‘ಈಗಿನ ಸನ್ನಿವೇಶದಲ್ಲಿ ಗಾಂಧೀಜಿ ಇದ್ದಿದ್ದರೆ ಅವರು ಸಾರ್ವಜನಿಕ ಜೀವನವನ್ನು ತ್ಯಜಿಸಬೇಕಾಗುತ್ತಿತ್ತು ಇಲ್ಲವೇ ಅವರೂ ಭ್ರಷ್ಟರಾಗುತ್ತಿದ್ದರು’ ಎಂದು ರಾಜ್ಯ ಜೆಡಿ (ಎಸ್) ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದಾಕ್ಷಣ ಅವರ ಮೇಲೆ ‘ಗಾಂಧಿ ಅಭಿಮಾನಿ’ಗಳೆಲ್ಲ ಮುಗಿಬಿದ್ದುಬಿಟ್ಟರು.
ಈ ರೀತಿ ದಾಳಿ ಮಾಡಿದವರಲ್ಲಿ ಗಾಂಧೀಜಿ ಅಭಿಮಾನಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕುಮಾರಸ್ವಾಮಿಗಳ ದ್ವೇಷಿಗಳು ಇದ್ದಿರಬಹುದು. ಒಮ್ಮೊಮ್ಮೆ ಸಂದೇಶವಾಹಕನ ಚಾರಿತ್ರ್ಯ, ಸಂದೇಶದ ತಪ್ಪು ವ್ಯಾಖ್ಯಾನಕ್ಕೆ ಕಾರಣವಾಗುತ್ತದೆ. ಕುಮಾರಸ್ವಾಮಿಯವರು ಹೇಳಿದ್ದರಲ್ಲಿ ಅರ್ಧ ಸತ್ಯ ಇತ್ತು, ಇದಕ್ಕೆ ಗಾಂಧೀಜಿ ಬಗೆಗಿನ ಅವರ ಅರ್ಧಂಬರ್ಧ ತಿಳುವಳಿಕೆ ಕಾರಣ ಇರಬಹುದು.
ಗಾಂಧೀಜಿ ಈಗಿನ ಚುನಾವಣಾ ರಾಜಕೀಯಕ್ಕೆ ಪ್ರವೇಶ ಮಾಡಿ ಅಲ್ಲಿಯೇ ಉಳಿಯಬೇಕೆಂದು ಬಯಸಿದ್ದರೆ ಭ್ರಷ್ಟರಾಗಬೇಕಾಗುತ್ತಿತ್ತೋ ಏನೋ? ಅಷ್ಟರ ಮಟ್ಟಿಗೆ ಕುಮಾರಸ್ವಾಮಿ ಹೇಳಿರುವುದು ಸತ್ಯ. ಆದರೆ ಗಾಂಧೀಜಿ ಈಗ ನಮ್ಮ ನಡುವೆ ಇದ್ದಿದ್ದರೂ ಖಂಡಿತ ಈಗಿನ ಚುನಾವಣಾ ರಾಜಕೀಯಕ್ಕೆ ಪ್ರವೇಶ ಮಾಡುತ್ತಿರಲಿಲ್ಲ. ಹಾಗೆಯೇ ಅವರು ಸಾರ್ವಜನಿಕ ಜೀವನವನ್ನು ತ್ಯಜಿಸಿ ಓಡಿಹೋಗುತ್ತಲೂ ಇರಲಿಲ್ಲ.
ಇದು ನಾವೆಲ್ಲ ಅರ್ಥಮಾಡಿಕೊಳ್ಳಬೇಕಾದ ಪೂರ್ಣ ಸತ್ಯ. ಇಡೀ ದೇಶ ಸ್ವಾತಂತ್ರ್ಯ ಪಡೆದ ಸಂಭ್ರಮದಲ್ಲಿದ್ದಾಗ ಮತ್ತು ತಮ್ಮ ಅನುಯಾಯಿಗಳೆಲ್ಲ ಅಧಿಕಾರದ ಕುರ್ಚಿ ಹಿಡಿಯುವ ತರಾತುರಿಯಲ್ಲಿದ್ದಾಗ ಗಾಂಧೀಜಿಯವರು ನೌಕಾಲಿಯಲ್ಲಿ ಭುಗಿಲೆದ್ದಿದ್ದ ಕೋಮುದ್ವೇಷದ ಬೆಂಕಿಯನ್ನು ಶಮನಮಾಡಲು ಏಕಾಂಗಿಯಾಗಿ ಹೆಣಗಾಡುತ್ತಿದ್ದರು. ಆಗ ದೆಹಲಿಯಲ್ಲಿದ್ದ ಗಾಂಧಿ ಅನುಯಾಯಿಗಳ ಪಾಲಿಗೆ ಸರ್ಕಾರ ರಚನೆಯೇ ರಾಜಕೀಯ ಆಗಿದ್ದರೆ, ಗಾಂಧೀಜಿ ಅವರಿಗೆ ಒಡೆದ ಮನಸ್ಸುಗಳನ್ನು ಒಗ್ಗೂಡಿಸಿ ಕೋಮುಸೌಹಾರ್ದತೆಯನ್ನು ಸ್ಥಾಪಿಸುವುದು ರಾಜಕೀಯ ಆಗಿತ್ತು. ಗಾಂಧೀಜಿ ಈಗ ಬದುಕಿದ್ದರೂ ಅವರು ಸಂಸತ್ನೊಳಗೆ ಪ್ರವೇಶಿಸಿ ರಾಜಕೀಯ ಮಾಡುತ್ತಿರಲಿಲ್ಲ, ಅಲ್ಲಿಗೆ ಸಮೀಪದಲ್ಲಿಯೇ ಇರುವ ಜಂತರ್ಮಂತರ್ನ ಸತ್ಯಾಗ್ರಹದ ಶಿಬಿರದಲ್ಲಿ ಕುಳಿತು ರಾಜಕೀಯ ಮಾಡುತ್ತಿದ್ದರು.
ಸಾರ್ವಜನಿಕ ಜೀವನ, ಚುನಾವಣಾ ರಾಜಕೀಯ, ಹೋರಾಟದ ರಾಜಕೀಯ, ಚಳುವಳಿ, ಸತ್ಯಾಗ್ರಹಗಳೆಲ್ಲವನ್ನೂ ಒಂದೇ ಬಗೆಯ ‘ರಾಜಕೀಯ’ ಎಂದು ತಿಳಿದುಕೊಂಡಿರುವುದೇ ಕುಮಾರಸ್ವಾಮಿ ಮತ್ತು ಅವರಂತಹವರ ಗೊಂದಲಕಾರಿ ಹೇಳಿಕೆಗಳಿಗೆ ಕಾರಣ. ಅವರು ಮಾತ್ರವಲ್ಲ ಲಾಲ್ಕೃಷ್ಣ ಅಡ್ವಾಣಿಯವರಂತಹ ಅನುಭವಿ ರಾಜಕಾರಣಿ ಕೂಡಾ ಹಜಾರೆ ಅವರ ಚಳುವಳಿ ರಾಜಕೀಯದ ಬಗ್ಗೆ ದ್ವೇಷ-ಸಿನಿಕತನ ಹುಟ್ಟಿಸುತ್ತಿದೆಯೇನೋ ಎಂದು ಆತಂಕ ವ್ಯಕ್ತಪಡಿಸುವಷ್ಟು ಮಟ್ಟಿಗೆ ಗೊಂದಲಕ್ಕೆಡಾಗಿದ್ದಾರೆ. ಇದರ ಜತೆಗೆ ಅಣ್ಣಾ ಹಜಾರೆ ಅವರು ರಾಜಕೀಯ ಪ್ರವೇಶ ಮಾಡಬಾರದೆಂದು ಹೇಳುವುದು ಎಷ್ಟು ಸರಿ?
ಹಾಗಿದ್ದರೆ ಪ್ರಾಮಾಣಿಕರೆಲ್ಲರೂ ರಾಜಕೀಯವನ್ನು ಭ್ರಷ್ಟರಿಗೆ ಬಿಟ್ಟುಕೊಟ್ಟು ಮೂಕಪ್ರೇಕ್ಷಕರಾಗಬೇಕೇ? ಪ್ರಜಾಪ್ರಭುತ್ವದಲ್ಲಿ ರಾಜಕೀಯ ಚಟುವಟಿಕೆಯ ಮೂಲಕವೇ ಬದಲಾವಣೆ ತರಬೇಕಲ್ಲವೇ? ಎಂಬೀತ್ಯಾದಿ ಪ್ರಶ್ನೆಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಇವು ರಾಜಕೀಯವನ್ನು ತೀರಾ ಸರಳೀಕರಿಸಿ ನೋಡುವ ಮುಗ್ಧಪ್ರಶ್ನೆಗಳು ಎಂದು ತಳ್ಳಿಹಾಕಬಹುದು. ಆದರೆ ಈ ರೀತಿ ಪ್ರಶ್ನಿಸುತ್ತಿರುವವರಲ್ಲಿ ಹೆಚ್ಚಿನವರು ಯುವಕರು, ಭ್ರಷ್ಟಾಚಾರವನ್ನು ಹೊಡೆದೋಡಿಸಬೇಕು ಎಂಬ ರೋಷದ ಜತೆಯಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ರಾಜಕೀಯ ಬದಲಾವಣೆ ಮಾಡಬೇಕೆಂಬ ಹಂಬಲ ಉಳ್ಳ ಅಮಾಯಕರು. ಆದ್ದರಿಂದಲೇ ಈ ಪ್ರತಿಕ್ರಿಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಈ ಗೊಂದಲಗಳಿಗೆ ಮೂಲ ಕಾರಣ ಏನೆಂದರೆ ರಾಜಕೀಯ ಎಂದಾಕ್ಷಣ ನಮ್ಮ ಕಣ್ಣೆದುರು ಮೂಡುವ ಶಾಸಕರು,ಸಂಸದರು, ಸ್ಥಳೀಯ ಸಂಸ್ಥೆಗಳ ಸದಸ್ಯರು ಇಲ್ಲವೇ ರಾಜಕೀಯ ಪಕ್ಷಗಳ ಕಾರ್ಯಕರ್ತರ ಚಿತ್ರಗಳು. ರಾಜಕೀಯ ಎಂದಾಕ್ಷಣ ಯಾರ ಕಣ್ಣಮುಂದೆಯೂ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮಗಾಂಧೀಜಿ ಇಲ್ಲವೇ ಆ ಸ್ವಾತಂತ್ರ್ಯ ಗಂಡಾಂತರ ಸ್ಥಿತಿಯಲ್ಲಿದ್ದಾಗ ಅದನ್ನು ರಕ್ಷಿಸಿಕೊಟ್ಟ ಜಯಪ್ರಕಾಶ್ ನಾರಾಯಣ್ ಚಿತ್ರಗಳು ಕಣ್ಣಮುಂದೆ ಮೂಡುವುದಿಲ್ಲ. ಆದರೆ ಈ ಇಬ್ಬರೂ ನಾಯಕರು ದೇಶ ಕಂಡ ಅತ್ಯಂತ ಬುದ್ದಿವಂತ ಮತ್ತು ಯಶಸ್ವಿ ರಾಜಕಾರಣಿಗಳು ಎನ್ನುವುದನ್ನು ಮರೆಯಬಾರದು.
ಗಾಂಧೀಜಿ ರಾಜಕೀಯ ಮಾಡಿರಲಿಲ್ಲವೇ? ಸ್ವಾತಂತ್ರ್ಯಹೋರಾಟ ಎನ್ನುವುದು ರಾಜಕೀಯ ಚಟುವಟಿಕೆಯಲ್ಲದೆ ಮತ್ತೇನು? ಆದರೆ ಅವರು ಚುನಾವಣಾ ರಾಜಕೀಯದಲ್ಲಿ ತೊಡಗಿಸಿಕೊಂಡಿರಲಿಲ್ಲ. ಬಯಸಿದ್ದರೆ ದೇಶದ ಪ್ರಧಾನಿಯಾಗಲು ಗಾಂಧೀಜಿಯವರಿಗೇನು ಸಾಧ್ಯ ಇರಲಿಲ್ಲವೇ? ಗಾಂಧೀಜಿಯವರಿಗೆ ಚುನಾವಣಾ ರಾಜಕೀಯದ ಶಕ್ತಿ-ದೌರ್ಬಲ್ಯಗಳು ಮಾತ್ರವಲ್ಲ ಅದರ ಇತಿಮಿತಿಯೂ ತಿಳಿದಿತ್ತು. ಆದ್ದರಿಂದಲೇ ಅವರು ಅದರಿಂದ ದೂರ ಇದ್ದರು ಮತ್ತು ಜನರಿಗೆ ಹತ್ತಿರವಾಗಿದ್ದರು. ಅಣ್ಣಾ ಹಜಾರೆಯವರು ಮಾಡಬಹುದಾದ ರಾಜಕೀಯ ಇದು.
ಜಯಪ್ರಕಾಶ್ ನಾರಾಯಣ್ ಕೂಡಾ ಗಾಂಧೀಜಿ ಮಾದರಿಯ ರಾಜಕೀಯವನ್ನೇ ನಡೆಸಿದವರು. ಸ್ವತಂತ್ರಭಾರತದಲ್ಲಿ ಗಾಂಧೀಜಿಯವರ ನಿಜವಾದ ಉತ್ತರಾಧಿಕಾರಿಯಂತೆ ನಡೆದುಕೊಂಡವರು ಜೆಪಿ. ಗಾಂಧೀಜಿಯವರಿಗೆ ನೆಹರೂ ಬಗೆಗಿನ ದೌರ್ಬಲ್ಯ ಇಲ್ಲದೆ ಹೋಗಿದ್ದರೆ ರಾಮಮನೋಹರ ಲೋಹಿಯಾ ಇಲ್ಲವೇ ಜಯಪ್ರಕಾಶ್ ನಾರಾಯಣ್ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡುತ್ತಿದ್ದರೋ ಏನೋ? ಗಾಂಧೀಜಿಯವರಂತೆ ಜೆಪಿಯವರೂ ಮನಸ್ಸು ಮಾಡಿದ್ದರೆ ದೇಶದ ಪ್ರಧಾನಿಯಾಗಬಹುದಿತ್ತು. ಎರಡು ಬಾರಿ ಅಂತಹ ಅವಕಾಶ ಒದಗಿಬಂದಿತ್ತು.
ಮೊದಲನೆಯ ಬಾರಿ ಗಾಂಧೀಜಿಯವರೇ ಈ ಆಹ್ಹಾನ ನೀಡಿದ್ದರು. ಇನ್ನೇನು ಸ್ವಾತಂತ್ರ್ಯ ಘೋಷಣೆಯಾಗಲಿದೆ ಎನ್ನುವಾಗ ಗಾಂಧಿ ಅನುಯಾಯಿಗಳೆಲ್ಲ ಸಂಪುಟ ಸೇರುವ ಹುರುಪಲಿದ್ದರು. ಆಗ ಗಾಂಧೀಜಿ ಜೆಪಿಯವರನ್ನು ಕರೆದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವಂತೆ ಸಲಹೆ ನೀಡಿದ್ದರು. ಇದಕ್ಕೆ ನೆಹರೂ ಮತ್ತು ಸಂಗಡಿಗರ ವಿರೋಧ ಇದ್ದರೂ ಜೆಪಿ ಒಪ್ಪಿಕೊಂಡಿದ್ದರೆ ದೇಶದ ಇತಿಹಾಸವೇ ಬೇರೆ ದಾರಿ ಹಿಡಿಯುತ್ತಿತ್ತು. ನೆಹರೂ ನಂತರವಾದರೂ ಅವರು ಪ್ರಧಾನಿಯಾಗುತ್ತಿದ್ದರು.
ಆ ಅವಕಾಶ ಮತ್ತೆ 1964ರಲ್ಲಿ ಜೆಪಿ ಮನೆಬಾಗಿಲು ಬಡಿದಿತ್ತು. ಅಸ್ವಸ್ಥರಾಗಿದ್ದ ನೆಹರೂ ಅವರ ಅಂತ್ಯ ಸಮೀಪಿಸುತ್ತಿದೆ ಎಂದು ಅನಿಸಿದಾಗ ಕೇಂದ್ರ ಸಂಪುಟದಲ್ಲಿ ಹಿರಿಯಸಚಿವರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಖುದ್ದಾಗಿ ಜೆಪಿಯವರನ್ನು ಭೇಟಿ ಮಾಡಿ ನೆಹರೂ ನಂತರ ಪ್ರಧಾನಿಯಾಗುವಂತೆ ಕೋರಿಕೊಂಡಿದ್ದರು. ಗಾಂಧೀಜಿ ಹತ್ಯೆಯಾದ ಎರಡೇ ತಿಂಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ್ದ ಜೆಪಿಯವರು ಶಾಸ್ತ್ರಿಯವರ ಆಹ್ಹಾನವನ್ನು ಒಪ್ಪಿಕೊಳ್ಳಲಿಲ್ಲ.
ಆಗಲೇ ಅವರು ಪಕ್ಷರಾಜಕೀಯವನ್ನು ತ್ಯಜಿಸಿ ವಿನೋಬಾ ಭಾವೆ ಅವರ ಭೂದಾನ ಚಳುವಳಿಯಲ್ಲಿ ಸಕ್ರಿಯರಾಗಿದ್ದರು. ಆದರೆ ಇಳಿವಯಸ್ಸಿನಲ್ಲಿ ತಮ್ಮ ಅನಾರೋಗ್ಯದ ಹೊರತಾಗಿಯೂ ಮತ್ತೆ ಅವರು ಹೋರಾಟದ ರಾಜಕೀಯಕ್ಕೆ ಧುಮುಕಿದರು. ಚುನಾವಣಾ ರಾಜಕಾರಣದಿಂದ ಕೊನೆಯವರೆಗೆ ಅವರು ದೂರವೇ ಉಳಿದರು.
ಅಣ್ಣಾ ಹಜಾರೆ ಅವರು ಇನ್ನೊಬ್ಬ ಗಾಂಧಿ ಆಗಬೇಕು, ಮತ್ತೊಬ್ಬ ಜೆಪಿ ಆಗಬೇಕು ಎಂದು ಆಶಿಸುವುದು ಸುಲಭ. ಆದರೆ ಈಗಿನ ರಾಜಕೀಯದಲ್ಲಿ ಭ್ರಷ್ಟರೇ ಬಹುಸಂಖ್ಯೆಯಲ್ಲಿರುವಾಗ ಪರ್ಯಾಯ ರಾಜಕೀಯ ಶಕ್ತಿಯನ್ನು ಕಟ್ಟುವುದು ಅಷ್ಟು ಸುಲಭ ಅಲ್ಲ. ಅಂತಹದ್ದೊಂದು ದೊಡ್ಡ ರಾಜಕೀಯ ಚಳುವಳಿಗೆ ಹೆಗಲು ಕೊಡುವ ನಾಯಕರು ಮತ್ತು ಕಾರ್ಯಕರ್ತರು ಎಷ್ಟು ಮಂದಿ ನಮ್ಮ ನಡುವೆ ಇದ್ದಾರೆ? ರಾಜಕಾರಣಿಗಳೆಂದರೆ ಭ್ರಷ್ಟರು ಎಂದಾಗಿರುವ ಕಾರಣದಿಂದಾಗಿಯೇ ಅಣ್ಣಾ ಹಜಾರೆ ಚಳುವಳಿ ರಾಜಕಾರಣಿಗಳ ವಿರುದ್ಧವೇ ನಡೆಯುತ್ತಿದೆ ಎಂಬ ಆತಂಕ ಅಡ್ವಾಣಿಯವರಲ್ಲಿ ಹುಟ್ಟಿರುವುದು.
ಇದಕ್ಕೆ ಕಾರಣ ಎಲ್ಲ ಪಕ್ಷಗಳಲ್ಲಿ ಬಹುಸಂಖ್ಯೆಯಲ್ಲಿ ಭ್ರಷ್ಟರು ತುಂಬಿರುವುದು. ಜೆಪಿಯವರು ‘ಸಂಪೂರ್ಣಕ್ರಾಂತಿ’ ಚಳುವಳಿ ಪ್ರಾರಂಭಿಸಿದಾಗ ಅವರಿಗೆ ಈ ಸಮಸ್ಯೆ ಇರಲಿಲ್ಲ. ಆಗಿನ ವಿರೋಧಪಕ್ಷಗಳಲ್ಲಿ ವಾಜಪೇಯಿ, ಅಡ್ವಾಣಿ, ಜಾರ್ಜ್ ಫರ್ನಾಂಡಿಸ್, ಮಧು ದಂಡವತೆ, ಮಧುಲಿಮಯೆ, ಮುಲಾಯಂಸಿಂಗ್ಯಾದವ್, ಲಾಲುಪ್ರಸಾದ್,ನಾನಾಜಿ ದೇಶಮುಖ್ ಮೊದಲಾದ ನಾಯಕರಿದ್ದರು. ಇವರ್ಯಾರೂ ಆಗ ಅಧಿಕಾರ ರಾಜಕಾರಣದ ಕೆಸರಿಗೆ ಕಾಲಿಟ್ಟಿರಲಿಲ್ಲ. ಎಡಪಕ್ಷಗಳ ನಾಯಕರನ್ನು ಹೊರತುಪಡಿಸಿ ಉಳಿದ ಯಾವ ವಿರೋಧಪಕ್ಷಗಳಲ್ಲಿ ಅಣ್ಣಾಹಜಾರೆ ಪಕ್ಕದಲ್ಲಿ ಕೂರುವ ಯೋಗ್ಯತೆ ಇರುವ ಎಷ್ಟು ಮಂದಿ ನಾಯಕರು ಈಗ ಇದ್ದಾರೆ?
ನಾಯಕರನ್ನು ಪಕ್ಕಕ್ಕೆ ಇಟ್ಟುಬಿಡಿ, ಹೋರಾಟದ ಸಾಗರಕ್ಕೆ ಧುಮುಕಲು ಸಿದ್ದ ಇರುವ ಕಾರ್ಯಕರ್ತರು ಎಷ್ಟು ಮಂದಿ ಇದ್ದಾರೆ. ನಾಳೆ ಅಣ್ಣಾ ಹಜಾರೆ ದೇಶವ್ಯಾಪಿ ಚಳುವಳಿಗೆ ಕರೆಗೊಟ್ಟರೆ ಎಲ್ಲವನ್ನೂ ತ್ಯಾಗಮಾಡಿ ಅದರಲ್ಲಿ ಪಾಲ್ಗೊಳ್ಳಲು ಎಷ್ಟುಮಂದಿ ಕಾರ್ಯಕರ್ತರು ಮುಂದೆಬರಬಹುದು? ಜೆಪಿ ಚಳುವಳಿ ಪ್ರಾರಂಭವಾಗಿದ್ದೇ ವಿದ್ಯಾರ್ಥಿ ಚಳುವಳಿಯಿಂದ ಎಂಬುದನ್ನು ಮರೆಯಬಾರದು.
ಅಹ್ಮದಾಬಾದ್ ಮತ್ತು ಮೋರ್ವಿಯಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್ನ ಊಟ-ತಿಂಡಿಯ ದರ ಏರಿಕೆ ವಿರುದ್ಧ ಚಳುವಳಿ ಪ್ರಾರಂಭಿಸಿದಾಗ ಅಲ್ಲಿ ಜೆಪಿ ಇರಲಿಲ್ಲ. ಅದರಿಂದ ಪ್ರೇರಣೆ ಪಡೆದು ಬಿಹಾರದ ವಿದ್ಯಾರ್ಥಿಗಳು ಚಳುವಳಿ ಪ್ರಾರಂಭಿಸಿದ್ದರು. ಆಗಲೂ ಜೆಪಿ ಅದರಲ್ಲಿ ನೇರವಾಗಿ ಭಾಗಿಯಾಗಿರಲಿಲ್ಲ. ಕೊನೆಗೆ ವಿದ್ಯಾರ್ಥಿಗಳು ತಮ್ಮ ನಾಯಕತ್ವ ವಹಿಸಬೇಕೆಂದು ಕೇಳಿಕೊಂಡಾಗ ಜೆಪಿ ‘ನಿಮ್ಮಲ್ಲಿ ಎಷ್ಟುಮಂದಿ ಕನಿಷ್ಠ ಒಂದುವರ್ಷದ ಮಟ್ಟಿಗೆ ಶಾಲೆ-ಕಾಲೇಜು ತೊರೆದು ಚಳುವಳಿಯಲ್ಲಿ ಭಾಗವಹಿಸಲು ಸಿದ್ಧ ಇದ್ದೀರಿ?’ ಎಂದು ಕೇಳಿದ್ದರು.
ವಿದ್ಯಾರ್ಥಿಗಳು ಭರವಸೆ ನೀಡಿದ ನಂತರವೇ ಜೆಪಿ ಸಕ್ರಿಯವಾಗಿ ಚಳುವಳಿನಿರತ ವಿದ್ಯಾರ್ಥಿಗಳ ಜತೆ ಸೇರಿಕೊಂಡದ್ದು.
ಅಣ್ಣಾಹಜಾರೆ ಅವರು ಮೊನ್ನೆಯ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ದೆಹಲಿಯಲ್ಲಿ ಮಾತ್ರವಲ್ಲ ಬಹುತೇಕ ನಗರ-ಪಟ್ಟಣಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಯುವಜನರು ಬೀದಿಗಿಳಿದಿದ್ದರು. ಆದರೆ ಅವರಿಗೆ ಅಣ್ಣಾ ಹಜಾರೆ ಅವರು ಅಂದು ಜೆಪಿ ಕೇಳಿದ್ದ ಪ್ರಶ್ನೆಯನ್ನೇ ಕೇಳಿದರೆ ಎಷ್ಟು ಮಂದಿ ಒಪ್ಪಿಕೊಳ್ಳಲು ಸಿದ್ದ ಇರಬಹುದು?
ಇಮೇಲ್, ಎಸ್ಎಂಎಸ್, ಟ್ವಿಟರ್ಗಳ ಮೂಲಕ ಕ್ರಾಂತಿ ಮಾಡಲು ಹೊರಟವರಲ್ಲಿ ಎಷ್ಟುಮಂದಿ ಆರು ತಿಂಗಳು ಕೆಲಸಕ್ಕೆ ರಜೆಹಾಕಿ ಅಣ್ಣಾಹಜಾರೆ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು? ಫ್ರೀಡಮ್ಪಾರ್ಕ್ನಲ್ಲಿ ಘೋಷಣೆ ಕೂಗುತ್ತಿದ್ದ ವಿದ್ಯಾರ್ಥಿಗಳು ಆಗಲೇ ಸಿಇಟಿ ಪರೀಕ್ಷೆಯ ತಲೆಬಿಸಿಯಲ್ಲಿದ್ದಾರೆ. ಇಮೇಲ್,ಎಸ್ಎಂಎಸ್, ಟ್ವಿಟರ್ಗಳು ಆಗಲೇ ನಿಂತುಬಿಟ್ಟಿವೆ. ಜೆಪಿ ಚಳುವಳಿಗೆ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರ ಬಲ ತಂದುಕೊಟಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿಯಾದರೂ ಪ್ರಾಮಾಣಿಕರು ಉಳಿದುಕೊಂಡಿದ್ದಾರೆಯೇ? ಉಳಿದುಕೊಂಡಿದ್ದರೆ ಕನಿಷ್ಠ ಕರ್ನಾಟಕದಲ್ಲಿಯಾದರೂ ಅವರು ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ವಿರೋಧಿಸಿ ಬೀದಿಗಿಳಿಯಬೇಕಿತ್ತಲ್ಲಾ? ಇದು ಇಂದಿನ ವಾಸ್ತವ.
ಪ್ರಾಮಾಣಿಕತೆಯೊಂದರಿಂದಲೇ ರಾಜಕೀಯದಲ್ಲಿ ಎಲ್ಲವನ್ನೂ ಸಾಧಿಸಲು ಆಗುವುದಿಲ್ಲ. ಅದು ಸಾಧ್ಯವಾಗುವುದಿದ್ದರೆ ಪ್ರಧಾನಿಯಾಗಿ ಮನಮೋಹನ್ಸಿಂಗ್ ಯಶಸ್ವಿಯಾಗಬೇಕಿತ್ತು. ಅಣ್ಣಾಹಜಾರೆ ಅವರು ಎಲ್ಲಾ ಬಗೆಯ ರಾಜಕೀಯದಿಂದ ದೂರ ಇದ್ದು ಪ್ರಾಮಾಣಿಕತೆಯನ್ನು ಉಳಿಸಿಕೊಂಡವರು. ಆದರೆ ಮನಮೋಹನ್ಸಿಂಗ್ ಅಧಿಕಾರ ಕೇಂದ್ರಿತ ರಾಜಕೀಯದಲ್ಲಿ ತೊಡಗಿಸಿಕೊಂಡೂ ವೈಯಕ್ತಿಕ ಮಟ್ಟದಲ್ಲಿ ಪ್ರಾಮಾಣಿಕತೆಯನ್ನು ಉಳಿಸಿಕೊಂಡವರು. ಇದೇನು ಕಡಿಮೆ ಸಾಧನೆಯಲ್ಲ. ಹೀಗಿದ್ದರೂ ಪ್ರಾಮಾಣಿಕ ಮನಮೋಹನ್ಸಿಂಗ್ ಅವರಿಗೆ ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ನೀಡಲು ಆಗಲಿಲ್ಲ. ಆದ್ದರಿಂದ ಕೇವಲ ಅಣ್ಣಾ ಹಜಾರೆ ಮತ್ತು ಅವರ ಬೆರಳೆಣಿಕೆಯ ಬೆಂಬಲಿಗರಿಂದ ಭ್ರಷ್ಟಾಚಾರದ ಮೂಲೋತ್ಪಾಟನೆಯಾಗಲಿ, ರಾಜಕೀಯ ಬದಲಾವಣೆಯಾಗಲಿ ಸಾಧ್ಯವಾಗಲಾರದು.
ಇದು ಸಾಧ್ಯವಾಗಬೇಕಾದರೆ ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಉಳಿದುಕೊಂಡಿರುವ ಸಜ್ಜನರು ತಮ್ಮ ಪಕ್ಷಗಳನ್ನು ತೊರೆದು ಹೊರಬಂದು ಅಣ್ಣಾಹಜಾರೆ ಮಾರ್ಗದರ್ಶನದಲ್ಲಿ ಪರ್ಯಾಯ ರಾಜಕೀಯ ಶಕ್ತಿಯನ್ನು ಕಟ್ಟಲು ಕೈಜೋಡಿಸಬೇಕಾಗುತ್ತದೆ. ಇದು ಹೇಗೆ ಎನ್ನುವುದಕ್ಕೆ 1977 ಮತ್ತು 1989ರ ರಾಜಕೀಯ ಬದಲಾವಣೆಯ ಮಾದರಿಗಳು ನಮ್ಮ ಮುಂದಿವೆ.ಆಗ ಆಡಳಿತ ಪಕ್ಷ ಮಾತ್ರ ಭ್ರಷ್ಟವಾಗಿತ್ತು, ಈಗ ವಿರೋಧಪಕ್ಷಗಳೂ ಭ್ರಷ್ಟಗೊಂಡಿರುವುದರಿಂದ ಅಲ್ಲಿಯೂ ಒಡೆಯುವ ಕೆಲಸ ನಡೆಯಬೇಕಾಗುತ್ತದೆ. ಮೊದಲು ಅಣ್ಣಾ ಹಜಾರೆ ಚಳುವಳಿಯನ್ನು ಬೆಂಬಲಿಸುತ್ತಿರುವ ಪ್ರಮುಖ ವಿರೋಧಪಕ್ಷವಾದ ಬಿಜೆಪಿಯಿಂದಲೇ ಇದು ಪ್ರಾರಂಭವಾಗಲಿ.