ಸಾರ್ವಜನಿಕ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವ ಸಂವಿಧಾನೇತರ ಶಕ್ತಿಗಳಿಂದಾಗಿ ದೇಶದ ಸಂಸದೀಯ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತಿದೆ ಎಂಬ ಹುಯಿಲೆದ್ದಿದೆ. ಆಳುವ ಪಕ್ಷ ವ್ಯಕ್ತಪಡಿಸುತ್ತಿರುವ ಈ ಆತಂಕದಲ್ಲಿ ಸ್ವಹಿತಾಸಕ್ತಿಗಳಿದ್ದರೂ ಸತ್ಯಾಂಶ ಇಲ್ಲವೆಂದಲ್ಲ. ಆದರೆ, ಇದು ಪ್ರಾರಂಭವಾಗಿದ್ದು ಅಣ್ಣಾ ಹಜಾರೆ ಇಲ್ಲವೇ ಬಾಬಾ ರಾಮ್ದೇವ್ ಉಪವಾಸ ಸತ್ಯಾಗ್ರಹಗಳಿಂದಲ್ಲ.
ಈ ಎರಡು ಸತ್ಯಾಗ್ರಹಗಳ ಕುರಿತು ಸಂಪೂರ್ಣವಾಗಿ `ಸಂವಿಧಾನೇತರ ಶಕ್ತಿಗಳ ಕುಟಿಲ ಯತ್ನ~ ಎಂದು ಬಣ್ಣಿಸುವುದು ಕೂಡಾ ಸರಿಯಲ್ಲ.
ಶಾಸನರಚನೆಗೆ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಪ್ರಜಾಪ್ರಭುತ್ವದ ವ್ಯಾಪ್ತಿಯಲ್ಲಿಯೇ ಬರುತ್ತದೆ. ದೇಶದಲ್ಲಿ ಹಿಂದೆ ನಡೆದಿರುವ ಮತ್ತು ಈಗಲೂ ನಡೆಯುತ್ತಿರುವ ಅನೇಕ ಚಳವಳಿಗಳು ಇದೇ ಮಾದರಿಯವು.
ಆದರೆ ಶಾಸನರಚನೆಯ ಪ್ರಕ್ರಿಯೆಯಲ್ಲಿಯೂ ತಮ್ಮನ್ನು ಸೇರಿಸಿಕೊಳ್ಳಬೇಕು ಎಂದು ಚಳವಳಿಗಾರರು ಹೇರುವ ಒತ್ತಡ ಪ್ರಜಾಸತ್ತಾತ್ಮಕವಾದುದೇ ಎನ್ನುವುದಷ್ಟೇ ಈಗಿನ ಪ್ರಶ್ನೆ.
`ಅಣ್ಣಾ ಹಜಾರೆ, ನ್ಯಾಯಮೂರ್ತಿ ಎನ್ . ಸಂತೋಷ್ ಹೆಗ್ಡೆ, ಅರವಿಂದ್ ಕೇಜ್ರಿವಾಲ್ ಮೊದಲಾದವರು ಶಾಸನರಚನೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವುದರಿಂದ ಇದರಲ್ಲಿ ತಪ್ಪಿಲ್ಲ~ ಎಂದು ಈ ಕ್ಷಣದಲ್ಲಿ ಅನಿಸಬಹುದು.
ಆದರೆ ಇದನ್ನೇ ಪೂರ್ವ ನಿದರ್ಶನವಾಗಿ ಇಟ್ಟುಕೊಂಡು ಉಳಿದವರು ಇದೇ ಮಾರ್ಗವನ್ನು ಅನುಸರಿಸಿದರೇ? ಬಹಳ ದೂರವೇನೂ ಹೋಗಬೇಕಾಗಿಲ್ಲ, ನಾಳೆ ಬಾಬಾ ರಾಮ್ದೇವ್ ಅವರು ಕಪ್ಪುಹಣ ವಾಪಸು ಪಡೆಯುವ ಕಾನೂನಿನ ರಚನೆಯಲ್ಲಿಯೂ ತಮ್ಮನ್ನು ಸೇರಿಸಿಕೊಳ್ಳಬೇಕೆಂದು ಉಪವಾಸ ಸತ್ಯಾಗ್ರಹದ ಮೂಲಕ ಹಠ ಹಿಡಿದರೆ? ಅಣ್ಣಾಹಜಾರೆ ಅವರ ಪಾಲ್ಗೊಳ್ಳುವಿಕೆಯನ್ನು ಒಪ್ಪುವವರು
ಬಾಬಾ ರಾಮ್ದೇವ್ ಅವರನ್ನೂ ಒಪ್ಪಿಕೊಳ್ಳುವರೇ? ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಸಂವಿಧಾನೇತರ ಶಕ್ತಿಗಳ ಪಾತ್ರವನ್ನು ನೋಡಬೇಕಾಗಿದೆ. ನಮಗೆಅರಿವಿಲ್ಲದಂತೆಯೇ ಸಂಸದೀಯ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಾ ಬರುತ್ತಿರುವ ಮತ್ತು ರಾಜಕೀಯ ಪಕ್ಷಗಳು ಶರಣಾಗಿರುವ ಸಂವಿಧಾನೇತರ ಶಕ್ತಿಗಳ ಬಗ್ಗೆಯೂ ಚರ್ಚೆ ನಡೆಯಬೇಕಾಗಿದೆ.
ಸಂವಿಧಾನೇತರ ಶಕ್ತಿಗಳ ಬಗ್ಗೆ ಮಾತನಾಡುವಾಗ ಎಲ್ಲರೂ ತೆರೆಯ ಮುಂದಿನ ಪಾತ್ರಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಸಂಸದೀಯ ಪ್ರಜಾಪ್ರಭುತ್ವಕ್ಕೆ ನಿಜಕ್ಕೂ ಹಾನಿ ಉಂಟು ಮಾಡುತ್ತಿರುವುದು ತೆರೆಯ ಹಿಂದಿನ ಸಂವಿಧಾನೇತರ ಶಕ್ತಿಗಳು.
ದೇಶದ ಪ್ರಜಾಪ್ರಭುತ್ವದಲ್ಲಿ ಇವುಗಳ ಪ್ರವೇಶವಾಗಿದ್ದು ಎನ್ಡಿಎ ಕಾಲದಲ್ಲಿ. ಅದನ್ನೇ ಇನ್ನೊಂದು ರೀತಿಯಲ್ಲಿ ಈಗ ಮುಂದುವರಿಸಿಕೊಂಡು ಹೋಗುತ್ತಿರುವುದು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ.
ಸಂವಿಧಾನೇತರ ಶಕ್ತಿಯ ಕಾಣದ ಕೈಗಳ ಪ್ರಭಾವ ಮೊದಲ ಬಾರಿ ದೇಶದ ಅನುಭವಕ್ಕೆ ಬಂದದ್ದು ಅಟಲಬಿಹಾರಿ ವಾಜಪೇಯಿ ಮೊದಲ ಬಾರಿ ಸಂಪುಟ ರಚನೆಗೆ ಸಿದ್ಧತೆ ನಡೆಸುತ್ತಿದ್ದಾಗ. ಜಸ್ವಂತ್ಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಬೇಕೆಂದು ಹೊರಟಾಗ `ಕಾಣದ ಕೈ~ ಅವರ ಕಾಲು ಹಿಡಿದು ಎಳೆದಿತ್ತು.
ಈ `ಕಾಣದ ಕೈ~ಗಳು ಯಾರದ್ದೆಂದು ಈ ವರೆಗೆ ಯಾರೂ ಒಪ್ಪಿಕೊಳ್ಳದೆ ಇದ್ದರೂ ಅದು ರಾಷ್ಟ್ರೀಯ ಸ್ವಯಂಸೇವಕ ಸಂಘದ್ದೆಂದು ಎಲ್ಲರಿಗೂ ಗೊತ್ತಿದೆ. ಆ ದಿನದಿಂದ ಪ್ರಾರಂಭಗೊಂಡ ಆ `ಕಾಣದ ಕೈ~ಗಳ ಪ್ರಭಾವ ಎನ್ಡಿಎ ಸರ್ಕಾರದ ಆರು ವರ್ಷಗಳ ಅವಧಿಯುದ್ದಕ್ಕೂ ಕಾಣಿಸಿಕೊಂಡಿತು.
ಪ್ರತಿ ಬಾರಿ ಸಚಿವ ಸಂಪುಟ ರಚನೆಗೆ ಮೊದಲು ಬಿಜೆಪಿಯ ಹಿರಿಯ ನಾಯಕರು ನಾಗಪುರದಲ್ಲಿರುವ ಆರ್ಎಸ್ಎಸ್ ಹಿರಿಯರೊಂದಿಗೆ ಸಮಾಲೋಚನೆ ನಡೆಸಬೇಕಾಗಿತ್ತು, ಇಲ್ಲವೇ, ದೆಹಲಿಯ ಜಂಡೇಲಾದಲ್ಲಿರುವ ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡಬೇಕಾಗಿತ್ತು.
ಬಿಜೆಪಿ ಪಾಲಿಗೆ ಋಣ ಪರಿಹಾರ ಅನಿವಾರ್ಯವಾಗಿತ್ತು. ಅದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದದ್ದು ಸ್ವಂತ ಬಲದಿಂದ ಅಲ್ಲ, ಸಂಘ ಪರಿವಾರದ ಬೆಂಬಲದಿಂದ ಎಂಬುದು ವಿರೋಧಪಕ್ಷಗಳ ಆರೋಪವಷ್ಟೇ ಅಲ್ಲ, ಬಿಜೆಪಿ ಕೂಡಾ ಆಂತರ್ಯದಲ್ಲಿ ಹಾಗೆಯೇ ತಿಳಿದುಕೊಂಡಿತ್ತು.
ಯಾಕೆಂದರೆ ಬಿಜೆಪಿಯನ್ನು ದೆಹಲಿಯ ಸಿಂಹಾಸನದಲ್ಲಿ ಕರೆದೊಯ್ದು ಕೂರಿಸಿದ್ದು ರಾಮಜನ್ಮಭೂಮಿ ಚಳವಳಿ. ಅದು ಮೂಲತಃ ಬಿಜೆಪಿಯ ಅಜೆಂಡಾ ಆಗಿರಲಿಲ್ಲ. 80ರ ದಶಕದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾರಂಭಿಸಿದ್ದ ರಾಮಜನ್ಮಭೂಮಿ ಚಳವಳಿಗೆ ಬಿಜೆಪಿ ಅಧಿಕೃತವಾಗಿ ಪ್ರವೇಶಿಸಿದ್ದು 1989ರಲ್ಲಿ,
ಪಾಲಂಪುರದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಕೈಗೊಂಡ ಗೊತ್ತುವಳಿ ಮೂಲಕ. ರಾಮಮಂದಿರ ನಿರ್ಮಾಣ, ಸಮಾನ ನಾಗರಿಕ ಸಂಹಿತೆ, ಸಂವಿಧಾನದ 370ನೇ ಪರಿಚ್ಛೇದದ ರದ್ದತಿ..ಇವೆಲ್ಲವೂ ಮೂಲತಃ ಸಂಘ ಪರಿವಾರದ ಬೇಡಿಕೆಗಳೇ ಹೊರತು ಬಿಜೆಪಿಯವಲ್ಲ.
ಈ ಬೇಡಿಕೆಗಳನ್ನೆತ್ತಿಕೊಂಡು ರಾಜಕೀಯ ಹೋರಾಟ ನಡೆಸಿದ ಕಾರಣದಿಂದಾಗಿಯೇ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಸಂಘ ಪರಿವಾರ ಬಲವಾಗಿ ನಂಬಿದೆ. ಆ ನಂಬಿಕೆಯ ಬಲದಿಂದಲೇ ಹೆಜ್ಜೆ ಹೆಜ್ಜೆಗೂ ಎನ್ಡಿಎ ಸರ್ಕಾರವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಂಘ ಪರಿವಾರ ಪ್ರಯತ್ನ ನಡೆಸಿದ್ದು.
ಆರು ವರ್ಷಗಳ ವಾಜಪೇಯಿ ಅಧಿಕಾರವಧಿ ಪಕ್ಷ ಮತ್ತು ಸಂಘದ ನಡುವಿನ ನಿತ್ಯ ಸಂಘರ್ಷದ ಕಾಲವೂ ಆಗಿತ್ತು. ಆದರೆ ವಾಜಪೇಯಿ ಅವರ ನಾಯಕತ್ವಕ್ಕೆ ಇದ್ದ ಪ್ರಭಾವಳಿಯಿಂದಾಗಿ ಪಕ್ಷವನ್ನು ಸಂಪೂರ್ಣವಾಗಿ ಮಣಿಸಲು ಸಂಘಕ್ಕೆ ಸಾಧ್ಯವಾಗಿರಲಿಲ್ಲ.
ಈ ಹತಾಶೆಯಿಂದಲೇ ವಾಜಪೇಯಿ ಮತ್ತು ಅಡ್ವಾಣಿಯವರು ನಿವೃತ್ತಿಯಾಗಬೇಕೆಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಆರ್ಎಸ್ಎಸ್ ಸರಸಂಘ ಚಾಲಕರು ಅವಮಾನಿಸಿದ್ದು. 2004ರಲ್ಲಿ ಬಿಜೆಪಿ ಸ್ವಂತಬಲದಿಂದ `ಅಭಿವೃದ್ಧಿ~ಯ ಅಜೆಂಡಾದ ಮೂಲಕ ಲೋಕಸಭಾ ಚುನಾವಣೆಯನ್ನು ಎದುರಿಸಲು ಪ್ರಯತ್ನಿಸಿದ್ದು ನಿಜ.
ಪ್ರಮೋದ್ ಮಹಾಜನ್ ಅವರು ಈ ಕಾರ್ಯತಂತ್ರವನ್ನು ರೂಪಿಸಿದ್ದರು. ಗುಜರಾತ್ ಯಶಸ್ಸಿನ ಆಕರ್ಷಣೆಗೆ ಬಲಿಯಾಗದೆ ವಾಜಪೇಯಿ ಅವರ ಸಾಧನೆಯನ್ನೇ ಮುಂದಿಟ್ಟುಕೊಂಡು `ಪ್ರಕಾಶಿಸುತ್ತಿರುವ ಭಾರತ~ದ ಮೂಲಕ ಬಿಜೆಪಿ ಚುನಾವಣೆ ಎದುರಿಸಿತ್ತು.
ಆಗ ಅನುಭವಿಸಿದ ಸೋಲು ಪಕ್ಷದೊಳಗಿರುವ ಸಂಘಪ್ರೇಮಿಗಳ ಕೈಗಳನ್ನು ಮತ್ತೆ ಬಲಪಡಿಸಿತ್ತು. ಅದರ ನಂತರ ಗೊಂದಲದಲ್ಲಿದ್ದ ಬಿಜೆಪಿ, ಈಗ ಮತ್ತೆ ತಮ್ಮ ಹಳೆಯ ದಿನಗಳಿಗೆ ಮರಳುವ ಪ್ರಯತ್ನ ಮಾಡುತ್ತಿದೆ.
ಈ ಬಾರಿ ಇದಕ್ಕೆ ಪ್ರೇರಣೆಯನ್ನು ಬಿಜೆಪಿ ಕರ್ನಾಟಕದಿಂದಲೇ ಪಡೆದಿರಬಹುದು. ಭ್ರಷ್ಟಾಚಾರದ ಹಗರಣಗಳ ಆರೋಪಕ್ಕೆ ಸಿಕ್ಕಿ ತತ್ತರಿಸಿಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆತ್ಮರಕ್ಷಣೆಗಾಗಿ ಬಳಸುತ್ತಿರುವುದು ಜಾತಿಮಠಗಳೆಂಬ ಸಂವಿಧಾನೇತರ ಶಕ್ತಿಗಳ ಬೆಂಬಲದ ಅಸ್ತ್ರವನ್ನೇ ಅಲ್ಲವೇ? ಸರ್ಕಾರ ಬೇಕಾಬಿಟ್ಟಿಯಾಗಿ ಹಂಚಿರುವ ಹಣವನ್ನು ಪಡೆದ ಮಠಗಳು ಋಣ ತೀರಿಸಲೆಂಬಂತೆ ಮುಖ್ಯಮಂತ್ರಿಗಳ ರಕ್ಷಣೆಗೆ ನಿಂತಿವೆ.
`ಅವರನ್ನು ಮುಟ್ಟಿದರೆ ಜೋಕೆ~ ಎಂದು ಬೆದರಿಕೆ ಹಾಕುವ ಮಟ್ಟಕ್ಕೆ ಸ್ವಾಮಿಗಳು ಹೋಗಿದ್ದಾರೆ. ಸಚಿವ ಸಂಪುಟಕ್ಕೆ ಸೇರ್ಪಡೆಯಿಂದ ಹಿಡಿದು ಅಧಿಕಾರಿಗಳ ವರ್ಗಾವಣೆವರೆಗೆ ಸರ್ಕಾರ ಕೈಗೊಳ್ಳಬೇಕಾಗಿರುವ ನಿರ್ಧಾರಗಳು ಜಾತಿ ಮಠಗಳ ಅಂತರಂಗದ ಚಾವಡಿಗಳಲ್ಲಿ ನಡೆಯುತ್ತಿರುವುದನ್ನು ಸರ್ಕಾರದ ಮೇಲಿನ ಸಂವಿಧಾನೇತರ ಶಕ್ತಿಗಳ ನಿಯಂತ್ರಣವೆನ್ನದೆ ಬೇರೆ ಏನೆಂದು ಕರೆಯಲು ಸಾಧ್ಯ?
ಯುಪಿಎ ಸರ್ಕಾರದೊಳಗಿನ ಈಗಿನ ಸ್ಥಿತಿ ವಾಜಪೇಯಿ ಕಾಲದ ಬಿಜೆಪಿಗಿಂತ ಭಿನ್ನವಾಗಿ ಇಲ್ಲ. ವಂಶಪರಂಪರೆಯ ರಾಜಕೀಯ ಕಾಂಗ್ರೆಸ್ ಪಕ್ಷದ ಮೇಲಿರುವ ಹಳೆಯ ಆರೋಪ.
ಆದರೆ ಆ ಪಕ್ಷದ ನಾಯಕತ್ವ ವಹಿಸುತ್ತಾ ಬಂದ ನೆಹರೂ ಕುಟುಂಬದ ಸದಸ್ಯರು ಚುನಾವಣೆಗಳನ್ನು ಎದುರಿಸಿ ಸೋಲು-ಗೆಲುವುಗಳನ್ನು ಅನುಭವಿಸಿದವರೇ ಆಗಿರುವ ಕಾರಣ ಅವರ ರಾಜಕೀಯ ಜೀವನ ಪ್ರಜಾಪ್ರಭುತ್ವದ ಚೌಕಟ್ಟಿನೊಳಗಡೆಯೇ ಇತ್ತು. ಆದ್ದರಿಂದ ಕಾಂಗ್ರೆಸ್ ಮೇಲಿನ ನೆಹರೂ ಕುಟುಂಬದ ನಿಯಂತ್ರಣವನ್ನು ಸಂವಿಧಾನೇತರ ಶಕ್ತಿಯ ನಿಯಂತ್ರಣ ಎಂದು ವ್ಯಾಖ್ಯಾನ ಮಾಡಲಾಗುವುದಿಲ್ಲ.
ಆದರೆ 2004ರ ಲೋಕಸಭಾ ಚುನಾವಣೆಯ ನಂತರ ಈ ಚಿತ್ರ ಬದಲಾಗಿ ಹೋಗಿದೆ. ಸೋನಿಯಾಗಾಂಧಿ ನೇತೃತ್ವದಲ್ಲಿಯೇ ಪಕ್ಷ ಚುನಾವಣೆ ಎದುರಿಸಿದರೂ ಪ್ರಧಾನಿಯಾಗಿದ್ದು ಮಾತ್ರ ಮನಮೋಹನ್ಸಿಂಗ್. ಭಾರತದ ರಾಜಕೀಯ ಸಂದರ್ಭದಲ್ಲಿ ಇದೊಂದು ಹೊಸ ಪ್ರಯೋಗ.
ರಾಜಕೀಯವಾದ ಬಿಕ್ಕಟ್ಟುಗಳಿಗೆ ಸೋನಿಯಾಗಾಂಧಿಯವರೇ ತಲೆಕೊಡುತ್ತಿರುವ ಕಾರಣ ಪ್ರಧಾನಿಯಾದವರು ಆಡಳಿತೇತರ ಜಂಜಾಟಗಳಿಂದ ಮುಕ್ತವಾಗಿ ಆಡಳಿತ ನಡೆಸಲು ಸಾಧ್ಯವಾಗಬಹುದೆಂಬ ನಿರೀಕ್ಷೆ ಇತ್ತು.
ಆಡಳಿತ ಸೂತ್ರ ಕೈಯಲ್ಲಿದ್ದರೂ ರಾಜಕೀಯ ಅಧಿಕಾರ ಇಲ್ಲದ ನಾಯಕ ಎಷ್ಟೇ ಸಮರ್ಥನಾಗಿದ್ದರೂ ಹೇಗೆ ಅಸಹಾಯಕ ಮತ್ತು ನಿಷ್ಪ್ರಯೋಜಕನಾಗುತ್ತಾನೆ ಎನ್ನುವುದಕ್ಕೆ ಮನಮೋಹನ್ಸಿಂಗ್ ಸಾಕ್ಷಿ.
ಸೋನಿಯಾ ಗಾಂಧಿಯವರ ಈ ಪಾತ್ರ ನಿರ್ವಹಣೆ ಕೂಡಾ ಸಂವಿಧಾನೇತರ ಶಕ್ತಿಯ ನಿಯಂತ್ರಣ ಅಲ್ಲ ಎಂದು ತಳ್ಳಿಹಾಕಬಹುದು. ಆದರೆ, ಅವರ ಪಾತ್ರ ಅಷ್ಟಕ್ಕೆ ಕೊನೆಗೊಂಡಿಲ್ಲ.
`ಸೂಪರ್ ಕ್ಯಾಬಿನೆಟ್~ ಎಂಬ ಆರೋಪಕ್ಕೊಳಗಾಗಿರುವ `ರಾಷ್ಟ್ರೀಯ ಸಲಹಾ ಮಂಡಳಿ~ಯನ್ನು (ಎನ್ಎಸಿ) ಅವರು ಹುಟ್ಟು ಹಾಕಿದ್ದಾರೆ. ಅದಕ್ಕೆ ಅವರೇ ಅಧ್ಯಕ್ಷರು. ಎಂಎನ್ಆರ್ಇಜಿಪಿ, ಮಾಹಿತಿ ಹಕ್ಕು, ಅರಣ್ಯ ಹಕ್ಕು, ಶಿಕ್ಷಣದ ಹಕ್ಕು, ಭೂ ಸ್ವಾಧೀನ ಮತ್ತು ಪುನರ್ವಸತಿ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಮೊದಲಾದ ಪ್ರಮುಖ ವಿಷಯಗಳಿಗೆ ಸಂಬಂಧಿಸಿದ ಕಾನೂನಿನ ಕರಡುಗಳನ್ನು ರೂಪಿಸಿದ್ದು ಯುಪಿಎ ಸರ್ಕಾರವಲ್ಲ, ಅದು ಎನ್ಎಸಿ.
ಇತ್ತೀಚೆಗೆ ವಿವಾದ ಸೃಷ್ಟಿಸಿರುವ ಕೋಮು ಹಿಂಸೆ ನಿಯಂತ್ರಣ ಮಸೂದೆ ರಚಿಸಿರುವುದು ಎನ್ಎಸಿ. ಶಾಸನ ರಚನೆಗಾಗಿಯೇ ಶಾಸಕಾಂಗ ಇರುವಾಗ ಅದಕ್ಕೆ ಪರ್ಯಾಯವಾಗಿ ಇಂತಹ ಸಂಸ್ಥೆಯೊಂದನ್ನು ಹುಟ್ಟುಹಾಕಿ ಕಾಂಗ್ರೆಸ್ ಪಕ್ಷದೊಳಗೂ ಸಂವಿಧಾನೇತರ ಸಂಸ್ಥೆಯ ಪ್ರವೇಶಕ್ಕೆ ಸೋನಿಯಾಗಾಂಧಿ ದಾರಿಮಾಡಿಕೊಟ್ಟಿದ್ದಾರೆ.
ಇದರಲ್ಲಿ ಸದಸ್ಯರಾಗಿರುವವರಲ್ಲಿ ಹೆಚ್ಚಿನವರು ಸರ್ಕಾರೇತರ ಸೇವಾ ಸಂಸ್ಥೆಗಳ (ಎನ್ಜಿಒ) ಜತೆ ತಮ್ಮನ್ನು ಗುರುತಿಸಿಕೊಂಡವರು. ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿ ಮತ್ತು ಎನ್ಎಸಿ ಸದಸ್ಯರ ನಡುವೆ ಹಲವಾರು ಸಾಮ್ಯತೆಗಳಿವೆ.
ಈ ಎರಡೂ ಗುಂಪಿನ ಅನೇಕ ಸದಸ್ಯರು ರಾಜಕಾರಣಿಗಳನ್ನು ದ್ವೇಷಿಸುತ್ತಾರೆ, ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಇಷ್ಟಪಡುವುದಿಲ್ಲ, ಆದರೆ ತಮ್ಮ ಮಾತನ್ನು ಚುನಾಯಿತ ಸರ್ಕಾರ ಕೇಳಬೇಕೆಂದು ಬಯಸುತ್ತಾರೆ.
ಭ್ರಷ್ಟತೆ ಮತ್ತು ಅಸಾಮರ್ಥ್ಯಗಳ ಕಾರಣ ಸಹೋದ್ಯೋಗಿಗಳ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿರುವ ಸೋನಿಯಾಗಾಂಧಿ, ಈ `ಜೋಲಾವಾಲಾ~ಗಳ ಮೇಲೆ ಹೆಚ್ಚು ಹೆಚ್ಚು ಅವಲಂಬನೆಗೊಳಗಾದಂತೆ ಕಾಣಿಸುತ್ತಿದೆ.
ಸರ್ಕಾರ ಈಗ ಎದುರಿಸುತ್ತಿರುವ ಬಿಕ್ಕಟ್ಟಿಗೆ ಅಣ್ಣಾಹಜಾರೆ ನೇತೃತ್ವದ ನಾಗರಿಕ ಸಮಿತಿಯ ಸದಸ್ಯರು ಮತ್ತು ಎನ್ಎಸಿ ಸದಸ್ಯರ ನಡುವಿನ ವ್ಯಕ್ತಿ ಪ್ರತಿಷ್ಠೆಯ ಸಂಘರ್ಷವೂ ಕಾರಣ.
`ನಾಗರಿಕ ಸಮಿತಿ~ಗಳು ಚುನಾಯಿತ ಸರ್ಕಾರವನ್ನು ಬ್ಲಾಕ್ಮೇಲ್ ಮಾಡುತ್ತಿದೆ ಎಂದು ಬೊಬ್ಬಿಡುತ್ತಿರುವ ಕಾಂಗ್ರೆಸ್ ಪಕ್ಷ ತನ್ನದೇ ಸರ್ಕಾರದ ತಲೆಮೇಲೆ `ನಾಗರಿಕ ಸಮಿತಿ~ಯ ಇನ್ನೊಂದು ರೂಪವಾದ ಎನ್ಎಸಿಯನ್ನು ಕೂರಿಸಿರುವುದನ್ನು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ? ಇದರಿಂದ ಸಂಸದೀಯ ಪ್ರಜಾಪ್ರಭುತ್ವ ದುರ್ಬಲಗೊಳ್ಳುವುದಿಲ್ಲವೇ?
ಈ ರೀತಿ ಕಾಂಗ್ರೆಸ್ ಪಕ್ಷ ಬಿಜೆಪಿ ಹಿಂದೆ ಮಾಡಿದ್ದ ತಪ್ಪನ್ನೇ ಮಾಡುತ್ತಿದ್ದರೆ, ಅನುಭವದಿಂದ ಪಾಠ ಕಲಿಯದ ಬಿಜೆಪಿ ಹಳೆಯ ತಪ್ಪನ್ನೇ ಪುನರಾವರ್ತಿಸಲು ಹೊರಟಿದೆ.
ಜವಾಬ್ದಾರಿಯುತ ವಿರೋಧಪಕ್ಷವಾಗಿ ದೇಶವನ್ನು ಬಾಧಿಸುತ್ತಿರುವ ಸಮಸ್ಯೆಗಳ ಬಗ್ಗೆ ಆಳುವ ಪಕ್ಷದ ಜತೆ ಮುಖಾಮುಖಿ ರಾಜಕೀಯ ಹೋರಾಟಕ್ಕಿಳಿಯಬೇಕಾದ ಬಿಜೆಪಿ ಬಾಬಾ ರಾಮ್ದೇವ್ ಅವರಂತಹವರ ಬೆನ್ನಹಿಂದೆ ನಿಂತು ರಾಜಕೀಯ ಮಾಡುತ್ತಿದೆ.
ಜನತೆಯ ಬೆಂಬಲದ ಮೂಲಕ ರಾಜಕೀಯ ಶಕ್ತಿಯನ್ನು ಗಳಿಸಬೇಕಾದ ಈ ರಾಜಕೀಯ ಪಕ್ಷ, ಕುಸಿಯುತ್ತಿರುವ ಜನಪ್ರಿಯತೆಯಿಂದಾಗಿ ಹತಾಶರಾಗಿರುವ ಒಬ್ಬ ಯೋಗಗುರುವಿನ ಮೂಲಕ ರಾಜಕೀಯ ಮರುಜನ್ಮ ಪಡೆಯುವ ವ್ಯರ್ಥ ಪ್ರಯತ್ನದಲ್ಲಿದೆ.
ತಮ್ಮ ಪಕ್ಷದ ನಾಯಕರಾದ ಎಲ್.ಕೆ.ಅಡ್ವಾಣಿ ಅವರು ರಾಮ್ದೇವ್ಗಿಂತಲೂ ಮೊದಲು ಕಪ್ಪುಹಣದ ವಿಷಯವನ್ನು ಸಾರ್ವಜನಿಕ ಚರ್ಚೆಯ ಅಂಗಳಕ್ಕೆ ಎಳೆದು ತಂದವರು ಎನ್ನುವುದನ್ನು ಬಿಜೆಪಿ ಮರೆತುಬಿಟ್ಟಂತೆ ಕಾಣುತ್ತಿದೆ.
ಸಮರ್ಥ ನಾಯಕರಿಲ್ಲದೆ ದುರ್ಬಲವಾಗಿರುವ ವಿರೋಧ ಪಕ್ಷವಾದ ಬಿಜೆಪಿ ಸಂವಿಧಾನೇತರ ಶಕ್ತಿಗಳಾದ ಸಂಘ ಪರಿವಾರ ಮತ್ತು ಸಾಧು-ಸಂತರಿಗೆ ಶರಣಾಗಿರುವುದು ಭವಿಷ್ಯದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಇನ್ನಷ್ಟು ದುರ್ಬಲಗೊಳ್ಳಲಿದೆ ಎನ್ನುವುದಕ್ಕೆ ಸೂಚನೆ. ಎರಡನೇ ಸ್ವಾತಂತ್ರ್ಯ ಹೋರಾಟ ನಡೆಯಬೇಕಾಗಿರುವುದು ಈ ಕಾರಣಕ್ಕಾಗಿ.