ಚುನಾವಣಾ ಸೋಲು ರಾಜಕೀಯ ಪಕ್ಷಗಳಿಗೆ ಹೊಸದಲ್ಲ, ಅವಮಾನವೂ ಅಲ್ಲ. ಕುಸಿದುಬಿದ್ದ ಗೆಲುವಿನ ಕೋಟೆಯ ಇಟ್ಟಿಗೆಗಳನ್ನು ಇಟ್ಟುಕೊಂಡೇ ರಾಜಕಾರಣಿಗಳು ಗೆಲುವಿನ ಮೆಟ್ಟಿಲುಗಳನ್ನು ಕಟ್ಟಲು ಪ್ರಯತ್ನಿಸುತ್ತಾರೆ.
ಎಷ್ಟೋ ಸಂದರ್ಭಗಳಲ್ಲಿ ಸೋಲಿನ ನಂತರ ಉಕ್ಕಿಬರುವ ಮತದಾರರ ಅನುಕಂಪವೇ ಅವರನ್ನು ಗೆಲುವಿನ ಕಡೆ ಕೈಹಿಡಿದು ನಡೆಸಿಕೊಂಡು ಹೋಗುವುದುಂಟು. ಆದರೆ ನೈತಿಕವಾಗಿ ರಾಜಕೀಯ ಪಕ್ಷಗಳು ಅನುಭವಿಸುವ ಸೋಲು ಅವಮಾನದಿಂದ ಮುಖ ಮುಚ್ಚಿಕೊಳ್ಳುವಂತೆ ಮಾಡುವುದು ಮಾತ್ರವಲ್ಲ, ಅದರಿಂದ ಚೇತರಿಸಿಕೊಳ್ಳಲು ಬಹಳ ಕಾಲ ಬೇಕಾಗುತ್ತದೆ.
ಯಾಕೆಂದರೆ, ಆಗ ಜನರಿಂದ ವ್ಯಕ್ತವಾಗುವುದು ಅನುಕಂಪ ಅಲ್ಲ, ತಿರಸ್ಕಾರ. ಹತ್ತು ವರ್ಷಗಳ ಹಿಂದೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅವರು ಲಂಚ ಪಡೆಯುತ್ತಿರುವುದು ಟಿವಿ ಪರದೆಗಳಲ್ಲಿ ಬಿತ್ತರಗೊಂಡಾಗ ಭಾರತೀಯ ಜನತಾ ಪಕ್ಷ ನೈತಿಕವಾಗಿ ಕುಸಿದುಹೋಗಿತ್ತು.
ಆ ಪಕ್ಷದ ನಾಯಕರು ತಮ್ಮನ್ನು ಸಮರ್ಥಿಸಿಕೊಳ್ಳಲು ಮಾಧ್ಯಮಗಳ ಮುಂದೆ ಪರದಾಡುತ್ತಿದ್ದರು. ಆದರೆ ಆ ಕಾಲದಲ್ಲಿ ಕೈಯ್ಯಲ್ಲಿದ್ದ ಅಧಿಕಾರದ ಬಲ ಮತ್ತು ಪಕ್ಷದಲ್ಲಿದ್ದ ಎ.ಬಿ.ವಾಜಪೇಯಿ ಮತ್ತು ಎಲ್.ಕೆ.ಅಡ್ವಾಣಿಯವರಂತಹ ಹಿರಿಯ ನಾಯಕರು ಆ ಕುಸಿತವನ್ನು ಒಂದು ಹಂತಕ್ಕೆ ತಡೆದು ನಿಲ್ಲಿಸಿ ಪಕ್ಷದ ಮುಖ ಉಳಿಸಿದ್ದರು. ಆದರೆ ಈಗ ?
ಭಾರತೀಯ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದ ನಂತರದ ಮೂರು ದಶಕಗಳಲ್ಲಿ ಹಲವಾರು ಚುನಾವಣಾ ಸೋಲುಗಳನ್ನು ಅನುಭವಿಸಿದೆ. ಕಲ್ಯಾಣ್ಸಿಂಗ್ ಅವರಿಂದ ಹಿಡಿದು ಮದನ್ಲಾಲ್ ಖುರಾನಾ, ಬಾಬುಲಾಲ್ ಮರಂಡಿ, ಉಮಾಭಾರತಿ ವರೆಗೆ ಹಲವರ ಬಂಡಾಯವನ್ನು ಎದುರಿಸಿದೆ.
ಆದರೆ ಈಗಿನಷ್ಟು ದುರ್ಬಲ ಮತ್ತು ಅಸಹಾಯಕ ಸ್ಥಿತಿಯಲ್ಲಿ ಅದು ಎಂದೂ ಕಾಣಿಸಿಕೊಂಡಿರಲಿಲ್ಲ. ಪಕ್ಷಕ್ಕೆ ಉಗ್ರಸ್ವರೂಪದ ರಾಜಕೀಯ ಮುಖವನ್ನು ನೀಡಿದ್ದ ಎಲ್.ಕೆ.ಅಡ್ವಾಣಿ ತಮ್ಮ ಸಂಯಮದ ಮಾತುಗಳಿಂದ ಎಲ್ಲರ ಅಭಿಮಾನಕ್ಕೆ ಪಾತ್ರರಾದವರು.
ತಮ್ಮ ಹೋರಾಟದ ದಿನಗಳಲ್ಲಿಯೂ ಕಟುವಾಗಿ ಮಾತನಾಡಿದ್ದು ಕಡಿಮೆ. ಇಂತಹ ಅಡ್ವಾಣಿಯವರು ಹತಾಶರಾಗಿ `ನಮ್ಮಲ್ಲಿ ಡಕಾಯಿತರು, ಕಿಸೆಗಳ್ಳರು ಇದ್ದಾರೆ~ ಎಂದು ಹೇಳುವ ಮಟ್ಟಕ್ಕೆ ಹೋಗುವುದಾದರೆ ಪಕ್ಷ ತಲುಪಿರುವ ನೈತಿಕ ಅಧಃಪತನದ ಆಳವನ್ನು ಊಹಿಸಿಕೊಳ್ಳಬಹುದು. ರಾಜಕೀಯ ಪಕ್ಷದ ಅಸಹಾಯಕತೆಗೆ ಅದರ ದುರ್ಬಲ ನಾಯಕತ್ವ ಕಾರಣವಾಗುತ್ತದೆ. ಕರ್ನಾಟಕದಲ್ಲಿ ಬಯಲಾಗಿದ್ದು ಇದೇ ದೌರ್ಬಲ್ಯ.
ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾದ ಪ್ರಶ್ನೆ ಎದುರಾದಾಗ ಹೈಕಮಾಂಡ್ ಬಹಳ ಜಾಣತನದಿಂದ ರಹಸ್ಯ ಮತದಾನದ ಪ್ರಸ್ತಾವ ಮುಂದಿಟ್ಟಿತು. ದೆಹಲಿಯಿಂದ ಲಕೋಟೆ ಮೂಲಕ ಬರುವ ಕಾಂಗ್ರೆಸ್ ಮುಖ್ಯಮಂತ್ರಿಗಳಿಗಿಂತ ಇದು ಹೆಚ್ಚು ಪ್ರಜಾಸತ್ತಾತ್ಮಕವಾದುದು ಎನ್ನುವುದರಲ್ಲಿ ಅನುಮಾನ ಇಲ್ಲ.
ಆದರೆ ಬಿಜೆಪಿ ಈ ಉದ್ದೇಶದಿಂದ ರಹಸ್ಯ ಮತದಾನ ನಡೆಸಿದ್ದೇ? ಅಂತಹ ಉದ್ದೇಶ ಇದ್ದಿದ್ದರೆ ಅದನ್ನು ಹಿಂದೆ ಯಾಕೆ ನಡೆಸಿರಲಿಲ್ಲ? ಈದ್ಗಾ ವಿವಾದದಲ್ಲಿ ಸಿಲುಕಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಉಮಾಭಾರತಿ ಅವರ ವಿರುದ್ದದ ಮೊಕದ್ದಮೆಯನ್ನು ಕರ್ನಾಟಕ ಸರ್ಕಾರ ಹಿಂದೆಗೆದುಕೊಂಡ ನಂತರ ಅವರನ್ನು ಹೈಕೋರ್ಟ್ ದೋಷಮುಕ್ತಗೊಳಿಸಿತ್ತು.
ಆದರೆ ಬಿಜೆಪಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಲಿಲ್ಲ. ಬಹುಸಂಖ್ಯೆಯ ಶಾಸಕರು ಉಮಾಭಾರತಿ ಪರ ಇದ್ದರೂ ಬಿಜೆಪಿ ಹೈಕಮಾಂಡ್ ಬಾಬುಲಾಲ್ ಗೌರ್ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಿತು. ಅಲ್ಲೂ ರಹಸ್ಯ ಮತದಾನ ನಡೆಸಬಹುದಿತ್ತಲ್ಲ?
ರಹಸ್ಯ ಮತದಾನಕ್ಕೆ ನಿಜವಾದ ಕಾರಣ ದುರ್ಬಲ ನಾಯಕತ್ವದ ಅಸಹಾಯಕತೆ ಕಾರಣ ಹೊರತು ಆಂತರಿಕ ಪ್ರಜಾಪ್ರಭುತ್ವದ ಮೇಲಿನ ಬದ್ಧತೆ ಅಲ್ಲ. ಈ ದುರ್ಬಲ ನಾಯಕತ್ವದ ಹುಟ್ಟಿಗೆ ಯಾರು ಕಾರಣರೆಂದು ಹುಡುಕುತ್ತಾ ಹೋದರೆ ಎದುರಾಗುವುದು ನಾಗಪುರದ ಆರ್ಎಸ್ಎಸ್ ಕೇಂದ್ರ ಕಚೇರಿ.
ಸಂವಿಧಾನದತ್ತವಾದ ಅಧಿಕಾರ ಇಲ್ಲದ, ರಾಜಕೀಯ ಸ್ವರೂಪದ ಯಾವ ಬಾಧ್ಯತೆಯೂ ಇಲ್ಲದ ಆರ್ಎಸ್ಎಸ್ ಕೆಲಸ ಏನಿದ್ದರೂ ತೆರೆಯ ಮರೆಯಲ್ಲಿ. ಆದ್ದರಿಂದಲೇ ಬಿಜೆಪಿಯ ಆಂತರಿಕ ವ್ಯವಹಾರಗಳಲ್ಲಿ ಅದು ವಹಿಸುವ ಪಾತ್ರ ಚರ್ಚೆಗೆ ಬರುವುದೇ ಇಲ್ಲ.
ಆರು ವರ್ಷಗಳ ಹಿಂದೆ ಆರ್ಎಸ್ಎಸ್ ಸರಸಂಘ ಚಾಲಕ ಕೆ.ಎಸ್.ಸುದರ್ಶನ್ ಅವರು ಇದ್ದಕ್ಕಿದ್ದಂತೆ ಟಿವಿ ಚಾನೆಲ್ಗೆ ಸಂದರ್ಶನ ನೀಡಿ ಬಿಜೆಪಿಯ ಎರಡು ಹಿರಿತಲೆಗಳಾದ ವಾಜಪೇಯಿ ಮತ್ತು ಅಡ್ವಾಣಿಯವರು ರಾಜಕೀಯದಿಂದ ನಿವೃತ್ತಿ ಆಗಬೇಕೆಂದು ಫರ್ಮಾನು ಹೊರಡಿಸಿದ್ದರು.ಅದು ಗುರುಸ್ಥಾನದಲ್ಲಿರುವ ಆರ್ಎಸ್ಎಸ್ಗೆ 80 ಮತ್ತು ಶಿಷ್ಯನ ಸ್ಥಾನದಲ್ಲಿರುವ ಬಿಜೆಪಿಗೆ 25 ತುಂಬಿದ ವರ್ಷ.
ದ್ರೋಣಾಚಾರ್ಯರನ್ನು ಹೊರತು ಪಡಿಸಿದರೆ ಇಂತಹ ದುಬಾರಿ `ಗುರುದಕ್ಷಿಣೆ~ಯನ್ನು ಬೇರೆ ಯಾವ ಗುರುವೂ ಕೇಳಿರಲಾರರು. ಸಮರ್ಥರಾದ ಕಿರಿಯರಿಗೆ ನಾಯಕತ್ವ ಹಸ್ತಾಂತರಿಸುವ ಉದ್ದೇಶದಿಂದ ವಯಸ್ಸಿನ ಭಾರದಿಂದ ಬಾಗಿದ ಹಿರಿಯರನ್ನು ನಿವೃತ್ತಿಯಾಗಲು ಹೇಳಿದ್ದರೆ ಅದೊಂದು ಸಹಜ ಪ್ರಕ್ರಿಯೆ ಆಗುತ್ತಿತ್ತು.
ವಾಜಪೇಯಿ ಆರೋಗ್ಯ ಆಗಲೇ ಕೈಕೊಡುತ್ತಿದ್ದುದರಿಂದ ಅವರು ನಿವೃತ್ತಿ ಜೀವನದ ಕಡೆ ಮೆಲ್ಲಗೆ ಹೆಜ್ಜೆ ಹಾಕುತ್ತಿದ್ದರು ನಿಜ, ಆದರೆ ಅಡ್ವಾಣಿ? ತನ್ನ ವಯಸ್ಸಿನ ಉಳಿದೆಲ್ಲ ರಾಜಕಾರಣಿಗಳಿಗಿಂತ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬಂದಿರುವ ಅಡ್ವಾಣಿಯವರು ಆ ಕಾಲದಲ್ಲಿ ನಿವೃತ್ತಿಯಾಗುವ ಯೋಚನೆಯನ್ನೇ ಮಾಡದವರು.
ಅಂತಹ ಸಮಯದಲ್ಲಿ ಅವರನ್ನು ಮನೆಗೆ ಕಳಿಸಲು ಆರ್ಎಸ್ಎಸ್ಗೆ ಎಂತಹ ಒತ್ತಡಗಳಿತ್ತೋ ಗೊತ್ತಿಲ್ಲ. ಭಾರತೀಯ ಜನತಾ ಪಕ್ಷದ ನಿಜವಾದ ಅಧಃಪತನ ಪ್ರಾರಂಭವಾಗಿದ್ದು ಅಲ್ಲಿಂದಲೇ.
ರಾಜಕೀಯ ಸಿದ್ದಾಂತದ ಬಗ್ಗೆ ಏನೇ ಭಿನ್ನಾಭಿಪ್ರಾಯ ಇದ್ದರೂ ವೈಯಕ್ತಿಕ ಮತ್ತು ಸಾರ್ವಜನಿಕ ನಡವಳಿಕೆಯಲ್ಲಿ ಈಗಲೂ ರಾಜಕಾರಣಿಗಳಿಗೆ ಆದರ್ಶಪ್ರಾಯರಾಗಿರುವವರು ಲಾಲ್ಕೃಷ್ಣ ಅಡ್ವಾಣಿ. ಬುದ್ಧಿ ತಿಳಿದಂದಿನಿಂದ ಆರ್ಎಸ್ಎಸ್ ಶಿಬಿರಗಳಿಗೆ ಮಣ್ಣು ಹೊತ್ತವರು ಅವರು.
ಇಂತಹವರು `ಮಹಮ್ಮದ್ ಅಲಿ ಜಿನ್ನಾ ಜಾತ್ಯತೀತ ನೆಲೆಯಲ್ಲಿ ದೇಶ ನಿರ್ಮಾಣ ಮಾಡಬೇಕೆಂದು ಬಯಸಿದ್ದರು~ ಎಂದು ಹೇಳಿದ ಒಂದು ಮಾತೇ ಅವರ ರಾಜಕೀಯ ಬದುಕಿಗೆ ಮುಳುವಾಗಿ ಹೋಯಿತು. ಆರ್ಎಸ್ಎಸ್ ಪಟ್ಟು ಹಿಡಿದು ಕೊನೆಗೂ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿತು.
ಪರಿವಾರದಿಂದಲೇ ಅವಮಾನಕ್ಕೊಳಗಾದ ಅಡ್ವಾಣಿಯವರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು ಸಮರ್ಥ ನಾಯಕನಾಗಿ ಬಿಂಬಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.
ಹಿರಿಯರ ತಲೆದಂಡ ಕೇಳಿದ ಆರ್ಎಸ್ಎಸ್ ಬಳಿ ಅವರು ಖಾಲಿ ಮಾಡಿದ ಸ್ಥಾನಗಳಲ್ಲಿ ಕೂರಿಸಲು ಸಮರ್ಥ ಯುವನಾಯಕರೇ ಇರಲಿಲ್ಲ. ಕೊನೆಗೂ ಅಡ್ವಾಣಿ ಸ್ಥಾನದಲ್ಲಿ ಆರ್ಎಸ್ಎಸ್ ತಂದು ಕೂರಿಸಿದ್ದು ನೆಟ್ಟಗೆ ಒಂದು ಚುನಾವಣೆ ಗೆಲ್ಲಲಾಗದ ಉತ್ತರಭಾರತದ ಹಳೆಯ ಜಮೀನ್ದಾರಿಕೆಯ ಪಳೆಯುಳಿಕೆಯಂತೆ ಕಾಣುತ್ತಿರುವ ರಾಜನಾಥ್ ಸಿಂಗ್ ಅವರನ್ನು.
ಅದರ ನಂತರ ಆ ಸ್ಥಾನಕ್ಕೆ ಬಂದು ಕೂತದ್ದು ಗಲ್ಲಾಪೆಟ್ಟಿಗೆಯ ಮುಂದೆ ಕೂತಿರುವ ಸೇಠ್ಗಳಂತೆ ಕಾಣುತ್ತಿರುವ ನಿತಿನ್ ಗಡ್ಕರಿ. ಕೋಮುವಾದಕ್ಕಿಂತ ಭಿನ್ನವಾದ ಅಭಿವೃದ್ಧಿಯ ಅಜೆಂಡಾದೊಂದಿಗೆ ಪಕ್ಷವನ್ನು ಮುನ್ನಡೆಸುವ ಬಗ್ಗೆ ಯೋಚನೆ ಮಾಡುತ್ತಿದ್ದ ಪ್ರಮೋದ್ ಮಹಾಜನ್ ನಾಯಕನಾಗುವುದು ಅರ್ಎಸ್ಎಸ್ಗೆ ಬೇಕಾಗಿರಲಿಲ್ಲ.
ಸ್ವತಂತ್ರ ವ್ಯಕ್ತಿತ್ವ ಮತ್ತು ಆಧುನಿಕ ಮನೋಭಾವದ ಮಹಾಜನ್ ಅವರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಲಾಗದು ಎಂಬ ಭಯ ಇದಕ್ಕೆ ಕಾರಣ. ಇದಕ್ಕಾಗಿ ಮಹಾರಾಷ್ಟ್ರದಲ್ಲಿ ಮಹಾಜನ್ ವಿರುದ್ಧ ನಿತಿನ್ ಗಡ್ಕರಿ ಅವರನ್ನು ಎತ್ತಿಕಟ್ಟಿದ್ದೇ ಆರ್ಎಸ್ಎಸ್. ಆ ಸಾಮೀಪ್ಯದ ಬಲದಿಂದಲೇ ಗಡ್ಕರಿ ನಂತರ ಪಕ್ಷದ ಅಧ್ಯಕ್ಷ ಸ್ಥಾನಕ್ಕೇರಿದ್ದು.
ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯ ರಾಜಕೀಯ ಪಕ್ಷವಾಗಿ ಬೆಳೆಯಲು ಸಾಧ್ಯವಿದ್ದ ಬಿಜೆಪಿಯನ್ನು ತನ್ನ ಸ್ವಾರ್ಥಸಾಧನೆಗಾಗಿ ಆರ್ಎಸ್ಎಸ್ ಬಲಿಕೊಟ್ಟಿತೇನೋ ಎಂದು ಮತ್ತೆಮತ್ತೆ ಅನಿಸುವುದು ಇದೇ ಕಾರಣಕ್ಕೆ.
ಇತಿಹಾಸದ ಚಕ್ರವನ್ನು ಸ್ವಲ್ಪ ಹಿಂದಕ್ಕೆ ತಿರುಗಿಸಿದರೆ ದೇಶದ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚನೆಗೆ ಕಾರಣವಾದ `ಜನತಾ~ಪ್ರಯೋಗವನ್ನು ವಿಫಲಗೊಳಿಸಿದ್ದು ಕೂಡಾ ಆರ್ಎಸ್ಎಸ್ ಎನ್ನುವುದು ಗೊತ್ತಾಗುತ್ತದೆ.
ಕೇವಲ ಬ್ರಾಹ್ಮಣ-ಬನಿಯಾಗಳ ಮನೆಯಂಗಳದಲ್ಲಿ ಗಿರ್ಕಿ ಹೊಡೆಯುತ್ತಿದ್ದ ಆರ್ಎಸ್ಎಸ್ ಸಮಾಜದ ಮುಖ್ಯಪ್ರವಾಹದಲ್ಲಿ ಸೇರಿಕೊಳ್ಳಲು ನೆರವಾಗಿದ್ದು ಸಂಪೂರ್ಣ ಕ್ರಾಂತಿಯ ಶಿಲ್ಪಿ ಜಯಪ್ರಕಾಶ್ ನಾರಾಯಣ್.
ಅದರೆ ಜನತಾ ಸರ್ಕಾರದಲ್ಲಿದ್ದ ಸಮಾಜವಾದಿ ನಾಯಕರಾದ ಮಧು ಲಿಮಯೆ, ರಾಜ್ನಾರಾಯಣ್ ಮತ್ತು ಜಾರ್ಜ್ ಫರ್ನಾಂಡಿಸ್ `ದ್ವಿಸದಸ್ಯತ್ವ~ವಿವಾದ ಎತ್ತಿದಾಗ ಆರ್ಎಸ್ಎಸ್ ಮಧ್ಯೆ ಪ್ರವೇಶಿಸಿತು.
ಇದರ ಒತ್ತಡಕ್ಕೆ ಮಣಿದ ವಾಜಪೇಯಿ-ಅಡ್ವಾಣಿ ಬಳಗ ಸರ್ಕಾರದಲ್ಲಿದ್ದವರು ಆರ್ಎಸ್ಎಸ್ ಸದಸ್ಯರಾಗುವಂತಿಲ್ಲ ಎನ್ನುವ ಅಭಿಪ್ರಾಯದ ವಿರುದ್ಧ ಸಿಡಿದೆದ್ದು `ಜನತಾ~ ತೊರೆದು `ಭಾರತೀಯ ಜನತಾ ಪಕ್ಷ~ ಕಟ್ಟಿತು.
ಆದರೆ ಆರ್ಎಸ್ಎಸ್ಗಾಗಿ ಅಧಿಕಾರ ತ್ಯಾಗ ಮಾಡಿದ ಇದೇ ನಾಯಕರನ್ನು 25 ವರ್ಷಗಳ ನಂತರ ಆರ್ಎಸ್ಎಸ್ ಸರ ಸಂಘಚಾಲಕ ಕೆ.ಎಸ್.ಸುದರ್ಶನ್ ಹೊರದಬ್ಬಲು ಹೊರಟದ್ದು ಮಾತ್ರ ಇತಿಹಾಸದ ವ್ಯಂಗ್ಯ.
ಕೆ.ಎಸ್.ಸುದರ್ಶನ್ ಅವರು ವಾಜಪೇಯಿ ಮತ್ತು ಅಡ್ವಾಣಿಯವರ ತಲೆದಂಡ ಕೇಳಲು ಸ್ವಾರ್ಥವಲ್ಲದೆ ಬೇರೆ ಕಾರಣಗಳಿರಲಿಲ್ಲ. ತನ್ನ ಕೈಗೊಂಬೆಯಂತಿರುವ ನಾಯಕರನ್ನು ಮುಂದಿಟ್ಟುಕೊಂಡು ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕೆಂದು ಹೊರಟವರಿಗೆ ದೈತ್ಯ ನಾಯಕರಾದ ವಾಜಪೇಯಿ ಮತ್ತು ಅಡ್ವಾಣಿ ಅಡ್ಡಿಯಾಗಿದ್ದರು.
ಮೊದಲಿನಿಂದಲೂ ಇವರೆದುರು ಅಭದ್ರತೆಯಿಂದ ನರಳುತ್ತಾ ಬಂದ ಆರ್ಎಸ್ಎಸ್ ನಂತರದ ದಿನಗಳಲ್ಲಿ ಯಾವೊಬ್ಬ ನಾಯಕರನ್ನು ಸ್ವತಂತ್ರವಾಗಿ ಬೆಳೆಯಲು ಬಿಡಲೇ ಇಲ್ಲ. ವಿಚಿತ್ರವೆಂದರೆ ಬಿಜೆಪಿಯಲ್ಲಿ ನಾಯಕರಾಗಿ ಬೆಳೆದು ನಂತರ ಭ್ರಷ್ಟಾಚಾರ, ಅಶಿಸ್ತು ಮತ್ತು ದುರ್ನಡತೆಯ ಕಾರಣದಿಂದ ಹೊರ ಹೋದವರೆಲ್ಲರೂ ಊರಿಗೆಲ್ಲಾ ಶಿಸ್ತು, ಪ್ರಾಮಾಣಿಕತೆ, ಸಚ್ಚಾರಿತ್ರ್ಯ, ಸಂಸ್ಕಾರಗಳ ಪಾಠ ಹೇಳುವ ಆರ್ಎಸ್ಎಸ್ ಶಿಬಿರದಿಂದಲೇ ಬಂದವರು.
ಬಂಗಾರು ಲಕ್ಷ್ಮಣ್, ಕಲ್ಯಾಣ್ಸಿಂಗ್, ಉಮಾಭಾರತಿ, ಯಡಿಯೂರಪ್ಪ.. ಎಲ್ಲರೂ ರಾಜಕೀಯದ ಮೊದಲ ಪಾಠವನ್ನು ಆರ್ಎಸ್ಎಸ್ ಬೈಠಕ್ಗಳಲ್ಲಿಯೇ ಕಲಿತವರು. ನಾನಾ ರೀತಿಯ ದೌರ್ಬಲ್ಯಗಳಿಗೆ ಬಲಿಯಾಗಬಲ್ಲ ಇಂತಹ ಶೂದ್ರ ನಾಯಕರನ್ನೇ ಹುಡುಕಾಡಿ ಆರ್ಎಸ್ಎಸ್ ಬೆಳೆಸಿದ್ದು, ಬೆಂಬಲಿಸಿದ್ದು.
ಇವರಿಗೆಲ್ಲ ಅಧಿಕಾರ ಕೊಟ್ಟರೆ ಹೀಗಾಗುತ್ತದೆ ನೋಡಿ ಎನ್ನುವ ಸಂದೇಶ ಕೊಡುವುದೂ ಇದರ ಹಿಂದಿನ ದುರುದ್ದೇಶ ಇರಬಹುದೇನೋ ಎಂದು ಸಂಶಯಪಡುವ ಹಾಗಿದೆ ಈ ನಾಯಕರ ಹಿನ್ನೆಲೆ ಮತ್ತು ಆರ್ಎಸ್ಎಸ್ ನಡವಳಿಕೆ. ರಾಜ್ಯದ ಹೊಸ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿಗೂ ಈ ನಾಯಕರೆಲ್ಲರ ಅನುಭವದಲ್ಲಿ ಕಲಿಯಬೇಕಾದ ಪಾಠ ಇರಬಹುದೇನೋ?
ಕರ್ನಾಟಕದ ಬಿಜೆಪಿಯಲ್ಲಿ ನಡೆಯುತ್ತಿರುವ ಈ ಎಲ್ಲ ರಾಜಕೀಯ ಬೆಳವಣಿಗೆಗಳಿಂದ ರೋಸಿ ಹೋದವರಲ್ಲಿ ಅನೇಕರು `ಆ ಪಕ್ಷದಲ್ಲಿ ಒಂದು ಬಲವಾದ ಹೈಕಮಾಂಡ್ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ~ ಎಂದು ನಿಟ್ಟುಸಿರು ಬಿಡುತ್ತಾರೆ.
ದೆಹಲಿಯಿಂದಲೇ ಎಲ್ಲವನ್ನೂ ನಿಯಂತ್ರಿಸುವ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿಯನ್ನು ಒಂದು ಕಾಲದಲ್ಲಿ ಇವರೇ ಟೀಕಿಸುತ್ತಿದ್ದವರು. ರಾಷ್ಟ್ರೀಯ ಪಕ್ಷಗಳ ಅಟ್ಟಹಾಸದಿಂದ ಬೇಸತ್ತು ಹೋದವರೆಲ್ಲರೂ ಪ್ರಾದೇಶಿಕ ಮಟ್ಟದಲ್ಲಿ ನಾಯಕರು ಬೆಳೆಯಲಿ ಎಂದು ದೇವರಿಗೆ ಕೈಮುಗಿದವರೇ ಆಗಿದ್ದಾರೆ.
ಇದೇ ಜನ ಈಗ `ಪ್ರಾದೇಶಿಕ ಪಾಳೆಯಗಾರ~ರದ್ದು ಅತಿ ಆಯಿತು, ಇವರನ್ನು ನಿಯಂತ್ರಿಸುವಂತಹ ಬಲಶಾಲಿ ನಾಯಕರು ಪಕ್ಷಗಳ ಹೈಕಮಾಂಡ್ನಲ್ಲಿರಬೇಕು ಎಂದು ಹೇಳುತ್ತಿದ್ದಾರೆ. ಈ ರೀತಿಯ ತಕ್ಷಣದ ಪ್ರತಿಕ್ರಿಯೆಗಳನ್ನು ಆಧರಿಸಿ ಭಾರತದ ರಾಜಕಾರಣ ಮಗ್ಗುಲು ಬದಲಾಯಿಸುತ್ತದೆ ಎಂದು ಹೇಳಲಾಗದು.
ಆದರೆ ರಾಜಕೀಯ ಪಕ್ಷಗಳಲ್ಲಿ ಶಕ್ತಿಶಾಲಿ ನಾಯಕರನ್ನೊಳಗೊಂಡ ಬಲವಾದ ಹೈಕಮಾಂಡ್ ಬಗ್ಗೆ ಚರ್ಚೆ ಸಣ್ಣದಾಗಿಯಾದರೂ ಪ್ರಾರಂಭವಾಗಿದೆ. ಇದು ಹೇಗೆ ಮುಂದುವರಿಯುತ್ತದೋ ಕಾದು ನೋಡಬೇಕು.