ಅಣ್ಣಾ ಹಜಾರೆ ಅವರು ನುಂಗಲಾರದಷ್ಟನ್ನು ಬಾಯಲ್ಲಿ ಹಾಕಿಕೊಂಡುಬಿಟ್ಟಿದ್ದಾರೆ.ಉಗಿಯುವಂತಿಲ್ಲ, ನುಂಗುವಂತಿಲ್ಲ. ಈ ಸಂಕಟದಿಂದ ಪಾರಾಗಬೇಕಾದರೆ ಅವರು ಯಾವುದಾದರೂ ಒಂದು ನಿರ್ಧಾರ ತೆಗೆದುಕೊಳ್ಳಲೇಬೇಕಾಗಿದೆ.
ನಾಗರಿಕ ಸಮಿತಿ ರಚಿಸಿರುವ ಜನಲೋಕಪಾಲ ಮಸೂದೆಯಲ್ಲಿನ ಎಲ್ಲ ಅಂಶಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಈಗ ಸ್ಪಷ್ಟವಾಗಿದೆ.
ಆದ್ದರಿಂದ ನುಡಿದಂತೆಯೇ ನಡೆಯಬೇಕೆಂದು ಹೊರಟರೆ ಆಗಸ್ಟ್ ಹದಿನಾರರಿಂದ ಅಣ್ಣಾ ಹಜಾರೆ ಅವರು ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದು ಅನಿವಾರ್ಯವಾಗಬಹುದು.
ಉಳಿದಿರುವ ಇನ್ನೊಂದು ಆಯ್ಕೆ ಉಪವಾಸ ಸತ್ಯಾಗ್ರಹ ಕೈಬಿಟ್ಟು ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಬಗ್ಗೆ ಜನಜಾಗೃತಿಗೆ ಹೊರಡುತ್ತೇನೆ ಎಂದು ಘೋಷಿಸಿ ಯುದ್ದಭೂಮಿಯಿಂದ ಗೌರವಪೂರ್ವಕವಾಗಿ ನಿರ್ಗಮಿಸುವುದು.
ಸರ್ಕಾರದ ಮುಂದೆ ಕೂಡಾ ಇರುವುದು ಎರಡೇ ಆಯ್ಕೆ. ಒಂದೋ ನಾಗರಿಕ ಸಮಿತಿ ಹೇಳಿರುವುದನ್ನೆಲ್ಲ ಬಾಯಿಮುಚ್ಚಿಕೊಂಡು ಒಪ್ಪಿಕೊಳ್ಳುವುದು, ಇಲ್ಲವೇ ಮಾತುಕತೆಯ ಮಾರ್ಗವನ್ನು ಕೈಬಿಟ್ಟು ನೇರವಾಗಿ ಸಂಘರ್ಷಕ್ಕಿಳಿಯುವುದು. ಅಣ್ಣಾ ಹಜಾರೆ ಅವರಿಗೆ ಇರುವಷ್ಟು ಗೊಂದಲ ಸರ್ಕಾರಕ್ಕೆ ಇದ್ದ ಹಾಗಿಲ್ಲ.
ಅದು ಎರಡನೇ ಆಯ್ಕೆಗೆ ಸಿದ್ದತೆ ನಡೆಸಿದಂತಿದೆ. ಕಾಂಗ್ರೆಸ್ ಪಕ್ಷದ ಪ್ರಮುಖ ಕೂಗುಮಾರಿಯಾಗಿರುವ ದಿಗ್ವಿಜಯ್ಸಿಂಗ್ ಸಹೋದ್ಯೋಗಿಗಳ ಜತೆಗೂಡಿ ಆಗಲೇ ಈ ಕೆಲಸ ಪ್ರಾರಂಭಿಸಿದ್ದಾರೆ.
ಅಣ್ಣಾ ಹಜಾರೆ ಅವರ ಹಠಮಾರಿತನ ಮತ್ತು ಅವರ ಸಂಗಡಿಗರ ಬಾಯಿಬಡುಕತನ ಅತಿಯಾಯಿತು ಎನ್ನುವ ಜನರ ಗೊಣಗಾಟವನ್ನು ಕೂಡಾ ಕಾಂಗ್ರೆಸ್ ನಾಯಕರು ಅಪಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳಿಂದಾಗಿ ಭ್ರಷ್ಟ ವ್ಯವಸ್ಥೆಯಿಂದ ರೋಸಿಹೋಗಿರುವ ಅಸಹಾಯಕ ಜನರನ್ನು ಪಾರುಮಾಡಲು ಅವತಾರ ಎತ್ತಿ ಬಂದವರಂತೆ ಕಾಣಿಸಿಕೊಂಡ ಅಣ್ಣಾ ಹಜಾರೆ ಅವರು ಬಹುಬೇಗ ನೇಪಥ್ಯಕ್ಕೆ ಸರಿದು ಹೋಗುತ್ತಿದ್ದಾರೆಯೇ? ಇಂತಹ ಅನುಮಾನ ಅವರ ಅಭಿಮಾನಿಗಳನ್ನೂ ಕಾಡತೊಡಗಿದೆ.
ಒಂದೊಮ್ಮೆ ಅಣ್ಣಾ ಹಜಾರೆ `ಉಪವಾಸ ಸತ್ಯಾಗ್ರಹ ಪ್ರಾರಂಭಿಸಿಯೇ ತೀರುತ್ತೇನೆ~ ಎಂದು ಹೊರಟರೆ ಏನಾಗಬಹುದು? ಮೊದಲು ಕೇಂದ್ರ ಸರ್ಕಾರ ಅದನ್ನು ತಡೆಯಲು ಹತ್ತಾರು ಅಡ್ಡಿ-ಆತಂಕಗಳನ್ನು ಒಡ್ಡಬಹುದು (ಅನುಮತಿ ನಿರಾಕರಣೆ, ಇನ್ನಷ್ಟು ಆರೋಪಗಳ ಸುರಿಮಳೆ..ಇತ್ಯಾದಿ).
ಅವೆಲ್ಲವನ್ನೂ ಮೀರಿ ಉಪವಾಸ ಪ್ರಾರಂಭಿಸಿದರೆ ಒಂದೆರಡು ದಿನಗಳಲ್ಲಿಯೇ ಸರ್ಕಾರ ಅವರನ್ನು ಬಲಾತ್ಕಾರವಾಗಿ ಎಬ್ಬಿಸಿ ಆಸ್ಪತ್ರೆಗೆ ಸೇರಿಸಬಹುದು.
ಕಳೆದ ಬಾರಿಯ ಉಪವಾಸದ ನಂತರ ಅವರ ತಪಾಸಣೆ ನಡೆಸಿದ್ದ ವೈದ್ಯರು ಮತ್ತೆ ಉಪವಾಸ ನಡೆಸುವುದು ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು ಎಂದು ಹೇಳಿರುವುದನ್ನೇ ಸರ್ಕಾರ ತನ್ನ ಸಮರ್ಥನೆಗೆ ಬಳಸಬಹುದು.
ಈ ರೀತಿ ಅಣ್ಣಾ ಹಜಾರೆ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದರೆ ಈ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವವರು ಯಾರು? ಶಾಂತಿಭೂಷಣ್? ಪ್ರಶಾಂತ್ ಭೂಷಣ್? ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ? ಕಿರಣ್ ಬೇಡಿ? ಸ್ವಾಮಿ ಅಗ್ನಿವೇಶ್ ಅವರು ಈಗಾಗಲೇ ಮೆತ್ತಗೆ ದೂರ ಸರಿಯುತ್ತಿರುವುದರಿಂದ ಅವರ ಹೆಸರೂ ಹೇಳುವಂತಿಲ್ಲ.
ಬೇರೆ ಯಾರು? ಈಜಿಪ್ಟ್, ಟ್ಯುನೇಷಿಯಾದಂತೆ ಜನ ದಂಗೆ ಎದ್ದು ಬೀದಿಬೀದಿಗಳಲ್ಲಿ ಸೇರಲಿದ್ದಾರೆ ಎಂದೇನಾದರೂ ಅಣ್ಣಾ ಹಜಾರೆ ಮತ್ತು ಸಂಗಡಿಗರು ತಿಳಿದುಕೊಂಡಿದ್ದಾರೆಯೇ?
ಬದ್ಧತೆ ಮತ್ತು ಪ್ರಾಮಾಣಿಕತೆ ಎರಡರ ದೃಷ್ಟಿಯಿಂದಲೂ ಅಣ್ಣಾ ಹಜಾರೆ ಅವರನ್ನು ಬಾಬಾ ರಾಮ್ದೇವ್ ಜತೆ ಹೋಲಿಸುವುದು ಸಾಧ್ಯ ಇಲ್ಲ ಎನ್ನುವುದು ನಿಜ.
ಆದರೆ ಸಂಘಟನೆಯ ದೃಷ್ಟಿಯಿಂದ ಅಣ್ಣಾ ಹಜಾರೆ ಅವರಿಗಿಂತ ಬಾಬಾ ರಾಮ್ದೇವ್ ಎಷ್ಟೋ ಪಾಲು ಹೆಚ್ಚು ಬಲಶಾಲಿಯಾಗಿದ್ದರು. ದೇಶದಾದ್ಯಂತ ಪತಂಜಲಿ ಯೋಗಪೀಠದ ನೂರಾರು ಶಾಖೆಗಳಿವೆ.
ಯೋಗ ಶಿಬಿರಗಳು ಮತ್ತು ಟಿವಿ ಚಾನೆಲ್ ಮೂಲಕ ಕೋಟ್ಯಂತರ ಜನರ ಜತೆ ಅವರು ಸಂಪರ್ಕ ಸಾಧಿಸಿದ್ದಾರೆ. ಲಕ್ಷಾಂತರ ಮಂದಿ ಅವರ ಯೋಗ ಚಿಕಿತ್ಸೆಯ ಫಲಾನುಭವಿಗಳೂ ಆಗಿದ್ದಾರೆ.
ಇಷ್ಟಾಗಿಯೂ ಸರ್ಕಾರ ಅಮಾನುಷ ರೀತಿಯಲ್ಲಿ ಅವರ ಮೇಲೆ ಎರಗಿಬಿದ್ದಾಗ ಟಿವಿ ಕ್ಯಾಮೆರಾಗಳ ಮುಂದೆ ಒಂದಷ್ಟು ಮಹಿಳೆಯರು ಕಣ್ಣೀರು ಸುರಿಸಿದ್ದನ್ನು ಹೊರತುಪಡಿಸಿದರೆ ಬೇರೆ ಯಾವ ಅನಾಹುತವೂ ಆಗಲಿಲ್ಲ. ನಾಳೆ ಅಣ್ಣಾ ಹಜಾರೆ ಅವರನ್ನು ಬಂಧಿಸಿದರೆ ದೇಶದ ಜನ ಸಿಡಿದೆದ್ದು ಬೀದಿಗೆ ಇಳಿಯಬಹುದೇ?
ಅಣ್ಣಾ ಹಜಾರೆ ಅವರು ಆಗಲೇ ಸರ್ಕಾರ ಒಡ್ಡಿರುವ ಬೋನಿನಲ್ಲಿ ಬಿದ್ದಿದ್ದಾರೆ. ತಾನು ಬಿಜೆಪಿ ಮತ್ತು ಆರ್ಎಸ್ಎಸ್ ಮುಖವಾಡ ಎಂಬ ಕಾಂಗ್ರೆಸ್ ನಾಯಕರ ಅಪಪ್ರಚಾರದಿಂದ ಸಿಟ್ಟಾದ ಅಣ್ಣಾ ಹಜಾರೆ ಆ ಎರಡೂ ಸಂಘಟನೆಗಳ ಜತೆ ತನಗೆ ಸಂಬಂಧ ಇರುವುದನ್ನು ನಿರಾಕರಿಸಿರುವುದು ಮಾತ್ರವಲ್ಲ, ಆ ಬಗ್ಗೆ ಪುರಾವೆಗಳಿದ್ದರೆ ಒದಗಿಸಿ ಎಂದು ಸವಾಲು ಹಾಕಿದ್ದಾರೆ.
ಅಂದರೆ ಬಿಜೆಪಿ ಜತೆ ಅವರು ಮುಂದೆಯೂ ಸೇರಿಕೊಳ್ಳುವುದಿಲ್ಲ ಎಂದೇ ಅರ್ಥ. ಬೆನ್ನ ಹಿಂದೆ ಮೀಸಲಾತಿ ವಿರೋಧಿ ಫಲಕಗಳನ್ನು ಬಚ್ಚಿಟ್ಟುಕೊಂಡು ಛದ್ಮವೇಷದಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡವರು, ಕೂಡಾ ಅಣ್ಣಾ ಹಜಾರೆ ಅವರ ಈ ಹೇಳಿಕೆ ನಂತರ ದೂರ ಸರಿಯತೊಡಗಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧವೇ ಅವರು ಹೋರಾಟ ನಡೆಸುತ್ತಿದ್ದಾರೆ, ವಿರೋಧಪಕ್ಷವಾದ ಬಿಜೆಪಿ ಜತೆ ಸೇರುವುದಿಲ್ಲ ಎಂದು ಹೇಳುತ್ತಿದ್ದಾರೆ. ಬಿಎಸ್ಪಿ, ಡಿಎಂಕೆ, ಸಮಾಜವಾದಿ ಪಕ್ಷ, ಆರ್ಜೆಡಿ, ಎನ್ಸಿಪಿ, ಶಿವಸೇನೆ ಮೊದಲಾದ ಪ್ರಾದೇಶಿಕ ಪಕ್ಷಗಳ ನಾಯಕರು ಒಂದಲ್ಲ ಒಂದು ಭ್ರಷ್ಟಾಚಾರದ ಹಗರಣಗಳಲ್ಲಿ ಆರೋಪಿಯಾಗಿದ್ದಾರೆ.
ಉಳಿದವು ಎಡಪಕ್ಷಗಳು. ಎರಡು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ದಣಿವಾರಿಸಿಕೊಳ್ಳುತ್ತಿರುವ ಆ ಪಕ್ಷಗಳು ಅಣ್ಣಾ ಹಜಾರೆ ಅವರ ಬೆಂಬಲಕ್ಕೆ ನಿಲ್ಲುವುದು ಅಷ್ಟರಲ್ಲೇ ಇದೆ. ಬೇರೆ ಯಾವ ಶಕ್ತಿಗಳನ್ನು ನಂಬಿ ಅಣ್ಣಾ ಹಜಾರೆ ಮತ್ತು ಸಂಗಡಿಗರು ಚುನಾಯಿತ ಸರ್ಕಾರವೊಂದಕ್ಕೆ ಸವಾಲು ಹಾಕುತ್ತಿದ್ದಾರೆ? ಜನ ಎಂಬ ಅಮೂರ್ತ ಶಕ್ತಿಯನ್ನೇ?
ಸಮಸ್ಯೆ ಅಣ್ಣಾ ಹಜಾರೆ ಅವರ ಚಳವಳಿಯ ಮೂಲದಲ್ಲಿಯೇ ಇದೆ. `ಪ್ರಜಾಪ್ರಭುತ್ವ ಎಂದರೆ ಜನರಿಂದ ಆಯ್ಕೆಯಾದ ನಂತರ ಮುಂದಿನ ಚುನಾವಣೆಯ ವರೆಗೆ ನಿರಂಕುಶವಾಗಿ ಆಡಳಿತ ನಡೆಸಿಕೊಂಡು ಹೋಗುವುದಲ್ಲ, ಚುನಾಯಿತ ಸರ್ಕಾರ ಹಾದಿ ತಪ್ಪಿದಾಗ ಪ್ರಶ್ನಿಸುವ, ಎಚ್ಚರಿಸುವ, ಮಣಿಸುವ ಮತ್ತು ಸರಿಯಾದ ದಾರಿ ತೋರಿಸುವ ಅಧಿಕಾರ ನಾಗರಿಕರಿಗೆ ಇದೆ. ಅದನ್ನೇ ನಾವು ಮಾಡುತ್ತಿದ್ದೇವೆ~ ಎನ್ನುವ ನಾಗರಿಕ ಸಮಿತಿಯ ವಾದ ಸರಿಯಾಗಿಯೇ ಇದೆ.
ಇಂತಹ ನಾಗರಿಕ ಹೋರಾಟಗಳು ರಾಜಕೀಯಾತೀತವಾಗಿ ಸಾಮಾಜಿಕ ಚೌಕಟ್ಟಿನಲ್ಲಿದ್ದಾಗ ಅದಕ್ಕೆ ಮಿತಿಗಳು ಇರುತ್ತವೆ.ತಮ್ಮ ಸಾಮರ್ಥ್ಯದ ಅರಿವು ಹೋರಾಟದಲ್ಲಿ ತೊಡಗಿರುವವರಿಗೂ ಗೊತ್ತಿರುತ್ತದೆ.
ಆದ್ದರಿಂದಲೇ ಅವು ನೇರವಾಗಿ ಸರ್ಕಾರದ ಜತೆ ಸಂಘರ್ಷಕ್ಕಿಳಿಯದೆ ಒತ್ತಡ ಹೇರುವ ಮಟ್ಟಕ್ಕೆ ಮಾತ್ರ ತಮ್ಮ ಹೋರಾಟವನ್ನು ಸೀಮಿತಗೊಳಿಸುತ್ತವೆ. ಮೇಧಾ ಪಾಟ್ಕರ್ ನೇತೃತ್ವದ `ನರ್ಮದಾ ಬಚಾವೋ ಆಂದೋಲನ~ ಇದಕ್ಕೆ ಉತ್ತಮ ಉದಾಹರಣೆ.
`ನಮ್ಮ ಬೇಡಿಕೆಯನ್ನು ತಿಂಗಳೊಳಗೆ ಈಡೇರಿಸದಿದ್ದರೆ ಜಂತರ್ಮಂತರ್ನಲ್ಲಿ ಆಮರಣ ಉಪವಾಸ ಮಾಡಿ ಪ್ರಾಣಬಿಡುತ್ತೇನೆ~ಎಂದು ಮೇಧಾ ಪಾಟ್ಕರ್ ಎಂದೂ ಹೇಳಿರಲಿಲ್ಲ. ಅಂದ ಮಾತ್ರಕ್ಕೆ ಅವರ ಸಾಧನೆ ಕಡೆಗಣಿಸುವಂತಹದ್ದಲ್ಲ. ಅವಸರ ಮಾಡಿದ್ದರೆ ಚಳವಳಿಯ ಮೂಲಕ ಈಗಿನಷ್ಟನ್ನೂ ಸಾಧಿಸಲು ಅವರಿಂದ ಸಾಧ್ಯವಾಗುತ್ತಿರಲಿಲ್ಲವೇನೋ?
ಪ್ರತಿದಿನ ದೇಶಾದ್ಯಂತ ಪ್ರತಿಭಟನೆ, ಚಳವಳಿ, ಸತ್ಯಾಗ್ರಹ, ಧರಣಿ, ಜಾಥಾಗಳು ನಡೆಯುತ್ತಲೇ ಇರುತ್ತವೆ. ಪ್ರಜಾಪ್ರಭುತ್ವದ ಜೀವಂತಿಕೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಇವುಗಳು ನೆರವಾಗುತ್ತವೆ.
ಇಂತಹ ಸಾಮಾಜಿಕ ಹೋರಾಟಗಳು ತಮ್ಮ ಘೋಷಿತ ಉದ್ದೇಶ ಸಾಧನೆಯ ಜತೆಗೆ ರಾಜಕೀಯ ಬದಲಾವಣೆಗೂ ಕೊಡುಗೆಗಳನ್ನು ನೀಡುತ್ತಾ ಹೋಗುತ್ತವೆ. ಅದು ನಿಧಾನವಾಗಿ ನಡೆಯುವ ಪ್ರಕ್ರಿಯೆ, ಅವಸರದ್ದಲ್ಲ.
ಸ್ವತಂತ್ರ ಭಾರತದಲ್ಲಿ ಸರ್ಕಾರವೊಂದು ಪ್ರಜೆಗಳ ಕೈಗೆ ಕೊಟ್ಟಿರುವ ದೊಡ್ಡ ಅಸ್ತ್ರ ಮಾಹಿತಿ ಹಕ್ಕು ಕಾನೂನು. ಪರಿಣಾಮದ ದೃಷ್ಟಿಯಿಂದ ಇದು ಲೋಕಪಾಲರ ನೇಮಕಕ್ಕಿಂತಲೂ ದೊಡ್ಡ ಅಸ್ತ್ರ. ಈ ಕಾನೂನು ಅನುಷ್ಠಾನದ ಹಿಂದೆ ಅಣ್ಣಾ ಹಜಾರೆ, ಅರವಿಂದ ಕೇಜ್ರಿವಾಲಾ ಮೊದಲಾದವರು ನಡೆಸಿರುವ ಹೋರಾಟ ಇದೆ ಎನ್ನುವುದು ನಿಜ.
ಆದರೆ ಮಾಹಿತಿ ಪಡೆಯುವ ಹಕ್ಕಿಗಾಗಿ ಹೋರಾಟ ಮೊದಲು ಪ್ರಾರಂಭವಾಗಿದ್ದು ತೊಂಬತ್ತರ ದಶಕದಲ್ಲಿ. ರಾಜಸ್ತಾನದ ರಾಜ್ಸಾಮಾಂಡ್ ಜಿಲ್ಲೆಯಲ್ಲಿ ಕಾರ್ಮಿಕರು ಮತ್ತು ರೈತರು ಕೂಡಿ 1990ರಲ್ಲಿ `ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್ (ಎಂಕೆಎಸ್ಎಸ್) ಕಟ್ಟಿ ಮೊದಲ ಬಾರಿ ಮಾಹಿತಿ ಹಕ್ಕಿಗಾಗಿ ಒತ್ತಾಯಿಸಿದ್ದರು.
1996ರಲ್ಲಿ ರಾಜಸ್ತಾನದ ಬೇವಾರ್ ಪಟ್ಟಣದಲ್ಲಿ `ಮಾಹಿತಿ ಹಕ್ಕು, ಬದುಕುವ ಹಕ್ಕು~ ಎಂಬ ಘೋಷಣೆಯೊಂದಿಗೆ ಜನ 40 ದಿನಗಳ ಧರಣಿ ಸತ್ಯಾಗ್ರಹ ನಡೆಸಿದ್ದರು. ಅಂತಿಮವಾಗಿ ಆ ಕಾನೂನು ಅನುಷ್ಠಾನಕ್ಕೆ ಬಂದದ್ದು 2005ರಲ್ಲಿ.
ಆದರೆ ಲೋಕಾಯುಕ್ತ-ಲೋಕಪಾಲರ ನೇಮಕಕ್ಕಾಗಿ ಇತ್ತೀಚಿನ ವರೆಗೆ ಯಾವುದೇ ರಾಜ್ಯ ಇಲ್ಲವೇ ರಾಷ್ಟ್ರಮಟ್ಟದಲ್ಲಿ ಸಣ್ಣ ಪ್ರಮಾಣದ ಸತ್ಯಾಗ್ರಹ ಚಳವಳಿಗಳೂ ನಡೆದಿಲ್ಲ. ಈ ಕಾರಣದಿಂದಾಗಿಯೇ ಅಣ್ಣಾ ಹಜಾರೆ ಮತ್ತು ಬೆಂಬಲಿಗರು ಅವಸರದ ಕ್ರಾಂತಿಗೆ ಹೊರಟಿರುವಂತೆ ಕಾಣುತ್ತಿದ್ದಾರೆ.
ಆಗಲೇ ಕೆಲವರು ಈ ಹೋರಾಟವನ್ನು ಎಪ್ಪತ್ತರ ದಶಕದಲ್ಲಿ ನಡೆದ ಜೆಪಿ ಚಳವಳಿಗೆ ಹೋಲಿಸತೊಡಗಿದ್ದಾರೆ. ಕೆಲವರು ಇನ್ನಷ್ಟು ಹಿಂದೆ ಹೋಗಿ ಸ್ವಾತಂತ್ರ್ಯ ಚಳವಳಿಗೆ ಹೋಲಿಸುತ್ತಿದ್ದಾರೆ. ಇವೆರಡೂ ಶುದ್ಧ ರಾಜಕೀಯ ಚಳವಳಿಗಳು, ಅದರಲ್ಲಿ ಯಾವ ಮುಚ್ಚುಮರೆಯೂ ಇರಲಿಲ್ಲ.
ಗಾಂಧೀಜಿಯಾಗಲಿ, ಜೆಪಿಯಾಗಲಿ ತಮ್ಮನ್ನು ಸಮಾಜಸೇವಕರೆಂದು ಕರೆದುಕೊಂಡಿರಲಿಲ್ಲ. ರಾಜಕಾರಣಿಗಳು ತಾವು ಕುಳಿತ ವೇದಿಕೆ ಹತ್ತಬಾರದೆಂದು ಅವರ್ಯಾರೂ ಹೇಳಿರಲಿಲ್ಲ.
ಅವರು ಅಪ್ಪಟ ರಾಜಕಾರಣಿಗಳಾಗಿದ್ದರು, ರಾಜಕೀಯದಲ್ಲಿಯೂ ಉಳಿದುಕೊಂಡಿರುವ ಒಂದಷ್ಟು ಸಜ್ಜನರನ್ನು ಸೇರಿಸಿಕೊಂಡು ಚಳವಳಿಯನ್ನು ಮುನ್ನಡೆಸಿದ್ದರು. ಸರ್ವಾಧಿಕಾರಿ ಇಂದಿರಾಗಾಂಧಿಯವರ ವಿರುದ್ಧದ ಹೋರಾಟದ ಬಗ್ಗೆ ಮಾತ್ರವಲ್ಲ, ಆಕೆಯ ಪತನದ ನಂತರದ ಪರ್ಯಾಯದ ಬಗ್ಗೆಯೂ ಅವರಿಗೆ ಸ್ಪಷ್ಟತೆ ಇತ್ತು.
ದುರದೃಷ್ಟವಶಾತ್ ಅಣ್ಣಾ ಹಜಾರೆ ಅವರಿಗೆ ಅಂತಹ ಆಯ್ಕೆಗಳಿಲ್ಲ ಎನ್ನುವುದು ನಿಜ. ಸರ್ಕಾರ ಇಲ್ಲವೇ ಆಡಳಿತಾರೂಢ ಪಕ್ಷ ಭ್ರಷ್ಟಗೊಂಡಿರುವುದು ಈಗಿನ ಸಮಸ್ಯೆ ಅಲ್ಲ. ದೇಶದ ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸ ನೋಡಿದರೆ ಇದೊಂದು ಸಾಮಾನ್ಯ ಬೆಳವಣಿಗೆ ಎಂದು ಗೊತ್ತಾಗುತ್ತದೆ.
ಅಧಿಕಾರಕ್ಕೇರಿದ ರಾಜಕೀಯ ಪಕ್ಷ ಭ್ರಷ್ಟಗೊಳ್ಳುತ್ತಾ ಹೋಗುವುದು, ವಿರೋಧಪಕ್ಷಗಳು ಸರ್ಕಾರದ ವಿರುದ್ದ ಹೋರಾಟಕ್ಕೆ ಇಳಿಯುವುದು, ಕ್ರಮೇಣ ಮತದಾರರ ಕಣ್ಣಿಗೆ ವಿರೋಧ ಪಕ್ಷಗಳ ನಾಯಕರೇ ಸಂಭಾವಿತರಂತೆ ಕಂಡು ಅವರನ್ನು ಮತ್ತೆ ಆಯ್ಕೆ ಮಾಡುವುದು.. ಇವೆಲ್ಲ ಸಾಮಾನ್ಯ.
ಆದರೆ ನೈತಿಕವಾಗಿ ದಿವಾಳಿಯಾಗಿರುವ ನಮ್ಮ ವಿರೋಧ ಪಕ್ಷಗಳು ಭ್ರಷ್ಟ ಸರ್ಕಾರವನ್ನು ಪ್ರಶ್ನಿಸಲಾಗದಷ್ಟು ಅಸಹಾಯಕವಾಗಿರುವುದು ಕೂಡಾ ಇಂದಿನ ಬಿಕ್ಕಟ್ಟಿಗೆ ಕಾರಣ.
ಈ ಹತಾಶೆ ಜನಸಮುದಾಯದಲ್ಲಿಯೂ ವ್ಯಕ್ತವಾಗುತ್ತಿದೆ. ಇದಕ್ಕೆ ಏನು ಪರಿಹಾರ? ರಾಜಕಾರಣಿಗಳನ್ನು ಸಾಮೂಹಿಕವಾಗಿ ಗಲ್ಲಿಗೇರಿಸುವುದೇ?
ಸಮಸ್ಯೆ ಏನೆಂದರೆ ತಮ್ಮ ಹೋರಾಟ ಸಾಮಾಜಿಕವಾದುದೇ, ರಾಜಕೀಯವಾದುದೇ ಎಂಬ ಬಗ್ಗೆ ಅಣ್ಣಾ ಹಜಾರೆ ಮತ್ತು ಸಂಗಡಿಗರಲ್ಲಿಯೇ ಸ್ಪಷ್ಟತೆ ಇಲ್ಲ.
ತಮ್ಮದು ರಾಜಕೀಯಾತೀತ ಚಳವಳಿ ಎಂದು ಘೋಷಿಸಿಕೊಂಡರೂ ಅವರ ನಡೆ-ನುಡಿಗಳು ರಾಜಕೀಯ ಹೋರಾಟದ ಶೈಲಿಯಲ್ಲಿಯೇ ಇವೆ. ಆಡಳಿತಾರೂಢ ಸರ್ಕಾರವನ್ನು ಮಣಿಸಲು ಹೊರಟವರು ತಮ್ಮ ಚಳವಳಿಯನ್ನು `ರಾಜಕೀಯದಿಂದ ದೂರ ಇದ್ದು ಮಾಡುತ್ತೇವೆ~ ಎಂದು ಹೇಳಲಾಗುವುದಿಲ್ಲ.
ಒಂದು ಸರ್ಕಾರವನ್ನೇ ಉರುಳಿಸುತ್ತೇನೆಂದು ಹೊರಟಾಗ ಅದಕ್ಕೊಂದು ಪರ್ಯಾಯ ಸಿದ್ಧ ಇರಬೇಕಾಗುತ್ತದೆ. ಇಲ್ಲದಿದ್ದರೆ ಅರಾಜಕತೆಯನ್ನು ಹುಟ್ಟುಹಾಕಿದಂತಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ್ಯಾಯ ಕೂಡ ರಾಜಕೀಯ ಕ್ಷೇತ್ರದೊಳಗಡೆಯಿಂದಲೇ ಸೃಷ್ಟಿಯಾಗಬೇಕಾಗುತ್ತದೆ.
ಆದರೆ ನಾಗರಿಕ ಸಮಿತಿ ಸದಸ್ಯರು ಒಂದು ಭ್ರಷ್ಟ ಸರ್ಕಾರವನ್ನು ವಿರೋಧಿಸುವ ಭರದಲ್ಲಿ ರಾಜಕಾರಣ, ರಾಜಕಾರಣಿ ಮತ್ತು ಒಟ್ಟು ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆಯೇ ವಿಶ್ವಾಸ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ. ಹಾಗಿದ್ದರೆ ಪರಿಹಾರ ಏನು? ದೇಶದ ಆಡಳಿತವನ್ನೇ ಲೋಕಪಾಲರಿಗೆ ಒಪ್ಪಿಸುವುದೇ?