ಭಾರತದ ರಾಜಕಾರಣಕ್ಕೆ ಹಿಡಿದ ರೋಗದ ಮೂಲ ಹುಡುಕಿಕೊಂಡು ಹೊರಟರೆ ಎದುರಾಗುವುದು ದೋಷಪೂರ್ಣ ಚುನಾವಣಾ ವ್ಯವಸ್ಥೆಯ `ಗಂಗೋತ್ರಿ`.
ಭ್ರಷ್ಟಾಚಾರವನ್ನು ಅದರ ಮೂಲದಲ್ಲಿಯೇ ಶುಚಿಗೊಳಿಸದಿದ್ದರೆ ನೂರು ಲೋಕಪಾಲರನ್ನು ನೇಮಿಸಿದರೂ ಭ್ರಷ್ಟಾಚಾರದ ರೋಗದಿಂದ ರಾಜಕಾರಣವನ್ನು ಮುಕ್ತಗೊಳಿಸುವುದು ಸಾಧ್ಯ ಇಲ್ಲ. ಇಲ್ಲಿಯೇ ಅಣ್ಣಾ ಹಜಾರೆ ತಂಡ ಎಡವಿದ್ದು. ದೆಹಲಿ ಗದ್ದುಗೆಯನ್ನೇ ಮಣಿಸುವ ಅತ್ಯುತ್ಸಾಹಕ್ಕೆ ಇಳಿಯದೆ ತಮಗೆ ಇರುವ ಮಿತಿಯಲ್ಲಿ ಹೆಚ್ಚು ಪ್ರಾಯೋಗಿಕವಾದ ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ಅವರು ಪ್ರಯತ್ನ ಮಾಡಬಹುದಿತ್ತು. ಅದು ಸಾಧ್ಯವಾಗದೆ ಹೋಗಿದ್ದರೆ ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಕಳಂಕರಹಿತ ಮತ್ತು ಪ್ರಾಮಾಣಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹೇರುವ ಪಕ್ಷಾತೀತ ಚಳವಳಿಯೊಂದನ್ನು ರೂಪಿಸಬಹುದಿತ್ತು. ಆದರೆ ಅಣ್ಣಾ ಹಜಾರೆ ತಂಡ ದಾರಿತಪ್ಪಿ ಕಾಂಗ್ರೆಸ್ ಪಕ್ಷ ಉಪಾಯದಿಂದ ಒಡ್ಡಿದ ಬೋನಿಗೆ ಬಿದ್ದಿದೆ. ಈಗ ಅದು ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಿರುವ ಇನ್ನೊಂದು ರಾಜಕೀಯೇತರ ಸಂಘಟನೆ ಅಷ್ಟೆ.
ಅಣ್ಣಾ ಹಜಾರೆ ತಂಡ ಚುನಾವಣಾ ವ್ಯವಸ್ಥೆಯ ಸುಧಾರಣೆಗಾಗಿ ಹೊಸದಾಗಿ ಏನೂ ಮಾಡಬೇಕಾಗಿರಲಿಲ್ಲ. ಎಲ್ಲವೂ ಸಿದ್ಧವಾಗಿ ಇದೆ. 1990ರಲ್ಲಿ ನೇಮಕಗೊಂಡಿದ್ದ ಗೋಸ್ವಾಮಿ ಸಮಿತಿಯಿಂದ ಹಿಡಿದು ಇತ್ತೀಚಿನ ಎರಡನೇ ಆಡಳಿತ ಸುಧಾರಣಾ ಸಮಿತಿಯ (2008) ವರೆಗೆ ಚುನಾವಣಾ ಸುಧಾರಣೆಯ ಪ್ರಯತ್ನ ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ಉದ್ದೇಶಕ್ಕಾಗಿಯೇ ನೇಮಕಗೊಂಡಿರುವ ವೋಹ್ರಾ ಸಮಿತಿ (1993) ಮತ್ತು ಇಂದ್ರಜಿತ್ ಗುಪ್ತಾ ಸಮಿತಿ (1998) ವರದಿಗಳು ಹಾಗೂ ಚುನಾವಣಾ ಆಯೋಗದ ಸುಧಾರಣಾ ಪ್ರಸ್ತಾವಗಳು (2004) ಸರ್ಕಾರದ ಮುಂದಿವೆ. ಇದರ ಜತೆಗೆ ಕಾನೂನು ಆಯೋಗದ ವರದಿ (1999) ಮತ್ತು ರಾಷ್ಟ್ರೀಯ ಸಂವಿಧಾನ ಕಾರ್ಯನಿರ್ವಹಣೆ ಪುನರ್ಪರಿಶೀಲನಾ ಆಯೋಗದ ವರದಿ (2001)ಗಳಲ್ಲಿಯೂ ಚುನಾವಣಾ ಸುಧಾರಣೆಯ ಪ್ರಸ್ತಾವಗಳಿವೆ.
ಮೊದಲನೆಯದಾಗಿ ರಾಜಕೀಯದ ಅಪರಾಧೀಕರಣದ ತಡೆ. ಹತ್ತು ವರ್ಷಗಳ ಹಿಂದೆ ದೇಶದ 25 ರಾಜ್ಯಗಳಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ ಒಟ್ಟು 4,120 ಶಾಸಕರ ಪೈಕಿ 1555 ಶಾಸಕರು ಕೊಲೆ,ಡಕಾಯಿತಿ, ಅತ್ಯಾಚಾರ ಮೊದಲಾದ ಹೀನ ಆರೋಪಗಳನ್ನು ಹೊತ್ತಿದ್ದರು. ಕಳೆದ ಬಾರಿ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಕಣದಲ್ಲಿ 3297 ಅಭ್ಯರ್ಥಿಗಳು ಹೀನ ಕ್ರಿಮಿನಲ್ ಆರೋಪಗಳನ್ನು ಹೊಂದಿದವರಿದ್ದರು. ಈಗಿನ ಚುನಾವಣೆಯಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಿರಬಹುದು.
ಪ್ರಸಕ್ತ ಲೋಕಸಭೆಯಲ್ಲಿ 150 ಸದಸ್ಯರು ಇಂತಹದ್ದೇ ಕ್ರಿಮಿನಲ್ ಹಿನ್ನೆಲೆ ಹೊಂದಿದವರಿದ್ದಾರೆ. ಇದನ್ನು ನಿಯಂತ್ರಿಸುವ ಪ್ರಯತ್ನದ ಫಲವೇ 1993ರಲ್ಲಿ ಆಗಿನ ಗೃಹಕಾರ್ಯದರ್ಶಿ ವೋಹ್ರಾ ನೇತೃತ್ವದ ಸಮಿತಿ ನೀಡಿದ ವರದಿ. 19 ವರ್ಷಗಳ ನಂತರವೂ ಸರ್ಕಾರ ಅದನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿಲ್ಲ. (ಇಂಟರ್ನೆಟ್ನಲ್ಲಿ ಲಭ್ಯ ಇದೆ). ಅದರಲ್ಲಿ ವೋಹ್ರಾ, ರಾಜಕೀಯದ ಅಪರಾಧೀಕರಣದ ಒಳ-ಹೊರಗನ್ನು ಆಳವಾಗಿ ವಿಶ್ಲೇಷಿಸಿದ್ದಾರೆ. ಈಗಿನ ನಿಯಮಾವಳಿ ಪ್ರಕಾರ ಎಂತಹ ಹೀನ ಅಪರಾಧಗಳ ಆರೋಪಗಳಿದ್ದರೂ ಅದರ ವಿರುದ್ಧದ ಮೇಲ್ಮನವಿ ಇತ್ಯರ್ಥವಾಗುವ ವರೆಗೆ ಆತ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ. ಕ್ರಿಮಿನಲ್ ಹಿನ್ನೆಲೆ ಹೊಂದಿದ್ದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದೆಂದು 1998ರಲ್ಲಿಯೇ ಚುನಾವಣಾ ಆಯೋಗ ಶಿಫಾರಸು ಮಾಡಿತ್ತು. 2004ರಲ್ಲಿ ಅದನ್ನು ಮತ್ತೆ ದೃಢೀಕರಿಸಿತ್ತು.
`ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂದು ನ್ಯಾಯಾಲಯಕ್ಕೆ ಮೇಲ್ನೋಟದ ಪರಿಶೀಲನೆಯಲ್ಲಿ ದೃಢಪಟ್ಟು ಅದರ ಆಧಾರದಲ್ಲಿ ಆರೋಪಪಟ್ಟಿ ಸಲ್ಲಿಕೆಯಾದರೆ ಅಂತಹ ಆರೋಪಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು` ಎನ್ನುವುದು ಚುನಾವಣಾಆಯೋಗದ ಮೂಲ ಶಿಫಾರಸು. ನಂತರ ಇದನ್ನು ಇನ್ನಷ್ಟು ಬಿಗಿಗೊಳಿಸಿದ ಆಯೋಗ `ಎರಡು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಶಿಕ್ಷೆಗೆ ಅರ್ಹವಾದ ಅಪರಾಧದಲ್ಲಿ ಭಾಗಿಯಾದವರಿಗೆ ಅದರ ವಿರುದ್ಧ ಮೇಲ್ಮನವಿಗಳು ಇತ್ಯರ್ಥಕ್ಕೆ ಬಾಕಿ ಇದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಡಬಾರದು` ಎಂದು ಹೇಳಿತ್ತು. ಈ ಶಿಫಾರಸುಗಳೇನಾದರೂ ಅನುಷ್ಠಾನಕ್ಕೆ ಬಂದಿದ್ದರೆ ಉತ್ತರಪ್ರದೇಶದ ಚುನಾವಣಾ ಕಣದಲ್ಲಿ ಬಾಹುಬಲದ ಅಪರಾಧಿಗಳು ಇರುತ್ತಿರಲಿಲ್ಲ. ಲೋಕಸಭೆಯಲ್ಲಿ ತಕ್ಷಣಕ್ಕೆ 150 ಸ್ಥಾನಗಳು ಖಾಲಿಯಾಗುತ್ತಿದ್ದವು.
ರಾಜಕೀಯ ಪಕ್ಷಗಳು ಅಪರಾಧಿಗಳ ಪರವಾಗಿರುವುದು ಅವರ ಗೆಲ್ಲುವ ಸಾಮರ್ಥ್ಯಕ್ಕಾಗಿಯೇ ಹೊರತು ಅವರ ಮೇಲಿನ ಪ್ರೀತಿಯಿಂದ ಅಲ್ಲ. ಒಬ್ಬ ಅಪರಾಧಿ ತಂದುಕೊಡುವ ಒಂದು ಸದಸ್ಯ ಬಲಕ್ಕಾಗಿ ಸಹಿಸಬಾರದ್ದನ್ನೆಲ್ಲ ಸಹಿಸಿಕೊಳ್ಳಬೇಕಾದ ಸ್ಥಿತಿಯಲ್ಲಿ ರಾಜಕೀಯ ಪಕ್ಷಗಳಿವೆ. ಈಗ ಎಲ್ಲರ ಕಣ್ಮಣಿಯಾಗಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಕ್ಷದಲ್ಲಿಯೂ ಕ್ರಿಮಿನಲ್ ಹಿನ್ನೆಲೆಯ ಶಾಸಕರಿದ್ದಾರೆ. ಅವರಿಗೆ ಟಿಕೆಟ್ ನೀಡದೆ ಇದ್ದಿದ್ದರೆ ಆ ಕ್ಷೇತ್ರಗಳಲ್ಲಿ ಲಾಲುಪ್ರಸಾದ್ ಪಕ್ಷದ್ದೋ, ಇನ್ನು ಯಾವುದೋ ಪಕ್ಷದ ಅಭ್ಯರ್ಥಿಗಳೋ ಗೆದ್ದುಬಿಡುತ್ತಿದ್ದರು. ಅಪರಾಧಿಗಳು ಚುನಾವಣಾ ಕಣ ಪ್ರವೇಶದ ವಿರುದ್ಧದ ನಿಷೇಧ ಜಾರಿಗೆ ಬಂದರೆ ಅದು ಎಲ್ಲರಿಗೂ ಅನ್ವಯವಾಗುವುದರಿಂದ ಕ್ರಿಮಿನಲ್ಗಳಿಗೆ ಟಿಕೆಟ್ ನೀಡಬೇಕಾದ ಒತ್ತಡದಿಂದ ಪಕ್ಷಗಳು ಪಾರಾಗಬಹುದು. ಈ ದೃಷ್ಟಿಯಿಂದ ಪ್ರಮುಖವಾಗಿ ರಾಷ್ಟ್ರೀಯ ಪಕ್ಷಗಳು ಒಳಗಿಂದೊಳಗೆ ಇಂತಹ ಸುಧಾರಣೆಯ ಪರವಾಗಿಯೇ ಇವೆ.
ಎರಡನೆಯದಾಗಿ ಸ್ಪಷ್ಟ ಬಹುಮತ ಮತ್ತು ನಿರಾಕರಣಾರ್ಥಕ ಮತಗಳ ಚಲಾವಣೆಗೆ ಅವಕಾಶ ನೀಡುವ ಸುಧಾರಣೆ. ಚುನಾವಣೆಯಲ್ಲಿ ಆಯ್ಕೆಯಾಗಲು ಅಭ್ಯರ್ಥಿಗಳು ಶೇಕಡಾ 50ಕ್ಕಿಂತ ಹೆಚ್ಚು ಮತ ಪಡೆಯುವುದನ್ನು ಕಡ್ಡಾಯಗೊಳಿಸಬೇಕೆಂಬ ಸಲಹೆಯನ್ನು ಮೊದಲು ನೀಡಿದ್ದು ಕಾನೂನು ಆಯೋಗ. `ಇದರಿಂದ ಚುನಾವಣೆಯಲ್ಲಿ ಜಾತಿಯ ಪಾತ್ರ ಕಡಿಮೆಯಾಗಬಹುದು. ಯಾವುದೇ ಕ್ಷೇತ್ರದಲ್ಲಿ ಒಂದು ಜಾತಿ ಶೇಕಡಾ 50ರಷ್ಟು ಇರುವ ಸಾಧ್ಯತೆ ಇಲ್ಲವಾದ ಕಾರಣ ಯಾವುದೇ ಪ್ರಬಲ ಜಾತಿಯ ಅಭ್ಯರ್ಥಿಗಳು ಕೂಡಾ ಎಲ್ಲ ಜಾತಿ ಮತದಾರರ ಒಲವು ಗಳಿಸಲು ಅನಿವಾರ್ಯವಾಗಿ ಪ್ರಯತ್ನಿಸಬೇಕಾಗುತ್ತದೆ` ಎಂದು ಆಯೋಗ ಹೇಳಿತ್ತು. ಈಗಿನ ವ್ಯವಸ್ಥೆಯಲ್ಲಿ ಒಬ್ಬ ಅಭ್ಯರ್ಥಿ ಶೇಕಡಾ 25ರಿಂದ 30ರಷ್ಟು ಮತ ಗಳಿಸಿದರೂ ಆಯ್ಕೆಯಾಗುವ ಸಾಧ್ಯತೆ ಇದೆ. ಉದಾಹರಣೆಗೆ ಕರ್ನಾಟಕದಂತಹ ರಾಜ್ಯದಲ್ಲಿ ಯಾವುದಾದರೂ ಎರಡು ಪ್ರಮುಖ ಜಾತಿಗಳು ಇಲ್ಲವೇ ಯಾವುದಾದರೂ ಒಂದು ಪ್ರಮುಖ ಜಾತಿ ಜತೆ ಪರಿಶಿಷ್ಟಜಾತಿ ಇಲ್ಲವೇ ಪರಿಶಿಷ್ಟ ಪಂಗಡಗಳು ಇಲ್ಲವೇ ಅಲ್ಪಸಂಖ್ಯಾತರು ಸೇರಿಕೊಂಡರೆ ಒಬ್ಬ ಅಭ್ಯರ್ಥಿಯನ್ನು ಸುಲಭದಲ್ಲಿ ಗೆಲ್ಲಿಸಲು ಸಾಧ್ಯ ಇದೆ.
ಈ ಸುಧಾರಣೆಯ ಮುಖ್ಯ ಸಮಸ್ಯೆ ಮರುಮತದಾನ. ಯಾವ ಅಭ್ಯರ್ಥಿ ಕೂಡಾ ಶೇಕಡಾ 50ಕ್ಕಿಂತ ಹೆಚ್ಚು ಮತಗಳಿಸದಿದ್ದರೆ ಅಂತಹ ಕ್ಷೇತ್ರದಲ್ಲಿ ಮರುಚುನಾವಣೆ ನಡೆಸಬೇಕಾಗುತ್ತದೆ. ಆಗಲೂ ನಿರೀಕ್ಷಿತ ಮತಗಳು ಲಭ್ಯವಾಗದಿದ್ದರೆ ಮತ್ತೆ ಚುನಾವಣೆ ನಡೆಸುವುದು ಅನಿವಾರ್ಯವಾಗುತ್ತದೆ. ಇದರಿಂದ ಸರ್ಕಾರದ ಮೇಲೆ ಚುನಾವಣಾ ನಿರ್ವಹಣೆಯ ವೆಚ್ಚದ ಹೊರೆ ಅಧಿಕವಾಗುತ್ತದೆ ಎನ್ನುವುದು ಕೆಲವರ ಆಕ್ಷೇಪ. ಪ್ರಾರಂಭದ ದಿನಗಳಲ್ಲಿ ಈ ರೀತಿಯ ಬಿಕ್ಕಟ್ಟು ಸೃಷ್ಟಿಯಾದರೂ ಕ್ರಮೇಣ ಹೊಸ ವ್ಯವಸ್ಥೆಯನ್ನು ಮತದಾರರೂ ಅರ್ಥಮಾಡಿಕೊಂಡು ಮತಚಲಾಯಿಸುತ್ತಾರೆ ಎನ್ನುವ ವಾದವೂ ಇದೆ.
ಇದರ ಜತೆಗೆ ನಿರಾಕರಣಾರ್ಥಕ ಮತ ಚಲಾವಣೆಗೆ ಅವಕಾಶ ನೀಡಬೇಕೆಂದು ಕೂಡಾ ಕಾನೂನು ಆಯೋಗ ಶಿಫಾರಸು ಮಾಡಿತ್ತು. ಒಂದು ಕ್ಷೇತ್ರದಲ್ಲಿನ ಯಾವ ಅಭ್ಯರ್ಥಿ ಕೂಡಾ ಅರ್ಹನಲ್ಲ ಎಂದು ಮತದಾರ ತೀರ್ಮಾನಿಸಿದರೆ `ಯಾರಿಗೂ ನನ್ನ ಮತ ಇಲ್ಲ` ಎಂದು ಹೇಳುವ ಹಕ್ಕು ಆತನಿಗೆ ಇರಬೇಕು ಎನ್ನುವುದು ಈ ಶಿಫಾರಸಿನ ಉದ್ದೇಶ. ಒಂದೊಮ್ಮೆ ಈ ರೀತಿಯ ನಿರಾಕರಣಾರ್ಥಕ ಮತಗಳ ಪ್ರಮಾಣ ಆಯ್ಕೆಯಾದ ಅಭ್ಯರ್ಥಿ ಪಡೆದ ಮತಗಳಿಗಿಂತ ಹೆಚ್ಚಿದ್ದರೆ ಆಗ ಅಲ್ಲಿ ಮರುಮತದಾನ ನಡೆಸಬೇಕಾಗುತ್ತದೆ. ಈಗಲೂ ಚುನಾವಣಾ ನಿರ್ವಹಣೆಯ ನಿಯಮ 19ರ ಪ್ರಕಾರ ಮತದಾರರು ಮತದಾನಕ್ಕೆ ತಮ್ಮ ಹೆಸರು ನೋಂದಾಯಿಸಿದ ನಂತರ ಮತಚಲಾಯಿಸಲು ನಿರಾಕರಿಸಬಹುದು. ಆದರೆ ಮತಪೆಟ್ಟಿಗೆಯ ವ್ಯವಸ್ಥೆಯಲ್ಲಿ ಈ ಗೌಪ್ಯವನ್ನು ಕಾಪಾಡಲು ಸಾಧ್ಯವಾಗದು. ಮತದಾನ ಯಂತ್ರ ಎಲ್ಲ ಕಡೆಗಳಲ್ಲಿ ಜಾರಿಗೆ ಬಂದರೆ ಮಾತ್ರ ಇದು ಸಾಧ್ಯ.
ಮೂರನೆಯದಾಗಿ ಅಭ್ಯರ್ಥಿಗಳ ಆಸ್ತಿ ಮತ್ತು ಸಾಲ, ತೆರಿಗೆ, ಕಂದಾಯ ಬಾಕಿಯ ಕಡ್ಡಾಯ ಘೋಷಣೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ರಾಜ್ಯಸಭೆಯ ಅರ್ಧದಷ್ಟು ಮತ್ತು ಲೋಕಸಭೆಯ ಮೂರನೆ ಒಂದರಷ್ಟು ಸದಸ್ಯರು ಘೋಷಿತ ಕೋಟ್ಯಧಿಪತಿಗಳು.
ರಾಜ್ಯಸಭೆ ಮತ್ತು ಲೋಕಸಭೆಗಳ ತಲಾ ಹತ್ತು ಅತ್ಯಂತ ಶ್ರಿಮಂತ ಸದಸ್ಯರ ಘೋಷಿತ ಆಸ್ತಿಯ ಒಟ್ಟು ಮೌಲ್ಯ 1500 ಕೋಟಿ ರೂಪಾಯಿ. ಉಳಿದವರು ಬಡವರೇನಲ್ಲ. ಅವರಲ್ಲಿ ಹೆಚ್ಚಿನವರಿಗೆ ಆಸ್ತಿ ಘೋಷಿಸಿಕೊಳ್ಳಲು ಮೂಲಗಳಿಲ್ಲ, ಅದಕ್ಕೆ ಆ ಹಣಕ್ಕೆ ಕಪ್ಪು ಬಣ್ಣ. ಈ ಆಸ್ತಿ ವಿವರದ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ಆ ಮಾಹಿತಿಯ ಪರಿಶೀಲನೆ ನಡೆಸುವ ವ್ಯವಸ್ಥೆ ಇಲ್ಲದಿರುವುದು ಈ ಲೋಪಕ್ಕೆ ಕಾರಣ. ಅಭ್ಯರ್ಥಿಗಳು ನೀಡುವ ಈ ವಿವರವನ್ನು ವರಮಾನ ತೆರಿಗೆ ಇಲಾಖೆ ಮತ್ತಿತರ ಕೇಂದ್ರ ಸಂಸ್ಥೆಗಳಿಂದ ಪರಿಶೀಲನೆ ಮಾಡಿಸಬೇಕು.
ಅಷ್ಟು ಮಾತ್ರವಲ್ಲ, ತಪ್ಪು ಮಾಹಿತಿ ನೀಡುವವರಿಗೆ ನೀಡಲಾಗುವ ಆರು ತಿಂಗಳ ಜೈಲುವಾಸದ ಶಿಕ್ಷೆಯನ್ನು ಎರಡು ವರ್ಷಗಳಿಗೆ ಹೆಚ್ಚಿಸಬೇಕು ಮತ್ತು ಪರ್ಯಾಯವಾಗಿ ದಂಡ ವಿಧಿಸುವುದನ್ನು ರದ್ದುಮಾಡಬೇಕು ಎಂದು ಚುನಾವಣಾ ಆಯೋಗ ಶಿಫಾರಸು ಮಾಡಿದೆ.
ನಾಲ್ಕನೆಯದಾಗಿ ಚುನಾವಣಾ ವೆಚ್ಚದ ನಿಯಂತ್ರಣ. ಈಗಿನ ವ್ಯವಸ್ಥೆಯಲ್ಲಿ ಜಾತಿ ಬೇಡ ಮತ್ತು ದುಡ್ಡು ಇಲ್ಲ ಎಂದು ಹೇಳುವವರಿಗೆ ರಾಜಕೀಯ ಪ್ರವೇಶ ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಇದೆ. ಇದಕ್ಕಾಗಿ ಸರ್ಕಾರವೇ ಅಭ್ಯರ್ಥಿಗಳ ವೆಚ್ಚವನ್ನು ವಹಿಸಿಕೊಂಡರೆ ಹೇಗೆ ಎಂಬ ಚರ್ಚೆ ಬಹಳ ವರ್ಷಗಳಿಂದ ನಡೆದಿದೆ. ಈ ಬಗ್ಗೆ ಅಧ್ಯಯನಕ್ಕಾಗಿಯೇ ನೇಮಕಗೊಂಡ ಇಂದ್ರಜಿತ್ ಗುಪ್ತಾ ಸಮಿತಿ 1998ರಲ್ಲಿ ವರದಿ ನೀಡಿತ್ತು. ನಗದುರೂಪದಲ್ಲಿ ಅಲ್ಲ, ಸೌಲಭ್ಯಗಳ ಮೂಲಕ ಅಭ್ಯರ್ಥಿಗಳಿಗೆ ನೆರವಾಗಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಪಕ್ಷಗಳ ಕಚೇರಿಗಾಗಿ ಕಟ್ಟಡ ಮತ್ತು ದೂರವಾಣಿ, ದೂರದರ್ಶನ ಮತ್ತು ರೇಡಿಯೋಗಳಲ್ಲಿ ಪ್ರಚಾರ ಅವಕಾಶ ಮತ್ತು ನಿರ್ದಿಷ್ಟ ಪ್ರಮಾಣದ ಪೆಟ್ರೋಲ್/ಡೀಸೆಲ್, ಮುದ್ರಣ ಕಾಗದ, ಧ್ವನಿವರ್ಧಕ ಇತ್ಯಾದಿ ಸೌಲಭ್ಯಗಳನ್ನು ಒದಗಿಸಬೇಕು. ಇದಕ್ಕಾಗಿ ಪ್ರತಿ ಮತದಾರನಿಗೆ ತಲಾ ಹತ್ತು ರೂಪಾಯಿಯಂತೆ (1998ರ ಲೆಕ್ಕ) 1200 ಕೋಟಿ ರೂಪಾಯಿಗಳ ಚುನಾವಣಾ ನಿಧಿಯನ್ನು ರಚಿಸಬೇಕು. ಇದಕ್ಕೆ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಸಮಾನ ಮೊತ್ತದ ಹಣ ನೀಡಬೇಕು ಎಂದು ಗುಪ್ತಾ ಸಮಿತಿ ಹೇಳಿತ್ತು. ಅದರೆ ಕಳೆದ ಹದಿನಾಲ್ಕು ವರ್ಷಗಳಲ್ಲಿ ಆ ವರದಿ ಮುಟ್ಟಲು ಯಾರೂ ಹೋಗಿಲ್ಲ.
ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿ ಬಹಳಷ್ಟು ಕಡಿಮೆ ಇದೆ ಎನ್ನುವ ಅಭಿಪ್ರಾಯವನ್ನು ಎಲ್ಲ ಪಕ್ಷಗಳು ಒಪ್ಪಿಕೊಳ್ಳುತ್ತವೆ. ಆದುದರಿಂದ ಪಕ್ಷಾತೀತವಾಗಿ ಎಲ್ಲ ಅಭ್ಯರ್ಥಿಗಳು ಸುಳ್ಳು ಲೆಕ್ಕ ನೀಡುತ್ತಾರೆ. 2009ರ ಲೋಕಸಭಾ ಚುನಾವಣಾ ಕಣದಲ್ಲಿದ್ದ 6753 ಅಭ್ಯರ್ಥಿಗಳಲ್ಲಿ 6719 ಅಭ್ಯರ್ಥಿಗಳು (ಶೇಕಡಾ 99.5) `ನಾವು ಚುನಾವಣಾ ವೆಚ್ಚದ ಮಿತಿಯ ಶೇಕಡಾ 45ರಿಂದ 55ರಷ್ಟು ಮಾತ್ರ ಖರ್ಚು ಮಾಡಿದ್ದೇವೆ` ಎಂದು ಆಯೋಗಕ್ಕೆ ನೀಡಿರುವ ಲೆಕ್ಕಪತ್ರದಲ್ಲಿ ತಿಳಿಸಿದ್ದಾರೆ. ಕೇವಲ ನಾಲ್ಕು ಅಭ್ಯರ್ಥಿಗಳು ಮಾತ್ರ `ವೆಚ್ಚದ ಮಿತಿಯನ್ನು ಮೀರಿದ್ದೇವೆ` ಎಂದು ಒಪ್ಪಿಕೊಂಡಿದ್ದಾರೆ. ಕೇವಲ 30 ಅಭ್ಯರ್ಥಿಗಳು ಮಾತ್ರ `ವೆಚ್ಚದ ಮಿತಿಯ ಶೇಕಡಾ 90ರಿಂದ 95ರಷ್ಟು ಖರ್ಚು ಮಾಡಿದ್ದೇವೆ` ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಾಸ್ತವಿಕ ನೆಲೆಯಲ್ಲಿ ಚುನಾವಣಾ ವೆಚ್ಚವನ್ನು ನಿರ್ಧರಿಸಬೇಕೆಂದು ಚುನಾವಣಾ ಆಯೋಗ ಶಿಫಾರಸು ಮಾಡಿದೆ. ಇನ್ನು ಹಲವಾರು ಸುಧಾರಣಾ ಕ್ರಮಗಳಿದ್ದರೂ ಕನಿಷ್ಠ ಈ ನಾಲ್ಕು ಮುಖ್ಯ ಚುನಾವಣಾ ಸುಧಾರಣೆಗಳ ಮೂಲಕ ಭ್ರಷ್ಟಾಚಾರವನ್ನು ಗಂಗೋತ್ರಿಯಲ್ಲಿಯೇ ಶುಚಿಗೊಳಿಸಿ ರಾಜಕಾರಣದ ಆರೋಗ್ಯ ಕಾಪಾಡಲು ಸಾಧ್ಯ. ಅಣ್ಣಾ ಹಜಾರೆ ತಂಡ ಈ ಅವಕಾಶವನ್ನು ಕಳೆದುಕೊಂಡಿದೆ.