Monday, February 6, 2012

ಚಿದಂಬರಂ ಕಾಂಗ್ರೆಸ್ ಪಕ್ಷದ ಮಿತ್ರನೋ, ಶತ್ರುವೋ? February 06, 2012

ಪಳನಿಯಪ್ಪ ಚಿದಂಬರಂ ಸ್ವಯಂಘೋಷಿತ ನಾಸ್ತಿಕ. ಅದೃಷ್ಟ-ದುರದೃಷ್ಟದಲ್ಲಿ ತಮಗೆ ನಂಬಿಕೆ ಇದೆ ಎಂದು ಅವರು ಹೇಳಲಾರರು. ಆದರೆ, ಅವರ ವಿರುದ್ಧದ ಆರೋಪಗಳ ಬಗ್ಗೆ ತನಿಖೆಗೆ ಅವಕಾಶ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಸಿಬಿಐ ಕೋರ್ಟ್ ಶನಿವಾರ ವಜಾಗೊಳಿಸಿದ ನಂತರ  `ಕಾಣದ ಕೈ`ಗಳನ್ನೆಲ್ಲ ಅವರು ನಂಬುವಂತೆ ಮಾಡಲೂಬಹುದು.
 
2ಜಿ ತರಂಗಾಂತರ ಹಂಚಿಕೆ ಹಗರಣಗಳ ತನಿಖೆಯನ್ನು ಗಮನಿಸುತ್ತ ಬಂದವರ‌್ಯಾರೂ ಸಿಬಿಐ ಕೋರ್ಟ್‌ನ ಈ ಆದೇಶವನ್ನು ನಿರೀಕ್ಷಿಸಲಾರರು. ಪ್ರಧಾನಿ ಮನಮೋಹನ್‌ಸಿಂಗ್ ಮತ್ತು ಸಚಿವ ಚಿದಂಬರಂ ಮಾತ್ರ ಇಂತಹದ್ದೊಂದು ಆದೇಶವನ್ನು ನಿರೀಕ್ಷಿಸುತ್ತಿದ್ದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದರು.
 
ಅವರ ನಿರೀಕ್ಷೆಯಂತೆಯೇ ಆದೇಶ ಬಂದಿದೆ. ಸದ್ಯಕ್ಕೆ ಪ್ರಧಾನಿಯೂ ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ, ಆಡಳಿತ ಪಕ್ಷದ ಮೇಲೆ ಎರಗುತ್ತಿದ್ದ ವಿರೋಧಪಕ್ಷಗಳ ಕೈಯ್ಯಲ್ಲಿದ್ದ ಕತ್ತಿಯೂ ಹರಿತ ಕಳೆದುಕೊಂಡಿದೆ. ಮಾಜಿ ಸಚಿವ ಎ.ರಾಜಾ ಇನ್ನಷ್ಟು ಕಾಲ ಜತೆಗಾರರಿಲ್ಲದೆಯೇ ಜೈಲಿನಲ್ಲಿ ದಿನ ಕಳೆಯಬೇಕಾಗಬಹುದು. ಚಿದಂಬರಂ ಅದೃಷ್ಟದ ಸವಾರಿ ಮುಂದುವರಿದಿದೆ.
 
ಚಿದಂಬರಂ ಅವರನ್ನು ಮತ್ತೆ ಮತ್ತೆ ಅದೃಷ್ಟಶಾಲಿ ಎಂದು ಹೇಳುವುದಕ್ಕೆ ಕಾರಣ ಇದೆ. `ಕಷ್ಟ ಕಾಲದಲ್ಲಿ ಜತೆಯಲ್ಲಿದ್ದವರನ್ನು ಮಿತ್ರರು ಮತ್ತು ಜತೆಯಲ್ಲಿ ಇಲ್ಲದವರನ್ನು ಶತ್ರುಗಳು` ಎನ್ನುವುದಾದರೆ ಕೇಂದ್ರ ಗೃಹಸಚಿವ ಪಳನಿಯಪ್ಪ ಚಿದಂಬರಂ ಕಾಂಗ್ರೆಸ್ ಪಕ್ಷದ ದೊಡ್ಡ ಶತ್ರು. ಆದರೆ ಕಾಂಗ್ರೆಸ್ ನೇತೃತ್ವದ ಈಗಿನ ಸರ್ಕಾರದಲ್ಲಿ ಅವರು ಎರಡನೆಯೋ, ಮೂರನೆಯೋ ಸ್ಥಾನದಲ್ಲಿದ್ದಾರೆ. 

ಅವರಿಗೆ ಕಷ್ಟ ಎದುರಾದಾಗ ಪ್ರಧಾನಿ ಮಾತ್ರ ಅಲ್ಲ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರೇ ಅವರ ನೆರವಿಗೆ ಧಾವಿಸುತ್ತಾರೆ. ಯಾರೂ ಕೇಳದಿದ್ದರೂ ಅವರ ಪ್ರಾಮಾಣಿಕತೆಗೆ ಸರ್ಟಿಫಿಕೇಟ್ ನೀಡುತ್ತಾರೆ. ಇದನ್ನು ಅದೃಷ್ಟ ಎನ್ನದೆ ಬೇರೆ ಏನು ಹೇಳಲು ಸಾಧ್ಯ? 

ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿದ್ದ 1996ರಿಂದ 2004ರ ವರೆಗಿನ ಎಂಟು ವರ್ಷ, ಆ ಪಕ್ಷದ ಪಾಲಿನ ಕಡು ಕಷ್ಟದ ಕಾಲ. ಆ ಸಮಯ ಚಿದಂಬರಂ ಕಾಂಗ್ರೆಸ್ ಪಕ್ಷದಲ್ಲಿ ಇರಲೇ ಇಲ್ಲ. ಅವರು 1996ರಲ್ಲಿ ಕಾಂಗ್ರೆಸ್ ತೊರೆದು ತಮಿಳು ಮಾನಿಲ ಕಾಂಗ್ರೆಸ್ ಸೇರಿಕೊಂಡಿದ್ದರು.
 
ಕಾಂಗ್ರೆಸ್ ನಾಯಕರು ಅಧಿಕಾರ ಇಲ್ಲದೆ ವನವಾಸ ಅನುಭವಿಸುತ್ತಿದ್ದಾಗ ಚಿದಂಬರಂ ತಮಿಳು ಮಾನಿಲ ಕಾಂಗ್ರೆಸ್‌ನಿಂದ ಆಯ್ಕೆಯಾಗಿ 1996ರಿಂದ 1998ರ ವರೆಗೆ ಸಂಯುಕ್ತರಂಗ ಸರ್ಕಾರದಲ್ಲಿ ಹಣಕಾಸು ಸಚಿವರೂ ಆಗಿದ್ದರು. 

2004ರಲ್ಲಿ ಇನ್ನೇನು ಚುನಾವಣೆ ಘೋಷಣೆಯಾಗಲಿರುವಾಗ ಚಿದಂಬರಂ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾದರು. ಚುನಾವಣೆಯಲ್ಲಿ ಗೆದ್ದರು, ಹಣಕಾಸು ಸಚಿವರೂ ಆಗಿಬಿಟ್ಟರು. ಅಧಿಕಾರದಲ್ಲಿ ಇಲ್ಲದಿದ್ದಾಗ ಜತೆಯಲ್ಲಿ ಇರಲಿಲ್ಲ, ಹೇಗೋ ಕಷ್ಟಪಟ್ಟು ಪಕ್ಷ ಅಧಿಕಾರ ಗಳಿಸಿದಾಗ ಮತ್ತೆ ಕಾಣಿಸಿಕೊಂಡು ಮತ್ತೆ ಅದೇ ಪಕ್ಷವನ್ನು ಪತನದ ಅಂಚಿಗೆ ಕೊಂಡುಹೋಗಿ ನಿಲ್ಲಿಸಿದವರು ಚಿದಂಬರಂ. ಅವರ ಸಮಕಾಲೀನರಲ್ಲಿ ಯಾರೂ ಇಷ್ಟೊಂದು ದೀರ್ಘಕಾಲ ಕೇಂದ್ರದಲ್ಲಿ ಅಧಿಕಾರ ಅನುಭವಿಸಿಲ್ಲ. 


ಕಷ್ಟಕಾಲದಲ್ಲಿ ಜತೆಯಲ್ಲಿ ಇಲ್ಲದೆ, ಅಧಿಕಾರಕ್ಕೆ ಬಂದಾಗ ಒಳಗೆ ಬಂದು ಮೆರೆಯುತ್ತಿರುವ `ಪಿಸಿ` ಬಗ್ಗೆ ಕಾಂಗ್ರೆಸ್ ಪಕ್ಷದ ಅನೇಕ ಹಿರಿಯ-ಕಿರಿಯ ನಾಯಕರಿಗೆ ಸಿಟ್ಟಿದೆ, ಅದಕ್ಕಿಂತ ಹೆಚ್ಚಾಗಿ ಅಸೂಯೆಯೂ ಇದೆ. ನಾಳೆ ಅವರನ್ನು ಪ್ರಧಾನಿ ಮನಮೋಹನ್‌ಸಿಂಗ್ ಸಂಪುಟದಿಂದ ಕಿತ್ತುಹಾಕಿದರೆ ಅಳುವವರು ಪಕ್ಷದಲ್ಲಿ ಯಾರೂ ಇಲ್ಲ.

ಹಾರ್ವರ್ಡ್‌ನಲ್ಲಿ ಓದಿ ಬಂದಿರುವ ಚಿದಂಬರಂ ರಾಜಕೀಯ ಗಾಳಿ ಬೀಸುವ ದಿಕ್ಕನ್ನು ಗ್ರಹಿಸಬಲ್ಲ ಬುದ್ಧಿವಂತ. ಈ ಬುದ್ಧಿವಂತಿಕೆಯೋ ಇಲ್ಲ, ಅದೃಷ್ಟವೋ ಯಾವುದೋ ಒಂದು, ಚಿದಂಬರಂ ಅವರನ್ನು ರಾಜಕೀಯ ಜೀವನದುದ್ದಕ್ಕೂ ಕಾಪಾಡಿಕೊಂಡು ಬಂದಿದೆ. 

1984ರಿಂದ ಇಲ್ಲಿಯವರೆಗೆ ನಿರಂತರವಾಗಿ ಆರು ಲೋಕಸಭಾ ಚುನಾವಣೆಯಲ್ಲಿ ಅವರು ಗೆದ್ದಿದ್ದಾರೆ. ಈ ನಡುವೆ ಪಕ್ಷ ಬಿಟ್ಟಿದ್ದಾರೆ, ಬೇರೆ ಪಕ್ಷ ಸೇರಿದ್ದಾರೆ, ಸ್ವಂತ ಪಕ್ಷವನ್ನೂ ಕಟ್ಟಿದ್ದಾರೆ. ಆದರೆ ಕಳೆದ ಹದಿನೆಂಟು ವರ್ಷಗಳಲ್ಲಿ ಲೋಕಸಭೆಯಿಂದ ಹೊರಗೆ ಉಳಿದಿಲ್ಲ, ಅಧಿಕಾರದಿಂದಲೂ ಬಹಳ ದಿನ ದೂರವೂ ಉಳಿದಿಲ್ಲ.
 
ಇನ್ನೇನು ಇವರ ರಾಜಕೀಯ ಜೀವನ ಮುಗಿದೇ ಬಿಟ್ಟಿತು ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ ಹಲವು ಬಾರಿ ಎದ್ದು ಬಂದಿದ್ದಾರೆ. ಈಗಲೂ ಹಾಗೆಯೇ ಆಗಿದೆ. ಇನ್ನೇನು ಅವರ ತಲೆ ಉರುಳಿಯೇ ಬಿಟ್ಟಿತು ಎನ್ನುವಾಗ ಸಿಬಿಐ ವಿಚಾರಣಾ ನ್ಯಾಯಾಲಯ ಅವರತ್ತ ಕರುಣೆಯ ನೋಟ ಹರಿಸಿದೆ. ಆದರೆ ಅವರೆಷ್ಟು ದಿನ ಸುರಕ್ಷಿತರಾಗಿ ಉಳಿಯಬಲ್ಲರು? ಅವರ ಮೇಲಿನ ಹಳೆಯ ಮತ್ತು ಹೊಸ ಆರೋಪಗಳನ್ನು ನೋಡಿದರೆ, ಬಹಳ ದಿನ ಚಿದಂಬರಂ ಅವರನ್ನು ಆದೃಷ್ಟವೊಂದೇ ಕಾಪಾಡಿಕೊಂಡು ಬರಲಾರದು ಎಂದೆನಿಸುತ್ತದೆ.

ಆರೋಪಗಳು, ವಿವಾದಗಳು, ರಾಜೀನಾಮೆಗಳು ಚಿದಂಬರಂ ಅವರಿಗೆ ಹೊಸತೇನಲ್ಲ. ಅವರದು ಕಳಂಕರಹಿತ ಶುಭ್ರ ವ್ಯಕ್ತಿತ್ವವೂ ಅಲ್ಲ. ಇಪ್ಪತ್ತು ವರ್ಷಗಳ ಹಿಂದೆ ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ವಾಣಿಜ್ಯ ಸಚಿವರಾಗಿದ್ದ ಚಿದಂಬರಂ ಷೇರುಹಗರಣದಲ್ಲಿ ಭಾಗಿಯಾಗಿದ್ದ `ಫೇರ್‌ಗ್ರೋತ್` ಎಂಬ ಹಣಕಾಸು ಸಂಸ್ಥೆಯಲ್ಲಿ ಹಣ ಹೂಡಿದ್ದಕ್ಕಾಗಿ ರಾಜೀನಾಮೆ ನೀಡಿದ್ದರು. ದಿವಾಳಿಯಾಗಿದ್ದ ವಿದ್ಯುತ್ ಉತ್ಪಾದನಾ ಸಂಸ್ಥೆ ಎನ್ರಾನ್‌ಗೆ ಅವರು ವಕೀಲರಾಗಿದ್ದರು.
 
ವಿವಾದಾತ್ಮಕ ದಾಬೋಲ್ ಇಂಧನ ಯೋಜನೆಯ ಪರವಾಗಿಯೂ ಅವರು ಲಾಬಿ ನಡೆಸುತ್ತಿದ್ದರು ಎನ್ನುವ ಆರೋಪವೂ ಕೇಳಿಬಂದಿತ್ತು. ಯುಪಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗಲೇ ಚಿದಂಬರಂ ಗಣಿಗಾರಿಕೆಯಲ್ಲಿ ತೊಡಗಿರುವ ಬ್ರಿಟನ್‌ನ ವೇದಾಂತ ರಿಸೋರ್ಸ್ ಕಂಪೆನಿಗೆ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. ತನ್ನ ಉದ್ಧಟತನದ ಉತ್ತರಗಳಿಂದಾಗಿ ಪತ್ರಕರ್ತರನ್ನು ಆಗಾಗ ಕೆರಳಿಸುತ್ತಿರುವ ಚಿದಂಬರಂ ಮೇಲೆ ಹಿಂದಿ ದಿನಪತ್ರಿಕೆಯ ಪತ್ರಕರ್ತನೊಬ್ಬ ಮೂರು ವರ್ಷಗಳ ಹಿಂದೆ ಬೂಟು ಎಸೆದುಬಿಟ್ಟಿದ್ದ. 

ಸಚಿವರಾಗಿದ್ದುಕೊಂಡೇ ಸರ್ಕಾರದ ಲಾಭದಾಯಕ ಹುದ್ದೆಯಲ್ಲಿದ್ದರು ಮತ್ತು ಕಕ್ಷಿದಾರರಿಗೆ ನೆರವಾಗಿದ್ದರು ಎನ್ನುವ ಆರೋಪಗಳೂ ಕೇಳಿಬಂದಿದ್ದವು. ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಗಂಗೆ ಕ್ಷೇತ್ರದಿಂದ ಗೆಲ್ಲಲು ಅಕ್ರಮ ಎಸಗಿದ್ದರು ಎನ್ನುವ ದೂರಿನ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ಆದರೆ, ಪ್ರತಿ ಬಾರಿಯೂ ಅವರು ಸುಲಭದಲ್ಲಿ ಅಪಾಯದಿಂದ ಪಾರಾಗುತ್ತಾ ಬಂದಿದ್ದಾರೆ. ಇದಕ್ಕೆ ಪಕ್ಷ ಮತ್ತು ಸರ್ಕಾರದಲ್ಲಿರುವ ಹಿರಿಯರ ಜತೆಗೆ ಅವರು ಬೆಳೆಸಿಕೊಳ್ಳುವ ಸಂಬಂಧ ಕಾರಣ ಇರಬಹುದು. ಈಗಿನ ಬಿಕ್ಕಟ್ಟಿನಲ್ಲಿಯೂ ಪಾರಾಗಲು ಮನಮೋಹನ್‌ಸಿಂಗ್ ಜತೆಯಲ್ಲಿ ಅವರಿಗಿದ್ದ ಸೌಹಾರ್ದಯುತ ಸಂಬಂಧ ಕಾರಣ ಎನ್ನುವವರಿದ್ದಾರೆ.
 
ಇದಕ್ಕಿಂತಲೂ ಹೆಚ್ಚಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಮೇಲೆ ಇಟ್ಟಿರುವ ವಿಶ್ವಾಸ ಕಾರಣ ಎನ್ನುವವರೂ ಇದ್ದಾರೆ. ಎರಡನೇ ಕಾರಣ ಸತ್ಯಕ್ಕೆ ಹೆಚ್ಚು ಸಮೀಪ ಇದ್ದಂತೆ ಕಾಣುತ್ತಿದೆ. ಚಿದಂಬರಂ ಸಮರ್ಥರು, ಯಾವ ಖಾತೆ ಕೊಟ್ಟರೂ ದಕ್ಷತೆಯಿಂದ ನಿರ್ವಹಿಸಬಲ್ಲರು ಎನ್ನುವ ಅಭಿಪ್ರಾಯ ಇದೆ. ಒಂದು ಕಾಲದಲ್ಲಿ ದೇಶಕ್ಕೆ `ಕನಸಿನ ಬಜೆಟ್` ಕೊಟ್ಟು ಅವರು ಜನಪ್ರಿಯರಾದವರು.. ಎಲ್ಲವೂ ನಿಜ. ಆದರೆ ಯುಪಿಎ ಎರಡನೇ ಅವಧಿಯಲ್ಲಿ ಸರ್ಕಾರಕ್ಕೆ ಅವರಿಂದಾದ ಲಾಭ-ನಷ್ಟಗಳ ಲೆಕ್ಕಹಾಕಿದರೆ ನಷ್ಟದ ಕಡೆ ತಕ್ಕಡಿ ವಾಲುತ್ತದೆ. 

2008ರಲ್ಲಿ ಮುಂಬೈನ ತಾಜ್ ಹೋಟೆಲ್ ಮೇಲೆ ಭಯೋತ್ಪಾದಕರ ದಾಳಿ ನಡೆದಾಗ ಶಿವರಾಜ್ ಪಾಟೀಲ್ ಎಂಬ ಶೋಕಿಲಾಲ ಸಚಿವರಿಂದಾಗಿ ಗೃಹಖಾತೆ ಹೆಚ್ಚುಕಡಿಮೆ ನಿಷ್ಕ್ರಿಯ ಸ್ಥಿತಿಯಲ್ಲಿತ್ತು. ಆ ಸಮಯದಲ್ಲಿ ಗೃಹಖಾತೆಯನ್ನು ವಹಿಸಿಕೊಂಡವರು ಚಿದಂಬರಂ. ಪ್ರಾರಂಭದ ದಿನಗಳ ಅವರ ಕಾರ‌್ಯನಿರ್ವಹಣೆ ವಿರೋಧಪಕ್ಷಗಳ ಶ್ಲಾಘನೆಗೂ ಪಾತ್ರವಾಗಿತ್ತು. 

ಆದರೆ ಎಚ್ಚರಿಕೆ ನೀಡುವ ಅವರ ಮಾತುಗಳಿಂದ ಭಯೋತ್ಪಾದಕರ ದುಷ್ಕೃತ್ಯಗಳು ನಿಲ್ಲಲಿಲ್ಲ. ಕಳೆದ ವರ್ಷದ ಜುಲೈನಲ್ಲಿ ಅದೇ ಮುಂಬೈನಲ್ಲಿ ಭಯೋತ್ಪಾದಕರು ಮತ್ತೆ ದಾಳಿ ನಡೆಸಿದ್ದರು. ಗೃಹಸಚಿವರಾದ ನಂತರ ಮಾವೋವಾದಿಗಳ ವಿರುದ್ಧ ಅವರು ಸಮರವನ್ನೇ ಸಾರಿದ್ದರು. ಆದರೆ, ಆ ಸಂಘಟನೆಯ ಒಂದಿಬ್ಬರು ನಾಯಕರನ್ನು ನಕಲಿ ಎನ್‌ಕೌಂಟರ್‌ಗಳ ಮೂಲಕ ಕೊಂದು ಹಾಕಿದ್ದನ್ನು ಹೊರತುಪಡಿಸಿದರೆ ಮಾವೋವಾದಿಗಳನ್ನು ನಿಯಂತ್ರಿಸಲು ಅವರಿಗೆ ಸಾಧ್ಯವಾಗಿಲ್ಲ.
 
ಜಾರ್ಖಂಡ್, ಚತ್ತೀಸ್‌ಗಢ, ಒಡಿಶಾ ಮತ್ತು ಪಶ್ಚಿಮಬಂಗಾಳಗಳಲ್ಲಿ ಮಾವೋವಾದಿಗಳ ಹಿಂಸೆಗೆ ಪೊಲೀಸ್ ಸಿಬ್ಬಂದಿ ಮತ್ತು ಅಮಾಯಕ ನಾಗರಿಕರು ಬಲಿಯಾಗುತ್ತಲೇ ಇದ್ದಾರೆ. ಹಿಂದೂ ಭಯೋತ್ಪಾದನೆಯ ವಿರುದ್ಧ ವೀರಾವೇಶದಿಂದ ಮಾತನಾಡುತ್ತಿದ್ದ ಚಿದಂಬರಂ, ಇದೇ ಕಾರಣಕ್ಕೆ ಬಿಜೆಪಿ ತನ್ನನ್ನು ಗುರಿಯಾಗಿರಿಸಿಕೊಂಡಿದೆ ಎನ್ನುವುದು ಅರಿವಾದ ನಂತರ ಮೌನಕ್ಕೆ ಜಾರಿದ್ದಾರೆ. ಅಣ್ಣಾ ಹಜಾರೆಯವರನ್ನು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸುವ ಮೂಲಕ ಅವರನ್ನು `ಹೀರೋ` ಮಾಡಿದ ಮೂರ್ಖ ನಿರ್ಧಾರ ಕೂಡಾ ಚಿದಂಬರಂ ಅವರದ್ದು.

ಇವೆಲ್ಲದರ ಜತೆಯಲ್ಲಿ ಹಣಕಾಸು ಸಚಿವರಾಗಿದ್ದ ದಿನಗಳಲ್ಲಿ ನಡೆದ 2ಜಿ ತರಂಗಾಂತರ ಹಗರಣ ಚಿದಂಬರಂ ಕೊರಳಿಗೆ ಸುತ್ತಿಕೊಂಡಿದೆ. ಸಿಬಿಐ ವಿಚಾರಣಾ ನ್ಯಾಯಾಲಯ ಅವರ ವಿರುದ್ಧದ ಆರೋಪಗಳ ತನಿಖೆಗೆ ಆದೇಶ ನೀಡಲು ನಿರಾಕರಿಸಿದ ನಂತರವೂ ಹಗರಣಕ್ಕೆ ಸಂಬಂಧಿಸಿದ ಒಂದಷ್ಟು ಪ್ರಶ್ನೆಗಳು ಹಾಗೆಯೇ ಉಳಿದುಬಿಟ್ಟಿವೆ. 2001ರಲ್ಲಿ ನಿಗದಿಪಡಿಸಿದ ದರದಲ್ಲಿ ಆರು ವರ್ಷಗಳ ನಂತರ 2ಜಿ ತರಂಗಾಂತರದ ಪರವಾನಿಗೆಗಳನ್ನು ವಿತರಿಸುವುದನ್ನು ಆಕ್ಷೇಪಿಸಿ ಆಗ ಹಣಕಾಸು ಖಾತೆಯ ಕಾರ್ಯದರ್ಶಿ ಡಿ.ಸುಬ್ಬಾರಾವ್ ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ಡಿ.ಎಸ್.ಮಾಥುರ್ ಅವರಿಗೆ 2007ರ ನವೆಂಬರ್ 22ರಂದು ಮೊದಲ ಪತ್ರ ಬರೆದಿದ್ದರು.
 
ಇಂತಹ ಮಹತ್ವದ ನಿರ್ಧಾರ ಕೈಗೊಂಡಾಗ ಹಣಕಾಸು ಇಲಾಖೆಯ ಜತೆ ಯಾಕೆ ಸಮಾಲೋಚನೆ ನಡೆಸಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಆ ದಿನದಿಂದ 122 ಪರವಾನಿಗೆಗಳ ವಿತರಣೆಯಾದ 2008ರ ಜನವರಿ ಒಂಬತ್ತರ ವರೆಗೆ ಹಣಕಾಸು ಇಲಾಖೆಯ ಅಧಿಕಾರಿಗಳು ಹತ್ತಾರು ಪತ್ರಗಳನ್ನು ದೂರಸಂಪರ್ಕ ಇಲಾಖೆಗೆ ಬರೆದಿದ್ದಾರೆ. ಇವೆಲ್ಲವೂ ಹಣಕಾಸು ಸಚಿವರಾದ ಪಿ.ಚಿದಂಬರಂ ಅವರ ಗಮನಕ್ಕೆ ಬರದಂತೆ ನಡೆದಿತ್ತು ಎಂದು ಯಾರೂ ಹೇಳಲಾರರು. ಒಂದೊಮ್ಮೆ ಹೇಳಿದರೂ ಅದನ್ನು ಯಾರೂ ನಂಬಲಾರರು.

ಸರ್ಕಾರದ ಯಾವುದೇ ಇಲಾಖೆಯಲ್ಲಿ ಹಣಕಾಸಿಗೆ ಸಂಬಂಧಿಸಿದಂತೆ ನಡೆಯುವ ವ್ಯವಹಾರದಲ್ಲಿ ಮಧ್ಯೆ ಪ್ರವೇಶಿಸುವ ಅಧಿಕಾರ ಹಣಕಾಸು ಸಚಿವರಿಗೆ ಇದೆ. 2ಜಿ ತರಂಗಾಂತರ ಹಗರಣದಲ್ಲಿ ಚಿದಂಬರಂ ಖಾತೆಯ ಅಧಿಕಾರಿಗಳೇ ರಾಜಾ ಅವರ ನಿರ್ಧಾರಕ್ಕೆ ವಿರುದ್ಧವಾಗಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪತ್ರಗಳನ್ನು ಬರೆದಿರುವುದಕ್ಕೆ ಪುರಾವೆಗಳಿವೆ (ಆ ಪತ್ರಗಳು ಮಾಹಿತಿ ಹಕ್ಕು ಕಾಯಿದೆಯಡಿ ಕೇಳಿದವರ ಮೂಲಕ ಈಗ ಬಹಿರಂಗಗೊಂಡಿವೆ). ಸ್ವತಃ ಚಿದಂಬರಂ ಅವರೇ ಹರಾಜು ಪರವಾಗಿ ಇದ್ದರು ಮತ್ತು `ಮೊದಲು ಬಂದವರಿಗೆ ಮೊದಲ ಆದ್ಯತೆ` ನೀತಿಗೆ 2007ರ ನವೆಂಬರ್‌ನಿಂದ 2008ರ ಜನವರಿ 15ರವರೆಗೆ ವಿರುದ್ಧವಾಗಿದ್ದರಂತೆ.
 
ಆ ಅವಧಿಯಲ್ಲಿ ಅವರು ಹಲವಾರು ಬಾರಿ ಎ.ರಾಜಾ ಅವರನ್ನು ಭೇಟಿ ಮಾಡಿ ಚರ್ಚೆ ಕೂಡಾ ನಡೆಸಿದ್ದರು. ಆದರೆ, ಇದ್ದಕ್ಕಿದ್ದಂತೆ ಅವರು 2008ರ ಜನವರಿ 15ರಂದು ಪ್ರಧಾನಿಗೆ `ಎ.ರಾಜಾ ಅವರ ನಿರ್ಧಾರ ಮುಗಿದ ಅಧ್ಯಾಯ` ಎಂದು ಪತ್ರ ಬರೆದು ಸುಮ್ಮನಾಗುತ್ತಾರೆ. ಈ ದಿಢೀರ್ `ಮೌನಸಮ್ಮತಿ`ಗೆ ಕಾರಣವೇನು? ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡುವ ಸಚಿವ ಎ.ರಾಜಾ ಅವರ ನಿರ್ಧಾರವನ್ನು ತಡೆಯಲು ಅವರು ಯಾಕೆ ಪ್ರಯತ್ನಿಸಲಿಲ್ಲ ಎನ್ನುವುದು ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ. ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಾಗ ಚಿದಂಬರಂ ಅವರ ಬೆನ್ನ ಹಿಂದೆ ಇರುವ ಆದೃಷ್ಟದೇವತೆಯೂ ಬೆನ್ನು ತಿರುಗಿಸಬಹುದು.

Monday, January 30, 2012

ಮಹಾತ್ಮ ಗಾಂಧೀಜಿಯವರನ್ನು ಕೊಂದವರು ಯಾರು? January 30, 2012

`ದೇವರ ದಯೆಯಿಂದ ಏಳು ಬಾರಿ ನಾನು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ನಾನು ಯಾರನ್ನೂ ನೋಯಿಸಿಲ್ಲ. ಯಾರನ್ನೂ ನನ್ನ ಶತ್ರು ಎಂದು ತಿಳಿದುಕೊಂಡಿಲ್ಲ. 

ಹೀಗಿದ್ದರೂ ಯಾಕೆ ನನ್ನ ಹತ್ಯೆಗೆ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ. ನಾನು ಸಾಯುವುದಿಲ್ಲ, 125 ವರ್ಷ ಬದುಕುತ್ತೇನೆ...`- ತಮ್ಮ ಹತ್ಯೆಗೆ ಏಳನೇ ಬಾರಿ ನಡೆದ ಪ್ರಯತ್ನ ವಿಫಲಗೊಂಡ ನಂತರ 1946ರ ಜೂನ್ 30ರಂದು ಗಾಂಧೀಜಿ ಪುಣೆಯ ಬಹಿರಂಗ ಸಭೆಯಲ್ಲಿ ನೋವು ತುಂಬಿದ್ದ ದನಿಯಲ್ಲಿ ಈ ಮಾತು ಹೇಳಿದ್ದರು. ಆ ಘಟನೆ ನಡೆದ ನಂತರ 1948ರ ಜನವರಿ 21ರಂದು ದೆಹಲಿಯ ಬಿರ್ಲಾ ಭವನದಲ್ಲಿಯೇ ಗಾಂಧೀಜಿ ಹತ್ಯೆಗೆ ಮತ್ತೊಂದು ಪ್ರಯತ್ನ ನಡೆದಿತ್ತು. ಅದರಿಂದಲೂ ಅವರು ಪಾರಾಗಿದ್ದರು. ಕೊನೆಗೆ 1948ರ ಜನವರಿ 30ರಂದು ಅವರು ಸಾವಿಗೆ ಶರಣಾದರು.

ಪ್ರಾಣದ ಆಸೆ ಇಲ್ಲದ ಕೊಲೆಗಡುಕ, ಕೊಲೆ ಮಾಡುವುದನ್ನು ತಡೆಯುವುದು ಎಷ್ಟು ಕಷ್ಟವೋ, ಪ್ರಾಣದ ಆಸೆ ಇಲ್ಲದ ವ್ಯಕ್ತಿಯನ್ನು ಕೊಲೆಗಡುಕನಿಂದ ಉಳಿಸಿಕೊಳ್ಳುವುದು ಅಷ್ಟೇ ಕಷ್ಟ. ಗಾಂಧೀಜಿ ಹತ್ಯೆ ನಡೆಯುವ ಹೊತ್ತಿಗೆ  ಕೊಲೆಗಡುಕ ನಾಥುರಾಮ್ ಗೋಡ್ಸೆ ಮಾತ್ರವಲ್ಲ, ಕೊಲೆಯಾಗಿದ್ದ ಗಾಂಧೀಜಿ ಕೂಡಾ ಬದುಕುವ ಆಸೆಯನ್ನು ಕಳೆದುಕೊಂಡಿದ್ದರು.
 
ಅವರ ಹತ್ಯೆಯ ದಿನವೇ ತನ್ನೆರಡು `ಊರುಗೋಲು`ಗಳಾದ ಆಭಾ ಮತ್ತು ಮನು ಜತೆ ಮಾತನಾಡುತ್ತಾ ಒಂದಲ್ಲ ಎರಡು ಬಾರಿ ತನ್ನ ಸಾವಿನ ಬಗ್ಗೆ ಗಾಂಧೀಜಿ ಮಾತನಾಡಿದ್ದರು. ತಾನು ನಂಬಿದವರೇ ತನ್ನ ಜತೆ ಇಲ್ಲವೇನೋ ಎಂಬ ಅನಾಥಪ್ರಜ್ಞೆಯೇ ಅವರಿಂದ ಈ ಮಾತುಗಳನ್ನು ಆಡಿಸಿತ್ತೋ ಏನೋ? ಹಿಂದೆ ಏಳು ಬಾರಿ ಅವರ ಹತ್ಯೆಗೆ ಪ್ರಯತ್ನ ನಡೆದಾಗ ಭಾರತೀಯರು ಶತ್ರುಗಳೆಂದು ತಿಳಿದುಕೊಂಡಿದ್ದ ಬ್ರಿಟಿಷರು ಅಧಿಕಾರದಲ್ಲಿದ್ದರು. ಹಾಗಿದ್ದರೂ ಆ ಪ್ರಯತ್ನಗಳು ವಿಫಲವಾಗಿದ್ದವು.
 
ಆದರೆ ಅವರ ಹತ್ಯೆ ನಡೆದಾಗ ಅವರ ಶಿಷ್ಯೋತ್ತಮರೇ ಅಧಿಕಾರದಲ್ಲಿದ್ದರು. ಅವರಿಗೂ ಬಾಪುವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಶಿಷ್ಯಂದಿರ ವರ್ತನೆಯ ಸುಳಿವು ಸಿಕ್ಕಿಯೇ ಗಾಂಧೀಜಿ ಬದುಕುವ ಆಸೆ ಕಳೆದುಕೊಂಡಿದ್ದರೇ?

ಗಾಂಧೀಜಿ ಹತ್ಯೆ ಮುಗಿದ ಅಧ್ಯಾಯ ಎಂದೇ ಹೆಚ್ಚಿನವರು ನಂಬಿದ್ದಾರೆ. ಕೊಲೆಗಡುಕರು ಯಾರೆಂದು ಗೊತ್ತಾಗಿದೆ, ಅವರಿಗೆ ಶಿಕ್ಷೆಯೂ ಆಗಿದೆ, ಇನ್ನೇನು ಎಂದು ಕೇಳುವವರಿದ್ದಾರೆ. ಆದರೆ ನ್ಯಾಯಾಲಯದಲ್ಲಿ ಒಪ್ಪಿಕೊಂಡ ವಿಚಾರವಷ್ಟೇ ಗಾಂಧೀಜಿಯವರನ್ನು ಕೊಲ್ಲಲು ಗೋಡ್ಸೆಗೆ ಪ್ರೇರಣೆ ನೀಡಿತ್ತೇ? ಇಲ್ಲವೇ ಬೇರೆ ಕಾರಣಗಳೂ ಇದ್ದವೇ? ಎಂಬ ಪ್ರಶ್ನೆಗೆ ನ್ಯಾಯಾಲಯದ ತೀರ್ಪಿನಲ್ಲಿ ಉತ್ತರ ಸಿಗುವುದಿಲ್ಲ. 

ಹತ್ಯೆಯ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುವುದು ಗೊತ್ತಿದ್ದರೂ ಗಾಂಧೀಜಿಯವರನ್ನು ಉಳಿಸಿಕೊಳ್ಳಲು ಅವರ ಅನುಯಾಯಿಗಳಿಗೆ ಯಾಕೆ ಸಾಧ್ಯವಾಗಿಲ್ಲ ಎನ್ನುವ ಪ್ರಶ್ನೆಗೂ ಇನ್ನೂ ಉತ್ತರ ಸಿಕ್ಕಿಲ್ಲ. ಗಾಂಧೀಜಿ ಹತ್ಯೆಗೆ ಸಂಬಂಧಿಸಿದ ಹಲವಾರು ಪುಸ್ತಕಗಳು, ನ್ಯಾಯಾಲಯದಲ್ಲಿನ ವಿಚಾರಣೆಯ ದಾಖಲೆಗಳು ಹಾಗೂ ಕೊಲೆಗಾರರಿಗೆ ಶಿಕ್ಷೆಯಾದ ನಂತರ ಎದ್ದ ವಿವಾದದಿಂದಾಗಿ ಮಹಾರಾಷ್ಟ್ರ ಸರ್ಕಾರವೇ ನೇಮಿಸಿದ ಕಪೂರ್ ಆಯೋಗದ ವರದಿಗಳ ಪುಟಗಳನ್ನು ತಿರುವಿಹಾಕಿದರೆ ಇನ್ನಷ್ಟು ಪ್ರಶ್ನೆಗಳು ಹುಟ್ಟುತ್ತವೆಯೇ ಹೊರತು ಉತ್ತರ ಸಿಗುವುದಿಲ್ಲ.

ಗಾಂಧೀಜಿ ಹತ್ಯೆಗೆ ನಡೆದ ಐದು ಪ್ರಯತ್ನಗಳನ್ನು ದೃಢೀಕರಿಸುವ ದಾಖಲೆಗಳು ಲಭ್ಯ ಇವೆ. ಈ ಐದೂ ಪ್ರಯತ್ನಗಳಲ್ಲಿ ನಾಥುರಾಮ್ ಗೋಡ್ಸೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಭಾಗವಹಿಸಿದ್ದ ಉಲ್ಲೇಖಗಳಿವೆ.
 
ಈ ಕಾರಣದಿಂದಾಗಿಯೇ ಪೊಲೀಸರು ಆತನನ್ನು ತಡೆಯುವ ಪ್ರಯತ್ನ ಯಾಕೆ ಮಾಡಲಿಲ್ಲ ಎನ್ನುವ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಗಾಂಧೀಜಿ ಹತ್ಯೆಗೆ ಮೊದಲ ಪ್ರಯತ್ನ ನಡೆದಿದ್ದು 1934ರ ಜೂನ್ 25ರಂದು ಪುಣೆಯಲ್ಲಿ. `ಹರಿಜನ ಯಾತ್ರೆ`ಯಲ್ಲಿ ಪಾಲ್ಗೊಳ್ಳಲು ಗಾಂಧೀಜಿ ಅಲ್ಲಿಗೆ ಹೋಗಿದ್ದರು. ಅಲ್ಲಿ ದುಷ್ಕರ್ಮಿಗಳು ಎಸೆದ ಬಾಂಬು ಗಾಂಧಿ ವಿರೋಧಿ ಅಣ್ಣಾಸಾಹೇಬ್ ಬೋಪಟ್ಕರ್ ಕಾರು ಮೇಲೆ ಬಿದ್ದ ಕಾರಣ ಗಾಂಧೀಜಿ ಪಾರಾಗಿದ್ದರು.
 
ಈ ಪ್ರಕರಣದ ಆರೋಪಿಗಳ್ಯಾರು ಎನ್ನುವ ಬಗ್ಗೆ ಸ್ಪಷ್ಟ ಉಲ್ಲೇಖಗಳು ಸಿಗುವುದಿಲ್ಲ. ಅಲ್ಲೆಲ್ಲೂ ಗೋಡ್ಸೆ ಹೆಸರು ಬರುವುದಿಲ್ಲ. ಆದರೆ ಗಾಂಧೀಜಿಯವರ ಕೊನೆಯ ದಿನಗಳ ಬಗ್ಗೆ ಎರಡು ಸಂಪುಟಗಳಲ್ಲಿ ಬರೆದಿರುವ ಪ್ಯಾರೇಲಾಲ್ ಅವರು ಗಾಂಧೀಜಿ ಹತ್ಯೆಯ ಮೊದಲ ಪ್ರಯತ್ನದ ಬಗ್ಗೆ ಬರೆಯುತ್ತಾ `ಈ ಪ್ರಯತ್ನದಲ್ಲಿ ಭಾಗಿಯಾಗಿದ್ದವರೇ 1948ರಲ್ಲಿ ಗಲಭೆಗ್ರಸ್ತ ದೆಹಲಿಯಲ್ಲಿ ಶಾಂತಿಪಾಲನೆಗಾಗಿ ಹೋರಾಡುತ್ತಿದ್ದ ಗಾಂಧೀಜಿಯವರ ಕೊಲೆಗೈದರು` ಎಂದು ಹೇಳಿದ್ದಾರೆ.

`ಗಾಂಧೀಜಿ ಮುಸ್ಲಿಮ್ ಪಕ್ಷಪಾತಿಯಾಗಿದ್ದರು, ಭಾರತದ ವಿಭಜನೆಗೆ ಕಾರಣರಾಗಿದ್ದರು. ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿ ನೀಡುವಂತೆ ಭಾರತ ಸರ್ಕಾರದ ಮೇಲೆ ಅವರು ಒತ್ತಡ ಹೇರಿದ್ದರು. ಇದನ್ನು ಕಂಡು ಕ್ರುದ್ಧರಾದ ಹಿಂದೂ ಮಹಾಸಭಾಕ್ಕೆ ಸೇರಿದ್ದ ಗೋಡ್ಸೆ ಮತ್ತು ಆಪ್ಟೆ ಗಾಂಧೀಜಿಯವರ ಹತ್ಯೆಗೆ ಮುಂದಾದರು` ಎನ್ನುವ ಸಾಮಾನ್ಯ ಅಭಿಪ್ರಾಯ ಜನಜನಿತವಾಗಿದೆ. ಅಪರಾಧಿಗಳು ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಗಳು ಮತ್ತು ನ್ಯಾಯಾಲಯದ ತೀರ್ಪು ಕೂಡಾ ಇದನ್ನೇ ಹೇಳುತ್ತವೆ.
 
ಗಾಂಧೀಜಿ ಹತ್ಯೆಗೆ ಮೊದಲ ಪ್ರಯತ್ನ ನಡೆದಿದ್ದಾಗ ಭಾರತದ ವಿಭಜನೆ ಆಗಿರಲಿಲ್ಲ, ಮುಸ್ಲಿಮ್ ಪಕ್ಷಪಾತಿ ಎಂಬ ಆರೋಪ ಕೂಡಾ ಅವರ ಮೇಲೆ ಇರಲಿಲ್ಲ. ಆಗಿನ್ನೂ ಬ್ರಿಟಿಷರ ವಿರುದ್ಧದ ಹೋರಾಟಕ್ಕಿಂತಲೂ ಹೆಚ್ಚಾಗಿ ಹಿಂದೂ ಸಮಾಜದ ಅನಿಷ್ಟವಾದ ಅಸ್ಪೃಶ್ಯತೆ ಮತ್ತು ಕಂದಾಚಾರಗಳ ವಿರುದ್ಧ ಜನಜಾಗೃತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹರಿಜನರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡಬೇಕೆಂದು ಚಳವಳಿ ಪ್ರಾರಂಭಿಸಿದ್ದರು.
 
ಗಾಂಧೀಜಿಯವರ ಈ ವಿಚಾರಗಳೇ ಅವರ ವಿರೋಧಿಗಳ ಸಿಟ್ಟಿಗೆ ಕಾರಣವಾಗಿತ್ತೇ?
ಗಾಂಧಿ ಹತ್ಯೆಯ ಎರಡನೇ ಪ್ರಯತ್ನ ಮಹಾರಾಷ್ಟ್ರದ ಪಂಚಗಣಿಯಲ್ಲಿ 1944ರ ಜುಲೈ ತಿಂಗಳಲ್ಲಿ ನಡೆದಿತ್ತು.
 
ಮಲೇರಿಯಾ ಪೀಡಿತರಾಗಿದ್ದ ಗಾಂಧೀಜಿ ವಿಶ್ರಾಂತಿಗಾಗಿ ಅಲ್ಲಿಗೆ ಹೋಗಿದ್ದರು. ಅಲ್ಲಿಗೆ ನಾಥುರಾಮ್ ಗೋಡ್ಸೆ ತನ್ನ ಬೆಂಬಲಿಗರೊಂದಿಗೆ ಹೋಗಿ ಪ್ರತಿಭಟನೆ ನಡೆಸಿದ್ದ. ಆತನನ್ನು ಮಾತುಕತೆಗೆ ಗಾಂಧೀಜಿ ಕರೆದಾಗ ಹೋಗದ ಗೋಡ್ಸೆ ಪ್ರಾರ್ಥನೆಯ ಸಮಯದಲ್ಲಿ ಕೈಯಲ್ಲಿ ಕಠಾರಿ ಝಳಪಿಸುತ್ತಾ ಗಾಂಧೀಜಿ ಕಡೆ ನುಗ್ಗಿದ್ದ.
 
ಆಗ ಗಾಂಧಿ ಅನುಯಾಯಿಗಳು ಆತನನ್ನು ತಡೆದು ಹೊರಗೆ ಒಯ್ದಿದ್ದರು. `ಕೊಲೆ ಮಾಡಲು ಬಂದವನು ನಾಥುರಾಮ್ ಗೋಡ್ಸೆ` ಎಂದು ಆತನ ಯತ್ನವನ್ನು ವಿಫಲಗೊಳಿಸಿದ್ದ ಅಲ್ಲಿನ ವಿಶ್ರಾಂತಿಗೃಹದ ಮಾಲೀಕ ಮಣಿಶಂಕರ್ ಪುರೋಹಿತ್ ಮತ್ತು ಸತಾರದ ಡಿ.ಬಿಲಾರೆ ಗುರೂಜಿ ಅವರು ಕಪೂರ್ ಆಯೋಗದ ಮುಂದೆ ಸಾಕ್ಷ್ಯ ಹೇಳಿದ್ದಾರೆ.

ಮೂರನೇ ಪ್ರಯತ್ನ 1944ರ ಸೆಪ್ಟೆಂಬರ್‌ನಲ್ಲಿ ಗಾಂಧೀಜಿ ಮತ್ತು ಜಿನ್ನಾ ನಡುವಿನ ಮಾತುಕತೆಯ ಮೊದಲು, ಸೇವಾಗ್ರಾಮದಲ್ಲಿಯೇ ನಡೆದಿತ್ತು.  ಆ ಮಾತುಕತೆಗೆ ಹೋಗದಂತೆ ತಡೆಯಲು ನಾಥುರಾಮ್ ಗೋಡ್ಸೆ ತನ್ನ ಬೆಂಬಲಿಗರೊಂದಿಗೆ ಗಾಂಧೀಜಿ ಉಳಿದುಕೊಂಡಿದ್ದ ಸೇವಾಗ್ರಾಮಕ್ಕೆ ಹೋಗಿದ್ದ. ಗಾಂಧೀಜಿ ಕಡೆ ನುಗ್ಗಿ ಬರುತ್ತಿದ್ದ ಗೋಡ್ಸೆಯನ್ನು ಆಶ್ರಮವಾಸಿಗಳು ತಡೆದು ನಿಲ್ಲಿಸಿದ್ದರು.
 
ಪೊಲೀಸರು ಬಂದು ತಪಾಸಣೆ ಮಾಡಿದಾಗ ಆತನ ಅಂಗಿಯ ಕಿಸೆಯಲ್ಲಿ ಕಠಾರಿ ಇದ್ದದ್ದು ಗೊತ್ತಾಗಿತ್ತು. ರೈಲು ಅಪಘಾತದ ಮೂಲಕ ಗಾಂಧೀಜಿಯವರನ್ನು ಕೊಲ್ಲುವ ನಾಲ್ಕನೇ ಪ್ರಯತ್ನ ಪುಣೆಯಲ್ಲಿಯೇ 1946ರ ಜೂನ್ 29ರಂದು ನಡೆದಿತ್ತು.ಗಾಂಧೀಜಿಯವರು ಪ್ರಯಾಣಿಸುತ್ತಿದ್ದ `ಗಾಂಧೀ ವಿಶೇಷ` ಎನ್ನುವ ಹೆಸರಿನ ರೈಲು ಪುಣೆಗೆ ಹೋಗುತ್ತಿರುವಾಗ ಹಳಿಗಳ ಮೇಲೆ ಕಲ್ಲುಬಂಡೆಗಳನ್ನು ಇಟ್ಟು ಅಪಘಾತ ನಡೆಸುವ ಪ್ರಯತ್ನ ನಡೆಸಲಾಗಿತ್ತು.
 
ಆದರೆ ರೈಲಿನ ಚಾಲಕ ವಹಿಸಿದ್ದ ಎಚ್ಚರಿಕೆಯಿಂದಾಗಿ ಆ ಅಪಘಾತ ನಡೆಯಲಿಲ್ಲ. ಈ ಘಟನೆ ನಡೆದ ಮರುದಿನವೇ ಗಾಂಧೀಜಿ ಪುಣೆಯಲ್ಲಿ ನಡೆದ ಸಭೆಯಲ್ಲಿ `ನಾನು 125 ವರ್ಷ ಬದುಕುತ್ತೇನೆ...`ಎಂದು ಹೇಳಿದ್ದು. ಅದನ್ನು ಕೇಳಿ ಆ ಸಭೆಯಲ್ಲಿದ್ದ ನಾಥುರಾಮ್ ಗೋಡ್ಸೆ  `ಅಷ್ಟುದಿನ ನಿಮ್ಮನ್ನು ಬದುಕಲು ಯಾರು ಬಿಡುತ್ತಾರೆ` ಎಂದು ಪ್ರತಿಕ್ರಿಯಿಸಿದ್ದನ್ನು ಆತನ ಜತೆಯಲ್ಲಿದ್ದವರು ನಂತರದ ದಿನಗಳಲ್ಲಿ ಬಹಿರಂಗಪಡಿಸಿದ್ದಾರೆ.

ಗಾಂಧೀಜಿಯವರ ಹತ್ಯೆಯ ಕೊನೆಯ ಪ್ರಯತ್ನ ವಿಫಲಗೊಂಡದ್ದು 1948ರ ಜನವರಿ 20ರಂದು. ತಾವು ನಂಬಿದ್ದ `ಗುರುಹಿರಿಯರ` ಆಶೀರ್ವಾದದೊಂದಿಗೆ ಸರ್ವಸನ್ನದ್ಧರಾಗಿ ದೆಹಲಿಗೆ ಬಂದಿದ್ದ ನಾಥೂರಾಮ್ ಗೋಡ್ಸೆ ಮತ್ತು ಸಂಗಾತಿಗಳು, ಸಂಜೆ ಹೊತ್ತಿಗೆ ಬಿರ್ಲಾ ಭವನದೊಳಗೆ ಸೇರಿಕೊಂಡಿದ್ದರು. ಮೊದಲು ಮದನ್‌ಲಾಲ್ ಪಹವಾ ಗಾಂಧೀಜಿ ಪ್ರಾರ್ಥನೆ ಮಾಡುವ ಸ್ಥಳದ ಹಿಂದಿನ ಗೋಡೆಯಲ್ಲಿ ಬಾಂಬು ಇಟ್ಟು ಸ್ಫೋಟಿಸಬೇಕು. 

ಅದಾದ ಕೂಡಲೇ ಗೋಡ್ಸೆ ಮತ್ತು ವಿಷ್ಣು ಕರಕರೆ ಗ್ರೆನೇಡ್ ಎಸೆಯಬೇಕು. ಅಂತಿಮವಾಗಿ ದಿಗಂಬರ ಬಡ್ಗೆ ಗಾಂಧೀಜಿಯವರ ಕಡೆ ರಿವಾಲ್ವರ್‌ನಿಂದ ಗುಂಡುಹಾರಿಸಬೇಕು-ಇದು ಮೂಲ ಯೋಜನೆ. ಆದರೆ ಬಾಂಬು ಸ್ಫೋಟವಾದ ಕೂಡಲೇ ಪೊಲೀಸರು ಮದನ್‌ಲಾಲ್‌ನನ್ನು ವಶಕ್ಕೆ ತೆಗೆದುಕೊಂಡಿದ್ದರು. ಅದನ್ನು ನೋಡಿದ ಕೂಡಲೇ ಉಳಿದವರು ಅಲ್ಲಿಂದ ಪಲಾಯನಗೈದರು.

ಮದನ್‌ಲಾಲನನ್ನು ಬಂಧಿಸಿದ್ದ ಪೊಲೀಸರು 24 ಗಂಟೆಗಳ ಅವಧಿಯಲ್ಲಿ ಗಾಂಧಿ ಹತ್ಯೆಯ ಸಂಚಿನ ವಿವರಗಳನ್ನೆಲ್ಲ ಸಂಗ್ರಹಿಸಿದ್ದರು. ಪಂಜಾಬಿ ನಿರಾಶ್ರಿತ ಮದನ್‌ಲಾಲ್‌ಗೆ ಆಶ್ರಯ ನೀಡಿ ಸಾಕಿದ್ದವರು ಮಹಾರಾಷ್ಟ್ರದ ಪ್ರೊ.ಜಗದೀಶ್‌ಚಂದ್ರ ಜೈನ್ ಎಂಬ ಪ್ರಾಧ್ಯಾಪಕರು. 

ತಾನು ಗಾಂಧಿ ಹತ್ಯೆಯ ಸಂಚಿನಲ್ಲಿ ಸೇರಿಕೊಂಡದ್ದನ್ನು ಆತ ಪ್ರೊ.ಜೈನ್ ಅವರಿಗೂ ತಿಳಿಸಿದ್ದ. ಮದನ್‌ಲಾಲ್ ಬಂಧನದ ಸುದ್ದಿ ಪತ್ರಿಕೆಯಲ್ಲಿ ಓದಿದ ಕೂಡಲೇ ಜಾಗೃತರಾದ ಪ್ರೊ.ಜೈನ್ ಆಗ ಮಹಾರಾಷ್ಟ್ರದ ಗೃಹಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಅವರನ್ನು ಭೇಟಿಯಾಗಿ ಸಂಚಿನ ವಿವರ ತಿಳಿಸಿದ್ದರು. 

ಆ ಮಾತುಕತೆಯಲ್ಲಿ ವಿ.ಡಿ.ಸಾವರ್ಕರ್ ಮತ್ತು `ಕರ್ಕರೆ ಸೇಠ್` ಜತೆ ಮದನ್‌ಲಾಲ್ ಹೊಂದಿದ್ದ ಸಂಪರ್ಕವನ್ನು ಕೂಡಾ ಅವರು ಒತ್ತಿ ಹೇಳಿದ್ದರು. `ದಕ್ಷತೆಗೆ ಹೆಸರಾಗಿದ್ದ ಮತ್ತು ಗಾಂಧಿವಾದಿಯಾಗಿದ್ದ ಮೊರಾರ್ಜಿ ದೇಸಾಯಿ ವರ್ತನೆ ಆಶ್ಚರ್ಯಕರವಾಗಿತ್ತು. ಪ್ರೊ.ಜೈನ್ ಹೇಳಿದ್ದನ್ನು ಅವರು ದಾಖಲಿಸಿರಲಿಲ್ಲ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕರೆಸಿ ಚರ್ಚಿಸಿರಲಿಲ್ಲ. ಪ್ರೊ.ಜೈನ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲು ಪೊಲೀಸರಿಗೆ ತಿಳಿಸಬಹುದಿತ್ತು. 

ಅದನ್ನೂ ಮಾಡಿರಲಿಲ್ಲ. ಅಹಮದಾಬಾದ್‌ಗೆ ಹೊರಟಿದ್ದ ಅವರು ರೈಲ್ವೆ ನಿಲ್ದಾಣಕ್ಕೆ ಡಿಸಿಪಿ ನಗರ್‌ವಾಲಾ ಅವರನ್ನು ಕರೆಸಿ ವಿಷಯವನ್ನಷ್ಟೇ ತಿಳಿಸಿದ್ದರು` ಎಂದು ಗಾಂಧೀಜಿ ಮೊಮ್ಮಗ ತುಷಾರ್ ಗಾಂಧಿ `ಲೆಟ್ ಅಸ್ ಕಿಲ್ ಗಾಂಧಿ` ಎಂಬ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಮೊರಾರ್ಜಿ ಅವರಿಂದ ವಿಷಯ ತಿಳಿದುಕೊಂಡ ಡಿಸಿಪಿ ನಗರ್‌ವಾಲ್ ತನ್ನ ಬಳಿ ಎಲ್ಲ ಮಾಹಿತಿ ಇದೆ ಎಂದು ಹೇಳುತ್ತಲೇ ಇದ್ದರೂ ಅದನ್ನು ಕೊನೆಗೂ ಬಹಿರಂಗಪಡಿಸಿದ್ದು ಗಾಂಧಿ ಹತ್ಯೆಯಾದ ಹನ್ನೆರಡು ಗಂಟೆಗಳ ನಂತರ. ಜನವರಿ 20ರಿಂದ 30ರ ವರೆಗಿನ ಹತ್ತು ದಿನಗಳ ಅವಧಿಯಲ್ಲಿ ನಾಥುರಾಮ್ ಗೋಡ್ಸೆ ಮತ್ತು ಸಂಗಾತಿಗಳು ದೆಹಲಿ-ಮುಂಬೈ ನಡುವೆ ನಿರಾತಂಕವಾಗಿ ಓಡಾಡುತ್ತಾ ಗಾಂಧಿ ಹತ್ಯೆಯ ಕೊನೆಯ ಪ್ರಯತ್ನಕ್ಕೆ ಸಿದ್ಧತೆ ನಡೆಸುತ್ತಿದ್ದರು.
 
ಆಗ ಕೇಂದ್ರದಲ್ಲಿ ಮಾತ್ರವಲ್ಲ, ಎಲ್ಲ ರಾಜ್ಯಗಳ ಆಡಳಿತ ಗಾಂಧೀಜಿ ಅನುಯಾಯಿಗಳ ಕೈಯಲ್ಲಿಯೇ ಇತ್ತು. ಕೇಂದ್ರದಲ್ಲಿ ಗೃಹಸಚಿವರಾಗಿದ್ದವರು `ಉಕ್ಕಿನ ಮನುಷ್ಯ` ಸರ್ದಾರ್ ವಲ್ಲಭಭಾಯಿ ಪಟೇಲ್. ಸಂಚು ರೂಪುಗೊಂಡ ಮಹಾರಾಷ್ಟ್ರದಲ್ಲಿ ಗೃಹಸಚಿವರಾಗಿದ್ದವರು ಮೊರಾರ್ಜಿ ದೇಸಾಯಿ. ಪ್ರಧಾನಿಯಾಗಿದ್ದವರು ಗಾಂಧೀಜಿ ತನ್ನ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಸುತ್ತಿದ್ದ ಜವಾಹರಲಾಲ್ ನೆಹರೂ.
ದೆಹಲಿ ಪೊಲೀಸರು ಮದನ್‌ಲಾಲ್ ನೀಡಿದ ಮಾಹಿತಿ ಆಧರಿಸಿ ಸಂಚುಕೋರರು ತಂಗಿದ್ದ ಹೊಟೇಲ್ ಕೋಣೆ ಜಾಲಾಡಿಸಿದ್ದರು.
 
ಅಲ್ಲಿ ಹಿಂದೂ ಮಹಾಸಭಾದ ಲೆಟರ್‌ಹೆಡ್ ಸಿಕ್ಕಿದ್ದರೂ ಆ ಸಂಘಟನೆಯ ಪದಾಧಿಕಾರಿಗಳನ್ನು ಪೊಲೀಸರು ವಿಚಾರಿಸಿರಲಿಲ್ಲ. ಕಪೂರ್ ಆಯೋಗದ ಮುಂದೆ ಮಹಾಸಭಾದ ಪದಾಧಿಕಾರಿ ಅಶೋಕ್ ಲಾಹಿರಿಯವರೇ ಇದನ್ನು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಮದನ್‌ಲಾಲ್ ಪ್ರಮುಖವಾಗಿ `ಅಗ್ರಾಣಿ` ಮತ್ತು `ಹಿಂದೂ ರಾಷ್ಟ್ರ` ಎನ್ನುವ ಎರಡು ಪತ್ರಿಕೆಗಳ ಸಂಪಾದಕರು ಮತ್ತು ಪ್ರಕಾಶಕರ ಬಗ್ಗೆ ತಿಳಿಸಿದ್ದ.
 
ಅವರು ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನೂ ಪೊಲೀಸರು  ಹತ್ತು ದಿನಗಳ ಅವಧಿಯಲ್ಲಿ ಮಾಡಿರಲಿಲ್ಲ. ಕನಿಷ್ಠ ಆ ಒಂದು ಸಣ್ಣ ಪ್ರಯತ್ನ ಮಾಡಿದ್ದರೆ ಗಾಂಧಿ ಹತ್ಯೆಯ ಸಂಚನ್ನು  ಭಗ್ನಗೊಳಿಸಬಹುದಿತ್ತು. ಯಾಕೆಂದರೆ ಆ ಸಂಪಾದಕರು ಮತ್ತು ಪ್ರಕಾಶಕರ ಹೆಸರು- ನಾಥುರಾಮ್ ಗೋಡ್ಸೆ ಮತ್ತು ನಾರಾಯಣ ಅಪ್ಟೆ. ಗಾಂಧೀಜಿಯವರನ್ನು ಕೇವಲ ನಾಥುರಾಮ್ ಗೋಡ್ಸೆ ಕೊಂದದ್ದು ಎಂದು ಹೇಗೆ ಹೇಳುವುದು?

Sunday, January 29, 2012

ಭ್ರಷ್ಟ ರಾಜಕಾರಣದ `ಗಂಗೋತ್ರಿ' ಇನ್ನೂ ಮಲಿನ January 23, 2012

ಭಾರತದ ರಾಜಕಾರಣಕ್ಕೆ ಹಿಡಿದ ರೋಗದ ಮೂಲ ಹುಡುಕಿಕೊಂಡು ಹೊರಟರೆ ಎದುರಾಗುವುದು ದೋಷಪೂರ್ಣ ಚುನಾವಣಾ ವ್ಯವಸ್ಥೆಯ `ಗಂಗೋತ್ರಿ`. 

ಭ್ರಷ್ಟಾಚಾರವನ್ನು ಅದರ ಮೂಲದಲ್ಲಿಯೇ ಶುಚಿಗೊಳಿಸದಿದ್ದರೆ ನೂರು ಲೋಕಪಾಲರನ್ನು ನೇಮಿಸಿದರೂ ಭ್ರಷ್ಟಾಚಾರದ ರೋಗದಿಂದ ರಾಜಕಾರಣವನ್ನು ಮುಕ್ತಗೊಳಿಸುವುದು ಸಾಧ್ಯ ಇಲ್ಲ. ಇಲ್ಲಿಯೇ ಅಣ್ಣಾ ಹಜಾರೆ ತಂಡ ಎಡವಿದ್ದು. ದೆಹಲಿ ಗದ್ದುಗೆಯನ್ನೇ ಮಣಿಸುವ ಅತ್ಯುತ್ಸಾಹಕ್ಕೆ ಇಳಿಯದೆ ತಮಗೆ ಇರುವ ಮಿತಿಯಲ್ಲಿ ಹೆಚ್ಚು ಪ್ರಾಯೋಗಿಕವಾದ ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ಅವರು ಪ್ರಯತ್ನ ಮಾಡಬಹುದಿತ್ತು. ಅದು ಸಾಧ್ಯವಾಗದೆ ಹೋಗಿದ್ದರೆ ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಕಳಂಕರಹಿತ ಮತ್ತು ಪ್ರಾಮಾಣಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹೇರುವ ಪಕ್ಷಾತೀತ ಚಳವಳಿಯೊಂದನ್ನು ರೂಪಿಸಬಹುದಿತ್ತು. ಆದರೆ ಅಣ್ಣಾ ಹಜಾರೆ ತಂಡ ದಾರಿತಪ್ಪಿ ಕಾಂಗ್ರೆಸ್ ಪಕ್ಷ ಉಪಾಯದಿಂದ ಒಡ್ಡಿದ ಬೋನಿಗೆ ಬಿದ್ದಿದೆ. ಈಗ ಅದು ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಿರುವ ಇನ್ನೊಂದು ರಾಜಕೀಯೇತರ ಸಂಘಟನೆ ಅಷ್ಟೆ.

ಅಣ್ಣಾ ಹಜಾರೆ ತಂಡ ಚುನಾವಣಾ ವ್ಯವಸ್ಥೆಯ ಸುಧಾರಣೆಗಾಗಿ ಹೊಸದಾಗಿ ಏನೂ ಮಾಡಬೇಕಾಗಿರಲಿಲ್ಲ. ಎಲ್ಲವೂ ಸಿದ್ಧವಾಗಿ ಇದೆ. 1990ರಲ್ಲಿ ನೇಮಕಗೊಂಡಿದ್ದ ಗೋಸ್ವಾಮಿ ಸಮಿತಿಯಿಂದ ಹಿಡಿದು ಇತ್ತೀಚಿನ ಎರಡನೇ ಆಡಳಿತ ಸುಧಾರಣಾ ಸಮಿತಿಯ (2008) ವರೆಗೆ ಚುನಾವಣಾ ಸುಧಾರಣೆಯ ಪ್ರಯತ್ನ ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ಉದ್ದೇಶಕ್ಕಾಗಿಯೇ ನೇಮಕಗೊಂಡಿರುವ ವೋಹ್ರಾ ಸಮಿತಿ (1993) ಮತ್ತು ಇಂದ್ರಜಿತ್ ಗುಪ್ತಾ ಸಮಿತಿ (1998) ವರದಿಗಳು ಹಾಗೂ ಚುನಾವಣಾ ಆಯೋಗದ ಸುಧಾರಣಾ ಪ್ರಸ್ತಾವಗಳು (2004) ಸರ್ಕಾರದ ಮುಂದಿವೆ. ಇದರ ಜತೆಗೆ ಕಾನೂನು ಆಯೋಗದ ವರದಿ (1999) ಮತ್ತು ರಾಷ್ಟ್ರೀಯ ಸಂವಿಧಾನ ಕಾರ‌್ಯನಿರ್ವಹಣೆ ಪುನರ್‌ಪರಿಶೀಲನಾ ಆಯೋಗದ ವರದಿ (2001)ಗಳಲ್ಲಿಯೂ ಚುನಾವಣಾ ಸುಧಾರಣೆಯ ಪ್ರಸ್ತಾವಗಳಿವೆ.  

ಮೊದಲನೆಯದಾಗಿ ರಾಜಕೀಯದ ಅಪರಾಧೀಕರಣದ ತಡೆ. ಹತ್ತು ವರ್ಷಗಳ ಹಿಂದೆ ದೇಶದ 25 ರಾಜ್ಯಗಳಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ ಒಟ್ಟು 4,120 ಶಾಸಕರ ಪೈಕಿ 1555 ಶಾಸಕರು ಕೊಲೆ,ಡಕಾಯಿತಿ, ಅತ್ಯಾಚಾರ ಮೊದಲಾದ ಹೀನ ಆರೋಪಗಳನ್ನು ಹೊತ್ತಿದ್ದರು. ಕಳೆದ ಬಾರಿ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಕಣದಲ್ಲಿ 3297 ಅಭ್ಯರ್ಥಿಗಳು ಹೀನ ಕ್ರಿಮಿನಲ್ ಆರೋಪಗಳನ್ನು ಹೊಂದಿದವರಿದ್ದರು. ಈಗಿನ ಚುನಾವಣೆಯಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಿರಬಹುದು. 

ಪ್ರಸಕ್ತ ಲೋಕಸಭೆಯಲ್ಲಿ 150 ಸದಸ್ಯರು ಇಂತಹದ್ದೇ ಕ್ರಿಮಿನಲ್ ಹಿನ್ನೆಲೆ ಹೊಂದಿದವರಿದ್ದಾರೆ. ಇದನ್ನು ನಿಯಂತ್ರಿಸುವ ಪ್ರಯತ್ನದ ಫಲವೇ 1993ರಲ್ಲಿ ಆಗಿನ ಗೃಹಕಾರ್ಯದರ್ಶಿ ವೋಹ್ರಾ ನೇತೃತ್ವದ ಸಮಿತಿ ನೀಡಿದ ವರದಿ. 19 ವರ್ಷಗಳ ನಂತರವೂ ಸರ್ಕಾರ ಅದನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿಲ್ಲ. (ಇಂಟರ್‌ನೆಟ್‌ನಲ್ಲಿ ಲಭ್ಯ ಇದೆ). ಅದರಲ್ಲಿ ವೋಹ್ರಾ, ರಾಜಕೀಯದ ಅಪರಾಧೀಕರಣದ ಒಳ-ಹೊರಗನ್ನು ಆಳವಾಗಿ ವಿಶ್ಲೇಷಿಸಿದ್ದಾರೆ. ಈಗಿನ ನಿಯಮಾವಳಿ ಪ್ರಕಾರ ಎಂತಹ ಹೀನ ಅಪರಾಧಗಳ ಆರೋಪಗಳಿದ್ದರೂ ಅದರ ವಿರುದ್ಧದ ಮೇಲ್ಮನವಿ ಇತ್ಯರ್ಥವಾಗುವ ವರೆಗೆ ಆತ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ. ಕ್ರಿಮಿನಲ್ ಹಿನ್ನೆಲೆ ಹೊಂದಿದ್ದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದೆಂದು 1998ರಲ್ಲಿಯೇ ಚುನಾವಣಾ ಆಯೋಗ ಶಿಫಾರಸು ಮಾಡಿತ್ತು. 2004ರಲ್ಲಿ ಅದನ್ನು ಮತ್ತೆ ದೃಢೀಕರಿಸಿತ್ತು. 
`ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂದು ನ್ಯಾಯಾಲಯಕ್ಕೆ ಮೇಲ್ನೋಟದ ಪರಿಶೀಲನೆಯಲ್ಲಿ ದೃಢಪಟ್ಟು ಅದರ ಆಧಾರದಲ್ಲಿ ಆರೋಪಪಟ್ಟಿ ಸಲ್ಲಿಕೆಯಾದರೆ ಅಂತಹ ಆರೋಪಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು` ಎನ್ನುವುದು ಚುನಾವಣಾಆಯೋಗದ ಮೂಲ ಶಿಫಾರಸು. ನಂತರ ಇದನ್ನು ಇನ್ನಷ್ಟು ಬಿಗಿಗೊಳಿಸಿದ ಆಯೋಗ `ಎರಡು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಶಿಕ್ಷೆಗೆ ಅರ್ಹವಾದ ಅಪರಾಧದಲ್ಲಿ ಭಾಗಿಯಾದವರಿಗೆ ಅದರ ವಿರುದ್ಧ ಮೇಲ್ಮನವಿಗಳು ಇತ್ಯರ್ಥಕ್ಕೆ ಬಾಕಿ ಇದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಡಬಾರದು` ಎಂದು ಹೇಳಿತ್ತು. ಈ ಶಿಫಾರಸುಗಳೇನಾದರೂ ಅನುಷ್ಠಾನಕ್ಕೆ ಬಂದಿದ್ದರೆ ಉತ್ತರಪ್ರದೇಶದ ಚುನಾವಣಾ ಕಣದಲ್ಲಿ ಬಾಹುಬಲದ ಅಪರಾಧಿಗಳು ಇರುತ್ತಿರಲಿಲ್ಲ. ಲೋಕಸಭೆಯಲ್ಲಿ ತಕ್ಷಣಕ್ಕೆ 150 ಸ್ಥಾನಗಳು ಖಾಲಿಯಾಗುತ್ತಿದ್ದವು.

ರಾಜಕೀಯ ಪಕ್ಷಗಳು ಅಪರಾಧಿಗಳ ಪರವಾಗಿರುವುದು ಅವರ ಗೆಲ್ಲುವ ಸಾಮರ್ಥ್ಯಕ್ಕಾಗಿಯೇ ಹೊರತು ಅವರ ಮೇಲಿನ ಪ್ರೀತಿಯಿಂದ ಅಲ್ಲ. ಒಬ್ಬ ಅಪರಾಧಿ ತಂದುಕೊಡುವ ಒಂದು ಸದಸ್ಯ ಬಲಕ್ಕಾಗಿ ಸಹಿಸಬಾರದ್ದನ್ನೆಲ್ಲ ಸಹಿಸಿಕೊಳ್ಳಬೇಕಾದ ಸ್ಥಿತಿಯಲ್ಲಿ ರಾಜಕೀಯ ಪಕ್ಷಗಳಿವೆ. ಈಗ ಎಲ್ಲರ ಕಣ್ಮಣಿಯಾಗಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಕ್ಷದಲ್ಲಿಯೂ ಕ್ರಿಮಿನಲ್ ಹಿನ್ನೆಲೆಯ ಶಾಸಕರಿದ್ದಾರೆ. ಅವರಿಗೆ ಟಿಕೆಟ್ ನೀಡದೆ ಇದ್ದಿದ್ದರೆ ಆ ಕ್ಷೇತ್ರಗಳಲ್ಲಿ ಲಾಲುಪ್ರಸಾದ್ ಪಕ್ಷದ್ದೋ, ಇನ್ನು ಯಾವುದೋ ಪಕ್ಷದ ಅಭ್ಯರ್ಥಿಗಳೋ ಗೆದ್ದುಬಿಡುತ್ತಿದ್ದರು. ಅಪರಾಧಿಗಳು ಚುನಾವಣಾ ಕಣ ಪ್ರವೇಶದ ವಿರುದ್ಧದ ನಿಷೇಧ ಜಾರಿಗೆ ಬಂದರೆ ಅದು ಎಲ್ಲರಿಗೂ ಅನ್ವಯವಾಗುವುದರಿಂದ  ಕ್ರಿಮಿನಲ್‌ಗಳಿಗೆ ಟಿಕೆಟ್ ನೀಡಬೇಕಾದ ಒತ್ತಡದಿಂದ ಪಕ್ಷಗಳು ಪಾರಾಗಬಹುದು. ಈ ದೃಷ್ಟಿಯಿಂದ ಪ್ರಮುಖವಾಗಿ ರಾಷ್ಟ್ರೀಯ ಪಕ್ಷಗಳು ಒಳಗಿಂದೊಳಗೆ ಇಂತಹ ಸುಧಾರಣೆಯ ಪರವಾಗಿಯೇ ಇವೆ. 

ಎರಡನೆಯದಾಗಿ ಸ್ಪಷ್ಟ ಬಹುಮತ ಮತ್ತು ನಿರಾಕರಣಾರ್ಥಕ ಮತಗಳ ಚಲಾವಣೆಗೆ ಅವಕಾಶ ನೀಡುವ ಸುಧಾರಣೆ. ಚುನಾವಣೆಯಲ್ಲಿ ಆಯ್ಕೆಯಾಗಲು ಅಭ್ಯರ್ಥಿಗಳು ಶೇಕಡಾ 50ಕ್ಕಿಂತ ಹೆಚ್ಚು ಮತ ಪಡೆಯುವುದನ್ನು ಕಡ್ಡಾಯಗೊಳಿಸಬೇಕೆಂಬ ಸಲಹೆಯನ್ನು ಮೊದಲು  ನೀಡಿದ್ದು ಕಾನೂನು ಆಯೋಗ. `ಇದರಿಂದ ಚುನಾವಣೆಯಲ್ಲಿ ಜಾತಿಯ ಪಾತ್ರ ಕಡಿಮೆಯಾಗಬಹುದು. ಯಾವುದೇ ಕ್ಷೇತ್ರದಲ್ಲಿ ಒಂದು ಜಾತಿ ಶೇಕಡಾ 50ರಷ್ಟು ಇರುವ ಸಾಧ್ಯತೆ ಇಲ್ಲವಾದ ಕಾರಣ ಯಾವುದೇ ಪ್ರಬಲ ಜಾತಿಯ ಅಭ್ಯರ್ಥಿಗಳು ಕೂಡಾ ಎಲ್ಲ ಜಾತಿ ಮತದಾರರ ಒಲವು ಗಳಿಸಲು ಅನಿವಾರ್ಯವಾಗಿ ಪ್ರಯತ್ನಿಸಬೇಕಾಗುತ್ತದೆ` ಎಂದು ಆಯೋಗ ಹೇಳಿತ್ತು. ಈಗಿನ ವ್ಯವಸ್ಥೆಯಲ್ಲಿ ಒಬ್ಬ ಅಭ್ಯರ್ಥಿ ಶೇಕಡಾ 25ರಿಂದ 30ರಷ್ಟು ಮತ ಗಳಿಸಿದರೂ ಆಯ್ಕೆಯಾಗುವ ಸಾಧ್ಯತೆ ಇದೆ. ಉದಾಹರಣೆಗೆ ಕರ್ನಾಟಕದಂತಹ ರಾಜ್ಯದಲ್ಲಿ ಯಾವುದಾದರೂ ಎರಡು ಪ್ರಮುಖ ಜಾತಿಗಳು ಇಲ್ಲವೇ ಯಾವುದಾದರೂ ಒಂದು ಪ್ರಮುಖ ಜಾತಿ ಜತೆ ಪರಿಶಿಷ್ಟಜಾತಿ ಇಲ್ಲವೇ ಪರಿಶಿಷ್ಟ ಪಂಗಡಗಳು ಇಲ್ಲವೇ ಅಲ್ಪಸಂಖ್ಯಾತರು ಸೇರಿಕೊಂಡರೆ ಒಬ್ಬ ಅಭ್ಯರ್ಥಿಯನ್ನು ಸುಲಭದಲ್ಲಿ ಗೆಲ್ಲಿಸಲು ಸಾಧ್ಯ ಇದೆ.

ಈ ಸುಧಾರಣೆಯ ಮುಖ್ಯ ಸಮಸ್ಯೆ ಮರುಮತದಾನ. ಯಾವ ಅಭ್ಯರ್ಥಿ ಕೂಡಾ ಶೇಕಡಾ 50ಕ್ಕಿಂತ ಹೆಚ್ಚು ಮತಗಳಿಸದಿದ್ದರೆ ಅಂತಹ ಕ್ಷೇತ್ರದಲ್ಲಿ ಮರುಚುನಾವಣೆ ನಡೆಸಬೇಕಾಗುತ್ತದೆ. ಆಗಲೂ ನಿರೀಕ್ಷಿತ ಮತಗಳು ಲಭ್ಯವಾಗದಿದ್ದರೆ ಮತ್ತೆ ಚುನಾವಣೆ ನಡೆಸುವುದು ಅನಿವಾರ್ಯವಾಗುತ್ತದೆ. ಇದರಿಂದ ಸರ್ಕಾರದ ಮೇಲೆ ಚುನಾವಣಾ ನಿರ್ವಹಣೆಯ ವೆಚ್ಚದ ಹೊರೆ ಅಧಿಕವಾಗುತ್ತದೆ  ಎನ್ನುವುದು ಕೆಲವರ ಆಕ್ಷೇಪ. ಪ್ರಾರಂಭದ ದಿನಗಳಲ್ಲಿ ಈ ರೀತಿಯ ಬಿಕ್ಕಟ್ಟು ಸೃಷ್ಟಿಯಾದರೂ ಕ್ರಮೇಣ ಹೊಸ ವ್ಯವಸ್ಥೆಯನ್ನು ಮತದಾರರೂ ಅರ್ಥಮಾಡಿಕೊಂಡು ಮತಚಲಾಯಿಸುತ್ತಾರೆ ಎನ್ನುವ ವಾದವೂ ಇದೆ.

ಇದರ ಜತೆಗೆ ನಿರಾಕರಣಾರ್ಥಕ ಮತ ಚಲಾವಣೆಗೆ ಅವಕಾಶ ನೀಡಬೇಕೆಂದು ಕೂಡಾ ಕಾನೂನು ಆಯೋಗ ಶಿಫಾರಸು ಮಾಡಿತ್ತು. ಒಂದು ಕ್ಷೇತ್ರದಲ್ಲಿನ ಯಾವ ಅಭ್ಯರ್ಥಿ ಕೂಡಾ ಅರ್ಹನಲ್ಲ ಎಂದು ಮತದಾರ ತೀರ್ಮಾನಿಸಿದರೆ `ಯಾರಿಗೂ ನನ್ನ ಮತ ಇಲ್ಲ` ಎಂದು ಹೇಳುವ ಹಕ್ಕು ಆತನಿಗೆ ಇರಬೇಕು ಎನ್ನುವುದು ಈ ಶಿಫಾರಸಿನ ಉದ್ದೇಶ. ಒಂದೊಮ್ಮೆ ಈ ರೀತಿಯ ನಿರಾಕರಣಾರ್ಥಕ ಮತಗಳ ಪ್ರಮಾಣ ಆಯ್ಕೆಯಾದ ಅಭ್ಯರ್ಥಿ ಪಡೆದ ಮತಗಳಿಗಿಂತ ಹೆಚ್ಚಿದ್ದರೆ ಆಗ ಅಲ್ಲಿ ಮರುಮತದಾನ ನಡೆಸಬೇಕಾಗುತ್ತದೆ. ಈಗಲೂ ಚುನಾವಣಾ ನಿರ್ವಹಣೆಯ ನಿಯಮ 19ರ ಪ್ರಕಾರ ಮತದಾರರು ಮತದಾನಕ್ಕೆ ತಮ್ಮ ಹೆಸರು ನೋಂದಾಯಿಸಿದ ನಂತರ ಮತಚಲಾಯಿಸಲು ನಿರಾಕರಿಸಬಹುದು. ಆದರೆ ಮತಪೆಟ್ಟಿಗೆಯ ವ್ಯವಸ್ಥೆಯಲ್ಲಿ ಈ ಗೌಪ್ಯವನ್ನು ಕಾಪಾಡಲು ಸಾಧ್ಯವಾಗದು. ಮತದಾನ ಯಂತ್ರ ಎಲ್ಲ ಕಡೆಗಳಲ್ಲಿ ಜಾರಿಗೆ ಬಂದರೆ ಮಾತ್ರ ಇದು ಸಾಧ್ಯ.

ಮೂರನೆಯದಾಗಿ ಅಭ್ಯರ್ಥಿಗಳ  ಆಸ್ತಿ ಮತ್ತು ಸಾಲ, ತೆರಿಗೆ, ಕಂದಾಯ ಬಾಕಿಯ ಕಡ್ಡಾಯ ಘೋಷಣೆ.  ಇತ್ತೀಚಿನ ಸಮೀಕ್ಷೆಯ ಪ್ರಕಾರ ರಾಜ್ಯಸಭೆಯ ಅರ್ಧದಷ್ಟು ಮತ್ತು ಲೋಕಸಭೆಯ ಮೂರನೆ ಒಂದರಷ್ಟು ಸದಸ್ಯರು ಘೋಷಿತ ಕೋಟ್ಯಧಿಪತಿಗಳು. 

ರಾಜ್ಯಸಭೆ ಮತ್ತು ಲೋಕಸಭೆಗಳ ತಲಾ ಹತ್ತು ಅತ್ಯಂತ ಶ್ರಿಮಂತ ಸದಸ್ಯರ ಘೋಷಿತ ಆಸ್ತಿಯ ಒಟ್ಟು ಮೌಲ್ಯ 1500 ಕೋಟಿ ರೂಪಾಯಿ. ಉಳಿದವರು ಬಡವರೇನಲ್ಲ. ಅವರಲ್ಲಿ ಹೆಚ್ಚಿನವರಿಗೆ ಆಸ್ತಿ ಘೋಷಿಸಿಕೊಳ್ಳಲು ಮೂಲಗಳಿಲ್ಲ, ಅದಕ್ಕೆ ಆ ಹಣಕ್ಕೆ ಕಪ್ಪು ಬಣ್ಣ. ಈ ಆಸ್ತಿ ವಿವರದ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ಆ ಮಾಹಿತಿಯ ಪರಿಶೀಲನೆ ನಡೆಸುವ ವ್ಯವಸ್ಥೆ ಇಲ್ಲದಿರುವುದು ಈ ಲೋಪಕ್ಕೆ  ಕಾರಣ. ಅಭ್ಯರ್ಥಿಗಳು ನೀಡುವ ಈ ವಿವರವನ್ನು ವರಮಾನ ತೆರಿಗೆ ಇಲಾಖೆ ಮತ್ತಿತರ ಕೇಂದ್ರ ಸಂಸ್ಥೆಗಳಿಂದ ಪರಿಶೀಲನೆ ಮಾಡಿಸಬೇಕು. 

ಅಷ್ಟು ಮಾತ್ರವಲ್ಲ, ತಪ್ಪು ಮಾಹಿತಿ ನೀಡುವವರಿಗೆ ನೀಡಲಾಗುವ ಆರು ತಿಂಗಳ ಜೈಲುವಾಸದ ಶಿಕ್ಷೆಯನ್ನು ಎರಡು ವರ್ಷಗಳಿಗೆ ಹೆಚ್ಚಿಸಬೇಕು ಮತ್ತು ಪರ‌್ಯಾಯವಾಗಿ ದಂಡ ವಿಧಿಸುವುದನ್ನು ರದ್ದುಮಾಡಬೇಕು ಎಂದು ಚುನಾವಣಾ ಆಯೋಗ ಶಿಫಾರಸು ಮಾಡಿದೆ.

ನಾಲ್ಕನೆಯದಾಗಿ ಚುನಾವಣಾ ವೆಚ್ಚದ ನಿಯಂತ್ರಣ. ಈಗಿನ ವ್ಯವಸ್ಥೆಯಲ್ಲಿ ಜಾತಿ ಬೇಡ ಮತ್ತು ದುಡ್ಡು ಇಲ್ಲ ಎಂದು ಹೇಳುವವರಿಗೆ ರಾಜಕೀಯ ಪ್ರವೇಶ ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಇದೆ. ಇದಕ್ಕಾಗಿ ಸರ್ಕಾರವೇ ಅಭ್ಯರ್ಥಿಗಳ ವೆಚ್ಚವನ್ನು ವಹಿಸಿಕೊಂಡರೆ ಹೇಗೆ ಎಂಬ ಚರ್ಚೆ ಬಹಳ ವರ್ಷಗಳಿಂದ ನಡೆದಿದೆ. ಈ ಬಗ್ಗೆ ಅಧ್ಯಯನಕ್ಕಾಗಿಯೇ ನೇಮಕಗೊಂಡ ಇಂದ್ರಜಿತ್ ಗುಪ್ತಾ ಸಮಿತಿ 1998ರಲ್ಲಿ ವರದಿ ನೀಡಿತ್ತು. ನಗದುರೂಪದಲ್ಲಿ ಅಲ್ಲ, ಸೌಲಭ್ಯಗಳ ಮೂಲಕ ಅಭ್ಯರ್ಥಿಗಳಿಗೆ ನೆರವಾಗಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಪಕ್ಷಗಳ ಕಚೇರಿಗಾಗಿ ಕಟ್ಟಡ ಮತ್ತು ದೂರವಾಣಿ, ದೂರದರ್ಶನ ಮತ್ತು ರೇಡಿಯೋಗಳಲ್ಲಿ ಪ್ರಚಾರ ಅವಕಾಶ ಮತ್ತು ನಿರ್ದಿಷ್ಟ ಪ್ರಮಾಣದ ಪೆಟ್ರೋಲ್/ಡೀಸೆಲ್, ಮುದ್ರಣ ಕಾಗದ, ಧ್ವನಿವರ್ಧಕ ಇತ್ಯಾದಿ ಸೌಲಭ್ಯಗಳನ್ನು ಒದಗಿಸಬೇಕು. ಇದಕ್ಕಾಗಿ ಪ್ರತಿ ಮತದಾರನಿಗೆ ತಲಾ ಹತ್ತು ರೂಪಾಯಿಯಂತೆ (1998ರ ಲೆಕ್ಕ) 1200 ಕೋಟಿ ರೂಪಾಯಿಗಳ ಚುನಾವಣಾ ನಿಧಿಯನ್ನು ರಚಿಸಬೇಕು. ಇದಕ್ಕೆ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಸಮಾನ ಮೊತ್ತದ ಹಣ ನೀಡಬೇಕು ಎಂದು ಗುಪ್ತಾ ಸಮಿತಿ ಹೇಳಿತ್ತು. ಅದರೆ ಕಳೆದ ಹದಿನಾಲ್ಕು ವರ್ಷಗಳಲ್ಲಿ ಆ ವರದಿ ಮುಟ್ಟಲು ಯಾರೂ ಹೋಗಿಲ್ಲ. 

ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿ ಬಹಳಷ್ಟು ಕಡಿಮೆ ಇದೆ ಎನ್ನುವ ಅಭಿಪ್ರಾಯವನ್ನು ಎಲ್ಲ ಪಕ್ಷಗಳು ಒಪ್ಪಿಕೊಳ್ಳುತ್ತವೆ. ಆದುದರಿಂದ ಪಕ್ಷಾತೀತವಾಗಿ ಎಲ್ಲ ಅಭ್ಯರ್ಥಿಗಳು ಸುಳ್ಳು ಲೆಕ್ಕ ನೀಡುತ್ತಾರೆ. 2009ರ ಲೋಕಸಭಾ ಚುನಾವಣಾ ಕಣದಲ್ಲಿದ್ದ 6753 ಅಭ್ಯರ್ಥಿಗಳಲ್ಲಿ 6719 ಅಭ್ಯರ್ಥಿಗಳು (ಶೇಕಡಾ 99.5) `ನಾವು ಚುನಾವಣಾ ವೆಚ್ಚದ ಮಿತಿಯ ಶೇಕಡಾ 45ರಿಂದ 55ರಷ್ಟು ಮಾತ್ರ ಖರ್ಚು ಮಾಡಿದ್ದೇವೆ` ಎಂದು ಆಯೋಗಕ್ಕೆ ನೀಡಿರುವ ಲೆಕ್ಕಪತ್ರದಲ್ಲಿ ತಿಳಿಸಿದ್ದಾರೆ. ಕೇವಲ ನಾಲ್ಕು ಅಭ್ಯರ್ಥಿಗಳು ಮಾತ್ರ `ವೆಚ್ಚದ ಮಿತಿಯನ್ನು ಮೀರಿದ್ದೇವೆ` ಎಂದು ಒಪ್ಪಿಕೊಂಡಿದ್ದಾರೆ. ಕೇವಲ 30 ಅಭ್ಯರ್ಥಿಗಳು  ಮಾತ್ರ `ವೆಚ್ಚದ ಮಿತಿಯ ಶೇಕಡಾ 90ರಿಂದ 95ರಷ್ಟು ಖರ್ಚು ಮಾಡಿದ್ದೇವೆ` ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಾಸ್ತವಿಕ ನೆಲೆಯಲ್ಲಿ ಚುನಾವಣಾ ವೆಚ್ಚವನ್ನು ನಿರ್ಧರಿಸಬೇಕೆಂದು ಚುನಾವಣಾ ಆಯೋಗ ಶಿಫಾರಸು ಮಾಡಿದೆ. ಇನ್ನು ಹಲವಾರು ಸುಧಾರಣಾ ಕ್ರಮಗಳಿದ್ದರೂ ಕನಿಷ್ಠ ಈ ನಾಲ್ಕು ಮುಖ್ಯ ಚುನಾವಣಾ ಸುಧಾರಣೆಗಳ ಮೂಲಕ ಭ್ರಷ್ಟಾಚಾರವನ್ನು ಗಂಗೋತ್ರಿಯಲ್ಲಿಯೇ ಶುಚಿಗೊಳಿಸಿ ರಾಜಕಾರಣದ ಆರೋಗ್ಯ ಕಾಪಾಡಲು ಸಾಧ್ಯ. ಅಣ್ಣಾ ಹಜಾರೆ ತಂಡ ಈ ಅವಕಾಶವನ್ನು ಕಳೆದುಕೊಂಡಿದೆ.

Monday, January 23, 2012

16 ಜನವರಿ 2012 ಅನಾವರಣ ಅಂಕಣದ ಬಗ್ಗೆ ಪ್ರತಿಕ್ರಿಯೆ -2

ಸ್ವಾಮಿ ವಿವೇಕಾನಂದರು ಭಾರತ ಕಂಡ ಅಪ್ರತಿಮ ಸನ್ಯಾಸಿಗಳಲ್ಲಿ ಒಬ್ಬರು. ತಮ್ಮ ಅಪಾರವಾದ ಪಾಂಡಿತ್ಯ ಹಾಗೂ ವಿಚಾರಲಹರಿಯಿಂದ ಪ್ರಪಂಚದ ಗಮನವನ್ನೇ ತಮ್ಮಡೆಗೆ ಸೆಳೆದುಕೊಂಡವರು. ದಾಸ್ಯದ ಸಂಕೋಲೆಯಲ್ಲಿ ಮುಳಗಿದ್ದ ಭಾರತೀಯರನ್ನು ತಮ್ಮ ಛಾಟಿ ಏಟಿನಂತಹ ಮಾತುಗಳಿಂದ ಬಡಿದೆಬ್ಬಿಸಿದ ರಾಷ್ಟ್ರ ಪುರುಷ.
 
ಹಿಂದೂ ಧರ್ಮವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದಲ್ಲಿ ಕಾಲಕ್ರಮೇಣ ಸೇರಿಹೋಗಿದ್ದ ಮೌಢ್ಯತೆ ಹಾಗೂ ಜಾಡ್ಯತೆ ಎಂಬ ರೋಗಗಳಿಗೆ ಕಠಿಣ ಔಷಧಿಯನ್ನು ಕೊಟ್ಟು ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಿದ ವೈದ್ಯರು. ಹಿಂದು, ಮುಸ್ಲಿಂ, ಕ್ರಿಸ್ಚಿಯನ್ ಎಲ್ಲರನ್ನು ಒಟ್ಟಾಗಿ-ಸಮನಾಗಿ ಕಂಡ ರಾಷ್ಟ್ಟ್ರಪುರುಷರಿವರು
.
 
ಇಂತಹ ಮಹಾನ್ಸಂತನ 150ನೇ ವರ್ಷದ ಜಯಂತೋತ್ಸವವು ವಿಜೃಂಭಣೆಯಿಂದ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಬುದ್ಧ ಅಂಕಣಕಾರರಾದ ಶ್ರೀಯುತ ದಿನೇಶ್ ಅಮಿನ್ಮಟ್ಟು ಅವರ ವಿವೇಕಾನಂದರನ್ನು ನಕಾರಾತ್ಮಕವಾಗಿ ಬಿಂಬಿಸುವ ಲೇಖನ ಸಮಯೋಚಿತವಲ್ಲ. ಈ ಲೇಖನದಲ್ಲಿ facts ಗಳೆಂದು ಉಲ್ಲೇಖಿಸಿದ ಸಂಗತಿಗಳ ಬಗ್ಗೆ ಎಷ್ಟು ಆಕ್ಷೇಪವಿದೆಯೋ ಅಷ್ಟೇ ಆಕ್ಷೇಪ ಲೇಖನದ ಧ್ವನಿ ಮತ್ತು ಧಾಟಿಯ ಮೇಲೂ ಇದೆ.

ಸ್ವಾಮಿ ವಿವೇಕಾನಂದರ ವಿಚಾರಗಳ ಮೇಲೆ ಗಂಭೀರವಾಗಿ ಚರ್ಚಿಸುವ ಬದಲು ಅವರ ವೈಯಕ್ತಿಕ ಜೀವನದ ಬಗ್ಗೆ ಇಲ್ಲಿ ಹಗುರವಾಗಿ ಮಾತನಾಡಲಾಗಿದೆ. ವಿವೇಕಾನಂದರ ಸಾವಿನ 110 ವರ್ಷಗಳ ನಂತರ ಈ ರೀತಿಯ ಅವರ ವೈಯಕ್ತಿಕ ಜೀವನದ ಬಗೆಗಿನ ಈ ರೀತಿಯ ವಿಶ್ಲೇಷಣೆ ಸರಿಯಾದುದಲ್ಲ. 110 ವರ್ಪಗಳ ದೂರದಿಂದ ಒಬ್ಬ ವ್ಯಕ್ತಿಯ ವೈಯಕ್ತಿಕ ಜೀವನವನ್ನು ಟೀಕಿಸುವುದು ಯುಕ್ತವಲ್ಲ.
ಈ ಲೇಖನದಲ್ಲಿ ವಿವೇಕಾನಂದರನ್ನು ಒಬ್ಬ ದಡ್ಡನಂತೆ, ಸದಾ ಹಾಸಿಗೆ ಹಿಡಿದಿರುವ ರೋಗಿಯಂತೆ ಹಾಗೂ ಹಿಂದೂ ಧರ್ಮವನ್ನು ಕಟುವಾಗಿ ವಿರೋಧಿಸುತ್ತಿದ್ದ ವ್ಯಕ್ತಿಯಂತೆ ಬಿಂಬಿಸುವ ಪ್ರಯತ್ನ ನಡೆದಿದೆ. ಇದು ವಾಸ್ತವಿಕತೆಯಿಂದ ಬಹು ದೂರವಾದಂತಹ ಮಾತುಗಳು. Swami Vivekananda on himself ಎಂಬ ಪುಸ್ತಕದಲ್ಲಿ ವಿವೇಕಾನಂದರೇ ಅವರ ವೈಯಕ್ತಿಕ ಜೀವನದ ಬಗ್ಗೆ ಹಾಗು ಅವರ ಅನಿಸಿಕೆಗಳ ಬಗ್ಗೆ ಬರೆದಿದ್ದಾರೆ. ಸ್ವಾಮಿ ವಿವೇಕಾನಂದರ ವೈಯಕ್ತಿಕ ಜೀವನವನ್ನು ಅಥರ್ೈಸಿಕೊಳ್ಳಲು ಬೇರೆ ಯಾರೋ ಬರೆದ ಪುಸ್ತಕಕ್ಕಿಂತ ವಿವೇಕಾನಂದರು ಸ್ವತಃ ಬರೆದಿರುವ ಪುಸ್ತಕಗಳನ್ನು ಓದುವುದು ಒಳ್ಳೆಯದು.
ಸ್ವಾಮಿ ವಿವೇಕಾನಂದರು ಶಿಕಾಗೋ ಧರ್ಮ ಸಮ್ಮೇಳನಕ್ಕೆ ಹಿಂದೂ ಧರ್ಮದ ಬ್ರಾಂಡ್ ಅಂಬಾಸಿಡರ್ ಆಗಿಯೇ ಹೋಗಿದ್ದರು ಎಂಬ ವಿಷಯವನ್ನು ಲೇಖಕರು ಅರ್ಥೈಸಿಕೊಳ್ಳಬೇಕು. ಹಿಂದೂ ಧರ್ಮದಲ್ಲಿನ ತಪ್ಪುಗಳನ್ನು ಎತ್ತಿತೋರಿಸಿದ ಮಾತ್ರಕ್ಕೆ ಅವರನ್ನು ಇಡೀ ಹಿಂದೂ ಧರ್ಮದ ವಿರೋಧಿ ಎಂದು ಹೇಳುವುದು ಎಷ್ಟು ಸರಿ? ಹಾಗಿದ್ದಲ್ಲಿ ಧರ್ಮದಲ್ಲಿ ಸೇರಿದ್ದ ಮೌಢ್ಯತೆಗಳನ್ನು ತಿದ್ದಿದ ರಾಜಾರಾಮಮೋಹನರಾಯ್, ಸ್ವಾಮಿ ದಯಾನಂದ ಸರಸ್ವತಿ, ಮಹಾತ್ಮ ಗಾಂಧಿ, ಶ್ರೀ ಅರವಿಂದರು, ಜ್ಯೋತಿಬಾ ಫೂಲೇ ಎಲ್ಲರನ್ನು ಹಿಂದೂ ಧರ್ಮದ ವಿರೋಧಿಗಳು ಎನ್ನಲು ಸಾಧ್ಯವೇ? ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಿದರೇ ಹೊರತು ಹಿಂದೂ ಧರ್ಮದ ವಿರೋಧಿಯಾಗಿರಲಿಲ್ಲ. ಸ್ವಾಮಿ ವಿವೇಕಾನಂದರ ಜೀವನದ ಕೊಡುಗೆಯ ಬಗ್ಗೆ ಜವಹರ್ಲಾಲ್ ನೆಹರು ತಮ್ಮ ಪುಸ್ತಕ The Discovery of India ದಲ್ಲಿ ಹೀಗೆ ಬರೆದಿದ್ದಾರೆ He came as a tonic to the depressed and demoralized Hindu mind and gave it self-reliance and some roots in the past..
ಅಪ್ರತಿಮ ಗಾಂಧೀವಾದಿ, ರಾಷ್ಟ್ರ ಚಿಂತಕ ಚಕ್ರವರ್ತಿ ರಾಜಗೋಪಾಲಚಾರಿಯವರು ವಿವೇಕಾನಂದರ ಕೊಡುಗೆಯನ್ನು ಹೀಗೆ ವರ್ಣಿಸುತ್ತಾರೆ Swami Vivekananda saved Hinduism and saved India. But for him, we would have lost our religion ad would not have gained our freedom..
ಅಷ್ಟೇ ಅಲ್ಲ, ಭಾರತ ಕಂಡ ಅಪ್ರತಿಮ ವಿಚಾರವಾದಿ ಲೇಖಕ ರಾಮ್ಧಾರಿಸಿಂಗ್ ದಿನಕರ್ ಹಿಂದುಗಳಿಗೆ ಈ ರೀತಿಯಾಗಿ ಕಿವಿ ಮಾತನ್ನು ಹೇಳುತ್ತಾರೆ It is a solemn duty of the Hindu race that as long as it survives, it must keep the memory of Vivekananda with the same regard, as with which it remembers Vyasa and Valmiki..
ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ನ್ಯೂನ್ಯತೆಗಳನ್ನು ಎತ್ತಿ ತೋರಿಸಿದ ಭಾಗಗಳನಷ್ಟೇ ಲೇಖನದಲ್ಲಿ ಉದ್ದರಿಸಿ, ಅವರು ಸನಾತನ ಹಿಂದೂ ಧರ್ಮಕ್ಕೇ ವಿರೋಧಿಗಳಾಗಿದ್ದರೆಂಬ ತಪ್ಪು ಕಲ್ಪನೆ ಮೂಡುವಂತೆ ಹಾಗೂ ಇವತ್ತಿನ ಸೆಕ್ಯೂಲರ್ ವಾದಿಗಳ ಸಾಲಿನಲ್ಲೇ ವಿವೇಕಾನಂದರನ್ನು ತರಲು ಪ್ರಯತ್ನಿಸಿರುವುದು ಆಕ್ಷೇಪಣೀಯ.
ವಿವೇಕಾನಂದರು ಎಷ್ಟರ ಮಟ್ಟಿಗೆ ಸಾಮಾಜಿಕ ಸುಧಾರಕರೋ, ಅಷ್ಟೇ ಮಟ್ಟಿಗೆ ಧಾರ್ಮಕ ಸುಧಾರಕರೂ ಹೌದು. ಆದ್ದರಿಂದಲೇ ಅವರು ತಾವು ಸ್ಥಾಪಿಸಿದ ರಾಮಕೃಷ್ಣ ಮಿಷನ್ ಸಂಸ್ಥೆಯ ಧ್ಯೇಯವಾಕ್ಯವಾಗಿ ಆತ್ಮನೋ ಮೋಕ್ಷಾರ್ಥಂ ಜಗತ್ ಹಿತಾಯಚ ಎಂಬುದಾಗಿ ಪ್ರತಿಪಾದಿಸಿದ್ದು.
 
ಸಮಾಜ ಸುಧಾರಣೆ ಕೆಲಸದಲ್ಲಿ ಎಷ್ಟು ನಂಬಿಕೆಯಿತ್ತೋ ಅಷ್ಟೇ ನಂಬಿಕೆ ಸನಾತನ ಧರ್ಮದ ಆಧ್ಯಾತ್ಮಿಕ ಸಾಧನೆಗಳಾದ ಪೂಜೆ, ಪುನಸ್ಕಾರ ಭಜನೆಗಳ ಮೇಲೂ ಅವರಿಗೆ ಇತ್ತು. ಒಂದು ವೇಳೆ ವಿವೇಕಾನಂದರಿಗೆ ಇದರಲೆಲ್ಲಾ ನಂಬಿಕೆ ಇಲ್ಲದಿದ್ದರೆ ರಾಮಕೃಷ್ಟ ಪರಮಹಂಸರಂತಹ ಕರ್ಮಠ ಬ್ರಾಹ್ಮಣನನ್ನು ಅವರು ತಮ್ಮ ಗುರುವಾಗಿ ಒಪ್ಪುತ್ತಿರಲೇ ಇಲ್ಲ. ಜಾತಿ ಪದ್ದತಿಯನ್ನು ವಿರೋಧಿಸಿ ಎಲ್ಲರೊಡನೆ ಬೆರೆಯುತ್ತಿದ್ದ ಸ್ವಾಮಿ ವಿವೇಕಾನಂದರನ್ನು ಆಗಿನ ಕಾಲದಲ್ಲೂ ಕೆಲ ಜನ ಟೀಕಿಸಿದ್ದು ನಿಜ. ಇದು ಟೀಕಿಸಿದವರ ಸಂಕುಚಿತ ಭಾವನೆಯನ್ನು ತೋರಿಸುತ್ತದೆಯೇ ವಿನಃ ಸ್ವಾಮಿ ವಿವೇಕಾನಂದರ ವಿಶಾಲ ಹೃದಯವನ್ನು ಪ್ರತಿಬಿಂಬಿಸುವುದಿಲ್ಲ.
150ನೇ ವರ್ಷದ ಜಯಂತ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ವಿವೇಕಾನಂದರ ಮನುಷ್ಯ ಮುಖವನ್ನು ತೋರಿಸುವ ನೆಪದಲ್ಲಿ ಲೇಖಕರು ವಿವೇಕಾನಂದರ ಮಹಾನ್ ವ್ಯಕ್ತಿತ್ವವನ್ನು ಕುಬ್ಜಗೊಳಿಸಿರುವುದು ಖೇದನೀಯ.
 
ವಿವೇಕಾನಂದರು ನಮ್ಮಂತಯೇ ಹುಟ್ಟಿ, ನಮ್ಮಂತೆಯೇ ನರಳಿ ತೀರಿಹೋಗಿದ್ದರೂ, ಅವರ ಸಾಧನೆ ಮಾತ್ರ ಅಸಾಮಾನ್ಯ. ಇಂತಹ ಅಸಾಮಾನ್ಯ ವ್ಯಕ್ತಿಯನ್ನು ದೇವರಂತೆ ಕಂಡು ಪೂಜಿಸಿ ಅದರಿಂದ ಪ್ರೇರಣೆಯನ್ನು ಪಡೆಯುವುದರಲ್ಲಿ ತಪ್ಪೇನಿದೆ? ಕೇವಲ ವ್ಯಕ್ತಿಗಳಲ್ಲಿ ಮಾತ್ರವಲ್ಲದೆ ಎಲ್ಲ ವಸ್ತುಗಳಲ್ಲೂ ದೇವರನ್ನು ಕಾಣುವುದು ಈ ನೆಲದ ಸಂಸ್ಕೃತಿ. ಇದನ್ನು ಲೇಖಕರು ಅರ್ಥ ಮಾಡಿಕೊಳ್ಳದಿರುವುದು ವಿಷಾದನೀಯ.
ವಿವೇಕಾನಂದರ ವಿವೇಕವನ್ನು ಪರೀಕ್ಷೆಯ ಅಂಕಗಳಲ್ಲಿ ಅಳೆಯುವುದು ಒಂದು ಬಾಲಿಶ ಪ್ರಯತ್ನ. ವಿವೇಕಾನಂದರ ಬಗ್ಗೆ ಅವರ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ: ಹೇಷ್ಟಿ ಹೀಗೆ ಹೇಳುತ್ತಾರೆ : Narendra is a real genius. I have traveled far and wide, but have not yet come across a lad of his talents and possibilities even among the philosophical students in the German universities. He is bound to make his mark in life”. ಇದಕ್ಕಿಂತ Authentic Certification ಬೇಕಿದೆಯೇ?
ಈಶ್ವರ ಚಂದ್ರ ವಿದ್ಯಾಸಾಗರರಿಗೆ ವಿವೇಕಾನಂದರ ಬಗ್ಗೆ ಅಪಾರ ಗೌರವವಿತ್ತು. ಇದನ್ನು ಸ್ವತಃ ವಿವೇಕಾನಂದರೇ ಸಹೋದರಿ ನಿವೇದಿತಾರಿಗೆ ಹಲವು ಬಾರಿ ಪ್ರಸ್ತಾಪಿಸಿದ್ದನ್ನು ನಿವೇದಿತಾರೇ ಅವರ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ವಿವೇಕಾನಂದರು ತಮ್ಮ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸದೇ ಜಾರಿಕೊಳ್ಳಲಿಲ್ಲ. ಸನ್ಯಾಸದ ಸೆಳೆತದಿಂದಾಗಿ ಹಾಗೂ ಯಾವುದೇ ಸಾಂಸಾರಿಕ ಬಂಧನದ ಅಪೇಕ್ಷೆಯಿಲ್ಲದೇ ಅವರು ಸಂಸಾರದಿಂದ ಹೊರ ನಡೆದರೇ ವಿನಃ ಜವಾಬ್ದಾರಿಯಿಂದ ನುಣಿಚಿಕೊಂಡಿದ್ದಲ್ಲ. ತಾನೇಕೇ ಸನ್ಯಾಸಿಯಾದೇ ಎಂಬುದನ್ನು ವಿವೇಕಾನಂದರೇ ಸ್ವತಃ ಹೀಗೆ ಬರೆದುಕೊಂಡಿದ್ದಾರೆ I remember one of the lessons : “For the good of a village, a man ought to give up his family; for the good of a country, he ought to give up his village; for the good of the humanity, he may give up his country; for the good of the world, everything”.
ವಿವೇಕಾನಂದರ ಯಾವುದೇ ಛಾಯಾ ಚಿತ್ರವನ್ನು ನೋಡಿದರೂ ಅದರಲ್ಲಿ ಅವರು ಲೇಖಕರು ಭಾವಿಸಿರುವಂತೆ ಹಾಸಿಗೆ ಹಿಡಿದ ರೋಗಿಯಂತೆ ಕಾಣುವುದಿಲ್ಲ.
ದೃಷ್ಟಿದೋಷವಿಲ್ಲದೇ ನೋಡಿದವರಿಗೆಲ್ಲಾ ಅವರ ವಿಷಾಲವಾದ ಎದೆ, ಬಲಿಷ್ಠವಾದ ತೋಳುಗಳು, ಕಾಂತಿಯುತವಾದ ಕಣ್ಣುಗಳೇಕಾಣುತ್ತವೆ. ವಿವೇಕಾನಂದರಿಗೆ ಸಾಮಾನ್ಯ ಮನುಷ್ಯರಿಗೆ ಬರುವಂತಹ ಕೆಲವು ಕಾಯಿಲೆಗಳು ಬಂದಿದ್ದು ನಿಜ. ನಿರಂತರ ಪ್ರವಾಸ-ಪ್ರವಚನ ಹಾಗೂ ಅವಿಶ್ರಾಂತ ಚಟುವಟಿಕೆಗಳಿಗೆ ತಮ್ಮ ಶಕ್ತಿಯನ್ನು ವಿನಿಯೋಗಿಸಿದ್ದುದು ತಮ್ಮ ಶರೀರದ ಮೇಲೆ ಪರಿಣಾಮ ಬೀರಿದ್ದು ನಿಜ ಎಂದು ಅವರೇ ಎಷ್ಟೋ ಬಾರಿ ಹೇಳಿಕೊಂಡಿದ್ದಾರೆ.
ವಿವೇಕಾನಂದರು ಬಳಲುತ್ತಿದ್ದರೆಂದು ಲೇಖಕರು ರೋಗಗಳ ಒಂದು ದೊಡ್ಡ ಪಟ್ಟಿಯನ್ನೇ ನೀಡಿದ್ದಾರೆ. ಕಾಯಂ ಚೂರ್ಣದ ಜಾಹೀರಾತಿನಂತಿರುವ ಈ ಪಟ್ಟಿಯನ್ನು ತಯಾರು ಮಾಡುವ ಬದಲು ವಿವೇಕಾನಂದರ ಮಹಾನ್ ಸಾಧನೆಯನ್ನು ಪಟ್ಟಿ ಮಾಡಿದ್ದರೆ ಇದೊಂದು ಆರೋಗ್ಯಪೂರ್ಣ ಲೇಖನವಾಗುತ್ತಿತ್ತು ಮತ್ತು ಓದುಗರಿಗೆ ಎಷ್ಟೋ ಪ್ರೇರಣೆ ದೊರಕುತ್ತಿತ್ತು.
ಮಂಡಿ ಊತದ ವಿವೇಕಾನಂದ, ತಿಂಡಿ ಪೋತ ವಿವೇಕಾನಂದ ಎಂದು ಬರೆಯುವ ಬದಲು ವಿವೇಕಾನಂದರ ಪಾಂಡಿತ್ಯದ ಬಗ್ಗೆ ವೈಚಾರಿಕತೆಯ ಬಗ್ಗೆ ವಿರ್ಮಶಿಸಿದ್ದರೆ ಒಂದು ಸಂಗ್ರಹ ಯೋಗ್ಯ ಲೇಖನವಾಗುತ್ತಿತ್ತು.
ಲೇಖಕರು ತಮ್ಮ ಲೇಖನಕೋಸ್ಕರ ಆಧಾರ ಗ್ರಂಥವಾಗಿ ಬಳಸಿರುವ The Monk as Man ಎಂಬ ಪುಸ್ತಕ ಪ್ರಕಟವಾಗುವಂತಹ ಬಹು ಹಿಂದೆಯೇ ನರಸಿಂಗ ಪ್ರಸಾದ ಸಿಲ್ ಎಂಬುವರು ಬರೆದ Swami Vivekananda – A Reassessment ಎಂಬ ಪುಸ್ತಕ ಬಂದಿತ್ತು. ಆ ಪುಸ್ತಕದಲ್ಲಿಯೂ ಸಹ ವಿವೇಕಾನಂದರನ್ನು ಇದೇ ಧ್ವನಿ ಹಾಗೂ ಧಾಟಿಯಲ್ಲಿ ಚಿತ್ರಿಸಲಾಗಿತ್ತು. ಆ ಪುಸ್ತಕವನ್ನು ಜನರು ಮರೆತು ಬಿಟ್ಟಿದ್ದಾರೆ. ಅದೇ ಪರಿಸ್ಥಿತಿ The Monk as Man ಪುಸ್ತಕಕ್ಕೂ ಅದನ್ನು ಆಧಾರಿಸಿದ ಈ ಲೇಖನಕ್ಕೂ ಬಂದರೆ ಸಂಶಯವಿಲ್ಲ.
ವಿವೇಕಾನಂದರನ್ನು ಟೀಕಿಸುವ ಜನ ಅಂದೂ ಇದ್ದರು ಈಗಲೂ ಇದ್ದಾರೆ. ಅಂದಿನ ಟೀಕಾಕಾರರ ಬಾಯನ್ನು ವಿವೇಕಾನಂದರೇ ತಮ್ಮ ಬರವಣಿಗೆಯ ಮೂಲಕ ಮುಚ್ಚಿಸಿದ್ದರು. ಅದರೆ ಇವತ್ತು ವಿವೇಕಾನಂದರು ನಮ್ಮ ಮಧ್ಯೆ ಇಲ್ಲ. ಇಂತಹ ಸಂದರ್ಭದಲ್ಲಿ ಅವರ ವೈಯಕ್ತಿಕ ಜೀವನವನ್ನು ಟೀಕಿಸುವುದು ಸಮಂಜಸವೂ, ಸಮಯೋಚಿತವೂ ಅಲ್ಲ.
ವಿವೇಕಾನಂದರೇ ಬರೆದಿರುವ ಸನ್ಯಾಸಿ ಗೀತೆಯ ಕೆಳಗಿನ ಸಾಲುಗಳು ಅವರ ಟೀಕಾಕಾರರಿಗೆ ಎಂದೆಂದಿಗೂ ಉತ್ತರ ನೀಡುತ್ತದೆ.
ನಿಜವನರಿತವರೆಲ್ಲೊ ಕೆಲವರು ನಗುವರುಳಿದವರೆಲ್ಲರು ;
ನಿನ್ನಕಂಡರೆ ಹೇ ಮಹಾತ್ಮನೇ, ಕುರುಡರೇನನು ಬಲ್ಲರು
ವಂದನೆಗಳು,
  • ಎಲ್.ಎಸ್.ತೇಜಸ್ವಿ ಸೂರ್ಯ
ಪ್ರಿಯ ಶ್ರೀ ದಿನೇಶ್ ಅಮಿನ್ ಮಟ್ಟು ಅವರಿಗೆ,ಸಸ್ನೇಹ ವಂದನೆಗಳು. ವಿವೇಕಾನಂದರ ಬಗ್ಗೆ ನಿಮ್ಮ ‘ಅನಾವರಣ’ ಲೇಖನ ತುಂಬ ಚೆನ್ನಾಗಿದೆ.
ನನ್ನಂಥ ಅನೇಕರಿಗೆ ಗೊತ್ತಿಲ್ಲದ ಸಂಗತಿಗಳನ್ನು ತಿಳಿಸಿ ನೀವು ಉಪಕಾರ ಮಾಡಿದ್ದೀರಿ. ಹಾರ್ದಿಕ
ಧನ್ಯವಾದಗಳು.
  • ಬಿ.ಆರ್.ಲಕ್ಷ್ಮಣರಾವ್
    ವಿವೇಕಾನಂದರ ಕುರಿತ ಮಾಹಿತಿ ತುಂಬಾನೇ ಚೆನ್ನಾಗಿತ್ತು... ಪುಸ್ತಕಗಳಲ್ಲಿ ಸಾಕಷ್ಟು ಓದಿದ್ದರೂ, ಈ ರೀತಿಯ ಸಂಗತಿಗಳು ತಿಳಿದಿರಲಿಲ್ಲ... ಅಂಕಣವನ್ನ ತುಂಬಾ ಜನ ವಿರೋಧಿಸಬಹುದು.. ಆದ್ರೆ, ಸತ್ಯ ಯಾವತ್ತು ಕಹಿಯಾಗಿಯೇ ಇರುತ್ತೆ.. ಅದರಲ್ಲೂ ಸೋ ಕಾಲ್ಡ್ ಹಿಂದೂಗಳ ಪ್ರತಿಕ್ರಿಯೆ ಉಗ್ರವಾಗಿಯೇ ಇರುತ್ತೆ... ಆದೇನೇ ಆಗ್ಲಿ, ಥ್ಯಾಂಕ್ಸ್ ಟು ದಿನೇಶ್ ಅಮೀನ್ಮಟ್ಟು ಅಂಡ್ ಪ್ರಜಾವಾಣಿ..
  • ಸತೀಶ ಎ.
    ಸ್ವಾಮಿ ವಿವೇಕಾನಂದರ ಬದುಕಿನ ಒಳ ಹೊರಗಿನ ಚಿತ್ರಣ ಓದಿ ಮೂಕವಿಸ್ಮಿತನಾದೆ. ಅತೀ ಅಲ್ಪ ಅವಧಿಯಲ್ಲಿ ಅತೀವ ಸಾಧನೆಗೈದ ವಿವೇಕಾನಂದರು ಆಂತರಿಕವಾಗಿ ರೋಗರುಜಿನಗಳಿಂದ ಬಳಲುತಿದ್ದುದನ್ನು ಓದುತ್ತಿದ್ದಂತೆ ಕಣ್ಣಲ್ಲಿ ಹನಿಗೂಡಿತು. ಇದುವರೆಗೆ ತಿಳಿಯದ ಅವರ ಬದುಕಿನ ಮಾಹಿತಿಗಳು ತಮ್ಮ ಲೇಖನದಿಂದ ತಿಳಿದು ಬಂತು ಧನ್ಯವಾದ. - ಉದಯ್ ಪಡುಬಿದ್ರಿ, ಮುಂಬೈ.
ಗೆಲುವಿನ ನಡುಗೆ
ದಿನೇಶ್ ಅಮಿನಮಟ್ಟು ಅವರ ಲೇಖನ ಓದುತ್ತಾ ಹೋದಂತೆ, ಮೈ ಬೆವರಿಳಿದಿತ್ತು. ವಿವೇಕಾನಂದರ ಬಗ್ಗೆ ಕಂಡು ಕೇಳರಿಯದ ವಿಚಾರಗಳನ್ನು ತಿಳಿದಾಗ, ಅಬ್ಬಾ... ಎಂದು ಅರೆ ಕ್ಷಣ ದಿಗ್ಭ್ರಾಂತನಾದೆ. ಚಿಕ್ಕಂದಿನಿಂದ ಕೇಳುತ್ತಿದ್ದ, ನಂಬಿಕೊಂಡಿದ್ದ ಕಲ್ಪನೆಗಳಿಗೆ ಹೊಸ ಹೊಳಹು ಸಿಕ್ಕಿತು. ಲೇಖನ ಓದಿದ ನಂತರ ನನಗನಿಸಿದಿಷ್ಟು, ವ್ಯಕ್ತಿ, ಸ್ವಭಾವ, ಪ್ರವೃತ್ತಿ, ವೃತ್ತಿ ಏನಾದರೂ ಆಗಿರಬಹುದು, ಮೇಲ್ನೋಟಕ್ಕೆ ಅದು ತೀರಾ ಕ್ಷುಲ್ಲಕವೆನಿಸಬಹುದು ಆದರೆ... ಸಾಧನೆಗೆ ನೂರಾರು ವರ್ಷ ಬದುಕಬೇಕಿಲ್ಲ, ಇರುವ ಸಮಯದಲ್ಲೇ ಮಾಡಲು ಸಾಧ್ಯ. ಅದಕ್ಕೆ ರೋಗ, ರುಜಿನ, ಜಿಹ್ವಾ ಚಾಪಲ್ಯ, ವೇಷ-ಭೂಷಣ, ಪಾಂಡಿತ್ಯ ಮುಖ್ಯವಾಗದು. ಸಿಕ್ಕ ಅವಕಾಶವನ್ನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳಲು ಸಾಧ್ಯ ಎಂಬುದೇ ಮುಖ್ಯ. ಈ ನಿಟ್ಟಿನಲ್ಲಿ, ವಿವೇಕಾನಂದರು ಗೆದ್ದರು ಎಂದೇ ನನ್ನ ಭಾವನೆ.
  • ಗೌರಿಪುರಚಂದ್ರು, ಬೆಂಗಳೂರು
ದಿ.16 ರ ಪ್ರಜಾವಾಣಿ ದಿನಪತ್ರಿಕೆಯ ಅನಾವರಣ ಅಂಕಣದಲ್ಲಿ ಶ್ರೀ ದಿನೇಶ್ ಅಮಿನ್ಮಟ್ಟು ಅವರು ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು..... ಎಂಬ ಲೇಖನದ ಮೂಲಕ ಹಲವಾರು ಸ್ಪೋಟಕ ಮಾಹಿತಿಗಳನ್ನು ಜನರಿಗೆ ನೀಡಿದ್ದಾರೆ. ಇದುವರೆಗೆ ಕೇವಲ ಕೆಲವೇ ಜನಗಳ ಕಪಿಮುಷ್ಠಿಯಲ್ಲಿ ಕೊಳೆತು ಹೋಗುತ್ತಿದ್ದ ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳನ್ನು , ಅವರ ನಿಜವಾದ ವ್ಯಕ್ತಿತ್ವವನ್ನು ಅಮಿನಮಟ್ಟು ನಮಗೆ ಈ ಲೇಖನ ಉದ್ದಕ್ಕೂ ಕಟ್ಟಿಕೊಟ್ಟಿದ್ದಾರೆ. ಅವರಿಗೆ ಮೊದಲು ಅಭಿನಂದನೆಗಳು. ಆದರೆ ಸತ್ಯವನ್ನು ಅರಗಿಸಿಕೊಳ್ಳುವ ಶಕ್ತಿ ಇಲ್ಲದ ಕೆಲವು ಡೊಂಗಿ ಹಿಂದೂವಾದಿಗಳು ತಾವು ಹೇಳಿದಷ್ಟೇ ಸತ್ಯ ಎಂದು ಅರಚುತ್ತಿರುವುದು ಸಹಜ ಕ್ರಿಯೆಯಾಗಿದೆ.
ವಿವೇಕಾನಂದರು ನಮ್ಮಿಂದ ಅಗಲಿ ಬಹಳಷ್ಟು ವರ್ಷಗಳು ಸವೆದು ಹೋಗಿದ್ದರೂ ಈ ದೇಶದ ಬೂಜ್ರ್ವ ಮನಸ್ಸುಗಳು ತಮಗೆ ಎಷ್ಟು ಬೇಕೋ ಅಷ್ಟು ಮಾತ್ರವನ್ನು ವಿವೇಕಾನಂದ ವಿಚಾರಗಳೆಂದು ಪ್ರಚಾರ ಮಾಡಿಕೊಂಡು ತಮ್ಮ ಹೊಟ್ಟೆಯನ್ನು ಹೊರೆದುಕೊಳ್ಳುತ್ತಿದ್ದಾರೆ. ಇದುವರೆಗೆ ವಿವೇಕಾನಂದರನ್ನು ಯಾವುದೋ ದೇವರ ಒಂದು ಅವತಾರ ಎಂದು ಹೇಳಿ ಆತನಂತೆ ನಮಗೆ ಬದುಕಲು ಸಾಧ್ಯವಿಲ್ಲ ಎಂಬಂತೆ ಹೇಳಿಕೊಂಡು ಬರುತ್ತಿದ್ದರು.
ಆದರೆ ಅಮಿನಮಟ್ಟು ಅವರು ವಿವೇಕಾನಂದರು ಆಕಾಶದಿಂದ ಉದುರಿ ಬಿದ್ದವರಲ್ಲ. ನಮ್ಮ ನಿಮ್ಮಂತೆ(ಶ್ರೀಸಾಮಾನ್ಯನಂತೆ) ಈ ನೆಲದಲ್ಲಿ ಹುಟ್ಟಿ , ಬಡತನ, ನೋವು, ಅವಮಾನ,ಕಷ್ಟಗಳನ್ನು ಎದುರಿಸಿ ಮಹತ್ತರವಾದುದನ್ನು ಸಾಧಿಸಿದ ಒಬ್ಬ ಛಲಗಾರ ಎಂಬಂತೆ ಚಿತ್ರಿಸಿದ್ದಾರೆ. ವಿವೇಕಾನಂದರು ದೌರ್ಬಲ್ಯಗಳೇ ಇಲ್ಲದೆ , ಆರೋಗ್ಯಪೂರ್ಣ ವ್ಯಕ್ತಿಯಾಗಿದ್ದರು ಎಂದು ಹೇಳುತ್ತ ಬರುತ್ತಿದ್ದರು.
ಗೋಬೆಲ್ಸ್ ಸಿದ್ದಾಂತವನ್ನು ಚೆನ್ನಾಗಿ ಮನಗಂಡಿರುವ ಈ ದೇಶದ ಪುರೋಹಿತಶಾಹಿ ಸುಳ್ಳನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳುವ ಕಲೆಯನ್ನು ಕರಗತ ಮಾಡಿಕೊಂಡಿದೆ. ಹೀಗಾಗಿ ಈ ದೇಶದಲ್ಲಿ ಸುಳ್ಳೇ ಸತ್ಯದ ಸ್ಥಾನವನ್ನು ಆಕ್ರಮಿಸಿಕೊಂಡು ಕುಳಿತಿದೆ. ಈ ದೇಶದ ಜನ ಸಾಮಾನ್ಯ ಕೂಡ ಸುಳ್ಳನ್ನೇ ಸತ್ಯವೆಂದು ನಂಬಿಮೋಸ ಹೋಗುತ್ತಿದ್ದಾನೆ.
ನಾವು ಮಾನವ ವರ್ಗವನ್ನು ಎಲ್ಲಿ ವೇದಗಳು,ಬೈಬಲ್, ಕುರಾನ್ ಇಲ್ಲವೋ ಅಲ್ಲಿಗೆ ಕರೆದೊಯ್ಯಬೇಕು.
ನೀಚರು ಕುತಂತ್ರಿಗಳೂ ಆದ ಪುರೋಹಿರು ಎಲ್ಲಾ ವಿಧದ ಮೂಢನಂಬಿಕೆಗಳನ್ನು ವೇದ ಮತ್ತು ಹಿಂದೂ ಧರ್ಮದ ಸಾರ ಎಂದು ಬೋಧಿಸುತ್ತಾರೆ. ಈ ಠಕ್ಕುಗಾರರಾದ ಪುರೋಹಿತರಾಗಲೀ ಅಥವಾ ಅವರ ತಾತ ಮುತ್ತಾತಂದಿರಾಗಲೀ ಕಳೆದ ನಾನೂರು ತಲೆಮಾರುಗಳಿಂದಲೂ ವೇದದ ಒಂದು ಭಗವನ್ನೂ ನೋಡಿಲ್ಲ. ಮೂಡಾಚರಗಳನ್ನು ಅನುಸರಿಸಿ ಹೀನಸ್ಥಿತಿಗೆ ಬರುತ್ತಾರೆ. ಕಲಿಯುಗದಲ್ಲಿ ಬ್ರಾಹ್ಮಣ ವೇಶದಲ್ಲಿರುವ ಈ ರಾಕ್ಷಸರಿಂದ ಮುಗ್ಧ ಜನರನ್ನು ಆ ದೇವರೇ ಕಾಪಾಡಬೇಕು.
ನಿಮ್ಮ ಸುತ್ತಲಿರುವ ವಿರಾಟ್ ಸ್ವರೂಪದ ಜನತಾ ಜನರ್ಧನನೆಂಬ ದೇವರನ್ನು ಅರಿತುಕೊಳ್ಳದೆ, ನೀವು ಅದಾವ ನಿಷ್ಪ್ರಯೋಜಕ ದೇವರನ್ನು ಹುಡುಕುತ್ತಿದ್ದೀರಿ ?
ಜೀವರಲ್ಲಿ ದೇವರನ್ನು ಕಾಣು.
ನಾನೊಬ್ಬ ಶೂದ್ರ, ಒಬ್ಬ ಮ್ಲೇಚರ, ಆ ತಾಪತ್ರಯ ತಂಟೆಯೇ ನನಗಿಲ್ಲ. ನನಗೆ ಮ್ಲೇಚರ ಆಹಾರವಾದರೇನು ? ಪರಯನ ಆಹಾರವಾದರೇನು ? ಪುರೋಹಿತರು ಬರೆದ ಪುಸ್ತಕಗಳಲ್ಲಿ ಮಾತ್ರ ಜಾತಿ ಎಂಬ ಹುಟ್ಟು ಸಿಕ್ಕುವುದು, ಹೃದಯ ಪುಸ್ತಕದಲ್ಲಿ ಅಲ್ಲ. ತಮ್ಮ ಪುರಾತನರು ಅಜರ್ಿಸಿದ ಫಲವನ್ನು ಪುರೋಹಿತರು ಅನುಭವಿಸಲಿ. ನಾನು ಯಶಸ್ಸಿರುವ ನನ್ನ ಅಂತಸ್ಸಾಕ್ಷಿಯನ್ನು ಹಿಡಿದು ನಡೆಯುತ್ತೇನೆ.
ಎಂಬ ಮುಂತಾದ ಮಾತುಗಳು ಈ ಸಂದರ್ಭದಲ್ಲಿ ನೆನಪಿಗೆ ಬಂದವು. ವಿವೇಕಾನಂದರ ನಿಜವಾದ ಮುಖವನ್ನು ಅತ್ಯಂತ ಸಮರ್ಥವಾಗಿ, ಸರಳವಾಗಿ ಬರೆದ ತಮಗೆ, ಪ್ರಕಟಿಸಿದ ಪತ್ರಿಕೆಗೆ ಧನ್ಯವಾದಗಳು.
  • ವಿಶ್ವಾರಾಧ್ಯ ಸತ್ಯಂಪೇಟೆ ಶಹಾಪುರ
ದಿನೇಶ ಅಮೀನ ಮಟ್ಟುರವರು ಬರೆದ ವಿವೇಕಾನಂದ-ಪರಮಹಂಸರ ವಿವರಗಳು ಹೊಸದಾದ ಆಯಾಮವನ್ನೇನೋ ತೋರಿಸುತ್ತಿವೆ. ಆದರೆ ಈ ಎಲ್ಲ ವಿವರಗಳನ್ನು ದಾಖಲಿಸಿರುವ ವ್ಯಕ್ತಿ/ಸಂಸ್ಥೆ/ಪುಸ್ತಕದ ಮೂಲವನ್ನೂ ಒದಗಿಸಿದ್ದರೆ ಅವರ ಲೇಖನಕ್ಕೊಂದು ಪೂರ್ಣತೆ ಬರುತ್ತಿತ್ತು. ಕೇವಲ ಅವರ ಆರೋಗ್ಯ ಆಹಾರ ಪದ್ಧತಿ ಇತ್ಯಾದಿ ಅಂಶಗಳನ್ನಷ್ಟೇ ಉಲ್ಲೇಖಿಸುವ ಮೂಲಕ ಈ ಲೇಖನ ಏನನ್ನು ಹೇಳಲು ಬಯಸುತ್ತಿದೆ?
ಶಿಕಾಗೋ ಭಾಷಣದ ಸಂದರ್ಭದಲ್ಲಿ , ಮೊದಲಿಗೆ ಅಪರಿಚತರಾಗಿಯೇ , ಬಹಳ ಕಷ್ಟದಿಂದ ಪ್ರವೇಶ ಪಡೆದ ವಿವೇಕಾನಂದರು , ತದನಂತರದಲ್ಲಿ ವಿಖ್ಯಾತರಾಗಿದ್ದು ಇತಿಹಾಸ. ಆದರೆ ಆ ಸಂದರ್ಭದಲ್ಲಿ ಅವರ ಈ ಪ್ರಗತಿಯನ್ನು ಸಹಿಸದ ಕೆಲವು ವ್ಯಕ್ತಿಗಳು/ಸಂಸ್ಥೆಗಳು/ಧರ್ಮಗಳು ಅವರ ಮೇಲೆ ಕೆಸರೆರಚಲು ಪ್ರಯತ್ನಿಸಿದ್ದುದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಆದರೆ ಇಲ್ಲಿಯವರೆಗೂ ಲಭ್ಯವಿಲ್ಲದ ಈ ಸಂಗತಿಗಳ ಮೇಲೆ ಈಗ ಒಮ್ಮೆಲೆ ಬೆಳಕು ಚೆಲ್ಲುತ್ತಿರುವದರಿಂದ , ಅಮೀನ ಮಟ್ಟುರವರು ತಮಗೆ ದೊರೆತ ದಾಖಲೆಗಳ ವಿವರಗಳನ್ನು ಹೇಳಿದರೆ , ಉಳಿದವರಿಗೂ ಈ ಚಚರ್ೆಯನ್ನು ಮುಂದುವರೆಸಲು ಅನುಕೂಲವಾದೀತು,
  • ಪುಟ್ಟು ಕುಲಕರ್ಣಿ ಹೆಗಡೆ-581 330 ಕುಮಟಾ-ಉತ್ತರ ಕನ್ನಡ
ಜನಮಾನಸವನ್ನು ರಾಷ್ಟ್ರ ನಿರ್ಮಾಣಕ್ಕೆ ಒಗ್ಗೂಡಿಸುವ ಉತ್ತಮ ಬರವಣಿಗೆಯ ಮಾದರಿ ಒದಗಿಸಿದ ದಿನೇಶ ಅಮಿನಮಟ್ಟು ಅವರ ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು..... ಶೀರ್ಷಿಕೆಯ ಅಂಕಣ ಲೇಖನ ಹಿಂದು ಧರ್ಮದ ನಿರಂತರ ಗುತ್ತಿಗೆದಾರರಿಗೆ ಅಪಥ್ಯವೆನಿಸಿದ್ದಲ್ಲಿ ಸೋಜಿಗವೆನಿಲ್ಲ. ಯುವಕರ ಚಿಂತನಾ ಕ್ರಮಕ್ಕೆ ಹೊಸ ದಿಶೆಯನ್ನೇ ಈ ಲೇಖನ ಒದಗಿಸಿ ಉಪಕರಿಸಿದೆ. ಭಾರತೀಯತೆಯ ಸಾಕಾರಕ್ಕೆ ಯಾವ ವಿದ್ವಂಸಕ ಪ್ರವೃತ್ತಿಗಳು ಅಡಚಣೆಯಾಗಿವೆಯೋ,