Tuesday, May 1, 2012

ಕಮರಿಹೋದ ಅಣ್ಣಾ ಚಳವಳಿ ಎಂಬ ಕನಸು April 09, 2012


ಭ್ರಷ್ಟಾಚಾರ ವಿರೋಧಿಸಿ ನಡೆದ ದೇಶದ ಮೂರನೇ ಹೋರಾಟದ ಗರ್ಭಪಾತವಾಗಿದೆ. ಎಪ್ಪತ್ತರ ದಶಕದ ಪ್ರಾರಂಭದಲ್ಲಿ ಜಯಪ್ರಕಾಶ್ ನಾರಾಯಣ್ ಮತ್ತು ಎಂಬತ್ತರ ದಶಕದ ಕೊನೆಯ ಭಾಗದಲ್ಲಿ ವಿಶ್ವನಾಥ್ ಪ್ರತಾಪ್ ಸಿಂಗ್ ನೇತೃತ್ವದಲ್ಲಿ ನಡೆದ ಚಳವಳಿಗಳು ಕೂಡಾ  ಭ್ರಷ್ಟಾಚಾರ ನಿರ್ಮೂಲನೆಯ ಗುರಿಯನ್ನೇ ಹೊಂದಿದ್ದವು.

ಆ ಎರಡೂ ಚಳವಳಿಗಳು ಅಂತಿಮವಾಗಿ ಚುನಾವಣೆಯಲ್ಲಿ ಭ್ರಷ್ಟರ ಸೋಲಿನ ಮೂಲಕ ಸತ್ತೆಯ ಬದಲಾವಣೆಯಲ್ಲಿ ಕೊನೆಗೊಂಡಿದ್ದವು. ತನ್ನ ನೇತೃತ್ವದ ಚಳವಳಿಗೆ ವರ್ಷ ತುಂಬಿದ ಸಂದರ್ಭದಲ್ಲಿ ಮಾತನಾಡಿರುವ ಅಣ್ಣಾ ಹಜಾರೆ ಅವರೂ ಮುಂದಿನ ಲೋಕಸಭಾ ಚುನಾವಣೆಯ ಕಾಲದಲ್ಲಿ ನಿರ್ಣಾಯಕ ಹೋರಾಟ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.

ಆದರೆ, ಹಿಂದಿನ ಎರಡು ಭ್ರಷ್ಟಾಚಾರ ವಿರೋಧಿ ಚಳವಳಿಗಳ ಜತೆ ಕೆಲವು ಅತ್ಯುತ್ಸಾಹಿಗಳು ಹೋಲಿಸುತ್ತಾ ಬಂದ ಅಣ್ಣಾ ಹಜಾರೆ ಚಳವಳಿ ಮುಂದೆ ಹೆಜ್ಜೆ ಇಡಲಾಗದೆ ನಡು ಹಾದಿಯಲ್ಲಿಯೇ ಏದುಸಿರು ಬಿಡುತ್ತಿರುವುದನ್ನು ನೋಡಿದರೆ ಬಹಳ ದೂರ ಸಾಗುವ ಸಾಧ್ಯತೆಗಳು ಕಾಣುತ್ತಿಲ್ಲ.

ಕಳೆದ ವರ್ಷದ ಏಪ್ರಿಲ್ ಐದರಂದು ದೇಶಕ್ಕೆ ಅಷ್ಟೇನೂ ಪರಿಚಿತರಲ್ಲದ ಅಣ್ಣಾ ಹಜಾರೆ ಅವರು ದೆಹಲಿಯ ಜಂತರ್ ಮಂತರ್ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದಾಗ ಹರಿದುಬಂದ ಜನಬೆಂಬಲವನ್ನು ಮುಗ್ಧ ಕಣ್ಣುಗಳಿಂದ ನೋಡಿದವರಲ್ಲಿ ಹೆಚ್ಚಿನವರು ಆಗಲೇ ಲೋಕಪಾಲರ ನೇಮಕವಾಗಿಯೇ ಬಿಟ್ಟಿತು ಎಂಬ ಸಂಭ್ರಮದಲ್ಲಿದ್ದರು.

ಒಂದು ವರ್ಷ ಕಳೆದ ಮೇಲೂ ಲೋಕಪಾಲರ ನೇಮಕದ ಮಸೂದೆಯನ್ನು ಸಂಸತ್ ಅಂಗೀಕರಿಸಿಲ್ಲ, ಅದಕ್ಕೆ ಅಂಗೀಕಾರ ದೊರೆಯುವ ಭರವಸೆಯೂ ಇಲ್ಲ. ಸದ್ಯಕ್ಕೆ ಇದು ಮುಗಿದ ಅಧ್ಯಾಯ.

ಇದನ್ನು ಇನ್ನೊಂದು `ಸ್ವಾತಂತ್ರ್ಯ ಹೋರಾಟ` ಎಂದು ಬಣ್ಣಿಸುತ್ತಾ ಅರಬ್ ರಾಷ್ಟ್ರಗಳಲ್ಲಿ ನಡೆದ ಕ್ರಾಂತಿ ಇಲ್ಲಿಯೂ ನಡೆದೇ ಬಿಟ್ಟಿತು ಎಂಬ ಭ್ರಮೆಯನ್ನು ಸೃಷ್ಟಿಸಿದ್ದ ಮಾಧ್ಯಮಗಳು, ಮುಖ್ಯವಾಗಿ ಟಿವಿ ಚಾನೆಲ್‌ಗಳು, ಕೂಡಾ ಅಣ್ಣಾಹಜಾರೆ ಚಳವಳಿಯನ್ನು ಮರೆತುಬಿಟ್ಟಿವೆ. ವರ್ಷದ ಹಿಂದೆ ಹರಿದು ಬಂದ ಜನಸಾಗರ ಈಗ ಬೇಸಿಗೆಯ ಕಾಲದ ನದಿಯಂತಾಗಿದೆ.

ಅಣ್ಣಾ ಹಜಾರೆ ಉಪವಾಸ ಕೂತರೆ ಜಂತರ್‌ಮಂತರ್ ಮುಂದೆಯೇ ಜನಸೇರುತ್ತಿಲ್ಲ, ರಾಮಲೀಲಾ ಮೈದಾನವನ್ನು ತುಂಬುವುದು ಇನ್ನೂ ಕಷ್ಟ. ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿದ್ದವರು ಆಗಲೇ ಮೌನವಾಗಿದ್ದಾರೆ.

ಇವೆಲ್ಲವನ್ನೂ ನೋಡಿಯೋ ಏನೋ, ತಮ್ಮ ಬೇಡಿಕೆ ಈಡೇರಿಕೆಗೆ `ಒಂದು ದಿನ ಇಲ್ಲವೇ ಒಂದು ಗಂಟೆಯನ್ನೂ ಕೊಡಲಾರೆ` ಎಂದು ಗುಡುಗುತ್ತಿದ್ದ ಅಣ್ಣಾ ಹಜಾರೆ ಅವರು ಈಗ ಒಂದೂವರೆ ವರ್ಷಗಳ ದೀರ್ಘ ಗಡುವನ್ನು ನೀಡಿದ್ದಾರೆ.

ಜೆ.ಪಿ. ಮತ್ತು ವಿ.ಪಿ. ನೇತೃತ್ವದ ಚಳವಳಿಗಳ ಹರಹು ಮತ್ತು ತೀವ್ರತೆ ಗುರಿ ಮುಟ್ಟುವವರೆಗೆ ಹೆಚ್ಚಾಗುತ್ತಾ ಹೋಗಿತ್ತೇ ಹೊರತು ಕಡಿಮೆಯಾಗಿರಲಿಲ್ಲ. ಆದರೆ, ಅಣ್ಣಾ ಚಳವಳಿ ನಡುಹಾದಿಯಲ್ಲಿಯೇ ಸೊರಗಿಹೋಗುತ್ತಿದೆ. ಒಂದು ಚಳವಳಿಯ ಸೋಲು-ಗೆಲುವು ಅದರ ಉದ್ದೇಶ, ಸಂಘಟನೆಯ ಬಲ ಮತ್ತು ಹೋರಾಟದ ದಾರಿಯನ್ನು ಅವಲಂಬಿಸಿರುತ್ತದೆ.

ಭ್ರಷ್ಟಾಚಾರದ ನಿರ್ಮೂಲನೆಯ ಬಗ್ಗೆ ಅಣ್ಣಾ ಮತ್ತು ಅವರ ತಂಡದ ಸದಸ್ಯರು ಎಷ್ಟೇ ಭಾಷಣ ಮಾಡಿದರೂ ಉದ್ದೇಶವನ್ನು ಮಾತ್ರ ಲೋಕಪಾಲರ ನೇಮಕಕ್ಕೆ ಸೀಮಿತಗೊಳಿಸುತ್ತಾ ಬಂದಿದ್ದಾರೆ.

ಬಹುಮುಖ್ಯವಾದ ಚುನಾವಣಾ ಸುಧಾರಣೆ ಬಗ್ಗೆಯೂ ಅವರು ಹೆಚ್ಚು ಮಾತನಾಡುತ್ತಿಲ್ಲ. ಲೋಕಪಾಲರ ನೇಮಕವಾದ ಕೂಡಲೇ ಸಾರ್ವಜನಿಕ ಜೀವನದಲ್ಲಿರುವ ಭ್ರಷ್ಟಾಚಾರ ನಿರ್ಮೂಲನೆಯಾಗಿ ಬಿಡುತ್ತದೆ ಎಂಬ ಭ್ರಮೆ ಅವರಿಗೂ ಇರಲಾರದು. ಆದರೆ ಅವರ ಮಾತುಗಳು ಮಾತ್ರ ಆ ಭ್ರಮೆಯನ್ನು ಹುಟ್ಟಿಸುವ ರೀತಿಯಲ್ಲಿಯೇ ಇವೆ. ಇದು ಬಹಳ ಸರಳೀಕೃತ ಅಭಿಪ್ರಾಯ.

ತಾವು ತಿಳಿದುಕೊಂಡಿರುವ ಭ್ರಷ್ಟಾಚಾರದ ಅರ್ಥ ಏನು ಎಂಬುದನ್ನು ಅಣ್ಣಾ ತಂಡ ಈ ವರೆಗೆ ಬಿಡಿಸಿ ಹೇಳಿಲ್ಲ. ಭ್ರಷ್ಟಾಚಾರ ಎಂದರೆ ಕೇವಲ ಸಾರ್ವಜನಿಕ ಹಣದ ದುರುಪಯೋಗ ಇಲ್ಲವೇ ಹಣದ ಸೋರಿಕೆ ಮಾತ್ರವೇ? ತಾಲ್ಲೂಕು ಕಚೇರಿಯ ಗುಮಾಸ್ತ ಪಡೆಯುವ ಲಂಚ ಮತ್ತು  ರಕ್ಷಣಾ ಸಾಮಗ್ರಿಗಳ ಖರೀದಿಯಲ್ಲಿ ದಲ್ಲಾಳಿಗಳಿಂದ ಪಡೆಯುವ ಕಮಿಷನ್ ಎರಡನ್ನೂ ಒಂದೇ ಗುಂಪಿನಲ್ಲಿ ಸೇರಿಸಬಹುದೇ?

ಅಧಿಕಾರದ ದುರುಪಯೋಗ, ಸ್ವಜನ ಪಕ್ಷಪಾತ ಮತ್ತು ವಶೀಲಿ ಕೂಡಾ ಭ್ರಷ್ಟಾಚಾರದ ವ್ಯಾಪ್ತಿಗೆ ಬರುತ್ತವೆಯೇ? ಅಧಿಕಾರದ ದುರುಪಯೋಗವೂ ಭ್ರಷ್ಟಾಚಾರದ ವ್ಯಾಖ್ಯೆಯಲ್ಲಿ ಸೇರಿಕೊಳ್ಳುವುದಿದ್ದರೆ ಯಾವ ಅಧಿಕಾರ? ರಾಜಕಾರಣದ ಮೂಲಕ ಗಳಿಸಿದ್ದೇ ಇಲ್ಲವೇ ಶ್ರೇಣಿಕೃತ ಸಮಾಜ ಮತ್ತು ಆರ್ಥಿಕ ಅಸಮಾನತೆಯ ವ್ಯವಸ್ಥೆಯ ನೆರವಿನಿಂದ ಪಡೆದುಕೊಂಡದ್ದೇ?

ಭ್ರಷ್ಟಾಚಾರವನ್ನು ಕೇವಲ ಕಾನೂನಿನ ಮೂಲಕ ವ್ಯಾಖ್ಯಾನಿಸುವುದು ಸರಿಯೇ? ಅದನ್ನು ನೈತಿಕ ದೃಷ್ಟಿಯಿಂದಲೂ ನೋಡುವುದು ಬೇಡವೇ?- ಈ ಪ್ರಶ್ನೆಗಳಿಗೆ ಅಣ್ಣಾ ತಂಡದ ಸದಸ್ಯರಲ್ಲಿ ಉತ್ತರ ಇಲ್ಲ, ಹುಡುಕಲು ಹೋದರೆ ಸಿಗುವ ಉತ್ತರ ಚಳವಳಿಗೆ ಇನ್ನಷ್ಟು ಮುಜುಗರ ಉಂಟುಮಾಡಬಹುದು.

ಇದಕ್ಕಾಗಿ `ಮೊದಲು ಲೋಕಪಾಲರು ಬರಲಿ` ಎಂಬ ಮಂತ್ರವನ್ನಷ್ಟೇ ಅವರು ಪಠಿಸುತ್ತಿದ್ದಾರೆ. ಬಹುಮುಖಗಳ ರಕ್ಕಸನಂತೆ ಬೆಳೆಯುತ್ತಿರುವ ಭ್ರಷ್ಟಾಚಾರವನ್ನು ಕೇವಲ ಲೋಕಪಾಲರ ನೇಮಕದಿಂದ ನಾಶಮಾಡಬಹುದೆಂದು ಅಣ್ಣಾ ತಂಡ ಈಗಲೂ ತಿಳಿದುಕೊಂಡಿರುವುದೇ ಅವರ ಕಾಲಿನಡಿಯ ನೆಲ ಕುಸಿಯುತ್ತಿರುವುದಕ್ಕೆ ಕಾರಣ.

ಇನ್ನು ಸಂಘಟನೆ. ಚಳವಳಿಗೆ ಅಗತ್ಯವಾದ ಸಂಘಟನೆಯನ್ನು ಕಟ್ಟುವುದರಲ್ಲಿಯೂ ಅಣ್ಣಾ ತಂಡ ಸೋತಿದೆ. ಜಯಪ್ರಕಾಶ್ ನಾರಾಯಣ್ ಅವರ ಹೆಸರಿನ ಜತೆ ಸೇರಿಕೊಂಡಿರುವ ಎಪ್ಪತ್ತರ ದಶಕದ ನವನಿರ್ಮಾಣ ಚಳವಳಿ ಅವರಿಂದಲೇ ಪ್ರಾರಂಭವಾದುದಲ್ಲ. ಅದು ಭ್ರಷ್ಟಾಚಾರ ಇಲ್ಲವೇ ಸರ್ವಾಧಿಕಾರದ ವಿರುದ್ಧದ ಹೋರಾಟ ಆಗಿಯೂ ಪ್ರಾರಂಭವಾಗಿರಲಿಲ್ಲ.

ಅಹ್ಮದಾಬಾದ್‌ನ ಎಲ್.ಡಿ.ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಟೀನ್ ಬಿಲ್ ಹೆಚ್ಚಳದ ವಿರುದ್ದ 1973ರ ಡಿಸೆಂಬರ್‌ನಲ್ಲಿ ಪ್ರಾರಂಭಿಸಿದ ಸಣ್ಣಮಟ್ಟದ ಪ್ರತಿಭಟನೆ ಬೆಳೆಯುತ್ತಾ ಹೋಗಿ ನಂತರದ ದಿನಗಳಲ್ಲಿ ಸ್ವತಂತ್ರಭಾರತದ ಅತ್ಯಂತ ಬಲಿಷ್ಠ ರಾಜಕೀಯ ನಾಯಕಿ ಅಧಿಕಾರ ಕಳೆದುಕೊಳ್ಳುವುದಕ್ಕೆ ಕಾರಣವಾಯಿತು.

ಅಣ್ಣಾ ತಂಡದ ರೀತಿಯಲ್ಲಿ ಅಹ್ಮದಾಬಾದ್‌ನ ವಿದ್ಯಾರ್ಥಿಗಳಿಗೂ ತಮ್ಮ ಹೋರಾಟಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು. ಎಳೆಯರಾದರೂ ಪರಿಸ್ಥಿತಿಯನ್ನು ಬಹುಬೇಗ ಅರ್ಥಮಾಡಿಕೊಂಡ ವಿದ್ಯಾರ್ಥಿ ನಾಯಕರು ಒಂದೇ ತಿಂಗಳ ಅವಧಿಯಲ್ಲಿ ತಮ್ಮ ಹೋರಾಟಕ್ಕೆ ಸಾರ್ವಜನಿಕವಾದ ರೂಪ ಕೊಟ್ಟರು.

1973ರ ಜನವರಿಯಲ್ಲಿ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಅಹ್ಮದಾಬಾದ್ ಬಂದ್‌ಗೆ ಕರೆಕೊಟ್ಟಾಗ ಅವರ ಮುಖ್ಯ ಘೋಷಣೆ ಬೆಲೆ ಏರಿಕೆ ವಿರುದ್ಧವಾಗಿತ್ತು, ಕ್ಯಾಂಟೀನ್ ಬಿಲ್ ಹೆಚ್ಚಳದ ವಿರುದ್ಧದ ಪ್ರತಿಭಟನೆ ನೇಪಥ್ಯಕ್ಕೆ ಸರಿದುಹೋಗಿತ್ತು.

ಎಪ್ಪತ್ತರ ದಶಕದ ಸಮಾಜ ಭ್ರಷ್ಟಾಚಾರ, ಬೆಲೆ ಏರಿಕೆ, ಆಹಾರ ಸಾಮಗ್ರಿಗಳ ಕೊರತೆ, ಸರ್ಕಾರಿ ನೌಕರರ ಸಂಬಳದ ಮೇಲೆ ಮಿತಿ ಹೇರಿಕೆ ಮೊದಲಾದ ಕಾರಣಗದಾಗಿ ಒಳಗಿಂದೊಳಗೆ ಕುದಿಯುತ್ತಿತ್ತು. ಅದು ಸಿಡಿಯಲು ಬೇಕಾದ ದಾರಿಯನ್ನಷ್ಟೇ ನವನಿರ್ಮಾಣ ಚಳವಳಿ ಮಾಡಿಕೊಟ್ಟಿತ್ತು.

ಅಣ್ಣಾ ಹಜಾರೆ ಉಪವಾಸ ಪ್ರಾರಂಭಿಸಿದಾಗ ದೇಶದಲ್ಲಿ ಎಪ್ಪತ್ತರ ದಶಕದ ಪರಿಸ್ಥಿತಿಯೇ ಇತ್ತು, ಈಗಲೂ ಇದೆ. ಒಂದಾದ ಮೇಲೆ ಒಂದರಂತೆ ಭ್ರಷ್ಟಾಚಾರದ ಹಗರಣಗಳು ಬಯಲಾಗತೊಡಗಿವೆ, ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿಹೋಗಿದ್ದಾರೆ, ಉದ್ಯೋಗದ ಅವಕಾಶಗಳು ಕಡಿಮೆಯಾಗತೊಡಗಿವೆ.

ಜನ ಎದುರಿಸುತ್ತಿರುವ ಈ ಎಲ್ಲ ಸಮಸ್ಯೆಗಳ ಗಂಗೋತ್ರಿ ಭ್ರಷ್ಟಾಚಾರದಲ್ಲಿಯೇ ಇದೆ. ಆದ್ದರಿಂದಲೇ ಅಣ್ಣಾ ಹಜಾರೆ ಚಳವಳಿಗೆ ಜನ ಪ್ರಾಮಾಣಿಕವಾಗಿಯೇ ಸ್ಪಂದಿಸಿದ್ದರು. ಆದರೆ, ಅದನ್ನು ಬಳಸಿಕೊಳ್ಳಲು ಚಳವಳಿಯ ನಾಯಕರು ಸೋತುಹೋದರು.

ನವನಿರ್ಮಾಣ ಚಳವಳಿಯ ನೇತೃತ್ವ ವಹಿಸಲು ಜೆಪಿ ಅಹ್ಮದಾಬಾದ್‌ಗೆ ಹೋಗಿದ್ದಾಗ ಆಗಲೇ ವಿದ್ಯಾರ್ಥಿ ಚಳವಳಿಗಾರರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಚಿಮಣ್ ಬಾಯ್ ಪಟೇಲ್ ಸರ್ಕಾರವನ್ನು ಪದಚ್ಯುತಿಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಮಾಡಿಬಿಟ್ಟಿದ್ದರು.

ಆ ಚಳವಳಿಗಾರರಿಗೆ ಜೆಪಿಯ ಅಗತ್ಯಕ್ಕಿಂತ ಹೆಚ್ಚಾಗಿ ಜೆಪಿಗೆ ಆ ಚಳವಳಿಯ ಅಗತ್ಯ ಇತ್ತು.  `ನಾನು ಎರಡು ವರ್ಷಗಳ ಕಾಲ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ಸಹಮತ ಮೂಡಿಸಲು ಪ್ರಯತ್ನಪಟ್ಟು ಸೋತುಹೋಗಿದ್ದೆ.

ಆಗ ನನ್ನ ಕಣ್ಣಿಗೆ ಬಿದ್ದ ಗುಜರಾತ್ ವಿದ್ಯಾರ್ಥಿಗಳು ನನಗೆ ದಾರಿ ತೋರಿಸಿದ್ದರು` ಎಂದು ಜೆಪಿಯವರೇ ವಿನಯಪೂರ್ವಕವಾಗಿ ಬರೆದುಕೊಂಡಿದ್ದಾರೆ. `ಅಣ್ಣಾ ಹಜಾರೆ ಅವರು ಸಂಸತ್‌ಗಿಂತಲೂ ಮೇಲು` ಎಂಬ ಅರವಿಂದ ಕೇಜ್ರಿವಾಲ್ ಅವರ ಮೂರ್ಖ ಹೇಳಿಕೆ ನೆನಪಾಗುತ್ತಿದೆಯೇ?

 ಒಂದು ಚಳವಳಿ ಯಶಸ್ವಿಯಾಗಬೇಕಾದರೆ ಅದರ ನೇತೃತ್ವ ವಹಿಸುವ ಸಂಘಟನೆಯ ಮೇಲೆ ಸಾಮಾನ್ಯ ಜನರಿಗೂ ನಂಬಿಕೆ ಇರಬೇಕಾಗುತ್ತದೆ. ಅಣ್ಣಾ ತಂಡದ ನಡೆ ಮೊದಲ ದಿನದಿಂದಲೇ ನಿಗೂಢವಾಗಿತ್ತು. ಪ್ರಾರಂಭದಲ್ಲಿಯೇ ಬೇರೆಬೇರೆ ಕಾರಣಗಳಿಗಾಗಿ ಅಲ್ಲಿಂದ ಹೊರನಡೆದವರು ಯೋಗಗುರು ರಾಮ್‌ದೇವ್; ನಂತರ ಸ್ವಾಮಿ ಅಗ್ನಿವೇಶ್, ರಾಜೀಂದರ್‌ಸಿಂಗ್, ವೇಣುಗೋಪಾಲ್ ಮೊದಲಾದವರು ಬಿಟ್ಟುಹೋದರು.

ಆಗಲೇ ಅಣ್ಣಾ ತಂಡದ ಉಳಿದ ಕೆಲವು ಸದಸ್ಯರ ಮೇಲೆ ಆರೋಪಗಳು ಕೇಳಿ ಬರತೊಡಗಿದ್ದವು. ಅದು ಮುಖ್ಯವಾಗಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ್ದವು. ಅಷ್ಟು ಹೊತ್ತಿಗೆ ಇಡೀ ದೇಶದಲ್ಲಿ ಚಳವಳಿ ಪಸರಿಸಿತ್ತು.

`ಜನ ಸ್ವಂತ ಇಚ್ಛೆಯಿಂದ ಬರುತ್ತಿದ್ದಾರೆ` ಎಂದು ಹೇಳಿಕೊಂಡರೂ ಜನ ಸೇರಿಸುವುದು, ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಜೋಡಿಸುವುದು, ಸಂಪನ್ಮೂಲ ಕ್ರೋಡೀಕರಿಸುವುದು ಸುಲಭದ ಕೆಲಸ ಅಲ್ಲ.

ನೋಡುನೋಡುತ್ತಿದ್ದಂತೆಯೇ ಭ್ರಷ್ಟ ರಾಜಕಾರಣಿಗಳು, ದುಷ್ಟ ಆಲೋಚನೆಯ ಉದ್ಯಮಿಗಳು, ಆಷಾಢಭೂತಿ ಧರ್ಮಗುರುಗಳು, ಶಿಕ್ಷಣದ ವ್ಯಾಪಾರಿಗಳು, ರೋಗಿಗಳನ್ನು ಸುಲಿಯುವ ವೈದ್ಯರು, ಕಕ್ಷಿದಾರರನ್ನು ಕಾಡಿಸುವ ವಕೀಲರು ಹೀಗೆ ಎಲ್ಲರೂ ಸೇರಿಕೊಳ್ಳತೊಡಗಿದ್ದರು.

ಯಾರು ಪ್ರಾಮಾಣಿಕರು, ಯಾರು ಭ್ರಷ್ಟರು? ಎನ್ನುವುದನ್ನು ಗುರುತಿಸಲಾಗದ ಅಯೋಮಯ ಸ್ಥಿತಿ. ಸೇರಿದವರಲ್ಲಿ ನಿಜವಾದ ಕಾಳಜಿ ಹೊಂದಿದ್ದವರು ಎಷ್ಟು ಮಂದಿ ಇದ್ದರೆನ್ನುವುದನ್ನು ಹುಡುಕುವುದೇ ಕಷ್ಟವಾಗಿತ್ತು. ಜೆಪಿ ಪ್ರವೇಶಕ್ಕೆ ಮುನ್ನವೇ ಗುಜರಾತ್‌ನಲ್ಲಿ ತಾರಕಕ್ಕೇರಿದ್ದ ನವನಿರ್ಮಾಣ ಚಳವಳಿಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ 80 ಮಂದಿ ಪೊಲೀಸ್ ಗುಂಡೇಟಿನಿಂದ ಪ್ರಾಣ ಕಳೆದುಕೊಂಡಿದ್ದರು.

ಅಂತಹ ಒಂದು ಗೋಲಿಬಾರ್ ನಡೆದಿದ್ದರೆ ಸತ್ಯಾಗ್ರಹದ ಶಿಬಿರದಲ್ಲಿ ಎಷ್ಟು ಮಂದಿ ಉಳಿದುಕೊಳ್ಳುತ್ತಿದ್ದರೋ ಗೊತ್ತಿಲ್ಲ. ಅಣ್ಣಾ ಚಳವಳಿಗೆ ಏಟು ನೀಡಿದ್ದೇ ಅವರ ಸಂಘಟನೆಯ ಬಗ್ಗೆ ಸಾರ್ವಜನಿಕರಲ್ಲಿ ಹುಟ್ಟಿಕೊಳ್ಳತೊಡಗಿದ್ದ ಇಂತಹ ಗುಮಾನಿಗಳು.

ಇದನ್ನು ಇನ್ನಷ್ಟು ಬಲಪಡಿಸಿದ್ದು ಹರಿಯಾಣದ ಹಿಸ್ಸಾರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಅಣ್ಣಾ ತಂಡ ನಡೆಸಿದ್ದ ಪ್ರಚಾರ. ಅದರ ನಂತರ ನಡೆದ ಉತ್ತರಪ್ರದೇಶದ ಚುನಾವಣೆಯಲ್ಲಿ ಅಣ್ಣಾ ತಂಡದ ಸದಸ್ಯರನ್ನು ಯಾರೂ ಲೆಕ್ಕಕ್ಕೆ ಇಟ್ಟುಕೊಳ್ಳಲಿಲ್ಲ.

ಕೊನೆಯದಾಗಿ ಹೋರಾಟದ ದಾರಿ. ಉದ್ದೇಶ ಉದಾತ್ತವಾಗಿದ್ದರೂ ಸಂಘಟನೆ  ಬಲವಾಗಿದ್ದರೂ ಹೋರಾಟದ ದಾರಿಯಲ್ಲಿ ಎಡವಿದರೆ ಚಳವಳಿ ಗುರಿಮುಟ್ಟುವುದು ಕಷ್ಟ. ಉಪವಾಸ ಬಹಳ ಪರಿಣಾಮಕಾರಿ ಹೋರಾಟದ ಅಸ್ತ್ರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಉಪವಾಸದ ಮೊದಲ ಉದ್ದೇಶ ಸ್ವಂತ ಆತ್ಮಾವಲೋಕನ, ಎರಡನೆಯದು, ಎದುರಾಳಿಯ ಆತ್ಮಪರಿವರ್ತನೆ.

ಈ ಉದ್ದೇಶಗಳಿಲ್ಲದ ಉಪವಾಸ `ಬ್ಲಾಕ್‌ಮೇಲ್` ಆಗುತ್ತದೆ. ಅದಕ್ಕಾಗಿಯೇ ಗಾಂಧೀಜಿಯವರು ಹದಿನಾರು ಬಾರಿ ಉಪವಾಸ ಮಾಡಿದ್ದರೂ ಆ ಅಸ್ತ್ರವನ್ನು ಅವರೆಂದೂ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟಕ್ಕೆ ಬಳಸಿಕೊಳ್ಳಲಿಲ್ಲ. ಅವರು ಬಳಸಿದ್ದೆಲ್ಲವೂ ಆತ್ಮಶುದ್ಧಿ ಮತ್ತು ಆತ್ಮಪರಿವರ್ತನೆಗಾಗಿ.

ಉಪವಾಸದ ಮೂಲಕ ಉದ್ದೇಶ ಸಾಧಿಸುವುದಕ್ಕಿಂತ ಹೆಚ್ಚಾಗಿ ಹುತಾತ್ಮನಾಗುವ ಆಸೆಯೇ ಹೆಚ್ಚಿದೆಯೋ ಏನೋ ಎಂದು ಅನಿಸುವ ರೀತಿಯಲ್ಲಿ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹದ ಅಸ್ತ್ರವನ್ನು ಸದಾ ಝಳಪಿಸುತ್ತಿರುತ್ತಾರೆ.

ಆದರೆ ಆತ್ಮಾವಲೋಕನಕ್ಕೆ ಅವರು ತಯಾರಿಲ್ಲ, ಆತ್ಮಪರಿವರ್ತನೆಗೆ ತಮ್ಮನ್ನು ಒಡ್ಡಿಕೊಳ್ಳುವಷ್ಟು ಅಧಿಕಾರರೂಢರು ಸೂಕ್ಷ್ಮಮತಿಗಳಾಗಿಲ್ಲ. ಈ ಸ್ಥಿತಿಯಲ್ಲಿ ಉಪವಾಸ ಕೇವಲ `ಬ್ಲಾಕ್‌ಮೇಲ್` ಆಗುವ ಅಪಾಯ ಇದೆ.
ಕೊನೆಗೂ ಇದರ ಅರಿವು ಅಣ್ಣಾ ಹಜಾರೆ ಅವರಿಗೂ ಆಗುತ್ತಿದೆಯೇನೋ? ಇತ್ತೀಚೆಗೆ ಅವರು ಆತ್ಮಾವಲೋಕನದ ಧಾಟಿಯಲ್ಲಿ `ದೇಶ ಸುತ್ತಿ ಜನಜಾಗೃತಿಗೊಳಿಸುವ` ಮಾತುಗಳನ್ನಾಡುತ್ತಿದ್ದಾರೆ. ಜಂತರ್ ಮಂತರ್‌ಗೆ ಹೋಗುವ ಮೊದಲು ಈ ಕೆಲಸ ಮಾಡಿದ್ದರೆ ಅವರ ಕೈಗೆ ತಮ್ಮ ಕನಸುಗಳನ್ನೆಲ್ಲ ಕೊಟ್ಟವರು ಭಗ್ನಹೃದಯಿಗಳಾಗುತ್ತಿರಲಿಲ್ಲ.

Monday, April 2, 2012

`ಪವಿತ್ರ ಗೋಪೂಜೆ'ಯ ಮರೆಯಲ್ಲಿ ದೇಶದ್ರೋಹ' April 02, 2012

ನಮ್ಮಲ್ಲಿ ಕೆಲವು `ಪವಿತ್ರ ಗೋವು`ಗಳಿವೆ (`ಹೋಲಿ ಕೌ`). `ಅವಕ್ಕೆ ಹೊಡೆಯುವುದು ಬಡಿಯುವುದು ಬಿಡಿ, ಅವುಗಳತ್ತ ಸಂಶಯದ ಕಣ್ಣು ಕೂಡಾ ಹರಿಸಬಾರದು, ಅವುಗಳ ಪೂಜೆಯನ್ನಷ್ಟೇ ಮಾಡಬೇಕು` ಎಂದು ನಮ್ಮನ್ನು ಆಳುವವರು ಬಯಸುತ್ತಾರೆ.

ಪೂಜೆ ಮಾಡುವವ ಕಣ್ಣು ಯಾವಾಗಲೂ ಮುಚ್ಚಿರುತ್ತದೆ ಎಂದು ಅವರಿಗೂ ಗೊತ್ತಿರುತ್ತದೆ. ನಮ್ಮ ರಕ್ಷಣೆಗಾಗಿ ಇರುವ ಸೇನೆ, ಅದಕ್ಕೆ ನೆರವಾಗುವ ಗುಪ್ತಚರ ಇಲಾಖೆ, ಸಂವಿಧಾನದ ಅಂಗಗಳಲ್ಲಿ ಬಹುಮುಖ್ಯವಾದ ನ್ಯಾಯಾಂಗ, ರಾಷ್ಟ್ರಪತಿ ಹುದ್ದೆ... ಹೀಗೆ ಹಲವಾರು `ಪವಿತ್ರ ಗೋವು`ಗಳಿವೆ.

ಇವುಗಳ ವಿರುದ್ಧದ ಸಣ್ಣ ಆರೋಪ ಕೂಡಾ `ದೇಶದ್ರೋಹ` ಎಂದು ಬಣ್ಣಿಸಲಾಗುತ್ತದೆ. ಇದು ಆ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನ. ಇದರಿಂದ ಅವುಗಳ ನೈತಿಕ ಸ್ಥೈರ್ಯ ಕುಸಿಯುತ್ತದೆ` ಎಂಬ ಬುದ್ಧಿ ಮಾತುಗಳನ್ನು ಹೇಳಲಾಗುತ್ತದೆ.

ಈ `ಪವಿತ್ರ ಗೋವು`ಗಳಲ್ಲಿ ಭಾರತೀಯ ಸೇನೆಗೆ ಅತ್ಯುನ್ನತ ಸ್ಥಾನ. ಅದು ಈಗ ಬೀದಿಗೆ ಇಳಿದು ಎಲ್ಲೆಂದರಲ್ಲಿ ನುಗ್ಗಿ ನಡೆಸುತ್ತಿರುವ ದಾಂಧಲೆಯಿಂದ ಸರ್ಕಾರ ತತ್ತರಗುಡುತ್ತಿದೆ. ಮನಮೋಹನ್ ಸಿಂಗ್ ಅವರ ಅತ್ಯಂತ ಪ್ರಾಮಾಣಿಕ ಸಹೋದ್ಯೋಗಿ ಎಂದು ಹೇಳಲಾಗುತ್ತಿದ್ದ ಎ.ಕೆ.ಆಂಟನಿ ಅವರೇ `ಆರೋಪಿ`ಯ ಕಟಕಟೆಯಲ್ಲಿ ನಿಲ್ಲುವಂತಾಗಿದೆ.

ನಮ್ಮ ಸಮರ ಸಿದ್ಧತೆಯಲ್ಲಿನ ಹುಳುಕುಗಳು ಬಯಲಾಗಿರುವುದರಿಂದ ವಿಶ್ವದ ಎರಡನೆಯದೋ ಮೂರನೆಯದೋ ದೊಡ್ಡ ಸೇನೆ ಎಂಬ ಕೀರ್ತಿ ಕಿರೀಟ ಕೂಡಾ ಉರುಳಿ ಬೀಳುವ ಸ್ಥಿತಿಯಲ್ಲಿದೆ. ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಎರಡು ಪ್ರಮುಖ ವಿಷಯಗಳನ್ನೆತ್ತಿದ್ದಾರೆ. ಮೊದಲನೆಯದು, ಸೇನಾ ಖರೀದಿಯಲ್ಲಿ ದಲ್ಲಾಳಿಗಳ ಪಾತ್ರ, ಎರಡನೆಯದು ದುರ್ಬಲಗೊಳ್ಳುತ್ತಿರುವ ರಕ್ಷಣಾ ವ್ಯವಸ್ಥೆ.

ಇಷ್ಟರವರೆಗೆ ಅವರು ಯಾಕೆ ಸುಮ್ಮನಿದ್ದರು? ಪ್ರಧಾನಿಗೆ ಬರೆದ ಪತ್ರ ಯಾಕೆ ಸೋರಿಹೋಯಿತು? ಎಂಬ ಪ್ರಶ್ನೆಗಳು ಪ್ರಸ್ತುತವಾದರೂ ಅದಕ್ಕಿಂತಲೂ ಮುಖ್ಯವಾದುದು ಅವರು ಎತ್ತಿರುವ ಎರಡು ಮೂಲಭೂತ ವಿಷಯಗಳು. ವಿವಾದ ಹೊರಡಿಸಿರುವ `ಸಂದೇಶ` ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡಬೇಕಾಗಿತ್ತು.

ಆದರೆ, ಆಗುತ್ತಿರುವುದೇನು? `ಸಂದೇಶ`ವನ್ನು ಪಕ್ಕಕ್ಕಿಟ್ಟು `ಸಂದೇಶವಾಹಕ`ನ ತಲೆಯನ್ನೇ ಉರುಳಿಸುವ ಹುನ್ನಾರ.ರಾಜಕಾರಣದಲ್ಲಿರುವ ಯಾರಾದರೊಬ್ಬರು ಎದ್ದು ನಿಂತು ಎದೆ ಮೇಲೆ ಕೈ ಇಟ್ಟು ಜ.ಸಿಂಗ್ ಹೇಳಿರುವುದು ಸುಳ್ಳು ಎಂದು ಹೇಳಲು ಸಾಧ್ಯವೇ? ಭಾರತದ ರಕ್ಷಣಾ ಇಲಾಖೆಯ ಖರೀದಿಯಲ್ಲಿನ ಅವ್ಯವಹಾರಗಳು ಲೋಕಕ್ಕೆಲ್ಲ ಗೊತ್ತಿರುವ ಸಂಗತಿ. ಅದರಲ್ಲಿ ದಲ್ಲಾಳಿಗಳ ಪಾತ್ರ ಕೂಡಾ ಅಷ್ಟೇ ಜನಜನಿತ.

ಈ ದಲ್ಲಾಳಿಗಳ ಬಗ್ಗೆ ನಡೆದಷ್ಟು ಚರ್ಚೆ ನಮ್ಮ  ರಕ್ಷಣಾ ವ್ಯವಸ್ಥೆಯಲ್ಲಿನ ದೋಷಗಳ ಬಗ್ಗೆ ನಡೆಯದೆ ಇದ್ದರೂ ಸೇನೆಯ ಉನ್ನತ ಮಟ್ಟದಲ್ಲಿ ಇದರ ಬಗ್ಗೆ ಆತಂಕ ವ್ಯಕ್ತವಾಗುತ್ತಲೇ ಇತ್ತು. ಇತ್ತೀಚೆಗಷ್ಟೆ ಕೇಂದ್ರ ಬಜೆಟ್ ಮಂಡಿಸಿದ ಪ್ರಣವ್ ಮುಖರ್ಜಿ `ರಕ್ಷಣಾ ಇಲಾಖೆಯ ವಾರ್ಷಿಕ ಅನುದಾನವನ್ನು 1,93,407 ಕೋಟಿ ರೂಪಾಯಿಗೆ ಹೆಚ್ಚಿಸಿದ್ದೇನೆ.

ಇದು  ಶೇ 18ರಷ್ಟು ಹೆಚ್ಚಳ` ಎಂದು ಬೀಗಿದ್ದರು. ಬಜೆಟ್ ಹಿಂದಿನ ದಿನವಷ್ಟೇ ಮಂಡಿಸಲಾದ ಆರ್ಥಿಕ ಸಮೀಕ್ಷೆಯ ಪುಟಗಳನ್ನು ತಿರುವಿ ಹಾಕಿದರೆ ಕಳೆದ ಬಜೆಟ್‌ನಲ್ಲಿ ನೀಡಲಾದ ಹಣದಲ್ಲಿ 3000 ಕೋಟಿ ರೂಪಾಯಿಗಳನ್ನು ಖರ್ಚುಮಾಡಲಾಗದೆ ಹಿಂತಿರುಗಿಸಿದ್ದ ವಿವರ ಕಣ್ಣಿಗೆ ರಾಚುತ್ತದೆ. ಕೊಟ್ಟ ಹಣವನ್ನು ಖರ್ಚು ಮಾಡದಿದ್ದರೆ ಯಾವ ಆಧುನೀಕರಣ ಸಾಧ್ಯ? ಜ.ಸಿಂಗ್ ಎತ್ತಿರುವುದು ಇದೇ ಪ್ರಶ್ನೆಯನ್ನು.

ರಕ್ಷಣಾ ಇಲಾಖೆಯ ಅಂತರಂಗದ ವ್ಯವಹಾರಗಳ ಬಗ್ಗೆ ಬೀದಿ ಚರ್ಚೆ ಪ್ರಾರಂಭವಾಗಿದ್ದು ಬೋಫೋರ್ಸ್ ಫಿರಂಗಿ ಖರೀದಿ ಹಗರಣದ ನಂತರದ ದಿನಗಳಲ್ಲಿ. ಬೋಪೋರ್ಸ್ ಜಗತ್ತಿನ ಅತ್ಯಂತ ಸಮರ್ಥ ಫಿರಂಗಿ ಎನ್ನಲಡ್ಡಿಯಿಲ್ಲ. ಇದರ ಸಮರ ಸಾಮರ್ಥ್ಯ ಸಾಬೀತಾಗಿದ್ದು ಕಾರ್ಗಿಲ್ ಯುದ್ಧ ಭೂಮಿಯಲ್ಲಾದರೂ, ಅದಕ್ಕಿಂತ ಹತ್ತು ವರ್ಷಗಳ ಹಿಂದೆಯೇ ಇದು ದೇಶದ ಈ ವರೆಗಿನ ಅತ್ಯಧಿಕ ಬಹುಮತ ಸರ್ಕಾರವನ್ನು ಉರುಳಿಸಿಬಿಟ್ಟಿತ್ತು.

ಅದಕ್ಕೆ ಬಲಿಯಾದ ಪ್ರಧಾನಿ ದೇಶದ ರಾಜಕೀಯವನ್ನು ಶುದ್ಧೀಕರಿಸುತ್ತೇನೆಂದು ಹೇಳುತ್ತಾ ಬಂದಿದ್ದ ರಾಜೀವ್‌ಗಾಂಧಿ. ದೆಹಲಿ ಹೈಕೋರ್ಟ್ ರಾಜೀವ್ ಗಾಂಧಿಯವರನ್ನು ದೋಷಮುಕ್ತಗೊಳಿಸಿದರೂ ಬೋಫೋರ್ಸ್ ಹಗರಣದಿಂದಾಗಿ ಹುಟ್ಟಿಕೊಂಡಿದ್ದ ಹಲವಾರು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

 ಕಮಿಷನ್ ಸಂದಾಯವಾಗಿದ್ದು ನಿಜವಾದರೂ ಅದು ಯಾರಿಗೆ ಸಂದಾಯವಾಗಿದೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಆ ವ್ಯವಹಾರದಲ್ಲಿನ ಪ್ರಮುಖ ಆರೋಪಿ- ಇಟಲಿ ಮೂಲದ ಮತ್ತು ರಾಜೀವ್‌ಗಾಂಧಿ ಕುಟುಂಬದ ಸ್ನೇಹಿತ ಎನ್ನಲಾದ ಒಟ್ಟಾವಿಯೋ ಕ್ವಟ್ರೋಚಿ.

1993ರಲ್ಲಿ ಸಿಬಿಐ ಆತನ ವಿರುದ್ದ ಮೊಕದ್ದಮೆ ದಾಖಲಿಸಿದ್ದು ಗೊತ್ತಾದ ಮರುಕ್ಷಣ ಭಾರತ ಬಿಟ್ಟು ಪರಾರಿಯಾಗಿದ್ದ ಕ್ವಟ್ರೋಚಿಯನ್ನು ಕಳೆದ ಇಪ್ಪತ್ತೈದು ವರ್ಷಗಳ ಅವಧಿಯ ಯಾವ ಸರ್ಕಾರಕ್ಕೂ ಬಂಧಿಸಲಾಗಿಲ್ಲ.

ಸಿಬಿಐ ಕೋರಿಕೆ ಮೇರೆಗೆ ಲಂಡನ್‌ನಲ್ಲಿದ್ದ ಆತನ ಬ್ಯಾಂಕ್ ಖಾತೆಯನ್ನು ಅಮಾನತ್ತಿನಲ್ಲಿರಿಸಿದರೆ, ಸಿಬಿಐ ವಿರೋಧದ ಹೊರತಾಗಿಯೂ ಆಗಿನ ಕಾನೂನು ಸಚಿವರಾಗಿದ್ದ ಎಚ್.ಆರ್.ಭಾರದ್ವಾಜ್ ಅವರು ಕ್ವಟ್ರೋಚಿ ವಿರುದ್ಧದ ಯಾವ ಆರೋಪವೂ ಸಾಬೀತಾಗಿಲ್ಲ ಎಂದು ಹೇಳಿ ಬ್ಯಾಂಕ್ ಖಾತೆಯ ಚಲಾವಣೆಗೆ ಅನುಮತಿ ಕೊಟ್ಟಿದ್ದರು.

ಕ್ವಟ್ರೋಚಿ ವಿಷಯದಲ್ಲಿ ಕಾಂಗ್ರೆಸ್ ನಡವಳಿಕೆ ಈಗಲೂ ಸಂಶಯಾಸ್ಪದವಾಗಿದೆ. ಸೋನಿಯಾಗಾಂಧಿ ಪ್ರಧಾನಿ ಪಟ್ಟವನ್ನು ತ್ಯಾಗಮಾಡಲು ಅವರನ್ನು ಕಾಡುತ್ತಿದ್ದ `ಕ್ವಟ್ರೋಚಿ ಭೂತ`ವೂ ಕಾರಣವೆನ್ನಲಾಗುತ್ತಿದೆ. ಬೋಪೋರ್ಸ್ ಹಗರಣದಲ್ಲಿ ಆರೋಪಿಗಳಾಗಿದ್ದ ಹಿಂದುಜಾ ಸೋದರರ ಜತೆಯಲ್ಲಿ ಬಿಜೆಪಿ ನಾಯಕ ಅಟಲ ಬಿಹಾರಿ ವಾಜಪೇಯಿ ಹಾರ್ದಿಕ ಸಂಬಂಧ ಹೊಂದಿದ್ದನ್ನು ಬಿಜೆಪಿ ಕೂಡಾ ನಿರಾಕರಿಸುವ ಸ್ಥಿತಿಯಲ್ಲಿ ಇಲ್ಲ.

ಬೋಫೋರ್ಸ್ ಹಗರಣದ ಬಗ್ಗೆ ಗುಲ್ಲೆಬ್ಬಿಸಿದ್ದ ಬಿಜೆಪಿ ಅಧಿಕಾರಕ್ಕೆ ಬಂದಾಗಲೂ ರಕ್ಷಣಾ ಇಲಾಖೆಯನ್ನು ಹಗರಣಗಳು ಸುತ್ತಿಕೊಂಡಿದ್ದವು. ಆ ಖಾತೆಯ ಹೊಣೆ ಹೊತ್ತಿದ್ದ ಜಾರ್ಜ್ ಫರ್ನಾಂಡಿಸ್ ಎಂಬ ಇನ್ನೊಬ್ಬ ಪ್ರಾಮಾಣಿಕ ರಾಜಕಾರಣಿ ಕಳಂಕವನ್ನು ಹೊತ್ತುಕೊಂಡೇ ನಿರ್ಗಮಿಸಬೇಕಾಯಿತು.

ಕಾರ್ಗಿಲ್ ಯುದ್ದದ ಸಮಯದಲ್ಲಿ ರಕ್ಷಣಾ ಇಲಾಖೆ ಅತೀ ಅವಸರದಿಂದ ನಡೆಸಿದ್ದ  ಅಂದಾಜು ಎರಡು ಸಾವಿರ ಕೋಟಿ ರೂಪಾಯಿ ವೆಚ್ಚದ ಖರೀದಿಯಲ್ಲಿನ ಅವ್ಯವಹಾರವನ್ನು ಸಿಎಜಿ ಮತ್ತು ಪಿಎಸಿ ಬಿಚ್ಚಿಟ್ಟಿತ್ತು. ಮಾರುಕಟ್ಟೆಯಲ್ಲಿ 172 ಡಾಲರ್‌ಗೆ ಲಭ್ಯವಿದ್ದ ಶವಪೆಟ್ಟಿಗೆಗಳನ್ನು 2000 ಡಾಲರ್‌ಗೆ ಖರೀದಿಸಿದ್ದನ್ನು ಸಿಎಜಿ ತನ್ನ ವರದಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಿತ್ತು.

ಅದನ್ನು ಸಮರ್ಥಿಸಿಕೊಳ್ಳಲು ಫರ್ನಾಂಡಿಸ್ ಅವರಿಗೆ ಕೊನೆಗೂ ಸಾಧ್ಯವಾಗಲೇ ಇಲ್ಲ. ಇವುಗಳಿಗೆಲ್ಲ ತಾರ್ಕಿಕ ಅಂತ್ಯ ಎಂಬಂತೆ  `ಆಪರೇಷನ್ ವೆಸ್ಟ್ ಎಂಡ್` ಮೂಲಕ ತೆಹೆಲ್ಕಾ ಬಯಲುಗೊಳಿಸಿದ್ದ ರಕ್ಷಣಾ ಇಲಾಖೆಯ ಅಂತರಂಗದ ವ್ಯವಹಾರಗಳನ್ನು ನೋಡಿ ದೇಶದ ಜನ ಬೆಚ್ಚಿ ಬಿದ್ದಿದ್ದರು.

ಫರ್ನಾಂಡಿಸ್ ಅವರ ಪಕ್ಷದ ಮಾಜಿ ಖಜಾಂಚಿ ಆರ್.ಕೆ.ಜೈನ್ `ಯಾರ‌್ಯಾರಿಂದ ಕಮಿಷನ್ ಪಡೆದಿದ್ದೆ` ಎಂದು ಹೇಳಿಕೊಂಡದ್ದನ್ನು ರಹಸ್ಯ ಕ್ಯಾಮೆರಾದ ಮೂಲಕ ಸೆರೆಹಿಡಿದು ತೆಹೆಲ್ಕಾ ಬಿತ್ತರಿಸಿತ್ತು.

ಸಚಿವರ ಮನೆಯಲ್ಲಿಯೇ ಅವರ ಸ್ನೇಹಿತೆ ಜಯಾ ಜೇಟ್ಲಿ ಅವರೇ `ವ್ಯವಹಾರ ಕುದುರಿಸುತ್ತಿದ್ದುದನ್ನು` ಕೂಡಾ ದೇಶ ಕಣ್ಣಾರೆ ನೋಡಿದೆ.ಶಸ್ತಾಸ್ತ್ರ ಖರೀದಿಯಲ್ಲಿ ದಲ್ಲಾಳಿಗಳ ನೇಮಕ, ಅವರಿಗೆ ಕಮಿಷನ್ ಪಾವತಿ ಹೊಸ ಸಂಗತಿಗಳೇನಲ್ಲ. ಎಲ್ಲ ದೇಶಗಳಲ್ಲಿಯೂ ಇದು ಅಧಿಕೃತವಾಗಿಯೋ, ಅನಧಿಕೃತವಾಗಿಯೋ ನಡೆಯುತ್ತದೆ.

ಇದನ್ನು ಸಂಪೂರ್ಣವಾಗಿ ತೊಡೆದುಹಾಕುವುದು ಸಾಧ್ಯ ಇಲ್ಲ. ಆದರೆ  ಕಳಪೆ ಗುಣಮಟ್ಟದ ರಕ್ಷಣಾ ಸಾಮಗ್ರಿಗಳ ಮಾರಾಟಕ್ಕಾಗಿ ಇಲ್ಲವೇ, ರಕ್ಷಣಾ ಸಾಮಗ್ರಿಗಳ ಬೆಲೆಯನ್ನು ಹಲವಾರು ಪಟ್ಟು ಹೆಚ್ಚಿಸಲು  ಕಮಿಷನ್ ನೀಡಿದಾಗ ಮತ್ತು ರಾಜಕಾರಣಿಗಳು ಇಲ್ಲವೇ ಅಧಿಕಾರಿಗಳಿಗೆ ಕಮಿಷನ್‌ನಲ್ಲಿ ಪಾಲು ಸಂದಾಯವಾದಾಗ ಅದು ದೇಶದ್ರೋಹದ ಅಪರಾಧವಾಗುತ್ತದೆ.

ಬೋಪೋರ್ಸ್ ಹಗರಣ ಬಯಲಾದಾಗಲೂ ಸರ್ಕಾರ ಪ್ರಾರಂಭದಲ್ಲಿ ಆ ವ್ಯವಹಾರದಲ್ಲಿ ಯಾವ ದಲ್ಲಾಳಿಯೂ ಇಲ್ಲ ಎಂದು ಹೇಳಿದ್ದರೂ, ಕೊನೆಗೆ ಒಪ್ಪಿಕೊಂಡಿತ್ತು. ದಲ್ಲಾಳಿಗಳು ಈಗಲೂ ಇದ್ದಾರೆ, ಆದರೆ ಅವರು ಯಾರ ಕಣ್ಣಿಗೂ ಬೀಳುವುದಿಲ್ಲ. ಅವರ ಪರವಾಗಿ ಬೇರೆ ಯಾರೋ ವ್ಯವಹಾರ ಕುದುರಿಸುತ್ತಾರೆ.

ಈ ಮೋಸದಾಟವನ್ನು ತಡೆಯಲಿಕ್ಕಾಗಿ ಅಧಿಕೃತವಾಗಿ ನೋಂದಣಿ ಮಾಡಲಾದ ದಲ್ಲಾಳಿಗಳ ಜತೆ ಮಾತ್ರ ವ್ಯವಹಾರ ನಡೆಸಬೇಕು, ಈ ಮೂಲಕ ವ್ಯವಹಾರವನ್ನು ಪಾರದರ್ಶಕಗೊಳಿಸಬೇಕೆಂಬ ಸಲಹೆಯೂ ಕೇಳಿಬಂದಿತ್ತು. ಎಲ್ಲವೂ ಅಧಿಕೃತವಾಗಿ ನಡೆದರೆ ರಾಜಕೀಯಕ್ಕೆ ದುಡ್ಡೆಲ್ಲಿಂದ ಬರಬೇಕು?

ಬಹಳ ವಿಚಿತ್ರವೆಂದರೆ, ಈ ವಿವಾದ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಗೀಡಾಗುತ್ತಿದ್ದರೂ ಬಿಜೆಪಿಯೂ ಸೇರಿದಂತೆ ಪ್ರಮುಖ ವಿರೋಧಪಕ್ಷಗಳು ಅದನ್ನು ಬಹಳ ಗಂಭೀರವಾಗಿ ಸ್ವೀಕರಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿಲ್ಲ. ಈ ಅಪೂರ್ವವಾದ `ಸಂಯಮ`ವನ್ನು ಶ್ಲಾಘಿಸಲಾಗುತ್ತಿದೆ.

`ಇದೇ ಮೊದಲ ಬಾರಿಗೆ ವಿರೋಧಪಕ್ಷಗಳು ಜವಾಬ್ದಾರಿಯಿಂದ ವರ್ತಿಸಿವೆ` ಎಂಬ ಶಹಭಾಸ್‌ಗಿರಿಯನ್ನೂ ಕೊಡಲಾಗುತ್ತಿದೆ. ಸತ್ಯ ಸಂಗತಿಯೇನೆಂದರೆ ರಕ್ಷಣಾ ಇಲಾಖೆಯನ್ನು ಬೀದಿಯಲ್ಲಿ ತೊಳೆಯುವುದು ಯಾರಿಗೂ ಬೇಡ. ಅದರಿಂದ ಕಳೆದ ಇಪ್ಪತ್ತೈದು ವರ್ಷಗಳ ಕೊಳೆಯೆಲ್ಲಾ ಹೊರಗೆ ಬರುವ ಸಂಭವ ಇದೆ.

ಕಾಂಗ್ರೆಸ್, ಬಿಜೆಪಿ, ತೃತೀಯರಂಗ ಹೀಗೆ ಎಲ್ಲ ಸರ್ಕಾರಗಳ ಕಾಲದ ಅಸ್ಥಿಪಂಜರಗಳು ರಕ್ಷಣಾಇಲಾಖೆಯ ಕಪಾಟಿನಲ್ಲಿವೆ. ಸ್ಯಾಂಪಲ್‌ಗಾಗಿ ಒಂದು ಅಸ್ಥಿ ಪಂಜರವನ್ನು ಹೊರತೆಗೆಯುವುದಾದರೆ.....

ಪ್ರಧಾನಿ ಪಿ.ವಿ.ನರಸಿಂಹರಾವ್ ತನ್ನ ಅಧಿಕಾರದ ಕೊನೆಯ ದಿನಗಳಲ್ಲಿ ಸುಖೋಯ್-31 ಯುದ್ಧ ವಿಮಾನ ಖರೀದಿಗೆ ರಷ್ಯಾ ಜತೆ ಒಪ್ಪಂದ ಮಾಡಿಕೊಂಡಿದ್ದರು. ಆಗ ಹಣಕಾಸು ಸಚಿವರಾಗಿದ್ದವರು ಮನಮೋಹನ್‌ಸಿಂಗ್.

ಚುನಾವಣೆಯ ಕಾಲದಲ್ಲಿಯೇ ಈ ಒಪ್ಪಂದದಲ್ಲಿನ ಅಕ್ರಮಗಳನ್ನು ಬಯಲು ಮಾಡಿದ್ದು ದೆಹಲಿಯ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ. ಏಳು ವರ್ಷಗಳ ಹಿಂದೆ ಆ ಪತ್ರಿಕೆಯ ಸಂಪಾದಕ ಶೇಖರ್ ಗುಪ್ತಾ ಸುಖೋಯ್ ಯುದ್ಧ ವಿಮಾನ ಹೇಗೆ ಪಕ್ಷಾತೀತವಾಗಿ ರಾಜಕಾರಣಿಗಳನ್ನು ಒಂದು ಮಾಡಿತ್ತು ಎಂಬುದನ್ನು ತಮ್ಮ ಅಂಕಣದಲ್ಲಿ  ಬರೆದಿದ್ದರು.

ಈ ಹಗರಣ ಬಯಲಾದ ಕೂಡಲೇ ಗುಪ್ತಾ ಅವರನ್ನು ಕರೆಸಿ ಬಿಜೆಪಿ ನಾಯಕರಾದ ಅಟಲಬಿಹಾರಿ ವಾಜಪೇಯಿ ಮತ್ತು ಜಸ್ವಂತ್ ಸಿಂಗ್ ಚರ್ಚಿಸಿದ್ದರಂತೆ. ಚುನಾವಣೆಯ ಕಾಲದಲ್ಲಿ ಬಿಜೆಪಿ ಈ ಹಗರಣವನ್ನು  ಉತ್ಸಾಹದಿಂದ ಬಳಸಿಕೊಂಡಿತ್ತು.

ಸುಖೋಯ್ ಖರೀದಿ ಒಪ್ಪಂದಕ್ಕೆ ಅಂತಿಮ ರೂಪ ನೀಡಿದ್ದು ನಂತರ ಅಧಿಕಾರಕ್ಕೆ ಬಂದ ಎಚ್.ಡಿ.ದೇವೇಗೌಡರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಮುಲಾಯಂ ಸಿಂಗ್ ಯಾದವ್. ಆ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿದ್ದ ಶೇಖರ್ ಗುಪ್ತಾ ಹಿಂದಿನ ಹಗರಣವನ್ನು ವಿವರಿಸಿ, ಬಿಜೆಪಿ ನಾಯಕರದ್ದೂ ಅದಕ್ಕೆ ವಿರೋಧ ಇತ್ತು ಎಂದು ತಿಳಿಸಿದಾಗ ತಕ್ಷಣ ಪ್ರತಿಕ್ರಿಯಿಸಿದ್ದ ಮುಲಾಯಂಸಿಂಗ್ `ವಾಜಪೇಯಿ ಮತ್ತು ಜಸ್ವಂತ್‌ಸಿಂಗ್ ಇಬ್ಬರನ್ನೂ ಕರೆಸಿ ಸಮಾಲೋಚನೆ ನಡೆಸಿದ್ದೇನೆ.

ಅವರಿಬ್ಬರೂ ಕೆಲವು ಸಲಹೆಗಳನ್ನು ನೀಡಿದ್ದಾರೆ. ಆ ಒಪ್ಪಂದದಲ್ಲಿ ಏನೂ ಅಕ್ರಮ ಇಲ್ಲ. ನೀವೆಲ್ಲ ಪತ್ರಿಕೆಯವರು ಸುಮ್ಮನೆ ಬರೆಯುತ್ತೀರಿ` ಎಂದು ಛೇಡಿಸಿದ್ದರಂತೆ. ಸಿದ್ಧಾಂತದ ಹೆಸರಲ್ಲಿ ಪರಸ್ಪರ ಜುಟ್ಟು ಹಿಡಿದು ಕಾದಾಡುವ ಮತ್ತು ಜನಪರವಾದ ಮಸೂದೆಗಳನ್ನೂ ಒಮ್ಮತದಿಂದ ಅಂಗೀಕರಿಸಲು ಒಪ್ಪದ ವಿರೋಧಪಕ್ಷಗಳ ನಾಯಕರನ್ನು (ನರಸಿಂಹರಾವ್, ವಾಜಪೇಯಿ ಮತ್ತು ಮುಲಾಯಂ ಸಿಂಗ್) ಸುಖೋಯ್ ಯುದ್ಧ ವಿಮಾನ ಒಟ್ಟು ಮಾಡಿತು ಎಂದು ಶೇಖರ್ ಗುಪ್ತಾ ವ್ಯಂಗ್ಯದ ದನಿಯಲ್ಲಿ ಅಂಕಣ ಕೊನೆಗೊಳಿಸುತ್ತಾರೆ.

  ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ತಂದೆ ಪ್ರಧಾನಿಯಗಿದ್ದಾಗ ಶಸ್ತ್ರಾಸ್ತ್ರ ಖರೀದಿಗೆ ಸಂಬಂಧಿಸಿದಂತೆ ದಲ್ಲಾಳಿಯೊಬ್ಬ ಸಂಪರ್ಕಿಸಿ ಲಂಚದ ಆಮಿಷ ಒಡ್ಡಿದ್ದರು ಎಂದು ಹೇಳಿದ್ದರು.

ಅದು ಸುಖೋಯ್ ಖರೀದಿಗೆ ಸಂಬಂಧಿಸಿದ್ದಾಗಿರಬಹುದೇ? ದೇವೇಗೌಡರು ಪ್ರಧಾನಿಯಾಗಿದ್ದಾಗ ಕುಟುಂಬ ಸಮೇತ ರಷ್ಯಾ ಪ್ರವಾಸ ಮಾಡಿದ್ದರು. ಆಗ ಎಚ್.ಡಿ.ಕುಮಾರಸ್ವಾಮಿಯವರೂ ಜತೆಯಲ್ಲಿದ್ದದ್ದು ನಿಜ. ಅಲ್ಲಿ ಏನಾಯಿತು ಎನ್ನುವುದನ್ನು ಅವರು ಮಾತ್ರ ಹೇಳಲು ಸಾಧ್ಯ.

ಜಾತಿ ನಾಯಕನಾಗುವುದು ಜನಪ್ರಿಯತೆಯಲ್ಲ March 26, 2012

ತನ್ನನ್ನು ಹೊಗಳಲು ಆಸ್ಥಾನ ತುಂಬಾ ವಿದೂಷಕರನ್ನು ಇಟ್ಟುಕೊಳ್ಳುತ್ತಿದ್ದ ರಾಜ ಮಹಾರಾಜರು ತಮ್ಮ ಬಗ್ಗೆ ಪ್ರಜೆಗಳು ಏನನ್ನುತ್ತಾರೆ ಎಂದು ತಿಳಿದುಕೊಳ್ಳಲು ಮಾತ್ರ ಮಾರುವೇಷದಲ್ಲಿ ಊರು ಸುತ್ತುತ್ತಿದ್ದರಂತೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸುತ್ತ ವಿದೂಷಕರಷ್ಟೇ ಇದ್ದಾರೆ, ಅದರ ಜತೆಗೆ ಮಾರುವೇಷದಲ್ಲಿ ಅವರೊಮ್ಮೆ ರಾಜ್ಯದಲ್ಲಿ ಒಂದು ಸುತ್ತು ಹೊಡೆದರೆ ಮರುದಿನದಿಂದ ಭಿನ್ನಮತೀಯ ಚಟುವಟಿಕೆಗಳನ್ನೆಲ್ಲ ಕೈಬಿಟ್ಟು ತೆಪ್ಪಗೆ ಮನೆಮೂಲೆ ಸೇರಿ ತನ್ನ ಸರದಿಗಾಗಿ ಕಾಯುತ್ತಾ ಕೂರಬಹುದು. ಆಡಳಿತಾರೂಢ ಬಿಜೆಪಿಯ ಭ್ರಷ್ಟಚಾರ, ವ್ಯಭಿಚಾರ ಮತ್ತು ಒಳಜಗಳದ ಜತೆಗೆ ಕಳೆದ ಆರು ತಿಂಗಳಲ್ಲಿ ಮತ್ತೆ ಮುಖ್ಯಮಂತ್ರಿಯಾಗಲು ಯಡಿಯೂರಪ್ಪನವರು ನಡೆಸುತ್ತಿರುವ ಸರ್ಕಸ್ ಜನರಲ್ಲಿ ರೇಜಿಗೆ ಹುಟ್ಟಿಸಿದೆ. ಇದನ್ನು ತಿಳಿದುಕೊಳ್ಳಬೇಕಾದರೆ ಬಸ್ ನಿಲ್ದಾಣಗಳಲ್ಲಿಯೋ ಇಲ್ಲವೇ ಊರ ಸಂತೆಗಳಲ್ಲಿಯೋ ಜನರು ಆಡುತ್ತಿರುವ ಮಾತುಗಳಿಗೆ ಕಿವಿಕೊಟ್ಟರೆ ಸಾಕು.  ಈ ಪರಿಸ್ಥಿತಿ ಯಲ್ಲಿಯೂ `ತನಗೊಮ್ಮೆ ನಾಯಕತ್ವ ಕೊಟ್ಟು ನೋಡಿ, ಮುಂದಿನ ಚುನಾವಣೆಯಲ್ಲಿ 150 ಶಾಸಕರನ್ನು ಗೆಲ್ಲಿಸಿಕೊಂಡು ಬರುತ್ತೇನೆ` ಎಂದು ಯಡಿಯೂರಪ್ಪನವರು ಹೇಳುತ್ತಾರೆಂದರೆ.....

 ಗರಿಷ್ಠ ಐದು ವರ್ಷಗಳ ಕಾಲ ಮಾತ್ರ ಆಳಲು ರಾಜ್ಯದ ಮತದಾರರು ತಮ್ಮ ಪಕ್ಷವನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಿದ್ದಾರೆ ಎಂದು ಯಡಿಯೂರಪ್ಪನವರು ಎಂದೂ ತಿಳಿದುಕೊಂಡವರಲ್ಲ. ಪ್ರಾರಂಭದ ದಿನದಿಂದಲೇ ಅವರು ಮಾತು ಶುರು ಮಾಡಿದರೆ `ಇನ್ನು ಇಪ್ಪತ್ತು ವರ್ಷಗಳ ಕಾಲ ನಾವೇ...` ಎಂದು ಹೇಳುತ್ತಿದ್ದರು. ಈ ರೀತಿ ಹೇಳುವುದು  ನಾಡಿನ ಪ್ರಜ್ಞಾವಂತ ಮತದಾರರಿಗೆ ಮಾಡುವ ಅವಮಾನ ಎನ್ನುವ ಸಣ್ಣ ಅಳುಕು ಕೂಡಾ ಅವರನ್ನು ಕಾಡುವುದಿಲ್ಲ. ಉಳಿಸಿಕೊಂಡರೆ ಮಾತ್ರ ಈ ಐದು ವರ್ಷಗಳ ಅವಧಿ, ಇಲ್ಲದಿದ್ದರೆ ಅದಕ್ಕಿಂತ ಮೊದಲೇ ಗಂಟುಮೂಟೆ ಕಟ್ಟಿಕೊಂಡು ಹೊರಟು ಹೋಗಬೇಕಾಗುತ್ತದೆ ಎನ್ನುವ ಪ್ರಜಾಪ್ರಭುತ್ವ ವ್ಯವಸ್ಥೆಯ ಕಠೋರ ಸತ್ಯವನ್ನೂ ಅವರು ಅರ್ಥಮಾಡಿಕೊಂಡಿಲ್ಲ.

ಗೆಲುವಿನ ಕಾರಣಗಳನ್ನು ಅರ್ಥಮಾಡಿಕೊಳ್ಳಲು ವಿಫಲನಾದವನು ಆ ಗೆಲುವನ್ನು ಬಹಳ ಕಾಲ ಉಳಿಸಿಕೊಳ್ಳಲು ಆಗುವುದಿಲ್ಲ. ಯಡಿಯೂರಪ್ಪನವರ ರಾಜಕೀಯ ಹಿನ್ನಡೆಗೆ ಇದು ಕಾರಣ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ತನ್ನಿಂದ ಎಂದು ಅವರು ಬಲವಾಗಿ ನಂಬಿದ್ದಾರೆ. ಅವರು ಒಂದು ಪ್ರಾದೇಶಿಕ ಪಕ್ಷದ ನಾಯಕರಾಗಿ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂದಿದ್ದರೆ ಅವರ ನಂಬಿಕೆಗೆ ಆಧಾರ ಇರುತ್ತಿತ್ತು, ಅದನ್ನು ನಂಬಬಹುದಿತ್ತು.

ಆದರೆ ಯಡಿಯೂರಪ್ಪನವರು ಒಂದು ರಾಷ್ಟ್ರೀಯ ಪಕ್ಷದ ನಾಯಕರು. ರಾಜ್ಯದ ಮತದಾರರು ಆರಿಸಿದ್ದು ಭಾರತೀಯ ಜನತಾ ಪಕ್ಷವನ್ನು, ಕೇವಲ ಯಡಿಯೂರಪ್ಪನವರನ್ನಲ್ಲ. ಅದೇನು ದೊಡ್ಡ ಗೆಲುವು ಕೂಡಾ ಅಲ್ಲ. ಸಂಖ್ಯೆಯಲ್ಲಿ ಶಾಸಕರು ಹೆಚ್ಚಿದ್ದರೂ ಮತ ಪ್ರಮಾಣದಲ್ಲಿ  ಶೇಕಡಾ 0.73ರಷ್ಟು ಮುಂದೆ ಇದ್ದದ್ದು ಕಾಂಗ್ರೆಸ್.

ರಾಜ್ಯದಲ್ಲಿ  ಅಧಿಕಾರಕ್ಕೆ ಬರುವಷ್ಟು ಬಿಜೆಪಿ ಬೆಳೆಯಲು ಮುಖ್ಯಪಾತ್ರ ವಹಿಸಿದ್ದವರು ಬಿ.ಎಸ್.ಯಡಿಯೂರಪ್ಪ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅವರೊಬ್ಬರೇ ಗೆಲುವಿಗೆ ಕಾರಣರಲ್ಲ. ಯಡಿಯೂರಪ್ಪನವರ ಜನಪ್ರಿಯತೆಯ ಜತೆಯಲ್ಲಿ ಸೀಮಿತ ಪ್ರಮಾಣದಲ್ಲಿಯಾದರೂ ಸಂಘ ಪರಿವಾರ ಹೊಂದಿದ್ದ ನೆಲೆ, ಎಚ್.ಡಿ.ಕುಮಾರಸ್ವಾಮಿಯವರ `ವಚನಭಂಗ` ಹುಟ್ಟಿಸಿದ ಜನಾಕ್ರೋಶ, ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯವಾಗಿ ಅನ್ಯಾಯಕ್ಕೀಡಾಗಿದ್ದ ಮಾದಿಗ ಸಮುದಾಯವನ್ನು ಸೆಳೆದುಕೊಂಡು ನಡೆಸಿದ್ದ ಸೋಷಿಯಲ್ ಎಂಜಿನಿಯರಿಂಗ್, ಅಸ್ಪೃಶ್ಯರಲ್ಲದ ಬೋವಿ ಮತ್ತಿತರ ಜಾತಿಗಳ ಅಭ್ಯರ್ಥಿಗಳನ್ನು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಕ್ಷೇತ್ರದಲ್ಲಿ ಕಣಕ್ಕಿಳಿಸಿ ಮೇಲ್ಜಾತಿ ಮತಗಳನ್ನು ಪಡೆದ ರಾಜಕೀಯ ಜಾಣತನ, ನೀರಿನಂತೆ ಹರಿದ ಬಳ್ಳಾರಿ ಗಣಿ ಲೂಟಿಕೋರರ ದುಡ್ಡು....ಇವುಗಳೆಲ್ಲವೂ 2008ರಲ್ಲಿ ಬಿಜೆಪಿ ಗೆಲುವಿಗೆ ಕಾರಣ.

ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುತ್ತೇನೆ ಎಂದು ಯಡಿಯೂರಪ್ಪನವರು ಈಗ ಹೇಳುತ್ತಿರುವುದು ತನ್ನ ಯಾವ ಸಾಧನೆಯನ್ನು ನಂಬಿಕೊಂಡು? ಮೂರುವರೆ ವರ್ಷಗಳ ಕಾಲದ ಭ್ರಷ್ಟಾಚಾರ ಮುಕ್ತ ನಡವಳಿಕೆಯನ್ನೇ? ರಾಜ್ಯಕ್ಕೆ ಕೊಟ್ಟಿರುವ ಬಿಗಿಯಾದ  ಆಡಳಿತವನ್ನೇ?  ಅನುಷ್ಠಾನಕ್ಕೆ ತಂದಿರುವ ಜನಪರ ಅಭಿವೃದ್ಧಿ ಯೋಜನೆಗಳನ್ನೇ? ಶಾಸಕರು ಸೇರಿದಂತೆ ಸಹೋದ್ಯೋಗಿಗಳ ಜತೆ ತಾನು ಉಳಿಸಿಕೊಂಡಿರುವ ಸೌಹಾರ್ದಯುತ ಸಂಬಂಧವನ್ನೇ? ಯಾವುದನ್ನು?  ಲೋಕಾಯುಕ್ತ ಸಲ್ಲಿಸಿದ್ದ ಪ್ರಥಮಮಾಹಿತಿ ವರದಿಯನ್ನು ಹೈಕೋರ್ಟ್ ರದ್ದು ಮಾಡಿದ ಮಾತ್ರಕ್ಕೆ ತಾನು ದೋಷಮುಕ್ತ ಎಂದು ಅವರು ಹೇಗೆ ತಿಳಿದುಕೊಂಡರೋ ಗೊತ್ತಿಲ್ಲ.  ಅವರ ಬೆಂಬಲಿಗರು ಸದಾ ಹೇಳುತ್ತಿರುವ `ಸಹಜ ನ್ಯಾಯ`ದ ಪ್ರಕಾರ ಆ ಪ್ರಕರಣ ಸುಪ್ರೀಂಕೋರ್ಟ್‌ನ ವಿಚಾರಣೆಗೊಳಪಡಬೇಕಲ್ಲವೇ? ಒಂದೊಮ್ಮೆ ಹೈಕೋರ್ಟ್ ತೀರ್ಪು ತನ್ನ ವಿರುದ್ಧವಾಗಿ ಬಂದಿದ್ದರೆ ಅದನ್ನು ಯಡಿಯೂರಪ್ಪನವರು ಒಪ್ಪಿಕೊಳ್ಳುತ್ತಿದ್ದರೇ? ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತಿರಲಿಲ್ಲವೇ?  ತನ್ನ ನಿರಪರಾಧಿತನದ ಬಗ್ಗೆ ಅವರು ಅಷ್ಟೊಂದು ವಿಶ್ವಾಸ ಹೊಂದಿದ್ದರೆ ಆದಷ್ಟು ಬೇಗ ಲೋಕಾಯುಕ್ತ ಮೇಲ್ಮನವಿ ಸಲ್ಲಿಸುವಂತೆ ಮಾಡಿ ಸುಪ್ರೀಂಕೋರ್ಟ್‌ನಿಂದಲೇ ಪ್ರಾಮಾಣಿಕತೆಗೆ  ಯಾಕೆ ಸರ್ಟಿಫಿಕೇಟ್ ತೆಗೆದುಕೊಳ್ಳಬಾರದು? ಯಡಿಯೂರಪ್ಪನವರನ್ನು ಭ್ರಷ್ಟಾಚಾರದ ಆರೋಪಗಳು ಯಾವ ರೀತಿಯಲ್ಲಿ ಸುತ್ತಿಕೊಂಡಿವೆ ಎಂದರೆ ಬಹಳ ಬೇಗ ಅವೆಲ್ಲವುಗಳಿಂದ ಬಿಡಿಸಿಕೊಳ್ಳುವುದು ಕಷ್ಟ. ಇವುಗಳಿಂದ ಬಿಡಿಸಿಕೊಳ್ಳದೆ ಚುನಾವಣೆಯಲ್ಲಿ ಮತದಾರರನ್ನು ಹೇಗೆ ಎದುರಿಸಲು ಸಾಧ್ಯ?

ಭ್ರಷ್ಟಾಚಾರದ ಆರೋಪ ಹೊತ್ತವರೂ ಉತ್ತಮ ಆಡಳಿತಗಾರರಾಗಿರುವ ಉದಾಹರಣೆಗಳು ಸಾಕಷ್ಟಿವೆ. ಶರದ್‌ಪವಾರ್, ಮಾಯಾವತಿ, ಜಯಲಲಿತಾ ಮೊದಲಾದವರೆಲ್ಲ ಈ ಗುಂಪಿಗೆ ಸೇರಿದವರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದಲ್ಲಿ ಎಷ್ಟು ದಿನ ಶಿಸ್ತಿನಿಂದ ಕೂತು ಆಡಳಿತ ನಡೆಸಿದ್ದಾರೆ? ಅಧಿಕಾರಿಗಳ ವರ್ಗಾವಣೆಗಳಷ್ಟೇ ಆಡಳಿತ ಅಲ್ಲವಲ್ಲ? ಬಜೆಟ್‌ನಲ್ಲಿ ಒಂದಷ್ಟು ಜನಪ್ರಿಯ ಯೋಜನೆಗಳ ಘೋಷಣೆ ಮತ್ತು ಮಠ-ಮಂದಿರಗಳಿಗೆ ದುಡ್ಡು ಹಂಚಿಕೆಯಷ್ಟೇ ಅಭಿವೃದ್ಧಿ ಯೋಜನೆಗಳೆಂದು ಅವರು ತಿಳಿದುಕೊಂಡ ಹಾಗಿದೆ. ರಾಜ್ಯದ ಕೃಷಿ ಮತ್ತು ಕೈಗಾರಿಕೆಗಳ ಕ್ಷೇತ್ರದಲ್ಲಿ ರಾಜ್ಯ ಹಿನ್ನಡೆ ಅನುಭವಿಸಿರುವುದಕ್ಕೆ ಸರ್ಕಾರವೇ ಮಂಡಿಸಿರುವ ಆರ್ಥಿಕ ಸಮೀಕ್ಷೆಗಿಂತ ಬೇರೆ ದಾಖಲೆಗಳೇನು ಬೇಕು? ಮಾತೆತ್ತಿದರೆ ಸೈಕಲ್, ಸೀರೆ, ಪಂಚೆ ಎನ್ನುವುದನ್ನು ಬಿಟ್ಟರೆ ಸರ್ಕಾರದ ಸಾಧನೆಯೆಂದು ಹೇಳಿಕೊಳ್ಳಲು ಬೇರೇನಾದರೂ ಇದೆಯೇ? ಮೂರುವರ್ಷಗಳಾಗುತ್ತಾ ಬಂದರೂ ಉತ್ತರ ಕರ್ನಾಟಕದ ನೆರೆಪೀಡಿತ ಕುಟುಂಬಗಳಿಗೆಲ್ಲ ಮನೆ ಕಟ್ಟಿಕೊಡಲು ಸಾಧ್ಯವಾಗದಿರುವುದನ್ನು ಸಾಧನೆ ಎನ್ನೋಣವೇ?

ಕೊನೆಯದಾಗಿ ಯಡಿಯೂರಪ್ಪನವರ ನಡವಳಿಕೆ. ಬಿಜೆಪಿ ಶಾಸಕರು ಬಂಡೆದ್ದು ಮೊದಲು ಗಾಲಿ ಜನಾರ್ದನ ರೆಡ್ಡಿ ಜತೆಯಲ್ಲಿ, ನಂತರ ಎಚ್.ಡಿ.ಕುಮಾರಸ್ವಾಮಿಯವರ ಜತೆಯಲ್ಲಿ ಸೇರಿಕೊಂಡು ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿದ್ದು ಮುಖ್ಯವಾಗಿ ಯಡಿಯೂರಪ್ಪನವರ ಮೇಲಿನ ಸಿಟ್ಟಿನಿಂದಾಗಿ. ತಮ್ಮ ಮಾತುಗಳನ್ನು ಕೇಳುವ ತಾಳ್ಮೆಯಾಗಲಿ, ಅದನ್ನು ಅರ್ಥಮಾಡಿಕೊಳ್ಳುವ ಔದಾರ್ಯವಾಗಲಿ ಅವರಲ್ಲಿ ಇಲ್ಲ ಎನ್ನುವುದೇ ಆ ಭಿನ್ನಮತೀಯರ ಪ್ರಮುಖ ದೂರು ಆಗಿತ್ತು. ಮೊನ್ನೆ ರೆಸಾರ್ಟ್‌ಗೆ ಬೆಂಬಲಿಗ ಶಾಸಕರನ್ನು ಕರೆದುಕೊಂಡು ಹೋದ ಅವರ ನಡವಳಿಕೆಯನ್ನು ಗಮನಿಸಿದರೆ ಯಡಿಯೂರಪ್ಪನವರು ಈಗಲೂ ಬದಲಾಗಿದ್ದಾರೆಂದು ಅನಿಸುವುದಿಲ್ಲ. ಭೇಟಿಗೆಂದು ತನ್ನ ಮನೆಗೆ ಬಂದವರನ್ನು ಹೊರಗೆ ಹೋಗಲು ಬಿಡದೆ ಕುರಿಗಳನ್ನು ಅಟ್ಟಿಸಿಕೊಂಡು ಹೋಗುವಂತೆ ಬಸ್‌ನಲ್ಲಿ ತುಂಬಿಸಿ ಕೊಂಡೊಯ್ದಿದ್ದಾರೆ. ಅವರಲ್ಲಿ ಬಹಳಷ್ಟು ಶಾಸಕರಿಗೆ ರೆಸಾರ್ಟ್ ವಾಸ ಅನಿರೀಕ್ಷಿತವಾಗಿತ್ತು. ಅವರೆಲ್ಲ ಬೆಂಬಲಿಗರಾಗಿದ್ದರೂ ತಮ್ಮ ಮೇಲೆ ವಿಶ್ವಾಸ ಇಲ್ಲದ ನಾಯಕನ ಈ ರೀತಿಯ ಬಲವಂತದ ನಡವಳಿಕೆಯನ್ನು ಖಂಡಿತ ಇಷ್ಟಪಡಲಾರರು.

ಹಾಗಿದ್ದರೆ ಯಾವ ಬಲವನ್ನು ನಂಬಿ ಅವರು ಬಿಜೆಪಿಯನ್ನು ಅಧಿಕಾರಕ್ಕೆ ಮರಳಿ ತರುತ್ತೇನೆ ಎಂದು ಹೇಳುತ್ತಿರುವುದು? ತನಗೆ ಜನರ ಬೆಂಬಲ ಇದೆ ಎಂದು ಅವರು ಹೇಳುತ್ತಿದ್ದಾರೆ. ಯಾವ ಜನ? ಈಗಿನ ವಿಧಾನಸಭೆಯಲ್ಲಿ ಅತೀ ಹೆಚ್ಚು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ್ದ ಶಾಸಕರನ್ನು ಹೊಂದಿರುವುದು ಬಿಜೆಪಿ. ಆದರೆ ಕಳೆದವಾರ ರೆಸಾರ್ಟಿನಲ್ಲಿ ಬಲ ಪ್ರದರ್ಶಿಸಲು ಕೂಡಿಹಾಕಿಕೊಂಡಿದ್ದ ಶಾಸಕರಲ್ಲಿ ಪರಿಶಿಷ್ಟ ಶಾಸಕರ ತಲೆಗಳು ಹೆಚ್ಚು ಕಾಣಲೇ ಇಲ್ಲ, ಪ್ರಮುಖ ದಲಿತ ನಾಯಕರು ಯಾರೂ ಅಲ್ಲಿ ಇರಲಿಲ್ಲ.

ಶೋಭಾ ಕರಂದ್ಲಾಜೆಯವರನ್ನೂ ಸೇರಿಸಿಕೊಂಡರೂ ಯಡಿಯೂರಪ್ಪನವರ ಜತೆಯಲ್ಲಿ ಕಾಣಿಸಿಕೊಂಡದ್ದು  ಇಬ್ಬರೋ ಮೂವರೋ ಒಕ್ಕಲಿಗ ಶಾಸಕರು ಅಷ್ಟೇ. ಹಿಂದುಳಿದ ಜಾತಿಗಳ ಶಾಸಕರಿದ್ದದ್ದು ಕೂಡಾ ಬೆರಳೆಣಿಕೆಯಲ್ಲಿ. ಅವರ ಸುತ್ತ ಸೇರಿರುವ ಬಹುತೇಕ ಶಾಸಕರು ಲಿಂಗಾಯತ ಜಾತಿಗೆ ಸೇರಿದವರು. ಶಕ್ತಿಪ್ರದರ್ಶನಕ್ಕೆ ಅವರು ಬಳಸಿಕೊಳ್ಳುತ್ತಿರುವುದು ಕೂಡಾ ಸ್ವಜಾತಿಯ ಸ್ವಾಮೀಜಿಗಳನ್ನು.

ಭಾರತದ ರಾಜಕೀಯದಲ್ಲಿ ಜಾತಿಯದ್ದು ಬಹಳ ನಿರ್ಣಾಯಕ ಪಾತ್ರ ಎನ್ನುವುದು ನಿಜ. ಆದರೆ ಇದನ್ನು ಅರ್ಥಮಾಡಿಕೊಳ್ಳದೆ ಇಲ್ಲಿನ ಜಾತಿವ್ಯವಸ್ಥೆಯ ಹುತ್ತದೊಳಗೆ ಪೆದ್ದರಂತೆ ಕೈಹಾಕುವವರನ್ನು ಒಳಗಿದ್ದ ಹಾವು ಎದ್ದುಬಂದು ಕಡಿದುಬಿಡುತ್ತದೆ. ಜಾತಿಯ ಆಧಾರದಲ್ಲಿಯೇ ಮತಚಲಾಯಿಸುವವರು ಒಂದಷ್ಟು ಸಂಖ್ಯೆಯಲ್ಲಿದ್ದರೂ ಹೆಚ್ಚಿನವರು ಜಾತಿ ಅಭ್ಯರ್ಥಿಗಳನ್ನು ಬೆಂಬಲಿಸಲು ಬೇರೆ ಕಾರಣಗಳೂ ಇರುತ್ತವೆ.  ಒಂದೊಮ್ಮೆ ಆ ರೀತಿ ಯಾವುದಾದರೂ ಒಂದು ಜಾತಿಯವರು ಸ್ವಜಾತಿ ಅಭ್ಯರ್ಥಿಗೆ ನೂರಕ್ಕೆ ನೂರರಷ್ಟು ಮತಹಾಕಿ ಗೆಲ್ಲಿಸಬೇಕೆಂದು ನಿರ್ಧರಿಸಿದರೂ ಅದಕ್ಕೆ ಬೇಕಾದ ಸಂಖ್ಯಾಬಲ ದೇಶದಲ್ಲಿರುವ ಯಾವ ಜಾತಿಗೂ ಇಲ್ಲ, ಬೇರೆ ಜಾತಿಯವರ ಬೆಂಬಲ ಬೇಕೇ ಬೇಕು. ಈ ದೇಶದಲ್ಲಿ ಅತ್ಯಂತ ನಿಷ್ಠಾವಂತ ಮತದಾರರನ್ನು ಹೊಂದಿರುವ ರಾಜಕೀಯ ನಾಯಕಿ ಮಾಯಾವತಿ. ಆ ರಾಜ್ಯದಲ್ಲಿ ಶೇಕಡಾ 22ರಷ್ಟಿರುವ ದಲಿತರು ಬಿಎಸ್‌ಪಿ ಬೆಂಬಲಿಗರು, ಅವರೊಳಗೆ ಶೇಕಡಾ ಹನ್ನೆರಡರಷ್ಟಿರುವ ಜಾಟವರು ಕಣ್ಣುಮುಚ್ಚಿಕೊಂಡು ಬೆಹೆನ್‌ಜಿಗೆ ಮತಹಾಕುವವರು. ಹೀಗಿದ್ದರೂ ಅವರು ಯಾಕೆ ಸೋತುಹೋದರು? ಕರ್ನಾಟಕದಲ್ಲಿ ಮುಸ್ಲಿಮರ ಜನಸಂಖ್ಯೆ ಲಿಂಗಾಯತರಿಗಿಂತ ಶೇಕಡಾ ಎರಡರಷ್ಟು ಮಾತ್ರ ಕಡಿಮೆ ಇದೆ.

ಮುಸ್ಲಿಮರು ಗುಂಪಾಗಿ ಒಂದೇ ಅಭ್ಯರ್ಥಿಗೆ ಮತಚಲಾಯಿಸುತ್ತಾರೆ ಎನ್ನುವ ಅಭಿಪ್ರಾಯವೂ ಇದೆ. ಹೀಗಿದ್ದರೂ ಗ್ರಾಮಪಂಚಾಯತ್‌ನಿಂದ ಸಂಸತ್‌ವರೆಗೆ ಎಷ್ಟು ಮುಸ್ಲಿಮ್ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅವರಿಗೆ ಸಾಧ್ಯವಾಗಿದೆ?

ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆ ಪ್ರಮಾಣ ಶೇಕಡಾ ಹದಿನೈದುವರೆ. ಒಂದಷ್ಟು ಕ್ಷೇತ್ರಗಳಲ್ಲಿ ಈ ಪ್ರಮಾಣ ಶೇಕಡಾ 20-25ರಷ್ಟಿರಬಹುದು. ಆದರೆ ಇಷ್ಟರಿಂದಲೇ ಒಬ್ಬ ಲಿಂಗಾಯತ ಅಭ್ಯರ್ಥಿ ಗೆಲ್ಲಲು ಸಾಧ್ಯವೇ? ಕಳೆದ ಚುನಾವಣೆಯ ಕಾಲದಲ್ಲಿ ರಾಜ್ಯದ ಲಿಂಗಾಯತರು ಬಹುಸಂಖ್ಯೆಯಲ್ಲಿ ಯಡಿಯೂರಪ್ಪನವರಿಂದಾಗಿ ಬಿಜೆಪಿಗೆ ಮತ ಹಾಕಿರುವುದು ನಿಜ ಇರಬಹುದು. ವೀರೇಂದ್ರ ಪಾಟೀಲರನ್ನು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸ್ಥಾನದಿಂದ ಕಿತ್ತುಹಾಕಿದ ನಂತರ ಅಸಮಾಧಾನಕ್ಕೀಡಾಗಿದ್ದ ಲಿಂಗಾಯತರು ರಾಜಕೀಯ ಬಲಪ್ರದರ್ಶನದ ಅವಕಾಶಕ್ಕಾಗಿ ಕಾಯುತ್ತಿದ್ದರು. ಅದೇ ಸಮಯದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಬಿಜೆಪಿ ರಾಜ್ಯದ ಪ್ರಮುಖ ಜಾತಿಗೆ ಸೇರಿರುವ ಒಬ್ಬ ಜನಪ್ರಿಯ ನಾಯಕನ ಹುಡುಕಾಟದಲ್ಲಿತ್ತು. ಈ ಎರಡೂ ಅವಕಾಶವನ್ನು ಯಡಿಯೂರಪ್ಪನವರು ಬಳಸಿಕೊಂಡರು, ಮುಖ್ಯಮಂತ್ರಿಯೂ ಆಗಿಬಿಟ್ಟರು.ಆದರೆ ತನ್ನ ಜಾತಿಯ ಜನ ಹೆಮ್ಮೆಪಟ್ಟುಕೊಳ್ಳುವಂತಹ ಜನಪ್ರಿಯ ನಾಯಕರಾಗಿ  ಬೆಳೆದರೇ? ಜನನಾಯಕನಾಗಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದ ಯಡಿಯೂರಪ್ಪನವರು ಮೂರುವರೆ ವರ್ಷಗಳ ಕಾಲದ ಅಧಿಕಾರದ ನಂತರ ತನ್ನ ರಾಜಕೀಯ ಉಳಿವಿಗಾಗಿ ಒಂದು ಜಾತಿಯ ನಾಯಕನಾಗಿ ತನ್ನನ್ನು ಬಿಂಬಿಸಿಕೊಳ್ಳುವ ಮಟ್ಟಕ್ಕೆ ಇಳಿದಿರುವುದು ಖಂಡಿತ ಅವರ ಜನಪ್ರಿಯತೆಯನ್ನು ತೋರಿಸುವುದಿಲ್ಲ.

ಇದು ಮೂರ್ಖರು ಮತ್ತು ತಿಕ್ಕಲರ ನಡುವಿನ ಪೈಪೋಟಿ March 19, 2012

ಕೇಂದ್ರ ಸರ್ಕಾರದಲ್ಲಿ ಕಾಣಿಸಿಕೊಂಡಿರುವ  ಬಿಕ್ಕಟ್ಟಿಗೆ ಎರಡು ಮುಖಗಳಿವೆ. ಮೊದಲನೆಯದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ರಾಜಕೀಯ ತಿಕ್ಕಲುತನ, ಎರಡನೆಯದು ಕಾಂಗ್ರೆಸ್ ಪಕ್ಷದ ಮೂರ್ಖತನ.

ಈಗಿನ ರಾಜಕೀಯ ಬಿಕ್ಕಟ್ಟಿಗೆ ಮೊದಲನೆಯದಕ್ಕಿಂತ ಎರಡನೆಯದ್ದೇ ಮುಖ್ಯ ಕಾರಣ. ಅಣ್ಣಾಹಜಾರೆ ಚಳುವಳಿಯಿಂದ ಹಿಡಿದು ರೈಲ್ವೆ ಬಜೆಟ್ ಪ್ರಹಸನದವರೆಗೆ ಕಾಂಗ್ರೆಸ್ ಕಾರ್ಯವೈಖರಿಯನ್ನು ನೋಡುತ್ತಾ ಬಂದರೆ ಆ ಪಕ್ಷದ ಮೂರ್ಖ ನಡವಳಿಕೆಗಳಿಗೆ ಇನ್ನಷ್ಟು ಸಮರ್ಥನೆಗಳು ಸಿಗುತ್ತವೆ.

ರಾಜಕೀಯದಲ್ಲಿ ಎದುರಾಳಿಗಳಿಗೆ ಬಡಿಯುವುದು, ಬಡಿಸಿಕೊಳ್ಳುವುದು ಇದ್ದೇ ಇರುತ್ತದೆ. ಆದರೆ ಮೂರ್ಖರು ಮಾತ್ರ ಎದುರಾಳಿಯ ಕೈಗೆ ಬಡಿಗೆ ಕೊಟ್ಟು ಬಡಿಸಿಕೊಳ್ಳುತ್ತಾರೆ. ಮಮತಾ ಬ್ಯಾನರ್ಜಿ ಜತೆಗಿನ ಸಂಘರ್ಷದಲ್ಲಿ ಇದನ್ನೇ ಕಾಂಗ್ರೆಸ್ ಮಾಡಿಕೊಂಡಿರುವುದು.

ಭಾರತದ ರಾಜಕೀಯದ ನಾಲ್ವರು ಕುಮಾರಿಯರಾದ ಜೆ.ಜಯಲಲಿತಾ, ಮಾಯಾವತಿ, ಮಮತಾ ಬ್ಯಾನರ್ಜಿ ಮತ್ತು ಉಮಾಭಾರತಿ ಜತೆಗಿನ ರಾಜಕೀಯ ಸಂಬಂಧ ಎಷ್ಟು ಕಠಿಣ ಎಂಬುದಕ್ಕೆ ಬೇಕಾದಷ್ಟು ಉದಾಹರಣೆಗಳಿವೆ. ತನ್ನ ಒಂದು ಕಣ್ಣು ಹೋದರೂ ಸರಿ, ವಿರೋಧಿಯ ಎರಡು ಕಣ್ಣು ಕಿತ್ತುಹಾಕಬೇಕೆನ್ನುವಷ್ಟು ಹಟಮಾರಿಗಳು ಈ ನಾಯಕಿಯರು.

ಇವರ ಅತಿರೇಕದ ನಡವಳಿಕೆಗಳಿಂದ ಆಗಿರುವ ರಾಜಕೀಯ ಅವಾಂತರಗಳನ್ನು ಜನರೂ ಮರೆತಿರಲಾರರು. ಉತ್ತರಪ್ರದೇಶದಲ್ಲಿ ಬಿಜೆಪಿ ಸೋತರೆ ಗಂಗಾನದಿಯಲ್ಲಿ ಮುಳುಗಿ ಸಾಯುವುದಾಗಿ ಮೊನ್ನೆ ಮೊನ್ನೆ ಉಮಾಭಾರತಿ ಸಾರ್ವಜನಿಕ ಸಭೆಯಲ್ಲಿ ಪ್ರತಿಜ್ಞೆ ಮಾಡಿದ್ದರು. ಆ ಪ್ರತಿಜ್ಞೆಯನ್ನು ನೆರವೇರಿಸಿದ ಸುದ್ದಿ ಇಲ್ಲಿಯವರೆಗೆ ಬಂದಿಲ್ಲ.

ಅಟಲಬಿಹಾರಿ ವಾಜಪೇಯಿಯವರು ಈ ನಾಲ್ವರು ಕುಮಾರಿಯರಿಂದ ಸಾಕಷ್ಟು ತಲೆನೋವು ಅನುಭವಿಸಿದ್ದಾರೆ. ಮಾತನಾಡುವ ಸ್ಥಿತಿಯಲ್ಲಿ ಇದ್ದಿದ್ದರೆ  ಅವರು ಮನಮೋಹನ್ ಸಿಂಗ್ ಅವರನ್ನು ಕರೆದು  ಅನುಭವವನ್ನು ಹಂಚಿಕೊಳ್ಳುತ್ತಿದ್ದರೇನೋ? ಆದ್ದರಿಂದ ಕಾಂಗ್ರೆಸ್ ಕೀಟಳೆಗೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ಅನಿರೀಕ್ಷಿತವೇನಲ್ಲ.

ಅವರು ಇರುವುದೇ ಹಾಗೆ, ಅವರ ಜತೆ ಮೈತ್ರಿ ಬೇಕಿದ್ದರೆ ಆ ಸ್ಥಿತಿಯಲ್ಲಿಯೇ ಒಪ್ಪಿಕೊಂಡು ಸಂಬಂಧವನ್ನು ಉಳಿಸಿಕೊಂಡು ಹೋಗಬೇಕು, ಇಲ್ಲವಾದರೆ ಅದನ್ನು ಕಡಿದುಕೊಳ್ಳಬೇಕು. ಇದಕ್ಕೆ ಬದಲಾಗಿ ಸುಮ್ಮನೆ ಚಿವುಟಲು ಹೋದರೆ ಮುಸುಡಿಗೆ ಬಡಿಸಿಕೊಳ್ಳಬೇಕಾಗುತ್ತದೆ.

ಪೆಟ್ರೋಲ್ ದರ ಏರಿಕೆಯಿಂದ ಎನ್‌ಎಟಿಸಿ ರಚನೆವರೆಗೆ ಯುಪಿಎ ಸರ್ಕಾರದ ಹಲವಾರು ಪ್ರಮುಖ ನೀತಿ-ನಿರ್ಧಾರಗಳನ್ನು ತಡೆಹಿಡಿಯುವ ಮೂಲಕ ಮಮತಾ ಬ್ಯಾನರ್ಜಿ ತನ್ನನ್ನು ನಿರ್ಲಕ್ಷಿಸಬೇಡಿ ಎಂಬ ಸಂದೇಶವನ್ನು ಕಳುಹಿಸುತ್ತಲೇ ಇದ್ದಾರೆ.

ವಿರೋಧಿಸುವುದು ಅವರ ಮೂಲ ಸ್ವಭಾವ, ಜತೆಗೆ ಪಶ್ಚಿಮ ಬಂಗಾಳದಲ್ಲಿ ತನ್ನ ಪಕ್ಷದ ನೆಲೆಯನ್ನು ಉಳಿಸಿಕೊಳ್ಳಲು ಈ ರೀತಿಯ ಕಾಂಗ್ರೆಸ್ ವಿರೋಧದ ಸಂದೇಶವನ್ನು ಕಳುಹಿಸುವುದು ಅವರಿಗೂ ಅನಿವಾರ್ಯವಾಗಿರಲೂಬಹುದು.

ಇದನ್ನು ಅರ್ಥಮಾಡಿಕೊಂಡು ಈ ಒಳಜಗಳ ಬೀದಿಗೆ ಬರದಂತೆ ನೋಡಿಕೊಳ್ಳಬೇಕಾಗಿದ್ದ ಜವಾಬ್ದಾರಿ ಕಾಂಗ್ರೆಸ್ ಪಕ್ಷದ್ದಾಗಿತ್ತು. ಆದರೆ ಕಾಂಗ್ರೆಸ್ ನಾಯಕರು ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿಯೇ ಸಮಾಜವಾದಿ ಪಕ್ಷದ ಜತೆಗಿನ ಸಂಭವನೀಯ ಮೈತ್ರಿಯ ಗಾಳಿಸುದ್ದಿಯನ್ನು ತೇಲಿಬಿಟ್ಟು ಮಮತಾ ಅವರನ್ನು ಇನ್ನಷ್ಟು ಕೆರಳಿಸಿದ್ದರು.

ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ರೈಲ್ವೆ ಬಜೆಟ್ ದಿಟ್ಟತನದ ಪ್ರಯತ್ನ ಎನ್ನುವುದರಲ್ಲಿ ಅನುಮಾನ ಇಲ್ಲವೇ ಇಲ್ಲ.  ರೈಲ್ವೆಸಚಿವ ದಿನೇಶ್ ತ್ರಿವೇದಿ ಅವರ ಪಕ್ಷದ ನಾಯಕಿಯಾಗಿರುವ ಮಮತಾ ಬ್ಯಾನರ್ಜಿಯವರೂ ಸೇರಿದಂತೆ ಕಳೆದ ಹತ್ತುವರ್ಷಗಳ ಅವಧಿಯ ಎಲ್ಲ ರೈಲ್ವೆ ಸಚಿವರೂ ಕೇವಲ ಜನಪ್ರಿಯತೆಗಾಗಿ ಪ್ರಯಾಣ ದರವನ್ನು ಹೆಚ್ಚಿಸದೆ ಇಲಾಖೆಯನ್ನು ದಿವಾಳಿ ಸ್ಥಿತಿಗೆ ತಂದು ನಿಲ್ಲಿಸಿದ್ದರು. ತ್ರಿವೇದಿಯವರು ಈ ಜನವಿರೋಧಿ ಪರಂಪರೆಯನ್ನು ಮುರಿದು ಬಜೆಟ್ ಮಂಡಿಸಿದ್ದಾರೆ.

ಸದಾ ಅಭದ್ರತೆಯಿಂದ ನರಳುತ್ತಿರುವ ಮಮತಾ ಬ್ಯಾನರ್ಜಿ  ಸಹೋದ್ಯೋಗಿಯ ಇಂತಹ ದಿಟ್ಟತನವನ್ನು ಸಹಿಸಿಕೊಳ್ಳುವ ಸ್ವಭಾವದವರಲ್ಲ. ಅವರದ್ದು ಆಂತರಿಕ ಪ್ರಜಾತಂತ್ರ ಇಲ್ಲದ ಏಕವ್ಯಕ್ತಿ ಕೇಂದ್ರಿತ ಪಕ್ಷ.ಈ ವಿಷಯದಲ್ಲಿ ಅವರು ಜಯಲಲಿತಾ ಮತ್ತು ಮಾಯಾವತಿ ಪರಂಪರೆಗೆ ಸೇರಿದವರು.

ರೈಲ್ವೆ ಖಾತೆಯೊಂದನ್ನು ಹೊರತುಪಡಿಸಿ ಬೇರೆ ಯಾವ ಖಾತೆಯಲ್ಲಿಯೂ ತಮ್ಮ ಪಕ್ಷದ ಸದಸ್ಯರನ್ನು ಸಂಪುಟ ಸಚಿವರಾಗಲು ಬಿಡದಷ್ಟು ಸಣ್ಣ ಮನಸ್ಸಿನ ನಾಯಕಿ ಮಮತಾ.

ಇವೆಲ್ಲವೂ ಕಾಂಗ್ರೆಸ್ ನಾಯಕರಿಗೆ ಗೊತ್ತಿದ್ದ ಕಾರಣ ಅವರು ಇನ್ನಷ್ಟು ಎಚ್ಚರಿಕೆಯಿಂದ ವರ್ತಿಸಬೇಕಿತ್ತು. ಪ್ರಯಾಣ ದರ ಹೆಚ್ಚಳದಂತಹ ಪ್ರಮುಖ ನಿರ್ಧಾರವನ್ನು ಬಜೆಟ್‌ನಲ್ಲಿ ಪ್ರಕಟಿಸಲು ಹೊರಟಾಗ ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷದ ಜತೆ ಸಮಾಲೋಚನೆ ನಡೆಸುವುದು ಬೇಡವೇ? ಅದೂ ಅದೇ ಪಕ್ಷದವರು ರೈಲ್ವೆ ಸಚಿವರಾಗಿದ್ದಾಗ. ಅಂತಹದ್ದೊಂದು ಮಾತುಕತೆ ನಡೆಸಿದ್ದರೆ ಸರ್ಕಾರ ಈಗಿನ ಮುಜುಗರದ ಪರಿಸ್ಥಿತಿಯನ್ನು ಎದುರಿಸಬೇಕಾಗಿರಲಿಲ್ಲ.

ಆದರೆ ಅದು ಮಾಡಿದ್ದೇನು? ಸ್ವಂತ ಬಲದಿಂದ ಮುನ್ಸಿಪಾಲಿಟಿ ಚುನಾವಣೆಯಲ್ಲಿಯೂ ಗೆಲ್ಲಲಾಗದ ದಿನೇಶ್ ತ್ರಿವೇದಿ ಎಂಬ ದುರ್ಬಲ ನಾಯಕನನ್ನು ಮುಂದಿಟ್ಟುಕೊಂಡು ಮಮತಾ ಬ್ಯಾನರ್ಜಿ ವಿರುದ್ಧ ದಾಳಿ ಮಾಡಲು ಹೊರಟಿತು. ಸಂಸದೀಯ ನಡವಳಿಕೆಗಳ ಪ್ರಕಾರ ಕೇಂದ್ರ ಸಂಪುಟದ ಸಚಿವರು ತಮ್ಮ ಖಾತೆಯ ನಿರ್ವಹಣೆಯಲ್ಲಿ ಪಕ್ಷದ ನಾಯಕರ ಸಲಹೆಯನ್ನು ಪಡೆಯಬೇಕಾಗಿಲ್ಲ ಎನ್ನುವುದು ನಿಜ.

ಆದರೆ ಒಂದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿನ ಅಭ್ಯರ್ಥಿಯ ಆಯ್ಕೆಗಾಗಿಯೂ ಸೋನಿಯಾ ಗಾಂಧಿಯವರ ಮನೆ ಬಾಗಿಲು ತಟ್ಟಬೇಕಾಗಿರುವ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷ ಮಿತ್ರಪಕ್ಷದಿಂದ ಇಷ್ಟೊಂದು ವಿಶಾಲ ಮನಸ್ಸನ್ನು ಹೇಗೆ ನಿರೀಕ್ಷಿಸಲು ಸಾಧ್ಯ?

 ಈಗಿನ ಬಿಕ್ಕಟ್ಟಿನಲ್ಲಿ ಮಮತಾ ಬ್ಯಾನರ್ಜಿ ಅವರ ತಿಕ್ಕಲುತನದ ಕೊಡುಗೆಯೂ ದೊಡ್ಡದು. ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರುವ ಮೊದಲು ಈ ತಿಕ್ಕಲುತನದ ಪರಿಣಾಮವನ್ನು ಅವರು ನಿರ್ವಹಿಸಿದ ಖಾತೆಗಳು ಮತ್ತು ಪಕ್ಷ ಮಾತ್ರ ಅನುಭವಿಸುತ್ತಿತ್ತು, ಈಗ ಇಡೀ ದೇಶ  ಅನುಭವಿಸುವಂತಾಗಿದೆ. ಮತ್ತೆ ಉಳಿದ ಮೂವರು ಕುಮಾರಿಯರಿಗೆ ಹೋಲಿಸುವುದಾದರೆ ಅವರೆಲ್ಲರಿಗಿಂತ ಮಮತಾ ಬ್ಯಾನರ್ಜಿ ಪ್ರಾಮಾಣಿಕರು ಮತ್ತು ಸರಳ ಜೀವಿ.

ಈ ಎರಡು ಗುಣಗಳನ್ನು ಸನ್ಯಾಸಿನಿ ಎಂದು ಹೇಳಿಕೊಳ್ಳುತ್ತಿರುವ ಉಮಾಭಾರತಿಯವರಲ್ಲಿಯೂ ಕಾಣಲಾಗದು, ಜಯಲಲಿತಾ ಮತ್ತು ಮಾಯಾವತಿ ಅವರಿಗೆ ಅಂಟಿಕೊಂಡಿರುವ ಭ್ರಷ್ಟಾಚಾರದ ಕಳಂಕ ಮತ್ತು ಐಷಾರಾಮಿ ಜೀವನದ ಶೋಕಿಗಳು ಮಮತಾ ಬ್ಯಾನರ್ಜಿ ಅವರಿಗಿಲ್ಲ. ರಾಜಕೀಯದಲ್ಲಿರುವ ಹೆಣ್ಣು-ಗಂಡು ಎಲ್ಲರನ್ನೂ ಸೇರಿಸಿ ಹೇಳುವುದಾದರೆ ಸರಳ ಜೀವನದ ವಿಷಯದಲ್ಲಿ ಮಮತಾ ಬ್ಯಾನರ್ಜಿಯವರಿಗೆ ಮತ್ತೊಬ್ಬರು ಸಾಟಿ ಇಲ್ಲ.

ಆದರೆ ಇವುಗಳ ಜತೆ ಮಾಯಾವತಿ ಮತ್ತು ಜಯಲಲಿತಾ ನಾಯಕಿಯರು ಬಿಗಿಯಾದ ಆಡಳಿತಕ್ಕಾಗಿಯೂ ಖ್ಯಾತಿ ಹೊಂದಿದವರು, ಆ ಸಾಮರ್ಥ್ಯ ಮಮತಾ ಬ್ಯಾನರ್ಜಿ ಅವರಲ್ಲಿಲ್ಲ. ಪಶ್ಚಿಮ ಬಂಗಾಳದ ಜನತೆ ಎಡಪಕ್ಷಗಳ ಮೇಲಿನ ಸಿಟ್ಟಿನಿಂದ ಮಮತಾ ಬ್ಯಾನರ್ಜಿ ಅವರ ಪಕ್ಷವನ್ನು ಆಯ್ಕೆ ಮಾಡಿದ್ದಾರೆ, ಬೇರೆ ನಿರೀಕ್ಷೆಗಳೂ ಅವರಿಗೂ ಇದ್ದಿರಲಾರದು.

ಎಡಪಕ್ಷಗಳನ್ನು ಅಭಿವೃದ್ಧಿ ವಿರೋಧಿಗಳೆನ್ನುವುದಾದರೆ ಮಮತಾ ಬ್ಯಾನರ್ಜಿ ಯಾವ ಅಭಿವೃದ್ಧಿಯ ಹರಿಕಾರರು? ಅಭಿವೃದ್ಧಿಪರ ನಿಲುವು ಅವರ ಯಾವ ಮಾತು-ಕೃತಿಗಳಲ್ಲಿ ವ್ಯಕ್ತವಾಗಿದೆ? ಮೂರು ಬಾರಿ ರೈಲ್ವೆ ಸಚಿವರಾಗಿ, ಒಂದು ಬಾರಿ ಕಲ್ಲಿದ್ದಲು ಮತ್ತು ಗಣಿ ಸಚಿವರಾಗಿ ಮಮತಾ ಬ್ಯಾನರ್ಜಿ ಮಾಡಿರುವ ಸಾಧನೆಗಳು ಯಾರ ನೆನಪಿನಲ್ಲಾದರೂ ಇವೆಯೇ?

ಮಮತಾ ಬ್ಯಾನರ್ಜಿ ಅವರು ಬುದ್ದಿವಂತೆಯಾಗಿದ್ದರೆ, ಪಶ್ಚಿಮ ಬಂಗಾಳದ ಜನತೆಯ ಬಗ್ಗೆ ಕಾಳಜಿ ಹೊಂದಿದ್ದರೆ ಕೇಂದ್ರ ಸರ್ಕಾರದ ಜತೆ ಕಾಲು ಕೆರೆದು ಜಗಳ ಮಾಡುತ್ತಿರಲಿಲ್ಲ. ಕನಿಷ್ಠ ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರ ಕಾರ್ಯಶೈಲಿಯನ್ನಾದರೂ ಅವರು ಅನುಸರಿಸಬಹುದಿತ್ತು.

ಎನ್‌ಡಿಎ ನಾಯಕತ್ವ ಹೊಂದಿರುವ ಬಿಜೆಪಿಯ ಎಲ್ಲ ನೀತಿ-ನಿರ್ಧಾರಗಳನ್ನು ನಿತೀಶ್‌ಕುಮಾರ್ ಈಗಲೂ ಒಪ್ಪುವುದಿಲ್ಲ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಬಿಹಾರಕ್ಕೆ ಕಾಲಿಡಲು ಅವರು ಬಿಟ್ಟಿಲ್ಲ. ಆದರೆ ಅದೇ ವೇಳೆ ಎನ್‌ಡಿಎ ಜತೆ ನೇರಾನೇರ ಗುದ್ದಾಟವನ್ನೂ ಅವರು ನಡೆಸುತ್ತಿಲ್ಲ.

ವಿರೋಧಪಕ್ಷವಾದ ಕಾಂಗ್ರೆಸ್ ಜತೆಯಲ್ಲಿಯೂ ಅವರು ಸಂಘರ್ಷಕ್ಕೆ ಇಳಿಯದೆ ರಾಜ್ಯದ ಅಭಿವೃದ್ಧಿಗೆ ಬೇಕಾದ ಕೇಂದ್ರದ ನೆರವನ್ನು ಉಪಾಯದಿಂದ ಪಡೆದುಕೊಂಡು ಸದ್ದಿಲ್ಲದಂತೆ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ.

ಅಭಿವೃದ್ಧಿಯ ಮಾನದಂಡದಲ್ಲಿ ಬಿಹಾರಕ್ಕಿಂತ ಪಶ್ಚಿಮ ಬಂಗಾಳವೇನೂ ಬಹಳ ಮುಂದಿಲ್ಲ. ಅಲ್ಲಿನ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ನೀಡಬೇಕೆನ್ನುವ ತಮ್ಮ ಹಳೆಯ ಬೇಡಿಕೆಯನ್ನು ಮಮತಾ ಬ್ಯಾನರ್ಜಿಯವರೇ ಮರೆತುಬಿಟ್ಟಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿಯೂ ಅದರ ಉಲ್ಲೇಖ ಇದ್ದಂತಿಲ್ಲ. ಇಂತಹ ವಿಷಯಗಳನ್ನು ಮುಂದಿಟ್ಟು ಕಾಂಗ್ರೆಸ್ ಪಕ್ಷದ ಜತೆ ಚೌಕಾಶಿ ನಡೆಸಿದ್ದರೆ ಪಶ್ಚಿಮ ಬಂಗಾಳದ ಜನರಾದರೂ ಅವರ ಬೆಂಬಲಕ್ಕೆ ನಿಲ್ಲುತ್ತಿದ್ದರು.

ರಾಜಕೀಯವಾಗಿ ಪ್ರಜ್ಞಾವಂತರಾಗಿರುವ ಆ ರಾಜ್ಯದ ಜನತೆ ಮಮತಾ ಬ್ಯಾನರ್ಜಿ ಅವರ ಈಗಿನ ತಿಕ್ಕಲು ನಡವಳಿಕೆಯನ್ನು ಬಹಳ ದಿನ ಸಹಿಸಿಕೊಳ್ಳಲಾರರು. ಇದರಿಂದಾಗಿ ಎಡಪಕ್ಷಗಳು ಪೂರ್ಣವಾಗಿ ಐದು ವರ್ಷ ವಿರೋಧಪಕ್ಷದ ಸ್ಥಾನದಲ್ಲಿಯೇ ಕೂರಬೇಕಾದ ಪರಿಸ್ಥಿತಿ ಇರಲಾರದು.

ಮಮತಾ ಬ್ಯಾನರ್ಜಿ ಅವರಿಂದ ಬಿಡುಗಡೆ ಪಡೆಯಲು ಕಾಂಗ್ರೆಸ್ ಪಕ್ಷ ಹೂಡಿರುವ ತಂತ್ರ ಕೂಡಾ ಅಷ್ಟೇ ಆತ್ಮಹತ್ಯಾಕಾರಿಯಾದುದು. ಯಾವ ಪಕ್ಷದ ಬಲದಿಂದ ಕಾಂಗ್ರೆಸ್ ಪಕ್ಷ ಮಮತಾ ಬ್ಯಾನರ್ಜಿ ಅವರನ್ನು ಎದುರು ಹಾಕಿಕೊಳ್ಳಲು ಹೊರಟಿದೆಯೋ ಆ ಪಕ್ಷ ಇನ್ನೂ ಅಪಾಯಕಾರಿ.

ಬ್ಯಾನರ್ಜಿ ಮೂಲತಃ ಕಾಂಗ್ರೆಸಿನವರು, ಒಂದು ರೀತಿಯಲ್ಲಿ ಅವರು ಅರ್ಧ ಕಾಂಗ್ರೆಸ್. ಅಷ್ಟು ಮಾತ್ರವಲ್ಲ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡಮಟ್ಟದ ನಿರೀಕ್ಷೆಗಳೂ ಇಲ್ಲ. ಅಲ್ಲಿ ಅದು ಆಡಳಿತ ಪಕ್ಷವನ್ನು ಹಿಂಬಾಲಿಸಿಕೊಂಡು ಇರುವುದರಿಂದ ಅದಕ್ಕೆ ನಷ್ಟವೂ ಇಲ್ಲ.

ಆದರೆ ಸಮಾಜವಾದಿ ಪಕ್ಷದ ಜತೆಗಿನ ಮೈತ್ರಿ ಅಷ್ಟು ಸರಳವಾಗಿಲ್ಲ. ಕಾಂಗ್ರೆಸ್ ವಿರೋಧಿ ರಾಜಕಾರಣವನ್ನೇ ಮಾಡುತ್ತಾ ಬಂದ ಮುಲಾಯಂಸಿಂಗ್ ಯಾದವ್ ಬದಲಾಗುವುದು ಸಾಧ್ಯವೇ ಇಲ್ಲ.

ಇಷ್ಟು ಮಾತ್ರವಲ್ಲ ಉತ್ತರಪ್ರದೇಶವನ್ನು ಮರಳಿ ಗೆಲ್ಲಬೇಕೆಂಬ ಆಸೆಯನ್ನು ಕಾಂಗ್ರೆಸ್ ಹೇಗೆ ಬಿಟ್ಟುಕೊಟ್ಟಿಲ್ಲವೋ ಹಾಗೆ ತೃತೀಯ ರಂಗ ರಚನೆಯ ಪ್ರಯತ್ನವನ್ನು ಮುಲಾಯಂಸಿಂಗ್ ಯಾದವ್ ಅವರೂ ಕೈಬಿಟ್ಟಿಲ್ಲ. ಈ ಸ್ಥಿತಿಯಲ್ಲಿ ಸಮಾಜವಾದಿ ಪಕ್ಷದ ಜತೆಗಿನ ಮೈತ್ರಿ ಎಂದರೆ ಸೆರಗಲ್ಲಿ ಕೆಂಡ ಕಟ್ಟಿಕೊಂಡಂತೆ.

ಈಗಿನ ಬಿಕ್ಕಟ್ಟು ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳಿಗಷ್ಟೇ ಸೀಮಿತವಾಗಿ ಕೊನೆಗೊಳ್ಳುವಂತಹದ್ದಲ್ಲ. ಈಗಿನದ್ದು ಮಾತ್ರವಲ್ಲ ಬಹುಶಃ ಮುಂದಿನದ್ದು ಕೂಡಾ ಮೈತ್ರಿಕೂಟದ ಯುಗ.

ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಯಾವ ಪಕ್ಷ ಕೂಡಾ ಸರಳ ಬಹುಮತಕ್ಕೆ ಬೇಕಾಗುವಷ್ಟು ಸ್ಥಾನಗಳನ್ನು ಗಳಿಸಲು ಸಾಧ್ಯವಾಗಲಾರದು. ಈ ವಾಸ್ತವವನ್ನು ಒಪ್ಪಿಕೊಂಡರೆ ಎಲ್ಲರಿಗೂ ಕ್ಷೇಮ.

ಬದಲಾಗಿರುವ ಕಾಲಕ್ಕೆ ತಕ್ಕ ಹಾಗೆ ಪಕ್ಷಗಳು ಮುಖ್ಯವಾಗಿ ಮೈತ್ರಿಕೂಟದ ನೇತೃತ್ವ ವಹಿಸಿರುವ ಪಕ್ಷ ತಮ್ಮ ರಾಜಕೀಯ ನಡವಳಿಕೆಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.

ಏಕಪಕ್ಷದ ಆಡಳಿತ ಸರ್ವಾಧಿಕಾರಕ್ಕೆ ದಾರಿಮಾಡಿಕೊಟ್ಟಂತೆ ಬಹುಪಕ್ಷಗಳಿಂದ ಕೂಡಿದ ಮೈತ್ರಿಕೂಟ  ಸದಾ ಕೇಂದ್ರ ನಾಯಕತ್ವವನ್ನು ದುರ್ಬಲಗೊಳಿಸಲು  ಪ್ರಯತ್ನಿಸುತ್ತಿರುತ್ತದೆ. ಮೈತ್ರಿಕೂಟದ ನಾಯಕತ್ವ ವಹಿಸಿದ್ದ ಪಕ್ಷ ದುರ್ಬಲವಾದಷ್ಟು ತಾವು ಸುರಕ್ಷಿತ ಎಂಬ ಭಾವನೆ ಪ್ರಾದೇಶಿಕ ಪಕ್ಷಗಳಲ್ಲಿದೆ.

ಯಾವ ಪ್ರಾದೇಶಿಕ ಪಕ್ಷ ಕೂಡಾ ಬಲಿಷ್ಠವಾದ ಕೇಂದ್ರ ಸರ್ಕಾರವನ್ನು ಬಯಸುವುದಿಲ್ಲ, ಅಂತಹ ಸರ್ಕಾರ ತಮ್ಮ ಹಿತಾಸಕ್ತಿಗೆ ಮಾರಕ ಎಂದು ಅವುಗಳು ಅನುಭವದ ಬಲದಿಂದ ತಿಳಿದುಕೊಂಡಿದೆ.

ಆದರೆ ಇಂತಹ ದುರ್ಬಲ ಕೇಂದ್ರ ಸರ್ಕಾರ ದೇಶದ ಹಿತಾಸಕ್ತಿಗೆ ಮಾರಕ. ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಮಾತ್ರವಲ್ಲ ದೇಶ ಕೂಡಾ ಎದುರಿಸಲಿರುವ ಬಹುದೊಡ್ಡ ಸವಾಲು ಇದು.