Tuesday, December 27, 2011

ರಾಜಕೀಯ ಸಂಘರ್ಷಗಳಲ್ಲೇ ಕಳೆದು ಹೋದ ಬಂಗಾರಪ್ಪ

 
ಎಸ್.ಬಂಗಾರಪ್ಪನವರು ಇಷ್ಟೊಂದು ಸಿಟ್ಟು ಮಾಡಿಕೊಳ್ಳದೆ ಇರುತ್ತಿದ್ದರೆ, ಅವಕಾಶಕ್ಕಾಗಿ ಕಾಯುವಷ್ಟು ತಾಳ್ಮೆಯನ್ನು ಹೊಂದಿದ್ದರೆ, ಅನ್ಯಾಯವನ್ನು ಸಹಿಸಿಕೊಳ್ಳುವಷ್ಟು ಸಂಯಮವನ್ನು ಪಡೆದಿದ್ದರೆ, ಬಂಡುಕೋರತನವನ್ನು ನಿಯಂತ್ರಿಸಿಕೊಳ್ಳುವಷ್ಟು ಹೊಂದಾಣಿಕೆ ಕಲಿತಿದ್ದರೆ, ಜೈಕಾರ ಹಾಕಿದವರನ್ನೆಲ್ಲ ನಂಬುವಷ್ಟು ಒಳ್ಳೆಯವನಾಗದೆ ಇರುತ್ತಿದ್ದರೆ, ಸಾರ್ವಜನಿಕ ಹಣದ ಬಗ್ಗೆ ಸ್ವಲ್ಪ ಸೂಕ್ಷ್ಮಮತಿಯಾಗಿದ್ದರೆ, ಬಡವರ ಬಗೆಗಿನ ಕಾಳಜಿಯ ಜತೆಯಲ್ಲಿ ಅಭಿವೃದ್ಧಿಯ ಮುನ್ನೋಟವನ್ನೂ ಹೊಂದಿದ್ದರೆ... ರಾಜಕೀಯವಾಗಿ ಅವರು ಇನ್ನಷ್ಟು ಮೇಲಕ್ಕೇರುತ್ತಿದ್ದರು, ಅವರಿಂದ ರಾಜ್ಯಕ್ಕೆ ಇನ್ನಷ್ಟು ಒಳ್ಳೆಯದಾಗುತ್ತಿತ್ತೋ ಏನೋ? ಆದರೆ ಸಿಟ್ಟು, ಅವಸರ, ಅಸಹನೆ, ಬಂಡಾಯ, ಹುಂಬತನಗಳೆಲ್ಲವೂ ಅವರ ಹುಟ್ಟುಗುಣಗಳು, ಅವುಗಳು ಇಲ್ಲದೆ ಇದ್ದಿದ್ದರೆ ಅವರು ಬಂಗಾರಪ್ಪ ಹೇಗಾಗುತ್ತಿದ್ದರು? ಈ ಗುಣಗಳಿಗಾಗಿಯೇ ಅವರನ್ನು ದ್ವೇಷಿಸುವವರು ಇದ್ದರು, ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೀತಿಸುವವರೂ ಇದ್ದರು.
1972ರಲ್ಲಿ ಮೊದಲ ಬಾರಿ ಸಿಟ್ಟಾದಾಗ ಅವರಿಗೆ 40ರ ಹರಯ. ಸಂಯುಕ್ತ ಸಮಾಜವಾದಿ ಪಕ್ಷದಲ್ಲಿ ತಮಗಿಂತ ಕಿರಿಯರಾದ ಕಾಗೋಡು ತಿಮ್ಮಪ್ಪನವರಿಗೆ ಉನ್ನತ ಸ್ಥಾನ ನೀಡಿದಾಗ ಸಿಟ್ಟಾದ ಬಂಗಾರಪ್ಪ ಸಿಡಿದು ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿಕೊಂಡರು. ಎರಡನೆ ಬಾರಿ ಅವರು ಸಿಟ್ಟಾಗಿದ್ದು 1980ರಲ್ಲಿ, ದೇವರಾಜ ಅರಸು ವಿರುದ್ಧದ ಸಮರಕ್ಕೆ ಬಂಗಾರಪ್ಪನವರನ್ನು ಬಳಸಿಕೊಂಡ ಇಂದಿರಾ ಗಾಂಧಿ ಉದ್ದೇಶ ಸಾಧಿಸಿದ ನಂತರ ಅವರನ್ನು ಕೈಬಿಟ್ಟು ಆರ್. ಗುಂಡೂರಾವ್ ಅವರನ್ನು ಮುಖ್ಯಮಂತ್ರಿ ಮಾಡಿದಾಗ. 1983ರಲ್ಲಿ ಕ್ರಾಂತಿರಂಗದ ನಾಯಕರಾಗಿ ರಾಜ್ಯದ ತುಂಬಾ ಚುನಾವಣಾ ಪ್ರಚಾರ ಮಾಡಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಬೆಂಗಳೂರಿಗೆ ಹಿಂದಿರುಗಿದಾಗ ಮುಖ್ಯಮಂತ್ರಿ ಕುರ್ಚಿಯಲ್ಲಿ ರಾಮಕೃಷ್ಣ ಹೆಗಡೆ ಕುಳಿತಿದ್ದನ್ನು ಕಂಡು ಅವರು ಮೂರನೆ ಬಾರಿ ಸಿಟ್ಟಾಗಿದ್ದರು.
1989ರಲ್ಲಿ ನಾಲ್ಕನೆ ಬಾರಿ ಬಂಗಾರಪ್ಪನವರಿಗೆ ಸಿಟ್ಟು ಬಂದಿತ್ತು. ವೀರೇಂದ್ರ ಪಾಟೀಲ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು, ಕನಿಷ್ಠ ಸಚಿವ ಸಂಪುಟದ ಪಟ್ಟಿಯಲ್ಲಿಯೂ ಅವರ ಹೆಸರಿರಲಿಲ್ಲ. 1993ರಲ್ಲಿ ಐದನೆ ಬಾರಿ ಸಿಟ್ಟಾಗಿದ್ದಾಗ ಅವರು ಮುಖ್ಯಮಂತ್ರಿಯಾಗಿದ್ದರು. ಭಿನ್ನಮತೀಯರ ದೂರಿನ ವಿಚಾರಣೆಗಾಗಿ ಹೈಕಮಾಂಡ್ ಪ್ರತಿನಿಧಿಯಾಗಿ ಆಗಮಿಸಿದ್ದ ಎಸ್. ಬಿ.ಚವಾಣ್ ದನಿ ಎತ್ತಿ ಪ್ರಶ್ನಿಸತೊಡಗಿದಾಗ ಸಿಟ್ಟಾದ ಬಂಗಾರಪ್ಪ `ಶಾಲಾಬಾಲಕನನ್ನು ಪ್ರಶ್ನಿಸುವಂತೆ ನನ್ನನ್ನು ಪ್ರಶ್ನಿಸಬೇಡಿ~ ಎಂದು ತಿರುಗಿಬಿದ್ದಿದ್ದರು.
ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಹತಾಶರಾಗಿಬಿಟ್ಟ ಬಂಗಾರಪ್ಪ ಸಿಟ್ಟಾಗುತ್ತಲೇ ಹೋದರು. ಎರಡು ಬಾರಿ ಸ್ವತಂತ್ರವಾಗಿ ಪಕ್ಷ ಕಟ್ಟಿದರು, ಬಿಜೆಪಿ, ಸಮಾಜವಾದಿ ಪಕ್ಷ, ಜಾತ್ಯತೀತ ಜನತಾದಳ ಸೇರಿದರು. ಮರಳಿ ಕಾಂಗ್ರೆಸ್‌ಗೆ ಹಿಂದಿರುಗಿ ವಾಪಸು ಬಂದರು. ಆದರೆ ಅವರು ಬಯಸಿದ ರಾಜಕೀಯ ಅಧಿಕಾರ ಮರಳಿ ಅವರ ಕೈಗೆ ಬರಲೇ ಇಲ್ಲ. ಅವರು ಬೆಳೆಸಿದ ಹುಡುಗರೆಲ್ಲ ಶಾಸಕರಾಗಿ, ಸಚಿವರಾಗಿ ಕಣ್ಣೆದುರು ಮೆರೆಯುತ್ತಿದ್ದಾಗ ಚುನಾವಣೆಯಲ್ಲಿಯೂ ಸೋತುಹೋಗಿ, `ಸೋಲಿಲ್ಲದ ಸರದಾರ~ನೆಂಬ ಖ್ಯಾತಿಯನ್ನೂ ಕಳೆದುಕೊಂಡು ರಾಜಕೀಯವಾಗಿ ಅವರು ಒಂಟಿಯಾಗಬೇಕಾಯಿತು. ಇದಕ್ಕೆಲ್ಲ ಒಂದು ಕಾರಣ ಅವರ ಸಿಟ್ಟು ಎನ್ನುವವರಿದ್ದಾರೆ.
ಬಂಗಾರಪ್ಪನವರು ಯಾಕೆ ಸಿಟ್ಟಾಗುತ್ತಿದ್ದರು? ತನಗೆ ಅನ್ಯಾಯವಾದಾಗಲೆಲ್ಲ ಅವರು ಸಿಟ್ಟಾಗುತ್ತಿದ್ದರು ಎನ್ನುತ್ತಾರೆ ಅವರ ಅಭಿಮಾನಿಗಳು. ಮಹತ್ವಾಕಾಂಕ್ಷಿಯಾಗಿದ್ದ ಬಂಗಾರಪ್ಪ ಬಯಸಿದ್ದು ಸಿಗದೆ ಇದ್ದಾಗೆಲ್ಲ ಸಿಟ್ಟಾಗುತ್ತಿದ್ದರು ಎನ್ನುತ್ತಾರೆ ಅವರ ವಿರೋಧಿಗಳು. ಈ ಎರಡು ಅಭಿಪ್ರಾಯಗಳ ನಡುವೆ ಎಲ್ಲೋ ಒಂದು ಕಡೆ ಅವರ ಸಿಟ್ಟಿನ ಕಾರಣ ಇದೆ. ಅದನ್ನು ಅರಿತುಕೊಳ್ಳುವ ಪ್ರಯತ್ನವನ್ನು ಬಂಗಾರಪ್ಪನವರೂ ಮಾಡಲಿಲ್ಲ.
ಬಂಗಾರಪ್ಪನವರು ತನ್ನ ರಾಜಕೀಯ ಜೀವನ ಪ್ರಾರಂಭಿಸಿದ್ದು ಪ್ರಜಾಸೋಷಲಿಸ್ಟ್ ಪಕ್ಷದ ಮೂಲಕ; ಕೊನೆಗೊಳಿಸಿದ್ದು ಜಾತ್ಯತೀತ ಜನತಾದಳದ ಮೂಲಕ. ಬಹುಕಾಲ ರಾಜಕೀಯ ಮಾಡಿದ್ದು ಕಾಂಗ್ರೆಸ್ ಪಕ್ಷದಲ್ಲಿ. ಆ ಪಕ್ಷದಲ್ಲಿ ಒಂದಷ್ಟು ದಿನ ಅಧಿಕಾರ ಅನುಭವಿಸಿದರೂ ಹೈಕಮಾಂಡ್ ಸಂಸ್ಕೃತಿಯ ಪಕ್ಷಕ್ಕೆ ಹೊಂದಿಕೊಳ್ಳಲು ಅತ್ಯುಗ್ರ ಸ್ವಾಭಿಮಾನಿಯಾಗಿದ್ದ ಬಂಗಾರಪ್ಪನವರಿಗೆ ಸಾಧ್ಯವಾಗಲೇ ಇಲ್ಲ. ಬಂಗಾರಪ್ಪನವರ ಗುಣ-ಸ್ವಭಾವ ಒಬ್ಬ ಪ್ರಾದೇಶಿಕ ಪಕ್ಷದ ನಾಯಕನಾಗಲು ಹೊಂದಿಕೆಯಾಗುವಂತಿತ್ತೇ ಹೊರತು ರಾಷ್ಟ್ರೀಯ ಪಕ್ಷ ಬಯಸುವ ಶಿಸ್ತಿನ ಸಿಪಾಯಿಯಾಗಲು ಹೊಂದಿಕೆಯಾಗುವಂತಿರಲಿಲ್ಲ. ಕಾಂಗ್ರೆಸ್ ಸಂಸ್ಕೃತಿ ಮತ್ತು ತನ್ನ ಸ್ವಭಾವವನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದರೆ ಅವರು ಆ ಪಕ್ಷದ ಸಹವಾಸಕ್ಕೆ ಹೋಗುತ್ತಿರಲಿಲ್ಲವೇನೋ? ಅದು ಅರಿವಾಗುವ ಹೊತ್ತಿಗೆ ಕಾಲ ಮೀರಿ ಹೋಗಿತ್ತು. ಈ ಗೊಂದಲದಲ್ಲಿಯೇ ನಾಲ್ಕು ದಶಕಗಳ ತನ್ನ ರಾಜಕೀಯ ಜೀವನದಲ್ಲಿ ಅವರು ಐದು ಬಾರಿ ಕಾಂಗ್ರೆಸ್ ಬಿಟ್ಟು ಹೋಗಿದ್ದರು, ಐದು ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಬಂದಿದ್ದರು.
ಬಂಗಾರಪ್ಪನವರ ರಾಜಕೀಯ ಜೀವನದ ಮೊದಲ ಪ್ರಮಾದ ತನ್ನನ್ನು ಕರೆದುಕೊಂಡು ಬಂದು ಬೆಳೆಸಿದ್ದ ದೇವರಾಜ ಅರಸು ಅವರನ್ನು ತೊರೆದು ತನ್ನ ಸ್ವಭಾವಕ್ಕೆ ಒಪ್ಪದ ಕಾಂಗ್ರೆಸ್ ಜತೆ ಹೋಗಿದ್ದು. ಅರಸು ಜತೆಯಲ್ಲಿಯೇ ಉಳಿದುಕೊಂಡಿದ್ದರೆ ನಿಜವಾದ ಅರ್ಥದಲ್ಲಿ ಅವರ ರಾಜಕೀಯ ಉತ್ತರಾಧಿಕಾರಿಯಾಗುತ್ತಿದ್ದರು. ಅದರಿಂದ ನೆರೆರಾಜ್ಯಗಳಂತೆ ಕರ್ನಾಟಕಕ್ಕೂ ಒಂದು ಪ್ರಬಲ ಪ್ರಾದೇಶಿಕ ಪಕ್ಷವೂ ಸಿಕ್ಕಿಬಿಡುತ್ತಿತ್ತೋ ಏನೋ? ಅಂತಹ ಸಂದರ್ಭದಲ್ಲಿ ಕರ್ನಾಟಕದ ಇಂದಿನ ರಾಜಕೀಯ ಚಿತ್ರವೇ ಬೇರೆಯಾಗಿರುತ್ತಿತ್ತು. ರಾಜಕೀಯ ಅಧಿಕಾರ ಪಡೆಯುವ ಉದ್ದೇಶದಿಂದ ಅರಸು ಅವರನ್ನು ಕೈಬಿಟ್ಟರೂ ಕೊನೆಗೂ ಆ ಅಧಿಕಾರ ಪೂರ್ಣಪ್ರಮಾಣದಲ್ಲಿ ಅವರ ಕೈಗೆ ಬರಲೇ ಇಲ್ಲ. ಸುಮಾರು ನಲ್ವತ್ತು ವರ್ಷ ರಾಜಕೀಯದಲ್ಲಿದ್ದು `ಅಧಿಕಾರದಾಹಿ~, `ಪಕ್ಷಾಂತರಿ~ ಎಂಬ ಹೀಯಾಳಿಕೆಗೆ ತುತ್ತಾದರೂ ಅವರು ಅಧಿಕಾರ ಅನುಭವಿಸಿದ್ದು ಕೇವಲ ನಾಲ್ಕುವರೆ ವರ್ಷ.
ಅರಸು ಅವರನ್ನು ಬಿಟ್ಟು ಬಂದ ಒಂದು ಘಟನೆಯನ್ನು ಹೊರತುಪಡಿಸಿದರೆ ನಂತರದ ಅವರ ಯಾವ ಪಕ್ಷಾಂತರವೂ ರಾಜಕೀಯ ಲೆಕ್ಕಾಚಾರದಿಂದ ಮಾಡಿದ್ದಲ್ಲ. ಅವುಗಳೆಲ್ಲವೂ ಅನ್ಯಾಯದ ವಿರುದ್ಧ ಪ್ರತಿಭಟನೆಯ ಇಲ್ಲವೇ ಸೇಡು ತೀರಿಸಿಕೊಳ್ಳುವ ಹುಂಬತನದ ನಿರ್ಧಾರಗಳು. ಆದ್ದರಿಂದ ಆ ಪಕ್ಷಾಂತರಗಳು ಅವರಿಗೆ `ಅಧಿಕಾರದಾಹಿ~ ಎಂಬ ಹಣೆಪಟ್ಟಿಯನ್ನು ತಂದುಕೊಟ್ಟಿತೇ ವಿನಾ ಅಧಿಕಾರವನ್ನು ತಂದುಕೊಡಲಿಲ್ಲ. ತನ್ನನ್ನು ಬಳಸಿಕೊಂಡು ಕೈಬಿಟ್ಟ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಲೆಂದೇ ಅವರು ಆ ಪಕ್ಷ ತೊರೆದು ಕ್ರಾಂತಿರಂಗ ಸೇರಿದರು, ಈ ಪಕ್ಷಾಂತರ ಕಾಂಗ್ರೆಸ್ ಸೋತು ಜನತಾರಂಗ ಅಧಿಕಾರಕ್ಕೆ ಬರಲು ಕಾರಣವಾಯಿತು, ಆದರೆ ಅವರು ಮುಖ್ಯಮಂತ್ರಿಯಾಗಲಿಲ್ಲ. 1985ರಲ್ಲಿ ಜನತಾರಂಗದ ಅನ್ಯಾಯ ಪ್ರತಿಭಟಿಸಿ ಕಾಂಗ್ರೆಸ್ ಸೇರಿ ಆ ಪಕ್ಷಕ್ಕೆ ತನ್ನ ಪಾಲಿನ ಬಲ ತುಂಬಿದರು, 1989ರಲ್ಲಿ ಆ ಪಕ್ಷವೇನೋ ಅಧಿಕಾರಕ್ಕೆ ಬಂತು ಆದರೆ ಆಗಲೂ ಮುಖ್ಯಮಂತ್ರಿಯಾಗುವ ಅವಕಾಶ ಅವರಿಗೆ ಕೂಡಿ ಬರಲಿಲ್ಲ.
1992ರಲ್ಲಿ ಕಾಂಗ್ರೆಸ್ ವಿರುದ್ಧ ಸಿಡಿದೆದ್ದು ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿದರು. ಅದು ಕಿತ್ತುಕೊಂಡ ಶೇಕಡಾ ಏಳೂವರೆಯಷ್ಟು ಮತಗಳಿಂದಾಗಿ ಕಾಂಗ್ರೆಸ್ ಸೋತುಹೋಯಿತು, ಆದರೆ ಅಧಿಕಾರಕ್ಕೆ ಬಂದದ್ದು ಜನತಾ ಪಕ್ಷ. 1999ರಲ್ಲಿ ಮತ್ತೆ ಕಾಂಗ್ರೆಸ್ ಸೇರಿದ ನಂತರದ ದಿನಗಳಲ್ಲಿ ಆ ಪಕ್ಷಕ್ಕೆ ಅಧಿಕಾರವೇನೋ ಬಂತು, ಆದರೆ ಬಂಗಾರಪ್ಪನವರು ಮೂಲೆಗುಂಪಾದರು. 2004ರಲ್ಲಿ ತನ್ನೊಳಗೆ ಸೆಳೆದುಕೊಂಡ ಬಿಜೆಪಿ ಅವರ ಬಲವನ್ನು ಬಳಸಿಕೊಂಡು ತನ್ನ ನೆಲೆಯನ್ನು ಇನ್ನಷ್ಟು ವಿಸ್ತರಿಸಿತು, ಬಂಗಾರಪ್ಪನವರಿಗೆ ಏನೂ ಸಿಗಲಿಲ್ಲ. ಒಂದೇ ವರ್ಷದ ಅವಧಿಯೊಳಗೆ ಬಿಜೆಪಿ ವಿರುದ್ಧ ಸಿಡಿದೆದ್ದು ಸಮಾಜವಾದಿ ಪಕ್ಷ ಸೇರಿ ಲೋಕಸಭೆಗೆ ಆಯ್ಕೆಯಾದರು. ಆ ಪಕ್ಷಕ್ಕೆ ಲೋಕಸಭೆಯಲ್ಲಿ ಒಬ್ಬ ಸದಸ್ಯನ ಹೆಚ್ಚುವರಿ ಬಲ ಸಿಕ್ಕಿದ್ದೇ ಲಾಭ. 2009ರಲ್ಲಿ ಕಾಂಗ್ರೆಸ್ ಸೇರಿ ಲೋಕಸಭೆಗೆ ಸ್ಪರ್ಧಿಸಿದರು. ಆಗಲೂ ಅವರಿಗೆ ಸಿಕ್ಕಿದ್ದು ತಮ್ಮ ಚುನಾವಣಾ ರಾಜಕೀಯದ ಮೊದಲ ಸೋಲು ಅಷ್ಟೇ. ಅದರ ನಂತರ ಜಾತ್ಯತೀತ ಜನತಾದಳ ಸೇರಿದರೂ ಅದರಿಂದ ಅವರಿಗೇನೂ ಲಾಭ ಆಗಲಿಲ್ಲ.
ಬಯಸಿದ್ದನೆಲ್ಲ ಮಾಡಿತೋರಿಸುವ ಸಾಮರ್ಥ್ಯವನ್ನು ಪಡೆದುಕೊಂಡು ಒಬ್ಬ ಯಶಸ್ವಿ ರಾಜಕೀಯ ನಾಯಕನಾಗಿ ಬೆಳೆಯುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಬಂಗಾರಪ್ಪನವರು ಪಕ್ಷಗಳ ಜತೆಗಿನ ಗುದ್ದಾಟ-ತಿಕ್ಕಾಟದಲ್ಲಿಯೇ ಕಳೆದುಹೋದರೇನೋ? ಅವರನ್ನು ಹಿಂದುಳಿದ ಜಾತಿಗಳ ನಾಯಕನಾಗಿ ಕೊಂಡಾಡಲಾಗುತ್ತಿದ್ದರೂ ಅವರು ಆಳದಲ್ಲಿ ಎಲ್ಲ ಜನವರ್ಗಗಳ ನಾಯಕನೆಂದೇ ಕರೆಸಿಕೊಳ್ಳಲು ಇಷ್ಟಪಡುತ್ತಿದ್ದರೆನ್ನುವುದು ಅವರ ಮಾತು ಮತ್ತು ಕೃತಿಗಳಿಂದ ಸ್ಪಷ್ಟವಾಗುತ್ತದೆ. ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಗ್ರಾಮೀಣ ಕೃಪಾಂಕ ಇರಲಿ, ವಿಶ್ವ, ಆಶ್ರಯ, ಆರಾಧನಾ ಯೋಜನೆಗಳೇ ಇರಲಿ, ಅವುಗಳು ಸಾಮಾಜಿಕ ನ್ಯಾಯದ ಸಾಧನಕ್ಕಿಂತಲೂ ಹೆಚ್ಚಾಗಿ ಎಲ್ಲ ಜಾತಿ-ಜನಾಂಗಗಳ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡ ಕಲ್ಯಾಣ ಕಾರ‌್ಯಕ್ರಮಗಳು.
ಸಮಾಜವಾದವನ್ನಾಗಲಿ ಇಲ್ಲವೇ ದೇವರಾಜ ಅರಸು ಅವರ ಆಸಕ್ತಿಯ ಸಾಮಾಜಿಕ ನ್ಯಾಯವನ್ನಾಗಲಿ ಅವರು ಯಥಾವತ್ತಾಗಿ ಅನುಕರಿಸಲು ಹೋಗಲೇ ಇಲ್ಲ. ವಿಶಾಲವಾದ ಅರ್ಥದಲ್ಲಿ ಎಲ್ಲ ಜಾತಿಗಳಲ್ಲಿರುವ ಬಡವರ ಉದ್ಧಾರವಾಗಬೇಕೆಂದೇ ಅವರು ಹೇಳುತ್ತಿದ್ದರು. ಈ ಕಾರಣದಿಂದಾಗಿಯೇ ಜಾತಿ-ಧರ್ಮವನ್ನು ಮೀರಿ ಅವರಿಗೆ ಅನುಯಾಯಿಗಳಿದ್ದರು. ಸಮಾಜದ ಅಭಿವೃದ್ದಿಯ ಬಗ್ಗೆ ಅವರಲ್ಲಿದ್ದ ಸೈದ್ಧಾಂತಿಕ ಒತ್ತಾಸೆ ಇಲ್ಲದ ಸಡಿಲವಾದ ಆಲೋಚನೆಗಳ ಪರಿಕಲ್ಪನೆ ಇನ್ನೊಂದು ರೀತಿಯಲ್ಲಿ ಅವರ ಮಿತಿಯೂ ಆಗಿತ್ತು. ಇದರಿಂದಾಗಿ ವೈಯಕ್ತಿಕವಾಗಿ ಉದಾರಿಗಳು, ಬಡವರ ಬಗ್ಗೆ ಕಳಕಳಿಯುಳ್ಳವರು, ವಿಶಾಲ ಹೃದಯಿಗಳೂ ಆಗಿದ್ದ ಬಂಗಾರಪ್ಪನವರಿಗೆ ಸೈದ್ಧಾಂತಿಕ ಸ್ಪಷ್ಟತೆ ಹೊಂದಿದ್ದ ಇನ್ನೊಬ್ಬ ಗೋಪಾಲಗೌಡ ಇಲ್ಲವೇ ದೇವರಾಜ ಅರಸು ಆಗಲು ಸಾಧ್ಯವಾಗಲಿಲ್ಲ. ಬೆಂಬಲಿಗರಿಗೆ ನೆರವಾಗಬೇಕೆಂಬ ಒಂದೇ ಉದ್ದೇಶದಿಂದ ಅಧಿಕಾರ ಕೈಗೆ ಬಂದಾಗ ಅದನ್ನು ಸಡಿಲಬಿಟ್ಟರು. ಈ ಔದಾರ‌್ಯವನ್ನು ದುರುಪಯೋಗಪಡಿಸಿಕೊಂಡವರೇ ಹೆಚ್ಚು. ಭ್ರಷ್ಟಾಚಾರದ ಕಳಂಕ ಅವರಿಗೆ ಹತ್ತಿಕೊಳ್ಳಲು ಇದು ಮುಖ್ಯ ಕಾರಣ.
ಸಿಟ್ಟಾಗಬೇಡ ನಗುನಗುತ್ತಾ ಇರು, ಅನ್ಯಾಯವನ್ನು ಸಹಿಸಿಕೊಳ್ಳು, ಹೊಂದಾಣಿಕೆ ಮಾಡಿಕೋ, ಯಾರನ್ನೂ ನಂಬಬೇಡ, ತಂತ್ರಗಳನ್ನು ಹೆಣೆ, ಕುತಂತ್ರಗಳನ್ನು ಮಾಡು, ಕಾಳಜಿ ಅಂತಃಕರಣದಲ್ಲಿ ಇಲ್ಲದಿದ್ದರೂ ಮಾತಿನಲ್ಲಿ ಇರಲಿ ಎನ್ನುತ್ತಿದೆ ಇಂದಿನ ರಾಜಕೀಯ. ಈ ಹೊಸಬಗೆಯ ರಾಜಕೀಯಕ್ಕೆ ಹೊಂದಿಕೊಳ್ಳಲು ಕೊನೆಗೂ ಬಂಗಾರಪ್ಪನವರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ರಾಜಕೀಯ ಅವಕಾಶಗಳನ್ನು ಕಳೆದುಕೊಳ್ಳುತ್ತಾ ಹೋದರು. ನೇರಾನೇರ ಜಗಳಕ್ಕಿಳಿದರು, ಬಂಡೆದ್ದರು, ಹೋರಾಡಿದರು, ಕೆಲವೊಮ್ಮೆ ಎದ್ದರು ಇನ್ನೂ ಕೆಲವೊಮ್ಮೆ ಬಿದ್ದರು. ಅಧಿಕಾರವನ್ನು ಅನುಭವಿಸುವುದಕ್ಕಿಂತ ಹೆಚ್ಚಾಗಿ ಹೋರಾಟದಲ್ಲಿಯೇ ಬದುಕನ್ನು ಕಳೆದರು, ಅದನ್ನೇ ಹೆಚ್ಚು ಪ್ರೀತಿಸುತ್ತಾ ಹೋದರು. ಕೆಲವು ದೌರ್ಬಲ್ಯಗಳ ಹೊರತಾಗಿಯೂ ಅವರೊಳಗೆ ಒಬ್ಬ ಅಪ್ರತಿಮ ಹೋರಾಟಗಾರನಿದ್ದ.
ರಾಜಕೀಯವಾಗಿ ಅಡಿಗಡಿಗೆ ಹಿನ್ನಡೆಯಾದರೂ ಧೃತಿಗೆಟ್ಟು ಮೂಲೆ ಸೇರದೆ ಸೆಟೆದು ನಿಲ್ಲುವ ಚೈತನ್ಯವನ್ನು ಅವರು ಕೊನೆಯವರೆಗೂ ಉಳಿಸಿಕೊಳ್ಳಲು ಅವರೊಳಗಿನ ಈ ದಣಿವರಿಯದ ಹೋರಾಟಗಾರ ಕಾರಣ. ರಾಜಕೀಯದಲ್ಲಿ ಬೆಳೆಯಲು ಒಳದಾರಿ-ಅಡ್ಡದಾರಿಗಳನ್ನೇ ಹುಡುಕಾಡುತ್ತಿರುವ ಇಂದಿನ ರಾಜಕಾರಣದಲ್ಲಿ ಜಾತಿ ಬಲ ಇಲ್ಲದ ಬಡಗೇಣಿದಾರ ಕುಟುಂಬದ ಸಾಮಾನ್ಯ ಯುವಕ ಹೋರಾಟದ ರಾಜಕೀಯದ ಮೂಲಕವೇ ಜನಾನುರಾಗಿ ನಾಯಕನಾಗಿ ಬೆಳೆದದ್ದು ಒಂದು ದಂತಕತೆಯಂತಿದೆ.

Monday, December 26, 2011

ಈ ಮೀಸಲಾತಿಯಿಂದ ಮುಸ್ಲಿಮರಿಗೂ ಲಾಭ ಇಲ್ಲ

ವಿವಾದದ ದೂಳು ಎದ್ದಾಗ ಕಣ್ಣು ಕುರುಡಾಗುತ್ತದೆ. ಮೀಸಲಾತಿಯ ವಿಚಾರ ಪ್ರಸ್ತಾಪವಾದಾಗಲೆಲ್ಲ ಏಳುವ ವಿವಾದದ ದೂಳು ಜನತೆಯ ಕಣ್ಣು ಕುರುಡು ಮಾಡುತ್ತಾ ಬಂದಿದೆ. ಈ ದೂಳು ಎಬ್ಬಿಸುವವರ ಉದ್ದೇಶವೂ ಇದೇ ಆಗಿರುತ್ತದೆ. ಆಳುವವರ ಉದ್ದೇಶ ಪ್ರಾಮಾಣಿಕವಾಗಿದ್ದಾಗ ಮೀಸಲಾತಿ ಅನುಷ್ಠಾನ ಸಮಸ್ಯೆಯಾಗಿಯೇ ಇಲ್ಲ.
ಅಪ್ರಾಮಾಣಿಕತೆಯಿಂದ ಕೂಡಿದ್ದ ನಿರ್ಧಾರ ಸಂಘರ್ಷಕ್ಕೆ ದಾರಿಮಾಡಿಕೊಟ್ಟಿದೆ. ಯುಪಿಎ ಸರ್ಕಾರ ಘೋಷಿಸಿರುವ ಅಲ್ಪಸಂಖ್ಯಾತರ ಒಳಮೀಸಲಾತಿಯ ಹಿಂದೆ ಇಂತಹದ್ದೇ ಅಪ್ರಾಮಾಣಿಕತೆ ಇದೆ. ಕೇಂದ್ರ ಸಂಪುಟ ಒಪ್ಪಿಕೊಂಡು ಗೆಜೆಟ್ ಅಧಿಸೂಚನೆ ಹೊರಡಿಸಿದ ಮಾತ್ರಕ್ಕೆ ಈ ಮೀಸಲಾತಿ ಜಾರಿಗೆ ಬಂದೇ ಬಿಟ್ಟಿತು ಎಂದು ಈಗಲೂ ಹೇಳುವ ಹಾಗಿಲ್ಲ. ಸುಪ್ರೀಂಕೋರ್ಟ್‌ನ ಪರಾಮರ್ಶೆಯಲ್ಲಿ ಇದು ಪಾರಾಗಿ ಬರಬೇಕಾಗಿದೆ.
ಇವೆಲ್ಲವೂ ಗೊತ್ತಿದ್ದೂ ಇಷ್ಟೊಂದು ಅವಸರದಲ್ಲಿ ಅಲ್ಪಸಂಖ್ಯಾತರ ಮೀಸಲಾತಿಯನ್ನು ಘೋಷಿಸಲು ಮುಖ್ಯ ಕಾರಣ ಅಲ್ಪಸಂಖ್ಯಾತರ ಮೇಲಿನ ಯುಪಿಎ ಸರ್ಕಾರದ ಕಳಕಳಿ ಖಂಡಿತ ಅಲ್ಲ, ಅದು ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ.
ಭಾವಿ ಪ್ರಧಾನಿ ಎಂದೇ ಬಿಂಬಿಸಲಾಗುತ್ತಿರುವ ರಾಹುಲ್ ಗಾಂಧಿಯವರ ಪ್ರತಿಷ್ಠೆಯನ್ನು ಉತ್ತರಪ್ರದೇಶದಲ್ಲಿ ಉಳಿಸಲು ಕಾಂಗ್ರೆಸ್ ನಡೆಸುತ್ತಿರುವ ಹತಾಶೆಯ ಪ್ರಯತ್ನಗಳಲ್ಲಿ ಇದೂ ಒಂದು.

ಈ ಮೀಸಲಾತಿ ಹೆಸರಿಗೆ ಮುಸ್ಲಿಮ್, ಕ್ರಿಶ್ಚಿಯನ್, ಸಿಖ್, ಜೈನ್ ಧರ್ಮಗಳನ್ನೊಳಗೊಂಡ ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಬಂಧಿಸಿದ್ದರೂ ಇದರ ಲಾಭ ದೊಡ್ಡ ಪ್ರಮಾಣದಲ್ಲಿ ದಕ್ಕಲಿರುವುದು ದೇಶದ ಜನಸಂಖ್ಯೆಯಲ್ಲಿ ಶೇಕಡಾ 12.2ರಷ್ಟಿರುವ ಮುಸ್ಲಿಮರಿಗೆ.
ಕಾಂಗ್ರೆಸ್‌ನ ಆಸಕ್ತಿ ಇರುವುದು ಈ ಮುಸ್ಲಿಮರ ಮೇಲೆ. ಉತ್ತರಪ್ರದೇಶದಲ್ಲಿ ಶೇಕಡಾ 15ರಷ್ಟಿರುವ ಮುಸ್ಲಿಮರು ಕನಿಷ್ಠ ನೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲರು. ಬಾಬರಿ ಮಸೀದಿ ಧ್ವಂಸದ ನಂತರ ಅವರು ಬಹುಸಂಖ್ಯೆಯಲ್ಲಿ ಕಾಂಗ್ರೆಸ್ ಬಿಟ್ಟು ಮುಲಾಯಂ ಸಿಂಗ್ ಅವರ ಸಮಾಜವಾದಿ ಪಕ್ಷದ ಕಡೆ ಹೊರಟು ಹೋಗಿದ್ದಾರೆ.
ಅವರನ್ನು ಮರಳಿ ಸೆಳೆಯಲು ಕಳೆದ ಇಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ನಡೆಸುತ್ತಿರುವ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿಲ್ಲ. ಮೀಸಲಾತಿ ಘೋಷಣೆಯಿಂದಾದರೂ ಅವರನ್ನು ಒಲಿಸಿಕೊಳ್ಳಬಹುದು ಎಂಬ ನಿರೀಕ್ಷೆಯಿಂದಲೇ ಚುನಾವಣೆ ಘೋಷಣೆಯ ಎರಡು ದಿನ ಮೊದಲು ಸಚಿವ ಸಂಪುಟ ಅಲ್ಪಸಂಖ್ಯಾತರ ಮೀಸಲಾತಿಗೆ ಅನುಮೋದನೆ ನೀಡಿದೆ.
ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಅವರು ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಧ್ಯಯನ ನಡೆಸಿ ವರದಿ ನೀಡದೆ ಇದ್ದಿದ್ದರೆ ಮುಸ್ಲಿಮರು ಕುರುಡಾಗಿ ಕಾಂಗ್ರೆಸ್ ಹೇಳಿದ್ದನ್ನೆಲ್ಲ ನಂಬಿ ಬಿಡುತ್ತಿದ್ದರೇನೋ? ಆದರೆ ನ್ಯಾ.ಸಾಚಾರ್ ನೀಡಿದ್ದ ವರದಿ ಕಾಂಗ್ರೆಸ್ ಪಕ್ಷ ಮಾಡಿದ ಮುಸ್ಲಿಮರ ಕಲ್ಯಾಣದ ಅಸಲಿ ರೂಪವನ್ನು ಐದು ವರ್ಷಗಳ ಹಿಂದೆಯೇ ಬಯಲುಗೊಳಿಸಿತ್ತು.
ನ್ಯಾ.ಸಾಚಾರ್ ವರದಿ ಪ್ರಕಾರ ಶೇಕಡಾ 94.9ರಷ್ಟು ಮುಸ್ಲಿಮರು ಬಡತನದ ರೇಖೆಗಿಂತ ಕೆಳಗಿದ್ದಾರೆ. ಶೇಕಡಾ 60.2ರಷ್ಟು ಮುಸ್ಲಿಮರು ಭೂ ರಹಿತರು, ಶೇಕಡಾ 54.6ರಷ್ಟು ನಗರದ ಮತ್ತು ಶೇಕಡಾ 60ರಷ್ಟು ಗ್ರಾಮೀಣ ಪ್ರದೇಶದ ಮುಸ್ಲಿಮರು ಶಾಲೆಯ ಮುಖ ನೋಡಿಲ್ಲ. ಶೇಕಡಾ 90ರಷ್ಟು ಮುಸ್ಲಿಮರು ಹತ್ತನೆ ತರಗತಿ ಮೆಟ್ಟಿಲು ಹತ್ತಿಲ್ಲ. ಶೇಕಡಾ 15.4ರಷ್ಟು ಜನಸಂಖ್ಯೆ ಇರುವ ಹದಿನೈದು ರಾಜ್ಯಗಳ ಸರ್ಕಾರಿ ಇಲಾಖೆಗಳಲ್ಲಿ ಮುಸ್ಲಿಮ್ ಉದ್ಯೋಗಿಗಳ ಪ್ರಮಾಣ ಶೇಕಡಾ 5.7 ಮಾತ್ರ. ಶೇಕಡಾ 12.2ರಷ್ಟು ಮುಸ್ಲಿಮರು ಇರುವ ಕರ್ನಾಟಕದ ಸರ್ಕಾರಿ ಇಲಾಖೆಗಳಲ್ಲಿ ಅವರ ಪ್ರಾತಿನಿಧ್ಯ ಶೇಕಡಾ 8.5 ಮಾತ್ರ.
ಮುಸ್ಲಿಮ್ ಪ್ರಾತಿನಿಧ್ಯ ಅವರ ಜನಸಂಖ್ಯೆಗಿಂತಲೂ ಅಧಿಕ ಇರುವ ಏಕೈಕ ಸ್ಥಳ ಎಂದರೆ ಜೈಲುಗಳು. ಮಹಾರಾಷ್ಟ್ರದಲ್ಲಿ ಮುಸ್ಲಿಮರ ಜನಸಂಖ್ಯೆ ಶೇಕಡಾ 10.6ರಷ್ಟಿದ್ದರೂ ಅಲ್ಲಿನ ಜೈಲುಗಳಲ್ಲಿ ಶೇಕಡಾ 40ರಷ್ಟು ಮುಸ್ಲಿಮರಿದ್ದಾರೆ. ಗುಜರಾತ್ ಜೈಲುಗಳಲ್ಲಿ ಮುಸ್ಲಿಮ್ ಕೈದಿಗಳ ಪ್ರಮಾಣ ಶೇಕಡಾ 25.
ಇಂತಹ ದುಃಸ್ಥಿತಿಯಲ್ಲಿರುವ ಮುಸ್ಲಿಮರಿಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ನ್ಯಾಯ ದೊರಕಿಸಿಕೊಡಬೇಕಾದರೆ ಮೀಸಲಾತಿಗಿಂತ ಪರಿಣಾಮಕಾರಿ ಸಾಧನ ಮತ್ತೊಂದಿಲ್ಲ ಎನ್ನುವುದು ನಿರ್ವಿವಾದ. ಆದರೆ ಯಾವ ಆಧಾರದಲ್ಲಿ ಮೀಸಲಾತಿ ನೀಡಬೇಕೆನ್ನುವುದು ಈಗಿನ ಸಮಸ್ಯೆ.
ಸಂವಿಧಾನದ ಪ್ರಕಾರ ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ನೀಡುವಂತಿಲ್ಲ. ಮುಸ್ಲಿಮರ ಮೀಸಲಾತಿಗೆ ಸಂಬಂಧಿಸಿದಂತೆ ವಿವಾದ ಹೊಸ ಸಂಗತಿಯೇನಲ್ಲ. ಬ್ರಿಟಿಷರು ಹಲವಾರು ಶಾಸಕಾಂಗ ಸಮಿತಿಗಳಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ನೀಡಿದ್ದರು.
ಸಂವಿಧಾನ ರಚನಾ ಸಭೆಯಲ್ಲಿನ ಅಲ್ಪಸಂಖ್ಯಾತ ಮತ್ತು ಮೂಲಭೂತ ಹಕ್ಕುಗಳ ಸಲಹಾ ಸಮಿತಿ ಕೂಡಾ ಮುಸ್ಲಿಮರ ಮೀಸಲಾತಿಗೆ ಶಿಫಾರಸು ಮಾಡಿತ್ತು. ಆ ಕಾಲದಲ್ಲಿ ಮುಸ್ಲಿಮರು, ಇತರ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು ಒಂದೇ ಗುಂಪಿನಲ್ಲಿದ್ದರು. ಆದರೆ ಮೀಸಲಾತಿಗೆ ಜಾತಿ ಆಧಾರಿತ ತಾರತಮ್ಯವೇ ಆಧಾರ ಎನ್ನುವುದನ್ನು ಪರಿಗಣಿಸಿದ ಕಾರಣ ಆ ಗುಂಪಿನಲ್ಲಿದ್ದ ಅಲ್ಪಸಂಖ್ಯಾತರು ಹೊರಬರಬೇಕಾಯಿತು.

ಮುಸ್ಲಿಮರು ಮತ್ತು ಕ್ರಿಶ್ಚಿಯನರು ಪ್ರತ್ಯೇಕ ಧರ್ಮಗಳಿಗೆ ಸೇರಿದವರಾದ ಕಾರಣ ಅವರು ಮೀಸಲಾತಿ ಕಕ್ಷೆಯಿಂದ ಹೊರಗುಳಿಯಬೇಕಾಯಿತು. ಇದರಿಂದಾಗಿಯೇ ಇಸ್ಲಾಂ ಮತ್ತು ಕ್ರೈಸ್ತಧರ್ಮದ ಮೂಲ ಅನುಯಾಯಿಗಳು ಮಾತ್ರವಲ್ಲ, ಆ ಧರ್ಮಗಳಿಗೆ ಮತಾಂತರಗೊಂಡವರು ಕೂಡಾ ಪರಿಶಿಷ್ಟ ಜಾತಿಗೆ ಸಿಗುವ ಮೀಸಲಾತಿಯಿಂದ ವಂಚಿತರಾಗಬೇಕಾಗಿದೆ.
ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಅಧ್ಯಕ್ಷತೆಯ `ರಾಷ್ಟ್ರೀಯ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಆಯೋಗ~ 2007ರಲ್ಲಿ ನೀಡಿದ್ದ ವರದಿಯಲ್ಲಿ ಮುಸ್ಲಿಮರಿಗೆ ಶೇಕಡಾ ಹತ್ತರ ಪ್ರತ್ಯೇಕ ಮೀಸಲಾತಿಯನ್ನು ಶಿಫಾರಸು ಮಾಡಿತ್ತು.
ಈ ಸೂತ್ರಕ್ಕೆ ಪರ್ಯಾಯವಾಗಿ ಹಿಂದುಳಿದ ಜಾತಿಗಳಿಗಾಗಿ ಇರುವ ಶೇಕಡಾ 27ರ ಮೀಸಲಾತಿಯ ಒಳಗಡೆಯೇ ಅಲ್ಪಸಂಖ್ಯಾತರಿಗೆ ಶೇಕಡಾ 8.4ರ ಮೀಸಲಾತಿ ನೀಡಬೇಕು, ಇದರಲ್ಲಿ ಶೇಕಡಾ ಆರರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಬೇಕು ಎನ್ನುವ ಇನ್ನೊಂದು ಪ್ರಸ್ತಾಪವನ್ನು ನ್ಯಾ.ಮಿಶ್ರಾ ವರದಿಯಲ್ಲಿ ಮಾಡಿದ್ದರು.
 ಆದರೆ, `ಧರ್ಮಾಧಾರಿತ ಮೀಸಲಾತಿ ಸಂವಿಧಾನ ವಿರೋಧಿಯಾದುದು~ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಈ ಮೀಸಲಾತಿಯನ್ನು ಒಪ್ಪುವುದು ಕಷ್ಟ. ನ್ಯಾ.ಮಿಶ್ರಾ ಆಯೋಗದ ವರದಿಯನ್ನು ಆಧರಿಸಿ ಆಂಧ್ರಪ್ರದೇಶ ಸರ್ಕಾರ ಮುಸ್ಲಿಮರಿಗೆ ಶೇಕಡಾ ನಾಲ್ಕರಷ್ಟು ಮೀಸಲಾತಿ ನೀಡಿರುವುದನ್ನು ಹೈಕೋರ್ಟ್ ರದ್ದು ಮಾಡಿತ್ತು. ಅದರ ನಂತರ ಮೀಸಲಾತಿ ನೀತಿಯನ್ನು ಪರಿಷ್ಕರಿಸಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ 15 ಮುಸ್ಲಿಮ್ ಜಾತಿಗಳಿಗೆ ಮೀಸಲಾತಿಯನ್ನು ಮಿತಿಗೊಳಿಸಿದ ನಂತರವಷ್ಟೇ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದ್ದು.
ಮಂಡಲ್ ಆಯೋಗ ಬಹಳ ಹಿಂದೆಯೇ ಮುಸ್ಲಿಮ್ ಮೀಸಲಾತಿ ಬಗ್ಗೆ ಮಧ್ಯದ ದಾರಿಯೊಂದನ್ನು ತೋರಿಸಿತ್ತು. ಅದು ಮುಸ್ಲಿಮರಲ್ಲಿ ಹಿಂದುಳಿದಿರುವ 400 ಜಾತಿಗಳನ್ನು ಗುರುತಿಸಿ ಅವರಿಗೆ ಹಿಂದುಳಿದ ಜಾತಿಗಳಿಗೆ ನೀಡಲಾಗಿರುವ ಶೇಕಡಾ 27ರ ಮೀಸಲಾತಿಯೊಳಗೆ ಶೇಕಡಾ ಮೂರರಷ್ಟು ಮೀಸಲಾತಿಯನ್ನು ನೀಡಿತ್ತು.
ಈ ಜಾತಿಗಳಲ್ಲಿ ನೇಕಾರರು, ಗಾಣಿಗರು, ಬಡಗಿಗಳು, ಚಮ್ಮಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಈ  ಮುಸ್ಲಿಮರ ಈ ಮೀಸಲಾತಿಗೆ ಧರ್ಮ ಆಧಾರವಾಗಿರದೆ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿಯುವಿಕೆ ಆಧಾರವಾಗಿರುವುದರಿಂದ ಸುಪ್ರೀಂ ಕೋರ್ಟ್ ಕೂಡಾ ಇದನ್ನು ಒಪ್ಪಿಕೊಂಡಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ದಕ್ಷಿಣ ಭಾರತದ ರಾಜ್ಯಗಳು ಮುಸ್ಲಿಮರಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿವೆ.
ಇಂದು ಉತ್ತರ ಭಾರತದ ಮುಸ್ಲಿಮರಿಗೆ ಹೋಲಿಸಿದರೆ ದಕ್ಷಿಣ ಭಾರತದ ಮುಸ್ಲಿಮರು ಉತ್ತಮ ಸ್ಥಿತಿಯಲ್ಲಿದ್ದಾರೆ. ಇದಕ್ಕೆ ಆ ರಾಜ್ಯಗಳ ಸಾಮಾಜಿಕ ವಾತಾವರಣ ಕೂಡಾ ಕಾರಣವಾಗಿರಬಹುದು. ಇದರ ಜತೆಗೆ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮುಸ್ಲಿಮರಿಗೆ ಇರುವ ಮೀಸಲಾತಿಯೂ ಅವರ ಏಳಿಗೆಗೆ ನೆರವಾಗಿದೆ ಎನ್ನುವುದನ್ನು ಅಲ್ಲಗಳೆಯಲಾಗದು. ತಮಿಳುನಾಡಿನಲ್ಲಿ ಹಿಂದುಳಿದ ವರ್ಗಗಳಿಗಾಗಿ ಇರುವ ಶೇಕಡಾ 30ರಷ್ಟು ಮೀಸಲಾತಿಯ ವ್ಯಾಪ್ತಿಯಲ್ಲಿ ಮುಸ್ಲಿಮರನ್ನು ಸೇರಿಸಲಾಗಿದೆ.

ಕೇರಳದಲ್ಲಿ ವಾರ್ಷಿಕ ಎರಡುವರೆ ಲಕ್ಷ ರೂಪಾಯಿಗಳಿಗಿಂತ ಕಡಿಮೆ ಆದಾಯ ಇರುವ ಮುಸ್ಲಿಮರಿಗೆ ಶೇಕಡಾ ಹನ್ನೆರಡರಷ್ಟು, ಮತ್ತು ಕರ್ನಾಟಕದಲ್ಲಿ ವಾರ್ಷಿಕ ಎರಡು ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಇರುವ ಮುಸ್ಲಿಮರಿಗೆ ಶೇಕಡಾ ನಾಲ್ಕರಷ್ಟು ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕಲ್ಪಿಸಲಾಗಿದೆ.
ಎಂ.ವೀರಪ್ಪ ಮೊಯಿಲಿ ಅವರು ಕರ್ನಾಟಕದಲ್ಲಿ ಮುಸ್ಲಿಮರ ಮೀಸಲಾತಿ ಸೂತ್ರವನ್ನು ರೂಪಿಸಿದ್ದರೂ ಅಧಿಕಾರ ಕಳೆದುಕೊಂಡ ಕಾರಣ ಅದನ್ನು ಅನುಷ್ಠಾನಕ್ಕೆ ತರಲು ಅವರಿಗೆ ಸಾಧ್ಯವಾಗಿರಲಿಲ್ಲ. ಅವರ ನಂತರ ಮುಖ್ಯಮಂತ್ರಿಯಾದ ಎಚ್.ಡಿ.ದೇವೇಗೌಡರು 1994ರಲ್ಲಿ ಅದನ್ನು ಜಾರಿಗೆ ತಂದರು.

ಧರ್ಮದ ಆಧಾರದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸುತ್ತಾ ಬಂದ ಬಿಜೆಪಿ ಕೂಡಾ ಕರ್ನಾಟಕದಲ್ಲಿ ಇಲ್ಲಿಯವರೆಗೆ ಇದರ ವಿರುದ್ಧ ದನಿ ಎತ್ತಿಲ್ಲ. ಮಂಡಲ್ ವರದಿಗೆ ಸಂಬಂಧಿಸಿದಂತೆ `ಕೆನೆಪದರ~ದ ಬಗ್ಗೆ ತಾನು ನೀಡಿರುವ ಆದೇಶಕ್ಕನುಗುಣವಾಗಿಯೇ ಕೇರಳ ಮತ್ತು ಕರ್ನಾಟಕದ ಮುಸ್ಲಿಮ್ ಮೀಸಲಾತಿ ಇರುವುದರಿಂದ ಸುಪ್ರೀಂ ಕೋರ್ಟ್ ಕೂಡಾ ಇದಕ್ಕೆ ಅನುಮೋದನೆ ನೀಡಿದೆ.
ಆದರೆ, ಈಗ ಯುಪಿಎ ಸರ್ಕಾರ ಅತ್ಯವಸರದಿಂದ ಅಲ್ಪಸಂಖ್ಯಾತರಿಗಾಗಿ ಘೋಷಿಸಿರುವ ಮೀಸಲಾತಿ, ಮಂಡಲ್ ವರದಿ ಇಲ್ಲವೇ ಇತರ ನಾಲ್ಕು ರಾಜ್ಯಗಳಲ್ಲಿರುವ ಮುಸ್ಲಿಮ್ ಮೀಸಲಾತಿಯನ್ನು ಆಧಾರವಾಗಿಟ್ಟುಕೊಂಡು ರೂಪಿಸಿರುವಂತೆ ಕಾಣುತ್ತಿಲ್ಲ.
ಇದು ಮೀಸಲಾತಿಗೆ ಅರ್ಹವಾಗಿರುವ ಅಲ್ಪಸಂಖ್ಯಾತರನ್ನು ಸಾಮಾಜಿಕ ಮತ್ತು ಆರ್ಥಿಕ ಮಾನದಂಡಗಳಿಂದ ಗುರುತಿಸಲು ಹೋಗದೆ ಸಾರಾಸಗಟಾಗಿ ಎಲ್ಲರನ್ನೂ ಒಂದೇ ಗುಂಪಿನಲ್ಲಿ ಸೇರಿಸಿದ ಹಾಗಿದೆ. ಈ ರೀತಿ ಇಡೀ ಧರ್ಮವನ್ನೇ ಹಿಂದುಳಿದಿದೆ ಎಂದು ಘೋಷಿಸಿ ಮೀಸಲಾತಿ ನೀಡುವುದು `ಧರ್ಮಾಧರಿತ ಮೀಸಲಾತಿ ಸಲ್ಲದು~ ಎನ್ನುವ ಸಂವಿಧಾನದ ಆಶಯ ಮತ್ತು ಸುಪ್ರೀಂ ಕೋರ್ಟ್‌ನ ಆದೇಶಗಳಿಗೆ ವಿರುದ್ಧವಾಗಿದೆ.
ಆದ್ದರಿಂದ ಒಂದೇ ಏಟಿಗೆ  ಸುಪ್ರೀಂ ಕೋರ್ಟ್ ಇದನ್ನು ರದ್ದುಪಡಿಸುವ ಸಾಧ್ಯತೆ ಇದೆ.
ಇದಕ್ಕಿಂತಲೂ ಮುಖ್ಯವಾಗಿ ಈ ಮೀಸಲಾತಿಯಿಂದಾಗಿ ಮುಸ್ಲಿಮರಲ್ಲಿ ನಿಜಕ್ಕೂ ಹಿಂದುಳಿದಿರುವ, ಬಡವರಾಗಿರುವ ಮುಸ್ಲಿಮರಿಗೆ ಅನ್ಯಾಯವಾಗಲಿದೆ. ಮಂಡಲ್ ಆಯೋಗದ ವರದಿಯನ್ನು ಆಧರಿಸಿದ ಈಗಿನ ಮೀಸಲಾತಿ ನೀತಿ ಪ್ರಕಾರ ಮುಸ್ಲಿಮರಲ್ಲಿರುವ 400 ಜಾತಿಗಳು ಶೇಕಡಾ ಮೂರರಷ್ಟು ಮೀಸಲಾತಿ ಪಡೆಯುತ್ತಿದ್ದವು.
ಯುಪಿಎ ಸರ್ಕಾರದ ಹೊಸ ಸೂತ್ರ ಮೀಸಲಾತಿಯ ಪ್ರಮಾಣವನ್ನು ಶೇಕಡಾ ನಾಲ್ಕೂವರೆಗೆ ಹೆಚ್ಚಿಸಿ ಅದರ ವ್ಯಾಪ್ತಿಯೊಳಗೆ ಎಲ್ಲ ಮುಸ್ಲಿಮರನ್ನು (ಶೇಕಡಾ 12.2) ಮಾತ್ರವಲ್ಲ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಕ್ರಿಶ್ಚಿಯನ್(ಶೇಕಡಾ 2.3), ಸಿಖ್(ಶೇಕಡಾ 1.9), ಬೌದ್ಧ (ಶೇಕಡಾ 0.8) ಮತ್ತು ಜೈನರನ್ನೂ (ಶೇಕಡಾ 0.4) ಸೇರಿಸಿದೆ.

ಇವರೆಲ್ಲರ ಜತೆ ಮುಸ್ಲಿಮರಲ್ಲಿರುವ ಹಿಂದುಳಿದ ಜಾತಿಗಳು ಪೈಪೋಟಿ ನಡೆಸಿ ಮೀಸಲಾತಿಯ ಲಾಭವನ್ನು ಪಡೆಯುವುದಾದರೂ ಸಾಧ್ಯವೇ?

Monday, December 19, 2011

ಕನ್ನಡಿಗರು ಒಲ್ಲದ ಪ್ರಾದೇಶಿಕ ರಾಜಕಾರಣ

ಕರ್ನಾಟಕದ ಇಬ್ಬರು ರಾಜಕೀಯ ನಾಯಕರು ಇತ್ತೀಚೆಗೆ ಪ್ರಾದೇಶಿಕ ಪಕ್ಷ ರಚನೆಯ ಕನಸು ಕಾಣತೊಡಗಿದ್ದಾರೆ. ಒಬ್ಬರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇನ್ನೊಬ್ಬರು ಮಾಜಿ ಸಚಿವ ಶ್ರಿರಾಮುಲು.
ರಾಜ್ಯದ ನೆಲ-ಜಲ-ಭಾಷೆಯನ್ನು ಪ್ರೀತಿಸುವ, ಪೋಷಿಸುವ ಮತ್ತು ರಕ್ಷಿಸುವಂತಹ ಪ್ರಾದೇಶಿಕ ಪಕ್ಷವೊಂದರ ಕನಸನ್ನು ಕಂಡಿರುವ ಮತ್ತು ಈಗಲೂ ಕಾಣುತ್ತಿರುವ ಕನ್ನಡಿಗರು ಬಹುಸಂಖ್ಯೆಯಲ್ಲಿ ನಮ್ಮಲ್ಲಿದ್ದಾರೆ.
ಪ್ರಾದೇಶಿಕ ಪಕ್ಷಗಳ ಹಿಡಿತದ ರಾಜ್ಯಗಳನ್ನು `ನೆರೆಮನೆ~ಗಳಾಗಿ ಹೊಂದಿರುವ ಕರ್ನಾಟಕ, ಬಲಿಷ್ಠ ಪ್ರಾದೇಶಿಕ ಪಕ್ಷದ ಕೊರತೆಯಿಂದಾಗಿ ಗಡಿತಂಟೆ, ನೀರು ಹಂಚಿಕೆ, ಕೇಂದ್ರದ ಸಂಪನ್ಮೂಲದಲ್ಲಿನ ಪಾಲಿನಂತಹ ಸೂಕ್ಷ್ಮ ವಿಚಾರಗಳಲ್ಲಿ ಅನ್ಯಾಯಕ್ಕೀಡಾಗುತ್ತಾ ಬಂದಿರುವುದು ಕೂಡಾ ಸುಳ್ಳಲ್ಲ.

ಕಾಂಗ್ರೆಸ್ ಮತ್ತು ಬಿಜೆಪಿಯನ್ನು ನೆರೆಯ ರಾಜ್ಯಗಳ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ಎಐಎಡಿಎಂಕೆ, ಎನ್‌ಸಿಪಿ, ತೆಲುಗುದೇಶಂನಂತಹ ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯಗಳ ಹಿತರಕ್ಷಣೆಗಾಗಿ ಬಳಸಿಕೊಳ್ಳುತ್ತಾ ಬಂದಿರುವ ನಿದರ್ಶನಗಳೂ ನಮ್ಮ ಕಣ್ಣಮುಂದೆ ಇವೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳ ಬಗೆಗಿನ ಕನ್ನಡಿಗರ ಒಲವು ಕರ್ನಾಟಕದ ಮುನ್ನಡೆಗೆ ಕಾಲ್ತೊಡಕಾಗಿ ಹೋಯಿತೇನೋ ಎಂಬ ಚಿಂತೆ ಭಾಷಾಂಧ ಕನ್ನಡಿಗರನ್ನು ಮಾತ್ರವಲ್ಲ, ಹೃದಯ ವೈಶಾಲ್ಯದ ಕನ್ನಡಿಗರನ್ನೂ ಒಮ್ಮಮ್ಮೆ ಕಾಡುತ್ತಿರುವುದು ಸತ್ಯ.
ಆದರೆ ರಾಜ್ಯದ ರಾಜಕೀಯ ಪರಂಪರೆಯನ್ನು ನೋಡಿದರೆ ಇಲ್ಲಿ ಪ್ರಾದೇಶಿಕ ಪಕ್ಷಗಳು ಯಶಸ್ಸು ಗಳಿಸಿರುವ ಉದಾಹರಣೆಗಳು ಸಿಗುವುದಿಲ್ಲ.
ನೆರೆಯ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಮೆರೆದಾಡುತ್ತಿದ್ದರೂ ರಾಜ್ಯದ ಜನತೆ ಮಾತ್ರ ಇಲ್ಲಿಯ ವರೆಗೆ ಅದರ ಪ್ರಭಾವಕ್ಕೊಳಗಾಗದೆ ದೂರವೇ ಉಳಿದುಬಿಟ್ಟಿದ್ದಾರೆ.
ಇದಕ್ಕೆ ಪ್ರಾದೇಶಿಕ ಪಕ್ಷ ಕಟ್ಟಲು ಪ್ರಯತ್ನಿಸಿದ ರಾಜಕೀಯ ನಾಯಕರ ಆತ್ಮವಂಚನೆಯ ನಡವಳಿಕೆಗಳೂ ಕಾರಣ. ಇಂತಹದ್ದರಲ್ಲಿ ಯಡಿಯೂರಪ್ಪ ಮತ್ತು ಶ್ರಿರಾಮುಲು ಅವರು ರಾಜಕೀಯ ಬ್ಲಾಕ್‌ಮೇಲ್‌ಗಷ್ಟೇ `ಪ್ರಾದೇಶಿಕ ಪಕ್ಷದ ಗುಮ್ಮ~ನನ್ನು ಬಳಸದೆ ನಿಜಕ್ಕೂ ಅದನ್ನು ಕಟ್ಟಲು ಹೊರಟರೆ ಯಶಸ್ಸು ಕಾಣಬಹುದೇ?
ಪ್ರಾದೇಶಿಕ ಪಕ್ಷ ರಚನೆಯ ಹಲವಾರು ಅವಕಾಶಗಳು ಬಂದು ಹೋಗಿರುವುದನ್ನು ಕರ್ನಾಟಕ ರಾಜಕಾರಣದ ಇತಿಹಾಸ ಹೇಳುತ್ತಿದೆ. ಅಂತಹ ಮೊದಲ ಅವಕಾಶ ದೇವರಾಜ ಅರಸು ಅವರಿಗೆ ಒದಗಿ ಬಂದಿತ್ತು.

ಕಾಂಗ್ರೆಸ್ ವಿರುದ್ಧದ ರಾಜಕಾರಣಕ್ಕೆ ಮೊದಲ ಪ್ರಯತ್ನದಲ್ಲಿ ಜನ ಬೆಂಬಲ ಸಿಗದೆ ಇದ್ದರೂ ವಿಚಲಿತರಾಗದ ಅರಸು ಅವರು ತಮ್ಮ ಕೊನೆಯ ದಿನಗಳಲ್ಲಿ `ಕ್ರಾಂತಿರಂಗ~ವನ್ನು ಕಟ್ಟಿದ್ದರು. ಆದರೆ, ಅದನ್ನು ಮುನ್ನಡೆಸಲು ಅವರು ಉಳಿಯಲಿಲ್ಲ.
ಅವರು ಬದುಕಿದ್ದರೆ ಪ್ರಾದೇಶಿಕ ಪಕ್ಷವನ್ನು ರಾಜ್ಯ ಪಡೆಯುತ್ತಿತ್ತೋ ಏನೋ? ಹೀಗೆ ಅಂದುಕೊಳ್ಳಲು ಕಾರಣ ಇದೆ. ಕರ್ನಾಟಕದ ಬಹುಸಂಖ್ಯಾತ ಮತದಾರರು ಕಾಂಗ್ರೆಸ್ ಪಕ್ಷವನ್ನು ಕೈಬಿಟ್ಟು, ಅದರ ವಿರೋಧಿ ಪಕ್ಷಗಳ ಬಗ್ಗೆ ಒಲವು ತೋರಿಸಿದ್ದೇ ಎಪ್ಪತ್ತರ ದಶಕದ ಅಂತ್ಯ ಮತ್ತು ಎಂಬತ್ತರ ದಶಕದ ಪ್ರಾರಂಭದ ದಿನಗಳಲ್ಲಿ.
1983ರಲ್ಲಿ ರಾಜ್ಯದ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದದ್ದೇ ಇದಕ್ಕೆ ಸಾಕ್ಷಿ. ಆಗ ಅರಸು ಬದುಕಿದ್ದರೆ ಅವರೇ ಅದಕ್ಕೆ ನಾಯಕರಾಗುತ್ತಿದ್ದರು. ಜನತಾ ಪಕ್ಷದ ಜತೆ ಕ್ರಾಂತಿರಂಗ ವಿಲೀನಗೊಳ್ಳದೆ ಒಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆಯಲು ಆಗ ಅವಕಾಶ ಇತ್ತು.
ಎರಡನೇ ಅವಕಾಶ ಗೋಕಾಕ್ ಚಳವಳಿಯ ನಂತರದ ದಿನಗಳಲ್ಲಿ ಸೃಷ್ಟಿಯಾಗಿತ್ತು. ರೈತ, ದಲಿತ ಮತ್ತು ಭಾಷಾ ಚಳವಳಿಗಳಿಂದ ಪಕ್ವಗೊಂಡಿದ್ದ ರಾಜ್ಯದ ರಾಜಕಾರಣ ಪ್ರಾದೇಶಿಕ ಪಕ್ಷದ ಹುಟ್ಟನ್ನು ಎದುರು ನೋಡುತ್ತಿದ್ದ ಕಾಲ ಅದು. ಬಹುಶಃ ನಟ ರಾಜಕುಮಾರ್ ರಾಜಕೀಯ ಪ್ರವೇಶಿಸಲು ಒಪ್ಪಿಕೊಂಡಿದ್ದರೆ  ಪ್ರಾದೇಶಿಕ ಪಕ್ಷ ರಚನೆಯಾಗುತ್ತಿತ್ತು.

ಆದರೆ ವರನಟ ನಿರಾಕರಿಸಿದ ಕಾರಣ ಅದು ಸಾಧ್ಯವಾಗದೆ ಹೋಯಿತು. ಅದರ ಲಾಭ ಪಡೆದದ್ದು ಜನತಾರಂಗ ಎಂಬ ಮೈತ್ರಿಕೂಟಕ್ಕೆ. ಈ ಕೂಟಕ್ಕೆ ಸಂಪೂರ್ಣವಾಗಿ ಪ್ರಾದೇಶಿಕ ಪಕ್ಷದ ರೂಪ ಇರಲಿಲ್ಲ.
ಅದರೊಳಗಿದ್ದ ಕ್ರಾಂತಿರಂಗ ಪ್ರಾದೇಶಿಕ ಪಕ್ಷವಾದರೂ, ಒಟ್ಟು ಜನತಾರಂಗ ಎನ್ನುವುದು ಕ್ರಾಂತಿರಂಗ, ಜನತಾ ಪಕ್ಷ ಮತ್ತು ಎಡಪಕ್ಷಗಳು ಕೂಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಕಟ್ಟಿದ ಮೈತ್ರಿಕೂಟವಾಗಿತ್ತು.
ಮೂರನೆಯ ಅವಕಾಶ ಕೂಡಿಬಂದದ್ದು ಮಾತ್ರವಲ್ಲ, ಅದನ್ನು ಬಳಸಿಕೊಂಡು ಸೀಮಿತ ರೂಪದಲ್ಲಿಯಾದರೂ ಯಶಸ್ಸು ಗಳಿಸಿದ್ದು ಎಸ್. ಬಂಗಾರಪ್ಪನವರು.
1994ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸಿಡಿದು ಹೊರಬಂದ ಬಂಗಾರಪ್ಪನವರು ಕಟ್ಟಿದ `ಕರ್ನಾಟಕ ಕಾಂಗ್ರೆಸ್ ಪಕ್ಷ (ಕೆಸಿಪಿ) 1994ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ ಏಳುವರೆಯಷ್ಟು ಮತಗಳನ್ನು ಗಳಿಸಿ ಹತ್ತುಸ್ಥಾನಗಳನ್ನು ಗೆದ್ದಿತ್ತು.
ಕರ್ನಾಟಕದ ಪ್ರಾದೇಶಿಕ ಪಕ್ಷಗಳ ಮಟ್ಟಿಗೆ ಈಗಲೂ ಇದೇ ದಾಖಲೆ. ಬೇರೆ ಯಾವ ಪ್ರಾದೇಶಿಕ ಪಕ್ಷವೂ ಚುನಾವಣೆಯಲ್ಲಿ ಇಷ್ಟು ಯಶಸ್ಸನ್ನೂ ಗಳಿಸಿಲ್ಲ.
ಆದರೆ ಬಂಗಾರಪ್ಪನವರ ಈ ಸಾಧನೆ ಕೂಡಾ ಕಾಂಗ್ರೆಸ್ ಸೋಲಿಗೆ ಕಾರಣವಾಯಿತೇ ಹೊರತು ಅದರಿಂದ ಅವರ ಪಕ್ಷಕ್ಕಾಗಲಿ, ರಾಜ್ಯದ ಜನರಿಗಾಗಲಿ ಲಾಭವಾಗಲಿಲ್ಲ.
ಪ್ರಾದೇಶಿಕ ಪಕ್ಷ ಕಟ್ಟುವ ಛಾತಿ ಇದ್ದ ಎಚ್.ಡಿ.ದೇವೇಗೌಡರು ಒಂದು ಹಂತದಲ್ಲಿ `ಕರ್ನಾಟಕ ವಿಕಾಸ ವೇದಿಕೆ~ಯನ್ನು ಕಟ್ಟಿ ಊರೂರೂ ಅಲೆಯತೊಡಗಿದಾಗ ಕರ್ನಾಟಕದ ಬಹುದಿನಗಳ ಆಸೆಯೊಂದು ಈಡೇರುತ್ತದೆಯೇನೋ ಎಂಬ ನಿರೀಕ್ಷೆ ಹುಟ್ಟಿತ್ತು.
ಆದರೆ ಅವರೂ ರಾಷ್ಟ್ರೀಯ ಪಕ್ಷದ ಹುಚ್ಚಿಗೆ ಬಿದ್ದು ಕೊನೆಗೆ ಜನತಾಪಕ್ಷದ ಜತೆಯೇ ಲೀನರಾದರು. ಪ್ರಾದೇಶಿಕ ಪಕ್ಷದ ನಾಯಕನಾಗುವ ಎಲ್ಲ ಅರ್ಹತೆಗಳನ್ನು ಹೊಂದಿದ್ದರೂ ಅನಿರೀಕ್ಷಿತ ಬೆಳವಣಿಗೆಯಲ್ಲಿ ಪ್ರಧಾನಿ ಪಟ್ಟಕ್ಕೇರಿದ ನಂತರ ರಾಷ್ಟ್ರ ರಾಜಕಾರಣದ ದೌರ್ಬಲ್ಯದಿಂದ ಅವರು ಹೊರಗೆ ಬರಲೇ ಇಲ್ಲ.
ರಾಷ್ಟ್ರೀಯ ನಾಯಕರಾಗಿಯೇ ಉಳಿಯುವ ಹಂಬಲ ಮತ್ತು ಮೈತ್ರಿಕೂಟದ ಯುಗದಲ್ಲಿ ಮತ್ತೊಮ್ಮೆ ಅನಿರೀಕ್ಷಿತ ಬೆಳವಣಿಗೆ ಘಟಿಸಬಹುದೆಂಬ ದುರಾಸೆ ಇದಕ್ಕೆ ಕಾರಣ ಇರಬಹುದು. ಆದ್ದರಿಂದ ಎಚ್.ಡಿ.ಕುಮಾರಸ್ವಾಮಿ ಪ್ರಾದೇಶಿಕ ಪಕ್ಷ ಕಟ್ಟುವ ಆಸಕ್ತಿ ತೋರಿದರೂ ದೇವೇಗೌಡರು ಅದಕ್ಕೆ ಹಸಿರು ನಿಶಾನೆ ತೋರಿಸುತ್ತಲೇ ಇಲ್ಲ.
ದೇವೇಗೌಡರು ಪ್ರಧಾನಿಯಾದ ನಂತರ ರಾಮಕೃಷ್ಣ ಹೆಗಡೆ ಅವರನ್ನು ಉಚ್ಚಾಟನೆ ಮಾಡಿದಾಗ ಮತ್ತೆ ಪ್ರಾದೇಶಿಕ ಪಕ್ಷದ ಚರ್ಚೆ ಪ್ರಾರಂಭವಾಗಿತ್ತು. ಹೆಗಡೆ ಅವರು ಕಟ್ಟಿದ `ನವನಿರ್ಮಾಣ ವೇದಿಕೆ~ಗೆ ರಾಜ್ಯದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಬೆಂಬಲವೂ ವ್ಯಕ್ತವಾಗಿತ್ತು.
ನಾಯಕತ್ವದ ಕೊರತೆಯಿಂದ ಕೊರಗುತ್ತಿದ್ದ ರಾಜ್ಯದ ಲಿಂಗಾಯತ ಸಮುದಾಯ ಹೆಗಡೆ ಅವರಲ್ಲಿ ತಮ್ಮ ನಾಯಕನನ್ನು ಕಾಣುತ್ತಾ ಬಂದದ್ದು ಕೂಡಾ ಈ ಜನಬೆಂಬಲಕ್ಕೆ ಒಂದು ಕಾರಣ.

ಆದರೆ ಹೆಗಡೆಯವರಿಗೆ ಪ್ರಾದೇಶಿಕ ಪಕ್ಷದ ಬಗ್ಗೆ ನಂಬಿಕೆಯೇ ಇರಲಿಲ್ಲ. ಅದನ್ನು ಕಟ್ಟಿ ಬೆಳೆಸುವ ಶ್ರಮಜೀವಿಯೂ ಅವರು ಆಗಿರಲಿಲ್ಲ. ಆದ್ದರಿಂದ `ನವನಿರ್ಮಾಣ ವೇದಿಕೆ~ಯನ್ನು  `ಲೋಕಶಕ್ತಿ~ ಎಂಬ ರಾಜಕೀಯ ಪಕ್ಷವಾಗಿ ಪರಿವರ್ತಿಸುವಾಗಲೂ ಅದಕ್ಕೆ ರಾಷ್ಟ್ರೀಯ ಪಕ್ಷದ ರೂಪು ಕೊಟ್ಟು ಅದನ್ನು ಎಡಬಿಡಂಗಿ ಮಾಡಿಬಿಟ್ಟರು.
ಈ ಸಾಲಿನಲ್ಲಿ ಕೊನೆಯ ಅವಕಾಶ ಒದಗಿಬಂದದ್ದು ಸಿದ್ದರಾಮಯ್ಯನವರಿಗೆ. ಆದರೆ ಆಟದ ಕಣಕ್ಕೆ ಇಳಿಯುವ ಮೊದಲೇ ಅವರು ಸೋಲೊಪ್ಪಿಕೊಂಡು `ಗೆಲ್ಲುವ ತಂಡ~ ಎಂದು ನಂಬಿ ಕಾಂಗ್ರೆಸ್ ಸೇರಿಕೊಂಡುಬಿಟ್ಟರು.
ಅವರು ಕಾಂಗ್ರೆಸ್ ಸೇರಿದ್ದ ದಿನ ಎಐಸಿಸಿ ಕಚೇರಿ ಸಭಾಂಗಣದಲ್ಲಿ ಪಕ್ಷದ ನಾಯಕರನ್ನು ಎಡಬಲದಲ್ಲಿ ಕೂರಿಸಿಕೊಂಡು ತೋರಿದ್ದ ಆತ್ಮವಿಶ್ವಾಸವನ್ನು ಸಂಸತ್‌ಭವನದ ಎದುರಿನ ಬೋಟ್‌ಕ್ಲಬ್‌ನಲ್ಲಿ ತನ್ನ ಕಾಲಮೇಲೆ ನಿಂತು ತೋರಿಸಿದ್ದರೆ ಲಾಲು, ಮುಲಾಯಂ, ಪವಾರ್, ಕರುಣಾನಿಧಿ, ಚಂದ್ರಬಾಬು ನಾಯ್ಡು ಅವರಂತೆ ರಾಷ್ಟ್ರಮಟ್ಟದಲ್ಲಿ ಗುರುತಿಸಲಾಗುತ್ತಿರುವ ಪ್ರಾದೇಶಿಕ ಪಕ್ಷದ ನಾಯಕರಾಗುತ್ತಿದ್ದರು.
ಆದರೆ ಸಿದ್ದರಾಮಯ್ಯನವರು `ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯ ಇಲ್ಲ, ಅದಕ್ಕಾಗಿ ಸೋನಿಯಾಜಿ ಕೈ ಬಲಪಡಿಸಲು ಕಾಂಗ್ರೆಸ್ ಸೇರಿದ್ದೇನೆ~ ಎಂದು ಹೇಳಿ ಶರಣಾಗಿಬಿಟ್ಟರು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಶವಪೆಟ್ಟಿಗೆಗೆ ಕೊನೆಯ ಮೊಳೆ ಬಿದ್ದದ್ದೇ ಆಗ.
ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ನೆಲೆ ಊರಲು ಯಾಕೆ ಆಗುತ್ತಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿವೆ. ಗುಂಡೂರಾವ್ ದುರಾಡಳಿತದ ವಿರುದ್ಧದ ಚಳವಳಿಗಳ ದಿನಗಳಲ್ಲಿ ಸೃಷ್ಟಿಯಾಗಿದ್ದ ಅವಕಾಶವೊಂದನ್ನು ಹೊರತುಪಡಿಸಿದರೆ ಉಳಿದೆಲ್ಲ ಸಂದರ್ಭಗಳಲ್ಲಿ ಪ್ರಾದೇಶಿಕ ಪಕ್ಷಗಳ ರಚನೆಯ ಪ್ರಯತ್ನಗಳು ತಾವಿದ್ದ ಪಕ್ಷದಿಂದ ಅನ್ಯಾಯ-ಅಪಮಾನಕ್ಕೀಡಾದ ಕಾರಣಕ್ಕೆ ಸಿಡಿದು ಹೊರಬಂದ ರಾಜಕೀಯ ನಾಯಕರಿಂದ ನಡೆದುದು.
ರಾಜ್ಯದ ಹಿತಕ್ಕೆ ಆಗಿರುವ ಅನ್ಯಾಯ ಇಲ್ಲವೇ ರಾಜ್ಯದ ಜನರಿಗೆ ಆಗಿರುವ ಅಪಮಾನಕ್ಕಲ್ಲ ಎನ್ನುವುದು ಮುಖ್ಯ ಕಾರಣ. ಅರಸು, ಬಂಗಾರಪ್ಪ, ದೇವೇಗೌಡ, ಹೆಗಡೆ, ಸಿದ್ದರಾಮಯ್ಯ- ಈ ಎಲ್ಲರ ವಿಷಯದಲ್ಲಿಯೂ ಇದು ಸತ್ಯ.
ಇದಕ್ಕೆ ಎರಡು ಅಪವಾದಗಳೆಂದರೆ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರು ರೈತಸಂಘದ ರಾಜಕೀಯ ಮುಖವಾಗಿ ಕಟ್ಟಿದ `ಕನ್ನಡ ನಾಡು~ ಮತ್ತು ಸಾಹಿತಿ ಪಿ.ಲಂಕೇಶ್ ಅವರು ವೈಯಕ್ತಿಕ ರಾಜಕೀಯ ಪ್ರಯೋಗದ ರೀತಿಯಲ್ಲಿ ಕಟ್ಟಿದ `ಪ್ರಗತಿರಂಗ~.
ಈ ಎರಡೂ ಪ್ರಯತ್ನಗಳಿಗೆ ರಾಜ್ಯದ ಎಲ್ಲ ಜನವರ್ಗಗಳ ಪ್ರಾತಿನಿಧಿಕ ಬೆಂಬಲವೂ ಇರದಿದ್ದ ಕಾರಣ ಅವುಗಳು ಕೂಡಾ ವಿಫಲ ಪ್ರಯೋಗಗಳಾಗಿ ಕಣ್ಣುಮುಚ್ಚಿದವು.
ಭಾಷೆ-ಪ್ರದೇಶಕ್ಕೆ ಸಂಬಂಧಿಸಿದಂತೆ ಅಂಧರಾಗಿ ಯೋಚಿಸದ ಮತ್ತು ಅತಿ ಎನಿಸುವಷ್ಟು ಉದಾರಿಗಳಾಗಿರುವ ಕನ್ನಡಿಗರ ಸ್ವಭಾವವೂ ಪ್ರಾದೇಶಿಕ ಪಕ್ಷದ ರಾಜಕಾರಣಕ್ಕೆ ವಿರುದ್ಧವಾಗಿದೆ.
ದುಡುಕು ಸ್ವಭಾವದವರಂತೆ ಕಾಣುವ ಬಿ.ಎಸ್.ಯಡಿಯೂರಪ್ಪನವರು ಪ್ರತ್ಯೇಕ ಪಕ್ಷ ರಚನೆಯ ಪ್ರಶ್ನೆ ಬಂದಾಗೆಲ್ಲ ಅಚ್ಚರಿ ಮೂಡುವಷ್ಟು ಎಚ್ಚರಿಕೆಯಿಂದ ವರ್ತಿಸುತ್ತಾ ಬಂದಿರಲು ಇದೂ ಕಾರಣ ಇರಬಹುದು.
ಈಗಲೂ ಅವರ ಸುತ್ತ ಇರುವ ಸಚಿವರು ಮತ್ತು ಸಂಸದರು `ಒಂದು ಕೈ ನೋಡಿಯೇ ಬಿಡುವ~ ಎಂದು ತೊಡೆ ತಟ್ಟುತ್ತಿದ್ದರೂ ಯಡಿಯೂರಪ್ಪನವರು ತಾನಿರುವ ಪಕ್ಷದ ಬಗ್ಗೆ ತನ್ನ ಬದ್ಧತೆಯನ್ನು ಸಾರುತ್ತಾ ಆ  ನಿರ್ಧಾರವನ್ನು ಉಪಾಯದಿಂದಲೇ ಮುಂದೂಡುತ್ತಾ ಬಂದಿದ್ದಾರೆ.
ಹಿಂದಿನ ಕೆಲವು ಬಿಕ್ಕಟ್ಟುಗಳ ಸಂದರ್ಭಗಳಲ್ಲಿಯೂ ಅವರು ಕಾಂಗ್ರೆಸ್ ಮತ್ತು ಜೆಡಿ (ಎಸ್) ಪಕ್ಷದ ಜತೆ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರೆಂಬ ಗಾಳಿಸುದ್ದಿ ಹರಡಿತ್ತೇ ಹೊರತು ಪ್ರಾದೇಶಿಕ ಪಕ್ಷ ರಚನೆಯ ಆಲೋಚನೆ ಗಾಳಿಯಲ್ಲಿಯೂ ತೇಲಿ ಬಂದಿರಲಿಲ್ಲ.

ಈಗಲೂ ಅವರು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಬಹುದೆಂಬ ಸುದ್ದಿಯೇ ಹರಿದಾಡುತ್ತಿದೆ.ಆದರೆ ಬಿ.ಎಸ್.ಯಡಿಯೂರಪ್ಪನವರು ಪ್ರಾದೇಶಿಕ ಪಕ್ಷವನ್ನು ಕಟ್ಟಿದರೆ ಅವರದ್ದೂ ಸೇರಿದಂತೆ ಹಲವರ ಸಮಸ್ಯೆಗಳು ಏಕಕಾಲಕ್ಕೆ ಪರಿಹಾರ ಕಾಣಬಹುದು.
ಪಕ್ಷದಿಂದ ತಮಗೆ ಅನ್ಯಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಸಂಕಟ ಪಡುತ್ತಿದ್ದರೆ, ಇವರನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೆ ಅವರ ಪಕ್ಷದ ನಾಯಕರು ತೊಳಲಾಡುತ್ತಿದ್ದಾರೆ. ಈ `ಕೊಡೆ-ಬಿಡೆ~ಗಳ ಬಿಕ್ಕಟ್ಟಿನಿಂದಾಗಿ ನಿರ್ಮಾಣಗೊಂಡಿರುವ ರಾಜಕೀಯ ಅತಂತ್ರದಿಂದ ರಾಜ್ಯದ ಜನ ಬೇಸತ್ತುಹೋಗಿದ್ದಾರೆ.
ಎಲ್ಲರ ಸಂಕಟಗಳ ನಿವಾರಣೆಗೆ ಇರುವ ಏಕೈಕ ಪರಿಹಾರ ಎಂದರೆ ಭಾರತೀಯ ಜನತಾ ಪಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಗೌರವಯುತವಾಗಿ ಪಕ್ಷದಿಂದ ಬೀಳ್ಕೊಟ್ಟು ಪ್ರಾದೇಶಿಕ ಪಕ್ಷ ಕಟ್ಟಲು ಅವರಿಗೆ ದಾರಿ ಮಾಡಿಕೊಡುವುದು.
ಇದರಿಂದ ಎಲ್ಲರ ಸಮಸ್ಯೆ ಪರಿಹಾರವಾಗುತ್ತದೆ. ಒಂದೊಮ್ಮೆ ಯಡಿಯೂರಪ್ಪನವರ ಪ್ರಾದೇಶಿಕ ಪಕ್ಷ ಯಶಸ್ಸು ಕಂಡರೆ ರಾಜ್ಯದ ಬಹುದಿನಗಳ ಕನಸೊಂದು ಈಡೇರಿದಂತಾಗುತ್ತದೆ. ಯಶಸ್ಸು ಕಾಣದೆ ಇದ್ದರೆ ಅವರು ತಮಗಿದೆ ಎಂದು ತಿಳಿದುಕೊಂಡಿರುವ ಜನಬೆಂಬಲದ ಬಗೆಗಿನ ಭ್ರಮೆಗಳಾದರೂ ಹರಿದುಹೋಗುತ್ತವೆ.
ಇದರಿಂದ ಅವರಿಗೆ, ಪಕ್ಷಕ್ಕೆ ಮತ್ತು ಜನತೆಗೆ ಎಲ್ಲರಿಗೂ ನೆಮ್ಮದಿ. ಇಲ್ಲಿಯ ವರೆಗೆ ಪ್ರಾದೇಶಿಕ ಪಕ್ಷ ಕಟ್ಟಲೆತ್ನಿಸಿದ ಹಿರಿಯ ರಾಜಕೀಯ ನಾಯಕರು ಕಲಿತದ್ದು ಇದೇ ಪಾಠ ಅಲ್ಲವೇ? ಈ ಪಾಠ ಯಡಿಯೂರಪ್ಪನವರ ಹಳೆಯ ಸಹೋದ್ಯೋಗಿ ಶ್ರಿರಾಮಲು ಅವರಿಗೂ ಅನ್ವಯವಾಗುತ್ತದೆ.

Monday, December 12, 2011

ಬಳ್ಳಾರಿ ರಿಪಬ್ಲಿಕ್ ವಿಸ್ತರಣೆಗೆ ಶ್ರೀರಾಮುಲು ನಾಯಕತ್ವ?

ಭಾರತದಲ್ಲಿ ಜಾತ್ಯತೀತ ನಾಯಕರಾಗುವುದು ಬಹಳ ಸುಲಭದ ಕೆಲಸ. ಮೊದಲು ಬಿಜೆಪಿಯಲ್ಲಿದ್ದು ಜಾತ್ಯತೀತರನ್ನೆಲ್ಲ ವಿರೋಧಿಸಬೇಕು, ನಂತರ ಆ ಪಕ್ಷವನ್ನು ವಿರೋಧಿಸಿ ಹೊರಗೆ ಬರಬೇಕು. ಅಲ್ಲಿಗೆ ಅವರು ಪ್ರಶ್ನಾತೀತ ಜಾತ್ಯತೀತ ನಾಯಕರು.
ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದ ರಾಜಕಾರಣದಲ್ಲಿ ನಮ್ಮ ಹಲವಾರು ತಥಾಕಥಿತ ಸೆಕ್ಯುಲರ್ ನಾಯಕರ ನಡವಳಿಕೆಯನ್ನು ಗಮನಿಸಿದರೆ ಅದರಲ್ಲಿ ಇಂತಹ ಆತ್ಮವಂಚನೆಯ ರಾಜಕೀಯವನ್ನು ಕಾಣಬಹುದು.
ಗುಜರಾತ್‌ನ  `ಕೋಮುವಾದಿ~ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಎದುರಾಗಿ ಕಾಂಗ್ರೆಸ್ ತಂದು ನಿಲ್ಲಿಸಿದ್ದು ಶಂಕರ್‌ಸಿಂಗ್ ವಘೇಲಾ ಎಂಬ ಬಿಜೆಪಿಯ ಮಾಜಿ ನಾಯಕನನ್ನು.

ಮಹಾರಾಷ್ಟ್ರದಲ್ಲಿ ಬಾಳ ಠಾಕ್ರೆ ಮತ್ತು ಕುಟುಂಬಕ್ಕೆ ಸವಾಲು ಹಾಕುತ್ತಿರುವವರು ಈಗ ಕಾಂಗ್ರೆಸ್‌ನಲ್ಲಿರುವ ಶಿವಸೇನೆಯ ಮಾಜಿ ನಾಯಕ ಸಂಜಯ್ ನಿರುಪಮ್. ಗುಜರಾತ್, ಮಹಾರಾಷ್ಟ್ರಗಳಲ್ಲಿ ಈಗಲೂ ಈ ವಲಸೆ ನಡೆಯುತ್ತಲೇ ಇದೆ.

ಇಷ್ಟು ಮಾತ್ರವಲ್ಲ, ಈಗಿನ ಜಾತ್ಯತೀತರ ಶಿಬಿರದಲ್ಲಿರುವ ಮಾಯಾವತಿ, ಎಂ.ಕರುಣಾನಿಧಿ, ಚಂದ್ರಬಾಬು ನಾಯ್ಡು, ನವೀನ್ ಪಟ್ನಾಯಕ್, ರಾಮ್‌ವಿಲಾಸ್ ಪಾಸ್ವಾನ್, ಎಚ್.ಡಿ.ಕುಮಾರಸ್ವಾಮಿ ಮೊದಲಾದವರೆಲ್ಲರೂ ಬಿಜೆಪಿಯ `ಕೋಮುವಾದದ ರಾಜಕೀಯ~ದಲ್ಲಿ ಮುಳುಗಿ ಎದ್ದು ಬಂದವರೇ ಆಗಿದ್ದಾರೆ.
ಇವರಲ್ಲಿ ಯಾರೂ ಕೂಡಾ ಮತ್ತೆ ಬಿಜೆಪಿ ತೆಕ್ಕೆಗೆ ಹೋಗಿ ಬೀಳಲಾರರು ಎಂಬ ಬಗ್ಗೆ ಖಾತರಿ ಇಲ್ಲ. ಸದ್ಯಕ್ಕೆ ಇವರೆಲ್ಲ ಜಾತ್ಯತೀತರು. ಈ ಗುಂಪಿಗೆ ಕರ್ನಾಟಕದ ಕೊಡುಗೆ ಬಳ್ಳಾರಿಯ ಶ್ರಿರಾಮುಲು.
ಬಳ್ಳಾರಿ ಉಪಚುನಾವಣೆಯ ಗೆಲುವಿನಲ್ಲಿ ಕೆಲವರು ಸೆಕ್ಯುಲರ್ ನಾಯಕನೊಬ್ಬ ಉದಯವನ್ನು, ಇನ್ನು ಕೆಲವರು ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರ ಭಾಗ್ಯವಿಧಾತನ ಅವತಾರವನ್ನು ಕಾಣತೊಡಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜಾತ್ಯತೀತ ಜನತಾದಳಕ್ಕೆ ಶ್ರಿರಾಮುಲು ಅವರನ್ನು ಸ್ವಾಗತಿಸಲು ಆರತಿತಟ್ಟೆ ಹಿಡಿದುಕೊಂಡು ಕಾಯುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿಯೇತರ `ಅಹಿಂದ~ ನಾಯಕರು ಬಿಜೆಪಿಯ `ಲಂಕೆಯನ್ನು ಧ್ವಂಸ~ ಮಾಡಲು ಹೊರಟಿರುವ ಶ್ರಿರಾ(ಮ)ಮುಲು ಸೇನೆಗೆ ಭರ್ತಿಯಾಗಲು ಸರತಿಯ ಸಾಲಲ್ಲಿ ನಿಂತಿದ್ದಾರೆ. ರಾಜ್ಯದ ಸೆಕ್ಯುಲರ್  ಮತ್ತು `ಅಹಿಂದ~ ನಾಯಕರ ಸದ್ಯದ ಕಣ್ಮಣಿ ಶ್ರಿರಾಮುಲು.
ಬಿಜೆಪಿಯ ಸಂಗದಲ್ಲಿದ್ದ ರಾಷ್ಟ್ರೀಯ ನಾಯಕರು ಅದರಿಂದ ಹೊರಗೆ ಬಂದಾಗ ಹೇಳಿಕೊಳ್ಳಲಿಕ್ಕಾದರೂ ಸರಿಯಾದ ಕಾರಣಗಳನ್ನು ಇಟ್ಟುಕೊಂಡಿದ್ದರು. ಶ್ರಿರಾಮುಲು ಬಿಜೆಪಿ ತೊರೆಯಲು ಏನು ಕಾರಣ? ಹಿಂದಿನ ಮೂರು ವರ್ಷಗಳಲ್ಲಿ ನಡೆಸದ ಕೋಮುವಾದಿ ಚಟುವಟಿಕೆಗಳನ್ನು ಬಿಜೆಪಿ ಕಳೆದೆರಡು ತಿಂಗಳಲ್ಲಿ ನಡೆಸಿದೆಯೇ?
ಹಿಂದುಳಿದ ಜಾತಿ ಜನರಿಗೆ ಇತ್ತೀಚೆಗೆ ಏನಾದರೂ ಅನ್ಯಾಯ ಮಾಡಿದೆಯೇ? ದಲಿತರ ಮೇಲೆ ದೌರ್ಜನ್ಯ ಪ್ರಾರಂಭಿಸಿದೆಯೇ?  ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಪ್ರಾರಂಭ ಮಾಡಿದ ಮೊದಲ ಕೆಲಸ ಹಿಂದುಳಿದ ವರ್ಗಗಳ ಆಯೋಗದ ಮೇಲೆ ದಾಳಿ.

ಅದರ ಅಧ್ಯಕ್ಷರಾಗಿದ್ದ ಸಿ.ಎಸ್.ದ್ವಾರಕನಾಥ್ ಅವರನ್ನು ಕಿತ್ತುಹಾಕಲು ನಿರಂತರವಾಗಿ ಅದು ಪ್ರಯತ್ನ ನಡೆಸಿತು. ರಾಜ್ಯದಲ್ಲಿ ಜಾತಿಗಣತಿ ನಡೆಸಲಿಕ್ಕಾಗಿ ಕೇಂದ್ರ ಸರ್ಕಾರ ಅನುದಾನ ನೀಡಿದರೂ ಆ ಕೆಲಸ ಪ್ರಾರಂಭಿಸಲು ಅವಕಾಶವನ್ನೇ ನೀಡಲಿಲ್ಲ. ದ್ವಾರಕಾನಾಥ್ ಅವರು ಕಷ್ಟಪಟ್ಟು ತಯಾರಿಸಿದ ವರದಿಯ ಗತಿ ಏನಾಯಿತೋ ಗೊತ್ತಿಲ್ಲ.
ಇವೆಲ್ಲವೂ ನಡೆಯುತ್ತಿರುವಾಗ ಶ್ರಿರಾಮುಲು ಬಳ್ಳಾರಿ ಮತ್ತು ಬೆಂಗಳೂರು ನಡುವೆ ಹೆಲಿಕಾಪ್ಟರ್‌ನಲ್ಲಿ ಹಾರಾಡುತ್ತಾ ಬಿಜೆಪಿಯಲ್ಲಿಯೇ ಇದ್ದರಲ್ಲವೇ? ಅವರೆಂದಾದರೂ ಇದರ ವಿರುದ್ಧ ದನಿ ಎತ್ತಿದ್ದರೇ? ಈಗ ಪ್ರತಿನಿಧಿಸಲು ಹೊರಟ `ಅಹಿಂದ~ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ರಾಜೀನಾಮೆ ಕೊಡಲು ಮುಂದಾಗಿದ್ದರೇ?

ಕನಿಷ್ಠ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಡೆಸ್ನಾನದ ಮೇಲೆ ಹೇರಲಾದ ನಿಷೇಧವನ್ನು ಬಿಜೆಪಿ ಸರ್ಕಾರ ವಾಪಸು ಪಡೆದುದನ್ನಾದರೂ ಶ್ರೀರಾಮುಲು ಎಲ್ಲಾದರೂ ವಿರೋಧಿಸಿದ್ದಾರೆಯೇ?
ಹಾಗಿದ್ದರೆ ಅವರು ಬಿಜೆಪಿ ತೊರೆಯಲು ಏನು ಕಾರಣ? ಶ್ರಿರಾಮುಲು ಅವರೇ ಹೇಳಿಕೊಂಡ ಕಾರಣ- ಲೋಕಾಯುಕ್ತ ವರದಿಯಲ್ಲಿನ ಆರೋಪಿಗಳ ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡ ನಂತರ ಅವರನ್ನು ಸಂಪುಟದಿಂದ ಕೈಬಿಟ್ಟದ್ದು.

ಇದರಿಂದ ಜಾತ್ಯತೀತ ಮೌಲ್ಯದ ಮಾನಭಂಗ ಹೇಗಾಯಿತೋ, ರಾಜ್ಯದ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರ ಸ್ವಾಭಿಮಾನಕ್ಕೆ ಹೇಗೆ ಧಕ್ಕೆಯಾಯಿತೋ, ಅವರು ಇದ್ದಕ್ಕಿದ್ದಂತೆ ವಾಲ್ಮೀಕಿ, ಏಕಲವ್ಯ, ಕರ್ಣ ಮೊದಲಾದ ಪುರಾಣಪುರುಷರ ಅಪರವತಾರ ಹೇಗಾದರೋ ಗೊತ್ತಾಗುತ್ತಿಲ್ಲ.
ಒಂದೊಮ್ಮೆ ಶ್ರಿರಾಮುಲು ಅವರ ಈಗಿನ ಜಾತ್ಯತೀತ ರಾಜಕೀಯ ನಿಲುವು ಪ್ರಾಮಾಣಿಕವಾದುದು ಎಂದೇ ತಿಳಿದುಕೊಂಡರೂ ಅವರ ಮೇಲಿನ ಅಕ್ರಮ ಗಣಿಗಾರಿಕೆಯ ಆರೋಪಗಳನ್ನು ಹೇಗೆ ಮನ್ನಿಸಲು ಸಾಧ್ಯ?

ನಗ್ನ ಸತ್ಯ ಏನೆಂದರೆ ಶ್ರಿರಾಮುಲು ಅವರು ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯಶೆಟ್ಟಿ ಮೊದಲಾದವರಂತೆ ಒಬ್ಬ ಕಳಂಕಿತರು, ಭ್ರಷ್ಟಾಚಾರದ ಆರೋಪಗಳನ್ನು ತಲೆಮೇಲೆ ಹೊತ್ತುಕೊಂಡವರು.
ಬಿಜೆಪಿಯನ್ನು ತೊರೆದು ಹೊರಬಂದ ಮಾತ್ರಕ್ಕೆ ಇವರಿಗೆ ಮೆತ್ತಿಕೊಂಡ ಭ್ರಷ್ಟಾಚಾರದ ಕಳಂಕ ಏಕಾಏಕಿ ತೊಡೆದುಹೋಗಲಾರದು. ಬಳ್ಳಾರಿಯ ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡಿದ ಮತ್ತು ಸರ್ಕಾರದ ಖಜಾನೆಗೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡಿದ ಆರೋಪದಿಂದ ಮುಕ್ತಿ ಪಡೆಯಲಾರರು.
ದೇಶದ ಜಾತ್ಯತೀತ ಮತ್ತು `ಅಹಿಂದ~ ನಾಯಕರು ಕೂಡಾ ಮಾಡುತ್ತಾ ಬಂದಿರುವುದು ಇದೇ ತಪ್ಪನ್ನು. ಲಾಲುಪ್ರಸಾದ್ ತನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಾಗೆಲ್ಲ ಅದು ಜಾತ್ಯತೀತ ನಾಯಕನೊಬ್ಬನನ್ನು ದಮನಮಾಡುವ ಕೋಮುವಾದಿಗಳ ಸಂಚು ಎಂದೇ ಆರೋಪಿಸುತ್ತಿದ್ದರು.

ಮುಲಾಯಂ ಸಿಂಗ್, ಮಾಯಾವತಿ ಸೇರಿದಂತೆ ಬಹುತೇಕ ಸೆಕ್ಯುಲರ್ ಭ್ರಷ್ಟರು  ಒಂದು ಸಂದರ್ಭದಲ್ಲಿ ತಮ್ಮ ಹುಳುಕನ್ನು ಬಚ್ಚಿಡಲು ಈ ಆರೋಪ ಮಾಡುತ್ತಾ ಬಂದಿದ್ದಾರೆ. ಇದನ್ನು ನೋಡಿದರೆ ಕೋಮುವಾದ ಮಾತ್ರವಲ್ಲ, ಭ್ರಷ್ಟಾಚಾರ ಹೆಚ್ಚಾಗಲು ಕೂಡಾ ಬಿಜೆಪಿ ಕಾರಣ ಎನ್ನಬಹುದೇನೋ?

ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡಿದರೆ ಕರ್ನಾಟಕ ಕೋಮುವಾದದ ಬೆಂಕಿಯಲ್ಲಿ ಸುಟ್ಟುಹೋಗಲಿದೆ ಎಂಬ ಕಾರಣವನ್ನೇ ತನ್ನ ವಚನಭಂಗಕ್ಕೆ ಎಚ್.ಡಿ.ಕುಮಾರಸ್ವಾಮಿ ನೀಡಿದ್ದಲ್ಲವೇ? ಆ ಮೂಲಕ ಜಾತ್ಯತೀತನೆಂಬ ಕಿರೀಟವನ್ನು ಮರಳಿ ಮುಡಿಗೇರಿಸಿಕೊಂಡದ್ದಲ್ಲವೇ?
ಭ್ರಷ್ಟಾಚಾರದ ಭಾಗವಾಗಿರುವ ಅಕ್ರಮ ಗಣಿಗಾರಿಕೆಯಿಂದ ಪ್ರಜ್ಞಾಪೂರ್ವಕವಾಗಿ ದೂರ ಸರಿಯುವ ಪಶ್ಚಾತ್ತಾಪದ ಆಶಯವನ್ನು ತೋರಿಕೆಗಾಗಿಯಾದರೂ ಶ್ರಿರಾಮುಲು ವ್ಯಕ್ತಪಡಿಸಿದ್ದರೆ ಅವರ ಹಿಂದೆ ಹೊರಟವರಿಗೆ ಕನಿಷ್ಠ ಗೌರವವಾದರೂ ಇರುತ್ತಿತ್ತು.

ಈಗಲೂ ಶ್ರಿರಾಮುಲು ಅವರ ನಿಷ್ಠೆ ತನ್ನ ಮತದಾರರರು ಇಲ್ಲವೇ ಬೆಂಬಲಿಗರಾದ ಜಾತ್ಯತೀತ ನಾಯಕರ ಮೇಲೆ ಅಲ್ಲ, ಅದು ಅಕ್ರಮ ಗಣಿಗಾರಿಕೆಯ ಪ್ರಮುಖ ಆರೋಪಿ ಜನಾರ್ದನ ರೆಡ್ಡಿಯವರ ಮೇಲೆ.
ಚುನಾವಣೆಯಲ್ಲಿ ಗೆದ್ದ ಮರುಕ್ಷಣದಲ್ಲಿ ಅವರು ಸ್ಮರಿಸಿಕೊಂಡದ್ದು ಅಂಬೇಡ್ಕರ್ ಇಲ್ಲವೇ ದೇವರಾಜ ಅರಸು ಅವರನ್ನಲ್ಲ. ಈ ಭೂಮಿ ಇರುವಷ್ಟು ದಿನ ರಾಜ್ಯದ ಹಿಂದುಳಿದ ಜಾತಿ ಜನ ಕೃತಜ್ಞರಾಗಬೇಕಾಗಿರುವ ಲಕ್ಷ್ಮಣ ಜಿ. ಹಾವನೂರು ಅವರನ್ನೂ ಅಲ್ಲ. ಅವರು ಸ್ಮರಿಸಿಕೊಂಡದ್ದು ಜನಾರ್ದನ ರೆಡ್ಡಿಯವರನ್ನು.

`ಜನಾರ್ದನ ರೆಡ್ಡಿಯವರ ಸಲಹೆಯನ್ನು ಪಡೆದು ನನ್ನ ಮುಂದಿನ ರಾಜಕೀಯದ ನಿರ್ಧಾರ ಕೈಗೊಳ್ಳುತ್ತೇನೆ~ ಎಂದಲ್ಲವೇ ಚುನಾವಣೆಯಲ್ಲಿ ಗೆಲುವಿನ ಮರುಕ್ಷಣದಲ್ಲಿ ಶ್ರಿರಾಮುಲು ಹೇಳಿದ್ದು.
`ಸೆರೆಮನೆಯಲ್ಲಿರುವ ಒಬ್ಬ ವಿಚಾರಣಾಧೀನ ಕೈದಿಯ ಮಾರ್ಗದರ್ಶನದಲ್ಲಿ ರಾಜಕೀಯ ಮಾಡುತ್ತೇನೆ~ ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಅಕ್ರಮ ಗಣಿಗಾರಿಕೆಯ ಆರೋಪಿ ಶ್ರಿರಾಮುಲು ಅವರನ್ನು ನಾಯಕನೆಂದು ಒಪ್ಪಿಕೊಳ್ಳುವುದಾದರೆ, ನಾಳೆ ಬಿಜೆಪಿಯ ಶಾಸಕರು ಕೂಡಿ ಭ್ರಷ್ಟಾಚಾರದ ಆರೋಪಗಳನ್ನು ಇನ್ನೂ ಎದುರಿಸುತ್ತಿರುವ ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಯಾವ ನೈತಿಕತೆಯ ಮೇಲೆ ವಿರೋಧಿಸಲು ಸಾಧ್ಯ?
`ಯಾವ ರಾಜಕಾರಣಿ ಭ್ರಷ್ಟನಾಗಿರಲಿಲ್ಲ~ ಎಂದು ಶ್ರಿರಾಮುಲು ಅಭಿಮಾನಿಗಳು ಕೇಳಬಹುದು. ಹಿಂದುಳಿದ ವರ್ಗಗಳ ನಾಯಕನೆಂದು ಹೇಳುವ ದೇವರಾಜ ಅರಸು ಅವರು ಭ್ರಷ್ಟಾಚಾರ ನಡೆಸಿಲ್ಲವೇ ಎಂದು ಉಡಾಫೆಯಾಗಿ ಕೇಳಿ ಬಾಯಿಮುಚ್ಚಿಸುವ ಪ್ರಯತ್ನವನ್ನೂ ಕೆಲವರು ಮಾಡುತ್ತಿದ್ದಾರೆ.
ಜಾತಿಯ ಬಲ ಇಲ್ಲದ ಅರಸು ಭ್ರಷ್ಟಾಚಾರಕ್ಕೆ ಕೈ ಹಾಕಬೇಕಾಗಿ ಬಂದದ್ದು ಭ್ರಷ್ಟ ಶಾಸಕರ ಬೆಂಬಲವನ್ನು ಉಳಿಸಿಕೊಳ್ಳಲಿಕ್ಕಾಗಿ ಮತ್ತು ಅದರ ಮೂಲಕ ಗಳಿಸುವ ರಾಜಕೀಯ ಅಧಿಕಾರದಿಂದ ಭೂ ಸುಧಾರಣೆ, ಮೀಸಲಾತಿ, ಜೀತಪದ್ಧತಿ ನಿರ್ಮೂಲನೆ, ಋಣ ಪರಿಹಾರ, ಮಲಹೊರುವ ಪದ್ಧತಿ ನಿಷೇಧದಂತಹ ಸಾಮಾಜಿಕ ನ್ಯಾಯದ ಕಾರ‌್ಯಕ್ರಮಗಳನ್ನು ಅನುಷ್ಠಾನಗೊಳಿಸಲಿಕ್ಕಾಗಿ.

ಆ ಶಾಸಕರು (ಅವರಲ್ಲಿ ಹೆಚ್ಚಿನವರು ಹಿಂದುಳಿದ ಜಾತಿಯವರು) ಭ್ರಷ್ಟರಾಗದೆ ಇದ್ದಿದ್ದರೆ ಅರಸು ಖಂಡಿತ ಭ್ರಷ್ಟರಾಗುತ್ತಿರಲಿಲ್ಲ. ಅರಸು ವೈಯಕ್ತಿಕವಾಗಿ ಭ್ರಷ್ಟರಾಗಿದ್ದರು ಎನ್ನುವುದಕ್ಕೆ ಗ್ರೋವರ್ ಆಯೋಗಕ್ಕೂ ಪುರಾವೆಗಳು ಸಿಗಲಿಲ್ಲ ಎನ್ನುವುದನ್ನು ನಮ್ಮ ಅನೇಕ ಇತಿಹಾಸಕಾರರು ಮತ್ತು ರಾಜಕೀಯ ವಿಶ್ಲೇಷಕರು ಮರೆತೇ ಬಿಡುತ್ತಾರೆ.

ನಿಜ, ರಾಜಕಾರಣಿಗಳು ಆಗಲೂ ಭ್ರಷ್ಟರಾಗಿದ್ದರು, ಈಗಲೂ ಅದಕ್ಕೆ ಹೊರತಲ್ಲ.. ಆದರೆ, ಅವರು ಭ್ರಷ್ಟರಾದರೆ ಅವರನ್ನು ನಿವಾರಿಸಿಕೊಳ್ಳಲು ಚುನಾವಣೆಯ ಅಸ್ತ್ರ ಇದೆ. ಆದರೆ ಈ ಅಸ್ತ್ರ ಪ್ರಯೋಗ ಮಾಡಬೇಕಾದ ಮತದಾರರೇ ಭ್ರಷ್ಟರಾದರೇ?
ಕರ್ನಾಟಕ ರಾಜಕಾರಣಕ್ಕೆ `ಬಳ್ಳಾರಿ ರಿಪಬ್ಲಿಕ್~ನ ಮಹಾ ಕೊಡುಗೆ ಇದು. ಅದು ಬಳ್ಳಾರಿ ಮಾತ್ರವಲ್ಲ, ರಾಜ್ಯದ ಮತದಾರರನ್ನೇ ಭ್ರಷ್ಟಗೊಳಿಸಲು ಹೊರಟಿದೆ. ಚುನಾವಣೆ ಕಾಲದಲ್ಲಿ ಹಿಂದೆಯೂ ಹಣ-ಹೆಂಡ ಹಂಚಲಾಗುತ್ತಿತ್ತು.

ಆದರೆ, ಅದನ್ನು ಕೊಟ್ಟವರಿಗೆಲ್ಲ, ಅದನ್ನು ಪಡೆದವರು ಮತಹಾಕುತ್ತಾರೆ ಎನ್ನುವ ಖಾತರಿ ಇರಲಿಲ್ಲ. ಯಾಕೆಂದರೆ ಆ ಆಮಿಷಗಳು ಒಂದು ದಿನದ ಮೋಜು-ಜೂಜಿಗಷ್ಟೇ ಸಾಕಾಗುತ್ತಿತ್ತು. ಆದರೆ, ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ ಮತದಾರರಿಗೆ ಒಡ್ಡಲಾಗುತ್ತಿರುವ ಆಮಿಷಗಳಿಗೆ ಮಿತಿಯೇ ಇಲ್ಲದಂತಾಗಿದೆ.

ಬಳ್ಳಾರಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶವೊಂದನ್ನು ಹೊರತುಪಡಿಸಿದರೆ ಬೇರೆ ಯಾವ ರಾಜ್ಯದಲ್ಲಿಯೂ ಚುನಾವಣಾ ಕಾಲದಲ್ಲಿ ಈ ರೀತಿಯ ಹಣದ ಹೊಳೆ ಹರಿದಿಲ್ಲ. `ಆಪರೇಷನ್ ಕಮಲ~ ಎಂಬ ಅನೈತಿಕ ರಾಜಕಾರಣವೇ `ಬಳ್ಳಾರಿ ರಿಪಬ್ಲಿಕ್~ನ ಕಪ್ಪುಹಣದಿಂದಲೇ ಪ್ರಾರಂಭವಾಗಿದ್ದಲ್ಲವೇ?
ಕಳೆದ ವಿಧಾನಸಭಾ ಚುನಾವಣಾ ಕಾಲದಲ್ಲಿ ಹಂಪಿ ವಿಶ್ವವಿದ್ಯಾಲಯ ಪ್ರಾಧ್ಯಾಪಕರೊಬ್ಬರು ಮನೆಕೆಲಸದಾಕೆ ಬರುತ್ತಿಲ್ಲ ಎಂದು ಒದ್ದಾಡುತ್ತಿದ್ದರು. ಚುನಾವಣಾ ಕಾಲದಲ್ಲಿ ಹತ್ತು ದಿನ ರಜೆ ಹಾಕಿ ಆಕೆ ಪ್ರಚಾರಕ್ಕೆ ಹೋಗಿದ್ದಳಂತೆ.

ಮತದಾನದ ಮರುದಿನ ಬಂದ ಆಕೆ `ಹತ್ತು ದಿನಗಳಲ್ಲಿ ನಾವು ನಾಲ್ಕು ಮಂದಿ 30 ಸಾವಿರ ರೂಪಾಯಿ ದುಡಿದೆವು, ಇನ್ನು ಮುಂದೆಯೂ ಅಣ್ಣಾವ್ರ ದುಡ್ಡು ಕೊಡುತ್ತೇನೆ ಎಂದಿದ್ದಾರೆ ~ ಎಂದು ಹೇಳಿದಳಂತೆ. ಅವಳಂತಹವರ ನಂಬಿಕೆಯೇನು ಹುಸಿಯಾಗಿಲ್ಲ.
ಬಳ್ಳಾರಿ ಜಿಲ್ಲೆಯನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸುವವರು ಕೇವಲ ಶಾಸಕರಲ್ಲ, ಅವರೆಲ್ಲ ಆಧುನಿಕ `ರಾಬಿನ್ ಹುಡ್~ಗಳು. ಮಗಳ ಮದುವೆಗೆ, ಮಗನ ಓದಿಗೆ, ಗಂಡನ ಕಾಯಿಲೆಗೆ ದುಡ್ಡು ಕೇಳಲು ಹೋದರೆ ಸಾಮಾನ್ಯವಾಗಿ ಅವರು ಬರಿಗೈಯಲ್ಲಿ ಹಿಂದಕ್ಕೆ ಕಳುಹಿಸುವುದಿಲ್ಲ.
ರಾಜ್ಯದ ಬೊಕ್ಕಸಕ್ಕೆ ದ್ರೋಹವೆಸಗಿ ಅಕ್ರಮ ಗಣಿಗಾರಿಕೆಯಿಂದ ಸಂಪಾದನೆ ಮಾಡಿದ ನೂರಾರು ಕೋಟಿ ರೂಪಾಯಿ ಹಣದಲ್ಲಿ ಒಂದಷ್ಟು ಸಾವಿರ ರೂಪಾಯಿಗಳನ್ನು ನಮಗೆ ಹಂಚಲಾಗುತ್ತಿದೆ ಎಂದು ಈ ಮುಗ್ಧ ಮತದಾರರಿಗೆ ಗೊತ್ತಿಲ್ಲ.

ಗೊತ್ತಿದ್ದರೂ ಅದರ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ. `ರಸ್ತೆ, ಶಾಲೆ, ಆಸ್ಪತ್ರೆ ಯಾರಿಗೆ ಬೇಕ್ರಿ? ಅವರು ಕೊಟ್ಟಿದ್ದಾರೆ, ನೀವೇನು ಕೊಡ್ತೀರಿ?~ ಎಂದು ಮತದಾರರೇ ಕೈಚಾಚಿ ನಿಂತರೆ, ಅಲ್ಲಿಗೆ ಪ್ರಜಾಪ್ರಭುತ್ವದ ತಿಥಿ. ಇದನ್ನೇ `ಬನಾನ ರಿಪಬ್ಲಿಕ್~ ಎನ್ನುವುದು.
ರಾಜ್ಯದ ಜಾತ್ಯತೀತ ಮತ್ತು ಅಹಿಂದ ನಾಯಕರು ಈಗ `ಬನಾನ ರಿಪಬ್ಲಿಕ್~ನ ಸಾಮ್ರಾಜ್ಯವನ್ನು `ಸ್ವಾಭಿಮಾನಿ ನಾಯಕ~ನ ನೇತೃತ್ವದಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸುವ ಅವಸರದಲ್ಲಿದ್ದಾರೆ. ಅವಸರದ ಕೆಲಸ ಯಾವತ್ತೂ ಅಪಘಾತಕ್ಕೆ ದಾರಿ ಎಂದು ಇವರಿಗೆ ಹೇಳುವವರು ಯಾರು?