Monday, September 5, 2011

ರಾಳೇಗಣ ಸಿದ್ಧಿ ಮತ್ತು ರಾಮಲೀಲಾ ಮೈದಾನ

ಮಂಗಳೂರು ಸಮೀಪದ ಹಳ್ಳಿಯೊಂದರಲ್ಲಿರುವ ಸಂಬಂಧಿಕರೊಬ್ಬರು  ನನಗೆ ಪೋನ್ ಮಾಡಿ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಮನಸಾರೆ ಶಾಪ ಹಾಕುತ್ತಿದ್ದರು (ಸದ್ಯಕ್ಕೆ ಅವರ ಹೆಸರು ರಾಂಪಣ್ಣ ಎಂದಿಟ್ಟುಕೊಳ್ಳೋಣ). ಕಳೆದ ವಾರದ ನನ್ನ ಅಂಕಣವನ್ನು ಓದಿದ್ದ ರಾಂಪಣ್ಣ `ನಾವು  ನಮ್ಮ ಮಕ್ಕಳಿಂದ ಬೀದಿಗೆ ಬಿದ್ದಿರುವಂತೆ, ಆ ಮನಮೋಹನ್‌ಸಿಂಗ್ ತಮ್ಮ `ಮಕ್ಕಳಿಂದ~ ಬೀದಿಗೆ ಬೀಳಬೇಕು. ಸರಿಯಾಗಿಯೇ ಬರೆದಿದ್ದೀರಿ~ ಎಂದು ಸಿಟ್ಟು ಕಾರಿಕೊಳ್ಳುತ್ತಿದ್ದರು. ವೃತ್ತಿಯಲ್ಲಿ ಕೃಷಿಕರಾಗಿರುವ ರಾಂಪಣ್ಣನವರಿಗೆ ಈಗ ಸುಮಾರು 70 ವರ್ಷ. ತನ್ನ ಯೌವ್ವನದ ದಿನಗಳಲ್ಲಿ ಯುವಕ ಸಂಘ ಕಟ್ಟಿ ಊರಿಗೆ ರಸ್ತೆ, ಕುಡಿಯುವ ನೀರು, ಶಾಲೆ ಬರಲು ಕಾರಣರಾದವರು ಅವರು. ಬಹಳ ಕಷ್ಟದಲ್ಲಿಯೇ ಹೊಟ್ಟೆಬಟ್ಟೆ ಕಟ್ಟಿ ಒಬ್ಬಳು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳನ್ನು ಎಂಜಿನಿಯರಿಂಗ್ ಓದಿಸಿದ್ದಾರೆ. ಹಿರಿಯ ಮಗ ಮುಂಬೈನಲ್ಲಿದ್ದಾನೆ, ಕಿರಿಯವನು ದೆಹಲಿಯಲ್ಲಿದ್ದಾನೆ ಮತ್ತು ಮಗಳು ಅಮೆರಿಕಾದಲ್ಲಿದ್ದಾಳೆ. ಎಲ್ಲರಿಗೂ ಅವರದ್ದೇ ಆಗಿರುವ ಸಂಸಾರ ಇದೆ. ಈಗ ಇರುವ ಪಟ್ಟಣಗಳಲ್ಲಿಯೇ ನೆಲೆ ಊರಿದ್ದಾರೆ.
ಎರಡು ವರ್ಷಗಳ ಹಿಂದೆ ಮಕ್ಕಳೆಲ್ಲ ಕೂಡಿ ತಂದೆ-ತಾಯಿಗೆ ದೊಡ್ಡ ಮನೆ ಕಟ್ಟಿಸಿಕೊಟ್ಟಿದ್ದಾರೆ. ಹಣಕ್ಕೇನೂ ಕೊರತೆ ಇಲ್ಲ, ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಮಕ್ಕಳು ತಪ್ಪದೆ ಹಣ ತುಂಬುತ್ತಾರೆ. ಆದರೇನು ಫಲ? ರಾಂಪಣ್ಣನಿಗೆ ವೃದ್ಧಾಪ್ಯಸಹಜ ಕಾಯಿಲೆಗಳೆಲ್ಲ ಇವೆ. ಹೆಂಡತಿ ಮಂಡಿನೋವಿನಿಂದಾಗಿ ಎದ್ದು ಓಡಾಡುವ ಸ್ಥಿತಿಯಲ್ಲಿಲ್ಲ,  ಎಲ್ಲದ್ದಕ್ಕೂ ಮತ್ತೊಬ್ಬರನ್ನು ಆಶ್ರಯಿಸಬೇಕಾದ ದಯನೀಯ ಸ್ಥಿತಿ.
ಎಲ್ಲವೂ ಇದೆ. `ಹೇಗಿದ್ದೀರಿ ಅಪ್ಪಾ, ಅಮ್ಮಾ?~  ಎಂದು ಪಕ್ಕದಲ್ಲಿ ಕುಳಿತು ಕೇಳುವವರೇ ಇಲ್ಲ.  ವರ್ಷಗಳ ಹಿಂದೆ ತಮ್ಮ ಬುದ್ಧಿವಂತ ಮಕ್ಕಳ ಬಗ್ಗೆ ಹೆಮ್ಮೆಯಿಂದ ಬಾಯ್ತುಂಬ ಮಾತನಾಡುತ್ತಿದ್ದ ರಾಂಪಣ್ಣ ಈಗ ಅವರ ಹೆಸರೆತ್ತಿದರೆ ಸಿಡಿಯುತ್ತಾರೆ. `ಮುಪ್ಪಿನ ಕಾಲದಲ್ಲಿ ನಮ್ಮನ್ನು ಬೀದಿಗೆ ಹಾಕಿದ ಮಕ್ಕಳು ಇದ್ದರೇನು, ಬಿಟ್ಟರೇನು~ ಎಂದು ಕೇಳುತ್ತಿದ್ದಾರೆ. `ನನ್ನದೇ ತಪ್ಪು, ಸುಮ್ಮನೆ ಒಂದು ಡಿಗ್ರಿ ಓದಿಸಿದ್ದರೆ ಇಲ್ಲಿಯೇ ಯಾವುದಾದರೂ ಬ್ಯಾಂಕಿನಲ್ಲೋ, ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿಕೊಂಡು ನಮ್ಮ ಬಳಿ ಇರುತ್ತಿದ್ದರು. ಏನೂ ಓದಿಸದೆ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು, ಇಲ್ಲಿಯೇ ಕೃಷಿ ಮಾಡಿಕೊಂಡು ಬಿದ್ದಿರುತ್ತಿದ್ದರು. ಅದೇನೋ ಐಟಿ-ಬಿಟಿಯಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಕೊಡುತ್ತಿದ್ದಾರೆ. ಈ ಕೃಷಿ ನಂಬಿ ಅವರು ಹಾಳಾಗುವುದು ಬೇಡ ಎಂದು ಎಂಜಿನಿಯರಿಂಗ್ ಓದಿಸಿ ಕೆಟ್ಟೆ. ಇವೆಲ್ಲವೂ ಮನಮೋಹನ್‌ಸಿಂಗ್ ಮಾಡಿದ ಅವಾಂತರ, ಆರ್ಥಿಕ ಉದಾರೀಕರಣ ನಡೆಯದೆ ಹೋಗಿದ್ದರೆ ನಾವು ಆಮಿಷಗೊಳಗಾಗುತ್ತಿರಲಿಲ್ಲ~ ಎಂದು ಹೇಳುತ್ತಿದ್ದಾಗ ಅವರ ಗಂಟಲು ಕಟ್ಟಿತ್ತು.
ಅವರ ಸಂಕಟಕ್ಕೆ ಇನ್ನೊಂದು ಕಾರಣ ಇತ್ತು. ಸಾಮಾನ್ಯವಾಗಿ ಚೌತಿ-ಅಷ್ಟಮಿಗೆ ಊರಿಗೆ ಬರುತ್ತಿದ್ದ ಮಕ್ಕಳು ಈ ಬಾರಿ ಬಂದಿಲ್ಲ. `ರಜೆಗಳೆಲ್ಲ ಅಣ್ಣಾ ಹಜಾರೆ ಚಳವಳಿಯಲ್ಲಿ ಕಳೆದು ಹೋಯಿತು, ಮುಂದಿನ ಬಾರಿ ಬರುತ್ತೇವೆ~ ಎಂದು ಅಮ್ಮನಿಗೆ ಪೋನ್ ಮಾಡಿದ್ದರಂತೆ. `ಅಷ್ಟೊಂದು ದೇಶಪ್ರೇಮ ಇದ್ದರೆ ಇಲ್ಲಿಯೇ ಬಂದು ಏನಾದರೂ ಉದ್ಯೋಗ-ಉದ್ಯಮ ಮಾಡಬಹುದಲ್ಲ, ದೆಹಲಿ-ಮುಂಬೈ ಎಂದು ಯಾಕೆ ಕುಣಿದಾಡುತ್ತಿದ್ದಾರೆ? ತಂದೆ-ತಾಯಿ ಮೇಲೆ, ಊರಿನ ಮೇಲೆ ಇಲ್ಲದ ಪ್ರೀತಿ ದೇಶದ ಮೇಲೆ ಏನು ಇರುತ್ತದೆ? ಎಲ್ಲ ಢೋಂಗಿ~-ಮಕ್ಕಳಿಗೆ ಹೇಳಲಾಗದ್ದನ್ನು ರಾಂಪಣ್ಣ ನನ್ನೊಡನೆ ಹೇಳಿ ಕೋಪ ತೀರಿಸಿಕೊಂಡರು.
ಅವರ ಹೊಟ್ಟೆ ಉರಿ ಹೆಚ್ಚಿಸಿರುವುದು ನೆರೆಯಲ್ಲಿಯೇ ಇನ್ನೊಂದು ರೈತ ಕುಟುಂಬ. ಆ ಕುಟುಂಬದ ಯಜಮಾನನಿಗೂ ಮೂವರು ಮಕ್ಕಳು. ಅವರಲ್ಲಿ ಯಾರಿಗೂ ಶಿಕ್ಷಣ ತಲೆಗೆ ಹತ್ತಿಲ್ಲ. ಒಬ್ಬ ಮಗ ಊರಲ್ಲಿಯೇ ಇದ್ದು ಗದ್ದೆ-ತೋಟ ನೋಡಿಕೊಳ್ಳುತ್ತಿದ್ದಾನೆ. ಇನ್ನೊಬ್ಬ ಆಟೋರಿಕ್ಷಾ ಓಡಿಸುತ್ತಿದ್ದಾನೆ. ಊರಿನ ಯುವಕ ಸಂಘಕ್ಕೆ ಈಗ ಅವನೇ ಅಧ್ಯಕ್ಷ. ಮಗಳು ಸಮೀಪದ ಊರಿನ ರೈತನನ್ನೇ ಮದುವೆಯಾಗಿದ್ದಾಳೆ. ಮನೆ ತುಂಬಾ ಮಕ್ಕಳು, ಮೊಮ್ಮಕ್ಕಳ ಗೌಜಿ-ಗದ್ದಲ. ಮೂರೂ ಹೊತ್ತು ದುಡ್ಡಿಗಾಗಿ ಕಿತ್ತಾಟ, ತಂದೆ-ಮಕ್ಕಳ ಬಡಿದಾಟ, ಅತ್ತೆ-ಸೊಸೆಯರ ಕಾದಾಟ ಎಲ್ಲವೂ ನಡೆಯುತ್ತಿವೆ. ಅವರೆಲ್ಲರೂ ಬಂದು ರಾಂಪಣ್ಣನವರ ಬಳಿ ದೂರು ಹೇಳುತ್ತಿರುತ್ತಾರೆ. ಇದನ್ನೆಲ್ಲ ಕೇಳಿಕೇಳಿ ರಾಂಪಣ್ಣ ಇನ್ನಷ್ಟು ಖಿನ್ನರಾಗುತ್ತಾರೆ. ಅವರಿಗಾಗಿ ಅಲ್ಲ, ತಮಗಾಗಿ. `ನಮ್ಮ ಸ್ಮಶಾನದಂತಹ ಮನೆಗಿಂತ ಆ ಜಗಳದ ಮನೆಯೇ ವಾಸಿ ಅಲ್ಲವೇ?~ ಎಂದು ಅವರು ಕೇಳುತ್ತಿದ್ದರು. 
ಬೇರೆ ಊರುಗಳಲ್ಲಿ ಇಂತಹ ಕುಟುಂಬಗಳ ಸಂಖ್ಯೆ ಸ್ವಲ್ಪ ಕಡಿಮೆ ಇರಬಹುದು. ಆದರೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಗ್ರಾಮೀಣ ಪ್ರದೇಶಕ್ಕೆ ಹೋದರೆ ಈ ರೀತಿ ಮಕ್ಕಳನ್ನೇ ಶಪಿಸುತ್ತಾ ಕೂತಿರುವ ನೂರಾರು ತಂದೆ-ತಾಯಿಗಳನ್ನು ಕಾಣಬಹುದು. ಒಂದು ಕಾಲದಲ್ಲಿ ಬಡತನ, ಅಂಧಶ್ರದ್ಧೆ, ಅನಾನುಕೂಲತೆಗಳ ನಡುವೆಯೂ ಜೀವಂತವಾಗಿದ್ದ ಹಳ್ಳಿಗಳು ಈಗ ಬಯಲು ವೃದ್ಧಾಶ್ರಮದಂತೆ ಕಾಣುತ್ತಿವೆ. ವರ್ಷಕ್ಕೊಮ್ಮೆಯೋ, ಎರಡು ವರ್ಷಗಳಿಗೊಮ್ಮೆಯೋ ವಾರದ ರಜೆಯಲ್ಲಿ ಮಕ್ಕಳು-ಮೊಮ್ಮಕ್ಕಳು ಬಂದಾಗ ಗಿಜಿಗುಡುತ್ತಿರುವ ಮನೆಗಳು ಅವರ ನಿರ್ಗಮನದೊಂದಿಗೆ  ಮತ್ತೆ ಭಣಗುಡುತ್ತವೆ.  ವರ್ಷಕ್ಕೆ ಎರಡರಿಂದ ಹತ್ತು ಲಕ್ಷ ರೂಪಾಯಿಗಳ ವರೆಗೆ ವೇತನ ಪಡೆಯುತ್ತಿರುವ ಇಂದಿನ ನವ ಮಧ್ಯಮ ವರ್ಗದ ಸದಸ್ಯರು ಇವರು. ಉದ್ಯೋಗವನ್ನರಸಿಕೊಂಡು ಹಳ್ಳಿ ತೊರೆದು ಪಟ್ಟಣ ಸೇರಿದವರು. ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದು ಇದೇ ವರ್ಗ.
 ಶ್ರಿಮಂತರು ಮತ್ತು ಬಡವರ ಬಗ್ಗೆ ನಡೆದಷ್ಟು ಚರ್ಚೆ ಮಧ್ಯಮವರ್ಗದ ಬಗ್ಗೆ ನಮ್ಮಲ್ಲಿ ನಡೆದಿಲ್ಲ. ಅವರೊಂದು ರೀತಿಯಲ್ಲಿ ಮುಖ ಇಲ್ಲದ, ದನಿ ಇಲ್ಲದ, ಧೈರ್ಯವೂ ಇಲ್ಲದ ವಿಚಿತ್ರ ಜನವರ್ಗ ಎಂದೇ ಅವರನ್ನು ನಿರ್ಲಕ್ಷಿಸುತ್ತಾ ಬರಲಾಗಿದೆ. ಅಣ್ಣಾ ಚಳವಳಿಯ ನಂತರ ಈ ಮಧ್ಯಮ ವರ್ಗ ಮುಖ ಎತ್ತಿ, ದನಿ ಎತ್ತರಿಸಿ ಮಾತನಾಡತೊಡಗಿರುವ ಕಾರಣದಿಂದಾಗಿಯೇ ಅವರ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.  ಮಧ್ಯಮ ವರ್ಗ ಎಂದಾಕ್ಷಣ ನಮ್ಮಲ್ಲಿ ಬಹಳಷ್ಟು ಮಂದಿ ಅದನ್ನು ಮೇಲ್ಜಾತಿ ಜತೆ ಸಮೀಕರಿಸುತ್ತಾರೆ. ನಾನು ಗೌರವಿಸುವ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿಯವರು ಕಳೆದ ವಾರದ ನನ್ನ ಅಂಕಣಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿಯೂ ಎಲ್ಲೋ ಈ ಅಭಿಪ್ರಾಯ ಇದೆ. ಆದರೆ ನನ್ನ ಅಭಿಪ್ರಾಯ ಅದಾಗಿರಲಿಲ್ಲ. ಈ ಐದು ಕೋಟಿ ಜನಸಂಖ್ಯೆಯ ಮಧ್ಯಮವರ್ಗ ಇದೆಯಲ್ಲಾ, ಇದೊಂದು ಬೇರೆಯೇ ಜಾತಿ. ಇದರಲ್ಲಿರುವವರು ಮನು ಮಹಾಶಯ ಸೃಷ್ಟಿಸಿದ್ದ ವರ್ಣಾಶ್ರಮ ವ್ಯವಸ್ಥೆಯಲ್ಲಿರುವ ಜಾತಿಗಳಿಗೆ ಸೇರಿದವರಲ್ಲ. ಇವರೆಲ್ಲ ಆರ್ಥಿಕ ಉದಾರೀಕರಣ ಸೃಷ್ಟಿಸಿದ ಆಧುನಿಕ `ವರ್ಣಾಶ್ರಮ ವ್ಯವಸ್ಥೆ~ಯಲ್ಲಿನ ಜಾತಿಗಳಿಗೆ ಸೇರಿದವರು. ಇವರು ಮೇಲ್ಜಾತಿ ಕುಟುಂಬಗಳಲ್ಲಿ ಮಾತ್ರವಲ್ಲ, ಕೆಳಜಾತಿ ಕುಟುಂಬಗಳಲ್ಲಿಯೂ ಇದ್ದಾರೆ, ಬ್ರಾಹ್ಮಣ-ಅಬ್ರಾಹ್ಮಣ ಎಲ್ಲ ಜಾತಿಗಳಲ್ಲಿಯೂ ಇದ್ದಾರೆ. ಎಲ್ಲರ ಮನೆಯಲ್ಲಿಯೂ ಇದ್ದಾರೆ.  `ನಾವೆಲ್ಲ  ಭಾಷೆಗಾಗಿ, ನೀರಿಗಾಗಿ, ಭೂಮಿಗಾಗಿ ನಡೆಸುತ್ತಿದ್ದ ಚಳವಳಿಯ ಕಾಲದಲ್ಲಿ ಅತ್ತ ಸುಳಿಯದ ನನ್ನ ಮಗಳು  ಮೊನ್ನೆ ಫ್ರೀಡಮ್ ಪಾರ್ಕ್‌ಗೆ ಹೋಗಿ ಕೂತಿದ್ದಳು~ ಎಂದು ಇತ್ತೀಚೆಗೆ ಸಿಕ್ಕ ಹಿರಿಯ ಹೋರಾಟಗಾರರೊಬ್ಬರು ವಿಷಾದದಿಂದ ಹೇಳುತ್ತಿದ್ದರು. `ನಮ್ಮ ಜತೆ ಗುರುತಿಸಿಕೊಳ್ಳಲು ಏನೋ ಕೀಳರಿಮೆ, ಫ್ರೀಡಮ್‌ಪಾರ್ಕ್‌ನಲ್ಲಿ ಹೋಗಿ ಕೂತರೆ ಸಿಗುವ ಸಾಮಾಜಿಕ ಮಾನ್ಯತೆಯೇ ಬೇರೆ ಎನ್ನುವುದು ಅವಳಿಗೆ ತಿಳಿದಿದೆ~ ಎನ್ನುತ್ತಿದ್ದರು ಅವರು.
`ಅಣ್ಣಾ ಚಳವಳಿ ನವ ಮಧ್ಯಮವರ್ಗದ ಅಂತರಾತ್ಮವನ್ನು ಬಡಿದೆಬ್ಬಿಸಿದೆ, ಅವರು ಜಾಗೃತರಾಗಿದ್ದಾರೆ, ಜವಾಬ್ದಾರಿಯನ್ನು ಅರಿತುಕೊಂಡಿದ್ದಾರೆ~ ಎಂದೆಲ್ಲ ಹೇಳಲಾಗುತ್ತಿದೆ. ನಿಜವಾಗಿಯೂ ಅಂತಹ ಪರಿವರ್ತನೆ ನಡೆದಿದ್ದರೆ ಅದನ್ನು ತೆರೆದ ಮನಸ್ಸಿನಿಂದ ಸ್ವಾಗತಿಸೋಣ. ಆದರೆ ನಾವು ಇಲ್ಲಿಯವರೆಗೆ ಈ ವರ್ಗದಲ್ಲಿ ಕಂಡ ಹೆಚ್ಚಿನವರು ಅತೀ ಎನಿಸುವಷ್ಟು ಭೌತಿಕವಾದಿಗಳು, ಸ್ವಾರ್ಥಿಗಳು ಮತ್ತು ಆಳದಲ್ಲಿ ಆತ್ಮವಂಚಕರಾಗಿರುವವರು. ಬದುಕು ಎಂದರೆ ತನ್ನ ಮನೆ, ಮಡದಿ, ಮಕ್ಕಳು ಅಷ್ಟೆ. ಅದರಾಚೆಗೆ ಇರುವ ಸಮಾಜದ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಇವರಿಗೆ ತಂದೆ-ತಾಯಿಯನ್ನು ನೋಡಿಕೊಳ್ಳುವುದೆಂದರೆ ಅವರ ಬ್ಯಾಂಕ್ ಖಾತೆಗೆ ಒಂದಷ್ಟು ದುಡ್ಡು ಹಾಕುವುದು. ಇನ್ನೂ ಕಿರಿಕಿರಿ ಮಾಡಿದರೆ ಎಲ್ಲಾದರೂ ವೃದ್ಧಾಶ್ರಮಕ್ಕೆ ಕೊಂಡೊಯ್ದು ಸೇರಿಸುವುದು. ಇವರ ಸಮಾಜ ಸೇವೆ ಕೂಡಾ ವಾರಾಂತ್ಯದ ಒಂದು ಔಟಿಂಗ್ ಅಷ್ಟೆ. ತಾವು ಬಹಳ ಪ್ರಗತಿಶೀಲರು, ಉದಾರ ಮನೋಭಾವದವರು ಎಂದು ಸಮಾಜದಲ್ಲಿ ತೋರಿಸಿಕೊಳ್ಳುವ ಇವರು ಪಕ್ಕದಲ್ಲಿ ಮಲಗಿದ್ದ ಹೆಂಡತಿಯ ಮೊಬೈಲ್‌ಗೆ ನಡುರಾತ್ರಿಯಲ್ಲಿ ಸಹೋದ್ಯೋಗಿಯ ಎಸ್‌ಎಂಎಸ್ ಬಂದರೆ ನಿದ್ದೆಗೆಡಿಸಿಕೊಳ್ಳುತ್ತಾರೆ.
ಇಂತಹದ್ದೊಂದು ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆದವರೂ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ವರದಿಯಾಗಿರುವ ಕೌಟುಂಬಿಕ ಹಿಂಸೆ ಮತ್ತು ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ಭಾಗಿಯಾಗಿರುವವರು ಯಾರೆಂದು ಅಧ್ಯಯನ ಮಾಡಿದರೆ ಈ ನವ ಮಧ್ಯಮ ವರ್ಗದ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ. ಜಾತಿ ಎಲ್ಲಿದೆ ಎಂದು ಉಡಾಫೆಯಿಂದ ಪ್ರಶ್ನಿಸುವ ಇವರ ಜಾತ್ಯತೀತ ನಿಲುವಿನ ಹಿಂದಿನ ಆತ್ಮವಂಚನೆಯನ್ನು ತಿಳಿದುಕೊಳ್ಳಬೇಕಾದರೆ ಭಾನುವಾರ ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗುವ ಮೆಟ್ರಿಮೋನಿಯಲ್ ಪುಟ ಓದಬೇಕು.
ಈ ಜನವರ್ಗ ಅಣ್ಣಾ ಹಜಾರೆ ಅವರಿಂದ ಕಲಿತದ್ದೇನು, ಕೇವಲ ಭ್ರಷ್ಟಾಚಾರದ ವಿರುದ್ಧದ ಹೋರಾಟವೇ? ಅಣ್ಣಾ ಎಂದರೆ ಅಷ್ಟೇ ಅಲ್ಲ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಅಣ್ಣಾ ಹಜಾರೆ ಅವರಿಗೆ ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ತಂದುಕೊಟ್ಟಿರಬಹುದು. ಆದರೆ ಅವರ ಬದುಕಿನ ಬಹುದೊಡ್ಡ ಸಾಧನೆ ಸುಮಾರು ನಾಲ್ಕು ದಶಕಗಳ ಅವಧಿಯಲ್ಲಿ ಹುಟ್ಟೂರು ರಾಳೇಗಣಸಿದ್ಧಿಯಲ್ಲಿ ಮಾಡಿರುವ ಗ್ರಾಮ ಸುಧಾರಣೆ. ಮನಸ್ಸು ಮಾಡಿದ್ದರೆ ಅವರು ಕೂಡಾ ಮಾಜಿ ಸೈನಿಕನಿಗೆ ಸರ್ಕಾರ ನೀಡುವ ಜಮೀನನ್ನು ಪಡೆದು ನಿಶ್ಚಿಂತೆಯಿಂದ ಇರಬಹುದಿತ್ತು. ಆದರೆ ಅವರು ಯೋಚನೆ ಮಾಡಿದ್ದೇ ಬೇರೆ. ಅಣ್ಣಾನ ಪ್ರವೇಶವಾಗುವ ವರೆಗೆ ರಾಳೇಗಣಸಿದ್ಧಿ ಬಡತನ, ಅನಕ್ಷರತೆ, ಮೂಢನಂಬಿಕೆಗಳಿಂದ ಕೂಡಿದ ದೇಶದ ಸಾವಿರಾರು ಗ್ರಾಮಗಳಲ್ಲಿ ಒಂದಾಗಿತ್ತು. ಇಂದು ಅದು ಕಳ್ಳರು, ಕುಡುಕರು, ಭ್ರಷ್ಟರು, ಸೋಮಾರಿಗಳು, ಅನಕ್ಷರಸ್ಥರು ಇಲ್ಲದ ಆದರ್ಶ ಗ್ರಾಮ. ಮದುವೆ ಬೇಡ, ಕುಟುಂಬ ಬೇಡ ಎಂದು ಭೌತಿಕ ಜಗತ್ತಿನ ಎಲ್ಲ ಸುಖಗಳನ್ನು ತೊರೆದು ಗ್ರಾಮ ಸುಧಾರಣೆಗೆ 38ನೇ ವಯಸ್ಸಿನಲ್ಲಿ ತಮ್ಮನ್ನು ಅರ್ಪಿಸಿಕೊಂಡಾಗ ಮುಂದೊಂದು ದಿನ ಇಷ್ಟೊಂದು ಖ್ಯಾತಿ ಪಡೆಯಲಿದ್ದೇನೆ ಎಂದು ಅಣ್ಣಾ ಅವರಿಗೆ ಖಂಡಿತ ತಿಳಿದಿರಲಿಕ್ಕಿಲ್ಲ.
ಸ್ವಾರ್ಥವಿಲ್ಲದೆ, ಪ್ರತಿಫಲದ ಅಪೇಕ್ಷೆ ಇಲ್ಲದೆ ಅವರು ಕೆಲಸ ಮಾಡಿದರು. ನೇರ ನಡೆ-ನುಡಿಯ ಮೇಲೆ ನಂಬಿಕೆ ಇಟ್ಟು ಬದುಕಿದರು.
ನಿಜವಾದ ಅಣ್ಣಾ ರಾಮಲೀಲಾ ಮೈದಾನದ ವೇದಿಕೆಯಲ್ಲಿ ಇರಲಿಲ್ಲ, ಅವರು ರಾಳೇಗಣ ಸಿದ್ಧಿಯ ಮನೆ ಮನೆಗಳಲ್ಲಿದ್ದಾರೆ. ಆ ಅಣ್ಣಾನನ್ನು ಬಿಟ್ಟು ಈ ಅಣ್ಣಾನನ್ನು ನೋಡಲಾಗುವುದೇ ಇಲ್ಲ, ನೋಡುವುದು ಸರಿಯೂ ಅಲ್ಲ. ಯುವಜನತೆ ಆದರ್ಶ ಎಂದು ಸ್ವೀಕರಿಸಬೇಕಾಗಿರುವುದು ಮತ್ತು ಕಾಯಾ, ವಾಚಾ ಮನಸಾ ಅನುಸರಿಸಬೇಕಾಗಿರುವುದು ಕೇವಲ ರಾಮಲೀಲಾ ಮೈದಾನದ ಅಣ್ಣಾನನ್ನಲ್ಲ. ಅದಕ್ಕಿಂತಲೂ ಮುಖ್ಯವಾಗಿ ರಾಳೇಗಣಸಿದ್ಧಿಯ ಅಣ್ಣಾನನ್ನು. ಇಳಿ ವಯಸ್ಸಿನಲ್ಲಿ ಮಕ್ಕಳ ಮುಖ ನೋಡಲು ಹಲುಬುತ್ತಿರುವ ರಾಂಪಣ್ಣನಂತಹವರು ಕೂಡಾ ಬಯಸುತ್ತಿರುವುದು ಇದನ್ನೇ. ರಾಮಲೀಲಾ ಮೈದಾನದ ಅಣ್ಣಾ ಅವರನ್ನು ಅನುಸರಿಸಿದವರು ಕತ್ತಲ ಹೊತ್ತಿನಲ್ಲಿ ರಸ್ತೆಬದಿ ಕ್ಯಾಂಡಲ್ ಹಚ್ಚಿ ಟಿವಿ ಪರದೆ ಮೇಲೆ ಕಾಣಿಸಿಕೊಳುತ್ತಾರೆ, ರಾಳೇಗಣಸಿದ್ಧಿಯ ಅಣ್ಣಾ ಅವರನ್ನು ಆದರ್ಶ ಎಂದು ಸ್ವೀಕರಿಸಿದವರು ಕತ್ತಲು ತುಂಬಿರುವ ಹಳ್ಳಿಗಳಲ್ಲಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಬೆಳಕು ನೀಡುತ್ತಿರುವ ಹರೀಶ್ ಹಂದೆಯಂತಹವರಾಗುತ್ತಾರೆ. ನಮಗೆ ಬೇಕಾಗಿರುವುದು ಕ್ಯಾಂಡಲ್‌ವಾಲಾಗಳಲ್ಲ, ಹರೀಶ್ ಹಂದೆಯಂತಹವರು, ಅಲ್ಲವೇ?

Monday, August 29, 2011

ಮಾಡಿದ್ದನ್ನು ಉಣ್ಣಲೇ ಬೇಕಲ್ಲವೇ ಪ್ರಧಾನಿಗಳೇ?

ಎಲ್ಲಿಂದ ಬಂದರು ಈ ಜನ? ಬರುತ್ತಲೇ ಇದ್ದ ಇವರ‌್ಯಾರು? ಅಣ್ಣಾ ಚಳವಳಿ ಬೆಂಬಲಿಸಿ ಬೀದಿಗೆ ಇಳಿದಿದ್ದ ಜನರ ಸಂಖ್ಯೆ ದೇಶದ ಒಟ್ಟು ಜನಸಂಖ್ಯೆಯ ದೃಷ್ಟಿಯಿಂದ ನಗಣ್ಯ ಎನ್ನುವುದು ನಿಜ.

ಹೀಗಿದ್ದರೂ ಸ್ವತಂತ್ರ ಭಾರತದಲ್ಲಿ ನಡೆದಿರುವ ಯಾವುದೇ ಚಳವಳಿಗಳಲ್ಲಿ ಕಾಣದಷ್ಟು ಜನ ಎಲ್ಲಿಂದ ಬಂದರು? ಒಂದಷ್ಟು ದಿನ ಕೂಗಾಡಿ ಮನೆಗೆ ಹೋಗುತ್ತಾರೆ ಎಂಬ ನಿರೀಕ್ಷೆಯನ್ನು ಹುಸಿಗೊಳಿಸಿ ಬರುತ್ತಲೇ ಇದ್ದ ಇವರ‌್ಯಾರು?
ಬಹಳ ಜನ ಈ ಹೋರಾಟವನ್ನು ಜಯ ಪ್ರಕಾಶ್ ನಾರಾಯಣ್ ನೇತೃತ್ವದ `ಸಂಪೂರ್ಣ ಕ್ರಾಂತಿ~ಗೆ ಹೋಲಿಸುತ್ತಾರೆ. ಆದರೆ ಆ ಹೋರಾಟದಲ್ಲಿ ಜನ ಇಷ್ಟೊಂದು ದೀರ್ಘಕಾಲ ಬೀದಿಗಿಳಿದು ಹೋರಾಟ ನಡೆಸಿರಲಿಲ್ಲ.

ಅಲ್ಲದೆ, ಅದು ಮುಖ್ಯವಾಗಿ ಗುಜರಾತ್, ಬಿಹಾರ, ಉತ್ತರ ಪ್ರದೇಶ ರಾಜ್ಯಗಳಿಗೆ ಸೀಮಿತವಾಗಿತ್ತು ಎನ್ನುವುದು ಕೂಡಾ ವಾಸ್ತವ. ಆ ಕಾಲದಲ್ಲಿ ದಕ್ಷಿಣದ ರಾಜ್ಯಗಳಲ್ಲಿ  ಸರ್ಕಾರದ ವಿರುದ್ಧ ಬಹಿರಂಗವಾಗಿ ಪ್ರತಿಭಟನೆ-ರ‌್ಯಾಲಿಗಳು ನಡೆದದ್ದು ಕಡಿಮೆ. ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ ಕೂಡಾ ನಡೆದದ್ದು ಭೂಗತವಾಗಿ.
ಬಹುಸಂಖ್ಯಾತ ಜನ ಬೀದಿಗಿಳಿಯದೆ ಗುಪ್ತ ಬೆಂಬಲದ ಮೂಲಕ ಹೋರಾಟಕ್ಕೆ ಜತೆ ನೀಡಿದ್ದರು. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಅದೊಂದು ರಾಜಕೀಯ ಹೋರಾಟವಾಗಿತ್ತು. ಹೆಚ್ಚುಕಡಿಮೆ ಎಲ್ಲ ಕಾಂಗ್ರೆಸ್ಸೇತರ ರಾಜಕೀಯ ಪಕ್ಷಗಳು ಆ ಚಳವಳಿಯ ಬೆಂಬಲಕ್ಕೆ ನಿಂತಿದ್ದವು.

ಅದರಲ್ಲಿ ರಾಜಕೀಯ ಪಕ್ಷಗಳ ನಾಯಕರ ನೇತೃತ್ವ ಮತ್ತು ಕಾರ್ಯಕರ್ತರ ಸಕ್ರಿಯ ಪಾಲ್ಗೊಳ್ಳುವಿಕೆ ಇತ್ತು. ಆದ್ದರಿಂದ ಯಾವುದೇ ಕೋನದಿಂದ ನೋಡಿದರೂ ಅಣ್ಣಾ ಚಳವಳಿಯನ್ನು ಜೆಪಿ ನೇತೃತ್ವದ ಹೋರಾಟಕ್ಕೆ ಹೋಲಿಕೆ ಮಾಡಲಾಗದು.
ಸಾಮಾನ್ಯವಾಗಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು... ಹೀಗೆ ನಿರ್ದಿಷ್ಟ ವರ್ಗಕ್ಕೆ ಸೇರಿದ ಜನಸಮೂಹದ ಬೆಂಬಲದ ಚಳವಳಿ ಮಾತ್ರ ದೀರ್ಘಕಾಲ ಮುಂದುವರಿದುಕೊಂಡು ಹೋಗುತ್ತದೆ.
ಇದಕ್ಕೆ ಅಂತಹ ಹೋರಾಟಗಳು ಹೊಂದಿರುವ ಸೈದ್ಧಾಂತಿಕ ನೆಲೆಗಟ್ಟು ಮತ್ತು ಕಾರ್ಯಕರ್ತರಲ್ಲಿರುವ ಬದ್ಧತೆಯ ಜತೆ  ಬೇಡಿಕೆಗಳು ಈಡೇರಿದರೆ ತಕ್ಷಣಕ್ಕೆ ಸಿಗುವ ವೈಯಕ್ತಿಕ ಲಾಭ ಕೂಡಾ ಕಾರಣ. ಅಣ್ಣಾ ಚಳವಳಿಯಲ್ಲಿ ಇಂತಹ ಯಾವ ಲಕ್ಷಣಗಳನ್ನೂ ನಾವು ಕಾಣಲಾಗದು. ಬಹಳ ಜನ ಇದನ್ನು ಮಧ್ಯಮವರ್ಗದ ಜನರ ಹೋರಾಟ ಎನ್ನುತ್ತಿದ್ದಾರೆ.
ಇದು ಒಂದು ರೀತಿಯಲ್ಲಿ ಸತ್ಯ, ಆದರೆ ಪೂರ್ಣ ಸತ್ಯ ಅಲ್ಲ. ಮಧ್ಯಮ ವರ್ಗ ನಮ್ಮಲ್ಲಿ ಹಿಂದೆಯೂ ಇತ್ತಲ್ಲವೇ? ಹಿಂದೆ ಎಂದಾದರೂ ಈ ಮಧ್ಯಮ ವರ್ಗ ಈ ಪ್ರಮಾಣದಲ್ಲಿ ಬೀದಿಗಿಳಿದಿದ್ದ ಘಟನೆಗಳು ಇವೆಯೇ?

ಹಾಗಿದ್ದರೆ ಸ್ವತಂತ್ರಭಾರತದ ಯಾವುದೇ ಹೋರಾಟದಲ್ಲಿ ಕಾಣಿಸಿಕೊಳ್ಳದ ಈ ಮಧ್ಯಮ ವರ್ಗದಲ್ಲಿ ಹಠಾತ್ತನೇ ಇಷ್ಟೊಂದು ಜಾಗೃತಿ, ಬದ್ಧತೆ, ಕ್ರಿಯಾಶೀಲತೆ, ದೇಶಪ್ರೇಮ, ಹೋರಾಟದ ಕೆಚ್ಚು ಹುಟ್ಟಿಕೊಂಡಿದ್ದು ಹೇಗೆ?
ಸರಳವಾದ ಸತ್ಯ ಏನೆಂದರೆ,  ಅಣ್ಣಾ ಚಳವಳಿ ಬೆಂಬಲಿಸಿ ಬೀದಿಗಿಳಿದಿರುವ ಮಧ್ಯಮ ವರ್ಗ ಇಪ್ಪತ್ತು ವರ್ಷಗಳ ಹಿಂದಿನ ಮಧ್ಯಮ ವರ್ಗ ಅಲ್ಲವೇ ಅಲ್ಲ. ಹಿಂದಿನ ಮಧ್ಯಮ ವರ್ಗದಲ್ಲಿದ್ದವರು ಮುಖ್ಯವಾಗಿ ಸರ್ಕಾರಿ ನೌಕರರು. ಸರ್ಕಾರಕ್ಕೆ ಸೇರಿರುವ ಇಲಾಖೆಗಳು, ಶಾಲೆ, ಆಸ್ಪತ್ರೆಗಳು, ಬ್ಯಾಂಕುಗಳಲ್ಲಿ ಉದ್ಯೋಗದಲ್ಲಿದ್ದ ಜನ.
ಕಾರ್ಮಿಕ ಸಂಘಟನೆಗಳು ನಡೆಸುವ ಮುಷ್ಕರ-ಪ್ರತಿಭಟನೆಗಳನ್ನು ಹೊರತುಪಡಿಸಿದರೆ ಸರ್ಕಾರದ ವಿರುದ್ಧದ ಸಾಮೂಹಿಕ ಹೋರಾಟದಲ್ಲಿ ಇವರು ಪ್ರತ್ಯಕ್ಷವಾಗಿ ಭಾಗಿಯಾದವರಲ್ಲ. ಯಾವುದೇ ಸಾಮಾಜಿಕ ವಿಷಯಗಳಿಗೆ ಸ್ಪಂದಿಸದ, ಸ್ವಂತದ ಅಭಿಪ್ರಾಯವನ್ನೇ ಹೊಂದಿಲ್ಲದ, ಗಾಳಿ ಬಂದ ಕಡೆ ತೂರಿಕೊಳ್ಳುವ ಹಿಂದಿನ ಮಧ್ಯಮ ವರ್ಗ ಅದು.

ಸ್ವಾರ್ಥಿಗಳು, ಸಿನಿಕರು ಮತ್ತು ಹೇಡಿಗಳೆಂಬ ಟೀಕೆಯನ್ನು ಈ ವರ್ಗ ಎದುರಿಸುತ್ತಾ ಬಂದಿದೆ. ಇವರನ್ನೇ ಕಮ್ಯುನಿಸ್ಟರು `ಬೂರ್ಜ್ವಾ~ಗಳು ಎಂದು ಕರೆಯುತ್ತಿರುವುದು. `ಭಾರತದಲ್ಲಿ ಕ್ರಾಂತಿಯನ್ನು ತಡೆದವರೇ ಈ ಬೂರ್ಜ್ವಾಗಳು~ ಎಂದು ಎಡ ವಿಚಾರವಾದಿಗಳು ಆಕ್ರೋಶ ವ್ಯಕ್ತಪಡಿಸುವುದುಂಟು.
 ಕಳೆದೆರಡು ದಶಕಗಳ ಅವಧಿಯಲ್ಲಿ ದೇಶದಲ್ಲಿ ಹೊಸ ಬಗೆಯ ಮಧ್ಯಮವರ್ಗ ಸೃಷ್ಟಿಯಾಗಿದೆ. ಹಿನ್ನೆಲೆ ಮತ್ತು ಮನೋಭಾವ ಎರಡರ ದೃಷ್ಟಿಯಿಂದಲೂ ಈಗಿನ ಮಧ್ಯಮವರ್ಗ ಹಿಂದಿನದಕ್ಕಿಂತ ಸಂಪೂರ್ಣ ಭಿನ್ನ. ಇವರು ಸರ್ಕಾರಿ ನೌಕರರಲ್ಲ, ಖಾಸಗಿ ಕಂಪೆನಿಗಳಲ್ಲಿ ಉದ್ಯೋಗದಲ್ಲಿರುವವರು. ಕೈತುಂಬಾ ಸಂಬಳ ಪಡೆಯುತ್ತಿರುವವರು.
`ಎರಡು ಲಕ್ಷ ರೂಪಾಯಿಗಳಿಂದ ಹತ್ತು ಲಕ್ಷ ರೂಪಾಯಿ ವರೆಗೆ ವಾರ್ಷಿಕ ವರಮಾನ ಹೊಂದಿರುವ ಐದು ಕೋಟಿ ಜನ ಈಗ ಭಾರತದಲ್ಲಿದ್ದಾರೆ. 2025ರ ವೇಳೆಗೆ ಇವರ ಸಂಖ್ಯೆ ಹತ್ತುಪಟ್ಟು ಹೆಚ್ಚಾಗಿ 58 ಕೋಟಿಗೆ ತಲುಪಬಹುದು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಇವರ ಪ್ರಮಾಣ ಶೇಕಡಾ 41ಕ್ಕೆ ಏರಬಹುದು.
ಮುಂದಿನ ಎರಡು ದಶಕಗಳಲ್ಲಿ ಭಾರತ ವಿಶ್ವದ ಐದನೇ ಅತಿದೊಡ್ಡ ಮಾರುಕಟ್ಟೆ ಆಗಲಿದೆ~ ಎಂದು `ವೆುಕೆನ್ಸಿ ಜಾಗತಿಕ ಸಂಸ್ಥೆ~ ಮೂರು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆ ಹೇಳಿದೆ.

ಅಣ್ಣಾ ಚಳವಳಿಯಲ್ಲಿ ಬೀದಿಗಿಳಿದವರ ಮೂಲ ಇಲ್ಲಿದೆ. ಇವರ ಬಗ್ಗೆ ತಿಳಿದುಕೊಳ್ಳಬೇಕಾದರೆ ಕಳೆದೆರಡು ದಶಕಗಳಲ್ಲಿ ದೇಶ ಸಾಕ್ಷಿಯಾದ ಆರ್ಥಿಕ ಮತ್ತು ಸಾಮಾಜಿಕ ಪಲ್ಲಟಗಳನ್ನು ನೋಡಬೇಕಾಗುತ್ತದೆ.
ಇದು ಆರ್ಥಿಕ ಉದಾರೀಕರಣದಿಂದಾಗಿ ಹುಟ್ಟಿಕೊಂಡ ಹೊಸ ಪೀಳಿಗೆ. ಇವರು ಬೆಳಿಗ್ಗೆ ಎದ್ದು ಕುಡಿಯುವುದು ಕಾರ್ಪೋರೇಷನ್ ನೀರು ಅಲ್ಲ, ಇದಕ್ಕಾಗಿ ತಾವೇ ತೋಡಿದ ಬೋರ್‌ವೆಲ್‌ಗಳಿವೆ, ಇಲ್ಲವೇ ಪೇಟೆಯಲ್ಲಿ ಮಾರಾಟವಾಗುತ್ತಿರುವ ಮಿನರಲ್ ವಾಟರ್ ಇದೆ.

ಇವರು ಸರ್ಕಾರ ಸರಬರಾಜು ಮಾಡುವ ವಿದ್ಯುತ್ ಶಕ್ತಿಯನ್ನೇ ನಂಬಿ ಕೂತಿಲ್ಲ, ಜನರೇಟರ್-ಯುಪಿಎಸ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇವರು ಇರುವ ಫ್ಲಾಟ್‌ಗಳು, ಮನೆ ಕಟ್ಟಿರುವ ನಿವೇಶನಗಳು ಖಾಸಗಿಯವರಿಂದ ಖರೀದಿಸಿದ್ದು. ಸರ್ಕಾರದ ಗೃಹಮಂಡಳಿ, ನಗರಾಭಿವೃದ್ಧಿ ಪ್ರಾಧಿಕಾರಗಳು ಕೊಟ್ಟದ್ದಲ್ಲ.

ಇವರಿಗೆ ತುರ್ತಾಗಿ ಹಣ ಬೇಕಿದ್ದರೆ ರಗಳೆ ಮಾಡದೆ, ಕಾಡದೆ, ಪೀಡಿಸದೆ ಸಾಲ ಕೊಡುವ ಖಾಸಗಿ ಬ್ಯಾಂಕುಗಳ ಮೊರೆ ಹೋಗುತ್ತಾರೆ, ರಾಷ್ಟ್ರೀಕೃತ ಬ್ಯಾಂಕುಗಳನ್ನೇ ಅವಲಂಬಿಸಿಲ್ಲ. ಇವರು ಭದ್ರತೆಗಾಗಿ ಪೊಲೀಸರನ್ನೇ ಸಂಪೂರ್ಣವಾಗಿ ನಂಬಿಕೊಂಡಿಲ್ಲ, ಇದಕ್ಕಾಗಿ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇವಿಸಿಕೊಂಡಿದ್ದಾರೆ.
ಇವರು ಕಚೇರಿಗೆ ಹೋಗುವುದು ಸರ್ಕಾರಿ ಬಸ್‌ಗಳಲ್ಲ, ತಮ್ಮ ಸ್ವಂತ ವಾಹನಗಳಲ್ಲಿ. ಇವರ ಮಕ್ಕಳು ಓದುತ್ತಿರುವುದು ಸರ್ಕಾರಿ ಶಾಲೆಗಳಲ್ಲ, ಖಾಸಗಿ ಶಾಲೆಗಳಲ್ಲಿ.ಅಸ್ವಸ್ಥರಾದರೆ ಇವರು ಹೋಗುವುದು ಖಾಸಗಿ ಆಸ್ಪತ್ರೆಗೆ, ಸರ್ಕಾರಿ ಆಸ್ಪತ್ರೆಗಲ್ಲ.

ಇವರ ಮನೆಯಲ್ಲಿನ ಟಿವಿಗಳಲ್ಲಿ ಬಿತ್ತರವಾಗುತ್ತಿರುವ ನೂರಾರು ಚಾನೆಲ್‌ಗಳು ಅವರೇ ಹಾಕಿಕೊಂಡಿರುವ ಡಿಶ್ ಅಂಟೆನಾ ಇಲ್ಲವೇ ಕೇಬಲ್ ವಾಲಾನ ಮೂಲಕ ಹರಿದು ಬರುವಂತಹವು, ಸರ್ಕಾರಿ ದೂರದರ್ಶನವನ್ನು ಇವರು ಮರೆತೇ ಬಿಟ್ಟಿದ್ದಾರೆ.

ಇವರ ಮನೆಯಲ್ಲಿರುವ ಫೋನ್, ಕೈಯಲ್ಲಿರುವ ಮೊಬೈಲ್ ಎಲ್ಲವೂ ಖಾಸಗಿ ಕಂಪೆನಿಗಳದ್ದು. ಸರ್ಕಾರ ನೀಡುವ ಪಡಿತರ ಚೀಟಿ ಇವರಿಗೆ ಬೇಕಿಲ್ಲ, ಸರ್ಕಾರ ನೀಡುವ ತಾಳಿ, ಸೀರೆ, ರವಿಕೆ, ಕಣಗಳು ಇವರಿಗೆ ಬೇಡ. ಸರ್ಕಾರದ ನೂರೆಂಟು ಜನಕಲ್ಯಾಣ ಯೋಜನೆಗಳಲ್ಲಿ ಇವರು ಫಲಾನುಭವಿಗಳು ಅಲ್ಲವೇ ಅಲ್ಲ....
ನಿತ್ಯ ಜೀವನದಲ್ಲಿ `ಸರ್ಕಾರ~ ಎನ್ನುವುದು ಇವರಿಗೆ ಮುಖಾಮುಖಿಯಾಗುವುದು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದಾಗ, ಖರೀದಿ ಮಾಡಿದ ಮನೆ-ಆಸ್ತಿಯ ನೋಂದಣಿ ಮಾಡಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋದಾಗ, ಜಾತಿ-ಆದಾಯ ಪ್ರಮಾಣಪತ್ರ ಮಾಡಿಸಲು ತಹಶೀಲ್ದಾರ್ ಕಚೇರಿಗೆ ಹೋದಾಗ....ಅಲ್ಲೆಲ್ಲಾ ಇವರಿಗೆ ಎದುರಾಗುವುದು ಲಂಚಕೋರ, ಅಪ್ರಾಮಾಣಿಕ ಮತ್ತು ದುರಹಂಕಾರಿ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು.

ಈ ಅನುಭವ `ಸರ್ಕಾರ~ವನ್ನು ಇವರು ಇನ್ನಷ್ಟು ದ್ವೇಷಿಸುವಂತೆ ಮಾಡುತ್ತದೆ. ಇಂತಹ ಅಧಿಕಾರಿಗಳ ಮೂಲಕವೇ ಸರ್ಕಾರಿ ಖಜಾನೆಯನ್ನು ಲೂಟಿ ಮಾಡುವ ರಾಜಕಾರಣಿಗಳನ್ನು ಕಂಡರೆ ಮೈಯೆಲ್ಲ ಉರಿದುಹೋಗುತ್ತದೆ.
ಈ ಸರ್ಕಾರ ನಮಗೇನು ಕೊಡದಿದ್ದರೂ ನಾವು ತೆರಿಗೆ ಕೊಡಬೇಕು, (ಅನಿವಾರ‌್ಯವಾಗಿ ತೆರಿಗೆ ಕಟ್ಟುವ ದೊಡ್ಡ ವರ್ಗ ಇದು) ಈ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿ ಆ ತೆರಿಗೆ ಹಣವನ್ನು ಲೂಟಿ ಹೊಡೆದು ಜೇಬು ತುಂಬಿಸಿಕೊಳುತ್ತಿದ್ದಾರೆ ಎಂಬ ಆಕ್ರೋಶ ಇವರಲ್ಲಿದೆ.
ಅಣ್ಣಾ ಚಳವಳಿಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಿರುವುದು ಈ ಐದು ಕೋಟಿ ಮಧ್ಯಮ ವರ್ಗದ ಜನ. ಆರ್ಥಿಕವಾಗಿ ಸುಭದ್ರವಾಗಿರುವ, ವಿವಿಧ ಸಂಪರ್ಕ ಮಾಧ್ಯಮಗಳ ಮೂಲಕ ಕ್ಷಿಪ್ರಗತಿಯಲ್ಲಿ ಸಂಘಟಿತರಾಗಬಲ್ಲ ಮತ್ತು `ಸಾರ್ವಜನಿಕ ಅಭಿಪ್ರಾಯ~ವನ್ನು ಸುಲಭದಲ್ಲಿ ರೂಪಿಸಬಲ್ಲಷ್ಟು ಜಾಣರಾಗಿರುವ ಶಕ್ತಿಶಾಲಿ ವರ್ಗ ಇದು. ಇಂತಹದ್ದೊಂದು ವರ್ಗ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಲು ಹೊರಟಿರುವುದು ಒಳ್ಳೆಯದೇ ಅಲ್ಲವೇ ಎಂದು ಪ್ರಶ್ನಿಸುವ ಮುಗ್ಧರೂ ಇದ್ದಾರೆ.
ಆದರೆ ಈ ವರ್ಗದಲ್ಲಿರುವ ಹೆಚ್ಚಿನವರು ತಮ್ಮ ಉದ್ಯೋಗದಾತರಾಗಿರುವ ಕಾರ್ಪೋರೇಟ್ ದೊರೆಗಳು ಇದೇ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಬಳಸಿಕೊಂಡು ಸರ್ಕಾರಿ ಖಜಾನೆಯನ್ನು ಲೂಟಿ ಹೊಡೆಯುವುದು ಗೊತ್ತಿದ್ದರೂ ಬಾಯಿ ಬಿಚ್ಚುವುದಿಲ್ಲ.
ಈ ದೇಶದ ಶೇಕಡಾ 80ರಷ್ಟು ಜನ ದಿನದ ಆದಾಯವಾದ ಇಪ್ಪತ್ತು ರೂಪಾಯಿಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂಬ ಸತ್ಯ ಇವರ ಮನಸ್ಸನ್ನು ಕಲಕುವುದಿಲ್ಲ.
ಅಪಾಯಕಾರಿಯಾಗಿ ಬೆಳೆಯುತ್ತಿರುವ ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದರ ಇವರಲ್ಲಿ ಗಾಬರಿ ಹುಟ್ಟಿಸುವುದಿಲ್ಲ. `ಸಾಮಾಜಿಕ ನ್ಯಾಯ~ ಎನ್ನುವುದು ಇವರಿಗೆ ಗೇಲಿಯ ಮಾತು.
ಆರ್ಥಿಕ ಉದಾರೀಕರಣವೆಂದರೆ ಕೇವಲ ಖಾಸಗಿಕರಣ ಮತ್ತು ಯಾವ ಬೆಲೆ ತೆತ್ತಾದರೂ ಇದನ್ನು ಸಾಧಿಸಬೇಕೆಂಬ ಅಭಿವೃದ್ಧಿಯ ಕುರುಡು ಮಾದರಿ ಇಂದಿನ ದುರಂತಕ್ಕೆ ಕಾರಣ. ಒಬ್ಬ ಸಾಮಾನ್ಯ ಮನುಷ್ಯನ ಪ್ರತಿಭೆ, ಮತ್ತು  ಸಾಮರ್ಥ್ಯವನ್ನು ಗುರುತಿಸುವ ಮತ್ತು ಬೆಳೆಸುವ ಖಾಸಗೀಕರಣ ತಪ್ಪಲ್ಲವೇ ಅಲ್ಲ.
ಆದರೆ ಭಾರತದಲ್ಲಿ ಹೆಚ್ಚಿನ ಖಾಸಗಿ ಉದ್ಯಮಗಳು ಬೆಳೆದದ್ದು ಕೇವಲ ಸ್ವಂತ ಸಾಮರ್ಥ್ಯದಿಂದ ಇಲ್ಲವೇ ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ಜತೆಗಿನ ಆರೋಗ್ಯಕರ ಪೈಪೋಟಿ ಮೂಲಕ ಅಲ್ಲ. ಅವರು ಬೆಳೆಯಲು ಬಳಸಿದ್ದು ಅಡ್ಡದಾರಿ.
ಇದರಲ್ಲಿ ಷಾಮೀಲಾಗಿದ್ದು ಈಗ ತಿಹಾರ್ ಜೈಲಿನಲ್ಲಿರುವ ರಾಜಕಾರಣಿಗಳು ಮತ್ತು ಸರ್ಕಾರದ ಉನ್ನತ ಅಧಿಕಾರಿಗಳಂತಹವರು. ಬೆಂಗಳೂರಿನಲ್ಲಿರುವ ಬಿಎಸ್‌ಎನ್‌ಎಲ್ ಮೊಬೈಲ್ ಬಳಕೆದಾರರನ್ನು ಕೇಳಿ, ಎಲ್ಲರದ್ದೂ ನೆಟ್‌ವರ್ಕ್ ಸಮಸ್ಯೆಯ ಗೋಳು.

ಆದರೆ ಮೊನ್ನೆಮೊನ್ನೆ ಹುಟ್ಟಿಕೊಂಡಿರುವ ಖಾಸಗಿ ಮೊಬೈಲ್ ಕಂಪೆನಿಗಳ ಸೇವೆಯ ಬಳಕೆದಾರರಲ್ಲಿ ಈ ಸಮಸ್ಯೆ ಇಲ್ಲ, ಯಾಕೆ? ಇದೊಂದು ಸಣ್ಣ ಉದಾಹರಣೆ. ಸರ್ಕಾರಿ ಶಾಲೆ, ಆಸ್ಪತ್ರೆ, ಸಂಚಾರ ವ್ಯವಸ್ಥೆ ಎಲ್ಲವನ್ನೂ ವ್ಯವಸ್ಥಿತವಾಗಿ ದುರ್ಬಲಗೊಳಿಸಿ ಖಾಸಗಿಯವರಿಗೆ ದಾರಿ ಮಾಡಿಕೊಟ್ಟವರು ಯಾರು?
ಇದೇ ಉದಾರೀಕರಣದ ಅವತಾರ ಪುರುಷರಲ್ಲವೇ? ಸರ್ಕಾರಿ ಸ್ವಾಮ್ಯದಲ್ಲಿರುವ ಸಂಸ್ಥೆಗಳನ್ನು ಖಾಸಗಿ ಕ್ಷೇತ್ರಕ್ಕೆ ಪೈಪೋಟಿ ನೀಡುವ ರೀತಿಯಲ್ಲಿ ಬಲಗೊಳಿಸಬೇಕಾದ ಸರ್ಕಾರವೇ ಅದನ್ನು ನಾಶ ಮಾಡಿ ಖಾಸಗಿರಂಗವನ್ನು ಬೆಳೆಸಲು ಹೊರಟ ಸ್ವಾರ್ಥ ರಾಜಕಾರಣದ ಫಲಶ್ರುತಿಯನ್ನು ದೇಶ ಉಣ್ಣುತ್ತಿದೆ.
ದುರಂತವೆಂದರೆ ಈ ಐದುಕೋಟಿ ಜನರ ಆಕ್ರೋಶ ಕೇವಲ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಿಗಷ್ಟೇ ಸೀಮಿತವಾಗಿಲ್ಲ, ಅದು ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಪ್ರಶ್ನಿಸುವಷ್ಟು ಮಟ್ಟಕ್ಕೆ ಬೆಳೆಯುತ್ತಿದೆ.
`ರಾಜಕಾರಣಿಗಳೆಲ್ಲ ಕಳ್ಳರು~, `ಚುನಾವಣೆ ಎನ್ನುವುದು ಮೋಸ~..ಎಂಬಿತ್ಯಾದಿ ಬೇಜವಾಬ್ದಾರಿ ಹೇಳಿಕೆಗಳಿಗೆ ಇದೇ ಕಾರಣ. ಇದಕ್ಕೆಲ್ಲ ಪರಿಹಾರ ಎಂಬಂತೆ ಬಿಂಬಿಸಲಾಗುತ್ತಿರುವ ಸರ್ವಶಕ್ತ ಜನಲೋಕಪಾಲ ಮಸೂದೆ ಕೂಡಾ ಒಂದು ರೀತಿಯಲ್ಲಿ ಸರ್ಕಾರವನ್ನೇ ಖಾಸಗೀಕರಣಗೊಳಿಸುವ ಪ್ರಯತ್ನ.

ಇಂತಹ ಅರಾಜಕ ಮನಸ್ಥಿತಿಯ ಹೊಸ ಪೀಳಿಗೆಯ ಜನಕ ಯಾರೆಂದು ತಿಳಿದುಕೊಂಡಿರಿ? ಅದು ಈ ದೇಶದ ಈಗಿನ ಪ್ರಧಾನಿ ಮನಮೋಹನ್‌ಸಿಂಗ್. ಇಪ್ಪತ್ತು ವರ್ಷಗಳ ಹಿಂದೆ ಅವರು ಬಿತ್ತಿದ್ದು ಇಂದು ಬೆಳೆದು ಅವರ ಬಲಿ ಕೇಳುತ್ತಿದೆ.
ತಪ್ಪು ಈ ಐದುಕೋಟಿ ಜನರದ್ದಲ್ಲ, ಅವರು ಬೆಳೆದದ್ದೇ ಹಾಗೆ. ತಪ್ಪು ಅವರನ್ನು ಬೆಳೆಸಿದವರದ್ದು. ಬಹುನಿರೀಕ್ಷೆಯಿಂದ ಬೆಳೆಸಿದ ಮಕ್ಕಳಿಂದಲೇ ಹೊರದಬ್ಬಲ್ಪಟ್ಟ ತಂದೆಯ ಸ್ಥಿತಿ ಪ್ರಧಾನಿ ಮನಮೋಹನ್‌ಸಿಂಗ್ ಅವರದ್ದು. ಮಾಡಿದ್ದನ್ನು ಉಣ್ಣಲೇ ಬೇಕಾದ ಸ್ಥಿತಿ ಅವರದ್ದು.

Monday, August 22, 2011

ಬೀದಿಗಿಳಿದು ಕೂಗಿಕೊಂಡವರಷ್ಟೇ ದೇಶಪ್ರೇಮಿಗಳೇ?

ಕೇಂದ್ರ ಸರ್ಕಾರದ ಮೂರ್ಖತನ ಮತ್ತು ತಥಾಕಥಿತ ನಾಗರಿಕ ಸಮಿತಿಯ ಹಟಮಾರಿತನದ ನಡುವಿನ ಹಗ್ಗಜಗ್ಗಾಟದಲ್ಲಿ ಸಿಕ್ಕಿಹಾಕಿಕೊಂಡು ದೇಶ ಒದ್ದಾಡುತ್ತಿದೆ.
ಸರ್ಕಾರದ ಲೋಕಪಾಲ ಮಸೂದೆಯನ್ನು ವಿರೋಧಿಸುವವರು `ಸಂಸದೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವಿರೋಧಿಗಳು~ ಎಂದು ಯುಪಿಎ ಆರೋಪಿಸುತ್ತಿದೆ.
ಜನಲೋಕಪಾಲ ಮಸೂದೆಯನ್ನು ಒಪ್ಪದವರೆಲ್ಲ `ಕಾಂಗ್ರೆಸ್ ಏಜೆಂಟ್~ಗಳೆಂದು ನಾಗರಿಕ ಸಮಿತಿ ಲೇವಡಿ ಮಾಡುತ್ತಿದೆ. ಸಂಸತ್‌ನ ಉಭಯ ಸದನಗಳ ಸದಸ್ಯರ ಒಟ್ಟು ಸಂಖ್ಯೆ 790.
ದೇಶದ ಬೇರೆಬೇರೆ ಕಡೆ ನಡೆಯುತ್ತಿರುವ `ಭ್ರಷ್ಟಾಚಾರ ವಿರೋಧಿ ಚಳವಳಿ~ಯಲ್ಲಿ ಪಾಲ್ಗೊಂಡವರ ಸಂಖ್ಯೆಯನ್ನು ಎಷ್ಟೇ ಹಿಗ್ಗಿಸಿದರೂ ಅದು 25 ಲಕ್ಷ ದಾಟಲಾರದು.
120 ಕೋಟಿ ಜನಸಂಖ್ಯೆಯ ದೇಶದಲ್ಲಿ ಈ 25,00,790 ಮಂದಿ ಸೇರಿ ಉಳಿದವರ ಮೇಲೆ ಸವಾರಿ ಮಾಡುತ್ತಿದ್ದಾರೆ. ಈ ಎರಡು ಗುಂಪುಗಳ ಅರ್ಭಟದಲ್ಲಿ ಯಾವ ಗುಂಪಿಗೂ ಸೇರದೆ ಇರುವವರು ದನಿ ಕಳೆದುಕೊಂಡಿದ್ದಾರೆ.
ಉದಾಹರಣೆಗೆ ಪ್ರಧಾನ ಮಂತ್ರಿ ಮತ್ತು ನ್ಯಾಯಮೂರ್ತಿಗಳನ್ನು ಲೋಕಪಾಲರ ವ್ಯಾಪ್ತಿಗೆ ಸೇರಿಸುವುದನ್ನು ಸರ್ಕಾರ ವಿರೋಧಿಸುತ್ತಿದೆ, ಅವರನ್ನು ಸೇರಿಸಬೇಕೆಂದು ನಾಗರಿಕ ಸಮಿತಿ ಹಟ ಹಿಡಿದು ಕೂತಿದೆ.
`ಲೋಕಪಾಲರ ವ್ಯಾಪ್ತಿಯಲ್ಲಿ ಪ್ರಧಾನಿ ಮತ್ತು ನ್ಯಾಯಮೂರ್ತಿಗಳು ಇರಲಿ, ಅವರ ಜತೆ ಕಾರ್ಪೊರೇಟ್ ಕ್ಷೇತ್ರ, ಧಾರ್ಮಿಕ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳೂ (ಎನ್‌ಜಿಒ) ಇರಲಿ ~ ಎಂದರೆ `ನಿಮ್ಮದು ಮೂರನೇ ಗುಂಪೇನು~ ಎಂದು ಉಳಿದೆರಡು ಗುಂಪುಗಳ ನಾಯಕರು ಬಾಯಿಮುಚ್ಚಿಸುವ ಪ್ರಯತ್ನ ಮಾಡುತ್ತಾರೆಯೇ ವಿನಾ ಉತ್ತರ ನೀಡುವುದಿಲ್ಲ.
ಯಾಕೆಂದರೆ ಹೀಗೆ ಪ್ರಶ್ನಿಸುವ ಎರಡೂ ಗುಂಪುಗಳಲ್ಲಿಯೂ ಲೋಕಪಾಲ ಮಸೂದೆಗಳಿಂದ ಹೊರಗಿಟ್ಟಿರುವ ಮೂರು ವರ್ಗಗಳ ಪ್ರತಿನಿಧಿಗಳಿದ್ದಾರೆ. ಅಗತ್ಯ ಸಂಪನ್ಮೂಲ ಮತ್ತು ಕಾರ‌್ಯಕರ್ತರನ್ನು ಪಡೆಯಲು ಚಳವಳಿಗಾರರಿಗೆ ಈ ವರ್ಗಗಳ ನೆರವು ಬೇಕು.
ರಾಜಕಾರಣದ ಇಂತಹದೇ ಅಗತ್ಯಗಳನ್ನು ಕೂಡಾ  ಈ ವರ್ಗಗಳು ಪೂರೈಸುತ್ತವೆ. ರಾಮ್‌ದೇವ್ ಎಂಬ ಯೋಗಗುರುವನ್ನು ಮೊದಲು ತಲೆಮೇಲೆ ಹೊತ್ತುಕೊಂಡು ಮೆರೆದದ್ದೇ ಈ ವರ್ಗಗಳು. ಆ ಮೂರ್ತಿಭಂಜನ ನಡೆದ ನಂತರ ಈಗ ಅಣ್ಣಾ ಹಜಾರೆ ಎಂಬ ಅಮಾಯಕ ಸಮಾಜಸೇವಕನ ಬೆನ್ನ ಹಿಂದೆ ನಿಂತಿವೆ.
ಇವರೆಲ್ಲರೂ ಕೂಡಿ ಸೃಷ್ಟಿಸಿರುವ ಸಮೂಹಸನ್ನಿಯಲ್ಲಿ ಬಹುಸಂಖ್ಯೆಯಲ್ಲಿರುವ `ಮೌನಿ ಮೂರನೇ ವರ್ಗ~ದ್ದು ಮಾತ್ರವಲ್ಲ, ಅರ್ಭಟಿಸುತ್ತಿರುವ ಎರಡು ಗುಂಪುಗಳ ನಾಯಕರ ದನಿಗಳೂ ಉಡುಗಿಹೋಗಿವೆ.
ಪ್ರಾಮಾಣಿಕವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗದ ಅಸಹಾಯಕತೆ ಪ್ರಧಾನಿ ಮನಮೋಹನ್‌ಸಿಂಗ್ ಅವರದ್ದಾದರೆ, ತಿಳುವಳಿಕೆಯ ಕೊರತೆಯಿಂದಾಗಿ ಅನಿವಾರ್ಯವಾಗಿ ಇತರರ ಮೇಲೆ ಅವಲಂಬಿಸಬೇಕಾಗಿರುವ ಅಸಹಾಯಕತೆ ಅಣ್ಣಾ ಹಜಾರೆ ಅವರದ್ದು.
ಮೊದಲನೆಯವರ ಬೆನ್ನ ಹಿಂದೆ `ಅಡಿಯಿಂದ ಮುಡಿ ವರೆಗೆ ಅಣ್ಣಾ ಭ್ರಷ್ಟರು~ ಎಂದು ಹೇಳುತ್ತಿರುವ ಮನೀಷ್ ತಿವಾರಿಯಂತಹ ಬಾಯಿಬಡುಕರು, `ಚಳವಳಿಯ ಹಿಂದೆ ವಿದೇಶಿ ಕೈವಾಡ ಇದೆ~ ಎಂದು ಹೇಳುತ್ತಿರುವ ರಶೀದ್ ದಲ್ವಿ ಅವರಂತಹ ಮೂರ್ಖರು, ಒಬ್ಬ ಸತ್ಯಾಗ್ರಹಿಯನ್ನು ಯಾವ ರೀತಿ ನಡೆಸಿಕೊಳ್ಳಬೇಕೆಂದು ತಿಳಿಯದ ಗೃಹಸಚಿವ ಚಿದಂಬರಮ್ ಅವರಂತಹ ಉದ್ಧಟರು, ಕಪಿಲ್ ಸಿಬಾಲ್ ಅವರಂತಹ ಭಟ್ಟಂಗಿಗಳು ನೆರೆದಿದ್ದಾರೆ.
ಇರುವವರಲ್ಲಿಯೇ ಪ್ರಬುದ್ಧತೆಯಿಂದ ಮಾತನಾಡಬಲ್ಲ ಪ್ರಣಬ್ ಮುಖರ್ಜಿ, ಸಲ್ಮಾನ್ ಖುರ್ಷಿದ್, ಎ.ಕೆ.ಆಂಟನಿ ಅವರ ಮುಖಗಳು ಎಲ್ಲೂ ಕಾಣುತ್ತಿಲ್ಲ. ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ರಕ್ಷಿಸುವುದಕ್ಕಾಗಿ ಭಟ್ಟಂಗಿ ಕೂಟ ಈ ರೀತಿ ಬಹಿರಂಗವಾಗಿ ಸಂಘರ್ಷಕ್ಕೆ ಇಳಿದಿದೆ ಎಂದು ತಿಳಿದುಕೊಳ್ಳಬೇಕಾಗಿಲ್ಲ. ತಮ್ಮನ್ನು ರಕ್ಷಿಸಿಕೊಳ್ಳಲು ಮನಮೋಹನ್‌ಸಿಂಗ್ ಅವರಿಗೆ ಇವರ ರಕ್ಷಣೆಯ ಅಗತ್ಯ ಇರಲಾರದು.
ಕಾಂಗ್ರೆಸ್ ನಾಯಕರ `ಗುಪ್ತ ಕಾರ್ಯಸೂಚಿ~ ಬೇರೆಯೇ ಇದೆ. ಅದು ಮುಂದೊಂದು ದಿನ ಪ್ರಧಾನಿ ಪಟ್ಟ ಏರಲಿದ್ದಾರೆ ಎಂದು ಅವರು ನಂಬಿರುವ ರಾಹುಲ್ ಗಾಂಧಿಯ ಭವಿಷ್ಯವನ್ನು ಸುರಕ್ಷಿತವಾಗಿಡುವುದು.

ಇನ್ನೂ ಬಾಲಲೀಲೆಯಲ್ಲಿಯೇ ಮೈಮರೆತಿರುವ ರಾಹುಲ್‌ಗಾಂಧಿ ತಮ್ಮ ಕುಟುಂಬದ ಭಟ್ಟಂಗಿಗಳ ಮೂರ್ಖ ನಡವಳಿಕೆಯ ಬೋನಿನಲ್ಲಿ ಬಿದ್ದ ಹಾಗೆ ಕಾಣುತ್ತಿದೆ. ಈಗ ನಡೆಯುತ್ತಿರುವ ಚಳವಳಿಯಲ್ಲಿ ಭಾಗಿಯಾಗಿರುವವರ ಮುಖಗಳನ್ನು ಕಣ್ಣುಬಿಟ್ಟು ನೋಡಿದರೆ ತಾನೇನು ಕಳೆದುಕೊಳ್ಳುತ್ತಿದ್ದೇನೆ ಎಂದು ಈ ಯುವನಾಯಕನಿಗೆ ಅರಿವಾಗಬಹುದು.

ಚಳವಳಿಯಲ್ಲಿ ಭಾಗವಹಿಸುತ್ತಿರುವವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ಯುವಕರು. ವರ್ಷ ಕಳೆದಂತೆ ಭಾರತಕ್ಕೆ ಯೌವ್ವನ ಬರುತ್ತಿದೆ. ಈಗಿನ ಒಟ್ಟು ಜನಸಂಖ್ಯೆಯಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಶೇಕಡಾ 65ರಷ್ಟಿದ್ದಾರೆ.
ಮೊನ್ನೆ ಮೊನ್ನೆ ವರೆಗೆ ಮುದಿ ರಾಜಕಾರಣಿಗಳಿಂದ ಬೇಸತ್ತು ಹೋಗಿರುವ ಯುವಸಮೂಹಕ್ಕೆ ರಾಹುಲ್‌ಗಾಂಧಿ ಅನಿವಾರ್ಯ ಎನ್ನುವ ಸ್ಥಿತಿ ಇತ್ತು. ಈ ಯುವ ಸಮೂಹ ಈಗ ಬೀದಿಗಿಳಿದು ಕಾಂಗ್ರೆಸ್ ವಿರೋಧಿ ಘೋಷಣೆ ಕೂಗುತ್ತಿದೆ.
ಲೋಕಪಾಲರ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿಗಳನ್ನು ಸೇರಿಸುವುದಕ್ಕೆ ತಮ್ಮ ಒಪ್ಪಿಗೆ ಇದೆ ಎಂದು ಹೇಳುವಷ್ಟು ಧೈರ್ಯ ಇಲ್ಲದ ಈ ಯುವ ನಾಯಕನನ್ನು ಯುವಜನರಾದರೂ ಯಾಕೆ ಒಪ್ಪಿಕೊಳ್ಳಬೇಕು?
ಆಡಳಿತಾರೂಢ ಪಕ್ಷದಲ್ಲಿರುವಂತೆ ಅಣ್ಣಾ ಟೀಮ್‌ನಲ್ಲಿಯೂ `ಅಣ್ಣಾ ಎಂದರೆ ಇಂಡಿಯಾ~ ಎಂದು ಕೂಗುತ್ತಿರುವ ಕಿರಣ್ ಬೇಡಿಯವರಂತಹ ಬಾಯಿ ಬಡುಕರು, `ರಾಜಕಾರಣಿಗಳೆಲ್ಲ ಕಳ್ಳರು~ ಎಂದು ಹೇಳುತ್ತಿರುವ ಅರವಿಂದ್ ಕೇಜ್ರಿವಾಲಾ ಅವರಂತಹ ಸಿನಿಕರು ಇದ್ದಾರೆ. ಇವರಲ್ಲಿಯೇ ಜವಾಬ್ದಾರಿಯುತರಂತೆ ಕಾಣಿಸುತ್ತಿರುವ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆಯವರಂತಹ ನಿವೃತ್ತ ಲೋಕಾಯುಕ್ತರು ಮತ್ತು ಪ್ರಶಾಂತ್ ಭೂಷಣ್ ಅವರಂತಹ ವಕೀಲರೂ ಇದ್ದಾರೆ. ಇವರಿಬ್ಬರು ಭ್ರಷ್ಟಾಚಾರ ನಿರ್ಮೂಲನೆಗಾಗಿ ಕೆಲಸ ಮಾಡಿ ತೋರಿಸಿ ಕೊಟ್ಟವರು.
ನ್ಯಾ.ಸಂತೋಷ್ ಹೆಗ್ಡೆ ಮತ್ತು ಸಹೋದ್ಯೋಗಿಗಳ ಶ್ರಮದಿಂದಾಗಿ ಮಾಜಿ ಸಚಿವರೊಬ್ಬರು ಜೈಲಲ್ಲಿದ್ದಾರೆ, ಮುಖ್ಯಮಂತ್ರಿಗಳು ಮನೆಗೆ ಹೋಗಿದ್ದಾರೆ.
ಬೋಫೋರ್ಸ್, ನರ್ಮದಾ ಆಣೆಕಟ್ಟು, ಅಕ್ರಮ ಗಣಿಗಾರಿಕೆ ಮೊದಲಾದ ಪ್ರಕರಣಗಳು ಸೇರಿದಂತೆ ಕಳೆದ ಹದಿನೈದು ವರ್ಷಗಳಲ್ಲಿ ಸುಮಾರು 500 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ಹೆಚ್ಚು ಕಡಿಮೆ ಉಚಿತವಾಗಿ ವಕೀಲರಾಗಿ ವಾದ ನಡೆಸಿದವರು ಪ್ರಶಾಂತ್ ಭೂಷಣ್. ಆದರೆ ಟಿವಿ ಚಾನೆಲ್‌ಗಳಲ್ಲಿ, ಪತ್ರಿಕೆಗಳಲ್ಲಿ ಬೇಡಿ ಮತ್ತು ಕೇಜ್ರಿವಾಲ್ ಅವರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವವರು. `ಪ್ರಧಾನಿಯವರನ್ನು ಬೇಕಾದರೆ ಲೋಕಪಾಲರ ವ್ಯಾಪ್ತಿಯಿಂದ ಹೊರಗಿಡುವ~ ಎಂಬ ನ್ಯಾ.ಸಂತೋಷ್ ಹೆಗ್ಡೆ ರಾಜೀಸೂತ್ರವನ್ನು ಈ ದೆಹಲಿ ನಾಯಕರು ಒಪ್ಪುತ್ತಿಲ್ಲ.
  ಒಂದು ಚಳವಳಿಯ ಸೋಲು-ಗೆಲುವು ಅದರ ನಾಯಕತ್ವ, ಉದ್ದೇಶ, ಸಂಘಟನೆ ಮತ್ತು ಹೋರಾಟದ ಮಾರ್ಗವನ್ನು ಅವಲಂಬಿಸಿರುತ್ತದೆ. ಅಣ್ಣಾ ಚಳವಳಿಯ ಉದ್ದೇಶ ಸಾಧುವಾದುದು. ಈ ವರೆಗಿನ ಹೋರಾಟದ ಮಾರ್ಗ ಕೂಡಾ ಜನ ಒಪ್ಪುವಂತಹದ್ದೇ ಆಗಿದೆ. ಆದರೆ ನಾಯಕತ್ವ ಮತ್ತು ಚಳವಳಿಗೆ ಶಕ್ತಿ ತುಂಬಬಲ್ಲ ಸಂಘಟನೆಯಲ್ಲಿನ ದೋಷಗಳು ಈ ಚಳವಳಿಯನ್ನು ಕಾಡುತ್ತಿದೆ.
ಕಿಶನ್ ಬಾಬುರಾವ್ ಹಜಾರೆ ಒಬ್ಬ ಮುಗ್ದ, ಪ್ರಾಮಾಣಿಕ ಸಮಾಜ ಸೇವಕ ಅಷ್ಟೇ. ಅವರ ತಿಳುವಳಿಕೆಯ ಮಟ್ಟ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರಿಗಿಂತ ಹೆಚ್ಚಿಲ್ಲ. ಸಾರ್ವಜನಿಕ ಹೇಳಿಕೆ ನೀಡುವಾಗ ಅಕ್ಕಪಕ್ಕದಲ್ಲಿ ಸಂಭಾಳಿಸಲು ಯಾರಾದರೂ ಇಲ್ಲದೆ ಇದ್ದರೆ ಎಡವಟ್ಟು ಮಾಡಿಕೊಳ್ಳುತ್ತಾರೆ. ಅದು ಅವರ ಮಿತಿ.
ಇದರಿಂದಾಗಿ ಸಂಘಟನೆ ಹಾದಿ ತಪ್ಪುತ್ತಿದೆ. ನಾಯಕತ್ವದ ಈ ದೌರ್ಬಲ್ಯವನ್ನೇ ಬಳಸಿಕೊಂಡು ಬೇರೆಬೇರೆ ಶಕ್ತಿಗಳು ಚಳವಳಿಯ ಒಳ ಪ್ರವೇಶಿಸಿವೆ. 
ಉದಾಹರಣೆಗೆ ಕರ್ನಾಟಕದಲ್ಲಿ ಇದ್ದಕ್ಕಿದ್ದ ಹಾಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಸೇರಿದಂತೆ ಸಂಘ ಪರಿವಾರದ ಸದಸ್ಯರು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಭಾಗವಹಿಸತೊಡಗಿದ್ದಾರೆ.
ಯುವಜನರು-ವಿದ್ಯಾರ್ಥಿಗಳು ಈ ರೀತಿ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ಕ್ರಿಯಾಶೀಲರಾಗುವುದು ಒಳ್ಳೆಯ ಬೆಳವಣಿಗೆ. ಆದರೆ ಕಳೆದ ಮೂರುವರ್ಷಗಳಲ್ಲಿ ಇವರೆಲ್ಲಿದ್ದರು? ಪ್ರಕೃತಿಯನ್ನು ದೇವರೆಂದು ಪೂಜಿಸುವ ಈ ಪರಿವಾರದವರು ಅದೇ ಪ್ರಕೃತಿಯನ್ನು ಅಕ್ರಮ ಗಣಿಗಾರಿಕೆ ಮೂಲಕ ಲೂಟಿ ಹೊಡೆಯುತ್ತಿದ್ದಾಗ ಅದರ ವಿರುದ್ಧ ಸೊಲ್ಲೆತ್ತಲಿಲ್ಲ.
ದೇಶದಲ್ಲಿಯೇ ಅತ್ಯಂತ ಭ್ರಷ್ಟ ರಾಜ್ಯ ಕರ್ನಾಟಕ ಎಂದು ರಾಷ್ಟ್ರೀಯ ಮಾಧ್ಯಮಗಳು ಮತ್ತು ನ್ಯಾಯಾಲಯಗಳು ಹೇಳಿದಾಗ ಇವರ‌್ಯಾರು ಸಿಡಿದೆದ್ದು ಬೀದಿಗಿಳಿಯಲಿಲ್ಲ.
ಲೋಕಾಯುಕ್ತರು ಆರೋಪಿ ಎಂದು ಹೇಳಿದ ಮೇಲೂ ರಾಜೀನಾಮೆ ನೀಡಲು ಮೀನಮೇಷ ಎಣಿಸುತ್ತಿದ್ದ ಮುಖ್ಯಮಂತ್ರಿಯವರ ವಿರುದ್ಧ ಕನಿಷ್ಠ ಹೇಳಿಕೆಯನ್ನೂ ನೀಡಲಿಲ್ಲ. `ನೂತನ ಮುಖ್ಯಮಂತ್ರಿಯ ಆಯ್ಕೆಯಲ್ಲಿ ಶಾಸಕರ ಖರೀದಿ ನಡೆದಿದೆ~ ಎಂದು ಬಿಜೆಪಿ ನಾಯಕರೇ ಹೇಳಿದಾಗಲೂ ಅದನ್ನು ಖಂಡಿಸಬೇಕೆಂದು ಇವರಿಗ್ಯಾರಿಗೂ ಅನಿಸಲಿಲ್ಲ.
ಲೋಕಾಯುಕ್ತ ವರದಿಯಲ್ಲಿ ಆರೋಪಿಗಳೆನಿಸಿಕೊಂಡವರು ರಾಜ್ಯ ಸಚಿವ ಸಂಪುಟಕ್ಕೆ ಸೇರಲು ಒತ್ತಡ ಹೇರುವುದನ್ನು ಇವರು ವಿರೋಧಿಸಲಿಲ್ಲ. ಇವೆಲ್ಲ ಭ್ರಷ್ಟಾಚಾರ ಅಲ್ಲವೇನು?
 ಲೋಕಪಾಲರ ನೇಮಕ ಎಂಬುದು ಭವಿಷ್ಯದಲ್ಲಿನ ಭ್ರಷ್ಟಾಚಾರವನ್ನು ತಡೆಯುವ ಒಂದು ಪ್ರಯತ್ನ. ಆದರೆ ಕರ್ನಾಟಕದಲ್ಲಿ ಈಗಾಗಲೇ ಇರುವ ಲೋಕಾಯುಕ್ತರು ಭ್ರಷ್ಟಾಚಾರವನ್ನು ಪತ್ತೆಹಚ್ಚಿ ರಾಜ್ಯಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಕರ್ನಾಟಕದಲ್ಲಿರುವವರಿಗೆ ಯಾವುದು ಮುಖ್ಯ? ಕೇಂದ್ರದಲ್ಲಿ ಲೋಕಪಾಲರ ನೇಮಕಕ್ಕಾಗಿ ನಡೆಸುವ ಹೋರಾಟವೇ? ಇಲ್ಲ, ಈಗಾಗಲೇ ನಮ್ಮಲ್ಲಿರುವ ಲೋಕಾಯುಕ್ತರು ಸಲ್ಲಿಸಿರುವ ವರದಿಯ ಆಧಾರದಲ್ಲಿ ಕೈಗೊಳ್ಳುವ ಕ್ರಮವೇ? ಈ ವರದಿಯನ್ನು ತಕ್ಷಣ ಒಪ್ಪಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಎಬಿವಿಪಿ ಕಾರ‌್ಯಕರ್ತರು ರಾಜ್ಯಸರ್ಕಾರದ ಮೇಲೆ ಒತ್ತಡ ಹೇರುವುದಿಲ್ಲ? ಇದಕ್ಕಾಗಿ ಯಾಕೆ ಉಪವಾಸ ಮಾಡಬಾರದು? ಇಂತಹ ಆತ್ಮವಂಚನೆಯ ನಡವಳಿಕೆಯೇ ಅಣ್ಣಾ ಚಳವಳಿಯಲ್ಲಿ ಭಾಗವಹಿಸುತ್ತಿರುವವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತೆ ಮಾಡಿರುವುದು. ಇಂತಹವರೇನು ಈ ಚಳವಳಿಯ ಗೌರವ ಹೆಚ್ಚಿಸುವುದಿಲ್ಲ.
ನಾಲ್ಕು ದಿಕ್ಕುಗಳಿಂದಲೂ ಗುರಿ ಇಟ್ಟಿರುವ ಟಿವಿ ಕ್ಯಾಮೆರಾಗಳ ಈ ಕಾಲದಲ್ಲಿ ಪ್ರಾಮಾಣಿಕರು, ಸಜ್ಜನರು, ದೇಶಪ್ರೇಮಿಗಳು ಎಂದು ತೋರಿಸಿಕೊಳ್ಳುವುದು ಬಹಳ ಸುಲಭ.
ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು, ಮುಖಕ್ಕೂ ಅದರ ಬಣ್ಣ ಬಳಿದುಕೊಂಡು ಕ್ಯಾಮೆರಾ ಮುಂದೆ `ಭಾರತ ಮಾತಾ ಕೀ ಜೈ~ ಎಂದು ಗಂಟಲು ಬಿರಿಯುವ ಹಾಗೆ ಕೂಗಿಕೊಂಡರೆ ಸಾಕು. ಹಗಲಲ್ಲಿ ಕಚೇರಿಗೆ ಹೋಗಬೇಕಾಗಿದ್ದರೆ ಸಂಜೆ ಹೊತ್ತು ಬಂದು ನಾಲ್ಕು ದಾರಿಗಳು ಕೂಡುವಲ್ಲಿ ಕ್ಯಾಂಡೆಲ್ ಹಚ್ಚಿದರೂ ಸಾಕು. ಇನ್ನೂ ಸ್ವಲ್ಪ ಸೃಜನಶೀಲರಾಗಿ ಯೋಚನೆ ಮಾಡುವವರು ಬೀದಿ ಗುಡಿಸುವುದು, ಶೂ ಪಾಲಿಷ್ ಮಾಡುವ ಕೆಲಸ ಮಾಡುತ್ತಾರೆ. ಇವೆಲ್ಲವೂ ಬಹಳ ಸುರಕ್ಷಿತವಾದ ವಿಧಾನ.
ಬಹುಶಃ ಈ ಕಲೆಯನ್ನು ಕಲಿತಿದ್ದರೆ ಭೋಪಾಲದ ಶೆಹಲಾ ಮಸೂದ್ ಎಂಬ ಯುವತಿ ಈಗಲೂ ಬದುಕಿರುತ್ತಿದ್ದಳು, ಅವಳ ತಂದೆ ಮಸೂದ್ ಸಿದ್ದಿಕಿ ವೃದ್ಧಾಪ್ಯದ ಕಾಲದಲ್ಲಿ ಮಗಳನ್ನು ಕಳೆದುಕೊಂಡು ರೋದಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಮಾಹಿತಿ ಹಕ್ಕು ಕಾಯಿದೆಯ ಕಾರ‌್ಯಕರ್ತೆಯಾಗಿದ್ದ ಶೆಹಲಾ ವನ್ಯಮೃಗಗಳ ಹತ್ಯೆ ಮತ್ತು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟದಲ್ಲಿ ತೊಡಗಿದ್ದಳು. ಅದಕ್ಕಾಗಿ ಜೀವತೆತ್ತಳು.
ಈ ರೀತಿಯ ಹೋರಾಟದಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ಈಕೆ ಮೊದಲನೆಯವಳೇನಲ್ಲ, ಗುಜರಾತ್‌ನ ಗಿರ್ ಅರಣ್ಯಪ್ರದೇಶದಲ್ಲಿನ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟದಲ್ಲಿ ತೊಡಗಿದ್ದ ಪರಿಸರವಾದಿ ಅಮಿತ್ ಜೆಟ್ವಾ ಅವರನ್ನು ಗುಜರಾತ್ ಹೈಕೋರ್ಟ್ ಮುಂಭಾಗದಲ್ಲಿಯೇ ಗುಂಡಿಟ್ಟು ಕೊಲ್ಲಲಾಗಿತ್ತು.
ಪುಣೆ ಸಮೀಪದ ತಾಲೆಗಾಂವ್‌ನಲ್ಲಿನ ದಕ್ಷಿಣ ಕನ್ನಡ ಮೂಲದ ಸತೀಶ್ ಶೆಟ್ಟಿ, ಮಹಾರಾಷ್ಟ್ರದ ದತ್ತಾತ್ರೇಯ ಪಾಟೀಲ್, ಔರಂಗಾಬಾದ್‌ನ ವಿಠ್ಠಲ್ ಗೀತೆ, ಆಂಧ್ರಪ್ರದೇಶದ ಸೋಲಾ ರಂಗರಾವ್....ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ, ಪರಿಸರ ನಾಶ ಮೊದಲಾದವುಗಳ ವಿರುದ್ಧ ಹೋರಾಟ ನಡೆಸಿ ಪ್ರಾಣ ಕಳೆದುಕೊಂಡವರ ಪಟ್ಟಿ ದೊಡ್ಡದಿದೆ.
ಇವರ‌್ಯಾರೂ ಬೀದಿಗಿಳಿದು ತಾವು ದೇಶಪ್ರೇಮಿಗಳೆಂದು ಪ್ರದರ್ಶಿಸಿಕೊಳ್ಳಲಿಲ್ಲ, ಅನಾಮಿಕರಾಗಿ ಅನ್ಯಾಯದ ವಿರುದ್ದ ಹೋರಾಟ ನಡೆಸಿದರು, ಅನಾಮಿಕರಾಗಿಯೇ ಮರೆಯಾಗಿ ಹೋದರು. ಟಿವಿ ಕ್ಯಾಮೆರಾ ಮುಂದೆ ಕೂಗಾಡುತ್ತಿರುವ ಭ್ರಷ್ಟಾಚಾರದ ವಿರುದ್ಧದ `ಉಗ್ರ ಹೋರಾಟಗಾರರನ್ನು~ ಕಂಡಾಗ ಇವರೆಲ್ಲ ನೆನಪಾಗುತ್ತಿದ್ದಾರೆ.

Monday, August 15, 2011

ಸದಾ ಆನಂದವಾಗಿರಲು ದಾರಿಗಳು ಬಹಳ ಇಲ್ಲ

ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದ ಗೌಡರದ್ದು ಒಂದು ರೀತಿಯಲ್ಲಿ ಸುಲಭದ ಕೆಲಸ, ಇನ್ನೊಂದು ರೀತಿಯಲ್ಲಿ ಕಷ್ಟದ್ದು. ಒಬ್ಬ ಕಳಂಕರಹಿತ ಮತ್ತು ದಕ್ಷ ಮುಖ್ಯಮಂತ್ರಿಯ ಉತ್ತರಾಧಿಕಾರಿಯಾಗಿ ಬಂದಾಗ ಹಿಂದಿನವರನ್ನು ಮೀರಿಸಿ ಜನಪ್ರಿಯತೆ ಗಳಿಸುವುದು ದೊಡ್ಡ ಸವಾಲು.
ಅದಕ್ಕಾಗಿ ಅವರೆಡೂ ಮೌಲ್ಯಗಳ ವಿಷಯದಲ್ಲಿ ಹೊಸಬರು ಒಂದು ತೂಕ ಹೆಚ್ಚಿರಬೇಕಾಗುತ್ತದೆ. ಇಲ್ಲದಿದ್ದರೆ ಸೋಲು ನಿಶ್ಚಿತ. ಅಧಿಕಾರಾರೂಢ ಭ್ರಷ್ಟ ಜನತಾ ಪಕ್ಷವನ್ನು ಸೋಲಿಸಿ ಅಧಿಕಾರಕ್ಕೆ ಬಂದ ವೀರೇಂದ್ರ ಪಾಟೀಲ್ ಅವರ ಆಡಳಿತದ ಕಿರು ಅವಧಿ ಆರೋಪಮುಕ್ತ ನಡವಳಿಕೆ ಮತ್ತು ದಕ್ಷ ಆಡಳಿತದಿಂದ ಜನಮನ ಸೆಳೆದಿತ್ತು.
ಆ ಸಾಧನೆಯ ಬಲ ಮಾತ್ರವಲ್ಲ, ಜನಪ್ರಿಯತೆಯ ತುತ್ತತುದಿಯಲ್ಲಿರುವಾಗಲೇ ಕಿತ್ತು ಹಾಕಿದ್ದರಿಂದ ಜನರ ಅನುಕಂಪ ಕೂಡಾ ಪಾಟೀಲರ ಕಡೆ ಇತ್ತು. ಇದನ್ನು ಮೀರಿ ಸರ್ಕಾರದ ವರ್ಚಸ್ಸನ್ನು ಬೆಳೆಸಬೇಕಾದ ಸವಾಲು ಹೊತ್ತು ಬಂದ ಎಸ್.ಬಂಗಾರಪ್ಪ ಪ್ರಾರಂಭದಿಂದಲೇ ಎಡವಿದರು.
ಭಿನ್ನಮತ ಮತ್ತು ಭ್ರಷ್ಟಾಚಾರದ ಆರೋಪಗಳಿಂದಾಗಿ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಆ ಸವಾಲುಗಳು ಸದಾನಂದ ಗೌಡರ ಮುಂದೆ ಇಲ್ಲ.
ಇದಕ್ಕೆ ವಿರುದ್ಧವಾಗಿ, ಕಳಂಕಿತ ಮುಖ್ಯಮಂತ್ರಿಯ ಉತ್ತರಾಧಿಕಾರಿಯಾಗಿ ಬಂದವರಿಗೆ ಕೆಲವು ಅನುಕೂಲತೆಗಳಿವೆ.
ಅವರು ಘನವಾದ ಸಾಧನೆಗಳನ್ನು ಮಾಡಬೇಕಾಗಿಲ್ಲ, ಭ್ರಷ್ಟರಾಗದೆ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ನಗುನಗುತ್ತಾ ಇದ್ದರೂ ಜನಪ್ರಿಯನಾಗುವ ಸಾಧ್ಯತೆ ಇದೆ. ಈ ದೃಷ್ಟಿಯಿಂದ ಸದಾನಂದ ಗೌಡರ ಕೆಲಸ ಸುಲಭ.
ಮುಖ್ಯಮಂತ್ರಿಯಾಗಿ ಆರ್.ಗುಂಡೂರಾವ್ ನಡೆಸಿದ ದುರಾಡಳಿತದಿಂದ ಬೇಸತ್ತು ಹೋಗಿದ್ದ ಜನತೆಗೆ ಚುನಾವಣಾ ಪ್ರಚಾರದ ದಿನಗಳಲ್ಲಿ ಅಜ್ಞಾತರಾಗಿದ್ದು ದಿಢೀರನೇ ರಂಗಪ್ರವೇಶ ಮಾಡಿದ್ದ ರಾಮಕೃಷ್ಣ ಹೆಗಡೆ ಪರಮಾತ್ಮನ ಇನ್ನೊಂದು ಅವತಾರದಂತೆ ಕಂಡಿದ್ದರು.
ಮೊದಲ ಎರಡು ವರ್ಷಗಳ ಅವಧಿಯಲ್ಲಿ ಹೆಗಡೆ ಎಷ್ಟೊಂದು ಜನಪ್ರಿಯರಾಗಿದ್ದರೆಂದರೆ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ರಾಜೀನಾಮೆ ನೀಡಿ ಮರಳಿ ಚುನಾವಣೆ ಎದುರಿಸಿದಾಗ ರಾಜ್ಯದ ಜನ `ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವೋ ಎಂಬಂತೆ~ ಭಾರಿ ಬಹುಮತದಿಂದ ಅವರನ್ನು ಮರಳಿ ಅಧಿಕಾರಕ್ಕೆ ತಂದರು (ಎರಡನೇ ಅವಧಿಯ ಕತೆ ಬೇರೆ).
ಆದರೆ ಈ ಅನುಕೂಲತೆ ಇರುವುದು ವಿರೋಧಿ ರಾಜಕೀಯ ಪಕ್ಷಕ್ಕೆ ಸೇರಿದ ಭ್ರಷ್ಟ ಮುಖ್ಯಮಂತ್ರಿಯ ನಿರ್ಗಮನದ ನಂತರ ಅಧಿಕಾರಕ್ಕೆ ಬಂದಾಗ ಮಾತ್ರ. ಜನರಿನ್ನೂ ಹಳೆಯ ಆಡಳಿತದ ದುಃಸ್ವಪ್ನದಿಂದ ಹೊರಬಾರದಿರುವುದರಿಂದ ಹೊಸ ಮುಖ್ಯಮಂತ್ರಿ ತೋರಿಸುವ ಕನಸುಗಳಲ್ಲಿ ಅವರು ಸುಲಭದಲ್ಲಿ ತೇಲಿ ಹೋಗುತ್ತಾರೆ.
ಜನರನ್ನು ಕಾಡುತ್ತಿರುವ ಎಲ್ಲ ಅನಿಷ್ಟಗಳಿಗೂ (ಖಾಲಿ ಖಜಾನೆ, ಅನಭಿವೃದ್ದಿ, ಹಳಿ ತಪ್ಪಿದ ಆಡಳಿತ ಇತ್ಯಾದಿ) ಹಿಂದಿನ ಸರ್ಕಾರವೇ ಕಾರಣ ಎಂದು ಹೊಸಬರು ಉಪಾಯವಾಗಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಹುದು.

ಪ್ರಾರಂಭದ ದಿನಗಳಲ್ಲಿ ಜನ ಕೂಡಾ ಹೊಸ ಸರ್ಕಾರಕ್ಕೊಂದು `ಮಧುಚಂದ್ರ~ದ ಅವಧಿಯನ್ನು ಉದಾರವಾಗಿ ನೀಡುತ್ತಾರೆ. ವಿರೋಧಪಕ್ಷಗಳ ಆರೋಪಗಳು ಎದುರಾದರೂ ಹೊಸ ಮುಖ್ಯಮಂತ್ರಿಗಳು ಬಹಳ ಸುಲಭದಲ್ಲಿ `ನಿಮ್ಮ ಕಾಲದಲ್ಲಿ ನಡೆದಿಲ್ವೆ? ನೀವೇನು ಸಾಚಾಗಳೇ?~ ಎಂದು ಉಡಾಫೆಯಿಂದ ಪ್ರಶ್ನಿಸುತ್ತಾ ಒಂದಷ್ಟು ದಿನ ಕಾಲ ತಳ್ಳಬಹುದು.

ಈ ಅನುಕೂಲತೆ ತಮ್ಮದೇ ಪಕ್ಷದ ಮುಖ್ಯಮಂತ್ರಿ ಭ್ರಷ್ಟಾಚಾರ ಮತ್ತು ದುರಾಡಳಿತದಿಂದಾಗಿ ಅಧಿಕಾರ ಕಳೆದುಕೊಂಡ ಸಂದರ್ಭದಲ್ಲಿ ಆ ಸ್ಥಾನಕ್ಕೆ ಬರುವವರಿಗೆ ಇರುವುದಿಲ್ಲ.
ಅವರು ಹಿಂದಿನ ಮುಖ್ಯಮಂತ್ರಿಗಳನ್ನು ಬಹಿರಂಗವಾಗಿ ದೂರುವಂತಿಲ್ಲ, ದೂರಿದರೆ ಆಕಾಶಕ್ಕೆ ಮುಖಮಾಡಿ ಉಗುಳಿದಂತೆ. ಅದನ್ನು ಮರೆತುಬಿಡುವ ಹಾಗೂ ಇಲ್ಲ, ಮರೆತರೂ ಹಿಂದಿನವರ ಪಾಪದ ಫಲ ಹಿಂಬಾಲಿಸಿಕೊಂಡು ಬರುತ್ತದೆ.
ಅದನ್ನು ಮೀರಿ ಎಚ್ಚರಿಕೆಯಿಂದ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗುತ್ತದೆ. ಈ ದೃಷ್ಟಿಯಿಂದ ಸದಾನಂದ ಗೌಡರದ್ದು ಕಷ್ಟದ ಕೆಲಸ.
ಅವರ ಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿರುವುದು ಬಿ.ಎಸ್.ಯಡಿಯೂರಪ್ಪ ಎಂಬ ಅಸುರಕ್ಷತೆಯಿಂದ ಬಳಲುತ್ತಿರುವ ಹಟಮಾರಿ ನಾಯಕ ಮತ್ತು ಪಕ್ಷದ ದುರ್ಬಲ ಹೈಕಮಾಂಡ್.
ಯಡಿಯೂರಪ್ಪನವರ ಬಹಳ ದೊಡ್ಡ ಸಮಸ್ಯೆಯೆಂದರೆ ತಾನು ಯಾಕೆ ಅಧಿಕಾರ ಕಳೆದುಕೊಳ್ಳಬೇಕಾಯಿತು ಎನ್ನುವ ಸರಳವಾದ ವಿಚಾರ ಈಗಲೂ ಅರ್ಥವಾಗದೆ ಇರುವುದು.
ತನ್ನ ಪದಚ್ಯುತಿಗೆ ಕಾರಣ ತನ್ನ ತಪ್ಪುಗಳಲ್ಲ, ವಿರೋಧಿಗಳ ಪಿತೂರಿ ಎಂದು ಅವರು ಬಲವಾಗಿ ನಂಬಿರುವುದು ಮಾತ್ರ ಅಲ್ಲ, ರಾಜ್ಯದ ಜನರೂ ಹಾಗೆಯೇ ನಂಬಿದ್ದಾರೆ ಎಂದು  ತಿಳಿದುಕೊಂಡಿರುವುದು.
ಇದರಿಂದಾಗಿ ತಾನು ಅಧಿಕಾರ ಕಳೆದುಕೊಂಡರೂ ಜನಪ್ರಿಯತೆ ಕಳೆದುಕೊಂಡಿಲ್ಲ ಎನ್ನುವ ವಿಶ್ವಾಸ ಅವರ ನಡೆ-ನುಡಿಯಲ್ಲಿ ವ್ಯಕ್ತವಾಗುತ್ತಿದೆ. ಇದು ಅವರ ಮುಗ್ಧತೆಯೋ, ಅಜ್ಞಾನವೋ ಗೊತ್ತಿಲ್ಲ.
ಆದರೆ ಮಾಜಿ ಮುಖ್ಯಮಂತ್ರಿಗಳ ಈ ಮನೋಭಾವ ಹಾಲಿ ಮುಖ್ಯಮಂತ್ರಿಗಳಿಗೆ ಸಮಸ್ಯೆಗಳನ್ನು ಸೃಷ್ಟಿಸಬಲ್ಲದು. ಸದಾನಂದ ಗೌಡರಿಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇದ್ದಿರಬಹುದು, ಆದರೆ ಇಂದು ಅವರು ಆ ಸ್ಥಾನದಲ್ಲಿ ಕೂತಿದ್ದರೆ ಅದು ಅರ್ಹತೆಯ ಬಲದಿಂದ ಅಲ್ಲ, ಯಡಿಯೂರಪ್ಪನವರ ಬೆಂಬಲದ ಬಲದಿಂದ.
ಇದು ಯಡಿಯೂರಪ್ಪನವರಿಗಿಂತಲೂ ಚೆನ್ನಾಗಿ ಗೌಡರಿಗೆ ಗೊತ್ತಿದೆ. ಆದ್ದರಿಂದ ಮುಖ್ಯಮಂತ್ರಿಗಳು ತನ್ನ ಕೈತಪ್ಪಿಹೋಗುತ್ತಿದ್ದಾರೆ ಎಂದು ಒಂದು ಕ್ಷಣ  ಅನಿಸಿದರೂ ಯಡಿಯೂರಪ್ಪನವರು ಸುಮ್ಮನಿರುವವರಲ್ಲ.
ತನ್ನ ರಾಜಕೀಯ ಜೀವನದ ಬಹುಭಾಗವನ್ನು ವಿರೋಧ ಪಕ್ಷದ ನಾಯಕರಾಗಿಯೇ ಕಳೆದಿರುವ ಯಡಿಯೂರಪ್ಪನವರು ಕಟ್ಟುವುದಕ್ಕಿಂತಲೂ ಕೆಡವುದನ್ನು ಅನಾಯಾಸವಾಗಿ ಮಾಡಬಲ್ಲರು. ಇಂತಹವರು ಸರ್ಕಾರದ ಒಳಗಿರುವುದಕ್ಕಿಂತ ಹೊರಗಿದ್ದರೆ ಹೆಚ್ಚು ಅಪಾಯಕಾರಿ, ಯಾಕೆಂದರೆ ಹೊರಗಿದ್ದು ಅವರು ಕಳೆದುಕೊಳ್ಳುವುದು ಏನೂ ಇಲ್ಲ.
ಇಂತಹವರನ್ನು ಪಕ್ಷದ ಬಲಿಷ್ಠ ಹೈಕಮಾಂಡ್ ಮಾತ್ರ ನಿಯಂತ್ರಿಸಲು ಸಾಧ್ಯ. ವೀರೇಂದ್ರ ಪಾಟೀಲ್ ಅವರನ್ನು ಕಿತ್ತೊಗೆದಾಗ ಬಂಗಾರಪ್ಪನವರ ಬೆಂಬಲಕ್ಕೆ ರಾಜೀವ್‌ಗಾಂಧಿ ನೇತೃತ್ವದ ಶಕ್ತಿಶಾಲಿ ಕಾಂಗ್ರೆಸ್ ಹೈಕಮಾಂಡ್ ಇತ್ತು.
ಆದ್ದರಿಂದ ತಕ್ಷಣದಲ್ಲಿ ಅನಾಹುತಗಳೇನೂ ಆಗಿರಲಿಲ್ಲ. ಮನಮೋಹನ್‌ಸಿಂಗ್ ಅವರು ಕಳೆದ ಏಳು ವರ್ಷಗಳಿಂದ ಪ್ರಧಾನಿಯಾಗಿದ್ದರೆ ಅದಕ್ಕೆ ಸೋನಿಯಾಗಾಂಧಿ ನೇತೃತ್ವದ ಹೈಕಮಾಂಡ್ ಬೆಂಬಲ ಕಾರಣ.

ಅದು ಇಲ್ಲದೆ ಇದ್ದಿದ್ದರೆ ಪ್ರಣವ್ ಮುಖರ್ಜಿ, ಚಿದಂಬರಂ ಮೊದಲಾದ ಘಟಾನುಘಟಿಗಳು ಉಳಿದವರ ಜತೆ ಸೇರಿ ಬಡಪಾಯಿ ಮನಮೋಹನ್‌ಸಿಂಗ್ ಅವರನ್ನು ಎಂದೋ ಕುರ್ಚಿ ಬಿಟ್ಟು ಓಡಿಸುತ್ತಿದ್ದರು.

ರಾಜೀನಾಮೆ ನೀಡಬೇಕಾಗಿ ಬಂದ ಉಮಾಭಾರತಿ ಮರಳಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಬಯಸಿದಾಗ ಬಿಜೆಪಿ ಹೈಕಮಾಂಡ್ ಅದಕ್ಕೆ ಅವಕಾಶ ನೀಡದೆ ಬಾಬುಲಾಲ್ ಗೌರ್ ಅವರನ್ನೇ ಮುಂದುವರಿಸಿತ್ತು.
ಅದರ ನಂತರ ಶಿವರಾಜ್‌ಸಿಂಗ್ ಚೌಹಾಣ್ ಎಂಬ ಒಂದು ಕಾಲದ ಉಮಾಭಾರತಿಯವರ ಶಿಷ್ಯನನ್ನೇ ಆ ಸ್ಥಾನದಲ್ಲಿ ಕೂರಿಸಿದ್ದು ಮಾತ್ರವಲ್ಲ, ಅವರ ನೇತೃತ್ವದಲ್ಲಿ ಚುನಾವಣೆಯನ್ನೂ ಎದುರಿಸಿತು.
ಉಮಾಭಾರತಿಯವರ ಜನಪ್ರಿಯತೆ ಯಡಿಯೂರಪ್ಪನವರಿಗಿಂತ ಕಡಿಮೆ ಏನಿರಲಿಲ್ಲ. ಆದರೆ ಗುರು ಮತ್ತು ಶಿಷ್ಯನ ನಡುವೆ ನಡೆದ ಚುನಾವಣಾ ಸಮರದಲ್ಲಿ ಶಿಷ್ಯನೇ ಗೆದ್ದುಬಿಟ್ಟರು. ಇದಕ್ಕೆ ಅವರ ಬೆನ್ನಹಿಂದೆ ದೃಢವಾಗಿ ನಿಂತ ಬಿಜೆಪಿ ಹೈಕಮಾಂಡ್ ಕಾರಣ.
ಈ ಪರಿಸ್ಥಿತಿಯಲ್ಲಿ ಆತ್ಮರಕ್ಷಣೆಗಾಗಿ ಸದಾನಂದ ಗೌಡರ ಬಳಿ ಬಹಳ ಆಯ್ಕೆಗಳಿಲ್ಲ, ಇರುವುದೇ ಎರಡು. ಒಂದೋ ಯಡಿಯೂರಪ್ಪನವರಿಗೆ ಸಂಪೂರ್ಣ ಶರಣಾಗತಿ ಇಲ್ಲವೇ ಸ್ವತಂತ್ರವಾಗಿ ಕಾರ‌್ಯನಿರ್ವಹಣೆ. ಇವೆರಡೂ ಅರ್ಧಅರ್ಧ ಮಾಡುವ ಕೆಲಸಗಳಲ್ಲ. ಎರಡು ದೋಣಿಗಳಲ್ಲಿ ಕಾಲಿಡುವವರು ನೀರಲ್ಲಿ ಮುಳುಗುವ ಸಾಧ್ಯತೆಯೇ ಹೆಚ್ಚು.

ಶರಣಾಗತಿ ಎಂದರೆ ಮುಖ್ಯಮಂತ್ರಿಯಾಗಿ ಕೈಯಲ್ಲಿರಬೇಕಾದ ರಾಜಕೀಯ ಅಧಿಕಾರವನ್ನು ಬಿಟ್ಟುಕೊಡುವುದು. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ನಾಯಕನಾಗದವನು ಆಡಳಿತದ ಮುಖ್ಯಸ್ಥನಾಗಿ ಯಶಸ್ಸು ಕಾಣುವುದು ಕಷ್ಟ.
ಭ್ರಷ್ಟಾಚಾರದ ಆರೋಪಗಳಿಂದಾಗಿ ಜೈಲು ಶಿಕ್ಷೆ ಅನುಭವಿಸಿದ್ದ ಜೆ.ಜಯಲಲಿತಾ ಮುಖ್ಯಮಂತ್ರಿಯಾಗಿ ನೇಮಕಗೊಂಡದ್ದನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದಾಗ ಆರು ತಿಂಗಳ ಅವಧಿಗೆ ಒ. ಪನ್ನೀರಸೆಲ್ವಂ ಮುಖ್ಯಮಂತ್ರಿಗಳಾಗಿದ್ದರು. ರಾಜಕೀಯದ ಯಾವ ಅಧಿಕಾರವೂ ಅವರಿಗೆ ಇರಲಿಲ್ಲ. ಅವರು ಜಯಲಲಿತಾ ಕೂರುತ್ತಿದ್ದ ಕುರ್ಚಿಯಲ್ಲಿಯೂ ಕೂತಿರಲಿಲ್ಲ.
ಬಿಕ್ಕಟ್ಟಿನ ಸಂದರ್ಭದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾದ ಶಿವರಾಜ್‌ಸಿಂಗ್ ಚೌಹಾಣ್, ಜನಪ್ರಿಯ ನಾಯಕಿ ಉಮಾಭಾರತಿ ಅವರನ್ನು ಎದುರು ಹಾಕಿಕೊಂಡು ಕಳೆದ ಆರುವರ್ಷಗಳಿಂದ ಅಧಿಕಾರದಲ್ಲಿ ಮುಂದುವರಿದಿದ್ದಾರೆ.
ಇತಿಹಾಸದ ಪುಟಗಳಲ್ಲಿ ಪನ್ನೀರಸೆಲ್ವಂ ಮತ್ತು ಶಿವರಾಜ್‌ಸಿಂಗ್ ಚೌಹಾಣ್ ಇಬ್ಬರ ಹೆಸರೂ ಇದೆ. ಇವರಲ್ಲಿ ಯಾರ ಪಕ್ಕದಲ್ಲಿ ತಮ್ಮ ಹೆಸರು ಇರಬೇಕೆಂಬುದನ್ನು ಸದಾನಂದಗೌಡರು ನಿರ್ಧರಿಸಬೇಕಾಗಿದೆ.
 ಇಷ್ಟೆಲ್ಲ ಕಸರತ್ತು ನಡೆಸಿದ ನಂತರವೂ ಸದಾನಂದ ಗೌಡರು ಇನ್ನುಳಿದ ಇಪ್ಪತ್ತೆರಡು ತಿಂಗಳುಗಳನ್ನು ಪೂರ್ಣಗೊಳಿಸಬಹುದೇ? ಈ ಪ್ರಶ್ನೆಗೆ ಉತ್ತರ ನೀಡುವುದು ಕಷ್ಟ. ಆದರೆ ಇಪ್ಪತ್ತೆರಡು ತಿಂಗಳು ಈ ಸರ್ಕಾರ ಬಾಳಿದರೆ ಅದರ ನಂತರ ಏನಾಗಬಹುದೆಂಬುದನ್ನು ಸುಲಭದಲ್ಲಿ ಊಹಿಸಬಹುದು.
ಸದಾನಂದ ಗೌಡರು ಇಪ್ಪತ್ತೆರಡು ತಿಂಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿದು ಅತ್ಯುತ್ತಮ ಆಡಳಿತವನ್ನೇ ನೀಡಿದರೆನ್ನಿ.
ಆಗಲೂ ಬಿಜೆಪಿ ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಲಾಗದು. ಚುನಾವಣೆ ಘೋಷಣೆಯಾದ ಕೂಡಲೇ ಬಿಜೆಪಿಯಲ್ಲಿ ಏನು ನಡೆಯಬಹುದೆಂಬುದನ್ನು ಈಗಲೇ ಹೇಳಿ ಬಿಡಬಹುದು, ಇದಕ್ಕೆ ಜ್ಯೋತಿಷಶಾಸ್ತ್ರವನ್ನು ಓದಬೇಕಾಗಿಲ್ಲ, ಯಡಿಯೂರಪ್ಪನವರನ್ನು ಅರ್ಥಮಾಡಿಕೊಂಡರೆ ಸಾಕು.
ಮೊದಲನೆಯದಾಗಿ ಯಡಿಯೂರಪ್ಪನವರು ಮುಂದಿನ ದಿನಗಳಲ್ಲಿ ಯಾವುದೇ ಕ್ಷಣದಲ್ಲಿ ತಾಳ್ಮೆ ಕಳೆದುಕೊಂಡು ದಿಢೀರನೇ ಒಂದು ಪ್ರಾದೇಶಿಕ ಪಕ್ಷವನ್ನು ಹುಟ್ಟುಹಾಕಬಹುದು. ಅದನ್ನು ಮಾಡದೆ ಇದ್ದರೆ ಚುನಾವಣೆ ಘೋಷಣೆಯಾದ ಕೂಡಲೇ  ಕನಿಷ್ಠ 150 ಮಂದಿ ತನ್ನ ಬೆಂಬಲಿಗರಿಗೆ ಪಕ್ಷದ ಟಿಕೆಟ್ ಕೇಳಬಹುದು.

ನಿರಾಕರಿಸಿದರೆ ಎಲ್ಲೆಲ್ಲಿ ತಾವೊಲ್ಲದ ಪಕ್ಷದ ಅಭ್ಯರ್ಥಿಗಳಿರುತ್ತಾರೋ ಅಲ್ಲೆಲ್ಲ ಬಂಡುಕೋರರನ್ನು ಕಣಕ್ಕಿಳಿಸಬಹದು. ಈ ಬಂಡುಕೋರರು ಗೆಲ್ಲದಿದ್ದರೂ ಅಧಿಕೃತ ಅಭ್ಯರ್ಥಿಗೆ ಹೋಗಬೇಕಾಗಿರುವ 10-20 ಸಾವಿರ ಮತಗಳನ್ನು ತಿಂದುಹಾಕುತ್ತಾರೆ.
1994ರ ವಿಧಾನಸಭಾ ಚುನಾವಣೆಯಲ್ಲಿ  ಯಡಿಯೂರಪ್ಪನವರ ಜಿಲ್ಲೆಯವರೇ ಆಗಿರುವ ಎಸ್. ಬಂಗಾರಪ್ಪನವರ ಬಂಡಾಯದಿಂದಾಗಿ ಕಾಂಗ್ರೆಸ್ ಯಾವ ರೀತಿ ಸೋಲು ಅನುಭವಿಸಿತೋ ಅದೇ ಗತಿ ಬಿಜೆಪಿಗೆ ಬರಬಹುದು (ಎಸ್.ಬಂಗಾರಪ್ಪನವರ ಕೆಸಿಪಿ ಗೆದ್ದದ್ದು ಹತ್ತೇ ಸ್ಥಾನಗಳಾದರೂ ಗಳಿಸಿದ್ದ ಮತಪ್ರಮಾಣ ಶೇ 7.31. ಕಾಂಗ್ರೆಸ್  ಶೇ 27.31ರಷ್ಟು ಮತಗಳಿಸಿತ್ತು. 
ಜನತಾ ಪಕ್ಷ ಗಳಿಸಿದ್ದ ಮತ ಪ್ರಮಾಣ ಶೇ 33.54 ಮಾತ್ರ. ಇದು ಕಾಂಗ್ರೆಸ್ ಮತ್ತು ಕೆಸಿಪಿಯ ಒಟ್ಟು ಮತ ಪ್ರಮಾಣಕ್ಕಿಂತ ಶೇ 0.98ರಷ್ಟು ಕಡಿಮೆ. ಅಂದರೆ ಬಂಗಾರಪ್ಪ ಕಾಂಗ್ರೆಸ್ ಜತೆಗಿದ್ದರೆ ಅದು ಸೋಲುತ್ತಿರಲಿಲ್ಲವೇನೋ?)
ಒಂದೊಮ್ಮೆ ಯಡಿಯೂರಪ್ಪನವರ ಒತ್ತಡಕ್ಕೆ ಹೈಕಮಾಂಡ್ ಮಣಿದು ಅವರು ಹೇಳಿದ 150 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆನ್ನಿ, ಆಗ ಅವರ ವಿರೋಧಿಗಳು ಸುಮ್ಮನಿರುತ್ತಾರಾ? ಅವರು ಅಲ್ಲಲ್ಲಿ ಬಂಡುಕೋರರನ್ನು ಕಣಕ್ಕಿಳಿಸುತ್ತಾರೆ. ಅವರೂ 10-20 ಸಾವಿರ ಮತಗಳನ್ನು ಪಡೆದು ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲಿಗೆ ಕಾರಣರಾಗುತ್ತಾರೆ.
ಯಾವ ದೃಷ್ಟಿಯಿಂದ ನೋಡಿದರೂ ಬಿಜೆಪಿಯ ಮುಂದಿರುವುದು ಸೋಲಿನ ಹಾದಿಯೇ ಹೊರತಾಗಿ ಗೆಲುವಿನದ್ದಲ್ಲ. ಬಿಜೆಪಿಯ ಗೆಲುವಿಗೆ ಇರುವ ಒಂದೇ ದಾರಿಯೆಂದರೆ ಯಡಿಯೂರಪ್ಪನವರಿಗೆ ಇದ್ದಕ್ಕಿದ್ದ ಹಾಗೆ ಜ್ಞಾನೋದಯವಾಗಿ `ನಾನು ಯಾರಿಗೂ ಟಿಕೆಟ್ ಕೇಳುವುದಿಲ್ಲ, ಗೆದ್ದು ಬಂದರೆ ಅಧಿಕಾರವನ್ನೂ ಕೇಳುವುದಿಲ್ಲ.
ಪಕ್ಷದ ನಿಷ್ಠಾವಂತ ಕಾರ‌್ಯಕರ್ತನಾಗಿ ಕೆಲಸ ಮಾಡುತ್ತೇನೆ~ ಎಂದು ಘೋಷಿಸಿ ಪ್ರಾಮಾಣಿಕವಾಗಿ ಮಾತಿಗೆ ತಕ್ಕಂತೆ ನಡೆದುಕೊಳ್ಳುವುದು. ಇಷ್ಟು ವರ್ಷಗಳ ಕಾಲ ಯಡಿಯೂರಪ್ಪನವರನ್ನು ನೋಡಿದವರಿಗಾದರೂ ಅವರು ಈ ರೀತಿ ಬದಲಾಗಬಹುದು ಎಂದು ಅನಿಸುತ್ತಾ?