯೇ  ಸಿದ್ದರಾಮಯ್ಯನವರನ್ನು ಬಲಹೀನರನ್ನಾಗಿ ಮಾಡಿದೆ. ಈಗ ಅವರ ಮುಂದೆ ಇರುವ ಏಕೈಕ ಸುರಕ್ಷಿತ ದಾರಿ ಕಾಂಗ್ರೆಸ್ ಜತೆಯಲ್ಲಿಯೇ ಇನ್ನಷ್ಟು ಚೌಕಾಶಿ ಮಾಡಿಕೊಂಡು ಮುಂದುವರಿಯುವುದು. ಅದನ್ನೇ ಅವರು ಮಾಡಬಹುದೇನೋ?

ನ್ಯಾಯ ಕೇಳುವವರಿಗೆ ಅನ್ಯಾಯದ ಅರಿವಿರಬೇಕು May 28, 2012

ಬರಪೀಡಿತ ಕರ್ನಾಟಕಕ್ಕೆ ಹೆಚ್ಚಿನ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರಾಜ್ಯದ ಸಂಸತ್ ಸದಸ್ಯರು ಸಂಸತ್‌ನಲ್ಲಿ ಗದ್ದಲ ಮಾಡುತ್ತಿದ್ದುದನ್ನು ನೋಡಿದವರಿಗೆ, `ಪ್ರತಿಯೊಬ್ಬರೂ ಬರಗಾಲವನ್ನು ಪ್ರೀತಿಸುತ್ತಾರೆ` ಎಂದು ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ದಶಕಗಳ ಹಿಂದೆ ವ್ಯಂಗ್ಯವಾಗಿ ಹೇಳಿದ್ದು ನೆನಪಾಗದೆ ಇರದು.
 
ಲೋಕಸಭೆಯಲ್ಲಿ ಇಂತಹ ಪ್ರಹಸನ ನಡೆದದ್ದು ಇದೇನೂ ಮೊದಲ ಸಲವಲ್ಲ. ಬಹಳ ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಅನಾವೃಷ್ಟಿ ಇಲ್ಲವೇ ಅತಿವೃಷ್ಟಿ ಎದುರಾದ ಸಂದರ್ಭದಲ್ಲಿ ಕೇಂದ್ರದಲ್ಲಿ ವಿರೋಧ ಪಕ್ಷದ ಸರ್ಕಾರ ಇದ್ದರೆ ರಾಜ್ಯಸರ್ಕಾರ ಮೊದಲು ಮಾಡುವ ಕೆಲಸ- ಹೆಚ್ಚುವರಿ ಪರಿಹಾರಕ್ಕೆ ಮೊರೆ ಇಡುವುದು. 

ಅದರ ನಂತರ ಕೇಂದ್ರದ ಮೇಲೆ ಒತ್ತಡ ಹೇರಲು ಸರ್ವಪಕ್ಷಗಳ ನಿಯೋಗವೊಂದನ್ನು ದೆಹಲಿಗೆ ಕರೆದೊಯ್ಯುವುದು, ಕೊನೆಗೆ `ನಾವು ಕೇಳಿದಷ್ಟು ಪರಿಹಾರವನ್ನು ನೀಡದೆ ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ` ಎಂದು ಆರೋಪಿಸುವುದು.
 
ಅನಾವೃಷ್ಟಿಯಾಗಿದ್ದರೆ ಈ ಜಗಳ ಮುಗಿಯುವ ಹೊತ್ತಿಗೆ ಮಳೆ ಬಂದಿರುತ್ತದೆ, ಅತಿವೃಷ್ಟಿಯಾಗಿದ್ದರೆ ಮಳೆ ನಿಂತಿರುತ್ತದೆ. ಅಷ್ಟರಲ್ಲಿ ಕೇಳಿದವರು ಮತ್ತು ಕೊಡುವವರು -ಇಬ್ಬರೂ ಮರೆತುಬಿಡುತ್ತಾರೆ. ಇದು ದಶಕಗಳಿಂದ ರಾಜ್ಯದ ಜನತೆ ನೋಡುತ್ತಾ ಬಂದ ಪ್ರಕೃತಿ ವಿಕೋಪ ಪರಿಹಾರದ ಪ್ರಹಸನ.

`ಪ್ರಕೃತಿ ವಿಕೋಪದ ಪರಿಹಾರಕ್ಕಾಗಿ ರಾಜ್ಯ ಸರ್ಕಾರ  ಕಳೆದ ಹತ್ತುವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಕೇಳಿರುವ ನೆರವಿನ ಮೊತ್ತ ಸುಮಾರು 28 ಸಾವಿರ ಕೋಟಿ ರೂಪಾಯಿ, ಪಡೆದದ್ದು 2,800 ಕೋಟಿ ದಾಟಿಲ್ಲ` ಎನ್ನುತ್ತಾರೆ ವಿಧಾನಸೌಧದಲ್ಲಿ ಕೂತಿರುವ ಹಿರಿಯ ಅಧಿಕಾರಿಯೊಬ್ಬರು. 

ಈ ಬಾರಿಯೂ ರಾಜ್ಯ ಸರ್ಕಾರ 5,864 ಕೋಟಿ ರೂಪಾಯಿಗಳ ಹೆಚ್ಚುವರಿ ಪರಿಹಾರವನ್ನು ಕೇಳಿದೆ. ಇಲ್ಲಿಯವರೆಗೆ ಪೈಸೆ ಹಣ ಬಂದಿಲ್ಲ, ಕೇಂದ್ರ ಸರ್ಕಾರ ನೆರವು ನೀಡಿದರೂ ಅದು ಕೇಳಿರುವ ಮೊತ್ತದ ಶೇಕಡಾ ಹತ್ತರಷ್ಟನ್ನು ದಾಟಲಾರದು. 

ಇದನ್ನು ಅನ್ಯಾಯವೆನ್ನುವುದಾದರೆ ಇದಕ್ಕೆ ಕೇಂದ್ರ ಸರ್ಕಾರ ಮಾತ್ರ ಅಲ್ಲ, ನಮ್ಮನ್ನು ಆಳುತ್ತಾ ಬಂದ ರಾಜ್ಯ ಸರ್ಕಾರಗಳು ಮತ್ತು ನಾವೇ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳೂ ಕಾರಣ. ಕರ್ನಾಟಕವನ್ನು ಹೊರತುಪಡಿಸಿದರೆ ಉಳಿದ ಯಾವ  ರಾಜ್ಯಕ್ಕೂ ಈ ರೀತಿಯ ಅನ್ಯಾಯ ಆಗಿಲ್ಲ. 

ಯಾಕೆ ಹೀಗಾಗುತ್ತಿದೆ?ರಾಜ್ಯಕ್ಕೆ ಅನ್ಯಾಯವಾಗುತ್ತಿದೆ... ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ..` ಎಂದು ರಾಜ್ಯದ ಸಂಸದರು ಕಳೆದ ವಾರ ಲೋಕಸಭೆಯಲ್ಲಿ ಎದೆ ಬಡಿದುಕೊಂಡರು. 

ಅವರ ಭಾಷಣಕ್ಕೆ ಮುಖ್ಯ ಆಧಾರ- ಸರ್ವಪಕ್ಷಗಳ ನಿಯೋಗ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಅಧಿಕಾರಿಗಳು ಬರೆದುಕೊಟ್ಟಿರುವ ಮನವಿಪತ್ರ. ಅದರ ಆಚೆಗೆ ಹೋಗಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಮೂಲವನ್ನು ಶೋಧಿಸಲು ಯಾರೂ ಹೋಗಲಿಲ್ಲ.
 
ಮೂಲದಲ್ಲಿಯೇ ಅನ್ಯಾಯವನ್ನು ಸರಿಪಡಿಸದೆ ಹೋದರೆ ಪ್ರತಿ ವರ್ಷ ಆರೋಪ-ಪ್ರತ್ಯಾರೋಪಗಳ ಪ್ರಹಸನಕ್ಕೆ ರಾಜ್ಯದ ಜನತೆ ಮೂಕ ಪ್ರೇಕ್ಷಕರಾಗಬೇಕಾಗುತ್ತದೆ ಅಷ್ಟೆ.

ವಿಪತ್ತು ನಿರ್ವಹಣೆಗಾಗಿ ಕೇಂದ್ರ ಸರ್ಕಾರ ನೀಡುವ ಆರ್ಥಿಕ ನೆರವು ಭಾರತದ ಒಕ್ಕೂಟ ವ್ಯವಸ್ಥೆಯೊಳಗಿನ ಆರ್ಥಿಕ ಸಂಬಂಧದ ಪ್ರಮುಖ ಭಾಗ. ಈ ನೆರವಿನ ಪಾಲಿನ ತೀರ್ಮಾನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿರುವುದು ಕೇಂದ್ರ ಹಣಕಾಸು ಆಯೋಗ. 

ಪ್ರಕೃತಿ ವಿಕೋಪದಂತಹ ಅನಿರೀಕ್ಷಿತ ಸಂಕಷ್ಟಗಳನ್ನು ರಾಜ್ಯ ಸರ್ಕಾರಗಳು ಸ್ವಂತ ಬಲದಿಂದ ಎದುರಿಸುವುದು ಕಷ್ಟವಾದ ಕಾರಣ ಇದಕ್ಕೆ ಕೇಂದ್ರ ಸರ್ಕಾರ ನೆರವಾಗಬೇಕು ಎಂಬ ಎರಡನೆ ಹಣಕಾಸು ಆಯೋಗದ ಶಿಫಾರಸಿನಿಂದಾಗಿ `ಮಾರ್ಜಿನಲ್ ಮನಿ ಸ್ಕೀಮ್` ಜಾರಿಗೆ ಬಂದಿತ್ತು. 

ಹಣಕಾಸು ಆಯೋಗದ ಆಶಯ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿದ್ದು ಒಂಬತ್ತನೆ ಹಣಕಾಸು ಆಯೋಗ ವಿಪತ್ತು ಪರಿಹಾರ ನಿಧಿ (ಸಿಆರ್‌ಎಫ್) ಸ್ಥಾಪಿಸಿದ `ಇಷ್ಟರಿಂದಲೇ ನಮ್ಮ ಕಷ್ಟ ಬಗೆಹರಿಯಲಾರದು, ಇನ್ನೂ ಹೆಚ್ಚಿನ ನೆರವು ಬೇಕು` ಎಂಬ ರಾಜ್ಯ ಸರ್ಕಾರಗಳ ಮೊರೆಗೆ ಓಗೊಟ್ಟ ಹತ್ತನೆ ಹಣಕಾಸು ಆಯೋಗ `ರಾಷ್ಟ್ರೀಯ ವಿಕೋಪ ಪರಿಹಾರ ಸಂಚಿತ ನಿಧಿ` (ಎನ್‌ಸಿಸಿಎಫ್)  ಸ್ಥಾಪಿಸಿತು. 2005ರ ಪ್ರಕೃತಿ ವಿಕೋಪ ಪರಿಹಾರ ಕಾಯ್ದೆ ಜಾರಿಗೆ ಬಂದ ಮೇಲೆ ಈ ಎರಡು ನಿಧಿಗಳ ಹೆಸರು ಬದಲಾಯಿಸಲಾಗಿದೆ. 

ಸಿಆರ್‌ಎಫ್ ಎನ್ನುವುದು `ರಾಜ್ಯ ಪ್ರಕೃತಿ ವಿಕೋಪ ಪ್ರತಿಕ್ರಿಯೆ ನಿಧಿ` (ಎಸ್‌ಡಿಆರ್‌ಎಫ್) ಮತ್ತು  ಎನ್‌ಸಿಸಿಎಫ್ ಎನ್ನುವುದು `ರಾಷ್ಟ್ರೀಯ ಪ್ರಕೃತಿ ವಿಕೋಪ ಪ್ರತಿಕ್ರಿಯೆ ನಿಧಿ` (ಎನ್‌ಡಿಆರ್‌ಎಫ್) ಆಗಿದೆ. ಹದಿನೈದನೆ ಕೇಂದ್ರ ಹಣಕಾಸು ಆಯೋಗ 2010ರಲ್ಲಿ ಮಾಡಿದ ಈ ಬದಲಾವಣೆಯಿಂದ ಪರಿಹಾರ ನಿಧಿಗಳ ಮೂಲ ರಚನೆ ಮತ್ತು ಉದ್ದೇಶದಲ್ಲಿ ಹೆಚ್ಚು ಬದಲಾವಣೆ ಆಗಿಲ್ಲ.

ಸಿಆರ್‌ಎಫ್‌ನಂತೆ ಎಸ್‌ಡಿಆರ್‌ಎಫ್‌ಗೆ ಕೂಡಾ ಕೇಂದ್ರ ಮತ್ತು ರಾಜ್ಯ ಸರ್ಕಾರ 75:25ರ ಅನುಪಾತದಲ್ಲಿ ಹಣ ನೀಡುತ್ತದೆ. ಐದು ವರ್ಷಗಳ ಅವಧಿಗೆ ಈ ನಿಧಿಯ ಒಟ್ಟು ಮೊತ್ತ ಮತ್ತು ಅದರಿಂದ ಪ್ರತಿಯೊಂದು ರಾಜ್ಯ ಪಡೆಯುವ ಪಾಲನ್ನು ನಿರ್ಧಾರ ಮಾಡುವುದು ಕೂಡಾ ಹಣಕಾಸು ಆಯೋಗ. 

ರಾಜ್ಯಗಳ ಸಾಮಾನ್ಯ ಹವಾಮಾನ, ಭೂಮಿಯ ಫಲವತ್ತತೆ, ಬರಪೀಡಿತ ಪ್ರದೇಶದ ವಿಸ್ತೀರ್ಣ, ಬರದ ಅವಧಿ, ಬರದ ಮರುಕಳಿಕೆಯ ಪ್ರಮಾಣ, ಪ್ರಕೃತಿ ವಿಕೋಪಗಳ ಇತಿಹಾಸ ಮತ್ತು ಇವೆಲ್ಲಕ್ಕಿಂತಲೂ ಮುಖ್ಯವಾಗಿ ಹಿಂದಿನ ಹತ್ತುವರ್ಷಗಳ ಅವಧಿಯಲ್ಲಿ ಪ್ರಕೃತಿ ವಿಕೋಪದ ಪರಿಹಾರಕ್ಕಾಗಿ ಖರ್ಚು ಮಾಡಿರುವ ಹಣ-ಇವೆಲ್ಲವನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ಪಾಲನ್ನು ನಿರ್ಧರಿಸಲಾಗುತ್ತದೆ. ವಿಪತ್ತು ಪರಿಹಾರ ನಿಧಿ ಅಸ್ತಿತ್ವಕ್ಕೆ ಬಂದ ದಿನದಿಂದ ಪಾಲು ಹಂಚಿಕೆಯಲ್ಲಿ ಕರ್ನಾಟಕಕ್ಕೆ  ಅನ್ಯಾಯವಾಗುತ್ತಾ ಬಂದಿದೆ.  

ಹದಿನೈದನೇ ಹಣಕಾಸು ಆಯೋಗ 2010-2015ರ ಐದು ವರ್ಷಗಳ ಅವಧಿಗೆ `ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ`ಗೆ (ಎಸ್‌ಡಿಆರ್‌ಎಫ್) ನಿಗದಿಪಡಿಸಿರುವ ಹಣದ ಒಟ್ಟು ಮೊತ್ತ 33,580 ಕೋಟಿ ರೂಪಾಯಿ. ಇದರಲ್ಲಿ ಕರ್ನಾಟಕಕ್ಕೆ ನಿಗದಿಪಡಿಸಿದ ಪಾಲಿನ ಹಣ ಕೇವಲ 889.41 ಕೋಟಿ ರೂಪಾಯಿ.

 ಈ ಅನ್ಯಾಯ ಇನ್ನಷ್ಟು ಸ್ಪಷ್ಟವಾಗಬೇಕಾದರೆ ಬೇರೆ ರಾಜ್ಯಗಳ ಪಾಲಿನ ಹಣವನ್ನು ತಿಳಿದುಕೊಳ್ಳಬೇಕು. ಒಟ್ಟು ಬರಪೀಡಿತ ಪ್ರದೇಶದ ಲೆಕ್ಕಾಚಾರದಲ್ಲಿ ಮೊದಲೆರಡು ಸ್ಥಾನಗಳಲ್ಲಿರುವುದು ರಾಜಸ್ತಾನ ಮತ್ತು ಕರ್ನಾಟಕ. ವಿಸ್ತೀರ್ಣದಲ್ಲಿ ರಾಜಸ್ತಾನ ದೊಡ್ಡ ರಾಜ್ಯವಾದರೂ ಜನಸಂಖ್ಯೆಯಲ್ಲಿ ಎರಡೂ ರಾಜ್ಯಗಳು ಸಮನಾಗಿವೆ. ಆದರೆ ಎಸ್‌ಡಿಆರ್‌ಎಫ್‌ನಲ್ಲಿ ರಾಜಸ್ತಾನಕ್ಕೆ ನಿಗದಿಪಡಿಸಿರುವ ಪಾಲು 3,319 ಕೋಟಿ ರೂಪಾಯಿ. 

ಜನಸಂಖ್ಯೆ ಮತ್ತು ವಿಸ್ತಿರ್ಣದಲ್ಲಿ ಉಳಿದ ರಾಜ್ಯಗಳಿಗೆ ಹೋಲಿಕೆಯಲ್ಲಿ ಕರ್ನಾಟಕ ಕ್ರಮವಾಗಿ 9 ಮತ್ತು 8ರ ಸ್ಥಾನದಲ್ಲಿದೆ. ಆದರೆ ವಿಸ್ತೀರ್ಣದಲ್ಲಿ ಕರ್ನಾಟಕದ ಅರ್ಧದಷ್ಟೂ ಇರದ, ಜನಸಂಖ್ಯೆಯಲ್ಲಿ ಮೂರನೆ ಎರಡರಷ್ಟಿರುವ ಅಸ್ಸಾಂನ ಪಾಲು 1457.51 ಕೋಟಿ ರೂಪಾಯಿ. ಅಸ್ಸಾಂಗಿಂತಲೂ ಸಣ್ಣ ರಾಜ್ಯವಾದ ಹರಿಯಾಣದ  ಪಾಲು 1,065 ಕೋಟಿ ರೂಪಾಯಿ. 

ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲಿ ಹೆಚ್ಚುಕಡಿಮೆ ಕರ್ನಾಟಕದಷ್ಟೇ ಇರುವ ಮತ್ತು ಅಭಿವೃದ್ದಿ ಹೊಂದಿರುವ ರಾಜ್ಯವೆಂದೇ ಬಿಂಬಿಸಲಾಗುತ್ತಿರುವ ಗುಜರಾತ್‌ನ ಪಾಲು 2,774.54 ಕೋಟಿ ರೂಪಾಯಿ. ಉಳಿದಂತೆ ಎಸ್‌ಡಿಆರ್‌ಎಫ್‌ನಲ್ಲಿ ದೊಡ್ಡ ಪಾಲನ್ನು ಪಡೆದಿರುವ ರಾಜ್ಯಗಳೆಂದರೆ ಆಂಧ್ರಪ್ರದೇಶ (2,811.64 ಕೋಟಿ ರೂಪಾಯಿ), ಒರಿಸ್ಸಾ  (2,163 ಕೋಟಿ ರೂಪಾಯಿ), ತಮಿಳುನಾಡು (1,621.90 ಕೋಟಿ ರೂಪಾಯಿ) ಮೊದಲಾದ ರಾಜ್ಯಗಳು.

ಹಣಕಾಸು ಆಯೋಗ ಸಾಮಾನ್ಯವಾಗಿ ನಿಷ್ಪಕ್ಷಪಾತವಾಗಿ ಹಣ ಹಂಚಿದರೂ ಆ ಕಾಲದ ರಾಜಕೀಯ ಪರಿಸ್ಥಿತಿ, ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳ ಬಲ, ಮುಖ್ಯಮಂತ್ರಿಗಳ ಆಸಕ್ತಿ, ಅಧಿಕಾರಿಗಳ ಕಾರ್ಯಕ್ಷಮತೆ ಮೊದಲಾದ ಅಂಶಗಳ ಪ್ರಭಾವ ಇದ್ದೆ ಇರುತ್ತದೆ. ಇಲ್ಲಿಯೇ ಕರ್ನಾಟಕ ಸೋತುಹೋಗಿರುವುದು. 

ಮೊದಲನೆಯದಾಗಿ, ರಾಷ್ಟ್ರೀಯ ಪಕ್ಷದ ಬಗ್ಗೆಯೇ ಒಲವು ತೋರಿಸುತ್ತಾ ಬಂದಿರುವ ಕರ್ನಾಟಕ ಮೈತ್ರಿಕೂಟದ ರಾಜಕಾರಣದಲ್ಲಿ ದನಿ ಇಲ್ಲದ ದುರ್ಬಲ ರಾಜ್ಯವಾಗಿಯೇ ಉಳಿದುಬಿಟ್ಟಿದೆ. ಎನ್.ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಕಿರುಅವಧಿಯನ್ನು ಹೊರತುಪಡಿಸಿದರೆ ಕಳೆದ ಹದಿಮೂರು ವರ್ಷಗಳಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಆಡಳಿತವನ್ನು ಕರ್ನಾಟಕ ಕಂಡಿಲ್ಲ. 

ಎನ್‌ಡಿಎ ಸರ್ಕಾರಕ್ಕೆ ಬಾಹ್ಯಬೆಂಬಲ ನೀಡುತ್ತಾ, ಅಂತರಂಗದಲ್ಲಿ ಬ್ಲಾಕ್‌ಮೇಲ್ ಮಾಡುತ್ತಾ ಬಂದ ತೆಲುಗುದೇಶಂನ ಆಗಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೂರುವರ್ಷಗಳ ಅವಧಿಯಲ್ಲಿ ವಿವಿಧ ಯೋಜನೆ ಮತ್ತು ನೆರವಿನ ರೂಪದಲ್ಲಿ 27,000 ಕೋಟಿ ರೂಪಾಯಿ ಪಡೆದಿದ್ದರು. 

ತಮಿಳುನಾಡಿನ ಒಂದಲ್ಲ ಒಂದು ಪಕ್ಷ ಕೇಂದ್ರದ ಮೈತ್ರಿಕೂಟದಲ್ಲಿ ಸ್ಥಾನ ಪಡೆಯುತ್ತಾ ಬಂದ ಕಾರಣ ಆ ರಾಜ್ಯಕ್ಕೆ ಕೂಡಾ ಅನ್ಯಾಯವಾಗಿಲ್ಲ. ಆದರೆ ಕರ್ನಾಟಕದ ಭಿಕ್ಷಾಪಾತ್ರೆಗೆ ಕೇಂದ್ರ ಸರ್ಕಾರ ಎಸೆಯುತ್ತಾ ಬಂದದ್ದು ಪುಡಿಗಾಸು ಮಾತ್ರ. ಆದರೆ ಈವರೆಗಿನ ಯಾವ ಮುಖ್ಯಮಂತ್ರಿಯೂ ಈ ಅನ್ಯಾಯವನ್ನು ಬಳಸಿಕೊಂಡು ಕೇಂದ್ರದ ವಿರುದ್ದ ರಾಜಕೀಯ ಹೋರಾಟಕ್ಕೆ ಮುಂದಾಗಲೇ ಇಲ್ಲ.

ಎರಡನೆಯದಾಗಿ ರಾಜ್ಯ ಸರ್ಕಾರದ ನಿರಾಸಕ್ತಿ. ಹಣಕಾಸು ಆಯೋಗ ವರದಿ ತಯಾರಿಸುವ ಮುನ್ನ ರಾಜ್ಯ ಸರ್ಕಾರಗಳ ಜತೆ ಅನೇಕ ಸುತ್ತಿನ ಮಾತುಕತೆ ನಡೆಸುತ್ತದೆ. ಆಂಧ್ರಪ್ರದೇಶ, ಅಸ್ಸಾಂ, ಗುಜರಾತ್, ತಮಿಳುನಾಡು, ಕೇರಳ ರಾಜ್ಯಗಳು ಮೊದಲಿನಿಂದಲೂ ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿ ತಮ್ಮ ರಾಜ್ಯಗಳ ಪ್ರಕೃತಿ ವಿಕೋಪದ ಪರಿಸ್ಥಿತಿಯ ವಿವರ ನೀಡುವುದರ ಜತೆಯಲ್ಲಿ ರಾಜಕೀಯ ಪ್ರಭಾವವನ್ನೂ ಬಳಸಿಕೊಂಡು ತಮ್ಮ ಪಾಲು ಹೆಚ್ಚುಮಾಡಿಕೊಳ್ಳುತ್ತಾ ಬಂದಿವೆ. 

ಈ ರಾಜ್ಯಗಳು ನೀಡಿರುವ ಮನವಿ ಪತ್ರಗಳ ವಿವರಗಳು ಹಣಕಾಸು ಆಯೋಗದ ವರದಿಗಳಲ್ಲಿವೆ. ಆದರೆ, ಅಲ್ಲೆಲ್ಲೂ ಕರ್ನಾಟಕದ ಹೆಸರಿಲ್ಲ. ಅಂತಹ ಯಾವ ಪ್ರಯತ್ನವನ್ನೂ ಕರ್ನಾಟಕ ಇತ್ತೀಚಿನವರೆಗೆ ಮಾಡಿಲ್ಲ. 

ಮೊದಲ ಬಾರಿಗೆ ಹದಿನೈದನೆ ಹಣಕಾಸು ಆಯೋಗದ ಮುಂದೆ ಹಾಜರಾದ ರಾಜ್ಯದ ಕೆಲವು ಅಧಿಕಾರಿಗಳು  ಸ್ವಂತ ಆಸಕ್ತಿ ವಹಿಸಿ ಕರ್ನಾಟಕದ ಪರಿಸ್ಥಿತಿಯನ್ನು ವಿವರಿಸಿದರೂ ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ.

ಒಮ್ಮೆ ಹಣಕಾಸು ಆಯೋಗ `ಎಸ್‌ಡಿಆರ್‌ಎಫ್`ನ ಹಣದ ಪಾಲು ನಿರ್ಧರಿಸಿದ ನಂತರ ಐದು ವರ್ಷಗಳ ಕಾಲ ಅದರಲ್ಲಿ ಬದಲಾವಣೆ ಮಾಡುವಂತಿಲ್ಲ. ವಿಶೇಷ ಸಂದರ್ಭಗಳಲ್ಲಿ ಹೆಚ್ಚುವರಿ ನೆರವನ್ನು `ಎನ್‌ಡಿಆರ್‌ಎಫ್`ನಿಂದ ಮಾತ್ರ ಪಡೆಯಲು ಸಾಧ್ಯ. ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಹಣ, ಈ ನಿಧಿಗೆ ರಾಜ್ಯ ಸರ್ಕಾರ ತನ್ನ ಪಾಲು ಕೊಡಬೇಕಾಗಿಲ್ಲ . 

ಕೇಂದ್ರದ ಗೃಹ, ಕೃಷಿ ಮತ್ತು ಹಣಕಾಸು ಸಚಿವರು ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷರನ್ನೊಳಗೊಂಡ ಉನ್ನತಾಧಿಕಾರದ ತಂಡ  ಮೊದಲು ರಾಜ್ಯ ಸರ್ಕಾರ ಸಲ್ಲಿಸುವ ಮನವಿಪತ್ರವನ್ನು ಪರಿಶೀಲಿಸುತ್ತದೆ. ಅದರ ನಂತರ ಪರಿಸ್ಥಿತಿಯ ಅಧ್ಯಯನಕ್ಕೆ ತಜ್ಞರ ತಂಡವನ್ನು ಕಳುಹಿಸಿ ವರದಿಯನ್ನು ಪಡೆಯುತ್ತದೆ. 

ಅದರ ಆಧಾರದಲ್ಲಿ ಹೆಚ್ಚುವರಿ ನೆರವಿನ ಮೊತ್ತವನ್ನು ನಿರ್ಧರಿಸುತ್ತದೆ. ಕೇಂದ್ರ ಮತ್ತು ರಾಜ್ಯದ ನಡುವೆ ಈಗ ನಡೆಯುತ್ತಿರುವ ಜಟಾಪಟಿ ಈ ಹಣಕ್ಕಾಗಿ. ಕರ್ನಾಟಕ ಇಲ್ಲಿಯೂ ಎಡವಿದೆ. ಬರಪರಿಸ್ಥಿತಿ ನಿರ್ಮಾಣವಾಗಿ ತಿಂಗಳುಗಳೇ ಕಳೆದಿದ್ದರೂ ಮಳೆ ಬೀಳುವ ಹೊತ್ತಿಗೆ ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ದು ನೆರವಿಗಾಗಿ ರಾಜ್ಯಸರ್ಕಾರ ಮನವಿಪತ್ರ ಅರ್ಪಿಸಿದೆ. 

ಇದನ್ನು ಗೃಹಸಚಿವ ಪಿ.ಚಿದಂಬರಂ ಛೇಡಿಸಿಯೂ ಆಗಿದೆ.ಕೇಂದ್ರ ಸರ್ಕಾರದಿಂದ ಹೆಚ್ಚುವರಿ ನೆರವನ್ನು ಪಡೆಯಲು ರಾಜ್ಯಸರ್ಕಾರದ ಜತೆಯಲ್ಲಿ ನಿಂತು ಪ್ರಯತ್ನ ನಡೆಸಬೇಕಾದವರು ಸಂಸತ್ ಸದಸ್ಯರು. ಸದನದ ಒಳಗೆ ಮತ್ತು ಹೊರಗೆ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಆಧಾರ ಸಹಿತವಾಗಿ ಮುಂದಿಟ್ಟು ನ್ಯಾಯ ಪಡೆಯಲು ಸಂಸದರು ನೆರವಾಗಬೇಕು. 

ಆಗಿರುವ ಅನ್ಯಾಯದ ಬಗ್ಗೆಯೇ ಅಜ್ಞಾನಿಗಳಾಗಿರುವವರು ನ್ಯಾಯಕ್ಕಾಗಿ ಹೋರಾಟ ನಡೆಸಲು ಹೇಗೆ ಸಾಧ್ಯ? ಹಾಗಿಲ್ಲದಿದ್ದರೆ ಕೇಂದ್ರ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಒಬ್ಬ ಸಂಸದರಾದರೂ ಬಾಯಿ ಬಿಚ್ಚಬೇಕಿತ್ತಲ್ಲ?

Wednesday, May 23, 2012

ಅರವತ್ತು ತುಂಬಿದೆ ಎಂದು ಸಂಭ್ರಮ ಪಡೋಣವೇ? May 21, 2012

ಮೊದಲ cಯಲ್ಲಿ ಶೇ 58ರಷ್ಟಿದ್ದ ಪದವೀಧರ ಸದಸ್ಯರ ಪ್ರಮಾಣ ಈಗ 79ಕ್ಕೆ ಏರಿದೆ.  ಸ್ನಾತಕೋತ್ತರ ಪದವೀಧರ ಸದಸ್ಯರ ಪ್ರಮಾಣ ಶೇ 18ರಿಂದ 29ಕ್ಕೆ ಹೆಚ್ಚಿದೆ ಮತ್ತು ಕೇವಲ ಏಳನೆ ತರಗತಿವರೆಗೆ ಓದಿದ ಸದಸ್ಯರ ಪ್ರಮಾಣ ಶೇ 52ರಿಂದ 9ಕ್ಕೆ ಇಳಿದಿದೆ. ವಯಸ್ಸಾದವರು ಅನುಭವಿಗಳೂ ಹೌದು ಎನ್ನುವುದಾದರೆ ಲೋಕಸಭೆಯಲ್ಲಿ ಅನುಭವಿಗಳ ಸಂಖ್ಯೆ ಹೆಚ್ಚಾಗಿದೆ.

ಮೊದಲ ಲೋಕಸಭೆಯಲ್ಲಿ 56ಕ್ಕಿಂತ ಹೆಚ್ಚು ವಯಸ್ಸಾದವರ ಪ್ರಮಾಣ ಕೇವಲ ಶೇ 26ರಷ್ಟಿದ್ದರೆ, ಈಗ ಅದು ಶೇ 43ಆಗಿದೆ. 70ಕ್ಕಿಂತ ಹೆಚ್ಚು ವಯಸ್ಸಾದವರ ಪ್ರಮಾಣ ಈಗ ಶೇ 7ರಷ್ಟಿದ್ದರೆ ಮೊದಲ ಲೋಕಸಭೆಯಲ್ಲಿ ಈ ವಯಸ್ಸಿನ ಸದಸ್ಯರೇ ಇರಲಿಲ್ಲ.

ಸಂಸತ್ ಸದಸ್ಯರ `ಹುಡುಗಾಟ` ಕೂಡಾ ಕಡಿಮೆಯಾಗಿದೆ. 40ಕ್ಕಿಂತಲೂ ಕಡಿಮೆ ವಯಸ್ಸಿನ ಸದಸ್ಯರ ಸಂಖ್ಯೆ ಶೇ 26ರಿಂದ 14ಕ್ಕೆ ಇಳಿದಿದೆ. ಮಹಿಳಾ ಮೀಸಲಾತಿ ಜಾರಿಗೆ ಬರದೆ ಇದ್ದರೂ ಲೋಕಸಭೆಯಲ್ಲಿ ಮಹಿಳಾ ಸದಸ್ಯರ ಶೇ 5ರಿಂದ 15ಕ್ಕೆ ಏರಿದೆ.

ನಮ್ಮ ಈಗಿನ ಸಂಸದರು ಮಾಡುತ್ತಿರುವುದು `ಬಿಟ್ಟಿ ಚಾಕರಿ` ಅಲ್ಲ. ಎರಡು ವರ್ಷಗಳ ಹಿಂದೆಯಷ್ಟೆ ಸಂಸದರು ತಮ್ಮ ಸಂಬಳ ಮತ್ತು ಭತ್ಯೆಯನ್ನು 300 ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಈಗ ಅವರು ಪ್ರತಿ ತಿಂಗಳು ಮೂಲವೇತನ, ಕ್ಷೇತ್ರ ಭತ್ಯೆ ಮತ್ತು ಕಚೇರಿ ಭತ್ಯೆ ರೂಪದಲ್ಲಿ 1.40 ಲಕ್ಷ ರೂ ಪಡೆಯುತ್ತಿದ್ದಾರೆ. ಇದರ ಜತೆಗೆ ಅಧಿವೇಶನ ನಡೆಯುವ ದಿನಗಳಲ್ಲಿ ದಿನಭತ್ಯೆ 2000 ರೂ ಪಡೆಯುತ್ತಾರೆ.

ವರ್ಷದಲ್ಲಿ 34 ಬಾರಿ ಉಚಿತ ವಿಮಾನ ಪ್ರಯಾಣ, ಪ್ರಥಮದರ್ಜೆ ರೈಲಿನಲ್ಲಿ ಲೆಕ್ಕವಿಲ್ಲದಷ್ಟು ಸಲ ಉಚಿತ ಪ್ರಯಾಣ, ದೆಹಲಿಯಲ್ಲಿ ಉಚಿತ ವಸತಿ, ಉಚಿತ ವಿದ್ಯುತ್,ನೀರು, ದೂರವಾಣಿ ಮತ್ತು ಇಂಟರ್‌ನೆಟ್ ಸೌಲಭ್ಯ ಪಡೆಯುತ್ತಾರೆ.

ಒಂದು ಅಂದಾಜಿನ ಪ್ರಕಾರ ಸಂಸದರ ಮಾಸಿಕ ಸಂಬಳ,ಭತ್ಯೆ ಮತ್ತು ಸೌಲಭ್ಯಗಳ ಒಟ್ಟು ಖರ್ಚು ತಲಾ 5 ಲಕ್ಷ ರೂಪಾಯಿಗಳಷ್ಟಾಗುತ್ತದೆ. ಸಂಸದ ಬಡ ಭಾರತೀಯನ ದುಬಾರಿ ಪ್ರತಿನಿಧಿ!

 ಕಳೆದ 60 ವರ್ಷಗಳಲ್ಲಿ ಸಂಸದರ ಶಿಕ್ಷಣ ಮತ್ತು ಅನುಭವದ ಮಟ್ಟ ಏರಿರುವುದು ಮಾತ್ರವಲ್ಲ ಸಂಬಳ-ಭತ್ಯೆ ಕೂಡಾ ಹೆಚ್ಚಿದೆ. ಹಾಗಿದ್ದರೆ  ಹಿಂದಿಗಿಂತಲೂ ಹೆಚ್ಚು ಶಿಕ್ಷಿತ ಮತ್ತು ಅನುಭವಿಗಳೂ ಆಗಿರುವ, ಆರ್ಥಿಕ ಭದ್ರತೆ ಪಡೆದಿರುವ ಸದಸ್ಯರ ಕಾಣಿಕೆ ಲೋಕಸಭೆಯ ಕಾರ್ಯನಿರ್ವಹಣೆಯಲ್ಲಿ ಪ್ರತಿಫಲನಗೊಳ್ಳಬೇಕಿತ್ತಲ್ಲವೇ? ಅಲ್ಲಿನ ಚಿತ್ರ ಹೀಗಿದೆ:

1950ರಲ್ಲಿ ಲೋಕಸಭೆಯ ಕಲಾಪ 127 ದಿನ ಮತ್ತು ರಾಜ್ಯಸಭೆಯ ಕಲಾಪ 93 ದಿನ ನಡೆದಿದ್ದರೆ 2011ರಲ್ಲಿ ಎರಡೂ ಸದನಗಳ ಕಲಾಪ ತಲಾ 73ದಿನಗಳಿಗೆ ಇಳಿದಿದೆ. ಮೊದಲ ಲೋಕಸಭೆಯ ಅವಧಿಯಲ್ಲಿ ಪ್ರತಿವರ್ಷ ಸರಾಸರಿ 72 ಮಸೂದೆಗಳಿಗೆ ಅಂಗೀಕಾರ ದೊರೆತಿದ್ದರೆ 15ನೇ ಲೋಕಸಭೆಯಲ್ಲಿ ಇದು 40ಕ್ಕೆ ಇಳಿದಿದೆ.

ಕಳೆದ ಚಳಿಗಾಲದ ಅಧಿವೇಶನದವರೆಗೆ 15ನೇ ಲೋಕಸಭೆ, ನಿಗದಿತ ಸಮಯದ ಕೇವಲ ಶೇಕಡಾ 70ರಷ್ಟು ಭಾಗವನ್ನು ಮಾತ್ರ ಬಳಸಿಕೊಂಡಿದೆ. ಇದು ಕಳೆದ 25 ವರ್ಷಗಳ ಅವಧಿಯಲ್ಲಿ ಅತ್ಯಂತ ಕಡಿಮೆ ಅವಧಿ ಕೆಲಸ ಮಾಡಿರುವ ಲೋಕಸಭೆ.

ಯಾಕೆ ಹೀಗಾಗಿದೆ ಎನ್ನುವುದಕ್ಕೆ ಒಂದಷ್ಟು ಮಾಹಿತಿ; ಹದಿನೈದನೆ ಲೋಕಸಭೆಯ 543 ಸದಸ್ಯರು ಚುನಾವಣೆಗೆ ಸ್ವರ್ಧಿಸುವ ಸಂದರ್ಭದಲ್ಲಿ ಸಲ್ಲಿಸಿರುವ ಸ್ವಪರಿಚಯದ ಪ್ರಮಾಣಪತ್ರಗಳ ಅಧ್ಯಯನ ನಡೆಸಿರುವ `ರಾಷ್ಟ್ರೀಯ ಚುನಾವಣಾ ವೀಕ್ಷಣೆ ಮತ್ತು ಪ್ರಜಾಸತ್ತಾತ್ಮಕ ಸುಧಾರಣೆಯ ಸಂಘಟನೆ`ಯ ವರದಿಯಲ್ಲಿದೆ.

ಇದರ ಪ್ರಕಾರ ಲೋಕಸಭೆಯಲ್ಲಿರುವ 162 ಸದಸ್ಯರ ವಿರುದ್ದ ಕ್ರಿಮಿನಲ್ ಮೊಕದ್ದಮೆಗಳು ವಿಚಾರಣೆಯಲ್ಲಿವೆ. ಇವರಲ್ಲಿ 76 ಸದಸ್ಯರ ವಿರುದ್ಧ ಕೊಲೆ, ಸುಲಿಗೆ, ವಂಚನೆ, ಅತ್ಯಾಚಾರದಂತಹ ಗಂಭೀರ ಸ್ವರೂಪದ ಆರೋಪಗಳಿವೆ.

2004ರ ಲೋಕಸಭೆಯಲ್ಲಿ 128 ಸದಸ್ಯರ ವಿರುದ್ಧ ಮಾತ್ರ ಕ್ರಿಮಿನಲ್ ಆರೋಪಗಳಿದ್ದವು. ಕಳೆದ ಲೋಕಸಭೆಗಿಂತ ಕಳಂಕಿತರ ಪ್ರಮಾಣ ಶೇ 24ರಷ್ಟು ಹೆಚ್ಚಾಗಿದೆ.

ಹತ್ತಕ್ಕಿಂತ ಹೆಚ್ಚು ಲೋಕಸಭಾ ಸದಸ್ಯರನ್ನು ಹೊಂದಿರುವ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಕ್ರಿಮಿನಲ್ ಆರೋಪಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಶಿವಸೇನೆ (ಶೇ 82)ಯಲ್ಲಿ.

ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಸಂಯುಕ್ತ ಜನತಾದಳ (ಶೇ 40), ಸಮಾಜವಾದಿ ಜನತಾಪಕ್ಷ (ಶೇ 39) ಬಿಜೆಪಿ (ಶೇ 38),ಬಿಎಸ್‌ಪಿ (ಶೇ 29)ಡಿಎಂಕೆ  (ಶೇ 22) ಕಾಂಗ್ರೆಸ್ (ಶೇ 21) ಮತ್ತು ಸಿಪಿಎಂ (ಶೇ 19) ಇವೆ. ಆರ್‌ಜೆಡಿಯ ನಾಲ್ವರು ಸದಸ್ಯರಲ್ಲಿ ಮೂರು ಮಂದಿ, ಜೆಡಿ (ಎಸ್)ನ ಮೂವರಲ್ಲಿ ಇಬ್ಬರು, ಎಡಿಎಂಕೆಯ ಒಂಬತ್ತರಲ್ಲಿ ನಾಲ್ವರು ಕ್ರಿಮಿನಲ್ ಆರೋಪಿಗಳು.

ಲೋಕಸಭೆಯ ಕಳಂಕಕ್ಕೆ ದೊಡ್ಡ ಕೊಡುಗೆಯನ್ನು ನೀಡಿರುವುದು ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳು. ಕ್ರಿಮಿನಲ್ ಆರೋಪದ 163 ಸದಸ್ಯರಲ್ಲಿ 75 ಸದಸ್ಯರು ಈ ಮೂರು ರಾಜ್ಯಗಳಿಗೆ ಸೇರಿದವರು. 28 ಸದಸ್ಯರಲ್ಲಿ ಒಂಬತ್ತು ಮಂದಿ ಕ್ರಿಮಿನಲ್ ಆರೋಪಿಗಳನ್ನು ಹೊಂದಿರುವ ಕರ್ನಾಟಕ ಆರನೇ ಸ್ಥಾನದಲ್ಲಿದೆ.
ಹೀಗಿದ್ದರೂ `ಸಂಸದರು ಕೊಲೆಗಡುಕರು` ಎಂದರೆ ಇವರಿಗೆ ಕೋಪ ಉಕ್ಕಿ ಬರುತ್ತದೆ.
ಭಾರತೀಯರ ವಾರ್ಷಿಕ ತಲಾವಾರು ಆದಾಯ 50,000 ರೂಪಾಯಿ.  ಸಂಸತ್ ಎನ್ನುವುದು ಪ್ರಜೆಗಳ ಪ್ರಾತಿನಿಧಿಕ ಸಂಸ್ಥೆ ಎನ್ನುವುದಾದರೆ ಈ ಬಡಭಾರತವನ್ನೇ ಸಂಸತ್ ಪ್ರತಿನಿಧಿಸಬೇಕಲ್ಲವೇ? ಆದರೆ ನಮ್ಮ ಲೋಕಸಭಾ ಸದಸ್ಯರ ಆಸ್ತಿ ವಿವರವನ್ನು ಗಮನಿಸಿದಾಗ ದೇಶದ ತುಂಬಾ ಕೋಟ್ಯಧಿಪತಿಗಳೇ ತುಂಬಿ ತುಳುಕಾಡುತ್ತಿರಬಹುದೆಂಬ ಅಭಿಪ್ರಾಯ ಮೂಡುತ್ತದೆ.
ಹದಿನೈದನೆ ಲೋಕಸಭೆಯಲ್ಲಿರುವ ಕೋಟ್ಯಧಿಪತಿಗಳ ಸಂಖ್ಯೆ 315. ಸದಸ್ಯರ ಸರಾಸರಿ ವಾರ್ಷಿಕ ಆದಾಯ 5.33 ಕೋಟಿ ರೂ. ಹಿಂದಿನ ಲೋಕಸಭೆಯಲ್ಲಿ ಈ ಸಂಖ್ಯೆ 156 ಮತ್ತು ಸರಾಸರಿ ಆದಾಯ 1.86 ಕೋಟಿ ರೂ ಆಗಿತ್ತು. ಅಂದರೆ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಶೇ 102ರಷ್ಟು ಮತ್ತು ಸರಾಸರಿ ಆದಾಯದಲ್ಲಿ ಶೇ 186ರಷ್ಟು ಹೆಚ್ಚಳವಾಗಿದೆ.

ಅತಿ ಹೆಚ್ಚಿನ ಕೋಟ್ಯಧಿಪತಿಗಳಿರುವುದು ಶಿವಸೇನೆ (ಶೇ 82) ನಂತರದ ಸ್ಥಾನಗಳಲ್ಲಿ ಕ್ರಮವಾಗಿಯಲ್ಲಿ  ಡಿಎಂಕೆ (ಶೇ 72) ಕಾಂಗ್ರೆಸ್ (ಶೇ 71) ಬಿಜೆಪಿ (ಶೇ 51), ಬಿಎಸ್‌ಪಿ (ಶೇ 62), ಎಸ್‌ಪಿ (ಶೇ 61) ಬಿಜೆಡಿ (ಶೇ 43), ಸಂಯುಕ್ತ ಜನತಾದಳ (ಶೇ 40) ಮತ್ತು ತೃಣಮೂಲ ಕಾಂಗ್ರೆಸ್ ( ಶೇ 37) ಇವೆ. ಸಿಪಿಎಂನ ಹದಿನಾರು ಸದಸ್ಯರಲ್ಲಿ ಒಬ್ಬರು ಮಾತ್ರ ಕೋಟ್ಯಧಿಪತಿ.

ಇಂತಹ ಸಂಸತ್‌ಗೆ ಅರವತ್ತು ತುಂಬಿದ್ದಕ್ಕಾಗಿ ಸಂಭ್ರಮಪಡೋಣವೇ? ಇದು ನಮ್ಮ ರಾಷ್ಟ್ರ ನಿರ್ಮಾಪಕರು ಕನಸು ಕಂಡಿದ್ದ ಸಂಸತ್ ಖಂಡಿತಾ ಆಗಿರಲಾರದು. ಸಂಸತ್ ಎಂದರೆ ಕೇವಲ ಕಲ್ಲು-ಇಟ್ಟಿಗೆಗಳ ಸ್ಥಾವರ ಅಲ್ಲ. ಅದು ದೇಶದ ಸಾರ್ವಭೌಮತೆಯ ಸಂಕಲ್ಪದ ಪ್ರಾತಿನಿಧಿಕ ಸ್ವರೂಪ. ಚುನಾಯಿತ ಪ್ರತಿನಿಧಿಗಳ ಮೂಲಕ ಜನತೆ ಸಂಸದೀಯ ವ್ಯವಸ್ಥೆಯಲ್ಲಿ ಭಾಗವಹಿಸುವ ಒಂದು ಅನನ್ಯ ವ್ಯವಸ್ಥೆ.

ಹಾಗಿದೆಯೇ  ನಮ್ಮ ಸಂಸತ್? ಹಾಗಿದ್ದಾರೆಯೇ ನಮ್ಮ ಸಂಸದರು? ಕೊಲೆ,ಸುಲಿಗೆ,ಅತ್ಯಾಚಾರದ ಆರೋಪಿಗಳು ಮಾತ್ರವಲ್ಲ, ಸದನದೊಳಗೆ ಮತ ಚಲಾಯಿಸಲು ತಮ್ಮನ್ನು ಮಾರಿಕೊಂಡವರು, ಪ್ರಶ್ನೆ ಕೇಳಲು ದುಡ್ಡು ಪಡೆದವರು, ಕ್ಷೇತ್ರಾಭಿವೃದ್ದಿ ನಿಧಿಯ ಹಣವನ್ನೇ ನುಂಗಿ ಹಾಕಿದವರು, ತಮ್ಮ ಉದ್ಯಮದ ಹಿತಾಸಕ್ತಿ ರಕ್ಷಣೆಗಾಗಿ ಸ್ಥಾನವನ್ನು ದುರುಪಯೋಗಪಡಿಸಿಕೊಂಡವರು, ...ಹೀಗೆ `ವರ್ಣರಂಜಿತ ಕಳಂಕಿತರು` ಸಂಸತ್‌ನೊಳಗೆ ವಿರಾಜಮಾನರಾಗಿದ್ದಾರೆ!

 ಇವೆಲ್ಲ ಇತ್ತೀಚಿನ ವಿದ್ಯಮಾನಗಳಲ್ಲ. ಕಳಂಕಿತ ಸದಸ್ಯರ ಸಂಖ್ಯೆ ಮತ್ತು ದುವರ್ತನೆಯ ಪ್ರಮಾಣವಷ್ಟೇ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಾ ಬಂದಿದೆ. ಮೊದಲ ಲೋಕಸಭೆಯಲ್ಲಿಯೇ ಬಾಂಬೆ ಬುಲಿಯನ್ ಅಸೋಸಿಯೇಷನ್ ಪರವಾಗಿ ಸಂಸತ್‌ನಲ್ಲಿ ಪ್ರಚಾರ ನಡೆಸಲು ಸದಸ್ಯ ಎಚ್.ಜಿ.ಮುದಗಲ್ ಅವರು ಆರ್ಥಿಕ ಲಾಭ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಅದರ ತನಿಖೆಗಾಗಿ ಪ್ರಧಾನಿ ಜವಾಹರಲಾಲ್ ನೆಹರೂ ನೇಮಿಸಿದ್ದ ಟಿ.ಟಿ.ಕೃಷ್ಣಮಾಚಾರಿ ನೇತೃತ್ವದ ಸಮಿತಿ ಮುದಗಲ್ ಅವರನ್ನು ದೋಷಿ ಎಂದು ತೀರ್ಮಾನಿಸಿದ್ದ ಕಾರಣ ಮುದಗಲ್ ಅವರನ್ನು ಸದನದಿಂದ ಹೊರಹಾಕಲಾಗಿತ್ತು. ಆ ಸಮಿತಿಯಲ್ಲಿದ್ದ ಸದಸ್ಯೆ ದುರ್ಗಾಬಾಯಿ ಸಂಸತ್ ಸದಸ್ಯರಿಗಾಗಿ ಆಚಾರ ಸಂಹಿತೆಯ ಹನ್ನೆರಡು ಸೂತ್ರಗಳನ್ನು ರಚಿಸಿದ್ದರು.

ನಂತರದ ದಿನಗಳಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳ ಅಧ್ಯಕ್ಷರ ಎಪ್ಪತ್ತಾರು ಸಮ್ಮೇಳನಗಳು ನಡೆದಿವೆ. ಅವು ನೂರಾರು ಗೊತ್ತುವಳಿಗಳನ್ನು ಅಂಗೀಕರಿಸಿವೆ. ಸ್ವಾತಂತ್ರ್ಯದ ಸ್ವರ್ಣಮಹೋತ್ಸವದ ಸಂದರ್ಭದಲ್ಲಿ ಕರೆಯಲಾದ ವಿಶೇಷ ಅಧಿವೇಶನ ಸಂಸತ್‌ನ ಘನತೆ ಮತ್ತು ಗೌರವದ ರಕ್ಷಣೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ನಿರ್ಣಯಗಳನ್ನು ಕೈಗೊಂಡಿತ್ತು.

 2001ರಲ್ಲಿ ಆಗಿನ ಲೋಕಸಭಾಧ್ಯಕ್ಷ ಜಿ.ಎಂ.ಸಿ.ಬಾಲಯೋಗಿ ಅವರ ಅಧ್ಯಕತೆಯಲ್ಲಿ ನಡೆದ ಸಭಾಧ್ಯಕ್ಷರ ಸಮ್ಮೇಳನ ಆಚಾರಸಂಹಿತೆ ರಚನೆಯ ಜತೆಗೆ ಅದರ ಅನುಷ್ಠಾನಕ್ಕೆ ನಿಯಮಾವಳಿಗಳಲ್ಲಿ ತಿದ್ದುಪಡಿ, ಸದಸ್ಯರ ಹಕ್ಕು ಸಮಿತಿಯನ್ನು ಹಕ್ಕು ಮತ್ತು ನೀತಿ ಸಮಿತಿಯಾಗಿ ಪುನರ‌್ರಚನೆ, ಸಂಸದರ ನಡವಳಿಕೆಗಳ ಬಗ್ಗೆ ಮತದಾರರು ನೀಡುವ ದೂರು ಪರಿಶೀಲಿಸಲು ಆ ಸಮಿತಿಗೆ ಅಧಿಕಾರ-ಇವೇ ಮೊದಲಾದ ಗೊತ್ತುವಳಿಗಳನ್ನು ಅಂಗೀಕರಿಸಿತ್ತು.

ಸದನದ `ಬಾವಿ`ಯೊಳಗೆ ನುಗ್ಗಿ `ಪುಂಡಾಟ` ನಡೆಸುವ ಸದಸ್ಯರನ್ನು ಅಮಾನತುಗೊಳಿಸುವುದರಿಂದ ಹಿಡಿದು, ವರ್ಷಕ್ಕೆ ಕನಿಷ್ಠ 100 ದಿನಗಳ ಕಲಾಪ ನಡೆಸುವುದನ್ನು ಕಡ್ಡಾಯಗೊಳಿಸುವವರೆಗೆ ಹಲವಾರು ಸುಧಾರಣಾ ಕ್ರಮಗಳ ಬಗ್ಗೆ ಕಳೆದ 60 ವರ್ಷಗಳಿಂದ ಸದಸ್ಯರು ಚರ್ಚೆ ನಡೆಸಿದ್ದಾರೆ. ಯಾವ ಗೊತ್ತುವಳಿಗಳಾಗಲಿ, ನೀತಿ ಸಂಹಿತೆಯಾಗಲಿ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ.

ಸುಪ್ರೀಂಕೋರ್ಟ್ ಬೆನ್ನುಹತ್ತಿದ್ದ ಕಾರಣಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಅನಿವಾರ್ಯವಾಗಿ ಅಪರಾಧಗಳ ಹಿನ್ನೆಲೆ, ಆಸ್ತಿ ಮತ್ತು ಶಿಕ್ಷಣದ ವಿವರಗಳನ್ನೊಳಗೊಂಡ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗಿದೆ. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮಕೈಗೊಳ್ಳುವ ವ್ಯವಸ್ಥೆ ಮಾತ್ರ ಇನ್ನೂ ಬಂದಿಲ್ಲ.

ತಮ್ಮ ಸಂಬಳ-ಭತ್ಯೆ ಏರಿಕೆ ಮಸೂದೆಯ ಬಗ್ಗೆ ಚರ್ಚೆಯನ್ನೇ ನಡೆಸದೆ ಅದಕ್ಕೆ ಕ್ಷಣಾರ್ಧದಲ್ಲಿ ಅಂಗೀಕಾರ ನೀಡಲು ಒಂದಿಷ್ಟೂ ನಾಚಿಕೆ ಪಟ್ಟುಕೊಳ್ಳದ ಸಂಸದರು, ದಾರಿ ತಪ್ಪುತ್ತಿರುವ ಸದಸ್ಯರಿಗೆ ಕಡಿವಾಣ ಹಾಕುವ ಕ್ರಮಗಳಿಗೆ ಕಾನೂನಿನ ರೂಪಕೊಡಲು ಒಪ್ಪುತ್ತಿಲ್ಲ. ಇವೆಲ್ಲವನ್ನೂ `ಸ್ವಯಂ ನಿಯಂತ್ರಣ`ದ ಮೂಲಕವೇ ಸಾಧಿಸಬೇಕು ಎನ್ನುತ್ತಾರೆ ಅವರು.

ಸ್ವಯಂ ನಿಯಂತ್ರಣ ಎಂದರೆ ನಿಯಂತ್ರಣವೇ ಇಲ್ಲ ಎನ್ನುವುದು ಎಲ್ಲ ಕ್ಷೇತ್ರಗಳಲ್ಲಿನ  ಇಲ್ಲಿಯವರೆಗಿನ ಅನುಭವ. ಉಳಿದಿರುವುದು ಒಂದೇ ದಾರಿ ಮತದಾರರಾಗಿರುವ ಜನತೆಯೇ ತಮ್ಮ ಪ್ರತಿನಿಧಿಗಳನ್ನು ನಿಯಂತ್ರಿಸುವುದು. ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಇದೂ ಅಸಾಧ್ಯ.

ಸಾಧ್ಯವಾಗಬೇಕಾದರೆ ಜಾತಿ, ದುಡ್ಡು ಮತ್ತು ತೋಳ್ಬಲಗಳ ನಿಯಂತ್ರಣದಿಂದ ಚುನಾವಣಾ ವ್ಯವಸ್ಥೆಯನ್ನು ಬಿಡುಗಡೆಗೊಳಿಸಬೇಕು. ಇದಕ್ಕಾಗಿ ನೆನೆಗುದಿಗೆ ಬಿದ್ದಿರುವ ಚುನಾವಣಾ ಸುಧಾರಣೆಯ ಪ್ರಸ್ತಾವಗಳನ್ನು ಅನುಷ್ಠಾನಕ್ಕೆ ತರಬೇಕು.

ಇದಕ್ಕೆ ಸಂಸದರು ಅವಕಾಶ ಮಾಡಿಕೊಡಬೇಕಲ್ಲ? ಎಂತಹ ವಿಷವರ್ತುಲದಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ ನಾವು. ಇದಕ್ಕಾಗಿಯೇ ಇರಬೇಕು, `ಪ್ರಜೆಗಳು ತಮ್ಮ ಅರ್ಹತೆಗೆ ತಕ್ಕ ಸರ್ಕಾರವನ್ನು ಪಡೆಯುತ್ತಾರೆ` ಎನ್ನುವುದು.